ವಿಷಯಕ್ಕೆ ಹೋಗು

ಜ್ಯೋತಿಬಾ ಫುಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾತ್ಮ ಜ್ಯೋತಿಬಾ ಫುಲೆ
ಇತರ ಹೆಸರುಗಳುMahatma Phule. Jyotiba Phule / Jyotirao Phule
ಜನನ(೧೮೨೭-೦೪-೧೧)೧೧ ಏಪ್ರಿಲ್ ೧೮೨೭
Katgun, Satara, British India (present-day ಮಹಾರಾಷ್ಟ್ರ, India)
ಮರಣ28 November 1890(1890-11-28) (aged 63)
Pune, British India (present-day Maharashtra,India)
ಕಾಲಮಾನ19th century philosophy
ಧರ್ಮSatyashodhak Samaj, Deist, Humanism
ಮುಖ್ಯ  ಹವ್ಯಾಸಗಳುEthics, religion, humanism
ಪ್ರಭಾವಕ್ಕೋಳಗಾಗು

ಮಹಾತ್ಮ ಜ್ಯೋತಿಬಾ ಫುಲೆ (೧೮೨೭ - ೧೮೯೦) ಅವರು ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು. ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆ ಪಟ್ಟವರು.ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ಕನ್ನಡದಲ್ಲಿರುವ ಬಹುತೇಕ ಕೃತಿಗಳಲ್ಲಿ "ಜ್ಯೋತಿಬಾ ಫುಲೆ" ಎಂಬ ಹೆಸರೆ ಬಳಕೆಯಲ್ಲಿದೆ. ಆದರೆ ಆಂಗ್ಲ ಮತ್ತು ಮರಾಠಿ ಭಾಷೆಗಳಲ್ಲಿ ಅವರ ಹೆಸರು 'ಜ್ಯೋತಿರಾವ್ ಫುಲೆ' ಎಂದಿದೆ.

ಹೆಸರಿನ ವಿಶೇಷತೆ

[ಬದಲಾಯಿಸಿ]

ಮಹಾರಾಷ್ಟ್ರದ ಕೊಲ್ಲಾಪುರದ ಹತ್ತಿರ "ಜ್ಯೋತಿಬಾ" ಹೆಸರಿನ ಒಂದು ದೇವಿ ಗುಡಿ ಗುಡ್ಡದ ಮೇಲಿದೆ. ಅದನ್ನು 'ಜ್ಯೋತಿಬಾ ಗುಡ್ಡ' ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಅನೇಕರು ಈ ದೇವಿಯನ್ನು ಕುಲದೇವತೆಯೆಂದು ನಂಬಿದ್ದಾರೆ. ಈ ಗುಡ್ಡದ ಮೇಲೆ (ಮಹಾರಾಷ್ಟ್ರದ ಪಂಚಾಂಗ ರೀತ್ಯಾ) ಚೈತ್ರ ಶುಕ್ಲ ಪೂರ್ಣಿಮೆಯಂದು ಜಾತ್ರೆಯಾಗುತ್ತದೆ. ಆ ದೇವಿಯ ಹೆಸರನ್ನೇ ಸ್ಮರಿಸಿ ಇವರನ್ನು "ಜ್ಯೋತಿಬಾ" ಎಂದು ಕರೆಯಲಾಗಿದೆ. "ಫುಲೆ" ಎಂದರೆ ಸಮುದಾಯದ ಹೆಸರು (ಹೂ ಮಾರುವ ಹೂವಾಡಿಗ). ಜ್ಯೋತಿಬಾ ಫುಲೆಯವರನ್ನು 'ಜ್ಯೋತಿರಾವ್ ಫುಲೆ' ಎಂದು ಕರೆಯುವುದು ವಾಡಿಕೆ. ಆದರೆ 'ರಾವ್', 'ರಾಜ' ಅಥವಾ 'ರಾಯ' ಶಬ್ಞ ಸಮಾನಾರ್ಥವಾಗಿದ್ದರೂ 'ಜ್ಯೋತಿರಾವ್' ಗಿಂತ ' ಜ್ಯೋತಿಬಾ ಫುಲೆ' ಹೆಸರು ಬಲು ಸುಂದರವಾಗಿದೆ. ಮರಾಠಿ ಭಾಷೆಯಲ್ಲಿ 'ಬಾ' ಪ್ರೀತ್ಯಾದಾರ ಸೂಚಕ ಪ್ರತ್ಯಯ.

ಜನನ, ಜೀವನ ಕ್ರಮ

[ಬದಲಾಯಿಸಿ]

ಏಪ್ರಿಲ್ ೧೧, ೧೮೨೭ ನೇ ಇಸವಿಯಲ್ಲಿ ಮಹಾರಾಷ್ಟ್ರದ 'ಕಟಗುಣ' ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್, ತಾಯಿ ಚಿಮಣಾಬಾಯಿ. ಜ್ಯೋತಿಬಾ ಜನಿಸಿದ ಕೆಲವೇ ತಿಂಗಳಲ್ಲಿ ಇವರ ತಾಯಿ ಚಿಮಣಾಬಾಯಿ ಕೊನೆಯುಸಿರೆಳೆದರು. ಹಾಗಾಗಿ ಜ್ಯೋತಿಬಾ ಅವರ ಲಾಲನೆ ಪಾಲನೆ ಮಾಡಲು ಚಿಮಣಾಬಾಯಿ ಸೋದರಿ ಸಗುಣಾಬಾಯಿ ಮುಂದಾಗಿ, ಇವರನ್ನು ಸಾಕಿ ಸಲಹುತ್ತಾರೆ. ಸಗುಣಾಬಾಯಿ ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆಯ ಬೀಜಾರ್ಪಣ ಮಾಡಿದರು.

ಆ ಕಾಲದ ಶಿಕ್ಷಣ ವ್ಯವಸ್ಥೆ

[ಬದಲಾಯಿಸಿ]

ಆ ಕಾಲದಲ್ಲಿ ಮೇಲುಜಾತಿಯವರಿಗೆ ಮಾತ್ರ ಶಿಕ್ಷಣ ಮೀಸಲಾಗಿತ್ತು. ಕೆಲವು ಹಳ್ಳಿಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಪಾಠಶಾಲೆಗಳಿದ್ದುವು. ಆದರೆ ಅಂತಹ ಶಾಲೆಗಳಲ್ಲಿ ವ್ಯಾಪಾರಿಗಳ, ಹಣವಂತರ ಮಕ್ಕಳಿಗೆ ಮಾತ್ರ ಶಿಕ್ಷಣ ಲಭ್ಯವಾಗುತ್ತಿತ್ತು. ಕ್ರೈಸ್ತಪಾದ್ರಿಗಳು ೧೮೨೪ರಿಂದಲೇ ಪುಣೆಯಲ್ಲಿ ಮರಾಠಿಶಾಲೆಯನ್ನು ಶುರು ಮಾಡಿದರು. ನಂತರ ೧೮೩೬ ನೇ ಇಸವಿಯಲ್ಲಿ ಸರ್ಕಾರದ ವತಿಯಿಂದ ಪುಣೆ ಜಿಲ್ಲೆಯಲ್ಲಿ ಹಾಗೂ ಕೆಲವು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡಲಾಯಿತು. ಲಾರ್ಡ್ ಬೆಂಟಿಕ್ ನ ಆಳ್ವಿಕೆಯಲ್ಲಿ ಭಾರತೀಯರಿಗೆ ಪಾಶ್ವಾತ್ಯ ಸಾಹಿತ್ಯ ಮತ್ತು ಶಾಸ್ತ್ರಗಳನ್ನೇ ಬೋಧಿಸುವುದು ಸರ್ಕಾರದ ಮೂಲ ಧ್ಯೇಯವಾಗಬೇಕೆಂದು ಸರ್ಕಾರವು ನಿರ್ಧಾರ ಮಾಡಿತು. ೧೮೩೩ ರಲ್ಲಿ ಪುಣೆಯಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಒಂದು ಪ್ರಯೋಗ ನಡೆಯಿತು.

ವಿದ್ಯಾಭ್ಯಾಸ, ವಿವಾಹ

[ಬದಲಾಯಿಸಿ]

ಜ್ಯೋತಿಬಾರ ತಂದೆ ಗೋವಿಂದರಾವ್ ಮಗನನ್ನು ಶಾಲೆಗೆ ಸೇರಿಸಿದರು. ಆಗ ಅವರಿಗೆ ಏಳು ವರ್ಷ ವಯಸ್ಸಾಗಿತ್ತು. ಆ ಕಾಲದ ಕೆಲವು ಜನರು ಕ್ರೈಸ್ತಪಾದ್ರಿಗಳ ಶಾಲೆಗಳಲ್ಲಿ ಪ್ರವೇಶ ಪಡೆದರೆ ಮಕ್ಕಳು ಧರ್ಮ ಭ್ರಷ್ಟರಾಗುತ್ತಾರೆಂದು ನಂಬಿದ್ದರು. ಹಾಗಾಗಿ ಜ್ಯೋತಿಬಾ ಶಾಲೆಯನ್ನು ಅರ್ಧಕ್ಕೆ ಬಿಡಬೇಕಾಗಿ ಬರುತ್ತದೆ. ಜ್ಯೋತಿಬಾಗೆ ೧೩ ವರ್ಷವಾದಾಗ ಅವರ ತಂದೆ ಗೋವಿಂದರಾವ್ ಮಗನಿಗೆ ಬಾಲ್ಯವಿವಾಹ ಮಾಡಿಸುತ್ತಾರೆ. ಸತಾರಾ ಜಿಲ್ಲೆಯ ನಾಯಗಾಂವ್ ನಿವಾಸಿ ಶ್ರೀ ನೇವಸೆ ಪಾಟೀಲರ ಮಗಳು ಸಾವಿತ್ರಿಬಾಯಿಯೊಂದಿಗೆ ಜ್ಯೋತಿಬಾ ಅವರ ವಿವಾಹ ವಾಗುತ್ತದೆ. ಆಗ ವಧುವಿಗೆ ಎಂಟು ವರ್ಷ. ಮುಂದೆ ಮುಂಶಿಯವರ ಮಾತಿಗೆ ಬದ್ದರಾದ ಗೋವಿಂದರಾವ್ ಮಗ ಶಿಕ್ಷಣ ಮುಂದುವರಿಸಲು ಅನುಮತಿ ನೀಡುತ್ತಾರೆ. ೧೮೪೧ರಲ್ಲಿ ಜ್ಯೋತಿಬಾ ಅವರನ್ನು ಸ್ಕಾಟಿಶ್ ಮಿಶನ್ ಸ್ಕೂಲಿಗೆ ಸೇರಿಸಲಾಗುತ್ತದೆ. ಆಗ ಅವರಿಗೆ ೧೪ ವರ್ಷ. ಇಂಗ್ಲೀಷ್ ಶಿಕ್ಷಣದ ವಿದ್ಯಾಭ್ಯಾಸ ಅವರ ಜೀವನದ ಮಹತ್ವಪೂರ್ಣ ಘಟ್ಟ. ಜ್ಯೋತಿಬಾ ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ಕೊಟ್ಟು ವಿದ್ಯಾವಂತರಾಗಿ ಮಾಡುತ್ತಾರೆ. ಸಾವಿತ್ರಿಬಾಯಿಗೆ ಮನೆಯೇ ಮೊದಲ ಪಾಠಶಾಲೆ ಗಂಡನೆ ಪರಮಗುರು.

ಆ ಕಾಲದ ಪ್ರಮುಖ ಸಮಾಜ ಸುಧಾರಕರು

[ಬದಲಾಯಿಸಿ]
  1. ಬಾಳಾಶಾಸ್ತ್ರಿ ಜಾಂಬೇಕರ್ - ಹೊಸಪೀಗೆಯ ಮುಖಂಡರಲ್ಲಿ ಶ್ರೇಷ್ಠರು. ಪಶ್ಚಿಮ ಭಾರತದ ಮೊತ್ತಮೊದಲ ಪ್ರಾಧ್ಯಾಪಕರು. ಮರಾಠಿ ಸಾಹಿತ್ಯ ದರ್ಪಣದ ಸಂಪಾದರು.
  2. ಶ್ರೀ ಗೋವಿಂದ ವಿಠಲ ಉರ್ಫ್ ಭಾವೂ ಮಹಾಜನ - 'ಪ್ರಭಾಕರ', 'ಧೂಮಕೇತು', 'ಜ್ಞಾನದರ್ಶನ' ಪತ್ರಿಕೆಯ ಸಂಪಾದಕರು.
  3. ಶ್ರೀ ದಾದೊಬಾ ಪಾಂಡುರಂಗ ತಖಂಡಕರ್ - ೧೮೪೮ ರಲ್ಲಿ 'ಪರಮಹಂಸ ಸಭೆ' ಹೆಸರಿನಲ್ಲಿ ಒಂದು ಗುಪ್ತ ಸಂಸ್ಥೆಗೆ ಅಡಿಪಾಯ ಹಾಕಿದರು. ಜಾತಿಭೇದ ಅಳಿಸಿ ಭ್ರಾತೃತ್ವ ಉಳಿಸುವುದು ಈ ಸಂಸ್ಥೆಯ ಉದ್ದೇಶವಾಗಿತ್ತು.
  4. ಶ್ರೀ ಜಗನ್ನಾಥ ಶಂಕರ ಶೇಠ - ನಿಸ್ಪೃಹ ದೇಶ ಭಕ್ತ, ಪ್ರಗತಿಪರ ಚಿಂತಕ.
  5. ಶ್ರೀ ಗೋಪಾಲ ಹರಿ ದೇಶಮುಖ್ - 'ಲೋಕ ಹಿತಕಾರಿ' ಎಂಬ ಪ್ರಸಿದ್ದಿ ಪಡೆದು, 'ಶತಪತ್ರ' ಹೆಸರಿನ ಲೇಖನಗಳಿಂದ ಹರಿತವಾಗಿ ನುಡಿದವರು.

ಸಮಾಜ ಸುಧಾರಣಾ ಕಾರ್ಯಗಳು

[ಬದಲಾಯಿಸಿ]

ಆ ಕಾಲದಲ್ಲಿ ಜ್ಯೋತಿಬಾ ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು. ಕ್ರಮೇಣ ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಹೈಕೋರ್ಟಿನ ಪ್ರಮುಖ ನ್ಯಾಯಾಧೀಶರು ಆಗಬಹುದಿತ್ತು. ಆದರೆ ಅವರು ಸ್ಥಾಯಿಯಾಗಿ ಉಳಿದದ್ದು ಸಮಾಜ ಸುಧಾರಣಾ ಕಾರ್ಯಗಳಲ್ಲಿ.

  1. ೧೮೪೭ ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ರವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿ ತರಬೇತಿ ಪಡೆದು ಮಹಾರಾಷ್ಟ್ರದ ಮೊಟ್ಟಮೊದಲ ಶಿಕ್ಷಕಿಯಾದರು.
  2. ೧೮೪೮ ರ ಆಗಸ್ಟ್ ತಿಂಗಳಲ್ಲಿ ಜ್ಯೋತಿಬಾ ಪುಣೆಯ ಬುಧವಾರಪೇಟೆಯಲ್ಲಿ ಶ್ರೀ ಭಿಡೆಯವರ ಭವನದಲ್ಲಿ ಕನ್ಯಾಪಾಠಶಾಲೆ ಆರಂಭಿಸಿದರು. ಯಾರ ಹಂಗಿಲ್ಲದೆ ಕನ್ಯಾಪಾಠಶಾಲೆ ಆರಂಭಿಸಿದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
  3. ವಿಧವೆಯರ ಮಕ್ಕಳಿಗಾಗಿ ಅನಾಥಾಲಯ ಸ್ಥಾಪನೆ - ೧೮೬೩
  4. ೧೮೬೪ ರಲ್ಲಿ ವಿಧವಾ ವಿವಾಹ ನೆರವೇರಿಸಿದರು.
  5. ಸತ್ಯಶೋಧಕ ಸಮಾಜದ ಸ್ಥಾಪನೆ - ೧೮೭೩
  6. ರಾಯಗಢದಲ್ಲಿ ಶಿವಾಜಿ ಸಮಾಧಿಯ ಜಿರ್ಣೋದ್ಧಾರ -ಮುಂತಾದುವು.

ಜ್ಯೋತಿಬಾ ಫುಲೆ ಅವರ ಸಾಹಿತ್ಯ ಕೃತಿಗಳುದಜಾತಿಭೇಧ ವಿವೇಕ ಸಾರದ ಪ್ರಸ್ತಾವನೆ -೧೮೬೫

[ಬದಲಾಯಿಸಿ]
  1. ಛತ್ರಪತಿ ಶಿವಾಜಿ ಅವರ ಪವಾಡ - ೧೮೬೯
  2. ಬ್ರಾಹ್ಮಣರ ಕುಯುಕ್ತಿ - ೧೮೬೯
  3. ದಾಸ್ಯ - ೧೮೭೩
  4. ರೈತನ ಚಾಟ - ೧೮೮೩
  5. ಸತ್ ಸಾರ ೧ ಮತ್ತು ೨ನೇ ಸಂಚಿಕೆಗಳು-೧೮೮೫
  6. ಸತ್ಯಶೋಧಕ ಸಮಾಜದ ರೀತ್ಯಾ ಮಂತ್ರಾದಿ ಸರ್ವ ಪೂಜಾವಿಧಿ-೧೮೮೭
  7. ಸಾರ್ವಜನಿಕ ಸತ್ಯಧರ್ಮ - ೧೮೯೧
  8. ಅಖಂಡ ಮುಂತಾದ ಬಿಡಿ ಲೇಖನಗಳು.
  1. ತೃತೀಯ ರತ್ನ - ೧೮೫೫

ಸತ್ಯಾಚರಣೆಯ ನಿಯಮಗಳು

[ಬದಲಾಯಿಸಿ]

ಸಾರ್ವಜನಿಕ ಸತ್ಯಧರ್ಮದ ಮೂಲ ತತ್ವಗಳನ್ನೊಳಗೊಂಡ ೩೩ ಸತ್ಯಾಚರಣೆಯ ನಿಯಮಗಳನ್ನು ಜ್ಯೋತಿಬಾ ಫುಲೆ ರೋಪಿಸಿದರು. ಅವುಗಳಲ್ಲಿ ಕೆಲವು ಸೂತ್ರಗಳು ಇಂತಿವೆ.

  1. ಧರ್ಮಗ್ರಂಥ ಎಲ್ಲರಿಗೂ ದೊರಕುವಂತಾಗಲಿ, ಅದನ್ನು ಬಚ್ಚಿಟ್ಟು ಇತರಿಗೆ ಅದನ್ನು ತೋರಿಸದಂತೆ ನಡೆದುಕೊಳ್ಳಲಾಗದು.
  2. ಏನೂ ಪರಿಶ್ರಮ ಪಡದೆ ವ್ಯರ್ಥ ಧಾರ್ಮಿಕ ಕೋರಿಕೆಯಿಂದಾಗಿ ಮೂಢ ಜನರನ್ನು ಮೋಸಗೊಳಿಸಬಾರದು.
  3. ಯಾವ ಉದ್ಯೋಗವೂ ಮೇಲಲ್ಲ-ಕೀಳಲ್ಲ ಎಂಬುದು ನೆನಪಿರಲಿ.
  4. ಸ್ತ್ರೀ-ಪುರುಷರೆಲ್ಲರಿಗೂ ತಮ್ಮ ತಮ್ಮ ಅಧಿಕಾರಗಳನ್ನು ಚಲಾಯಿಸುವ ಸ್ವಾತಂತ್ರ ಉಂಟು.
  5. ಪಕ್ಷಪಾತ ಮಾಡದೆ ಕುಷ್ಠರೋಗಿ ವಿಕಲಾಂಗ ವ್ಯಕ್ತಿ, ಅನಾಥ ಬಾಲಕ-ಬಾಲಕಿಯರಿಗೆ ತಮ್ಮ ಯೋಗ್ಯತಾನುಸಾರ ಸಹಾಯ ಮಾಡಬೇಕು.

ರೈತ ಕ್ರಾಂತಿಯ ಮೂರು ಅಗತ್ಯ ಅಂಶಗಳು

[ಬದಲಾಯಿಸಿ]
  1. ಜಮೀನುದಾರಿ ಪದ್ಧತಿ ಕೊನೆಯಾಗಬೇಕು. ಸಾಮಂತಶಾಹಿ, ಸಾಹುಕಾರಿ ಪದ್ದತಿ ನಾಶವಾಗಬೇಕು.
  2. ರೈತನ ದುಡಿಮೆಯ ಪ್ರತಿಫಲ ಅವನಲ್ಲಿಯೇ ಉಳಿಯಬೇಕು.
  3. ಹೊಸ ವೈಜ್ಞಾನಿಕ ಕೃಷಿ ಪದ್ದತಿ ಜಾರಿಗೆ ಬರಬೇಕು.

ಜ್ಯೋತಿಬಾ ಫುಲೆ ಅವರ ಕವಿತೆಯ ತುಣುಕುಗಳು

[ಬದಲಾಯಿಸಿ]

೧. ದೇವರಚಿತ ಯಾವ ಗ್ರಂಥವೂ ಇಲ್ಲ
ದೇವ ಶರೀರ ಧಾರಣೆ ಮಾಡಿ ಅವತರಿಸುವುದಿಲ್ಲ
ಪುನರ್ಜನ್ಮ, ಕರ್ಮಕಾಂಡ-ಜಪ-ತಪ ಎಲ್ಲವೂ ಅಜ್ಞಾನ ಜನ್ಯವಾದುವುಗಳು

೨. ಸೃಷ್ಟಿಕರ್ತ ನಿರ್ಮಿಸಿದ ಮಾನವರು ಸರಿಸಮಾನರು
ಯಾರಲ್ಲಿಯೂ ಕೊರತೆ ಇರುವಂತೆ ಮಾಡಿಲ್ಲ ಅವು
ಮನುಜರಲ್ಲಿ ಸೂಕ್ಷ್ಮಮತಿ ಮಂದಮತಿಗಳುಂಟು
ಯಾರಿಗೂ ಪೀಳಿಗೆಯಿಂದ ಪೀಳಿಗೆಗೆ ದೊರೆತಿಲ್ಲ ಗಂಟು

೩. ವಿದ್ಯೆಯಿಲ್ಲದೆ ಮತಿ ಹೋಯಿತು, ಮತಿಯಿಲ್ಲದೆ ನೀತಿ ಹೋಯಿತು
ನೀತಿಯಿಲ್ಲದೆ ಗತಿ ಮುಗಿಯಿತು, ಗತಿ ಮುಗಿದ ನಂತರ ವಿತ್ತವಿಲ್ಲ
ವಿತ್ತವಿಲ್ಲದೆ ಶೂದ್ರರು ಚಡಪಡಿಸಿದರು
ಅವಿದ್ಯೆಯಿಂದ ಅನರ್ಥಕ್ಕೆ ಮಿತಿಯಿರದು

ಆಕರ ಗ್ರಂಥ

[ಬದಲಾಯಿಸಿ]
  1. ಸಮಾಜ ಸುಧಾರಕ ಮಹಾತ್ಮ ಫುಲೆ - ಮುರಳಿಧರ ಜಗತಾಪ- ನವಕರ್ನಾಟಕ ಪ್ರಕಾಶನ.
  2. ಮಹಾತ್ಮ ಜ್ಯೋತಿರಾವ್ ಫುಲೆ (ಮರಾಠಿ)-ಲೇಖಕ:ಧನಂಜಯ ಕೀರ, ಪಾಪ್ಯುಲರ್ ಪ್ರಕಾಶನ, ಮುಂಬಯಿ, ೨ನೇ ಆವೃತ್ತಿ (೧೯೭೩)
  3. ಮಹಾತ್ಮ ಜ್ಯೋತಿಬಾ ಫುಲೆ(ಮರಾಠಿ)-ಲೇಖಕ:ಪಾಂಡುರಂಗ ಬಾಳಾಜಿ ಕವಡೆ, ನಾಂದಗಾವ (೧೯೩೮)
  4. ಮಹಾತ್ಮ ಫುಲೆ ವ್ಯಕ್ತಿತ್ವ ಹಾಗೂ ವಿಚಾರ (ಮರಾಠಿ)-ಲೇಖಕ:ಗಂ.ವಾ.ಸರದಾರ, ಗ್ರಂಥಾವಳಿ ಪ್ರಕಾಶನ ಮುಂಬಯಿ- ೧೯೮೨

ಉಲ್ಲೇಖಗಳು

[ಬದಲಾಯಿಸಿ]

[][] [][] [][]

ಬಾಹ್ಯಕೊಂಡಿಗಳು

[ಬದಲಾಯಿಸಿ]
  1. ಮಹಾತ್ಮ ಜ್ಯೋತಿಬಾ ದಾರ್ಶನಿಕ ನಿಲುವು
  2. http://vbnewsonline.com/Writer/146076/
  3. ಮಹಾತ್ಮ ಜ್ಯೋತಿಬಾ ಫುಲೆ
  4. http://libcatmysore-koha.informindia.co.in/cgi-bin/koha/opac-detail.pl?biblionumber=270919&shelfbrowse_itemnumber=879713
  5. ಶೋಷಣೆ ವಿರುದ್ಧ ಸಿಡಿದೆದ್ದ ಜ್ಯೋತಿಬಾ ಫುಲೆ
  6. http://www.kannadaprabha.com/districts/bidar/%E0%B2%B6%E0%B3%8B%E0%B2%B7%E0%B2%A3%E0%B3%86-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7-%E0%B2%B8%E0%B2%BF%E0%B2%A1%E0%B2%BF%E0%B2%A6%E0%B3%86%E0%B2%A6%E0%B3%8D%E0%B2%A6-%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%AC%E0%B2%BE-%E0%B2%AB%E0%B3%81%E0%B2%B2%E0%B3%86/179015.html