ಜೋಲೀಯೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೋಲೀಯೆಟ್ - ಅಮೆರಿಕ ಸಂಯುಕ್ತಸಂಸ್ಥಾನಗಳ ಇಲಿನಾಯ್ ರಾಜ್ಯದ ಒಂದು ಕೈಗಾರಿಕಾ ಪಟ್ಟಣ; ವಿಲ್ ಕಾಂಬೆಯ ಆಡಳಿತ ಕೇಂದ್ರ.

ಷಿಕಾಗೋ ನಗರದ ನೈಋತ್ಯಕ್ಕೆ 37 ಮೈ. ದೂರದ್ಲಲಿ ಡೇಸ್ಪ್ಲೇನ್ಸ್ ನದಿಯ ದಡದಲ್ಲಿದೆ. ಇಲ್ಲಿ ಅತ್ಯುತ್ತಮ ಸುಣ್ಣಶಿಲಾನಿಕ್ಷೇಪವಿರುವುದರಿಂದ ಇದನ್ನು ಶಿಲಾಪಟ್ಟಣ ಎಂದು ಕರೆಯುವುದುಂಟು. ಜನಸಂಖ್ಯೆ 78,887 (1970). ರೈಲು ಹೆದ್ದಾರಿ ಮತ್ತು ಚಂಪಮಹಾಸರೋವರ ಜಲಮಾರ್ಗಗಳಿಂದ ಇತರೆಡೆಗೆ ಸಂಪರ್ಕ ಹೊಂದಿರುವುದರಿಂದ ಈ ನಗರದಲ್ಲಿ ಅನೇಕ ಉದ್ಯಮಗಳು ಬೆಳೆದಿವೆ. ಕಲ್ಲುಗಣಿಗಳಿಂದ ಚಪ್ಪಡಿಗಳನ್ನು ತೆಗೆದು ಬೇರೆಡೆ ರವಾನಿಸುವುದು ಇಲ್ಲಿಯ ಪ್ರಧಾನ ಉದ್ಯಮ. ಇದಲ್ಲದೆ ಕಲ್ಲಿದ್ದಲು ಗಣಿಗಾರಿಕೆ. ತೈಲಶುದ್ಧೀಕರಣ, ವಸ್ತ್ರತಯಾರಿಕೆಯ ಉದ್ಯಮಗಳು ಇಲ್ಲಿ ಬೆಳೆದಿದೆ.

ಇಲ್ಲಿ ಮೊದಮೊದಲು ಬಂದು ನೆಲೆಸಿದ್ದ ವಲಸೆಗಾರರು ಬ್ಲ್ಯಾಕ್ ಹಾಕ್ ಯುದ್ಧದ ಕಾಲದಲ್ಲಿ ನಗರವನ್ನು ತ್ಯಜಿಸಿಹೋದರು. ಚಾಲ್ರ್ಸ್ ರೀಡ್ ಎಂಬುವನು ಇಲ್ಲಿ ಪ್ರಥಮವಾಗಿ ಸ್ಥಿರವಾಗಿ ನೆಲೆಸಿದ ವಲಸೆಗಾರ (1833). 1840 ಹಾಗೂ 1850ರ ದಶಕಗಳಲ್ಲಿ ಬ್ರಿಟಿಷ್, ಐರಿಷ್ ಹಾಗೂ ಜರ್ಮನರು ಬಂದು ಇಲ್ಲಿ ನೆಲೆಸಿದರು. ಇಲಿನಾಯ್-ಮಿಷಿಗನ್ ಕಾಲುವೆ (1848) ಮತ್ತು ರಾಕ್‍ಐಲೆಂಡ್ ರೈಲುಮಾರ್ಗಗಳಾದ ಮೇಲೆ (1852) ಇಲ್ಲಿಯ ಸುಣ್ಣಕಲ್ಲು, ಕಲ್ಲಿದ್ದಲು, ಹಾಗೂ ಕೃಷಿ ಉತ್ಪಾದನೆಗಳಿಗೆ ಹೆಚ್ಚಿನ ಬೇಡಿಕೆ ಬಂತು. 19ನೆಯ ಶತಮಾನದ ಕೊನೆಯಿಂದ ಇಲ್ಲಿ ಕೈಗಾರಿಕೆಗಳ ಬೆಳವಣಿಗೆ ಪ್ರಾರಂಭವಾಯಿತು. ಇಲ್ಲಿಯ ಪಿಲ್ಚರ್ ಪಾರ್ಕ್ ಸಸ್ಯವಾಟಿಯಲ್ಲಿ ಅನೇಕ ದೇಶೀ, ವಿದೇಶೀ ಗಿಡ ಬಳ್ಳಿಗಳನ್ನು ಬೆಳೆಸುತ್ತಾರ. ಸಮೀಪದ ಬರ್ಡ್ ಹೇವನ್ ಪಕ್ಷಿಧಾಮದಲ್ಲಿ ಸು. 200 ಬಗೆಯ ಪಕ್ಷಿಗಳುಂಟು. ಇಲಿನಾಯ್ ರಾಜ್ಯದ ಎರಡು ಪ್ರಧಾನ ಕಾರಾಗೃಹಗಳು ಇಲ್ಲಿವೆ. ಗಂಭೀರ ಸ್ವರೂಪದ ಅಪರಾಧಿಗಳಿಗಾಗಿರುವ ಕಾರಾಗೃಹ ಪಟ್ಟಣದಿಂದ 5 ಮೈ. ದೂರದಲ್ಲಿದೆ. 64 ಎಕರೆ ಪ್ರದೇಶದ ಈ ಕಾರಾಗೃಹದ ಸುತ್ತಲೂ ಸು. 30' ಎತ್ತರದ ಗೋಡೆಯುಂಟು. ಇಲ್ಲಿಯ ಕಟ್ಟದ ಅತ್ಯಂತ ವಿಶಿಷ್ಟವಾದ ಜೈಲುವಾಸ್ತುವೆಂದು ಪ್ರಸಿದ್ಧವಾಗಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: