ಜೋನ್ ಆಫ್ ಆರ್ಕ್
ಜೋನ್ ಆಫ್ ಆರ್ಕ್ (ಜನವರಿ ೬, ೧೪೧೨ - ಮೇ ೩೦, ೧೪೩೧) (ಫ್ರೆಂಚ್‌ನಲ್ಲಿ Jeanne d'Arc, Jehanne la Pucelle, ಹಾಗೂ ಆರ್ಲಿಯನ್ಸ್‌ನ ಕೆಲಸಗಾತಿ ಫ್ರಾನ್ಸ್‌ನ ರಾಷ್ಟ್ರೀಯ ನಾಯಕಿ, ವೀರಾಂಗನೆ .ಸುಮಾರು ಐದು ಶತಮಾನಗಳ ಅನಂತರ ಸಂತಳೆಂದು ಪರಿಗಣಿತೆ. ದೈವಿಕ ಸ್ಫೂರ್ತಿಯಿಂದ ಪ್ರವೃತ್ತಳಾಗಿರುವುದಾಗಿ ನಂಬಿ ಆರ್ಲೀಯನ್ಸ್ ಕದನದಲ್ಲಿ ಫ್ರೆಂಚರಿಗೆ ಜನ ದೊರಕಿಸಿಕೊಟ್ಟ, 7ನೆಯ ಚಾಲ್ರ್ಸ್ ದೊರೆ ರೀಮ್ಸ್‍ನಲ್ಲಿ ಪಟ್ಟಾಭಿಷಿಕ್ತನಾಗುವುದನ್ನು ಸಾಧ್ಯವಾಗಿಸಿದ, ಅನಂತರ ಸೆರೆಯಾಗಿ ಷಾಷಂಡಿನಿಯೆಂದು ಇಂಗ್ಲಿಷರಿಂದ ಸುಡಲ್ಪಟ್ಟ ಗ್ರಾಮೀಣ ತರುಣಿ.
ಜೀವನ
[ಬದಲಾಯಿಸಿ]ಷಾóನ್ ಡಾರ್ಕ್ ಎಂಬುದು ಈಕೆಯ ಫ್ರೆಂಚ್ ನಾಮ. ಆರ್ಲೀಯನ್ಸ್ ಕೊಡಗೂಸು (ಫ್ರೆಂಚ್ : ಲಾ ಪ್ರಸೆಲ್ ಡಾರ್ಲೇಲಯಾನ್) ಎಂದೂ ಖ್ಯಾತಳಾಗಿದ್ದಾಳೆ. ಫ್ರಾನ್ಸಿನ ಬಾರ್ ಸಂಸ್ಥಾನದ ಮ್ಯೂಸ್ ನದೀತೀರದ ಡಾನ್ರೇಮೀ ಗ್ರಾಮದಲ್ಲಿ 1412ರ ಜನವರಿ 6ರಂದು ಜನಿಸಿದಳು. ತಂದೆ ಷಾóಕ್ ಡಾರ್ಕ್, ತಾಯಿ ಈಸಾಬೆಲ್ ರೊಮಿ. ಜೋನ್ ದೇವರಲ್ಲಿ ನಂಬಿಕೆಯನ್ನೂ ಪ್ರಾರ್ಥನೆಯ ಅಭ್ಯಾಸವನ್ನೂ ತಾಯಿಯಿಂದ ಕಲಿತಳು. ಈಕೆ ಕಷ್ಟಪಟ್ಟು ಕೆಲಸಮಾಡುತ್ತಿದ್ದಳು. ಮನೆಗೆಲಸದಲ್ಲಿ ಇವಳಿಗೆ ವಿಶೇಷ ಆಸಕ್ತಿ. ಆಗಾಗ್ಗೆ ದನ ಕಾಯಲು ಹೋಗುತ್ತಿದ್ದಳು. ಸಮವಯಸ್ಕರೊಡನೆ ಗ್ರ್ರಾಮದ ಗಂಧರ್ವವೃಕ್ಷದ ಬಳಿ ಆಟಪಾಟಗಳಲ್ಲಿ ನೃತ್ಯ ವಿನೋದಗಳಲ್ಲಿ ಭಾಗವಹಿಸುತ್ತಿದ್ದಳು.
ಫ್ರಾನ್ಸಿನ 6ನೆಯ ಚಾಲ್ರ್ಸ್ ದೊರೆಯ ಮರಣಾನಂತರ ಅವನ ಮಗ ಡಾಫಿನ್ ಚಾರ್ಲ್ಸ್ (ಅನಂತರ 7ನೆಯ ಚಾರ್ಲ್ಸ್) ಉತ್ತರಾಧಿಕಾರವನ್ನು ಇಂಗ್ಲಿಷ್ ದೊರೆ 6ನೆಯ ಹೆನ್ರಿ ಪ್ರಶ್ನಿಸಿದ್ದರಿಂದ ಆ ಬಗ್ಗೆ ವಿವಾದ ಉದ್ಭವಿಸಿತ್ತು. ಅವನ ಸೈನ್ಯಗಳು ಬರ್ಗಂಡಿಯವರ ಮೈತ್ರಿ ಸಾಧಿಸಿ ಅವರ ನೆರವಿನಿಂದ ಉತ್ತರ ಫ್ರಾನ್ಸನ್ನೆಲ್ಲ ಆಕ್ರಮಿಸಿಕೊಂಡಿದ್ದುವು. ಫ್ರೆಂಚ್ ಅರಸನ ಪಟ್ಟಾಭಿಷೇಕವಾಗಬೇಕಾಗಿದ್ದ ಅರಮನೆ ಇದ್ದ ರೀಮ್ಸ್ ಎಂಬ ಸ್ಥಳ ಇಂಗ್ಲಿಷರ ಅಧೀನದಲ್ಲಿತ್ತು. ಪಟ್ಟಾಭಿಷೇಕವಾಗದೆ ಫ್ರೆಂಚ್ ಪ್ರಜೆಗಳು ಚಾರ್ಲ್ಸ್ ನನ್ನು ಅರಸನೆಂದು ಸ್ವೀಕರಿಸಲು ಹಿಂಜರಿಯುತ್ತಿದ್ದರು. 1421ರಲ್ಲಿ 6ನೆಯ ಚಾಲ್ರ್ಸ್ ಮರಣಹೊಂದಿದ್ದರೂ, 1427ರಲ್ಲಿ ಕೂಡ ಅವನ ಮಗನ ಪಟ್ಟಾಭಿಷೇಕವಾಗಿಲ್ಲದು ಆತಂಕಕಾರಿಯಾಗಿತ್ತು.
ಜೋನಳಿಗೆ ಇಂತ ಪರಿಸ್ಥಿತಿಯಲ್ಲಿ ಆಕೆಯ 13ನೆಯ ವಯಸ್ಸಿನಲ್ಲೇ ದೇವವಾಣಿ ಕೇಳಿಸಿತ್ತು; ಆತ್ಮಸಂಯಮವನ್ನು ಬೋಧಿಸಿತ್ತು. ಅನಂತರ ಆ ವಾಣಿ ಅವಳು ಫ್ರಾನ್ಸಿಗೆ ಹೋಗಿ ಅರ್ಲೀಯನ್ಸ್ ಆಕ್ರಮಣವನ್ನು ತೆರವು ಮಾಡಬೇಕೆಂದು ಆದೇಶ ನೀಡಿತು. ಸೇಂಟ್ ಮೈಕೇಲ್, ಸೇಂಟ್ ಕ್ಯಾದರೀನ್, ಸೇಂಟ್ ಮಾರ್ಗರೆಟರ ದರ್ಶನ ತನಗೆ ಪದೇಪದೇ ಆಗುತ್ತಿತ್ತೆಂದು ಅವಳು ಹೇಳಿದಳು. ಈ ವಾಣಿಗಳು ಇಡೀ ಜೀವಮಾನಪರ್ಯಂತ ಮಾರ್ಗದರ್ಶನ ಮಾಡಲಿದ್ದುವು. ಈ ವಾಣಿಗಳ ಒತ್ತಾಯದ ಮೇರೆಗೆ ಕೊನೆಗೂ ಆಕೆ ಚಾಲ್ರ್ಸನನ್ನು ನೋಡಲು ಹೊರಟಳು. ಆಗ ಆಕೆ ಪುರುಷವೇಷ ಧರಿಸಿದಳು. ಅನಂತರ ಕೊನೆಯವರೆಗೂ ಆ ಉಡುಪನ್ನು ಆಕೆ ಬದಲಿಸಿ ಸ್ತ್ರೀಯರ ಉಡುಪು ಧರಿಸಲಿಚ್ಚಿಸಲಿಲ್ಲ.
ಮೊದಮೊದಲು ಆಕೆಯ ಯತ್ನಗಳು ಫಲಿಸಲಿಲ್ಲ. ಆದರೂ ಆಕೆ ನಿರಾಸೆ ಹೊಂದಿದೆ. 1429ರಲ್ಲಿ ಷೀನಾನ್‍ನಲ್ಲಿ ಚಾಲ್ರ್ಸನನ್ನು ಕಂಡಳು. ತನ್ನ ಆಸ್ಥಾನಿಕರ ನಡುವೆ ಅಡಗಿದ್ದ ಆತನ ಬಳಿಗೆ ನೇರವಾಗಿ ಹೋಗಿ, ತಾನು ಹೋಗಿ ಯುದ್ಧ ಮಾಡುವುದಾಗಿಯೂ ಆತನಿಗೆ ಪಟ್ಟಾಭಿಷೇಕ ಮಾಡಿಸುವುದಾಗಿಯೂ ಹೇಳಿದಳು. ಅವಳು ಕ್ರೈಸ್ತಮತ ಪಂಡಿತರ ವಿವಿಧ ಪರೀಕ್ಷೆಗಳಿಗೊಳಗಾಗಿ, ಕೊನೆಗೊಮ್ಮೆ ಅವರ ಶಿಫಾರಸನ್ನು ಪಡೆದು ಏಪ್ರಿಲ್ ತಿಂಗಳಲ್ಲಿ ಸಣ್ಣ ಸೈನ್ಯವೊಂದರ ನೇತೃತ್ವ ವಹಿಸಿ ಮೊದಲು ಆರ್ಲೀಯನ್ಸ ಅಭಿಮುಖವಾಗಿ ಹೊರಟಳು. ದೈವಪ್ರೇರಣೆಯಂತೆ 1429ರ ಮೇ 4ರಂದು ಒಮ್ಮಿಂದೊಮ್ಮೆ ಇಂಗ್ಲಿಷರನ್ನು ಮುತ್ತಿ, ಆರ್ಲೀಯನ್ಸ್ ನಗರವನ್ನು ವಶಪಡಿಸಿಕೊಂಡಳು. ಮುಂದೆ ಅವಳ ಗುರಿ ರೀಮ್ಸ್ ಅಲ್ಲಿದ್ದ ಶತ್ರುಗಳನ್ನು ಅವಳು ಹೊರದೂಡಿದಳು. ಅಲ್ಲಿ ಪಟ್ಟಾಭಿಷೇಕ ಮಾಡಿಕೊಳ್ಳಲು ಚಾರ್ಲ್ಸ್ ನನ್ನು ಶ್ರಮಪಟ್ಟು ಒಪ್ಪಿಸಿದಳು. ಜುಲೈ 17ರಂದು ಅವನ ಪಟ್ಟಾಭಿಷೇಕವಾಯಿತು. ಆಗ ಆಕೆ ಅರಸನಿಗೆ ಅತ್ಯಂತ ಸಮೀಪದಲ್ಲಿ ತನ್ನದೇ ಆದ ಧ್ವಜವನ್ನು ಹಿಡಿದು ನಿಂತಳು. ಎಲ್ಲರಿಗಿಂತ ಮೊದಲು ಅವಳು ಆತನನ್ನು ದೊರೆಯೆಂದು ಸಂಭೋಧಿಸಿ ತನ್ನ ವಿಧೇಯತೆಯನ್ನು ಸೂಚಿಸಿದಳು.
ಅಲ್ಲಿಂದ ಮುಂದೆ ಪ್ಯಾರಿಸ್ ನಗರವನ್ನು ವಶಪಡಿಸಿಕೊಳ್ಳಬೇಕೆಂದು ಆಕೆಯ ಮಹದಾಸೆಯಾಗಿತ್ತು. ಅದರೆ ದೊರೆ ಕೂಡಲೇ ಅದಕ್ಕಾಗಿ ಕಾರ್ಯೋನ್ಮುಖನಾಗದಿರುವಂತೆ ಅವನ ಇತರ ಹಿತೈಷಿಗಳು ಅವನ್ನು ತಡೆದರು. ಸೆಪ್ಟಂಬರ್ ತಿಂಗಳಲ್ಲಿ ಮತ್ತೊಮ್ಮೆ ಯತ್ನಿಸಿದರೂ ಯಶಸ್ಸು ಲಭಿಸಲಿಲ್ಲ. ಅರಸನನ್ನು ಇತರರು ಕೈಬಿಟ್ಟರೂ ಜೋನ್ ಆತನ ಬೆಂಬಲಕ್ಕೆ ನಿಂತಳು. ಈ ಮಧ್ಯೆ ರೀಮ್ಸ್ ನಗರ ಬರ್ಗಂಡಿಯನರ ದಾಳಿಗೆ ತುತ್ತಾಗಲು, ಅವರ್ನು ಓಡಿಸಲು ಜೋನ್ಸ್ ಶ್ರಮಿಸಿದಳು. ಆದರೆ ಕೋಂಪ್ಯೇನ್ ಎಂಬಲ್ಲಿ 1430ರ ಮೇ 23ರಂದು ಜೋನ್ ತನ್ನ ಇಬ್ಬರು ಸೋದರರೊಂದಿಗೆ ಬರ್ಗಂಡಿಯನರಿಗೆ ಸೆರೆ ಸಿಕ್ಕಳು.
ಆಕೆ ಸೆರೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಯತ್ನಗಳು ಫಲಿಸಲಿಲ್ಲ. ಇಂಗ್ಲಿಷರ ಕೋರಿಕೆಯಂತೆ ಲುಕ್ಸೆಂಬರ್ಗಿನ ಜಾನ್ ಆಳ್ವಿಕೆಯನ್ನು 10,000 ಫ್ರಾಂಕ್‍ಗಳಿಗೆ ಪ್ರತಿಯಾಗಿ ಇಂಗ್ಲಿಷರಿಗೆ ಒಪ್ಪಿಸಿದ. 1431ರ ಜನವರಿ 13ರಿಂದ ಆಕೆ ಧಾರ್ಮಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಳು. ವಿಚಾರಣಾಕರ್ತರು ಚಾಲ್ರ್ಸನ ಶತ್ರಗಳಾಗಿದ್ದುದರಿಂದ ತಾನು ಅವರಿಗೆ ನಿಜ ಸಂಗತಿಯನ್ನೆಲ್ಲ ಹೇಳಬೇಕೆಂಬ ಷರತ್ತಿಗೆ ಬದ್ಧವಾಗುವುದಿಲ್ಲವೆಂದು ಆಕೆ ಸ್ಪಷ್ಟಪಡಿಸಿದಳು. ಮಾರ್ಚ್ 24ರಂದು ಆಕೆಯ ಮೇಲೆ ಆಪಾದನೆಗಳನ್ನು ಹೊರಿಸಲಾಯಿತು. ಈಕೆ ಷಾಷಂಡಿನಿ ಮಾಟಗಾರ್ತಿ, ದೇವರ ಹೆಸರಿನಲ್ಲಿ ದ್ರೋಹ ಮಾಡಿದವಳು; ಭವಿಷ್ಯವನ್ನು ನುಡಿಯುವುದಾಗಿ ಘೋಷಿಸಿಕೊಂಡು, ದೇವರಿಂದ ನೇರವಾಗಿ ಆದೇಶಗಳನ್ನು ಸ್ವೀಕರಿಸಿದುದಾಗಿ ಸಾರಿಕೊಂಡು, ಕ್ರೈಸ್ತ ಚರ್ಚ್ ನಿಯಮಗಳನ್ನು ಉಲ್ಲಿಂಘಿಸಿದಳು. ತನ್ನ ಹಲವಾರು ಕಾಗದಗಳಲ್ಲಿ ಜೀಸಸ್ ಮತ್ತು ಮೇರಿಯ ಅಂಕಿತ ಹಾಕಿದಳು. ಲಜ್ಜೆ ಗೇಡಿಯಾಗಿ ಗಂಡುಡುಪು ಧರಿಸಿದಳು. ತನ್ನ ಸಂತರು ತನ್ನನ್ನು ಫ್ರೆಂಚ್ ಭಾಷೆಯಲ್ಲಿ ಮಾತಾಡಿಸಿದರೆಂದೂ ಇಂಗ್ಲಿಷಿನಲ್ಲಲ್ಲವೆಂದೂ ಸಾಧಿಸಿದಳು. ಚರ್ಚಿನಲ್ಲಿ ನಂಬುಗೆಯಿಡದೆ ಈಕೆ ಧರ್ಮಕ್ಕೂ ದೇವರಿಗೂ ದ್ರೋಹ ಬಗೆದಿದ್ದಾಳೆ. ಇವು ಆಕೆಯ ಮೇಲಣ ಕೆಲವು ಮುಖ್ಯ ಆಪಾದನೆಗಳು. ಆದರೂ ಆಕೆ ತಪ್ಪೊಪ್ಪಿಕೊಳ್ಳಲಿಲ್ಲ. ತಾನು ಮೊದಲು ನೀಡಿದ ಹೇಳಿಕೆಗಳೆ ಸತ್ಯವೆಂದೂ ಅವನ್ನು ಬದಲಿಸಲಾರನೆಂದೂ ದೇವರೇ ತನ್ನ ರಕ್ಷಕನೆಂದೂ ನುಡಿದಳು.
ಕೊನೆಗೆ ಧಾರ್ಮಿಕ ನ್ಯಾಯಾಲಯ ಆಕೆಯನ್ನು ಇಂಗ್ಲಿಷ್ ಸೈನ್ಯಾಧಿಕಾರಿಗಳಿಗೆ ಒಪ್ಪಿಸಿತು. 1431ರ ಮೇ 20ರಂದು ಆಕೆಯನ್ನು ಜೀವಸಹಿತ ಸುಡಲಾಯಿತು. ಸುಮಾರು 20ವರ್ಷಗಳ ಅನಂತರ 7ನೆಯ ಚಾರ್ಲ್ಸ್ ಈ ಪ್ರಕರಣವನ್ನು ಕುರಿತು ವಿಚಾರಣೆ ನಡೆಸಲು ಆಜ್ಞಾಪಿಸಿದ. ಎರಡು ವರ್ಷಗಳ ಅನಂತರ ಪೋಪನ ಮುಖ್ಯ ರಾಯಭಾರಿ ಗಿಲಾಮ್ ಡಿ ಎಸ್ಟೌಟ್‍ವಿಲ್ ಈ ಬಗ್ಗೆ ಸಮಗ್ರ ತನಿಖೆ ನಡೆಸಿದ. ಪೋಪ್ 3ನೆಯ ಕ್ಯಾಲಿಕ್ಟಸನ ಆದೇಶದ ಮೇರೆಗೆ 1431ರಲ್ಲಿ ಆಕೆಗೆ ವಿಧಿಸಿದ ಶಿಕ್ಷೆಯನ್ನು ರದ್ದುಮಾಡಿ ವರ್ಜಿಸುವ ಕ್ರಮ ಕ್ಯಗೊಳ್ಳಲಾಯಿತು. 1920ರ ಮೇ16ರಂದು ಪೋಪ್ 5ನೆಯ ಬೆನೆಡಿಕ್ಟ್ ಆಕೆಯನ್ನು ವಿಧಿಪೂರ್ವಕವಾಗಿ ಸಂತರ ಪಟ್ಟಿಗೆ ಸೇರಿಸಿದ, ಪ್ರತಿವರ್ಷದ ಮೇ 30ರಂದು ಚರ್ಚ್ ಆಕೆಯ ಹಬ್ಬ ಆಚರಿಸುತ್ತದೆ. 1920ರಲ್ಲಿ ಫ್ರೆಂಚ್ ಪಾರ್ಲಿಮೆಂಟ್ ಕೈಗೊಂಡ ನಿರ್ಣಯದ ಮೇರೆಗೆ ಪ್ರತಿವರ್ಷವೂ ಮೇ ಎರಡನೆಯ ಭಾನುವಾರ ರಾಷ್ಟ್ರೀಯ ಉತ್ಸವದಿನ.
ಜೋನಳಿಗೆ ಕಾಣಿಸಿಕೊಂಡ ದೇವತೆಗಳೂ ಕೇಳಿಸಿದ ಧ್ವನಿಗಳೂ ಎಷ್ಟರಮಟ್ಟಿಗೆ ಸತ್ಯ ಎಂಬುದು ಪರಿಹರಿಸಲಾಗದ ಪ್ರಶ್ನೆಯಾಗಿ ಉಳಿದುಬಂದಿದೆ. ಆದರೆ ಆಕೆ ಫ್ರಾನ್ಸ್ ದೇಶಕ್ಕೆ ಮಹೋಪಕಾರ ಮಾಡಿದಳೆಂಬುದಂತೂ ನಿಜ. ತನ್ನ ವಿಜಯದಿಂದ ಆಕೆಗೆ ಆಗ ನಡೆಯುತ್ತಿದ್ದ ನೂರು ವರ್ಷಗಳ ಯುದ್ಧಕ್ಕೆ ಒಂದು ಹೊಸ ತಿರುವನ್ನೇ ಕೊಟ್ಟಳು. ಆಕೆ ಬರೆದ, ಬರೆಸಿದ ನೂರಾರು ಪತ್ರಗಳು ಉಳಿದು ಬಂದಿವೆ. ಅವು ಆಕೆಯ ರಾಷ್ಟ್ರಪ್ರೇಮ ಮತ್ತು ದೈವಭಕ್ತಿಗಳಿಗೆ ಸಾಕ್ಷಿಗಳಾಗಿವೆ. ಜೋನಳ ಜೀವನ ಅನೇಕ ಲೇಖಕರ ಸಾಹಿತ್ಯಕೃತಿಗಳಿಗೆ ವಸ್ತುವಾಗಿದೆ. ಜರ್ಮನ್ ಕವಿ-ನಾಟಕಕಾರ ಷಿಲರನೂ ಇಂಗ್ಲಿಷ್ ನಾಟಕಕಾರ ಜಾರ್ಜ್ ಬರ್ನಾಡ್ ಷಾನೂ ಆಕೆಯ ಬಗ್ಗೆ ನಾಟಕಗಳನ್ನು ಬರೆದಿದ್ದಾರೆ. ಆನಟೋಲ್ ಫ್ರಾನ್ಸ್, ಮಾರ್ಕ್ ಟ್ವೇನ್, ಆಂಡ್ರ್ಯೂ ಲ್ಯಾಂಗ್ ಇವರು ಬರೆದ ಜೀವನಚರಿತ್ರೆಗಳು ಪ್ರಖ್ಯಾತವಾಗಿವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Jeanne d´Arc Centre
- Joan of Arc Archive
- St. Joan of Arc Archived 2006-03-17 ವೇಬ್ಯಾಕ್ ಮೆಷಿನ್ ನಲ್ಲಿ.