ವಿಷಯಕ್ಕೆ ಹೋಗು

ಜೊಂಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೊಂಡು ಟೈಫೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಗಿಡ. ಟೈಫ ಇದರ ಶಾಸ್ತ್ರೀಯ ಹೆಸರು. ಬೆಕ್ಕಿನ ಬಾಲದ ಗಿಡ ಎಂಬ ಹೆಸರೂ ಇದಕ್ಕುಂಟು. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದನ್ನು ರೀಡ್ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶಗಳಲ್ಲಿ ಬೆಳೆಯುತ್ತದೆ. ಗಿಡದ ಕಾಂಡ ಭೂಮಿಯೊಳಗೆ ಸಮಾಂತರವಾಗಿ ದಪ್ಪಗೆ ಬೆಳೆದುಕೊಂಡಿದೆ. ಇದು ರೈಜೋಮ್ ಮಾದರಿಯದು. ಎಲೆಗಳ ಸರಳ, ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ. ತೊಟ್ಟು ಉದ್ದವಾಗಿರುವುದರಿಂದ ಎಲೆಯ ಅಲಗು ನೀರಿನ ಪಾತಳಿಯ ಮೇಲೆ ಚಾಚಿಕೊಂಡಿರುತ್ತವೆ. ಅಲ್ಲದೆ ಎಲೆಯ ತೊಟ್ಟು ಅಗಲವಾಗಿದ್ದು ಪೊರೆಯ ರೂಪದಲ್ಲಿದೆ. ಮುಖ್ಯ ಕಾಂಡದ ತುದಿಯಲ್ಲಿ ಉದ್ದವಾದ ತೊಟ್ಟುಳ್ಳ ಹೂಗೊಂಚಲು ಹುಟ್ಟುತ್ತದೆ. ಹೂಗಳು ಬಹಳ ಚಿಕ್ಕವು ಏಕ ಲಿಂಗಗಳು. ಗಂಡುಹೂಗಳ ಹೂಗೊಂಚಲಿನ ತುದಿಯಲ್ಲೂ ಹೆಣ್ಣುಹೂಗಳು ಬುಡಭಾಗದಲ್ಲೂ ಸ್ಥಿತವಾಗಿವೆ. ಗಂಡುಹೂಗಳ ಬಣ್ಣ ಹಳದಿ, ಹೆಣ್ಣು ಹೂಗಳ ಬಣ್ಣ ಕಂದು, ಎರಡು ಬಗೆಯವಕ್ಕೂ ತೊಟ್ಟಿಲ್ಲ. ಎರಡರಲ್ಲೂ ದಳವಾಗಲೀ ಪುಷ್ಪಪತ್ರವಾಗಲೀ ಇಲ್ಲ. ಗಂಡಿನಲ್ಲಿ 2-5 ಕೆಸರುಗಳುಂಟು. ಪರಾಗಕೋಶಗಳನ್ನು ಒಂದುಗೂಡಿಸುವ ಸಂಬಂಧಿಕ (ಕನೆಕ್ಟಿವ್) ಮುಂಚಾಚಿಕೊಂಡಿದೆ. ಹೆಣ್ಣುಹೂವಿನಲ್ಲಿ ಒಂದೇ ಕಾರ್ಪೆಲಿನಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಉಂಟು. ಅಂಡಾಶಯಕ್ಕೆ ಕೂದಲುಗಳಿಂದ ಆವೃತವಾದ ಉದ್ದವಾದ ತೊಟ್ಟು ಇದೆ. ಫಲ ಅಷ್ಟಮಾದರಿಯದು. ಮಾಗಿದಾಗ ಇದರ ಮೇಲ್ಬಾಗ ಮುಚ್ಚಳದ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಹುಲ್ಲಿನಂತೆಯೇ ಜೊಂಡು ಕೂಡ ದನಕರುಗಳಿಗೆ ಒಳ್ಳೆಯ ಮೇವು ಎನಿಸಿಕೊಂಡಿದೆ. ಅಲ್ಲದೆ ಇದನ್ನು ಒಣಗಿಸಿ ಗುಡಿಸಲುಗಳನ್ನು ಮುಚ್ಚಲು ಬಳಸುವುದುಂಟು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೊಂಡು&oldid=906499" ಇಂದ ಪಡೆಯಲ್ಪಟ್ಟಿದೆ