ಜೈಪುರಿ (ಭಾಷೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈಪುರಿ - ರಾಜಸ್ಥಾನೀ ಭಾಷೆಯ ಮಧ್ಯಪೂರ್ವ ಉಪಭಾಷೆ. ರಾಜಸ್ಥಾನದ ರಾಜಧಾನಿಯಾದ ಜೈಪುರದಲ್ಲೂ ಅದರ ಅಕ್ಕಪಕ್ಕ ಪ್ರದೇಶಗಳಲ್ಲೂ ಬಳಕೆಯಲ್ಲಿದೆ. ಮಧ್ಯಪೂರ್ವ ರಾಜಸ್ಥಾನೀ ಭಾಷೆಯ ಈ ಉಪಭಾಷೆಯನ್ನು ಜೈಪುರೀ ಎಂದು ಕರೆದವರು ಐರೋಪ್ಯರು. ಸ್ಥಳೀಯರು ಇದನ್ನು ಢುಂಣ್‍ಢಾರೀ, ಝಾರ್ ಸಾಹೀ ಬೋಲೀ, ಕಾಞ-ಕೂಞ ಕೀ ಬೋಲೀ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಜೈಪುರಿ ಬರವಣಿಗೆಗೆ ದೇವನಾಗರೀ ಲಿಪಿಯನ್ನು ಬಳಸುತ್ತಾರೆ.

ಶಿಷ್ಟ ಜೈಪುರಿ ಭಾಷೆಯನ್ನು ಮಾತನಾಡುವವರು 790, 231 ಜನರಿದ್ದಾರೆ (ಲಿಂ.ಸ.ಎಂ. 1908)

ರಾಜಸ್ಥಾನೀ ಭಾಷೆಯೊಂದಿಗಿನ ಸಂಬಂಧ[ಬದಲಾಯಿಸಿ]

ಜೈಪುರಿ ಭಾಷೆಯಲ್ಲದೆ ತೋರಾವತಿ, ಕಾಠ್ಯರಾ, ಚೌರಾಸೀ, ನಾಗರ್ಚಾಲ್, ರಾಜಾವಟೀ ಮತ್ತು ಸಿಪಾರೀ ಅಥವಾ ಶಿಯೋಪುರೀ ಎಂಬ ಉಪೋಪಭಾಷೆಗಳನ್ನೊಳಗೊಂಡ ಅಜ್ಮೀರೀ, ಕಿಷನ್‍ಗಡೀ ಮತ್ತು ಹಾರೌಟೀ ಎಂಬ ಇನ್ನೂ ಮೂರು ಉಪಭಾಷೆಗಳನ್ನು ಮಧ್ಯಪೂರ್ವ ರಾಜಸ್ಥಾನೀ ಭಾಷೆ ಒಳಗೊಂಡಿದೆ ಎಂದು ಗ್ರಯರ್ಸನ್ನನ (ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯ 1908) ಅಭಿಪ್ರಾಯ.

ಜೈಪುರಿಗೂ ಶಿಷ್ಟ ಹಿಂದಿಗೂ ಇರುವ ವ್ಯತ್ಯಾಸ[ಬದಲಾಯಿಸಿ]

ಜೈಪುರಿಗೂ ಶಿಷ್ಟ ಹಿಂದಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ವರ್ಣಭೇದ ಮತ್ತು ಕೆಲವು ವೇಳೆ, ಆಕೃತಿಭೇದ. ಇವು ಉದಾಹರಣೆಗಳು : ಹಿಂದಿಯ /ಅ/ ಜೈಪುರಿಯಲ್ಲಿ/ಇ/ ಮತ್ತು ಹಿಂದಿಯ /ಇ/ ಜೈಪುರಿಯಲ್ಲಿ /ಅ/ ಎಂದಾಗುತ್ತದೆ. (ಹಿಂದಿ) ಪಣ್ಡಿತ್ (ಜೈಪುರಿ) ಪಿಣ್ಡತ್. (ಏ/ಗೆ ಬದಲು /ಐ/ ಉಪಯೋಗಿಸುತ್ತಾರೆ. (ಹಿಂದಿ) ಮೇ (ಜೈಪುರಿ) ಮೈ-ಒಳಗೆ. ಕೆಲವು ವೇಳೆ /ಓ/ ಎಂಬುದನ್ನು /ಊ/ ಎಂಬುದರಿಂದ ಪ್ರತಿನಿಧಿಸುತ್ತಾರೆ. (ಹಿಂದಿ) ಕ್ಞೊ (ಜೈಪುರಿ) ಕ್ಞೂ = ಏಕೆ. ಜೈಪುರಿಯಲ್ಲಿ ಸಾಮಾನ್ಯವಾಗಿ ಮಹಾಪ್ರಾಣವನ್ನು ಉಪಯೋಗಿಸುವುದಿಲ್ಲ. ಹೀಗೆ ಹಿಂದಿಯ ಭೀ ಜೈಪುರಿಯಲ್ಲಿ ಬೀ=ಸಂತೋಷ. (ಹಿಂದಿ) ಅಧಾ (ಜೈಪುರಿ) ಅದೋ = ಅರ್ಧ ಎಂದಾಗುತ್ತದೆ.

ಹಿಂದಿಯಲ್ಲಿರುವ ಪುಲ್ಲಿಂಗ ಮತ್ತು ಸ್ತ್ರೀಲಿಂಗವೆಂಬ ಸಾಮಾನ್ಯ ಭೇದಗಳು ರಾಜಸ್ತಾನಿಯಲ್ಲೂ ಇವೆ. ಆಪ್ಲಾ=ನಾವು (ಸಂಬೋಧಿಸಿದವನೂ ಸೇರಿ) ಮತ್ತು ಮ್ಹೇ=ನಾವು (ಸಂಬೋಧಿಸಿದವನನ್ನು ಬಿಟ್ಟು) ಎಂಬುದರ ಹೊರತು ಸರ್ವನಾಮ ಹಿಂದಿಯಂತೆಯೇ ಜೈಪುರಿಯಲ್ಲಿಯೂ ಉಪಯೋಗದಲ್ಲಿದೆ. ಜೈಪುರಿಯ ಕೆಲವು ವೈಶಿಷ್ಟಗಳು ಹೀಗಿವೆ. ನಿಷೇಧ ರೂಪದಲ್ಲಿ ಸಾಮಾನ್ಯವಾಗಿ ಕೋ ಪ್ರತ್ಯಯ ಧಾತು ಪೂರ್ವದಲ್ಲೂ ಬರುತ್ತದೆ. ಉದಾ: ಕೋಯೀ ಈ ಆದೆಮೀ ಕೋ ದೇತೋ ನೈ (ಯಾರೂ ಕೊಡಲೊಲ್ಲರು). ಧಾತ್ವರ್ಥ ಸೂಚಿ ಬೋ ಅಥವಾ ಣೂ ಎಂಬುದರಲ್ಲಿ ಅಂತ್ಯಗೊಳ್ಳುತ್ತದೆ. ಉದಾ : ಮಾರಬೋ ಅಥವಾ ಮಾರಣೂ.

ಜೈಪುರಿ ಸಾಹಿತ್ಯ[ಬದಲಾಯಿಸಿ]

ಗ್ರೀಯರ್ಸನ್ನನ ಪ್ರಕಾರ ಜೈಪುರಿ ಭಾಷೆ ಹೇರಳವಾದ ಸಾಹಿತ್ಯವನ್ನು ಹೊಂದಿದೆ. ದಾದೂಜಿ ಎಂಬಾತ ಜೈಪುರಿಯಲ್ಲಿ ಬರೆದ ಸುಮಾರು 20,000 ಸಾಲುಗಳನ್ನು ಜಾನ್ ಟ್ರಿಲ್ ಎಂಬಾತ ಭಾಷಾಂತರಿಸಿದ್ದಾನೆ (1001). ದಾದೂಜಿಯಲ್ಲದೆ, ಈ ಕೆಲವು ಕವಿಗಳು ಜೈಪುರಿ ಸಾಹಿತ್ಯವನ್ನು ಸಂಪದ್ಭರಿತಗೊಳಿಸಿದ್ದಾರೆ. ಷರೀಬ್‍ದಾಸ್, ಜೈಸಾ, ಪ್ರಯಾಗ್‍ದಾಸ, ರಜಬ್ಜೀ, ಬಖ್ನಾಜಿ, ಶಂಕರ್‍ದಾಸ್, ಬಾಬಾ ಬನ್ವಾರೀದಾಸ್, ಮಧೋದಾಸ್.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: