ವಿಷಯಕ್ಕೆ ಹೋಗು

ಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ತತ್ತ್ವಾರ್ಥ ಸೂತ್ರ"ವು ಸಮಸ್ತ ಜೈನ ಆಗಮಗಳನ್ನು ಭಟ್ಟಿ ಇಳಿಸಿದ ಸಾರ ರೂಪದ ಗ್ರಂಥವಾಗಿದೆ. ಇದಕ್ಕೆ `ಮೋಕ್ಷಶಾಸ್ತ್ರ' ಎಂಬ ಇನ್ನೊಂದು ಹೆಸರು ಇದೆ. ಈ ಗ್ರಂಥವನ್ನು ಜೈನ ಧರ್ಮದ ಪ್ರಾತಃಸ್ಮರಣೀಯರಾದ ಆಚಾರ್ಯ ಶ್ರೀ ಉಮಾಸ್ವಾಮಿಯವರು ಜೈನ ಪರಂಪರೆಯಲ್ಲಿ ಗೌರವಾಧರಗಳಿಂದ ಪೂಜನೀಯ ಸ್ಥಾನದಲ್ಲಿದ್ದಾರೆ. ಇವರು ಭಗವಾನ್ ಕುಂದ ಕುಂದಾಚಾರ್ಯರ ಶಿಷ್ಯರಯ. ಅವರಿಂದ ಸಂಪೂರ್ಣ ಆಗಮ ಜ್ಞಾನವನ್ನು ಪಡೆದುಕೊಂಡರು. ಆ ಜ್ಞಾನವನ್ನೇ ಸೂತ್ರ ಬದ್ಧಗೊಳಿಸಿ 'ತತ್ತ್ವಾರ್ಥಸೂತ್ರ' ಎಂಬ ಗ್ರಂಥವನ್ನು ರಚಿಸಿದರು.ಇದು ಸೂತ್ರ ಬದ್ಧವಾದ ಜೈನ ಸಿದ್ಧಾಂತದ ಪ್ರಥಮ ಕೃತಿಯಾಗಿದೆ. ಈ ಗ್ರಂಥವನ್ನು ಶ್ವೇತಾಂಬರ ಮತ್ತು ದಿಗಂಬರ ಈ ಎರಡು ಸಂಪ್ರದಾಯದ ಜೈನರು ಮನ್ನಿಸುತ್ತಾರೆ. ಶ್ವೇತಾಂಬರರು ಇವರನ್ನು ಉಮಾ ಸ್ವಾತಿಗಳೆಂದು ಕರೆಯುತ್ತಾರೆ. ಜೈನ ಧರ್ಮದ ಈ ಎರಡು ಸಂಪ್ರದಾಯದಲ್ಲಿ ಈ ಗ್ರಂಥಕ್ಕೆ ಅನೇಕ ಆಚಾರ್ಯರು ಟೀಕೆಗಳನ್ನು ಬರೆದಿದ್ದಾರೆ. ಇಲ್ಲಿಯವರೆಗೆ ಪ್ರಕಟವಾದ ಗ್ರಂಥಗಳ ಪ್ರಕಾರ ದಿಗಂಬರ ಸಂಪ್ರದಾಯದ ತತ್ತ್ವಾರ್ಥಸುತ್ರದಲ್ಲಿ 357 ಸೂತ್ರಗಳಿವೆ. ಶ್ವೇತಾಂಬರ ಸಂಪ್ರದಾಯದ ಪ್ರಕಾರ 344 ಸೂತ್ರಗಳಿವೆ. ಹದಿಮೂರು ಸೂತ್ರಗಳು ದಿಗಂಬರ ಸಂಪ್ರದಾಯದಲ್ಲಿ ಹೆಚ್ಚಿಗೆ ಇವೆ.

ಭಗವದುಮಾಸ್ವಾಮೀ ವಿರಚಿರ " ತತ್ತ್ವಾರ್ಥ ಸೂತ್ರ" ಒಟ್ಟು ಹತ್ತು ಅಧ್ಯಾಗಳನ್ನು ಒಳಗೊಂಡಿದ್ದು ಇರುತ್ತದೆ. ಹತ್ತು ಅಧ್ಯಾಯಗಳಲ್ಲಿ ಹಲವಾರೂ ಸೂತ್ರಗಳನ್ನು ಒಳಗೊಂಡಿದೆ. ಈ ಸೂತ್ರಗಳಿಗೆ ಸಂಕ್ಷೀಪ್ತ ಅರ್ಥವನ್ನು ಇಲ್ಲಿ ನೀಡಲಾಗಿದೆ.

ಅಧ್ಯಾಯ : ಒಂದು

[ಬದಲಾಯಿಸಿ]

ಮೋಕ್ಷ ಮಾರ್ಗಸ್ಯ ನೇತಾರಂ ಭೇತ್ತಾರಂ ಕರ್ಮ ಬೋಭೃತಾಂ l

ಜ್ಞಾತಾರಂ ವಿಶ್ವತತ್ವಾನಾಂ ವಂದೇ ತದ್ಗುಣಲಬ್ಧಯೇ ll

ಅರ್ಥ :- ಗ್ರಂಥಾರಂಭದಲ್ಲಿ ಶ್ರೀ ಮಹರ್ಷಿಗಳು ಮಂಗಲಾಚರಣೆಯನ್ನು ಮಾಡುತ್ತ ಮೋಕ್ಷ ಮಾರ್ಗದ ಉಪದೇಶಕರಾದ, ಕರ್ಮಪರ್ವತಗಳನ್ನು ಭೇಧಿಸುವ ವಿಶ್ವದ ಸಮಸ್ತ ಚರಾಚರ ತತ್ವಳನ್ನಿರಿಯುವ ಶ್ರೀ ಆಪ್ತರನ್ನು ಅವರ ಗುಣಗಳ ಪ್ರಾಪ್ತಿಗೋಸ್ಕರ ನಮಸ್ಕರಿಸುತ್ತೇನೆಂದು ಹೇಳುತ್ತಾರೆ.

೧. ಸಮ್ಯಕ್ ದರ್ಶನ-ಜ್ನಾನ-ಚಾರಿತ್ತಾಣಿ ಮೋಕ್ಷ ಮಾರ್ಗಃ

ಅರ್ಥ : ಸಮ್ಯಗ್ದರ್ಶನ, ಸಮ್ಯಗ್ ಜ್ಞಾನ, ಮತ್ತು ಸಮ್ಯಕ್ ಚಾರಿತ್ರ ಈ ಮೂರು ಕೂಡಿಯೇ ಮೋಕ್ಷ ಪ್ರಾಪ್ತಿಯ ಉಪಾಯವು.ಯಥಾರ್ಥ ದೇವ ಗುರು ಶಾಸ್ತ್ರಗಳಿಂದ ಪ್ರತಿಪಾದಿತವಾದ ತತ್ವದ ಮೇಲೆ ಶ್ರದ್ಧೆ ಇಡುವದಕ್ಕೆ ಸಮ್ಯಗ್ದರ್ಶನವೆಂದೂ, ಸಂಶಯ ವಿಪರ್ಯಯ ಮತ್ತು ಅನಧ್ಯವಸಾಯ ರಚಿತವಾದ ಜ್ಞಾನಕ್ಕೆ ಸಮ್ಯಗ್ ಜ್ಞಾನವೆಂದೂ, ಸಂಸಾರಕ್ಕೆ ಕಾರಣವಾದ ಕಾಮಕ್ರೊಧಾದಿಗಳಿಂದ ದೂರವಾಗುವದಕ್ಕೆ ಸಮ್ಯಕ್ ಚಾರಿತ್ರವೆಂದೂ ಹೆಸರು.

ಸಮ್ಯಗ್ದರ್ಶನ

೨. ತತ್ವಾರ್ಥ ಶ್ರದ್ಧಾನಂ ಸಮ್ಯಕ್ ದರ್ಶನಮ್.

ಅರ್ಥ:- (ತತ್ವ) ವಸ್ತು ಸ್ವರೂಪದಿಂದ ಯುಕ್ತವಾದ ಜೀವಾದಿ ಪದಾರ್ಥಗಳ ಮೇಲೆ ಶ್ರದ್ಧೆಯನ್ನಿಡುವದಕ್ಕೆ ಸಮ್ಯಗ್ದರ್ಶನವೆಂದು ಹೇಳುತ್ತಾರೆ. ಜೀವಾಧಿ ಪದಾರ್ಥಗಳೆ ಸಪ್ತ ತತ್ವಗಳ ರೂಪದಿಂದ ವರ್ಣಿಸಲ್ಪಟ್ಟಿವೆ. ಅವುಗಳ ಸ್ವರೂಪಗಳಲ್ಲಿ ಶಾಸ್ತ್ರಕಾರರು

ಹೇಳಿದಂತೆ ಶ್ರದ್ಧೆಯನ್ನಿಡುವದಕ್ಕೆ ಸಮ್ಯಗ್ದರ್ಶನವೆಂದು ಹೇಳುತ್ತಾರೆ.


ಸಮ್ಯಗ್ದರ್ಶನ ಭೇದ

೩. ತತ್-ನಿಸರ್ಗಾತ್ ಅಧಿಗಮಾತ್ ವಾ

ಅರ್ಥ:- ಸಮ್ಯಗ್ದರ್ಶನವು ನಿಸರ್ಗ ಅಂದರೆ ಸ್ವಭಾವದಿಂದ ಮತ್ತು ಅಧಿಗಮ ಅಂದರೆ ಪರೋಪದೇಶದಿಂದ ಉತ್ಪನ್ನವಾಗುತ್ತದೆ. ಹೀಗೆ ಉತ್ಪತ್ತಿಯು ಅಪೇಕ್ಷೆಯಿಂದ ಸಮ್ಯಗ್ದರ್ಶನವು ಎರಡು ಭೇದದಿಂದ ಯುಕ್ತವಾಗಿದೆ. ತನ್ನ ಸ್ವಭಾವದಿಂದ ಅಂದರೆ ಪರೋಪದೇಶವಿಲ್ಲದೇನೆಯೇ ಪೂರ್ವಭವದ ಸಂಸ್ಕಾರದಿಂದ ಉತ್ಪನ್ನವಾಗುವ ಸಮ್ಯಗ್ದರ್ಶನಕ್ಕೆ ನಿಸರ್ಗಜವೆಂದೂ, ಪರೋಪದೇಶಾದಿಕಾರನಗಳಿಂದ ಉತ್ಪನ್ನವಾಗುವ ಸಮ್ಯಗ್ದರ್ಶನಕ್ಕೆ ಅಧಿಗಮಜ ಸಮ್ಯಗ್ದರ್ಶನವೆಂದೂ ಹೇಳುವರು.


ತತ್ವ ಭೇದ

೪. ಜೀವ-ಅಜೀವ-ಆಸ್ರವ-ಬಂಧ-ಸಂವರ-ನಿರ್ಜರಾ-ಮೋಕ್ಷಾಃ-ತತ್ವಂ

ಅರ್ಥ:- ಜೀವ,ಅಜೀವ,ಆಸ್ರವ,ಬಂಧ,ಸಂವರ,ನಿರ್ಜರಾ,ಮೋಕ್ಷ, ಇವು ಏಳು ತತ್ವಗಳು. ಈ ಏಳು ತತ್ವಗಳ ವಿಸ್ತಾರವಾದ ಸ್ವರೂಪವನ್ನು ಮುಂದಿನ ಅಧ್ಯಾಯಗಳಲ್ಲಿ ವರ್ಣಿಸಲಾಗಿದೆ.ಆದರೂ ಇಲ್ಲಿ ಸಂಕ್ಷೇಪವಾಗಿ ಹೇಳುವೇವು.

ಜೀವ:- ಜ್ಞಾನದರ್ಶನ ಸ್ವರೂಪ ಚೈತನ್ಯದಿಂದ ಯುಕ್ತವಾದ ದ್ರವ್ಯಕ್ಕೆ ಜೀವನೆಂದು ಹೆಸರು.

ಅಜೀವ:- ಚೈತನ್ಯ ರಹಿತವಾದ ದ್ರವ್ಯಕ್ಕೆ ಅಜೀವವೆಂದು ಹೇಳುತ್ತಾರೆ.

ಆಸ್ರವ:- ಕರ್ಮಗಳ ಗಮನಕ್ಕೆ ಆಸ್ರವವೆಂದು ಹೆಸರು.

ಬಂಧ:- ಆತ್ಮ ಪ್ರದೇಶದೊಡನೆ ಕರ್ಮಪ್ರದೇಶಗಳ ಸಂಬಂಧವಾಗುವದಕ್ಕೆ ಬಂಧವೆನ್ನುತ್ತಾರೆ.

ಸಂವರ:- ಅಸ್ರವದ ನಿರೋಧಕ್ಕೆ(ತಡೆಯುವದಕ್ಕೆ) ಸಂವರವೆನ್ನುವರು.

ನಿರ್ಜರಾ:- ಆತ್ಮಪ್ರದೇಶದಿಂದ ಪೂರ್ವಸಂಚಿತ ಕರ್ಮಗಳು ಏಕದೇಶವಾಗಿ ಹೊರಗೆ ಹೋಗುವದಕ್ಕೆ ನಿರ್ಜರೆಯೆಂದು ಹೆಸರು.

ಮೋಕ್ಷ:- ಸಮಸ್ತ ಕರ್ಮಗಳು ಆತ್ಮ ಪ್ರದೇಶದಿಂದ ಬಿಡುಗಡಯಾಗುವದಕ್ಕೆ ಅಥವಾ ಆತ್ಮನು ತನ್ನ ಕರ್ಮಗಳಿಂದ ಪೂರ್ಣರೂಪವಾಗಿ ಬಿಡುಗಡೆಯನ್ನು ಹೊಂದುವದಕ್ಕೆ ಮೋಕ್ಷವೆಂದು ಹೆಸರು.


ಸಪ್ತ ತತ್ವ ಮತ್ತು ಸಮ್ಯಗ್ದರ್ಶನಾದಿಗಳನ್ನು ತಿಳಿಯುವ ಪಾಯ

೫. ನಾಮ ಸ್ಥಾಪನಾ-ದ್ರವ್ಯ-ಭಾವತಃ-ತತ್-ನ್ಯಾಸಃ

ಅರ್ಥ:- ನಾಮ, ಸ್ಥಾಪನಾ, ದ್ರವ್ಯ,ಮತ್ತು ಭಾವಗಳಿಂದ  ಸಪ್ತತತ್ವಗಳ ಮತ್ತು ಸಮ್ಯಗ್ದರ್ಶನಾದಿಗಳ ಜ್ಞಾನವು ಆಗುತ್ತದೆ. ಇವುಗಳಿಗೆ ನಿಕ್ಷೇಪಗಳೆಂದು ಹೇಳುತ್ತಾರೆ.

ನಾಮ:- ಗುಣ, ಜಾತಿ, ದ್ರವ್ಯ ಆದಿಗಳ ಅಪೇಕ್ಷೆ ಇಲ್ಲದೇನೆಯೇ ಲೋಕವ್ಯವಹಾರವನ್ನು ನಡೆಸುವದಕ್ಕೋಸ್ಕರ ಹೆಸರನ್ನಿಡುವದಕ್ಕೆ ನಾಮ ನಿಕ್ಷೇಪವೆಂದು ಹೆಸರು.

ದ್ರವ್ಯ:- ಭೂತ ಮತ್ತು ಭವಿಷ್ಯತ್ ಪಯಾಯಗಳ ಅಪೇಕ್ಷೇಯಿಂದ ವರ್ತಮಾನ ಕಾಲದಲ್ಲಿ ಹೇಳುವದಕ್ಕೆ ದ್ರವ್ಯ ನಿಕ್ಷೇಪವೆಂದು ಹೆಸರು. ಮುಂದೆ ಆಗುವ ರಾಜನಿಗೆ ಈಗಾಗಲೇ ರಾಜನೆನ್ನುವದು. ಅಥವಾ ಹಿಂದೆ ಅಧ್ಯಾಪಕ ವೃತ್ತಿಯಲ್ಲಿದ್ದವನಿಗೆ ಈಗಲೂ ಅಧ್ಯಾಪಕನೆನ್ನುವದು ಇದು ದ್ರವ್ಯ ನಿಕ್ಷೇಪವು.

ಭಾವ:- ವರ್ತಮಾನ ಪರ್ಯಾಯವನ್ನೇ ಅವಲಂಬಿಸಿ ಕಥನ ಮಾಡುವದಕ್ಕೆ ಭಾವ ನಿಕ್ಷೇಪವೆಂದು ಹೆಸರು. ಉದಾಹರಣೆಗೆ ರಾಜಪುತ್ರನಿಗೆ ಯುವ ರಾಜ, ಓದಿಸುತ್ತಿರುವಾಗ ಅಧ್ಯಾಪಕ, ದಾನ ಕೊಡುತ್ತಿರುವಾಗ ದಾತಾ ಇತ್ಯಾದಿ.


ತತ್ವಗಳನ್ನು ತಿಳಿಯುವ ಇತರ ಉಪಾಯ

೬. ಪ್ರಮಾಣ-ನಯೈಃ-ಅಧಿಗಮಃ

ಅರ್ಥ:- ಪ್ರಮಾಣ ಮತ್ತು ನಯಗಳಿಂದ ತತ್ವಗಳ ಪರಿಜ್ಞಾನವಾಗುತ್ತದೆ. ಪಧಾರ್ಥಗಳ ಸರ್ವದೇಶವನ್ನು ತಿಳಿಯುವ ಜ್ಞಾನಕ್ಕೆ ಪ್ರಮಾನವೆಂದೂ ಏಕದೇಶವನ್ನು ತಿಳಿಯುವ ಜ್ಞಾನಕ್ಕೆ ನಯವೆಂದೂ ಹೆಸರು. ಪ್ರಮಾನವು ಪ್ರತ್ಯಕ್ಷ ಪ್ರಮಾನವೆಂದೂ ಪರೋಕ್ಷ ಪ್ರಮಾಣವೆಂದೂ ಎರಡು ಭೇದಗಳಾಗಿ ವಿಭಾಗಿಸಲ್ಪಟ್ಟಿವೆ.ನಯವು ದ್ರವ್ಯಾರ್ಥಿಕ ನಯವೆಂದೂ ಪರ್ಯಾಯಾರ್ಥಿಕ ನಯವೆಂದೂ ಎರಡು ಪ್ರಕಾರವಾಗಿ ವಿಭಾಗಿಸಲ್ಪಟ್ಟಿದೆ.

7. ನಿರ್ದೇಶ-ಸ್ವಾಮಿತ್ವ-ಸಾಧನಾ-ಅಧಿಕರಣ-ಸ್ಥಿತಿ-ವಿಧಾನತಃ

ಅರ್ಥ :- ನಿರ್ದೇಶ,ಸ್ವಾಮಿತ್ವ,ಸಾಧನಾ,ಅಧಿಕರಣ,ಸ್ಥಿತಿ,ವಿಧಾನಗಳಿಂದ ತತ್ವಗಳ ಪರಿಜ್ಞಾನವಾಗುತ್ತದೆ.

ನಿರ್ದೇಶ : ವಸ್ತುಗಳ ಹೆಸರನ್ನು ಹೇಳುವುದಕ್ಕೆ ನಿರ್ದೇಶವೆನ್ನುವರು.

ಸ್ವಾಮಿತ್ವ:- ವಸ್ತುವಿನ ಅಧಿಪತ್ಯಕ್ಕೆ ಸ್ವಾಮಿತ್ವವೆನ್ನುವರು.

ಸಾಧನ:- ವಸ್ತುವಿನ ಉತ್ಪತ್ತಿಯ ಕಾರಣಕ್ಕೆ ಸಾಧನವೆನ್ನುವರು.

ಅಧಿಕರಣ:- ವಸ್ತುವಿನ ಆಧಾರಕ್ಕೆ ಅಧಿಕರಣವೆನ್ನುವರು.

ಸ್ಥಿತಿ:- ವಸ್ತುವಿನ ಸಮಯದ ಅವಧಿಗೆ ಸ್ಥಿತಿ ಎಂದು ಹೆಸರು.

ವಿಧಾನ:- ವಸ್ತುವಿನ ಭೇಧಕ್ಕೆ ವಿಧಾನವೆಂದು ಹೆಸರು. ಇವುಗಳಿಂದ ಪಧಾರ್ಥಗಳ ಅಥವಾ ಇನ್ನೂ ಕೆಲವು ಉಪಾಯಳ ಜೀವನ ಜ್ಞಾನ ವಾಗುತ್ತದೆ.

8. ಸತ್-ಸಂಖ್ಯಾ-ಕ್ಷೇತ್ರ-ಕಾಲ-ಅಂತರ-ಭಾವ-ಅಲ್ಪ-ಬಹುತ್ವೈಃ

ಅರ್ಥ:- ಸತ್,ಸಂಖ್ಯಾ,ಕ್ಷೇತ್ರ,ಕಾಲ,ಅಂತರ,ಭಾವ,ಅಲ್ಪ,ಬಹುತ್ವ ಇವುಗಳಿಂದಲೂ ಪದಾರ್ಥಗಳ ಪರಿಜ್ಞಾನವಾಗುತ್ತದೆ.

ಸತ್: ಪದಾರ್ಥಗಳ ಅಸ್ತಿತ್ವಕ್ಕೆ ಸತ್ ಎಂದು ಹೆಸರು.

ಸಂಖ್ಯಾ:- ಪದಾರ್ಥದ ಸಂಖ್ಯೆಗೆ ಸಂಖ್ಯೆ ಎನ್ನುವರು.

ಕ್ಷೇತ್ರ:- ಪದಾರ್ಥವಿರುವ ವರ್ತಮಾನ ಸ್ಥಾನಕ್ಕೆ ಕ್ಷೇತ್ರ ಎನ್ನುವರು.

ಸ್ಪರ್ಶನ:- ಪದಾರ್ಥದ ತ್ರಿಕಾಲದ ನಿವಾಸಕ್ಕೆ ಸ್ಪರ್ಶನವೆಂದು ಹೆಸರು.

ಕಾಲ:- ಪದಾರ್ಥವಿರುವ ಸಮಯದ ಅವಧಿಗೆ ಕಾಲವೆಂದು ಹೆಸರು.

ಅಂತರ:- ಪದಾರ್ಥದ ವಿರಹಕಾಲಕ್ಕೆ ಅಮತರವೆನ್ನುವರು.

ಭಾವ:- ಔಪಶಮಿಕಾದಿ ಪರಿಣಾಮಗಳಿಗೆ ಭಾವವೆಂದು ಹೆಸರು.

ಅಲ್ಪ ಬಹುತ್ವ: ಕೆಲವು ಅಪೇಕ್ಷೇಗಳಿಂದ ಪದಾರ್ಥಗಳ ಹೀನಾಧಿಕತೆಗೆ ಅಲ್ಪಬಹುತ್ವವೆಂದು ಹೆಸರು. ಇದರಿಂದಲೇ ದ್ರವ್ಯಕ್ಷೇತ್ರ, ಕಾಲಭಾವಗಳು ಪದಾರ್ಥಗಳನ್ನು ನ್ಯಾಯ ಸಾಧನವೆಂದು ಹೇಳಿದಂತಾಗುತ್ತದೆ.

ಸಮ್ಯಗ್ ಜ್ಞಾನದ ಭೇದಗಳು

9. ಮತಿ-ಶ್ರುತ-ಅವಧಿ-ಮನಃಪರ್ಯಯ- ಕೇವಲಾನಿ ಜ್ಞಾನಂ

ಅರ್ಥ:- ಮತಿ,ಶ್ರುತಿ,ಅವಧಿ,ಮನಃಪರ್ಯ ಮತ್ತು ಕೇವಲ ಇವು ಐದು ಜ್ಞಾನಗಳು

ಮತಿ ಜ್ಞಾನ:- ಐದು ಇಂದ್ರಿಯ ಮತ್ತು ಮನಸ್ಸಿನ ಸಹಾಯತೆಯಿಂದ ತಿಳಿಯುವದಕ್ಕೆ ಮತಿಜ್ಞಾನವೆಂದು ಹೆಸರು.

ಶ್ರುತ ಜ್ಞಾನ:- ಮತಿ ಜ್ಞಾನವು ತಿಳಿಸ ವಿಷಯವನ್ನು ವಿಶೇಷ ರೂಪದಿಂದ ವಿಚಾರಮಾಡುವದಕ್ಕೆ ಶ್ರುತ ಜ್ಞಾನವೆಂದು ಹೆಸರು.

ಅವಧಿ ಜ್ಞಾನ:- ಪಂಚೇಂದ್ರಿಯ ಮತ್ತು ಮನಸ್ಸಿನ ಸಹಾಯವಿಲ್ಲದೇನೆಯೇ ರೂಪಿ ಪದಾರ್ಥಗಳನ್ನು ದ್ರವ್ಯ-ಕ್ಷೇತ್ರ –ಕಾಲ ಭಾವಗಳ ಸೀಮೆಯನ್ನಿಟ್ಟುಕೊಂಡು ಸ್ಪಷ್ಟ ತಿಳಿಯವದಕ್ಕೆ ಅವಧಿ ಜ್ಞಾನವೆಂದು ಹೆಸರು.

ಮನಃಪರ್ಯಯಜ್ಞಾನ:- ಯಾರ ಸಹಾಯತೆಯು ಇಲ್ಲದೆ ಬೇರೆಯವೆ ಮನಸ್ಸಿನಲ್ಲಿದ್ದ ವಿಷಯವನ್ನು ಸ್ಪಷ್ಟ ತಿಳಿಯುವದು.

ಕೇವಲ ಜ್ಞಾನ:- ಸರ್ವ ದ್ರವ್ಯ, ಸರ್ವಪರ್ಯಾಯಗಳನ್ನೂ ಒಂದೇ ಸಮಯದಲ್ಲಿ ಸ್ಪಷ್ಟ ತಿಳಿಯುವದಕ್ಕೆ ಕೇವಲ ಜ್ಞಾನವೆಂದು ಹೆಸರು.

ಪ್ರಮಾಣಗಳು

10. ತತ್-ಪ್ರಮಾಣೇ

ಅರ್ಥ:- ಮೇಲೆ ಹೇಳಿದ ಐದು ಜ್ಞಾನಗಳು ಪ್ರಮಾಣಸ್ವರೂಪವಾಗಿವೆ. ಅಂದರೆ ಸಮ್ಯಗ್ ಜ್ಞಾನಕ್ಕೆ ಪ್ರಮಾಣವೆನ್ನುವರು. ಆ ಪ್ರಮಾಣವು ಪ್ರತ್ಯಕ್ಷ ಮತ್ತು ಪರೋಕ್ಷ ಎರಡು ಭೇದಗಳಾಗಿವೆ.

11. ಆದ್ಯೇ ಪರೋಕ್ಷಂ

ಅರ್ಥ:- ಮೊದಲಿನ ಎರಡು ಜ್ಞಾನಗಳು ಅಂದರೆ ಮತಿ ಶ್ರುತ ಜ್ಞಾನಗಳು ಪರೋಕ್ಷ ಪ್ರಮಾಣಗಳು. ಇಂದ್ರಿಯ ಮನಸ್ಸೆಂಬ ಪರಾಧೀನತೆಗೆ ಸಿಲುಕಿ ಪದಾರ್ಥಗಳನ್ನು ತಿಳಿಯುವದಕ್ಕೆ ಪರೋಕ್ಷವೆನ್ನುತ್ತಾರೆ.

12. ಪ್ರತ್ಯಕ್ಷಂ ಅನ್ಯತ್

ಅರ್ಥ:- ಇನ್ನುಳಿದ ಅವಧಿ ಮನಃಪರ್ಯಯ ಮತ್ತು ಕೇವಲ ಜ್ಞಾನಗಳು ಪ್ರತ್ಯಕ್ಷ ಪ್ರಮಾಣಗಳು ಇವುಗಳಿಗೆ ಪರಾಪೇಕ್ಷೆ ಇಲ್ಲದಿರುವದರಿಂದ ಕೇವಲ ಆತ್ಮ ಸಮಬಂಧವಿರುವದರಿಂದ ಪ್ರತ್ಯಕ್ಷವೆನ್ನುವರು.

ಮತಿ ಜ್ಞಾನದ ಪರ್ಯಾಯಗಳು

13. ಮತಿಃ-ಸ್ಮೃತಿಃ-ಸಂಜ್ಞಾ-ಚಿಂತಾ-ಅಭಿನಿಭೋಧ-ಇತಿ ಅನರ್ಥಾಂತರಮ್.

ಅರ್ಥ:- ಮತಿಃ,ಸ್ಮ್ರತಿಃ,ಸಂಜ್ಞಾ,ಚಿಂತಾ,ಅಭಿನಿಭೋಧ, ಇವೆಲ್ಲ ಬೇರೆ ಬೇರೆಯಲ್ಲ. ಮತಿಜ್ಞಾನದ ಭೇದಗಲು ಎಂದು ತಿಳಿಯಬೇಕು.

ಮತಿ:- ಇಂದ್ರಿಯ ಮತ್ತು ಮನಸ್ಸಿನಿಂದ ವರ್ತಮಾನಕಾಲದ ಪದಾರ್ಥಗಳನ್ನು ತಿಳಿಯುವದು.

ಸ್ಮೃತಿ :- ಮೊದಲು ತಿಳಿದ ವಿಷಯವನ್ನು ಈಗ ಸ್ಮರಿಸುವದು.

ಸಂಜ್ಞಾ:- ಈಗ ಒಂದು ಪದಾರ್ಥವನ್ನು ನೋಡಿ, ಅದನ್ನು ಮೊದಲು ನೋಡಿದ್ದರೆ “ಇದೇ ಅದು” ಎಂಬ ಪ್ರತ್ಯಕ್ಷ ಮತ್ತು ಸ್ಮೃತಿಯ ಸಂಕಲನಾತ್ಮಕ ಜ್ಞಾನ ಇದಕ್ಕೆ ಪ್ರತ್ಯಭಿಜ್ಞಾನವೆಂದೂ ಹೇಳುವರು.

ಚಿಂತಾ:- ವ್ಯಾಪ್ತಿ ಜ್ಞಾನ ಎಲ್ಲಿ ಎಲ್ಲಿ ಹೊಗೆ ಇರುತ್ತದೆಯೋ ಅಲ್ಲಿ ಅಲ್ಲಿ ಬೆಂಕಿ ಇರಬೇಕು. ಹೇಗೆಂದರೆ ಅಡಿಗೆ ಮನೆ, ಈ ಪ್ರಕಾರದ ವ್ಯಾಪ್ತಿ ಜ್ಞಾನಕ್ಕೆ ಚಿಂತೆ ಎಮದು ಹೆಸರು.

ಅಭಿನಿಬೋಧ:- ಸಾಧನದಿಂದ ಸಾಧ್ಯದ ಜ್ಞಾನವನ್ನು ಮಾಡುವದು. ಪರ್ವತದ ಮೇಲಿರುವ ಹೊಗೆಯನ್ನು ನೋಡಿ ಅಗ್ನಿ ಇದೆ ಎಂದು ತಿಳಿಯುವದು. ಇದಕ್ಕೆ ಅನುಮಾಜವೆಂದು ಹೇಳುತ್ತಾರೆ.

ಮತಿಜ್ಞಾನದ ಉತ್ಪತ್ತಿಯ ಸಾಧನಗಳು

14. ತತ್-ಇಂದ್ರಿಯ-ಅನಿಂದ್ರಿಯ ನಿಮಿತ್ತಂ

ಅರ್ಥ:- ಆಮತಿಜ್ಞಾನವು ಇಂದ್ರಿಯ (ಪಂಚೇಂದ್ರಿಯ) ಮತ್ತು ಅನಿಂದ್ರಿಯ(ಮನಸ್ಸು)ದ ನಿಮಿತ್ತದಿಂದ ಉತ್ಪತ್ತಿಯಾಗುತ್ತದೆ.

ಮತಿ ಜ್ಞಾನ ಭೇದಗಳು

15. ಅವಗ್ರಹ-ಈಹಾ-ಆವಾಯ-ಧಾರಣಾಃ

ಅರ್ಥ:- ಅವಗ್ರಹ, ಈಹಾ, ಆವಾಯ ಮತ್ತು ಧಾರಣಾ ಇವು ಮತಿ ಜ್ಞಾನದ ಮೂಲ ನಾಲ್ಕು ಭೇದಗಳು.

ಅವಗ್ರಹ:- ಪದಾರ್ಥಗಳನ್ನು ನೋಡಿದ ಕೂಡಲೇ ಆಗುವ ಪದಾರ್ಥದ ವರ್ಣ ಮೊದಲಾದ ಸಾಮಾನ್ಯ ಜ್ಞಾನಕ್ಕೆ ಅವಗ್ರಹವೆಂದು ಹೆಸರು.

ಈಹಾ:- ಅವಗ್ರಹದಿಂದ ತಿಳಿದ ವಿಷಯವನ್ನು ವಿಶೇಷ ರೂಪದಿಂದ ತಿಳಿಯಲಿಕ್ಕೆ ಪ್ರಯತ್ನಿಸುವದು.

ಆವಾಯ: ವಿಶೇಷ ಚಿಹ್ನೆಗಳನ್ನು ನೋಡಿ ಆ ಪದಾರ್ಥದ ನಿಶ್ಚಯವನ್ನು ಮಾಡುವದಕ್ಕೆ ಅವಾಯ ಎನ್ನುವರು.

ಧಾರಣಾ:- ಅವಾಯದಿಂದ ತಿಳಿದ ವಿಷಯವನ್ನು ಕಾಲಾಂತರದಲ್ಲಿಯೂ ಮರೆಯದಿರುವದಕ್ಕೆ ಧಾರಣಾ ಎಂದು ಹೇಳುತ್ತಾರೆ.

ಅವಗ್ರಹಾದಿಗಳ ವಿಷಯಭೂತ ಪದಾರ್ಥಗಳು

16. ಬಹು-ಬುವಿಧಕ್ಷಿಪ್ರ-ಅನಿಸೃತ-ಅನುಕ್ತ-ಧ್ರುವಾಂಕ-ಸೇತರಾಣಾಮ್

ಅರ್ಥ:- ಬಹು,ಬುವಿಧಕ್ಷಿಪ್ರ,ಅನಿಸೃತ,ಅನುಕ್ತ,ಧ್ರುವಾಂಕ, ಮತ್ತು ಇವುಗಳ ವಿಪರೀತವಾದ ಅಂದರೆ ಏಕ, ಏಕವಿಧ,

ಅಕ್ಷಿಪ್ರ, ನಿಸೃತ, ಉಕ್ತ ಮತ್ತು ಅಧ್ರುವ ಈ ಪದಾರ್ಥಗಳ ಜ್ಞಾನವು ಅವಗ್ರಹಾದಿಗಳಿಂದ ಆಗುತ್ತದ.

ತಾತ್ಪರ್ಯ:- ಪದಾರ್ಥಗಳು ಬಹು ಮೊದಲಾದ ಸ್ವರೂಪದಲ್ಲಿವೆ. ಅವುಗಳನ್ನು ತಿಳಿಯಲಿಕ್ಕೆ ಅವಗ್ರಹಾದಿ ನಾಲ್ಕು ಜ್ಞಾನಗಳು ಸಾಧನಗಳಾಗಿವೆ.

ಬಹು;- ಒಂದೇ ಸಮಯದಲ್ಲಿ ಅನೇಕ ಪದಾರ್ಥಗಳನ್ನು ತಿಳಿಯುವುದು.ಕಡಲೆಯ ರಾಶಿಯನ್ನು ನೋಡಿ ಅನೇಕ ಕಡಲೆಗಳ ಜ್ಷಾನ.

ಬಹುವಿಧ:- ಅನೇಕ ವಿಧದಿಂದ ಕೂಡಿದ ಪದಾರ್ಥಗಳ ಜ್ಞಾನವು ಕಡಲೆ, ಗೋದಿ, ಅಕ್ಕಿ ಮೊದಲಾದ ರೂಪದಿಂದಾಗುವದು.

ಕ್ಷಿಪ್ರ:- ಬೇಗನೇ ಪದಾರ್ಥದ ಜ್ಞಾನವಾಗುವುದು ಅಥವಾ ಶೀಘ್ರಗತಿ ಯುಳ್ಳ ಪದಾರ್ಥದ ಜ್ಞಾನವಾಗುವುದು.

ಅನಿಸೃತ:- ವಸ್ತುವಿನ ಕೆಲವು ಅಂಶಗಳನ್ನು ನೋಡಿ ಪೂರ್ಣ ಅಂಶದ ಜ್ಞಾನವನ್ನು ಮಾಡಿಕೊಳ್ಳುವುದು. ನೀರಿನಲ್ಲಿ ಮುಳುಗಿದ್ದ ಆನೆಯ ಸೊಂಡಿಲನ್ನು ನೋಡಿ ಆನೆ ಇದೆಯೆಂದು ನಿಶ್ಚಯವಾಗಿ ತಿಳಿದುಕೊಳ್ಳುವುದು.

ಅನುಕ್ತ:- ಮಾತಿನಲ್ಲಿ ಹೇಳದಿರುವ ವಿಷಯವನ್ನು ಅಭಿಪ್ರಾಯವನ್ನು ಅಭಿಪ್ರಾಯದಿಂದಲೇ ತಿಳಿದುಕೊಳ್ಳುವುದು.

ಹಸಿದಿದ್ದ ಮನುಷ್ಯನನ್ನು ನೋಡಿ ಅವನ ಅಭಿಪ್ರಾಯವನ್ನು ತಿಳಿದುಕೊಳ್ಳುವುದು.

ಧ್ರುವ:- ನಿಶ್ಚಲ ರೂಪವಾಗಿ ಅನೇಕ ಸಮಯದ ವರೆಗೆ ಪದಾರ್ಥದ ಜ್ಞಾನವಾಗುವುದು ಮತ್ತು ಧ್ರುವ ಪದಾರ್ಥದ ಜ್ಞಾನವಾಗುವುದು.

ಏಕ:- ಅಲ್ಪ ಅಥವಾ ಒಂದು ಪದಾರ್ಥವನ್ನು ತಳಿಯುವುದು.

ಏಕವಿಧ:-ಒಂದು ಪ್ರಕಾರದ ಪದಾರ್ಥವನ್ನು ತಿಳಿಯುವುದು.

ಅಕ್ಷಿಪ್ರ:-ಮೆಲ್ಲ ಮೆಲ್ಲಗೆ ಪದಾರ್ಥಗಳನ್ನು ತಿಳಿಯುವುದು ಅಥವಾ ಮಂದಗತಿ ಇರುವ ಪದಾರ್ಥಗಳನ್ನು ತಿಳಿಯುವುದು.

ನಿಸೃತ:- ಸಂಪೂರ್ಣ ಅಂಶದಿಂದ ಪ್ರಕಟವಾದ ವಿಷಯವನ್ನು ತಿಳಿಯುವದು.

ಉಕ್ತ:- ಮಾತಿನಿಂದ ಅಥವಾ ಶಬ್ದದಿಂದ ಪ್ರಕಟವಾದ ವಿಷಯವನ್ನು ತಿಳಿಯುವದು.

ಅಧ್ರುವ:- ಪ್ರತಿಕ್ಷಣದಲ್ಲಿ ನ್ಯೂನಾಧಿಕವಾದ ಪದಾರ್ಥ್ಳನ್ನು ತಿಳಿಯುವದು.

       ಈ ಪ್ರಕಾರ ಬಹು ಮೊದಲಾದ ಪದಾರ್ಥಗಳ ಭೇದಗಳನ್ನು ಅವಗ್ರಹ,ಈವಾ,ಆವಾಯ,ಮತ್ತು ಧಾರಣಾ ರೂಪವಾದ ನಾಲ್ಕೂ ಜ್ಞಾನಗಳು ತಿಳಿಯುತ್ತವೆ.

17. ಅರ್ಥಸ್ಯ

ಅರ್ಥ :-  ಮೇಲೆ ಹೇಳಲಾದ ಬಹು ಮೊದಲಾದ ಭೇದಗಳು ಪದಾರ್ಥದ್ದು ಅಂದರೆ ಈ ಭೇದಗಳು ದ್ರವ್ಯದ್ದು ಎಂದು ತಿಳಿಯಬೇಕು. ಪದಾರ್ಥಗಳಲ್ಲಿಯೇ ಈ ಭೇದಗಳಾಗುತ್ತವೆಯಲ್ಲದೆ ಬೇರೆ ಕಡೆ ಆಗುವದಿಲ್ಲಾ.

ಅವಗ್ರಹದಲ್ಲಿ ವಿಶೇಷ ಭೇದ

18. ವ್ಯಂಜನಸ್ಯ-ಅವಗ್ರಹಃ

ಅರ್ಥ:- ವ್ಯಂಜನಸ್ಯ ಅಂದರೆ ಅಪ್ರಕಟ ಅವ್ಯಕ್ತ ರೂಪವಾದ ಪದಾರ್ಥಗಳಲ್ಲಿ ಅವಗ್ರಹ ಜ್ಞಾನ ಮಾತ್ರವೇ ಆಗುತ್ತದೆ. ಅಂದರೆ ಈಹಾ ಮೊದಲಾದ ಜ್ಞಾನಗಳು ಆಗುವದಿಲ್ಲ. ಅವಗ್ರಹ ಜ್ಞಾನದಲ್ಲಿ ಎರಡು ಜ್ಞಾನದಲ್ಲಿ ಎರಡು ಭೇದಗಳನ್ನು ಮಾಡಬಹುದು. ವ್ಯಂಜನಾವಗ್ರಹ ಮತ್ತು ಅರ್ಥಾವಗ್ರಹ. ಅವ್ಯಕ್ತ ಪದಾರ್ಥಗಳ ಅವಗ್ರಹಕ್ಕೆ ವ್ಯಂಜನಾವಗ್ರಹವೆಂದೂ ವ್ಯಕ್ತ ಪದಾರ್ಥಗಳ ಅವಗ್ರಹಕ್ಕೆ ಅರ್ಥಾವಗ್ರಹವೆಂದೂ ಹೆಸರು. ಅವಗ್ರಹವಾಗಿ ಮುಂದಿನ ಈಹಾದಿ ಜ್ಞಾನಗಳು ಆಗುವದಕ್ಕೆ ವ್ಯಂಜನಾವಗ್ರವೆಂದು ಹೆಸರು.

ವ್ಯಂಜನಾವಗ್ರಹ ಅಸಂಭವ

19. ನ ಚಕ್ಷುಃ ಅನಿಂದ್ರಿಯಾಭ್ಯಾಮ್

ಅರ್ಥ:- ಕಣ್ಣು ಮತ್ತು ಮನಸ್ಸಿನಿಂದ ವ್ಯಂಜನಾವಗ್ರಹ ಆಗುವದಿಲ್ಲಾ. ಅಂದರೆ ಕಣ್ಣು ಮತ್ತು ಮನಸ್ಸು ಪದಾರ್ಥಗಳನ್ನು ಸ್ಪಷ್ಟ ರೂಪವಾಗಿಯೇ ತಿಳಿಯುತ್ತವೆ. ಈ ಪ್ರಕಾರ ಬಹು ಮೊದಲಾದ 12 ಭೇದಗಳಿಂದ ಕೂಡಿದ ಪದಾರ್ಥಗಳನ್ನು ಅವಗ್ರಹ ಮೊದಲಾದ 4 ಜ್ಞಾನಗಳು 5 ಇಂದ್ರಿಯ ಮತ್ತು ಮನಸ್ಸಿನ ಸಹಾಯತೆಯಿಂದ ತಿಳಿಯಬಹುದು. 12*4=48 ಮತ್ತು 48*6=288 ಭೇದಗಳಾಗುವುವು. ಇವುಗಳಲ್ಲಿ ವ್ಯಂಜನಾಗ್ರಹ 4 ಇಂದ್ರಿಯಗಳಿಂದಾಗುವದರಿಂದ 48 ಭೇದಗಳನ್ನು ಕೂಡಿಸಿದರೆ ಮತಿಜ್ಞಾನದ ಭೇದಗಳು 336 ಆಗುತ್ತವೆ.

ಶ್ರುತಜ್ಞಾನದ ವರ್ಣನೆ

20. ಶ್ರುತಂ ಮತಿಪೂರ್ವಂ ದ್ವಿ-ಅನೇಕ-ದ್ವಾದಶಭೇದಮ್

ಅರ್ಥ:- ಶ್ರುತ ಜ್ಞಾನವು ಮತಿಜ್ಞಾನ ಪೂರ್ವಕವಾಗಿ ಅಂದರೆ ಮತಿಜ್ಞಾನದ ನಂತರ ಆಗುತ್ತದೆ. ಆ ಶ್ರುತ ಜ್ಞಾನವು ಮೊದಲು ಎರಡು ಪ್ರಕಾರವಾಗಿ ಅಂದರೆ 1. ಅಂಗಬಾಹ್ಯ 2. ಅಂಗಪ್ರವಿಷ್ಟವೆಂದೂ ಮತ್ತು ಆ ಅಂಗಬಾಹ್ಯವು ಅನೇಕ ಭೇದರೂಪವಾಗಿಯೂ ಮತ್ತು ಅಂಗಪ್ರವಿಷ್ಠವು ಹನ್ನೆರಡು ಪ್ರಕಾರವಾಗಯೂ ವಿಭಾಗಿಸಲ್ಪಟ್ಟಿವೆ. ಅಂಗಪ್ರವಿಷ್ಟದ ಹನ್ನೆರಡು ಬೇದಗಳು 1. ಆಚಾರಾಂಗ 2. ಸುತ್ರಕೃತಾಂಗ 3. ಸ್ಥಾನಾಂಗ 4. ಸಮವಾಯಾಂಗ 5. ವ್ಯಾಖ್ಯಾಪ್ರಜ್ಞಪ್ತಿಅಂಗ 6. ಜ್ಞಾತೃಧರ್ಮಕಥಾಂಗ 7. ಪಾಸಕಾಧ್ಯಯನಾಂಗ 8. ಅಂತಃಕೃದ್ದಶಾಂಗ 9. ಅನುತ್ತರೌಪಪಾದಿಕದಶಾಂಗ 10. ಪ್ರಶ್ನವ್ಯಾಕರಣಾಂಗ 11. ವಿಪಾಕಸೂತ್ರಾಂಗ 12. ದೃಷ್ಟಿವಾದಾಂಗ ಇವು ಹನ್ನೆರಡು ದ್ವಾದಶಾಂಗ ಶ್ರುತಗಳೆಂದು ಹೇಳಲ್ಪಡುತ್ತವೆ.

ಅವಧಿಜ್ಞಾನದ ವರ್ಣನೆ

21. ಭವಪ್ರತ್ಯಯೋ-ಅವಧಿಃ-ದೇವ-ನಾರಕಾಣಾಮ್

ಅರ್ಥ:- ಭವ ಪ್ರತ್ಯಯ ಅವಧಿ ಜ್ಞಾನವು ದೇವತೆಗಳ ಮತ್ತು ನಾರಕಿಯರಿಗೆ ಆಗುತ್ತದೆ. ಅವಧಿ ಜ್ಞಾನವು ಒಂದು ಭವಪ್ರತ್ಯಯವೆಂದೂ ಮತ್ತೊಂದೂ ಗುಣ ಪ್ರತ್ಯಯವೆಂದೂ ಎರಡು ಪ್ರಕಾರವಾಗಿವೆ. ದೇವ ಮತ್ತು ನರಕ ಗತಿಯಲ್ಲಿ ಭವವೇ ಕಾರಣವಾಗಿ ಉಂಟಾಗುವ ಅವಧಿಗೆ ಭವಪ್ರತ್ಯಯವೆಂದು ಹೇಳುತ್ತಾರೆ. ಹುಟ್ಟಿದ ಕೂಡಲೇ ಅವರಿಗೆ ಅವಧಿಜ್ಞಾನ ಮತ್ತು ಗತಿ, ಜನ್ಮ ಮೊದಲಾದವುಗಳ ಅಪೇಕ್ಷೆ ಇಲ್ಲದೆ ಯಾವುದು ಅವಧಿಜ್ಞಾನಾವರಣಿಯ ಕರ್ಮದ ಕ್ಷಯೋಪಶಮನದಿಂದ ಉಂಟಾಗುತ್ತದೇಯೋ ಅದಕ್ಕೆ ಗುಣಪ್ರತ್ಯಯವೆನ್ನುತ್ತಾರೆ. ಇದಕ್ಕೆನೆಯೇ ಕ್ಷಯೋಪ ಶಮನಿಮಿತ್ತ ಅವಧಿಜ್ಞಾನವೆಂದು ಹೇಳುತ್ತಾರೆ.

ಕ್ಷಯೋಪಶಮನಿಮಿತ್ತ ಅವಧಿಜ್ಞಾನ

22. ಕ್ಷಯ-ಉಪಶಮನಿಮಿತ್ತಃ ಷಟ್-ವಿಕಲ್ಪಃ ಶೇಷಾಣಾಮ್

ಅರ್ಥ: ಕ್ಷಯೋಪಶಮನಿಮಿತ್ತದ ಅವಧಿ ಜ್ಞಾನವು ಆರು ಪ್ರಕಾರವಾಗಿವೆ. ಅದು ದೇವ ನಾರಕಿಯರನ್ನು ಬಿಟ್ಟು ಉಳಿದ ಮನುಷ್ಯ ತಿರ್ಯಂಚ ಪ್ರಾಣಿಗಳಿಗೆ ಆಗುತ್ತದೆ. ಆರು ಭೇದಗಳು: 1. ಅನುಗಾಮಿ  2. ಅನನುಗಾಮಿ  3. ವರ್ಧಮಾನ  4. ಹೀಯಮಾನ 5. ಅವಸ್ಥಿ 6. ಅನವಸ್ಥಿತ.

ಅನುಗಾಮಿ:- ಯಾವುದು ನೆರಳಿನ ಹಾಗೆ ಜೀವನದೊಡನೆಯೇ ಮುಂದೆ  ಹೋಗೂತ್ತದೆಯೋ ಅದಕ್ಕೆ ಅನುಗಾಮಿ ಎಂದು ಹೆಸರು. ಇದರಲ್ಲಿ ಕ್ಷೇತ್ರಾನುಗಾಮಿ, ಭವಾನುಗಾಮಿ, ಮತ್ತು ಉಭಯನಾಗಾಮಿ ಎಂದು ಮೂರು ಭೇದಗಳಿವೆ.

ಅನನುಗಾಮಿ:- ಯಾವುದು ಜೀವನದೊಡನೆ ಮುಂದೆ ಹೋಗುವದಿಲ್ಲವೋ ಅದಕ್ಕೆ ಅನನುಗಾಮಿ ಎಂದು ಹೆಸರು. ಇದರಲ್ಲಿಯ ಮೇಲಿಂತೆ ಮೂರು ಭೇದಗಳಿವೆ.

ವರ್ಧಮಾನ:- ಯಾವುದು ಶುಕ್ಲಪ್ಷದ ಚಂದ್ರನಂತೆ ಹೆಚ್ಚುತ್ತಾ ಹೋಗುತ್ತದೆಯೋ ಅದಕ್ಕೆ ವರ್ಧಮಾನ ಎಂದು ಹೆಸರು.

ಹೀಯಮಾನ:- ಕೃಷ್ಣ ಪಕ್ಷದ ಚಂದ್ರನಂತೆ ಕ್ಷೀಣವಾಗಗುತ್ತಾ ಹೋಗುವ ಅವಧಿ ಜ್ಞಾನಕ್ಕೆ ಹೀಯಮಾನವೆಂದು ಹೆಸರು.

ಅವಸ್ಥಿತ:- ಯಾವ ಅವಧಿ ಜ್ಞಾನವು ಹೀನಾಧಿಕವಾಗಿದೆ, ಇದ್ದ ಹಾಗೆಯೇ ಇರುತ್ತದೇಯೋ ಅದಕ್ಕೆ ಅವಸ್ಥಿತವೆನ್ನುವರು.

ಅನವಸ್ತಿತ:- ಯಾವದು ಜಲತರಂಗದಂತೆ ಹೀನಾಧಿಕವಾಗುತ್ತದೇಯೋ ಅದಕ್ಕೆ ಅನವಸ್ಥಿತ ಎನ್ನುವರು.

       ಹೀಗೆ ಗುಣಪ್ರತ್ಯಯ ಅವಧಿಜ್ಞಾನವು ಆರು ಪ್ರಕಾರವಾಗಿದೆ. ಇನ್ನೊಂದು ಪ್ರಕಾರದ ಅವಧಿಜ್ಞಾನವನ್ನು ದೇಶಾವಧಿ, ಪರಮಾವಧಿ ಮತ್ತು ಸರ್ವಾವಧಿ ಎಂಬ ಮೂರು ವಿಧವಾಗಿಯೂ ವರ್ಣಿಸಿದ್ದಾರೆ.

ಮನಪರ್ಯಯ ಜ್ಞಾನ

23. ಋಜು-ವಿಪೂಲಮತೀ ಮನಃಪರ್ಯಯಃ

ಅರ್ಥ:- ಮನಃಪರ್ಯಯ ಜ್ಞಾನವು ಋಜುಮತಿ, ವಿಪುಲಮತಿ ಎಂದು ಎರಡು ಪ್ರಕಾರವಾಗಿ ವಿಭಾಗಿಸಲ್ಪಟ್ಟಿವೆ.

ಋಜುಮತಿ:- ಯಾವುದು ಮನ ವಚನ ಕಾಯಗಳ ಸರಳತೆಯಿಂದ ವಿಚಾರ ಮಾಡಿದ ಬೇರೆಯವರ ಮನಸ್ಸಿನಲ್ಲಿದ್ದ ವಿಷಯವನ್ನು ತಿಳಿಯುತ್ತದೇಯೋ ಅದಕ್ಕೆ ಋಜುಮತಿ ಮನಃಪರ್ಯಯ ಜ್ಞಾನವೆಂದು ಹೆಸರು.

ವಿಫುಲಮತಿ:- ಯಾವುದು ಕುಟಿಲ ರೂಪವಾದ ಬೇರೆಯವರ ಮನಸ್ಸಿನಲ್ಲಿದ್ದ ವಿಷಯವನ್ನು ತಿಳಿಯುತ್ತದೆಯೋ ಅದಕ್ಕೆ ವಿಪುಲಮತಿ ಮನಃಪರ್ಯಯವೆನ್ನುತ್ತಾರೆ.

ಋಜುಮತಿ ವಿಫುಲಮತಿಗಳಲ್ಲಿ ಅಂತರ

24.ವಿಶುದ್ಧಿ-ಅಪ್ರತಿಪಾತಾಭ್ಯಾಂ ತತ್-ವಿಶೇಷಃ

ಅರ್ಥ:- ವಿಶುದ್ಧ ಅಂದರೆ ಪರಿಣಾಮದ ನಿರ್ಮಲತೆ ಮತ್ತು ಪ್ರತಿಪಾತ. ಅಂದರೆ ಕೇವಲ ಜ್ಞಾನವಾಗುವರೆಗೆ ಬಿಡದಿರುವಿಕೆ, ಈ ಅಪೇಕ್ಷೆಯಿಂದ ರುಜುಮತಿ ಮನಃಪರ್ಯಯ ಜ್ಞಾನಗಳಲ್ಲಿ ಅಂತರವಿದೆ. ಋಜುಮತಿ ಮನಃಪರ್ಯಯ ಜ್ಞಾನದ ಅಪೇಕ್ಷೆಯಿಂದ ವಿಪುಲಮತಿ ಮನಃಪರ್ಯಯದಲ್ಲಿ ಆತ್ಮನ ವಿಶುದ್ಧಿಯು ಅಧಿಕವಾಗಿರುತ್ತದೆ. ಋಜುಮತಿ ಮನಃಪರ್ಯಯವು ಒಂದು ಸಾರಿ ಆಗಿ ಬಿಟ್ಟು ಹೋಗುವದೂ ಉಂಟು. ಅಂದರೆ ವಿಪುಲಮತಿ ಮನಃಪರ್ಯಯವು ಆಗಿ ಕೇವಲಜ್ಞಾನವಾಗುವವರೆಗೆ ಬಿಟ್ಟು ಹೋಗುವದಿಲ್ಲ.

ಅವಧಿ ಜ್ಞಾನ  ಮತ್ತು ಮನಃಪರ್ಯಯ ಜ್ಞಾನದಲ್ಲಿ ಅಂತರ

25. ವಿಶುದ್ಧಿ-ಕ್ಷೇತ್ರ-ಸ್ವಾಮಿ-ವಿಷಯೇಭ್ಯೋ-ಅವಧಿ- ಮನಃಪರ್ಯಯಯೋಃ

ಅರ್ಥ:- ವಿಶುದ್ಧಿ,ಕ್ಷೇತ್ರ,ಸ್ವಾಮಿ ವಿಷಯಗಳ ಅಪೇಕ್ಷೆಯಿಂದ ಅವಧಿ ಮತ್ತು ಮನಃಪರ್ಯಯ ಜ್ಞಾನದಲ್ಲಿ ಅಂತರವಿದೆ. ಅವಧಿಜ್ಞಾನದ ಅಪೇಕ್ಷೆಯಿಂದ ಮನಃಪರ್ಯಯ ಜ್ಞಾನದಲ್ಲಿ ಆತ್ಮವಿಶುದ್ಧಿಯು ಅಧಿಕವಾಗಿರುತ್ತವೆ.

ವಿಶೇಷಾರ್ಥ:- ಯಾವ ರೂಪ ವಸ್ತುವನ್ನು ಅವಧಿಜ್ಞಾನ ತಿಳಿಯುತ್ತದೆಯೋ ಆ ವಸ್ತುವಿನ ಅನಂತ ಭಾಗ ಸೂಕ್ಷ್ಮವಸ್ತುನ್ನು ಮನಃಪರ್ಯಯ ಜ್ಞಾನವು ತಿಳಿಯುತ್ತದೆ. ಇದರಿಂದ  ಅವಧಿ ಜ್ಞಾನದಿಂದ ಮನಃಪರ್ಯಯದಲ್ಲಿ  ವಿಶುದ್ಧಿಯು ಅಧಿಕವೆಂದು ಹೇಳಬಹುದು.

ಕ್ಷೇತ್ರ:- ಅವಧಿ ಜ್ಞಾನವು ನಾಲ್ಕೂ ಗತಿಯಲ್ಲಿ ಆಗುತ್ತದೆ. ಆದರೆ ಮನಃಪರ್ಯಯ ಜ್ಞಾನವು ಮಾನುಷೋತ್ತರ ಪರ್ವತದವರೆಗಿನ ಮನುಷ್ಯರಿಗೆ ಮಾತ್ರ ಆಗುತ್ತದೆ.

ಸ್ವಾಮಿ:- ಅವಧಿ ಜ್ಞಾನದ ಸ್ವಾಮಿ ಎಂದರೆ ನಾಲ್ಕೂ ಗತಿಯ ಜೀವಗಳು, ಮನಃಪರ್ಯಯವು ಮನುಷ್ಯಗತಿಯಲ್ಲಿ ಮಾತ್ರ ಆಗುತ್ತದೆ. ಮನುಷ್ಯಗತಿಯಲ್ಲಿಯೂ ಎಲ್ಲರಿಗೂ ಆಗುವದಿಲ್ಲಾ. ಮುನಿಗಳಿಗೆ ಮಾತ್ರ ಆಗುತ್ತದೆ. ಮುನಿಗಳಲ್ಲಿಯೂ ಎಲ್ಲರಿಗೂ ಆಗುವದಿಲ್ಲಾ. ಸಪ್ತವಿಧ ಋದ್ಧಿಗಳಲ್ಲಿ ಯಾವುದಾದರೊಂದು ಋದ್ಧಿ ಪ್ರಾಪ್ತರಾದವರಿಗೆ ಮಾತ್ರ ಅದು ಆಗುತ್ತದೆ. ಋದ್ಧಿ ಪ್ರಾಪ್ತ ಮುನಿಗಳಿಗೂ ಎಲ್ಲರಿಗೂ ಆಗುವದಿಲ್ಲ. ಯಾರ ಚಾರಿತ್ರ್ಯವು ವರ್ಧಮಾನವಾಗಿದೆಯೋ ಅವರಿಗೇನೆಯೇ ಆಗುತ್ತದೆ.ಹೀಗೆ ಅಂತರವಿದೆ.

ವಿಷಯ:- ಅವಧಿ ಮತ್ತು ಮನಃಪರ್ಯಯ ಜ್ಞಾನಗಳ ವಿಷಯವು ವಿಭಿನ್ನವಾಗಿದೆ. ಅವಧಿ ಜ್ಞಾನವು ಹೊರಗಿನ ದ್ರವ್ಯ ಕ್ಷೇತ್ರ ಕಾಲಗಳನ್ನು ತಿಳಿಯುತ್ತದೆ. ಮನಃಪರ್ಯಯ ಜ್ಞಾನವು ಇತರರ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಯುತ್ತಿದೆ.

ಮತಿ ಮತ್ತು ಶ್ರುತಗಳ ವಿಷಯ

26. ಮತಿ-ಶ್ರುತಯೋಃ-ನಿಬಂಧೋ ದ್ರವ್ಯೇಷು- ಅರ್ಸವ-ಪರ್ಯಾಯೇಷು

ಅರ್ಥ:- ಮತಿಜ್ಞಾನ ಮತ್ತು ಶ್ರುತ ಜ್ಞಾನಗಳ ವಿಷಯ ನಿಯಮವು ದ್ರವ್ಯಗಳ ಕೆಲವು ಪರ್ಯಾಯಗಳಲ್ಲಿ ಮಾತ್ರ ಇರುತ್ತದೆ. ಆದರೆ ಆ ಜ್ಞಾನಗಳು ಕೆಲವು ಪರ್ಯಾಯಗಳನ್ನು ಮಾತ್ರ ತಿಳಿಯುತ್ತವೆ. ಎಲ್ಲಾ ಪರ್ಯಾಯಗಳನ್ನು ತಿಳಿಯುವ ಸಾಮರ್ಥ್ಯವು ಆ ಜ್ಞಾನಗಳಲ್ಲಿ ಇಲ್ಲ.

ಅವಧಿ ಜ್ಞಾನ ವಿಷಯ

27. ರೂಪಿಷು ಅವಧೇಃ

ಅರ್ಥ:- ಅವಧಿ ಜ್ಞಾನದ ವಿಷಯವು ರೂಪಿ ಪದಾರ್ಥಗಳಲ್ಲಿ ಮಾತ್ರವಿರುತ್ತದೆ.  ಅವಧಿ ಜ್ಞಾನವು ರೂಪಿ ಪದಾರ್ಥಗಳನ್ನು ತಿಳಿಯುತ್ತದೆ.

ಮನಃಪರ್ಯಯಜ್ಞಾನದ ವಿಷಯ

28. ತತ್-ಅನಂತಭಾಗೇ ಮನಃಪರ್ಯಯಸ್ಯ

ಅರ್ಥ:- ಅವಧಿಜ್ಞಾನ(ಸರ್ವಾವಧಿ) ದಿಂದ ತಿಳಿದ ವಿಷಯದ  ಅನಂತ ಭಾಗ ಸೂಕ್ಷ್ಮ ವಿಷಯದಲ್ಲಿ ಮನಃಪರ್ಯಯ ಜ್ಞಾನದ ಪ್ರವೃತ್ತಿಯಾಗುತ್ತದೆ. ಆದರೆ ಅರ್ವಾವಧಿ ಜ್ಞಾನವು ಯಾವ ರೂಪಿ ಪದಾರ್ಥಗಳನ್ನು ತಿಳಿಯುತ್ತದೆಯೋ, ಅದರ ಅನಂತ ಭಾಗ ಸೂಕ್ಷ್ಮ ವಿಷಯವನ್ನು ಮನಃಪರ್ಯಯ ಜ್ಞಾನವು ತಿಳಿಯುತ್ತದೆ.

ಕೇವಲಜ್ಞಾನದ ವಿಷಯ

29. ಸರ್ವ-ದ್ರವ್ಯ-ಪರ್ಯಾಯೇಷು ಕೇವಲಸ್ಯ

ಅರ್ಥ:- ಕೇವಲಜ್ಞಾನದ ವಿಷಯವು ಸಮಸ್ತ ದ್ರವ್ಯ ಮತ್ತು ಸಮಸ್ತ ಪರ್ಯಾಯಗಳಲ್ಲಿದೆ. ಅಂದರೆ ಕೇವಲ ಜ್ಞಾನವು ಸಮಸ್ತ ದ್ರವ್ಯ ಮತ್ತು ಪರ್ಯಾಯಗಳನ್ನು ಒಂದೇ ಸಮಯದಲ್ಲಿ ತಿಳಿಯುತ್ತದೆ. ಇದಕ್ಕೆ ಕೇವಲ ಜ್ಞಾನವೆಂದು ಹೆಸರು. ಇದು ಕೇವಲ ಒಂದೇ ಜ್ಞಾನ ಇರುತ್ತದೆ. ಯಾಕೆಂದರೆ ಇದು ಜ್ಞಾನಾವರಣೀಯ ಕರ್ಮದ ಕ್ಷಯದಿಂದ ಉಂಟಾಗುತ್ತದೆ. ಇದರೊಡನೆ ಬೇರೆ ಕ್ಷಾಯೋಪಶಮಿಕ ಜ್ಞಾನವಿರುವದಿಲ್ಲ. ಹಾಗೆಯೇ ಇದಕ್ಕೋಸ್ಕರವಾಗಿಯೇ ಮುನಿಗಳು ತಪಶ್ಚರ್ಯೆಯನ್ನು ಮಾಡುತ್ತಾರೆ. ಆದುದರಿಂದಲೇ ಶೇವಂತೇ ಸೇವಂತೇಯದಥ್ಯಂ ಎಂದು ಇದರ ಹೆಸರು ಸಾರ್ಥಕವಾಗದೆ.

ಒಬ್ಬ ಜೀವನಿಗೆ ಒಟ್ಟಿಗೆ ಎಷ್ಟು ಜ್ಞಾನಗಳಾಗಬಹುದು ?

30. ಏಕ-ಆದಿನಿ-ಭಾಜ್ಯಾನಿ ಯುಗಪತ್-ಏಕಸ್ಮಿನ್-ಆ-ಚತುರ್ಭ್ಯಃ

ಅರ್ಥ:- ಒಬ್ಬ ಜೀವನದಲ್ಲಿ ಒಟ್ಟಿಗೆ ಒಂದು ಮೊದಲ್ಗೊಂಡು ನಾಲ್ಕು ಜ್ಞಾನಗಳವರೆ ಆಗುತ್ತವೆ. ಒಂದು ಜ್ಞಾನವಿದ್ದರೆ ಕೇವಲಜ್ಞಾನ, ಎರಡಾದರೆ ಮತಿ, ಶ್ರುತ, ಮೂರಾದರೆ ಮತಿ, ಶ್ರುತ, ಮತ್ತು ಅವಧಿ, ನಾಲ್ಕಾದರೆ ಮತಿ, ಶ್ರುತ,ಅವಧಿ ಮತ್ತು ಮನಃಪರ್ಯಯ. ಐದು ಜ್ಞಾನಗಳು ಒಟ್ಟಿಗೆ ಇರುವದಿಲ್ಲ. ಯಾಕೆಂದರೆ ಕೇವಲ ಜ್ಞಾನವು ಕ್ಷಾಯಿಕ ಜ್ಞಾನವಾಗಿರುವದರಿಂದ  ಅದು ಕೇವಲ ಒಂದೇ ಒಂದಾಗಿರುವದು. ಇತರ ನಾಲ್ಕು ಜ್ಞಾನಗಳು ಕ್ಷಾಯೋಪಶಮಿಕ ಜ್ಞಾನಗಳು.

ಮತಿಶ್ರುತಾವಧಿಗಳಲ್ಲಿ  ವಿಪರ್ಯಯ

31.ಮತಿ-ಶ್ರುತ-ಅವಧಯೋ ವಿಪರ್ಯಯಃ ಚ

ಅರ್ಥ:- ಮತಿ.ಶ್ರುತ,ಅವಧಿಜ್ಞಾನಗಳಲ್ಲಿ ವಿಪರೀತ ಜ್ಞಾನಗಳೂ ಆಗುತ್ತವೆ. ಅಂದರೆ ಮೇಲೆ ವರ್ಣಿಸಿದ ಐದು ಜ್ಞಾನಗಳು ಸಮ್ಯಗ್ ಜ್ಞಾನಗಳು. ಆದರೆ ಮತಿ, ಶ್ರುತ ಮತ್ತು ಅವಧಿಜ್ಞಾನಗಳು ವಿಥ್ಯಾದರ್ಶನ ಸಂಬಂಧದಿಂದ ವಿಥ್ಯಾಜ್ಞಾನಗಳೆಂದೂ ಹೇಳಲ್ಪಡುತ್ತವೆ. ಅವುಗಳಿಗೆ ಆಗ ಕುಮತಿ, ಕುಶ್ರುತ ಮತ್ತು ಕುಅವಧಿ ಅಥವಾ ವಿಭಂಗಜ್ಞಾನಗಳೆಂದು ಹೇಳುತ್ತಾರೆ.

32. ಸತ್-ಅಸತೋ-ಅವಿಶೇಷಾತ್-ಯದೃಚ್ಚಾ-ಉಪಲಬದ್ಧೇಃ-ಉನ್ಮತ್ತವತ್

ಅರ್ಥ:- ಸದ್ವಸ್ತು ಇರುವಂತಹ ವಸ್ತು ಅಥವಾ ಒಳ್ಳೆಯ ವಸ್ತು. ಅಸದ್ವಸ್ತು ಅವಿದ್ಯಮಾನ-ಇಲ್ಲದಿರುವ ವಸ್ತು ಅಥವಾ ಕೆಟ್ಟ ನಿಕೃಷ್ಟ ವಸ್ತು ಇವೆರಡರ ಸತ್-ಅಸತ್ ವಸ್ತುಗಳ ಯಥಾರ್ಥವಾದ ಭೇದವನ್ನು ವಿಥ್ಯಾ ದೃಷ್ಟಿಯು ತಿಳಿಯುವದಿಲ್ಲ. ಹುಚ್ಚ ಮನುಷಸ್ಯನಂತೆ ತನಗಿಚ್ಚೆ ಬಂದಂತೆ ಯದ್ವಾತದ್ವಾ ತಿಳಿಯುತ್ತಾನೆ.

ನಯನಗಳ ಭೇಧ

33.ನೈಗಮ-ಸಂಗ್ರಹ-ವ್ಯವಹಾರ-ಋಜುಸೂತ್ರ-ಶಬ್ದ- ಸಮಭಿರೂಢ-ಏವಂ ಭೂತಾ ನಯಾಃ

ಅರ್ಥ:- ನೈಗಮ,ಸಂಗ್ರಹ,ವ್ಯವಹಾರ,ಋಜುಸೂತ್ರ,ಶಬ್ದ,ಸಮಭಿರೂಢ,ಏವಂ ಭೂತ ಈ ಪ್ರಕಾರ ಏಳು ನಯಗಳು, ವಸ್ತುವಿನಲ್ಲಿ ಅನೇಕ ಧರ್ಮಸ್ವಭಾವಗಳುರುತ್ತವೆ. ಅವುಗಳಲ್ಲಿ ಯಾವುದಾದರೊಂದು ಮುಖ್ಯವಾಗಿ ತೆಗೆದುಕೊಂಡು ಅವಿರೋಧರೂಪದಿಂದ ಸಾಧ್ಯವಸ್ತುವನ್ನು ತಿಳಿಯುವದಕ್ಕೆ ಅಥವಾ ಹೇಳುವದಕ್ಕೆ ನಯವೆನ್ನುತ್ತಾರೆ.

ನೈಗಮನ:- ಪ್ರತಿಯೊಂದು ವಸ್ತುವು ಭೂತ, ವರ್ತಮಾನ, ಭವಿಷ್ಯತ್ಪರ್ಯಾಯಗಳಿಂದ ಕೂಡಿರುತ್ತವೆ. ಮೂರೂ ಕಾಲದಲ್ಲಿ ಆಗುವ ಪರ್ಯಾಯಗಳ ಸಮೂಹಕ್ಕೆ ದ್ರವ್ಯವೆಂದು ಹೆಸರು. ಭೂತ ಮತ್ತು ಭವಿಷ್ಯತ್ ಪರ್ಯಾಯಗಳಲ್ಲಿ ವರ್ತಮಾನದ ಸಂಕಲ್ಪ ಮಾಡುವದು,(ವರ್ತಮಾನದಲ್ಲಯೇ ಪೂರ್ತಿಯಾಗದ ಪರ್ಯಾಯವನ್ನು ಪೂರೈಸಿದಂತೆ ತಿಳಿಯುವ ಜ್ಞಾನ) ಅದನ್ನು ನೈಗಮನವೆನ್ನುತ್ತಾರೆ.

ಸಂಗ್ರಹನಯ:- ತಮ್ಮ ತಮ್ಮ ಜಾತಿಗನುಸಾರವಾಗಿ ವಸ್ತುಗಳನ್ನು ಅಥವಾ ಅವುಗಳ ಪರ್ಯಾಯಗಳನ್ನು ಒಂದು ರೂಪದಿಂದ ಸಂಗ್ರಹ ಮಾಡುವ ಜ್ಞಾನ ಮತ್ತು ವಚನಗಳನ್ನು ಸಂಗ್ರಹನಯವೆನ್ನುತ್ತಾರೆ. ಅಂದರೆ ಒಂದು ವಸ್ತುವಿನ ಸಮಸ್ತ ಜಾತಿ ಅಥವಾ ಪರ್ಯಾಯಗಳನ್ನು ಒಟ್ಟುಗೂಡಿಸಿ ಒಂದೇ ಸ್ವರೂಪವನ್ನಾಗಿ ಸಂಗ್ರಹ ಗೊಳಿಸುತ್ತದೆ.

ವ್ಯವಹಾರ ನಯ:- ಸಂಗ್ರಹನಯದಿಂದ ತಿಳಿದ ಪಧಾರ್ಥಗಳನ್ನು ಕ್ರಮವಾಗಿ ವಿಂಗಡಿಸುವದು ವ್ಯವಹಾರ ನಯವು. ದ್ರವ್ಯ ಎಂದಷ್ಟೇ ಹೇಳಿದರೆ ಕಾರ್ಯ ನಡೆಯುವದಿಲ್ಲಾ. ಆಗ ವ್ಯವಹಾರನಯವು ಬೇಕಾಗುತ್ತದೆ. ವ್ಯವಹಾರನಯದಿಂದ ದ್ರವ್ಯವು ಜೀವದ್ರವ್ಯ ಎಂಬುದಾಗಿ ಹೇಳಿದರೂ ನಡೆಯುವದಿಲ್ಲ. ಆಗ ಜೀವ ದ್ರವ್ಯವು ಸಂಸಾರಿ- ಮುಕ್ತನೆಂಬುದಾಗಿ ಎರಡು ವಿಧವಾಗಿದೆ. ಸಂಸಾರದಲ್ಲಿ ದೇವ, ಮನುಷ್ಯ, ತಿರ್ಯಂಚ, ನಾರಕಿಯಂದು ನಾಲ್ಕುವಿಧ. ಆಜೀವ ದ್ರವ್ಯವು ಪುದ್ಗಲ, ಧರ್ಮ, ಅಧರ್ಮ, ಆಕಾಶ ಕಾಲವೆಂಬುದಾಗಿ ಐದು ವಿಧಗಳಾಗಿವೆ.

ಋಜುಸೂತ್ರನಯ:- ಭೂತ ಮತ್ತು ಭವಿಷತ್ ಪರ್ಯಾಯಗಳನ್ನು ಬಿಟ್ಟು ವರ್ತಮಾನ ಪರ್ಯಾಯವನ್ನೇ ತಿಳಿಯುವ ಜ್ಞಾನ ಅಥವಾ ವಚನಕ್ಕೆ ಋಜುಸೂತ್ರವೆನ್ನುತ್ತಾರೆ.

ಶಬ್ದನಯ:- ಲಿಂಗ, ಸಂಖ್ಯಾ, ಸಾಧನ ಮೊದಲಾದವುಗಳ ವ್ಯಭಿಚಾರ ದೋಷಗಳನ್ನು ದೂರಮಾಡುವ ಜ್ಞಾನ ಮತ್ತು ವಚನಗಳನ್ನು ಶಬ್ದನಯವೆನ್ನುತ್ತಾರೆ.

ಸಂಖ್ಯಾವ್ಯಭಿಚಾರ:- ಜಲಂ. ಅಪಃ, ವರ್ಷಾ ಋಜುಃ, ಆಮ್ರಾ ವನಂ, ವರನಗರಂ, ಇವುಗಳಲ್ಲಿ ಏಕವಚನಾಂತ ಶಬ್ದಗಳನ್ನು ಬಹುವಚನಾಮತಗಳಿಗೆ ವಿಶೇಷ ಮಾಡಲಾಗಿದೆ. ಇದು ಸಂಖ್ಯಾವ್ಯಭಿಚಾರ.

ಸಾಧನವ್ಯಭಿಚಾರ:- ಹೇಗೆ “ಸೇನಾ ವರ್ವತಂ ವಸತಿ” ಅಂದರೆ ಸೈನ್ಯವು ಬೆಟ್ಟದಲ್ಲಿದೆ ಎಂದು ಇಲ್ಲಿ ಅಧಿಕರಣ ಕಾರಕಾರ್ಥದಲ್ಲಿ ಸಪ್ತಮೀ ವಿಭಕ್ತಿಯಿದೆ. ದ್ವಿತೀಯಾ ವಿಭಕ್ತಿಯಾಗಿದೆ. ಈ ಕಾರಣ ಇಲ್ಲಿ ಸಾಧನವ್ಯಭಿಚಾರವಾಗಿರುತ್ತದೆ.

ಪುರುಷವ್ಯಭಿಚಾರ:- ಹೇಗೆ “ ಏಹಿ ಮನ್ಯೇ ರಥೇನಯಾಸ್ಯಸಿ ನಹಿ ಮಾನ್ಯಸಿಯಾತಸ್ತೇಪಿತಾ” ಅಂದರೆ ರಥದಿಂದ ಹೋಗುವೆನೆಂದು ನೀನು ತಿಳಿಯುತ್ತೀ ಹೋಗುವದಿಲ್ಲ. ನಿನ್ನ ತಂದೆ ಹೋಗಿದ್ದಾರೇಯೇ ? ಇಲ್ಲ, ಮನ್ಯಸೇ ಎಂಬ ಸ್ಥಾನದಲ್ಲಿ ಮನ್ಯೇ ಮತ್ತು ಮನ್ಯಾಮಿ ಎಂಬ ಜಾಗದಲ್ಲಿ ಮಾನ್ಯಸಿ ಎಂಬ ಕ್ರೀಯೆಯ ಪ್ರಯೋಗವಾಗಿದೆ. ಈ ಕಾರನದಿಂದ ಇಲ್ಲಿ ಕಾರಕವ್ಯಭೀಚಾರವಾಗಿರುತ್ತದೆ.

ಕಾಲವ್ಯಭಿಚಾರ:- “ವಿಶ್ವದೃಶ್ವಾನ ಪುತ್ರೋ ಜನಿತಾ” ಇವನಿಗೆ ವಿಶ್ವದೃಶ್ವನೆಂಬ ಮಗನಾಗುವನು. ಇಲ್ಲಿ ವಿಶ್ವದೃಶ್ವಾ ಎಂಬುದನ್ನು ಕತೃಪದವನ್ನಾಗಿ ಮಾಡಿ “ಜನಿತಾ” ಎಂಬ ಕ್ರಿಯೆಯ ಪ್ರಯೋಗವಿದೆ. ಈ ಕಾರಣದಿಂದ ಇಲ್ಲಿ. ಕಾಲವು ವ್ಯಭಿಚಾರವಾಗುತ್ತದೆ. ಮುಂದೆ ಆಗುವ ಕಾರ್ಯವನ್ನು ಆದಂತೆ ತೊರಿಸುವುದರಿಂದ ಕಾಲವ್ಯಭಿಚಾರವಾಗುತ್ತದೆ.

ಉಪಗ್ರಹವ್ಯಭಿಚಾರ:-  ಸಂತಿಷ್ಠತೇ, ಪ್ರತಿಷ್ಠತೆ, ವಿರಮತಿ, ಉಪರ ಮತಿ ಇಲ್ಲಿ “ಸಂ” ಮತ್ತು “ಪ್ರ” ಉಪಸರ್ಗದ ಕಾರಣದಿಂದ ಸ್ಥಾಧಾತುವಿಗೆ ಆತ್ಮನೇ ಪದ ಪ್ರಯೋಗ ವಿ, ಮತ್ತು ಉಪಸರ್ಗದ ಕಾರಣದಿಂದ ರನು ಧಾತುವಿನ ಪ್ರಯೋಗವು ಪರಸ್ಮೈಪದಿಯಲ್ಲಿ ಆಗಿದೆ. ಈ ಕಾರಣದಿಂದ ಇಲ್ಲಿ ಉಪಗ್ರಹವ್ಯಭಿಚಾರವಾಗಿದೆ. ಒಂದು ವೇಳೆ ವ್ಯವಹಾರದಲ್ಲಿ ಇಂತಹ ಪ್ರಯೋಗಗಳು ಆದರೂ ಶಬ್ದನಯವು ಈ ದೋಷಗಳನ್ನು ಕ್ಷಮೆಯೆಂದು ತಿಳಿಯುತ್ತದೆ. ವ್ಯಾಕರಣ ದೋಷಗಳನ್ನು ದೂರ ಮಾಡಿ ಲೋಕ ವ್ಯವಹಾರವನ್ನು ಅದು ಪೂರ್ಣಗೊಳಿಸುತ್ತದೆ. ಲೋಕ ಮತ್ತು ಆಗಮದ ವಿರೋದವಾಗುತ್ತದೆ. ಎಂದು ಯಾರಾದರೂ ಹೇಲಿದರೆ ಆಗಲಿ. ಇಲ್ಲಿ ತತ್ವದ ವಿಚಾರ ಮಾಡಲಾಗುತ್ತಿದೆ. ಔಷಧವು ರೋಗಿಯ ಇಚ್ಚೆಗನುಸಾರವಾಗಿರುವದಿಲ್ಲ.

ಸಮಭಿರೂಢನಯ:- ನಾನಾ ಪ್ರಕಾರದ ಅರ್ಥಗಳನ್ನು ನಿಟ್ಟು ಲೋಕದಲ್ಲಿ ಪ್ರಚಲಿತವಾಗಿರುವ ಆರ್ಥವನ್ನು ಗ್ರಹಣೆ ಮಾಡಿ ವಸ್ತುವನ್ನು ಹೇಳುವದು. ಸಮಭಿರೂಢನಯವು. “ಗೌ” ಶಬ್ದವು ಅನೇಕ ಅರ್ಥದಲ್ಲಿ ಪ್ರಯೋಗವಾದರೂ ರೂಢಿಯಲ್ಲಿ ಮಾತ್ರ ವಿಶೇಷತಃ ಆಕಳಿನಲ್ಲಿ ಪ್ರಯುಕ್ತವಾಗುತ್ತದೆ. ಆದುದರಿಂದ ಸಮಭಿರೂಢನಯನದಿಂದ ಅದು ಸರಿಯಾಗಿದೆ.

ಏವಂಭೂತನಯ:- ಯಾವ ಕಾಲದಲ್ಲಿ ಕೆಲಸವನ್ನು ಮಾಡುತ್ತಾನೆಯೋ ಆ ಸಮಯದಲ್ಲಿ ಅದೇ ಹೆಸರಿನಿಂದ ಅವನನ್ನು ತಿಳಿಯುವದು ಅಥವಾ ಕರೆಯುವದು. ಇದಕ್ಕೆ ಏವಂಭೂತನಯವೆನ್ನುತ್ತಾರೆ. ಉದಾ: ದೇವತೆಗಳ ಡೆಯನು ಪರಮ ಐಶ್ವರ್ಯಯುಕ್ತನಾಗಿರುವಾಗ ಅವನನ್ನು ಇಂದ್ರ ಎನ್ನುವದು. ಪೂಜೆ-ಅಭಿಷೇಕ ಮಾಡುವಾಗ ಅವನು ಇಂದ್ರನಲ್ಲ, ಅದೇ ಇಂದ್ರನು ಶಕ್ತಿರೂಪಕಾರ್ಯವನ್ನು ಮಾಡುವಾಗ ಅವನು ಇಂದ್ರನಲ್ಲ, ಆಗ ಶಕ್ರನೆಂದು ತಿಳಿಯುವದು, ಹೇಳುವದು ಏವಂಭೂತನಯವು.

ಇತಿಶ್ರೀ ಉಮಾಸ್ವಾಮಿವಿರಚಿತೇ ಮೋಕ್ಷಶಾಸ್ತ್ರೇ ಪ್ರಥಮೋ ಅಧ್ಯಾಯಃ

*****

ಆಧಾರ ಗ್ರಂಥ: ಆಚಾರ್ಯ ಶ್ರೀ ಉಮಾಸ್ವಾಮಿ ವಿರಚಿತ “ತತ್ತ್ವಾರ್ಥಸೂತ್ರ”

ಲೇಖಕರು: ಪಂ ವರ್ಧಮಾನ ಶಾಸ್ತ್ರಿ.

https://en.wikipedia.org/wiki/Tattvartha_Sutra