ಜೆಸ್ಟ ಫ್ರಾಂಕೋರಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆಸ್ಟ ಫ್ರಾಂಕೋರಮ್ - ಲ್ಯಾಟಿನ್ ಭಾಷೆಯಲ್ಲಿ ರಚಿತವಾದ, ಹನ್ನೊಂದನೆಯ ಶತಮಾನದ ಒಂದು ಚಿಕ್ಕ ಚಾರಿತ್ರಿಕ ವೃತ್ತಾಂತ (ಕ್ರಾನಿಕಲ್) ದಾಖಲೆ. ಜೆಸ್ಟ ಫ್ರಾಂಕೋರಮ್ ಎಟ್ ಅಲೆ ಯೋರಮ್ ಹೈರೋಸೊಲಿ ಮಿಟನೋರಮ್ ಎಂಬುದು ಇದರ ಪೂರ್ತಿ ಹೆಸರು.

ಇದನ್ನು ಬರೆದವ, ಬ್ಲಾಯಿ ಎಂಬಲ್ಲಿನ ಶ್ರೀಮಂತ ಕೌಂಟ್ ಸ್ಟೀಫನ್ನನ ಬಳಿ ಪಾದ್ರಿಯಾಗಿದ್ದ ಅಲೆಕ್ಸಾಂಡರ್ ಎಂಬ ತಪ್ಪು ತಿಳಿವಳಿಕೆ ಇದೆ. ನಿಜವಾಗಿ ಇದನ್ನು ಯಾರು ಬರೆದರೊ ತಿಳಿಯದು.

ಒಳಹೂರಣ[ಬದಲಾಯಿಸಿ]

ಇದರಲ್ಲಿ ಜರ್ಮನರ ಹಾಗೂ ಮತ್ತಿತರರ ಸಾಹಸಕಾರ್ಯಗಳನ್ನು ನಿರೂಪಿಸಲು ಪ್ರಯತ್ನಿಸಲಾಗಿದೆ. ಮೊದಲನೆಯ ಧರ್ಮಯುದ್ಧ (ಕ್ರೂಸೇಡ್) ಕುರಿತ ಪುರಾವೆಗಳನ್ನೂ ವರದಿಗಳನ್ನೂ ಒಳಗೊಂಡ ಈ ನಿರೂಪಣೆ ಇತಿಹಾಸಕಾರರಿಗೆ ಒಂದು ಉತ್ತಮ ಆಕರಗ್ರಂಥವಾಗಿದೆ. ಇದರ ಆಧಾರದ ಮೇಲೆ ಹಲವು ಭಾಷೆಗಳಲ್ಲಿನ ಲೇಖಕರು ವಿಧವಿಧ ಕಥಾನಕಗಳನ್ನೂ ವೃತ್ತಾಂತಗಳನ್ನೂ ಬರೆದಿದ್ದಾರೆ. ಇದನ್ನು ಓದುವಾಗ ಇದರ ನಿರೂಪಕ ಧರ್ಮಯುದ್ಧದಲ್ಲಿ ನೇರವಾಗಿ ಭಾಗವಹಿಸಿದ್ದು ಅದು ನಡೆಯುತ್ತಿರುವಾಗಲೇ ಈ ಕೃತಿಯನ್ನು ರಚಿಸಿರಬೇಕು ಎನ್ನಿಸುತ್ತದೆ. ಯುದ್ಧ ನಡೆಯುತ್ತಿದ್ದಾಗಿನ ಪರಿಸ್ಥಿತಿ, ಸೈನಿಕರ ಧೃತಿ-ಹೇಗಿದ್ದವೆಂದು ಈ ವೃತ್ತಾಂತ ತಿಳಿಸುತ್ತದೆಯಲ್ಲದೆ ಇದರಲ್ಲಿ ಪ್ರಸ್ತಾಪವಾಗಿರುವ ಕಾಲಸೂಚನೆ ಕರಾರುವಾಕ್ಕಾಗಿದೆ. ಆದರೆ ಕೆಲವು ನಿರೂಪಣೆಗಳು, ವಿವರಗಳು ಪ್ರಕ್ಷಿಪ್ತ ಭಾಗಗಳಾಗಿ ತೋರುತ್ತವೆ.

ಖ್ಯಾತಿ[ಬದಲಾಯಿಸಿ]

ಈ ಗ್ರಂಥ 1101ರಲ್ಲಿ ಪೂರ್ಣಗೊಂಡು, ಪಶ್ಚಿಮ ಯೂರೋಪಿನಾದ್ಯಂತ ಪ್ರಖ್ಯಾತಿ ಗಳಿಸಿತು. 1102-1111ರ ನಡುವಣ ಅವಧಿಯಲ್ಲಿ ಪ್ಯಾಲಸ್ಟೈನಿಗೆ ಭೇಟಿ ಕೊಟ್ಟಿರಬಹುದಾದ ಟ್ಯೂಡ್ ಬೋಡಸ್ ಎಂಬ ಪಾದ್ರಿ ಇದರ ನಕಲು ಪ್ರತಿ ತಯಾರಿಸಿದನೆಂದು ಹೇಳಲಾಗಿದೆ. ಬಾದ್ರಿ ದ ಬೋರ್‍ಗ್ಯೂಲ್ ಎಂಬವನೂ ಮಾರ್‍ಮೌಂಟಿಯರ್ಸಿನ ರಾಬರ್ಟ್ ಎಂಬ ಪಾದ್ರಿಯೂ ಈ ವೃತ್ತಾಂತವನ್ನು ಅತ್ಯಂತ ಆಡಂಬರಯುತ ಶೈಲಿಯಲ್ಲಿ ಪುನಾರಚಿಸಿದರು. ಮತ್ತೆ ಈ ವೃತ್ತಾಂತ ಹನ್ನೊಂದು ಹನ್ನೆರಡನೆಯ ಶತಮಾನಗಳ ಹಲವಾರು ವೃತ್ತಾಂತಕಾರರ ಕಲ್ಪನೆಯನ್ನು ಕೆರಳಿಸಿ ಬೇರೆ ಬೇರೆ ರೂಪಗಳಲ್ಲಿ ಅಭಿವ್ಯಕ್ತಿ ಪಡೆಯಿತು.

ಈ ಗ್ರಂಥ ಮತ್ತೆ ಬೆಳಕಿಗೆ ಬಂದದ್ದು ಹದಿನೇಳನೆಯ ಶತಮಾನದಿಂದೀಚೆಗೆ. 1611ರಲ್ಲಿ ಜೇಕ್ಸ್ ಬೊಂಗಾರ್ಸ್‍ನ ಧರ್ಮಯುದ್ಧದ ಚರಿತ್ರೆಯಲ್ಲೂ 1890ರಲ್ಲಿ ಹೇಗನ್ ಮೊಯರ್ ಎಂಬಾತ ರಚಿಸಿದ ಧರ್ಮಯುದ್ಧದ ಚರಿತ್ರೆಯ ಮೂರನೆಯ ಸಂಪುಟದಲ್ಲೂ ಈ ವೃತ್ತಾಂತ ಪುನಾರೂಪ ಪಡೆಯಿತು. 1924ರಲ್ಲಿ ಬಿ. ಲೀಸ್ ಎಂಬಾತನೂ ಅದೇ ವರ್ಷ ಎಲ್. ಬ್ರೇಹಿಯರ್ ರಚಿಸಿದ ಹಿಸ್ಟರಿ ಅನಾನಿಮ್ ದ ಲಾ ಪ್ರೀಮಿಯರ್ ಕ್ರೂಸೇಡ್ ಎಂಬ ಇತಿಹಾಸ ಗ್ರಂಥದಲ್ಲೂ ಈ ವೃತ್ತಾಂತವನ್ನು ಆಕರವಾಗಿ ಬಳಸಿಕೊಂಡು ಅದಕ್ಕೆ ಹೊಸರೂಪ ಕೊಟ್ಟಿದ್ದಾನೆ ಎನ್ನಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: