ಜೆಸೀ ಜೇಮ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆಸೀ ಜೇಮ್ಸ್‌ (ವುಡ್‍ಸನ್) 1847-1882. ಅಮೆರಿಕದ ಪ್ರಸಿದ್ಧ ದರೋಡೆಕಾರ, ದೇಶಭ್ರಷ್ಟ.

ಬದುಕು[ಬದಲಾಯಿಸಿ]

ಸೆಂಟರ್ ವಿಲ್‍ಯೆಂದು ಕರೆಯುತ್ತಿದ್ದ ಕೆರ್‍ನೀ ಸಮೀಪದ ಕ್ಲೆ ಕೌಂಟಿಯಲ್ಲಿ ಈತ ಜನಿಸಿದ. ಇವನ ವಂಶಸ್ಥರು ಕೆಂಟಕಿಯವರು. ಕಟ್ಟಾ ಪ್ರದೇಶಾಭಿಮಾನಿಗಳಾದ ಇವರು ಅಮೆರಿಕದಲ್ಲಿ ನಡೆದ ಅಂತರ್ಯುದ್ಧದಲ್ಲಿ ದಕ್ಷಿಣ ಪ್ರಾಂತದವರನ್ನು ಪ್ರತ್ಯಕ್ಷವಾಗಿ ಪ್ರೋತ್ಸಾಹಿಸಿ ಹೋರಾಡಿದರು. ಜೆಸೀ 16ರ ತಾರುಣ್ಯದಲ್ಲೇ ಗುರಿಗಾರನೆಂದು ಪ್ರಸಿದ್ಧನಾದ. ಪ್ರಖ್ಯಾತ ಗೆರಿಲಾ ಒಕ್ಕೂಟದ ನಾಯಕ ಕ್ಲಾರ್ಕ್ ಕ್ವಾನ್‍ಟ್ರಿಲ್‍ನ ಸಭೆಯನ್ನು ಸೇರಿ, ಹೋರಾಟ ನಡೆಸಿ ನಿರ್ಭೀತನೆನಿಸಿಕೊಂಡ.

ಒಳಯುದ್ಧ ಮುಕ್ತಾಯವಾದ ಮೇಲೆ ಜೆಸೀ ಸರ್ಕಾರಿ ಪಡೆಗಳಿಗೆ ಶರಣಾಗತನಾದ. ಹುಟ್ಟೂರಿಗೆ ಮರಳುತ್ತಿದ್ದಂತೆಯೇ ನೆರೆಯವರ ಹಗೆ ಹಾಗೂ ಪ್ರಭಾವಗಳಿಂದಾಗಿ ದೇಶಭ್ರಷ್ಟನೆಂಬ ಹಣೆಬರಹ ಹೊತ್ತು ಕಾಡು ಸೇರಿದ. ಇದೇ ಇವನ ಕೇಂದ್ರವಾಯಿತು. ರಾಬಿನ್ ಹುಡ್‍ನ ಪ್ರಖ್ಯಾತಿ ಪಡೆದರೂ ಈತ ಕೊಳ್ಳೆ ಕೂಟದ ನಾಯಕನಾದ. 1866ರಲ್ಲಿ ಈತನ ತಮ್ಮ ಅಲೆಕ್ಸಾಂಡರ್ ಫ್ರಾಂಕ್‍ಲಿನ್ ಜೇಮ್ಸ್ (1843-1915), ಕೊಲ್‍ಮನ್ ಯಂಗ್ ಮತ್ತಿತರರು ಇವನನ್ನು ಸೇರಿಕೊಂಡರು. ಈತನ ತಮ್ಮ ಕಪಟಿ ಹಾಗೂ ಆಷಾಢಭೂತಿ. ಇಬ್ಬರೂ ಸೇರಿ ಸಶಸ್ತ್ರ ಕೊಳ್ಳೆಕಾರರ ತುಕಡಿಯೊಂದನ್ನು ಸಜ್ಜುಗೊಳಿಸಿದರು. 16 ವರ್ಷಗಳ ಕಾಲ ಮಧ್ಯ-ಪಶ್ಚಿಮ ಪ್ರದೇಶದಲ್ಲಿ ನೂರಾರು ಕೊಲೆ, ರೈಲು ಮತ್ತು ಬ್ಯಾಂಕು ದರೋಡೆಗಳನ್ನು ನಡೆಸಿದರು. ಇವರ ದುಷ್ಕೃತ್ಯಗಳಿಗೆ ಜನರಷ್ಟೇ ಅಲ್ಲ ಸರ್ಕಾರವೂ ಭೀತಗೊಂಡಿತು. ಇವರನ್ನು ಸೆರೆಹಿಡಿಯಲು ಸರ್ಕಾರಿ ಪಡೆಗಳು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದುವು. ಜೆಸೀ ಸಹೋದರರನ್ನು ಹಿಡಿದು ಅಥವಾ ಕೊಂದು ತಂದವರಿಗೆ 10,000 ಡಾಲರ್ ಮೆಚ್ಚಿಕೆ ಹಣ ನೀಡುವುದಾಗಿ ಮಿಸೂರಿಯ ರಾಜ್ಯಪಾಲ ತಾಮಸ್ ಟಿ. ಕ್ರಿಟೆನ್‍ಡೆನ್ ಸಾರಿದ. ಈತನ ಪಡೆಯಲ್ಲೇ ಇದ್ದ ಚಾರಲ್ಸ್ ಮತ್ತು ರಾಬರ್ಟ್ ಫೋರ್ಡ್ ವಿಶ್ವಾಸಘಾತಕರಾಗಿ, ಸೇಂಟ್ ಜೋಸೆಫ್‍ನಲ್ಲಿನ ತನ್ನ ಮನೆಯಲ್ಲಿದ್ದ ಜೆಸೀಯನ್ನು ಗುಂಡಿಟ್ಟು ಕೊಂದರು. ಅಣ್ಣನ ಮರಣಾನಂತರ ಇವನ ತಮ್ಮ ಶರಣಾಗತನಾದರೂ ಶಿಕ್ಷೆಗೆ ಒಳಗಾಗಲಿಲ್ಲ. ತನ್ನುಳಿದ ಜೀವನವನ್ನು ಎಕ್ಸೆಲ್ ಸಿಯರ್ ಸ್ಟ್ರಿಂಗ್ ಬಳಿಯ ಜಮೀನಿನಲ್ಲಿ ಕಳೆದ.

ಪ್ರಸಿದ್ಧಿ[ಬದಲಾಯಿಸಿ]

ಜೆಸೀ ಜೇಮ್ಸ್ ತನ್ನ ಜೀವಿತಕಾಲದಲ್ಲೇ ವೀರಕಾವ್ಯದ ವೀರಪುರುಷನಂತೆ ಸಮಕಾಲೀನರ ಆದರಾಭಿಮಾನಗಳಿಗೆ ಪಾತ್ರನಾಗಿದ್ದ. ಇವನ ಅಕೃತ್ಯ, ದುಷ್ಕರ್ಮಗಳೂ ಸಾಹಸ ವೀರಕೃತ್ಯಗಳಾಗಿ ರೂಪುಗೊಂಡವು. ಇವನ ಮರಣಾನಂತರ ಪ್ರಕಟವಾದ ಸುಮಾರು 400 ಅಗ್ಗದ ಕಾದಂಬರಿಗಳಿಗೆ ಈತ ಕಥನಾಯಕನಾದ; ಜಾನಪದ ಹಾಡುಗಬ್ಬಗಳ ಕಥಾಪುರುಷನೂ ಆದ. ತಾಮಸ್ ಹಾರ್ಟ್ ಬೆಂಟನ್ ಎಂಬಾತ ರಾಜ್ಯದ ರಾಜಧಾನಿ ಜೆಫರ್‍ಸನ್ ನಗರದ ಹಲವು ಪ್ರಖ್ಯಾತ ಕಟ್ಟಡಗಳ ಗೋಡೆಯ ಮೇಲೆ ಜೆಸೀಯ ಸಾಹಸಗಳನ್ನು ಚಿತ್ರಿಸಿದ್ದಾನೆ.

ಜೆಸೀಯ ಜೀವನಚರಿತ್ರೆಯನ್ನು ಕುರಿತ ಹಲವು ಗ್ರಂಥಗಳು ಹೊರಬಂದವು. ಈತನ ಮಗ ಜೇಮ್ಸ್ ಜೆಸೀ ಇ, 1899ರಲ್ಲಿ ಮೈ ಫಾದರ್ ಎಂಬ ಗ್ರಂಥ ಪ್ರಕಟಿಸಿದ. ಲವ್ ರಾಬರ್ಟಸ್‍ನ (1926), ದಿ ರೈಸ್ ಅಂಡ್ ಫಾಲ್ ಆಫ್ ಜೆಸೀ ಜೇಮ್ಸ್ (1926), ಬ್ರೆಯ್‍ಹಾನ್ ಕಾರ್‍ಲ್ ಡಬ್ಲ್ಯುನ ದಿ ಕಂಪ್ಲೀಟ್ ಅಂಡ್ ಆತೆನ್‍ಟಿಕ್ ಲೈಫ್ ಜೆಸೀ ಜೇಮ್ಸ್ (1953)-ಈ ಗ್ರಂಥಗಳು ಉಲ್ಲೇಖನಾರ್ಹವಾಗಿವೆ.

ರಜತಪರದೆಯ ಮೇಲೆ ಜೆಸೀ ಜೇಮ್ಸ್ ವಿಶ್ವವ್ಯಾಪಿಯಾದ ಖ್ಯಾತಿಗಳಿಸಿದ. ಸುಲಿಗೆ, ದರೋಡೆ ಮುಂತಾದ ದುಷ್ಕøತ್ಯಗಳ ಸಾಹಸಕಾರ್ಯಗಳನ್ನು ನೋಡಿ ನಲಿಯುವ ಪ್ರೇಕ್ಷಕರ ಕಣ್ಣಿಗೆ ಇವನ ಜೀವನ ಕಥೆ ಹಬ್ಬವನ್ನುಂಟುಮಾಡಿತು. ಈತನ ಸಾಹಸಕಾರ್ಯಗಳನ್ನು ಮಾಲೆಮಾಲೆ ಚಿತ್ರಗಳನ್ನಾಗಿಸಿ ಟೆಲಿವಿಷನ್ ತೆರೆಯ ಮೇಲೆ ವರ್ಷವರ್ಷಗಳ ಕಾಲ ಪ್ರದರ್ಶಿಸಿದರು. ಪ್ರಖ್ಯಾತ ಚಲನಚಿತ್ರ ಕಲಾವಿದರು ಈತನ ಪಾತ್ರವನ್ನು ವಹಿಸಿ, ನಟಿಸಿ ಈತನನ್ನು ಜೀವಂತಗೊಳಿಸಿದರು. ಜೆಸೀ ಜೇಮ್ಸ್ (1939) ಚಿತ್ರದ ಟೈರೋನ್ ಪವರ್, ಬ್ಯಾಡ್ ಮ್ಯಾನ್ಸ್ ಟೆರಿಟೊರಿ(1946) ಚಿತ್ರದ ಲಾರೆನ್ಸ್ ಟಿಯರ್ನಿ, ದಿ ಗ್ರೇಟ್ ಮಿಸೂರಿ ರೈಡ್ (1952) ಚಿತ್ರದ ಮ್ಯಾಕ್‍ಡೊನಾಲ್ಡ್ ಕ್ಯಾರಿ, ಕಾನ್‍ಸಾನ್ ರೈಡರ್ಸ್ (1953) ಚಿತ್ರದ ಆಡ್ ಮರ್ಪಿ, ದಿ ಗ್ರೇಟ್ ಜೆಸೀ ಜೇಮ್ಸ್ ರೈಡ್ (1953) ಚಿತ್ರದ ವಿಲಾರ್ಡ ಪಾರ್ಕರ್, ದಿ ಟ್ರೂ ಸ್ಟೋರಿ ಆಫ್ ಜೆಸೀ ಜೇಮ್ಸ್ (1956) ಚಿತ್ರದ ರಾಬರ್ಟ್ ವ್ಯಗ್ನರ್, ಯಂಗ್ ಜೆಸೀ ಜೇಮ್ಸ್ (1960) ಚಿತ್ರದ ರೇ ಸ್ಟ್ರಿಕ್‍ಲಿನ್-ಇವರು ಜೆಸೀ ಜೇಮ್ಸನ ಪಾತ್ರವನ್ನು ಅಮರಗೊಳಿಸಿದವರಲ್ಲಿ ಸುಪ್ರಖ್ಯಾತರು. ಕ್ರಿಸ್ ಜೋನ್ಸ್ ಟಿ. ವಿ. ತೆರೆಯ ಮೇಲೆ ಜೆಸೀಯನ್ನು ಸುಪರಿಚಿತಗೊಳಿಸಿದ. ಕಳ್ಳಕೂಟದ ನಾಯಕನೊಬ್ಬ ಹೀಗೆ ವಿಶ್ವದಾದ್ಯಂತ ಲಕ್ಷೋಪಲಕ್ಷ ಜನರಿಗೆ ಸುಪರಿಚಿತನಾದುದು ಆಧುನಿಕ ಕಾಲದ ಒಂದು ಅದ್ಭುತ.