ವಿಷಯಕ್ಕೆ ಹೋಗು

ಜೆನ್ಏಐ - ಸೃಷ್ಟಿಶೀಲ ಏಐ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆನ್ಏಐ  - ಸೃಷ್ಟಿಶೀಲ ಏಐ

ಜೆನ್ಏಐ ಎಂಬ ಪದವು ಜೆನೆರೇಟಿವ್ ಏಐ ಅಥವಾ "ಸೃಷ್ಟಿಶೀಲ ಕೃತಕ ಬುದ್ಧಿವಂತಿಕೆ" ಎಂಬುದರ ರೂಪಾಂತರ. ವೀಜನ್ ಬಾಮ್ ಎಂಬುವ ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ ೧೯೬೬ರಲ್ಲಿ ಸೃಷ್ಟಿಸಿದ ಎಲೈಜಾ (ELIZA) ಎಂಬ ಚಾಟ್ ಬಾಟ್ ಜಗತ್ತಿನ ಪ್ರಥಮ ಜೆನ್ಏಐ ತಂತ್ರಾಂಶ.    ಇಂದು ಕೃತಕ ಬುದ್ಧಿವಂತಿಕೆ ತಂತ್ರಾಂಶಗಳು ಪ್ರಬಂಧ, ಕಥೆ, ಕಾದಂಬರಿ, ಚಿತ್ರ, ಕೃತಕ ದತ್ತಕೋಶ (ಡೇಟಾಬೇಸ್) ಮೊದಲಾದವುಗಳನ್ನು ಸೃಷ್ಟಿಸಬಲ್ಲವು.   ಈ ಜೆನ್ಏಐ ವ್ಯವಸ್ಥೆಗಳು  ಆಳ ಕಲಿಕೆ ಅಥವಾ ಡೀಪ್  ಲರ್ನಿಂಗ್ ಬಳಸಿ ಸೃಜನಾತ್ಮಕ ಕೃತಿಗಳನ್ನು ರಚಿಸಬಲ್ಲವು.  ಡೀಪ್ ಲರ್ನಿಂಗ್ ಎಂಬ ಯಂತ್ರಕಲಿಕೆಯ  ರೀತಿಯಲ್ಲಿ "ನ್ಯೂರಲ್ ನೆಟ್ವರ್ಕ್" ಎಂಬ ಮಾದರಿಯನ್ನು ಬಳಸಲಾಗುತ್ತದೆ.  ಲಕ್ಷಾಂತರ ಸಂಖ್ಯೆಯಲ್ಲಿ ಚಿತ್ರಗಳನ್ನು, ಪ್ರಬಂಧಗಳನ್ನು, ಕಥೆ ಮುಂತಾದ ಸೃಜನಾತ್ಮಕ ಬರವಣಿಗೆಗಳನ್ನು  ನ್ಯೂರಲ್ ನೆಟ್ವರ್ಕ್ ಗೆ ದತ್ತಾಂಶವಾಗಿ ನೀಡಲಾಗುತ್ತದೆ. ಈ ದತ್ತಾಂಶಗಳಲ್ಲಿರುವ  ನಿದರ್ಶಗಳನ್ನು (patterns), ನಿರ್ಮಿತಿಗಳನ್ನು (structures), ಮತ್ತು ಸಂಬಂಧಗಳನ್ನು (relationships)  ನ್ಯೂರಲ್ ನೆಟ್ವರ್ಕ್ ಕಲಿಯುತ್ತದೆ.  ಕೆಲವು ಜನಪ್ರಿಯ  ನ್ಯೂರಲ್ ನೆಟ್ವರ್ಕ್ ಮಾದರಿಗಳು ಹೀಗಿವೆ:

  • ಟ್ರಾನ್ಸ್ ಫಾರ್ಮರ್ ಅಥವಾ ಪರಿವರ್ತಕ ಮಾದರಿಗಳು : ಇವನ್ನು ಬರೆವಣಿಗೆ ಮತ್ತು ಚಿತ್ರಗಳನ್ನು ಸೃಷ್ಟಿಸಲು ಬಳಸುತ್ತಾರೆ.  ಈ ಬಗೆಯ ಮಾದರಿಗೆ  ಉದಾಹರಣೆಗಳು GPT (ಜೆನೆರೇಟಿವ್ ಪ್ರೀಟ್ರೇನ್ಡ್ ಟ್ರಾನ್ಸ್ಫಾರ್ಮರ್) ಮತ್ತು BERT (ಬೈಡೈರೆಕ್ಷನಲ್ ಎನ್ಕೋಡರ್ ರೆಪ್ರೆಸೆಂಟೇಷನ್ಸ್ ಫ್ರಮ್ ಟ್ರಾನ್ಸ್ ಫಾರ್ಮರ್ಸ್).  ಮಾನವರು ಬಳಸುವ ಭಾಷೆಗಳನ್ನು ಈ ಬಗೆಯ ನ್ಯೂರಲ್ ನೆಟ್ವರ್ಕ್ ಮಾದರಿಗಳು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವು ಮತ್ತು ಈ ಭಾಷೆಗಳಲ್ಲಿ ಮಾತಾಡಲು ಕಲಿಯಬಲ್ಲವು.
  • ಗ್ಯಾನ್ ಅಥವಾ ಜೆನೆರೇಟಿವ್ ಅಡ್ವರ್ಸರಿಯಲ್ ನೆಟ್ವರ್ಕ್ : ಈ ವ್ಯವಸ್ಥೆಯಲ್ಲಿ ಎರಡು ನ್ಯೂರಲ್ ನೆಟ್ವರ್ಕ್ ಗಳನ್ನು ಬಳಸುತ್ತಾರೆ. ಇವಕ್ಕೆ ಜೆನರೇಟರ್ (ಸೃಷ್ಟಿಕರ್ತ) ಮತ್ತು ಡಿಸ್ಕ್ರಿಮಿನೇಟರ್ (ವಿವೇಚಕ) ನ್ಯೂರಲ್ ನೆಟ್ ವರ್ಕ್ ಎಂಬ ಹೆಸರಿದೆ.  ಇವು ಪರಸ್ಪರ ಪೈಪೋಟಿಯಿಂದ ಕೆಲಸ ಮಾಡಿ ಆದಷ್ಟೂ ನೈಜವಾದ ಚಿತ್ರಗಳನ್ನೂ ವಿಡಿಯೋಗಳನ್ನೂ ಸೃಷ್ಟಿಸುತ್ತವೆ.
  • ವಿಏಈ ಅಥವಾ ವೇರಿಯೇಷನಲ್ ಆಟೋ ಎನ್ ಕೋಡರ್ : ಇವುಗಳನ್ನು ದತ್ತಾಂಶ ಸೃಷ್ಟಿಸಲು ಉಪಯೋಗಿಸುತ್ತಾರೆ - ಉದಾ ಚಿತ್ರಗಳನ್ನು ಸೃಷ್ಟಿಸಲು.
ಜೆನ್ಎಐ ಸೃಷ್ಟಿಸಿದ ಕೌಂಟ್ ಡ್ರಾಕುಲಾ ಚಿತ್ರ  


ಜೆನ್ಏಐ ಉಪಯೋಗಗಳು

  • ಬರೆವಣಿಗೆ (ಟೆಕ್ಸ್ಟ್ ಜೆನರೇಷನ್) - ಲೇಖನಗಳನ್ನು ಬರೆಯುವುದು, ಲೇಖನಗಳನ್ನು ತಿದ್ದುವುದು, ಲೇಖನಗಳ ಸಾರಾಂಶ ಬರೆಯುವುದು, ಕಾಲ್ಪನಿಕ ಕತೆಗಳನ್ನು ಬರೆಯುವುದು ಇವೆಲ್ಲವನ್ನೂ ಜೆನ್ಏಐ ಮಾಡಬಲ್ಲದು. ಉದಾಹರಣೆಗೆ ಗೂಗಲ್ ಜೆಮಿನಿ, ಓಪನ್ ಏಐ ಅವರ ಚಾಟ್ ಜಿಪಿಟಿ ಎರಡೂ ಈ ಕೆಲಸಗಳನ್ನು ಮಾಡಬಲ್ಲವು. ಶಿಕ್ಷಕರು ಲೆಕ್ಚರ್ ನೋಟ್ಸ್, ಪರೀಕ್ಷೆಗಾಗಿ ಪ್ರಶ್ನೆಗಳು ಮೊದಲಾದವನ್ನು  ತಯಾರು ಮಾಡಲು ಜೆನ್ಏಐ ಬಳಸಬಹುದು.
  • ಚಿತ್ರಕಲೆ (ಇಮೇಜ್ ಜೆನೆರೇಷನ್) -  ಕಾರ್ಟೂನ್, ನೈಸರ್ಗಿಕ ದೃಶ್ಯ, ಮತ್ತಿತರ  ಚಿತ್ರಗಳನ್ನು ವಿಭಿನ್ನ ಶೈಲಿಗಳಲ್ಲಿ ಜೆನ್ಏಐ ರಚಿಸಬಲ್ಲದು. ಉದಾಹರಣೆಗೆ ಫೇಸ್ ಬುಕ್  ನೀಡಿರುವ "ಇಮಾಜಿನ್ ವಿತ್ ಏಐ" ಎಂಬ ಉಪಕರಣ ಬಳಸಿ ಬಳಕೆದಾರರು ತಮ್ಮ ಪೋಸ್ಟ್ ಗೆ ಹೊಂದುವ ಚಿತ್ರವನ್ನು ಸೃಷ್ಟಿಸಬಹುದು. ಬಿಂಗ್ ಏಐ, ಚಾಟ್ ಜಿಪಿಟಿ, ಗೂಗಲ್ ಜೆಮಿನಿ - ಇವೆಲ್ಲವೂ ಚಿತ್ರ ಬರೆಯುವ ಕೆಲಸವನ್ನು ಮಾಡಬಲ್ಲವು. ಇದೇ ರೀತಿ ವಿಡಿಯೋ ಸೃಷ್ಟಿಸಲೂ ಏಐ ಇದೆ - ಉದಾ ಇನ್ ವಿಡಿಯೋ ಡಾಟ್ ಏಐ ಎಂಬ ತಂತ್ರಾಂಶವು ಬಳಕೆದಾರರು ನೀಡಿದ ಸುಳಿವುಗಳನ್ನು ಬಳಸಿ ವಿಡಿಯೋಗಳನ್ನು ಸೃಷ್ಟಿಸಬಲ್ಲದು. ಅಮೆರಿಕಾದ ಪ್ರಸಿದ್ಧ ಕ್ರಿಸ್ಟೀಸ್ ಕಲಾಪ್ರದರ್ಶನ/ಹರಾಜಿನಲ್ಲಿ ಜೆನ್ಏಐ ರಚಿಸಿದ ಒಂದು ಕಲಾಕೃತಿ $೪೩೨,೫೦೦ ಮೊತ್ತಕ್ಕೆ ಮಾರಾಟವಾಯಿತು.
  • ಪ್ರೋಗ್ರಾಮ್ ರಚನೆ - ಪ್ರೋಗ್ರಾಮ್ ರಚನೆಯಲ್ಲಿ ಜೆನ್ಏಐ ಬಳಕೆ ಸಾಧ್ಯ. ಗೂಗಲ್ ಸಂಸ್ಥೆಯು ಸೃಷ್ಟಿಸುವ ತಂತ್ರಾಂಶಗಳ ೨೫% ಭಾಗವನ್ನು ಜೆನ್ಏಐ ರಚಿಸುತ್ತದೆ ಎಂದು ಗೂಗಲ್ ಸಂಸ್ಥೆಯ ಸುಂದರ್ ಪಿಚ್ಚೈ ಹೇಳಿದ್ದಾರೆ (ಅಕ್ಟೋಬರ್). ಗೂಗಲ್ ಜೆಮಿನಿ, ಚಾಟ್ ಜಿಪಿಟಿ ಇವೆರಡೂ ಪ್ರೋಗ್ರಾಮ್ ರಚನೆಯಲ್ಲಿ ನೆರವು ನೀಡಬಲ್ಲವು. ಚಾಟ್ ಜಿಪಿಟಿ ಬಳಸಿ ಒಂದು ಸಂಕೀರ್ಣವಾದ ಸರ್ಕ್ಯೂಟ್ ರಚಿಸಿದ್ದು ಸಾಕಷ್ಟು ಸುದ್ದಿಯಾಗಿದೆ.
  • ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಜೆನ್ಏಐ ಬಳಕೆ - ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಬೇಕಾದ ದತ್ತಾಂಶವನ್ನು ಜೆನ್ಏಐ ಸೃಷ್ಟಿಸಬಲ್ಲದು. ಇದೇ ರೀತಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು  ವೈಯಕ್ತಿಕ ಟ್ರೀಟ್ಮೆಂಟ್ ಪ್ಲಾನ್ ತಯಾರಿಸಿಕೊಡಬಲ್ಲದು.  
  • ಸಿನಿಮಾಕ್ಷೇತ್ರದಲ್ಲಿ - ಸಿನಿಮಾ ದೃಶ್ಯಗಳಿಗೆ ಸೂಕ್ತ ಸಂಗೀತ ನೀಡಲು, ದೃಶ್ಯಗಳಿಗೆ ಸಂಭಾಷಣೆ ಬರೆಯಲು, ಕ್ಯಾಪ್ಷನ್ ಬರೆಯಲು ಜೆನ್ಏಐ ಬಳಕೆ ನಡೆಯುತ್ತಿದೆ.

ಒಳಿತು-ಕೆಡುಕುಗಳು

ಜೆನ್ಏಐ ಸಾಧ್ಯತೆಗಳು ಅನಂತವಾಗಿವೆ.  ವೈಯಕ್ತಿಕ ನೆಲೆಯಲ್ಲಿ ಮತ್ತು ಸಂಸ್ಥೆಗಳ ಮಟ್ಟದಲ್ಲಿ ಜೆನ್ಏಐ  ನಮಗೆ ಸಾಕಷ್ಟು ಸಮಯವನ್ನು ಉಳಿಸಬಲ್ಲದು.  ಆದರೆ ಜೆನ್ಏಐ ಬಳಕೆಯು ಅನೇಕ ಸಮಸ್ಯೆಗಳನ್ನೂ ಸೃಷ್ಟಿಸಬಲ್ಲದು.

  • ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ಕೊಡುವುದು ರೂಢಿಯಲ್ಲಿದೆ. ಹೋಮ್ ವರ್ಕ್ ಉದ್ದೇಶವು ವಿದ್ಯಾರ್ಥಿಯ ಕಲಿಕೆಯು ಇನ್ನಷ್ಟು ಆಳವಾಗಲಿ ಎಂಬುದು. ಆದರೆ ವಿದ್ಯಾರ್ಥಿಗಳು ಜೆನ್ಏಐ ಬಳಸಿ ಉತ್ತರಗಳನ್ನು ಬರೆದರೆ ಹೋಮ್ ವರ್ಕ್ ನಿರರ್ಥಕವಾಗುತ್ತದೆ.
  • ಕಲಾವಿದರ ಕೃತಿಗಳಲ್ಲಿರುವ ರಹಸ್ಯಗಳನ್ನು ಕಲಿತ ಏಐ ಕಲಾವಿದನ ಶೈಲಿಯನ್ನು ಅನುಸರಿಸಿ ಚಿತ್ರ ಬರೆಯಬಲ್ಲದು, ಸಂಗೀತ ರಚಿಸಬಲ್ಲದು, ಪ್ರಬಂಧ ಬರೆಯಬಲ್ಲದು. ಇದು ಕಲಾವಿದರ ಮತ್ತು ಸಾಹಿತಿಗಳ ಬೌದ್ಧಿಕ ಸ್ವತ್ತಿನ ಮೇಲೆ ಮಾಡಿದ ಪ್ರಹಾರವೆಂದು ಸಾಕಷ್ಟು ಪ್ರತಿಭಟನೆಗಳು ನಡೆದಿವೆ ಮತ್ತು ಇನ್ನೂ ನಡೆಯುತ್ತಿವೆ.
  • ಕಲಾವಿದರು, ಸಾಫ್ಟ್ ವೇರ್ ಇಂಜಿನಿಯರುಗಳು ಮುಂತಾಗಿ ಅನೇಕ ವೃತ್ತಿಗಳು ನಾಶವಾಗಬಹುದು.  
  • ಜೆನ್ಏಐ ಬರೆಯುವ ಸಂಕ್ಷಿಪ್ತ ವರದಿಗಳಲ್ಲಿ ಮತ್ತು ಕಂಪ್ಯೂಟರ್ ಪ್ರೋಗ್ರಾಮುಗಳಲ್ಲಿ ದೋಷಗಳು ಇರಬಹುದು. ಇದರಿಂದ ಕಂಪನಿಗಳಿಗೆ ಕಷ್ಟನಷ್ಟಗಳು ಉಂಟಾಗಬಹುದು.
  • ಜೆನ್ಏಐ  ಬಳಸಿ ನಕಲಿ ಚಿತ್ರಗಳನ್ನೂ, ಫೇಕ್ ನ್ಯೂಸ್ ವಿಡಿಯೋಗಳನ್ನು ಸೃಷ್ಟಿಸಬಹುದು. ಇವುಗಳನ್ನು ಬಳಸಿ ಜನರಿಗೆ ವಂಚನೆ ಮಾಡುವ ಕೆಲಸ ನಡೆಯಬಹುದು.