ಜುಲೈ ಕ್ರಾಂತಿ
ಜುಲೈ ಕ್ರಾಂತಿ - 1830ರ ಜುಲೈ 28ರಿಂದ ಮೂರು ದಿವಸಗಳ ಕಾಲ ಹತ್ತನೆಯ ಚಾರ್ಲ್ಸ್ ನ ನಿರಂಕುಶ ಪ್ರಭುತ್ವದ ವಿರುದ್ಧ ಫ್ರಾನ್ಸಿನ ಪ್ಯಾರಿಸಿನಲ್ಲಿ ನಡೆದ ಕ್ರಾಂತಿ.
ಹತ್ತನೆಯ ಚಾರ್ಲ್ಸ್ ಸಂಸದೀಯ ಸಂಸ್ಥೆಗಳಿಗೆ ಅನುಗುಣವಾಗಿ ರಾಜ್ಯವಾಳುವುದಾಗಿ ಹೇಳಿ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ (1824). ಆದರೆ ಅವನು ಅತ್ಯಲ್ಪ ಕಾಲದಲ್ಲೇ ಜನರ ಪ್ರೀತಿವಿಶ್ವಾಸಗಳನ್ನು ಕಳೆದುಕೊಂಡ. 1830ರ ಜುಲೈ 26ರಂದು ಅವನು ಸುಗ್ರೀವಾಜ್ಞೆಗಳನ್ನು ಹೊರಡಿಸಿದ. ಪತ್ರಿಕಾಸ್ವಾತಂತ್ರ್ಯದ ನಿರ್ಬಂಧ, ಸಂಸತ್ತಿನ ವಿಸರ್ಜನೆ, ಶಾಸಕರ ಅಧಿಕಾರಾವಧಿಯನ್ನು ಏಳು ವರ್ಷದಿಂದ ಐದು ವರ್ಷಕ್ಕೆ ಮೊಟಕುಗೊಳಿಸಿದ್ದು, ಮುಕ್ಕಾಲುವಾಸಿ ಮತದಾರರನ್ನು ಮತದಾನದ ಹಕ್ಕಿನಿಂದ ದೂರ ಮಾಡಿದ್ದು ಮತ್ತು ಸೆಪ್ಟೆಂಬರಿನಲ್ಲಿ ಹೊಸ ಚುನಾವಣೆ ಮಾಡಲು ಆಜ್ಞೆ ನೀಡಿದ್ದು-ಇವು ಈ ಸುಗ್ರೀವಾಜ್ಞೆಗಳ ವಿಷಯ. ಈ ಆಜ್ಞೆಗಳಿಂದ ಪ್ರಜೆಗಳು ರೊಚ್ಚಿಗೆದ್ದು ನಿರಂಕುಶಪ್ರಭುತ್ವವನ್ನು ಕೊನೆಗಾಣಿಸಲು ಚಳವಳಿ ಹೂಡಿದರು.
1830 ಜುಲೈ 27-28ರ ರಾತ್ರಿ ಚಳವಳಿಗೆ ಸನ್ನದ್ಧರಾದ ಪ್ಯಾರಿಸಿನ ಪ್ರಜೆಗಳು ಚಳವಳಿ ಆರಂಭಿಸಿದರು. ಅವರು ಪ್ರಜಾಪ್ರಭುತ್ವ ಸಂವಿಧಾನ ಬೇಕೆಂದು ರಸ್ತೆಯಲ್ಲಿ ಸೇರಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಚಳವಳಿಯಲ್ಲಿ ಮಧ್ಯಮ ವರ್ಗದ ಜನ ಮತ್ತು ಕಾರ್ಮಿಕರು ಹೆಚ್ಚಾಗಿ ಭಾಗವಹಿಸಿದ್ದರು. ಬಹು ಬೇಗ ಪ್ರದರ್ಶನಗಳು ಹಿಂಸೆಯ ಸ್ವರೂಪವನ್ನು ತಳೆದುವು. ಕ್ರಾಂತಿಕಾರರು ಹಿಂದಿನ ಬಿಳಿಯ ಧ್ವಜಕ್ಕೆ ಬದಲಾಗಿ ತ್ರಿವರ್ಣ ಧ್ವಜವನ್ನು ಹಿಡಿದು ಅದೇ ರಾಷ್ಟ್ರದ ನಿಜವಾದ ಲಾಂಛನವೆಂದು ಘೋಷಿಸಿದರು. ಚಳವಳಿಯಲ್ಲಿ ಸುಮಾರು ಹತ್ತು ಸಾವಿರ ಜನ ಭಾಗವಹಿಸಿದ್ದರು. ಸುಮಾರು ಹದಿನಾಲ್ಕು ಸಾವಿರ ಸೈನಿಕರನ್ನು ಪ್ಯಾರಿಸಿನಲ್ಲಿ ಇಡಲಾಗಿತ್ತಾದರೂ ಪ್ಯಾರಿಸಿನ ರಸ್ತೆಗಳು ಇಕ್ಕಟ್ಟಾಗಿ ಅಂಕುಡೊಂಕಾಗಿದ್ದುದರಿಂದ ದಂಗೆಯನ್ನು ಅಡಗಿಸುವುದು ಕಷ್ಟವಾಯಿತು. ಕೊನೆಗೆ ರಾಜ ವಿರೋಧಿಗಳೊಡನೆ ರಾಜಿ ಮಾಡಿಕೊಳ್ಳಲು ಪಟ್ಟ ಪ್ರಯತ್ನ ವಿಫಲವಾಯಿತು. ಜುಲೈ 31ರಂದು ಚಾರ್ಲ್ಸ್ ತನ್ನ 9 ವರ್ಷದ ಮೊಮ್ಮಗನಿಗೆ ಸಿಂಹಾಸನ ಬಿಟ್ಟುಕೊಟ್ಟು ಇಂಗ್ಲೆಂಡಿಗೆ ಸಂಸಾರ ಸಮೇತ ಓಡಿಹೋದ.
ನಿರಂಕುಶ ಪ್ರಭುತ್ವದ ವಿರುದ್ಧ ದಂಗೆ ಎದ್ದಿದ್ದ ಜನ ಪ್ರಜಾಪ್ರಭುತ್ವ ಬೇಕೆಂದು ಇಚ್ಛಿಸಿದರು. ಆದರೆ ಕೆಲವು ಪತ್ರಿಕೋದ್ಯಮಿಗಳು ಮತ್ತು ಪ್ಯಾರಿಸಿನ ಬಹು ಸಂಖ್ಯೆಯ ಪ್ರಜೆಗಳು ಸೇರಿ ಲೂಯಿ ಫಿಲಿಪನನ್ನು ಸಿಂಹಾಸನಕ್ಕೆ ಏರಿಸಿದರು. ಈತ ಸಂವಿಧಾನಬದ್ಧವಾಗಿ ರಾಜ್ಯವಾಳಲು ಪ್ರಾರಂಭಿಸಿ, ಕ್ರಾಂತಿಯ ಉದ್ದೇಶವನ್ನು ಅಲಕ್ಷಿಸದೆ, ಜನತೆಯ ವಿಶ್ವಾಸ ಗಳಿಸಲು ಪ್ರಯತ್ನಿಸಿದ.
ಜಾಗತಿಕ ಪರಿಣಾಮ
[ಬದಲಾಯಿಸಿ]ಜುಲೈ ಕ್ರಾಂತಿ ಫ್ರಾನ್ಸಿನ ಇತಿಹಾಸದಲ್ಲಿ ಅತ್ಯಂತ ಮಹತ್ತ್ವ ಉಳ್ಳದ್ದು. ಇದು ಮಧ್ಯಮ ವರ್ಗದ ಜನರ ಕ್ರಾಂತಿ. ಕ್ರಾಂತಿಯ ಪರಿಣಾಮ ಯೂರೋಪಿನಾದ್ಯಂತ ಹರಡಿತು. ಯೂರೋಪಿನ ರಾಜರಿಗೆ ಇದು ಆತಂಕಕಾರಿಯಾಯಿತು. ಒಟ್ಟಿನಲ್ಲಿ ಇದರಿಂದ ನಿರಂಕುಶ ಪ್ರಭುತ್ವಕ್ಕೆ ಭಾರಿ ಪೆಟ್ಟಾಯಿತು. ರಾಜ ಪ್ರಜೆಗಳ ಆಶಯದಂತೆ (ಪ್ರಜಾಪ್ರತಿನಿಧಿಯಂತೆ) ಆಳಬೇಕೇ ವಿನಾ ತನ್ನ ಸ್ಥಾನ ದೈವದತ್ತವಾಗಿ ಬಂದ ಹಕ್ಕು ಎಂದು ತಿಳಿಯಬಾರದು ಎಂಬುದನ್ನು ಜನರು ಕ್ರಾಂತಿಯ ಮೂಲಕ ರಾಜರಿಗೆ ಮನವರಿಕೆ ಮಾಡಿಕೊಟ್ಟರು.