ವಿಷಯಕ್ಕೆ ಹೋಗು

ಜೀವಮಾಪನ ತಂತ್ರಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವಮಾಪನ ತಂತ್ರಜ್ಞಾನ

[ಬದಲಾಯಿಸಿ]

ವರ್ಷ 1880ರಲ್ಲಿ, ಹೆನ್ರಿ ಫಾಲ್ಡ್‍ಸ್ ಎಂಬ ವಿಜ್ಞಾನಿಯು ಜಪಾನ್ ದೇಶದಲ್ಲಿ ಪ್ರಾಚೀನ ಮಣ್ಣಿನ ಕಲಾಕೃತಿಗಳ ಮೇಲೆ ಜಪಾನಿನ ಕಲಾಕಾರರು ಮೂಡಿಸಿದ್ದ ಕೈಬೆರಳಿನ ಗುರುತುಗಳನ್ನು ಅಧ್ಯಯನ ಮಾಡಿದ. ಅನಂತರ ಅವನು ತನ್ನ ಮತ್ತು ತನ್ನ ಪರಿಚಿತರ ಕೈಬೆರಳುಗಳ ಗುರುತುಗಳನ್ನು ಅಧ್ಯಯನ ಮಾಡಿದ. ತನ್ನ ನಿರಂತರ ಅಧ್ಯಯನಗಳಿಂದಾಗಿ ಹೆನ್ರಿಗೆ ಪ್ರತಿಯೊಬ್ಬ ಮಾನವನ ಕೈಬೆರಳುಗಳ ಗುರುತುಗಳು ಬೇರೆ ಬೇರೆಯಾಗಿರುವುದೆಂಬ ವಿಷಯ ಖಚಿತವಾಯಿತು. ಹೀಗೆ ಆರಂಭವಾದ ಅಧ್ಯಯನವು ಇಂದು ಜೀವಮಾಪನ ತಂತ್ರಜ್ಞಾನವಾಗಿ ವ್ಯಾಪಕವಾಗಿ ಬಳಕೆಗೆ ಬರುತ್ತಿದೆ. ಕೇವಲ ಮಿಲಿಟರಿ ಅಥವಾ ಸೂಕ್ಷ್ಮಪ್ರದೇಶಗಳ ರಕ್ಷಣಾ ವ್ಯವಸ್ಥೆಯಲ್ಲಿ ಜೀವಮಾಪನ ತಂತ್ರಜ್ಞಾನದ ಬಳಕೆ ಸೀಮಿತವಾಗಿರದೆ, ದಿನನಿತ್ಯದ ವ್ಯವಹಾರದಲ್ಲೂ ಜೀವಮಾಪನ ತಂತ್ರಜ್ಞಾನವು ಬಳಕೆಯಾಗುತ್ತಿದೆ, ಉದಾ: ಅಧುನಿಕ ನೋಟ್‍ಬುಕ್ ಗಣಕಗಳನ್ನು ಬಳಸಲು ಬಳಕೆದಾರನ ಹೆಬ್ಬೆರಳಿನ ಗುರುತನ್ನು ಬಳಸುವ ಮತ್ತು ಗುರುತಿಸುವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರಂತೆ, ಗುರುತಿನ ಚೀಟಿ, ಪಾಸ್‍ವರ್ಡ್ ಅಥವಾ ಪಿನ್‍ಕೋಡ್ ಬಳಕೆಗಿಂತ ಜೀವಮಾಪನ ತಂತ್ರಜ್ಞಾನವನ್ನು ಬಳಸುವುದು ಹೆಚ್ಚು ಸುರಕ್ಷಿತ ಮತ್ತು ಸುಲಭವೆಂದು ಹೇಳುವ ಪ್ರಮುಖ ಬ್ಯಾಂಕುಗಳು, ಉದ್ಯಮ, ಸರ್ಕಾರ, ವಾಣಿಜ್ಯ ಮತ್ತು ಪೊಲೀಸ್ ಸಿಬ್ಬಂದಿ ಈ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಜೀವಮಾಪನ ತಂತ್ರಜ್ಞಾನವನ್ನು ಬಳಸಿ, ಮಾನವನ ಕೈಬೆರಳುಗಳ (ಅಥವಾ ಹಸ್ತದ) ಗುರುತುಗಳ ಅಧ್ಯಯನದಂತೆ, ಮುಖದ ಚಹರೆ, ಕಣ್ಣಿನ ರೆಟಿನಾ, ಡಿಎನ್‍ಎ, ಧ್ವನಿ ಹೀಗೆ ವಿವಿಧ ರೀತಿಯ ಅಧ್ಯಯನ ಮತ್ತು ಸಂಶೋಧನೆ ನಡೆಯುತ್ತಿದೆ. ಅಪರಾಧಿಗಳನ್ನು ಗುರುತಿಸುವುದು ಮತ್ತು ಜನ ಸಾಮಾನ್ಯರನ್ನು ರಕ್ಷಿಸುವುದು ಜೀವಮಾಪನ ತಂತ್ರಜ್ಞಾನದ ಪ್ರಮುಖ ಉದ್ದೇಶವಾಗಿದೆ.

ಕಾರ್ಯವಿಧಾನದ ಉದಾಹರಣೆ

[ಬದಲಾಯಿಸಿ]

ಜೀವಮಾಪನ ಕಾರ್ಯವಿಧಾನವನ್ನು ಅತ್ಯಂತ ಸರಳವಾಗಿ ವಿವರಿಸಲು ಈ ಉದಾಹರಣೆಯನ್ನು ಪರಿಗಣಿಸೋಣ: ನೀವು, ನಿಮ್ಮ ಹೊರತಾಗಿ ಬೇರೆ ಯಾರೂ ಕೂಡಾ ನಿಮ್ಮ ಗಣಕವನ್ನು ಬಳಸಬಾರದೆಂದು, ಜೀವಮೆಟ್ರಿಕ್ ತಂತ್ರಜ್ಞಾನದ ಸಾಧನ ಅಳವಡಿಸಿರುವ ಗಣಕವನ್ನು ಹೊಂದಿರುವಿರಿ ಎಂದು ಭಾವಿಸೋಣ. ಇಂತಹ ಗಣಕವನ್ನು ಬಳಸಲು ಸಾಧ್ಯವಾಗಲು, ಮೊದಲು ನಿಮ್ಮ ಹೆಬ್ಬರಳನ್ನು ನೀವು, ಗಣಕ ಜೊತೆಗಿರುವ ಕೈಬೆರಳು ಗುರುತಿನ ಸ್ಕ್ಯಾನರ್ ಸಾಧನದ ಪರದೆಯ ಮೇಲಿರಿಸಬೇಕು. ಆಗ ಈ ಸ್ಕ್ಯಾನರ್ ನಿಮ್ಮ ಹೆಬ್ಬೆರಳಿನ ಗುರುತಿನ ಸ್ಕ್ಯಾನ್ ಮಾಡಿದ ಪ್ರತಿಯೊಂದನ್ನು ಪಡೆದು, ಜೀವಮಾಪನ ಸಾಧನದಲ್ಲಿ ಇರುವ ನಿಮ್ಮ ಹೆಬ್ಬೆರಳಿನ ಗುರುತಿನ ಸ್ಕ್ಯಾನ್ ಮಾಡಿದ ಮೂಲ ಪ್ರತಿಯೊಂದಿಗೆ ಹೋಲಿಕೆ ಮಾಡುತ್ತದೆ. ಈ ಹೋಲಿಕೆ ಸರಿಯಾಗಿದ್ದರೆ ಮಾತ್ರ ನಿಮಗೆ ಗಣಕವನ್ನು ಬಳಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಹೆಬ್ಬೆರಳಿನ ಗುರುತು ಬೇರೆ ಬೇರೆ ಆಗಿರುವುದರಿಂದ, ಬೇರೆಯವರ ಹೆಬ್ಬೆರಳಿನ ಗುರುತು ನಿಮ್ಮ ಹೆಬ್ಬೆರಳಿನ ಗುರುತಿನ ಜೊತೆ ಹೋಲಿಕೆಯಾಗುವುದಿಲ್ಲ ಮತ್ತು ಇದರಿಂದಾಗಿ, ನಿಮ್ಮ ಹೊರತಾಗಿ ಬೇರೆಯವರಿಗೆ ನಿಮ್ಮ ಗಣಕ ಬಳಸಲು ಸಾಧ್ಯವಾಗುವುದಿಲ್ಲ. ಈ ಕಾರ್ಯವಿಧಾನ ಬಹಳ ಸರಳವಾಗಿರುವಂತಿದೆ. ಆದರೆ ಜೀವಮಾಪನ ತಂತ್ರಜ್ಞಾನದ ಪ್ರಮುಖ ವಿಧಾನಗಳ ಬಗ್ಗೆ ಹೆಚ್ಚು ವಿವರಗಳನ್ನು ಪಡೆಯೋಣ ಬನ್ನಿ.

ಹೆಚ್ಚು ವಿವರ

[ಬದಲಾಯಿಸಿ]

ಕೈಬೆರಳ ಗುರುತು ಸ್ಕ್ಯಾನಿಂಗ್ ವಿಧಾನ

[ಬದಲಾಯಿಸಿ]

ಮಾನವನ ಕೈಬೆರಳಿನ ಗುರುತಿನಲ್ಲಿರುವ ರೇಖೆಗಳು ಮತ್ತು ರೇಖೆಗಳ ನಡುವಿನ ಅಂತರವನ್ನು ಪ್ರಮುಖವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಆಪ್ಟಿಕಲ್ ಸ್ಕ್ಯಾನಿಂಗ್ ವಿಧಾನವನ್ನು ಇಲ್ಲಿ ಬಳಸಲಾಗುತ್ತದೆ. ಆಪ್ಟಿಕಲ್ ಸ್ಕ್ಯಾನರ್‍ನಲ್ಲಿ ಡಿಜಿಟಲ್ ಕ್ಯಾಮರಾದಲ್ಲಿರುವಂತೆ ಸಂವೇದಕ (ಸೆನ್ಸರ್) ಇರುತ್ತದೆ. ನಾವು ಕೈಬೆರಳನ್ನು ಸ್ಕ್ಯಾನರ್ ಪರದೆಯ ಮೇಲೆ ಇರಿಸಿದಾಗ ಸ್ಕ್ಯಾನರ್‍ನಲ್ಲಿರುವ ಬೆಳಕು, ನಮ್ಮ ಬೆರಳಿನ ಮೇಲೆ ಬೀಳುತ್ತದೆ ಮತ್ತು ಸಿಸಿಡಿ ಅಅಆ ನಮ್ಮ ಬೆರಳಿನ ಗುರುತಿನ ಚಿತ್ರ ಪ್ರತಿಯನ್ನು ಪಡೆಯುತ್ತದೆ. ನಂತರ ಹೀಗೆ ಪಡೆದ ಬೆರಳಿನ ಗುರುತಿನ ಚಿತ್ರ ಪ್ರತಿಯು ನಿರ್ದಿಷ್ಟ ಗುಣಮಟ್ಟದ್ದಾಗಿದೆಯೇ ಎಂದು ಪರಿಶೀಲಾಗುತ್ತದೆ. ಗುಣಮಟ್ಟ ಸರಿಯಾಗಿದ್ದರೆ, ಚಿತ್ರಪ್ರತಿಯ ಅಧ್ಯಯನ ಮತ್ತು ಸಂವೇದಕದ ಮಾಹಿತಿ ಸಂಚಯದಲ್ಲಿರುವ ಬೆರಳಿನ ಗುರುತಿನ ಮೂಲ ಚಿತ್ರ ಪ್ರತಿಯೊಂದಿಗೆ ಹೋಲಿಕೆ ನಡೆಯುತ್ತದೆ. ಇಲ್ಲಿ ವಿಶೇಷವಾದ ತಂತ್ರಾಂಶಗಳನ್ನು ಮತ್ತು ತಂತ್ರಜ್ಞಾನವನ್ನು ಬಳಸಿ ಹೋಲಿಕೆ ಮತ್ತು ಗುರುತಿಸುವಿಕೆಯನ್ನು ಮಾಡಲಾಗುತ್ತದೆ. ಈಗ ಲಭ್ಯವಿರುವ ಬೆರಳು ಗುರುತು ಸ್ಕ್ಯಾನಿಂಗ್ ವಿಧಾನದಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಈ ವಿಧಾನವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸಲು ವಿಶ್ವಾದ್ಯಂತ ಹಲವಾರು ಸಂಶೋಧನೆಗಳು ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮಾಡಲಾಗುತ್ತಿದೆ.

ಕಣ್ಣಿನ ರೆಟೀನಾ ಸ್ಕ್ಯಾನಿಂಗ್ ವಿಧಾನ:

[ಬದಲಾಯಿಸಿ]

ಈ ವಿಧಾನವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ವರ್ಷ 1930 ರಿಂದ ನಡೆದಿದೆ. ಈ ವಿಧಾನದಲ್ಲಿ, ಅಭ್ಯರ್ಥಿಯನ್ನು ವಿಶೇಷವಾದ ಸ್ಕ್ಯಾನರ್‍ನಲ್ಲಿರುವ ಸಣ್ಣ ರಂಧ್ರದ ಮೂಲಕ ನಿರ್ದಿಷ್ಟ ಸಮಯ ದವರೆಗೆ ನೋಡಲು ಮತ್ತು ಒಂದು ನಿರ್ದಿಷ್ಟ ಬಿಂದುವಿನ ಮೇಲೆ ಗಮನವಿಡಲು ಹೇಳಲಾಗುತ್ತದೆ. ಆತ ಹೀಗೆ ಮಾಡಿರುವಾಗ, ಆ ಸ್ಕ್ಯಾನರ್‍ನಲ್ಲಿರುವ ಬೆಳಕು ಮತ್ತು ಸಿಸಿಡಿ ಸಂವೇದಕವನ್ನು ಬಳಸಿ, ಕಣ್ಣಿನ ಹಿಂಭಾಗದಲ್ಲಿರುವ ರಕ್ತ ನಾಳಗಳ ರಚನೆಯ ಬಗ್ಗೆ ಅಧ್ಯಯನ ಮತ್ತು ಚಿತ್ರಪ್ರತಿ ಸಂಗ್ರಹಣೆ ಮಾಡಲಾಗುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿ ಮತ್ತು ಚಿತ್ರಪ್ರತಿಯನ್ನು ಸ್ಕ್ಯಾನರ್‍ನ ಮಾಹಿತಿ ಸಂಚಯದಲ್ಲಿರುವ ಮೂಲ ಮಾಹಿತಿ ಮತ್ತು ಚಿತ್ರಪ್ರತಿಯೊಂದಿಗೆ, ವಿಶೇಷವಾದ ತಂತ್ರಾಂಶ ಮತ್ತು ತಂತ್ರಜ್ಞಾನ ಬಳಸಿ ಹೋಲಿಕೆ ಮತ್ತು ಗುರುತಿಸುವಿಕೆಯನ್ನು ಮಾಡಲಾಗುತ್ತದೆ. ಅತ್ಯಂತ ಸೂಕ್ಷ್ಮ ಪ್ರದೇಶಗಳ ರಕ್ಷಣಾ ವ್ಯವಸ್ಥೆಯಲ್ಲಿ ಕಣ್ಣಿನ ರೆಟೀನಾ ಸ್ಕ್ಯಾನಿಂಗ್ ವಿಧಾನವನ್ನು ಬಳಸಲಾಗುತ್ತಿದೆ. ಪ್ರತಿಯೊಬ್ಬರ ಕಣ್ಣಿನ ಹಿಂಭಾಗದಲ್ಲಿರುವ ರಕ್ತನಾಳಗಳ ರಚನೆ ಮತ್ತು ಮಾಹಿತಿಗಳು ಬೇರೆ ಬೇರೆಯಾಗಿರುವುದರಿಂದ, ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಈ ವ್ಯವಸ್ಥೆಯನ್ನು ವಂಚಿಸುವುದು ಸಾಧ್ಯವಿಲ್ಲವೆನ್ನಲಾಗಿದೆ. ಮೃತ ವ್ಯಕ್ತಿಯ ರೇಟಿನಾ ಬೇಗ ಹಾಳಾಗುವುದರಿಂದ, ಅದನ್ನು ಬಳಸಿ, ವಂಚಿಸುವುದು ಕೂಡಾ ಸಾಧ್ಯವಾಗುವುದಿಲ್ಲವೆಂದು ಪರಿಣಿತರು ಹೇಳುತ್ತಾರೆ. ಕಣ್ಣಿನ ಐರಿಸ್ ಸ್ಕ್ಯಾನಿಂಗ್ ವಿಧಾನ: ಈ ವಿಧಾನದಲ್ಲಿ ಕಣ್ಣಿನ ಐರಿಸ್‍ನ ಬಣ್ಣ ಮತ್ತು 200ಕ್ಕೂ ಹೆಚ್ಚು ವಿವರಗಳನ್ನು ಅಧ್ಯಯನ ಮಾಡಲಾಗುತ್ತದೆ. ಅಭ್ಯರ್ಥಿಯು ಸುಮಾರು ಒಂದು ಅಡಿ ದೂರದಲ್ಲಿ ನಿಂತು ಕ್ಯಾಮರಾವನ್ನು ನೋಡುವಂತೆ ಹೇಳಲಾಗುತ್ತದೆ. ಕ್ಯಾಮರಾ ಮೂಲಕ ತಗೆದ ಐರಿಸ್‍ನ ಚಿತ್ರಪ್ರತಿಯನ್ನು ವಿಶೇಷವಾದ ತಂತ್ರಾಂಶ ಮತ್ತು ತಂತ್ರಜ್ಞಾನಗಳನ್ನು ಬಳಸಿ ವಿಶ್ಲೇಷಿಸಿಸಲಾಗುತ್ತದೆ. ಮಾನವರಲ್ಲಿ ಒಂದೇ ರೀತಿಯ ಐರಿಸ್ ಇರುವ ಸಂಭವ ಅತ್ಯಂತ ಕಡಿಮೆಯನ್ನಲಾಗಿದೆ. ಆದ್ದರಿಂದ ಈ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ ಯಂದು ಪರಿಣತರು ಹೇಳುತ್ತಾರೆ.

ಮುಖ ಗುರುತಿಸುವಿಕೆ ವಿಧಾನ

[ಬದಲಾಯಿಸಿ]

ಫಿಂಗರ್ ಪ್ರಿಂಟ್, ರೆಟಿನಾ ಸ್ಕ್ಯಾನಿಂಗ್, ಐರಿಸ್ ಸ್ಕ್ಯಾನಿಂಗ್ ವಿಧಾನಗಳು ಅಭ್ಯರ್ಥಿಯ ಸಮ್ಮತಿ ಮತ್ತು ಸಹಕಾರದೊಂದಿಗೆ ನೆಡೆದರೆ, ಮುಖ ಗುರುತಿಸುವಿಕೆ ವಿಧಾನದಲ್ಲಿ ಅಭ್ಯರ್ಥಿಗೆ ಗೊತ್ತಾಗದಂತೆ ರಹಸ್ಯವಾಗಿ ಕೆಲಸ ಮಾಡಬೇಕಾಗುತ್ತದೆ. ಉದಾಹರಣೆಗೆ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ಓಡಾಡುವ ಸಾವಿರಾರು ಜನರ ನಡುವೆ ಒಬ್ಬ ಅಪರಾಧಿಯ ಮುಖವನ್ನು ಅತ್ಯಂತ ನಿಖರವಾಗಿ ಗುರುತಿಸಬೇಕಾದರೆ, ಇಂತಹ ಮುಖ ಗುರುತಿಸುವಿಕೆ ವಿಧಾನವನ್ನು ಬಳಸಲಾಗುತ್ತದೆ. ಕ್ಯಾಮರಾ ಅಥವಾ ವೀಡಿಯೋ ಕ್ಯಾಮರಾ ಮೂಲಕ ತಗೆದ ಚಿತ್ರವನ್ನು ವಿಶ್ಲೇಷಿಸಿ, ಅಪರಾಧಿಯ ಮುಖವನ್ನು ಗುರುತಿಸಲು ಗಣಕ ಮತ್ತು ವಿಶೇಷವಾದ ತಂತ್ರಾಂಶಗಳನ್ನು ಬಳಸುತ್ತಾರೆ. ಮಾನವನ ಮುಖದ ಚಿತ್ರವನ್ನು ವಿಶ್ಲೇಷಿಸುವಾಗ ತಂತ್ರಾಂಶವು ಸುಮಾರು 80 ವಿಧವಾದ ಮಾಹಿತಿಗಳನ್ನು (ಉದಾಹರಣೆಗೆ ಕಣ್ಣುಗಳ ನಡುವೆ ಇರುವ ಅಂತರ, ಮೂಗಿನ ಅಗಲ, ಇತ್ಯಾದಿ) ಸಂಗ್ರಹಿಸಿ, ಬಳಸುತ್ತದೆ. ನೂರಾರು ಜನರ ಮುಖದ ಚಿತ್ರಗಳನ್ನು ಈ ರೀತಿಯಾಗಿ ಅತ್ಯಂತ ವೇಗವಾಗಿ ವಿಶ್ಲೇಷಿಸುತ್ತಾ, ಮಾಹಿತಿ ಸಂಚಯದಲ್ಲಿರುವ ಅಪರಾಧಿಯ ಮುಖದ ಚಿತ್ರದ ವಿವರಗಳೊಂದಿಗೆ ಹೋಲಿಕೆ ಮತ್ತು ಗುರುತಿಸುವಿಕೆ ಮಾಡುವ ಸಾಮಥ್ರ್ಯ ಈ ವಿಶೇಷ ತಂತ್ರಾಂಶಗಳು ಮತ್ತು ಗಣಕಗಳಿಗಿರುತ್ತದೆ. ಪ್ಲಾಸ್ಟಿಕ್ ಸರ್ಜರಿ, ಅಪಘಾತ ಮೊದಲಾದವುಗಳಿಂದ ಅಪರಾಧಿಯ ಮುಖ ಚಹರೆ ಬದಲಾದರೂ ಕೂಡಾ, ಅಪರ್‍ರಾಧಿಯನ್ನು ಈ ವಿಧಾನದಲ್ಲಿ ನಿಖರವಾಗಿ ಗುರುತಿಸಲು ಸಾಧ್ಯವಿದೆ. ಆದರೆ ಈಗಿರುವ ಲೋಪದೋಷಗಳನ್ನು ಸರಿಪಡಿಸಿ, ಈ ವಿಧಾನವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸಲು ತಂತ್ರಾಂಶ, ಗಣಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಧ್ವನಿ ಗುರುತಿಸುವಿಕೆ ವಿಧಾನ

[ಬದಲಾಯಿಸಿ]

ಈ ವಿಧಾನದಲ್ಲಿ ವ್ಯಕ್ತಿಯ ಧ್ವನಿ, ಸ್ಪಷ್ಟತೆ, ಕಂಪನಗಳು, ತರಂಗಗಳು ಮತ್ತು ಉಚ್ಚಾರಣೆಯ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಲಾಗುತ್ತದೆ. ಅಭ್ಯರ್ಥಿಯನ್ನು ವಿಶೇಷವಾದ ಆಡಿಯೋ ಲ್ಯಾಬ್‍ನಲ್ಲಿ, ಸುಮಾರು ಒಂದರಿಂದ ಒಂದೂವರೆ ಸೆಕೆಂಡ್ ಸಮಯದ ಒಂದು ನಿರ್ದಿಷ್ಟ ವಾಕ್ಯವನ್ನು ಹಲವಾರು ಬಾರಿ ಹೇಳುವಂತೆ ಮಾಡುತ್ತಾರೆ. ಅಧ್ಯಯನ ಮತ್ತು ವಿಶ್ಲೇಷಣೆಯ ನಂತರ ಅಭ್ಯರ್ಥಿಯ ಧ್ವನಿಯ ಮುದ್ರಣವನ್ನು ಸಿದ್ಧಪಡಿಸಲು ಗಣಕ ಮತ್ತು ವಿಶೇಷವಾದ ತಂತ್ರಾಂಶಗಳನ್ನು ಬಳಸುತ್ತಾರೆ. ಪ್ರತಿಯೊಬ್ಬ ಮಾನವನಿಗೂ ಆತನದೇ ಆದ ವಿಶೇಷವಾದ ಧ್ವನಿಯ ಮುದ್ರಣವು ಇರುತ್ತದೆ ಆದ್ದರಿಂದ ಧ್ವನಿ ಗುರುತಿಸುವಿಕೆ ವಿಧಾನವನ್ನು ವಂಚಿಸುವುದು ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ. ವಿವಿಧ ರೀತಿಯ ಮೈಕ್ರೋಫೋನುಗಳು, ಆಡಿಯೋ ರಿಕಾರ್ಡಿಂಗ್ ವ್ಯವಸ್ಥೆಗಳು ಇತ್ಯಾದಿಗಳು ಜಗತ್ತಿನಾದ್ಯಂತ ಬಳಕೆಯಲ್ಲಿವೆ, ಜನನಿಬಿಡ ಪ್ರದೇಶಗಳಲ್ಲಿ ಉಂಟಾಗುವ ಗದ್ದಲ, ವಾಹನಗಳ ಸದ್ದು ಮೊದಲಾದ ಪರಿಸ್ಥಿತಿಗಳಲ್ಲಿ ಕೂಡಾ ಧ್ವನಿ ಗುರುತಿಸುವಿಕೆ ವಿಧಾನ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಲು, ಜಗತ್ತಿನಾದ್ಯಂತ ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿ ನಡೆಯುತ್ತಿದೆ.

ಅನುಕೂಲಗಳು, ಅನಾನುಕೂಲಗಳು

[ಬದಲಾಯಿಸಿ]

ಜೀವಮಾಪನ ತಂತ್ರಜ್ಞಾನದ ಬಳಕೆಯಿಂದಾಗುವ ಪ್ರಯೋಜನಗಳಿರುವಂತೆ, ಈ ತಂತ್ರಜ್ಞಾನದ ಬಳಕೆಯಿಂದಾಗಿ ಜನಸಾಮಾನ್ಯರ ವೈಯಕ್ತಿಕ ಸ್ವಾತಂತ್ರ್ಯ ಹರಣ ನೆಡೆಯುವ ಸಾಧ್ಯತೆಯ ಬಗ್ಗೆ ಚಿಂತನೆ ನೆಡೆದಿದೆ. ಮನೆಯಲ್ಲಿರಲಿ, ಕಛೇರಿಯಲ್ಲಿರಲಿ, ಪ್ರವಾಸದಲ್ಲಿರಲಿ ತಾವು ಎಲ್ಲೇ ಇದ್ದರೂ ತಮ್ಮನ್ನು ಗಮನಿಸಲಾಗುತ್ತûದೆ. ಇದು ಸೂಕ್ತವಲ್ಲವೆಂಬುದು ಈ ತಂತ್ರಜ್ಞಾನ ವಿರೋಧಿಗಳ ವಾದದ ಸಾರಾಂಶವಾಗಿದೆ. ಈ ತಂತ್ರಜ್ಞಾನವನ್ನು ಬಳಸಿ ಸಂಗ್ರಹಿಸಲಾಗುವ ಮಾಹಿತಿಗಳು ದುರುಪಯೋಗವಾಗದಂತೆ ಮತ್ತು ಜನಸಾಮಾನ್ಯರಿಗೆ ಕಿರುಕುಳವಾಗದಂತಾಗಲು ಕಾನೂನು ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: