ಜೀವನಾಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನಾಂಶ ಎಂದರೆ ಜೀವನಕ್ಕೆ ನೆರವೀಯುವುದೆಂದರ್ಥ. ಧನಿಕ ಬಂಧು-ಬಾಂಧವರು ತಮ್ಮ ಅಬಲ ಬಂಧು-ಬಾಂಧವರಿಗೆ ಗೌರವಯುತ ಜೀವನ ನಿರ್ವಹಿಸಿ ಉತ್ತಮ ನಾಗರೀಕ ಬದುಕನ್ನು ಸಾಗಿಸಲು ಅನುವು ಮಾಡಿಕೊಡುವುದು ಜೀವನಾಂಶ ಪರಿಕಲ್ಪನೆಯ ಧ್ಯೇಯ. ಬಂಧು-ಬಾಂಧವರು ಅಂದರೆ ತಂದೆ-ತಾಯಿ, ಪತಿ-ಪತ್ನಿ, ಔರಸ (legitimate), ಅನೌರಸ (illegitimate)-ಮಕ್ಕಳು, ಸಹೋದರ, ಸಹೋದರಿ ಇತ್ಯಾದಿ. ವಿವಾಹ ವಿಚ್ಛೇದವಾದ ಮೇಲೆ ಗಂಡ ಹೆಂಡತಿಯ ಮತ್ತು ಮಕ್ಕಳ ಪೋಷಣೆಗೆಂದು ಒದಗಿಸಬೇಕಾದ ಆಸ್ತಿ ಭಾಗ, ಹಣ, ಪತಿಪತ್ನಿಯರಲ್ಲಿ ಯಾರಾದರೂ ತೆರಬೇಕಾದ ಪರಿಹಾರ ಎಂಬ ವಿಶಾಲ ಅರ್ಥ ಇದಕ್ಕೆ ಬಂದಿರುವುದೂ ಉಂಟು. ಅನೇಕ ಸಮಾಜಗಳಲ್ಲಿ ತೆರಬೇಕಾದ ಪರಿಹಾರ ಅತಿ ಹೆಚ್ಚಾಗಿರುತ್ತಿತ್ತಾಗಿ ಸಣ್ಣಪುಟ್ಟ ಕಾರಣಗಳಿಗಾಗಿ ವಿವಾಹವಿಚ್ಛೇದಗಳಾಗುವ ಸಂಭವ ಬಹಳ ಕಡಿಮೆಯಾಗಿರುತ್ತಿತ್ತು.

ಪುರಾತನ ಪಿತೃಪ್ರಧಾನ ಸಮಾಜಗಳಲ್ಲಿ ಗಂಡ ತನ್ನ ಹೆಂಡತಿಯನ್ನು ಯಾವ ನಿರ್ಬಂಧವೂ ಇಲ್ಲದೆ ಸ್ವೇಚ್ಛೆಯಾಗಿ ವಿಸರ್ಜಿಸಬಹುದಾಗಿತ್ತು. ಸಮಾಜ ವಿಕಾಸವಾದಂತೆ, ಹೆಂಡತಿ ನಿರ್ದೋಷಿಯಾಗಿದ್ದರೆ, ಗಂಡ ಆಕೆಗೆ ಕಡ್ಡಾಯವಾಗಿ ಪರಿಹಾರವನ್ನು ಒದಗಿಸಬೇಕಾಗಿ ಬಂತು.

ಕ್ರಿ.ಪೂ. ಸು. 18ನೆಯ ಶತಮಾನದೆನ್ನಲಾದ ಹಾಮುರಾಬೀ ಕಾನೂನು ಸಂಗ್ರಹದಲ್ಲಿ, ನಿರ್ದೋಷಿಯಾದ ಹೆಂಡತಿಗೆ ಗಂಡ ವಿಚ್ಛೇದ ಕಾಲದಲ್ಲಿ ಆಕೆಯ ಸಮಸ್ತ ವಸ್ತುಗಳನ್ನೂ ಕೊಟ್ಟು ಜೊತೆಗೆ ಒಂದು ನಿರ್ದಿಷ್ಟ ಪರಿಮಾಣದಷ್ಟು ಬೆಳ್ಳಿಯನ್ನೂ ಕೊಡಬೇಕೆಂದು ಹೇಳಿದೆ.

ಮೊದಮೊದಲು ಜೀವನಾಂಶವನ್ನು ಬಹುತೇಕವಾಗಿ ವಿವಾಹಪೂರ್ವದಲ್ಲೇ ನಿರ್ಧರಿಸುತ್ತಿದ್ದರು. ಪುರಾತನ ಈಜಿಪ್ಟಿನವರು, ಗ್ರೀಕರು ಮತ್ತು ಯಹೂದ್ಯರಲ್ಲಿ ಈ ಪದ್ಧತಿ ಇತ್ತು. ಕಾಲಕ್ರಮೇಣ ಗ್ರೀಕರು ವಿವಾಹಪೂರ್ವದಲ್ಲಿ ಅಂಥ ಒಪ್ಪಂದವಿಲ್ಲದ ವಿವಾಹ ನ್ಯಾಯಬದ್ಧವಾದುದಲ್ಲವೆಂದು ತಿಳಿಸಿದರು. ರೋಮನರಲ್ಲಿ ಮೊದಲು ಗಂಡನಿಗೆ ಹೆಚ್ಚಿನ ಅಧಿಕಾರವಿತ್ತು. ಕಾಲಕ್ರಮೇಣ ಜಸ್ಟೀನಿಯನ್ನನ ಕಾಲದಲ್ಲಿ, ಸ್ತ್ರೀಪುರುಷರ ಸಮಾನತ್ವ ಅಂಗೀಕೃತವಾಗಿ, ಹೆಂಡತಿಗೆ ಪರಿಹಾರ ದೊರೆಯುವಂತಾಯಿತು. ಹೀಗೆ ಒಪ್ಪಂದವಾಗದಿದ್ದಾಗ, ವಿಚ್ಛೇದನವಾದಲ್ಲಿ ದಂಪತಿಗಳಲ್ಲಿ, ತಪ್ಪುಮಾಡಿದವರು ಇನ್ನೊಬ್ಬರಿಗೆ ಒಂದು ನೂರು ಪೌಂಡುಗಳ ಚಿನ್ನವನ್ನು ಕೊಡಬೇಕಾಗಿತ್ತು. ಆದರೆ ಉಭಯಸಮ್ಮತಿಯಿಂದ ವಿವಾಹವಿಚ್ಛೇದವಾದಲ್ಲಿ ಗಂಡಹೆಂಡಿರು ತಮಗೆ ಒಪ್ಪಿದ ರೀತಿಯಲ್ಲಿ ಆಸ್ತಿಯನ್ನು ವಿಭಾಗಿಸಿಕೊಳ್ಳುತ್ತಿದ್ದರು.

ಮಧ್ಯಯುಗದ ಯೂರೋಪಿನಲ್ಲಿ ವಿವಾಹಬಂಧನ ಸ್ಥಿರ ಎಂಬ ಭಾವನೆ ಇದ್ದುದರಿಂದ ಗಂಡ ಹೆಂಡತಿಗೆ ಜೀವನಪರ್ಯಂತವೂ ಜೀವನಾಂಶವನ್ನು ಕೊಡಬೇಕಾದ ಆದ್ಯತೆಯನ್ನು ಚರ್ಚು ಪ್ರತಿಪಾದಿಸಿತು. ಈ ಅಭಿಪ್ರಾಯಕ್ಕನುಸಾರವಾಗಿ ಯೂರೋಪಿನ ಅನೇಕ ರಾಷ್ಟ್ರಗಳು ವಿವಾಹ ವಿಚ್ಛೇದನವನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶದಿಂದ ತಮ್ಮ ಕಾನೂನುಗಳನ್ನು ರಚಿಸಿವೆ. ಒಟ್ಟಿನಲ್ಲಿ ಐರೋಪ್ಯ ರಾಷ್ಟ್ರಗಳ ನ್ಯಾಯಾಧೀಶರು ಜೀವನಾಂಶವನ್ನು ಒಂದು ಶಿಕ್ಷೆ ಎಂದು ವೀಕ್ಷಿಸಿ, ಹಣವನ್ನು ನಿಷ್ಕರ್ಷಿಸುವಾಗ, ಹೆಂಡತಿಯ ಅಗತ್ಯಕ್ಕಿಂತ ಹೆಚ್ಚಾಗಿ ಗಂಡನ ಹಣಕಾಸಿನ ಸೌಲಭ್ಯಗಳನ್ನು ಗಣನೆಗೆ ತಂದುಕೊಳ್ಳುತ್ತಿದ್ದರು. ಹಲವು ಬಾರಿ ತಪ್ಪಿತಸ್ಥನಾದ ಗಂಡ ಹೆಂಡತಿಗೆ ತನ್ನ ಆದಾಯದಲ್ಲಿ ಮೂರನೆಯ ಒಂದು ಭಾಗವನ್ನು ತೆರಬೇಕಾದ ಸಂದರ್ಭಗಳು ಸಹ ಅನೇಕವಿದ್ದವು. ಈ ಸಂದರ್ಭದಲ್ಲಿ ಹೆಂಡತಿ ನಿರ್ದೋಷಿಯಾಗಿರಬೇಕಾಗಿತ್ತು. ಇಲ್ಲವೆ ವ್ಯಭಿಚಾರವಲ್ಲದ ಉಳಿದ ತಪ್ಪುಗಳ ಫಲವಾಗಿ ವಿವಾಹ ವಿಚ್ಛೇದನವಾಗಿದ್ದರೆ ನ್ಯಾಯಾಲಯ ಔದಾರ್ಯದಿಂದ ಆಕೆಯ ಜೀವನಾಂಶವನ್ನು ನಿರ್ಧರಿಸುತ್ತಿತ್ತು.

ಪಾಶ್ಚಾತ್ಯ ದೇಶಗಳಲ್ಲಿ ಜೀವನಾಂಶದ ಉದಾರ ನೀತಿ ಅನೇಕ ವೇಳೆ ಗಂಡಸರಿಂದ ಹಣವನ್ನು ಸುಲಿಯುವ ಒಲಪುಗಾತಿಯರಿಗೆ ಅನುಕೂಲವಾದ ಸಂದರ್ಭಗಳನ್ನು ಒದಗಿಸಿಕೊಟ್ಟಿದೆ. ಆದರೆ ಇದರಿಂದ ವಿಚ್ಛೇದನಗಳು ಹೆಚ್ಚಾದುವೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲವೆಂದು ವಿಲಿಯಂ ಸೀಗಲ್ ಎಂಬ ವಿದ್ವಾಂಸ ತಿಳಿಸುತ್ತಾನೆ. ಒಟ್ಟಿನಲ್ಲಿ ಉದಾರ ಜೀವನಾಂಶ ಹೆಂಡತಿಗೆ ಉತ್ತೇಜನ ಕೊಟ್ಟರೂ ಗಂಡಸನ್ನು ಆದಷ್ಟು ಅಂಕೆಯಲ್ಲಿಡುತ್ತಿತ್ತು.

ಇಂದು, ಹೆಂಗಸಿನ ಆರ್ಥಿಕ ಸ್ವಾತಂತ್ರ್ಯದ ಹಿನ್ನಲೆಯಲ್ಲಿ ಜೀವನಾಂಶದ ನಿಷ್ಕರ್ಷೆ ಮೊದಲಿನಷ್ಟು ಉದಾರವಾಗಿಲ್ಲ. ಇದಲ್ಲದೆ ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಮ್ಯಾಸಚೂಸೆಟ್ಸ್, ಉತ್ತರ ಡಕೋಟ ಮತ್ತು ಒಹಾಯೊ ರಾಜ್ಯಗಳಲ್ಲಿ ಹೆಂಡತಿ ತಪ್ಪು ಮಾಡಿದ್ದು, ಆಕೆಯ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ಆಕೆ ಗಂಡನಿಗೆ ಜೀವನಾಂಶವನ್ನು ಕೊಡಬೇಕಾಗುತ್ತದೆ. ಸಾಧಾರಣವಾಗಿ ಗಂಡ ಹೆಂಡಿರಿಬ್ಬರೂ ದೋಷಿಗಳಾಗಿದ್ದರೆ ಯಾರಿಗೂ ಜೀವನಾಂಶದ ಹಕ್ಕಿರುವುದಿಲ್ಲ.

ಸೋವಿಯತ್ ದೇಶ, ಆಸ್ಟ್ರಿಯ, ಬೆಲ್ಜಿಯಂ, ರುಮೆನಿಯಾ, ನಾರ್ವೆ, ಸ್ವೀಡನ್ ಮೊದಲಾದ ದೇಶಗಳಲ್ಲಿ ಗಂಡಹೆಂಡಿರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವಾಗಿದ್ದರೆ, ಅವರುಗಳೇ ಜೀವನಾಂಶವನ್ನು ನಿರ್ಧರಿಸುವ ವಾಡಿಕೆ ಇದೆ. ಹಿಂದೂ ವಿವಾಹ ಶಾಸನದ (1955) ಪ್ರಕಾರ ಗಂಡನಾಗಲೀ ಹೆಂಡತಿಯಾಗಲೀ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶವನ್ನು ಪಡೆಯಬಹುದು. ಶಾಶ್ವತ ಜೀವನಾಂಶ ನಿರ್ಧಾರವಾಗುವವರೆಗೆ ವಿಚಾರಣಾಕಾಲದ ಜೀವನಾಂಶವನ್ನು ನ್ಯಾಯಾಲಯ ನೀಡಬಹುದು.

ಹಿಂದೂ ವಿವಾಹ ಶಾಸನದ (1955) 24ನೆಯ ವಿಧಿಯ ಪ್ರಕಾರ, ಯಾವುದೇ ವ್ಯವಹಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಾಗ ಅದು ಮುಗಿಯುವವರೆಗೆ, ಅಶಕ್ತರಾದವರಿಗೆ ಶಕ್ತರು ಜೀವನಾಂಶವನ್ನು ಮತ್ತು ನ್ಯಾಯಾಲಯದಲ್ಲಿ ನಡೆಸಬೇಕಾದ ವ್ಯವಹಾರಕ್ಕೆ ಬೇಕಾದ ವೆಚ್ಚವನ್ನು ಕೊಡಬೇಕು. ನಿರಪರಾಧಿಯಾದ ಹೆಂಡತಿಯನ್ನು ಗಂಡ ತ್ಯಜಿಸಿದರೆ, ಕ್ರೌರ್ಯದಿಂದ ವರ್ತಿಸಿ ಆಕೆಯ ಸಾತ್ವಿಕ ಜೀವನಕ್ಕೆ ಆತಂಕ ಉಂಟುಮಾಡುವಂತೆ ನಡೆದುಕೊಂಡಿದ್ದರೆ ಅಥವಾ ಗಂಡನಲ್ಲಿ ವ್ಯಾಧಿಯಾಗಲೀ, ನಪುಂಸಕತ್ವವಾಗಲೀ ಇದ್ದರೆ, ಹೆಂಡತಿಗೆ ವಿವಾಹ ವಿಚ್ಛೇದನಕ್ಕೆ ಸೂಕ್ತ ಕಾರಣವಿದ್ದು ಶಾಸನರೀತ್ಯ ಯಾವುದೇ ಪರಿಹಾರಕ್ಕೆ ಹೆಂಡತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಉತ್ಪನ್ನವುಳ್ಳ ಗಂಡ ಜೀವನಕ್ಕೂ ನ್ಯಾಯಾಲಯದಲ್ಲಿ ನಡೆಸುವ ವ್ಯವಹಾರಕ್ಕೂ ಬೇಕಾಗುವ ಹಣವನ್ನು ಹೆಂಡತಿಗೆ ಕೊಡುವಂತೆ ನ್ಯಾಯಾಲಯ ಆಜ್ಞೆ ಮಾಡಬಹುದು. ಆದರೆ ಇಲ್ಲಿ ಹೆಂಡತಿಯಾದವಳು ನ್ಯಾಯಾಲಯದಲ್ಲಿ ವ್ಯವಹಾರವನ್ನು ನಡೆಸಲು ಇನ್ನಾವ ವಿಧದಿಂದಲೂ ಹಣವಿಲ್ಲದಷ್ಟು ಅಶಕ್ತಳಾಗಿರಬೇಕಾದುದು ಅಗತ್ಯ. ಇದೇ ವಿಧಿಯ ಪ್ರಕಾರ ನಿರ್ಗತಿಕನಾದ ಗಂಡ ಹೆಂಡತಿಯ ತಪ್ಪಿಗಾಗಿ ದಾಂಪತ್ಯ ಜೀವನದಿಂದ ಕಷ್ಟನಷ್ಟಗಳನ್ನು ಅನುಭವಿಸಬೇಕಾಗಿ ಬಂದು ಯಾವುದೇ ಪರಿಹಾರಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ, ಆ ಕಾಲದಲ್ಲಿ ಹೆಂಡತಿ ಗಂಡನಿಗೆ ಜೀವನಾಂಶವನ್ನು ಮತ್ತು ವ್ಯವಹಾರದ ವೆಚ್ಚವನ್ನು ಕೊಡಬೇಕಾಗಿ ಬರುತ್ತದೆ. ಇಂಥ ಸಂದರ್ಭಗಳು ಅಪರೂಪ. ಆದರೂ ಇಂದು ಹೆಂಗಸಿಗೆ ಲಭಿಸಿರುವ ಆಸ್ತಿಯ ಹಕ್ಕು ಹಾಗೂ ಉದ್ಯೋಗಾವಕಾಶಗಳಿಂದಾಗಿ ಆಕೆಯ ತಪ್ಪಿನಿಂದ ಗಂಡ ದಾಂಪತ್ಯಜೀವನದಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿದರೆ, ಆಕೆ ಗಂಡನಿಗೆ ಜೀವನಾಂಶ ಮತ್ತು ನ್ಯಾಯಾಲಯದ ವ್ಯವಹಾರ ಖರ್ಚನ್ನು ಕೊಡಬೇಕಾಗಿಬರುತ್ತದೆ. ಇಂಗ್ಲೆಂಡಿನ ಶಾಸನವಿಧಿ ಇದೇ ರೀತಿಯಲ್ಲಿರುವುದನ್ನು ಸ್ಮರಿಸಬಹುದು. ಹಿಂದೂಶಾಸನದ 25ನೆಯ ವಿಧಿ ಶಾಶ್ವತ ಜೀವನಾಂಶವನ್ನು ನಿರ್ಧರಿಸುತ್ತದೆ. ಇದರಿಂದ ಅಶಕ್ತರಾದವರಿಗೆ ಜೀವನಪರ್ಯಂತ ಜೀವನಾಂಶವನ್ನು ಪಡೆಯಲು ಅವಕಾಶವಿದೆ. ಜೀವನಾಂಶವನ್ನು ನಿರ್ಧರಿಸುವಾಗ ಗಂಡ ಹೆಂಡಿರ ಆಸ್ತಿ ಮತ್ತು ಉದ್ಯೋಗ, ಉತ್ಪನ್ನ, ಸಮಾಜದಲ್ಲಿ ಅವರಿಗಿರುವ ಅಂತಸ್ತು ಮೊದಲಾದವನ್ನು ಮೂಲಾಧಾರವನ್ನಾಗಿಟ್ಟುಕೊಳ್ಳಲಾಗುತ್ತದೆ. ಜೀವನಾಂಶವನ್ನು ಮಾಸಿಕವಾಗಿಯೋ ಅಥವಾ ಹಂತಹಂತವಾಗಿಯೋ ನೀಡಬೇಕಾಗಬಹುದು. ಈ ಮೊಬಲಗಿನ ಖಾತರಿಯಾಗಿ ಸ್ಥಿರ ಆಸ್ತಿಯನ್ನು ಈಡುಮಾಡುವ ಆಜ್ಞೆಯನ್ನು ನ್ಯಾಯಾಲಯ ಚಲಾಯಿಸಬಹುದು. ಪುನಃ ವಿವಾಹವಾಗಿ ಹೆಂಡತಿ ಶೀಲವಂತಳಾಗಿಲ್ಲವೆಂಬುದು ಖಚಿತವಾದರೆ ಅಥವಾ ಗಂಡನಿಗೆ ಜೀವನಾಂಶ ಕೊಡಲ್ಪಟ್ಟಿದ್ದು, ಆತ ನ್ಯಾಯಾಲಯದ ತೀರ್ಪಿನ ಅನಂತರ ಪರಸ್ತ್ರೀಯರಲ್ಲಿ ಸಂಭೋಗ ಮಾಡಿರುವುದು ರುಜುವಾತಾದರೆ ಜೀವನಾಂಶದ ಆಜ್ಞೆ ರದ್ದಾಗುತ್ತದೆ. ಹೆಂಡತಿ ವ್ಯಭಿಚಾರಿಣಿಯಾಗಿದ್ದ ಕಾರಣದಿಂದ ವಿಚ್ಛೇದನದ ಆಜ್ಞೆಯಾಗಿದ್ದರೆ ಆಕೆಗೆ ಜೀವನಾಂಶದ ಹಕ್ಕಿಲ್ಲ.

ವಿವಾಹವಿಚ್ಛೇದನ ಅನಿವಾರ್ಯವಾದಾಗ ಮಕ್ಕಳ ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಂಡು ಅವುಗಳ ಮೇಲಾಗುವ ದುಷ್ಪರಿಣಾಮವನ್ನು ಆದಷ್ಟು ಸೀಮಿತಗೊಳಿಸಲು ಪ್ರತಿಯೊಂದು ಆಧುನಿಕ ಸಮಾಜವೂ ಪ್ರಯತ್ನಿಸುತ್ತದೆ. ಹಿಂದೂ ಶಾಸನದಲ್ಲಿಯೂ ಈ ಭಾವನೆಗೆ ಮನ್ನಣೆ ದೊರೆತಿದೆ. ಸಾಧ್ಯವಾದ ಮಟ್ಟಿಗೆ ಮಕ್ಕಳ ಮನೋಗತವನ್ನು ತಿಳಿದುಕೊಂಡು, ಅವರು ಯಾರ ಬಳಿಯಿರುತ್ತಾರೆ, ಅವರ ಅಗತ್ಯಗಳೇನು-ಎಂಬುದನ್ನು ಪರಿಶೀಲಿಸಿ ನ್ಯಾಯಾಲಯ ನಿರ್ದೇಶನ ನೀಡುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೀವನಾಂಶ&oldid=906498" ಇಂದ ಪಡೆಯಲ್ಪಟ್ಟಿದೆ