ವಿಷಯಕ್ಕೆ ಹೋಗು

ಜಿ. ವಿ. ಶಿವಾನಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿ. ವಿ. ಶಿವಾನಂದ್
ಜನನಮಾರ್ಚ್ ೧೬, ೧೯೩೫
ಮರಣಮಾರ್ಚ್ ೨೫, ೨೦೦೨
ವೃತ್ತಿರಂಗಭೂಮಿ ಮತ್ತು ಚಲನಚಿತ್ರ ಕಲಾವಿದರು

ಜಿ. ವಿ. ಶಿವಾನಂದ್ (ಮಾರ್ಚ್ ೧೬, ೧೯೩೫ಮಾರ್ಚ್ ೨೨, ೨೦೦೨) ಕನ್ನಡ ರಂಗಭೂಮಿ ಮತ್ತು ಚಿತ್ರರಂಗಗಳ ಮಹಾನ್ ಕಲಾವಿದರು.

ಜೀವನ[ಬದಲಾಯಿಸಿ]

ಪ್ರಖ್ಯಾತ ರಂಗಕರ್ಮಿ ಶಿವಾನಂದ್ ಅವರು ಮಾರ್ಚ್ ೧೬, ೧೯೩೫ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ವೃತ್ತಿ ರಂಗಭೂಮಿಯ ಮೇರು ಶಿಖರರಾದ ನಾಟಕ ರತ್ನ ಡಾ. ಗುಬ್ಬಿವೀರಣ್ಣನವರು, ತಾಯಿ ಜಿ. ಸುಂದರಮ್ಮನವರು. ವಿಜ್ಞಾನ ಪಧವೀದರರಾದರೂ ನಾಟಕದ ವಾತಾವರಣದಲ್ಲೆ ಬೆಳೆದ ಪರಿಣಾಮವಾಗಿ ನಾಟಕದ ಕಡೆಯೇ ಆಕರ್ಷಿತರಾದರು. ಬಾಲ್ಯದಲ್ಲಿ ಕೃಷ್ಣ, ಪ್ರಹ್ಲಾದ ಮುಂತಾದ ಬಾಲ ಪಾತ್ರಗಳನ್ನು ನಿರ್ವಹಿಸಿದ ಶಿವಾನಂದರು ಬೇಸಿಗೆ ರಜೆಯಲ್ಲಿ ಕಂಪನಿ ನಾಟಕಗಳು ನಡೆಯುತ್ತಿದ್ದೆಡೆಗೆ ಹೋಗಿ ಬಾಲ ನಟರ ಪಾತ್ರಾಭಿನಯ ಮಾಡುತ್ತಿದ್ದರು.

ಪದವಿ ಪಡೆದ ನಂತರದಲ್ಲಿ ಶಿವಾನಂದ್ ಅವರು ದೆಹಲಿಯ ಏಷಿಯನ್ ಥಿಯೇಟರ್ ಇನ್‌ಸ್ಟಿಟ್ಯೂಟಿಗೆ ಹೋಗಿ ಮಕ್ಕಳ ರಂಗಭೂಮಿಯ ಕುರಿತಾಗಿ ವಿಶೇಷ ತರಬೇತಿ ಪಡೆದು ಬಂದರು. ಮೈಲ್ಸ್ ಲೀ ಅವರಿಂದ ಮೂಕಾಭಿನಯ ಕಲಿತರಲ್ಲದೆ, ಅಂಗಾಂಗಗಳ ಮೇಲೆ ಹಿಡಿತ, ಧ್ವನಿಯಲ್ಲಿನ ಏರಿಳಿತ ಮುಂತಾದ ವಿಶಿಷ್ಟ ಸಾಧನೆಗಳನ್ನೂ ಕೈಗೊಂಡರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಾಟಕದ ಬಗ್ಗೆ ಕೈಗೊಂಡ ಆಳವಾದ ಅಧ್ಯಯನದ ಮೂಲಕವಾಗಿ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಓದುತ್ತಿದ್ದಾಗಲೇ ರಂಗದ ಮೇಲೆ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಭಿನಯ, ನಿರ್ದೇಶನ, ರಂಗಸಜ್ಜಿಕೆ, ಪ್ರಸಾಧನ ಕಲೆಗಳ ಬಗ್ಗೆ ಶ್ರದ್ಧೆಯಿಂದ ಆಳವಾದ ಅಧ್ಯಯನ ನಡೆಸಿದರು.

ನಾಟಕ ಸಂಸ್ಥೆ ಮತ್ತು ನಾಟಕ ರಚನೆ[ಬದಲಾಯಿಸಿ]

ಬೆಂಗಳೂರಿಗೆ ಬಂದನಂತರ ‘ಕಲಾಕುಂಜ’ ನಾಟಕ ಸಂಸ್ಥೆಯನ್ನು ಕಟ್ಟಿ, ವಿಶಿಷ್ಟ ರೀತಿಯ ರಂಗಸಜ್ಜಿಕೆಯ ಅಳವಡಿಕೆಗಳನ್ನು ಕೈಗೊಂಡರು. ಹಲವಾರು ನಾಟಕಗಳನ್ನೂ ರಚಿಸಿದರು. ಆಂಗ್ಲ ಕವಿ ಎರಿಕ್ ಹ್ಯಾರಿ ಜೋನ್ಸ್ ಅವರು ಬರೆದ ನಾಟಕ ‘Death of the line’ ಅನುವಾದವಾದ ‘ಭ್ರಮೆ’ ಅಲ್ಲದೆ, ಬೆಂಬಿಡದ ಭೂತ, ಯಾರ ಸಾಕ್ಷಿ?, ಸರ್ವೇಜನಾ ಸುಖಿನೋ ಭವಂತು, ಲಕ್ಷ್ಮೀ ಕಟಾಕ್ಷ, ಮಂತ್ರದ ಅವರೇಕಾಳು, ಕುಳ್ಳನ ಸಾಹಸ ಮುಂತಾದವು ಶಿವಾನಂದರ ನಾಟಕಗಳು.

ನಾಟಕ ನಿರ್ದೇಶನ[ಬದಲಾಯಿಸಿ]

ನಿರ್ದೇಶನದಲ್ಲಿ ‘ದಹನ ಚಿತ್ರ’, ‘ಯಯಾತಿ’, ‘ಸೋಕ್ರಟೀಸ್’, ‘ಬಹಿಷ್ಕಾರ’, ‘ವ್ಯೂಹ’, ‘ಯಾರಿಗೆ ಮಾಡ್ತಿ ಮ್ಯಾಂವ್’, ‘ದೇವರಿಗೇ ದಿಕ್ಕು’, ‘ಬಲಿದಾನ’, ‘ಬಾಕಿ ಇತಿಹಾಸ’ ಮೊದಲಾದವು ಶಿವಾನಂದರ ಪ್ರಮುಖ ನಾಟಕಗಳು. ಅಭಿನಯಿಸಿದ ನಾಟಕಗಳಲ್ಲಿ ‘ಕುರುಡು ಕಾಂಚಾಣ’, ‘ಸದ್ದು! ವಿಚಾರಣೆ ನಡೆಯುತ್ತಿದೆ’, ‘ಕಾಡಾನೆ’, ‘ಕತ್ತಲೆ ಬೆಳಕು’, ‘ಜೋಕುಮಾರಸ್ವಾಮಿ’, ‘ತುಘಲಕ್’, ‘ಗಿಳಿಯು ಪಂಜರದೊಳಿಲ್ಲ’, ‘ಈಡಿಪಸ್’ ಪ್ರಮುಖವಾದುವು.

ಚಲನಚಿತ್ರ ಮತ್ತು ಕಿರುತೆರೆಯಲ್ಲಿ[ಬದಲಾಯಿಸಿ]

ನಾಟಕರಂಗವಲ್ಲದೆ ಚಿತ್ರರಂಗದಲ್ಲೂ ಕಾರ್ಯನಿರ್ವಹಿಸಿದ ಶಿವಾನಂದರು ‘ಸುಬ್ಬಾಶಾಸ್ತ್ರಿ’, ‘ಮಾಡಿಮಡಿದವರು’, ‘ಸಂಸ್ಕಾರ’, ‘ನಂಜುಂಡಿ ಕಲ್ಯಾಣ’, ‘ಆಸ್ಫೋಟ’, ‘ಓಂ’, ‘ಯಾರ ಸಾಕ್ಷಿ’, ‘ಆದಿ ಶಂಕರಾಚಾರ್ಯ’, ‘ಮಧ್ವಾಚಾರ್ಯ’ ಮುಂತಾದ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಸೆಳೆದರು. ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದು ಸಹನಿರ್ದೇಶನವನ್ನೂ ಮಾಡಿದ್ದರು. ‘ಮಾಲ್ಗುಡಿ ಡೇಸ್’, ‘ಮನ್ವಂತರ’ ಮುಂತಾದ ಕಿರುತೆರೆಯ ಅನೇಕ ಧಾರವಾಹಿಗಳಲ್ಲಿ ಸಹಾ ಶಿವಾನಂದರು ನಟಿಸಿದ್ದರು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಈ ಸರಳ ಸಜ್ಜನ, ಸಂಭಾವಿತ ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಗೌರವ ಮತ್ತು ಹಲವಾರು ಗೌರವಗಳು ಸಂದಿದ್ದವು.

ವಿದಾಯ[ಬದಲಾಯಿಸಿ]

ಈ ಮಹಾನ್ ರಂಗಕರ್ಮಿ ಮಾರ್ಚ್ ೨೫, ೨೦೦೨ದ ವರ್ಷದಲ್ಲಿ ಈ ಲೋಕವನ್ನಗಲಿದರು.

ಈ ಮಹಾನ್ ಸಾಧಕ ಜಿ. ವಿ. ಶಿವಾನಂದ್ ಎಂಬ ಚೇತನಕ್ಕೆ ನಮ್ಮ ನಮನ.