ಜಿ.ಪಿ.ಎಸ್.ತಂತ್ರಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Civilian GPS receivers
GPS Satellite (NASA)

'ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ'.(GPS) ಎಂಬ ತಂತ್ರಜ್ಞಾನ, [೧] ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ (ನ್ಯಾವಿಗೇಶನ್ ಡಿವೈಸ್), ಯಾವ ಸಮಯದಲ್ಲಿ ಯಾವ ವಾಹನ ಎಲ್ಲಿದೆ, ಎಂದು ನಿಗಾವಹಿಸುವ ಟ್ರಾಕಿಂಗ್ ವ್ಯವಸ್ಥೆಗಳಲ್ಲೆಲ್ಲ ಬಳಕೆಯಾಗುವ ತಂತ್ರಜ್ಞಾನವಾಗಿ (GPS) ಹೆಸರಾಗಿದೆ.

ಕಾರ್ಯ ವೈಖರಿ[ಬದಲಾಯಿಸಿ]

ಭೂಮಿಯ ಸುತ್ತ ಸುತ್ತುತ್ತಿರುವ ಕೃತಕ ಉಪಗ್ರಹಗಳ ಜಾಲವನ್ನು ಬಳಸಿ ಚಾಲನೆಯಲ್ಲಿರುವ ಈ ವ್ಯವಸ್ಥೆ ಉಪಗ್ರಹಗಳಿಂದ ಪ್ರಸಾರವಾಗುವ ಸಂಕೇತವನ್ನು ಜಿಪಿಎಸ್ ರಿಸೀವರ್ ಮೂಲಕ ಪಡೆದುಕೊಂಡು ಆ ರಿಸೀವರ್ ಇರುವ ನಿರ್ದಿಷ್ಟ ಸ್ಥಳವನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ನಮ್ಮ ಸಾರಥಿಯಾಗಲಿರುವ ಟ್ಯಾಕ್ಸಿ ಚಾಲಕನಿಗೆ ನಾವೆಲ್ಲಿದ್ದೇವೆ ಎನ್ನುವುದನ್ನು ತಿಲಿಸುವುದಲ್ಲದೆ ಟ್ಯಾಕ್ಸಿ ಹತ್ತಿ ಹೊರಟಮೇಲೂ ಚಾಲಕನ ಮುಂದಿರುವ ಪರದೆಯಲ್ಲಿ ಟ್ಯಾಕ್ಸಿ ಸಾಗುತ್ತಿರುವ ದಾರಿಯ ಮ್ಯಾಪು ಸ್ಪಷ್ಟವಾಗಿ ಮೂಡಿಬರುತ್ತದೆ. ಮುಂದೆ ಹೋಗುವ ತಾಣವನ್ನು ತಲುಪುವಲ್ಲಿ ನೆರೆವಾಗುತ್ತದೆ , ಯಾವ ಹೋಟಲಿನಲ್ಲಿದ್ದೇವೆ ಎಂದು ಫೇಸ್‌ಬುಕ್ ಅಪ್‌ಡೇಟ್ ಹಾಕುವುದರಿಂದ ಹಿಡಿದು ನಾವು ತಲುಪಬೇಕಿರುವ ವಿಳಾಸಕ್ಕೆ ಹೋಗಬೇಕಾದ ಮಾರ್ಗ ತಿಳಿದುಕೊಳ್ಳುವವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ಮೊಬೈಲ್ ಫೋನ್ ನಮ್ಮ ನೆರವಿಗೆ ಬರುತ್ತದೆ. ಆ ಎಲ್ಲ ಸಂದರ್ಭಗಳಲ್ಲೂ ನಾವು ಇರುವ ಸ್ಥಳವನ್ನು ಅದು ಬಹುತೇಕ ಸರಿಯಾಗಿಯೇ ಗುರುತಿಸಿರುತ್ತದೆ.

ಮೊಬೈಲ್ ಮತ್ತು ಜಿ.ಪಿ.ಎಸ್.[ಬದಲಾಯಿಸಿ]

ಮೊಬೈಲ್ ಫೋನ್ ಇರುವ ಜಾಗವನ್ನು ಗುರುತಿಸಿ ಅದರ ಆಧಾರದ ಮೇಲೆ ಇಷ್ಟೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನವೇ ಜಿ.ಪಿ.ಎಸ್. ಮೊಬೈಲ್ ಫೋನುಗಳಲ್ಲಷ್ಟೇ ಅಲ್ಲ, ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ (ನ್ಯಾವಿಗೇಶನ್ ಡಿವೈಸ್), ಯಾವ ಸಮಯದಲ್ಲಿ ಯಾವ ವಾಹನ ಎಲ್ಲಿದೆ ಎಂದು ನಿಗಾವಹಿಸುವ ಟ್ರಾಕಿಂಗ್ ವ್ಯವಸ್ಥೆಗಳಲ್ಲೆಲ್ಲ ತಂತ್ರಜ್ಞಾನ ಬಳಕೆಯಲ್ಲಿ ಬರುತ್ತದೆ.

ಜಾಹೀರಾತು,ಮಿಲಿಟರಿ ಕಾರ್ಯಾಚರಣೆ[ಬದಲಾಯಿಸಿ]

ಮೊಬೈಲಿನಲ್ಲಿ ಜಿಪಿಎಸ್ ಕೊಂಡಿಯನ್ನು ತೆರೆದು, ಫ್ಲಿಪ್‌ಕಾರ್ಟ್ ಆಪ್ ಡೌನ್‌ಲೋಡ್ ಮಾಡಿಕೊಂಡು ವಿಶೇಷ ರಿಯಾಯಿತಿ ಗಳ ಸೌಲಭ್ಯವಿದ್ದರೆ ಉಪಯೋಗಿಸಬಹುದು. ಸೇನೆಯ ಚಲನೆಯನ್ನು ಗಮನಿಸಿಕೊಳ್ಳುವುದರಿಂದ ಪ್ರಾರಂಭಿಸಿ ಕ್ಷಿಪಣಿಯದೋ ಬಾಂಬಿನದೋ ಗುರಿಯನ್ನು ನಿಗದಿಪಡಿಸುವವರೆಗೆ ಅನೇಕ ಕೆಲಸಗಳಿಗಾಗಿ ಮಿಲಿಟರಿ ಕ್ಷೇತ್ರದಲ್ಲೂ ಜಿಪಿಎಸ್ ಬಳಕೆಯಾಗುತ್ತದೆ. ಬಸ್ಸು-ರೈಲು-ವಿಮಾನಗಳಷ್ಟೇ ಅಲ್ಲ, ಅಂತರಿಕ್ಷ ಯಾನಗಳ ನಿಯಂತ್ರಣದಲ್ಲೂ ಕೃಷಿ, ಪರಿಸರ ಸಂರಕ್ಷಣೆ ಮುಂತಾದೆಡೆಗಳಲ್ಲೂ ಜಿಪಿಎಸ್ ತಂತ್ರಜ್ಞಾನ ಬಳಸುವ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ. ಈ ಬಹುಮುಖಿ ಕಾರ್ಯಾಚರಣೆಯನ್ನು ಸಫಲವಾಗಿಸಲು ಉಪಗ್ರಹಗಳ ಒಂದು ಜಾಲವೇ ಬಳಕೆಯಾಗುತ್ತದೆ. ಈ ಜಾಲದಲ್ಲಿರುವ ಎರಡು ಡಜನ್ನಿಗೂ ಹೆಚ್ಚು ಸಂಖ್ಯೆಯ ಉಪಗ್ರಹಗಳು ಭೂಮಿಯಿಂದ ಸುಮಾರು ಇಪ್ಪತ್ತು ಸಾವಿರ ಕಿಲೋಮೀಟರುಗಳಷ್ಟು ಎತ್ತರದಲ್ಲಿ ಪರಿಭ್ರಮಿಸುತ್ತಿರುತ್ತವೆ; ನಿರ್ದಿಷ್ಟ ಪಥಗಳನ್ನು ಅನುಸರಿಸುತ್ತ ಇಡೀ ಪ್ರಪಂಚದ ಮೇಲೆ ತಮ್ಮ ಕಣ್ಣಿರುವಂತೆ ನೋಡಿಕೊಳ್ಳುತ್ತವೆ. ಈ ಉಪಗ್ರಹಗಳು ಹಳೆಯದಾದಾಗ, ಇಲ್ಲವೇ ನಿಷ್ಕ್ರಿಯವಾದಾಗ ಅವುಗಳ ಬದಲಿಗೆ ಬೇರೆ ಉಪಗ್ರಹಗಳನ್ನು ಉಡಾಯಿಸುವ ಕೆಲಸ ಕೂಡ ನಡೆಯುತ್ತಲೇ ಇರುತ್ತದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ನೆರವಾಗಲು ಯಾವುದೇ ಸಮಯದಲ್ಲಿ ಹೆಚ್ಚುವರಿ ಉಪಗ್ರಹಗಳು ಅಂತರಿಕ್ಷದಲ್ಲಿರುವಂತೆಯೂ ನೋಡಿಕೊಳ್ಳಲಾಗುತ್ತದೆ.

ಜಿ.ಪಿ.ಎಸ್. ತಂತ್ರಾಶದ ಸಾಧಕ ಬಾಧಕಗಳು[ಬದಲಾಯಿಸಿ]

  • ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಮ್ಮ ಸ್ಥಾನವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.
  • ಜಿಪಿಎಸ್ ಜಾಲದಲ್ಲಿರುವ ಉಪಗ್ರಹಗಳು ಯಾವುದೇ ಸಮಯದಲ್ಲಿ ತಮ್ಮ ನಿರ್ದಿಷ್ಟ ಸ್ಥಾನದ ಕುರಿತು ರೇಡಿಯೋ ಸಂಕೇತಗಳನ್ನು ಬಿತ್ತರಿಸುತ್ತಿರುತ್ತವೆ. ಯಾವುದೇ ಜಿಪಿಎಸ್ ರಿಸೀವರ್ ಈ ಸಂಕೇತ ಪಡೆದುಕೊಂಡು ಉಪಗ್ರಹಕ್ಕೂ ತನಗೂ ನಡುವಿನ ಅಂತರವನ್ನು ಪತ್ತೆಹಚ್ಚಲು ಶಕ್ತವಾಗಿರುತ್ತದೆ. ನಾಲ್ಕು ಉಪಗ್ರಹಗಳಿಂದ ಈ ಬಗೆಯ ಸಂಕೇತ ದೊರಕುತ್ತಿದ್ದಂತೆಯೇ ಜಿಪಿಎಸ್ ರಿಸೀವರ್ ಭೂಮಿಯ ಮೇಲೆ ಯಾವ ಸ್ಥಳದಲ್ಲಿದೆ ಎನ್ನುವ ಅಂಶ, ಮೂರು ಆಯಾಮಗಳಲ್ಲಿ, ಸ್ಪಷ್ಟವಾಗಿಬಿಡುತ್ತದೆ.
  • ಬಹಳಷ್ಟು ಸಂದರ್ಭಗಳಲ್ಲಿ ಈ ಮಾಹಿತಿ ನಾವಿರುವ ಜಾಗದಿಂದ ಹೆಚ್ಚೆಂದರೆ ಕೆಲವೇ ಮೀಟರುಗಳಷ್ಟು ಆಚೀಚೆ ಹೋಗಿರಬಹುದು ಅಷ್ಟೆ. ಹೆಚ್ಚು ಸ್ಪಷ್ಟ ವಿವರಗಳನ್ನು ಬೇಡುವ ಕೆಲಸಗಳಿಗಾಗಿ (ಉದಾ: ಮಿಲಿಟರಿ ಕ್ಷೇತ್ರ) ಅತ್ಯಂತ ನಿಖರ ರಿಸೀವರುಗಳೂ ಇವೆ. ಅವುಗಳ ಬೆಲೆ ದುಬಾರಿಯಷ್ಟೇ ಅಲ್ಲ, ಕೆಲವೊಮ್ಮೆ ಅಂತಹ ಉಪಕರಣಗಳು ಸಾರ್ವಜನಿಕ ಉಪಯೋಗಕ್ಕಾಗಿ ದೊರಕದಿರುವುದೂ ಉಂಟು.
  • ಪ್ರಸ್ತುತದಲಿ ಇಂತಹ ಅತ್ಯುಪಕಾರಿ ಸೌಲಭ್ಯ ಒದಗಿಸಲಿಕ್ಕಾಗಿ ಕೆಲಸಮಾಡುತ್ತಿರುವ ಉಪಗ್ರಹಗಳನ್ನು ಅಮೆರಿಕಾ ಸರಕಾರ ನಿರ್ವಹಿಸುತ್ತದೆ. ಜಿಪಿಎಸ್ ಬಳಕೆದಾರರೆಲ್ಲ ಅಮೆರಿಕಾದ ಮೇಲೆಯೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.ಆದರೆ ಮಿಲಿಟರಿ ಅಥವಾ ಆಂತರಿಕ ಭದ್ರತೆಯಂತಹ ಮಹತ್ವದ ಉಪಯೋಗಗಳಿಗೆಂದು ಈ ಮಾಹಿತಿ ಬಳಸುವಾಗ ಬೇರೊಂದು ದೇಶದ ಮೇಲೆ ಅವಲಂಬಿತರಾಗುವುದು ಆರೋಗ್ಯಕರ ಬೆಳವಣಿಗೆಯಲ್ಲ. ಅನೇಕ ರಾಷ್ಟ್ರಗಳು ಜಿಪಿಎಸ್‌ ಪದ್ಧತಿಯ ಇತಿ-ಮಿತಿಗಳನ್ನು ಮನಗಂಡು ತಮ್ಮದೇ ಆದ ಪರ್ಯಾಯಗಳನ್ನು ರೂಪಿಸಿಕೊಳ್ಳುತ್ತಿವೆ.[೨]
  1. ಚೀನಾದ ಬೇಡೋ (BeiDou),
  2. ಯುರೋಪಿಯನ್ ಒಕ್ಕೂಟದ ಗೆಲಿಲಿಯೋ,
  3. ರಷ್ಯಾದ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (GLONASS) ಮುಂತಾದವುಗಳು.

ಜಿಪಿಎಸ್ ತಂತ್ರಾಂಶ ಅಮೇರಿಕಾದ ಅಧೀನದಲ್ಲಿದೆ[ಬದಲಾಯಿಸಿ]

'ಜಿಪಿಎಸ್ ವ್ಯವಸ್ಥೆ,' ಅಮೆರಿಕಾ ಸರಕಾರದ ನಿರ್ವಹಣೆಯಲ್ಲಿ ಕೆಲಸಮಾಡುತ್ತದೆ. ಅಮೆರಿಕಾ ಮೇಲಿನ ಅವಲಂಬನೆ ತಪ್ಪಿಸಲು ಅನೇಕ ರಾಷ್ಟ್ರಗಳು ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುತ್ತಿವೆ. ನಮ್ಮ ದೇಶದ 'ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ'ತಯಾರಿಯಲ್ಲಿರುವ ತಂತ್ರಾಂಶ.(IRNSS) ಎಂಬ ಹೆಸರಿನ ಈ ವ್ಯವಸ್ಥೆಯಲ್ಲಿ ಏಳು ಉಪಗ್ರಹಗಳು ಬಳಕೆಯಾಗಲಿದ್ದು ಆ ಪೈಕಿ ಮೂರು ಈಗಾಗಲೇ ಯಶಸ್ವಿಯಾಗಿ ತಮ್ಮ ಕಕ್ಷೆಯನ್ನು ತಲುಪಿವೆ. ೨೦೧೫ರಲ್ಲಿ ಎಲ್ಲ ಉಪಗ್ರಹಗಳೂ ಉಡಾವಣೆಯಾದ ನಂತರ ಈ ವ್ಯವಸ್ಥೆ ಭಾರತೀಯ ಸೇನೆಗಷ್ಟೇ ಅಲ್ಲದೆ ಸಾಮಾನ್ಯ ಬಳಕೆದಾರರಿಗೂ ಅಗತ್ಯ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.

ಉಲ್ಲೇಖಗಳು[ಬದಲಾಯಿಸಿ]

  1. 'ಜಿ.ಪಿ.ಎಸ್.ಎಂಬ ಮಾರ್ಗದರ್ಶಕ',ಇ-ಜ್ಞಾನ-ಟಿ.ಜಿ.ಶ್ರೀನಿಧಿ[ಶಾಶ್ವತವಾಗಿ ಮಡಿದ ಕೊಂಡಿ]
  2. 'ಜಿಪಿಎಸ್. ಎಷ್ಟು ನಿಖರವಾದ ಪದ್ಧತಿ',