ಜಿಲಿಂಗ್ಹ್ಯಮ್
ಜಿಲಿಂಗ್ಹ್ಯಮ್ - ಆಗ್ನೇಯ ಇಂಗ್ಲೆಂಡಿನ ಕೆಂಟ್ ಕೌಂಟಿಯಲ್ಲಿರುವ ಪೌರ ಸಂಸ್ಥೆಯುಳ್ಳ ಒಂದು ಸ್ಥಳ; ಮೆಡ್‍ವೇ ನದಿಯ ದಡದ ಮೇಲಿರುವ ಮೂರು ಪಟ್ಟಣಗಳಲ್ಲಿ ಒಂದು. ಲಂಡನಿಗೆ ಪೂರ್ವ-ಆಗ್ನೇಯ ದಿಕ್ಕಿನಲ್ಲಿ 48 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 86,714 (1971). ಇಲ್ಲಿಯ ಜನಸಂಖ್ಯೆ ಕೈಗಾರಿಕಾಪ್ರಧಾನವಾದ್ದು. ಹಡಗುಕಟ್ಟೆಯಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗನಿರತರಾಗಿದ್ದಾರೆ. ಸ್ಥಳೀಯ ಸೇವಾ ಸಂಸ್ಥೆಗಳೂ ಹಲವರಿಗೆ ಉದ್ಯೋಗ ಒದಗಿಸಿವೆ. ಇಲ್ಲಿ ಹಲವು ಸಣ್ಣ ಕೈಗಾರಿಕೆಗಳೂ ಉಂಟು. ಇಟ್ಟಿಗೆ ಮತ್ತು ಸಿಮೆಂಟ್ ಕೆಲಸಗಳಿಗೂ ಇದು ಪ್ರಸಿದ್ಧ.
ಇತಿಹಾಸ, ಸ್ಮಾರಕಗಳು
[ಬದಲಾಯಿಸಿ]ಇಲ್ಲಿಯ ಸೇಂಟ್ ಮೇರಿ ಮಾಗ್ಡಲಿನ್ ಚರ್ಚು ಪ್ರಾಚೀನವಾದ್ದು. ಜಿಲಿಂಗ್‍ಹ್ಯಮ್‍ನಲ್ಲಿ ಹಿಂದೆ ಕ್ಯಾಂಟರ್‍ಬರಿಯ ಆರ್ಚ್‍ಬಿಷಪರ ಅರಮನೆ ಇತ್ತು. ವಾಸ್ತುಶಿಲ್ಪ ಮತ್ತು ಮತೀಯ ದೃಷ್ಟಿಯಿಂದ ಒಮ್ಮೆ ಪ್ರಮುಖವಾಗಿದ್ದದ್ದು ಜೆಜರೀಲ್ ಗೋಪುರ. ಜೆಜರೀಲೈಟರ (ಪುರಾತನ ಪ್ಯಾಲನ್ಟೈನಿನ ಜೆಜರೀಲ್ ಪಟ್ಟಣದವರು) ದೇಗುಲವಾಗಿ 1885ರಲ್ಲಿ ಇದರ ನಿರ್ಮಾಣ ಆರಂಭವಾಯಿತು. ಹಣ ಸಾಲದೆ ಬಂದಾಗ 1889ರಲ್ಲಿ ಇದರ ನಿರ್ಮಾಣಕಾರ್ಯ ನಿಂತಿತು. ಕೈಗಾರಿಕಾ ವಿಸ್ತರಣೆಗೆ ಸ್ಥಳ ಒದಗಿಸಲು (1960) ಇದನ್ನು ಒಡೆದುಹಾಕಲಾಯಿತು. ಈ ನಗರದ ಒಂದು ಭಾಗವಾದ ಚತಾಮ್ ಹಡಗುಕಟ್ಟೆಯ ನಿರ್ಮಾಣಕ್ಕೆ ಮುಂಚೆ ಇದು ಪ್ರಾಚೀನ ಹಕ್ಕುಗಳಿಂದ ಕೂಡಿದ ಹೇಸ್ಟೀಂಗ್ಸ್ ಬಂದರಿನ ಒಂದು ಭಾಗವಾಗಿತ್ತು. ಬ್ರಿಟನ್ನು ಸ್ಪೇನಿನ ಆರ್ಮೇಡ ಯುದ್ಧನೌಕಾವ್ಯೂಹವನ್ನು ಸೋಲಿಸಿದಾಗ ಆ ಕಾರ್ಯಾಚರಣೆಯಲ್ಲಿ ಫ್ರಾನ್ಸಿಸ್ ಡ್ರೇಕನ ನಾಯಕತ್ವದಲ್ಲಿ ಜಿಲಿಂಗ್‍ಹ್ಯಮ್‍ನ ನಾವಿಕನಾದ ವಿಲ್ ಅಡಮ್ಸನೂ ಭಾಗವಹಿಸಿದ್ದ. ಜಪಾನಿಗೆ ಹೋದ ಪ್ರಥಮ ಇಂಗ್ಲಿಷನೀತ. ಇವನು ಅಲ್ಲೇ 1620ರಲ್ಲಿ ಮರಣಹೊಂದಿದ. ಜಿಲಿಂಗ್‍ಹ್ಯಮ್‍ನಲ್ಲಿ ಇವನ ಸ್ಮಾರಕ ಒಂದು ಇದೆ. 1929ರಲ್ಲಿ ಈ ಪಟ್ಟಣದ ಎಲ್ಲೆಯನ್ನು ವಿಸ್ತರಿಸಲಾಯಿತು.