ವಿಷಯಕ್ಕೆ ಹೋಗು

ಜಿರೋಸಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿರೋಸಿಯ - ಪ್ರಾಚೀನ ಗ್ರೀಸಿನ ಸ್ಪಾರ್ಟ ನಗರ ರಾಜ್ಯದ ಹಿರಿಯರ ಸಮಿತಿ. ಇದು ದೊರೆಗಳಿಗೆ ಸಲಹೆ ನೀಡುವ ಶ್ರೀಮಂತರ ಸಮಿತಿಯಾಗಿ ಆರಂಭವಾದರೂ ಸ್ವಲ್ಪ ಕಾಲದಲ್ಲಿ ಇದರ ಕಾರ್ಯಭಾರಗಳನ್ನು ನಿರ್ದೇಶಿಸಲಾಯಿತು. ಇದರ ಸದಸ್ಯರ ಸಂಖ್ಯೆ ಇಬ್ಬರು ದೊರೆಗಳೂ ಸೇರಿ 30 ಆಗಿರತಕ್ಕದ್ದೆಂದು ನಿಗದಿಯಾಯಿತು. ಸದಸ್ಯರಿಗಿರಬೇಕಾಗಿದ್ದ ಕನಿಷ್ಠ ವಯಸ್ಸು 60. ಅಭಿಜಾತ ಕಾಲದಲ್ಲಿ ಎಫಾರ್‍ಗಳು (ಅತ್ಯುನ್ನತ ನ್ಯಾಯಾಧೀಶರು) ಇದರ ಅಧಿವೇಶನಗಳಲ್ಲಿರುತ್ತಿದ್ದರು. ಬಹುಶಃ ಅವರೇ ಅಗ್ರಾಸನ ವಹಿಸುತ್ತಿದ್ದರು. ಸದಸ್ಯತ್ವ ಅಜೀವವಾಗಿತ್ತು. ಯಾವುದಾದರೂ ಸ್ಥಾನ ತೆರವಾದಾಗ ಜನಗಳ ಸಭೆಯೇ ಆ ಸ್ಥಾನಕ್ಕೆ ಆಯ್ಕೆ ನಡಸುತ್ತಿತ್ತು. ಸಭೆಯಲ್ಲಿ ಮಂಡಿಸಬೇಕಾದ ಕಲಾಪಗಳನ್ನು ಸಮಿತಿಯೇ ನಿರ್ಧರಿಸುತ್ತಿತ್ತು. ಆದರೆ ಜನಸಭೆ ಯಾವುದೇ ವಿಚಾರದಲ್ಲಿ ಅಸಮರ್ಪಕವಾದ ತೀರ್ಮಾನ ಕೈಗೊಂಡಾಗ ಅದನ್ನು ತಳ್ಳಿಡಲು ಸಮಿತಿಗೆ ಅಧಿಕಾರವಿತ್ತೆಂದೂ ಹೇಳಲಾಗಿದೆ. ಮುಖ್ಯ ವಿಷಯಗಳನ್ನು ಕುರಿತ ನಿರ್ಣಯ ಮಾಡುತ್ತಿದ್ದದ್ದು ಸಭೆಯೇ.

ಸಮಿತಿಗೆ ವ್ಯಾಪಕವಾದ ನ್ಯಾಯಾಧಿಕಾರವಿತ್ತು. ಮರಣದಂಡನೆ ಅಥವಾ ಗಡೀಪಾರು ಶಿಕ್ಷೆ ವಿಧಿಸಬಲ್ಲ ಅಧಿಕಾರ ಇದ್ದದ್ದು ಈ ನ್ಯಾಯಾಲಯಕ್ಕೆ ಮಾತ್ರ. ಒಬ್ಬ ದೊರೆಯನ್ನು ಕುರಿತ ವಿಚಾರಣೆ ನಡೆಸಬೇಕಾದರೆ ಇಡೀ ಸಮಿತಿಯ ಸದಸ್ಯರೂ ಎಫಾರ್‍ಗಳೂ ಉಳಿದೊಬ್ಬ ದೊರೆಯೂ ಸೇರುತ್ತಿದ್ದರು. ಈ ವಿಚಾರವೂ ತೀರ್ಮಾನಕ್ಕಾಗಿ ಒಮ್ಮೊಮ್ಮೆ ಜನಸಭೆಗೆ ಹೋಗುತ್ತಿದ್ದದ್ದುಂಟು. ಸಮಿತಿಗಳನ್ನು ವಾರ್ಷಿಕವಾಗಿ ಆಯ್ಕೆ ಮಾಡುವುದು ಅಭಿಜಾತ ಗ್ರೀಸಿನ ಪದ್ಧತಿಯಾಗಿತ್ತು. ಆ ಸಮಿತಿಗಳು ಅಧಿಕಾರದಲ್ಲಿದ್ದಾಗ ತಮ್ಮ ಕೃತಿಗಳಿಗೆ ಉತ್ತರವಾದಿಗಳಾಗಿರಬೇಕಾಗಿತ್ತು. ಜಿರೋಸಿಯದ ಅಧಿಕಾರವೂ ಪ್ರಭಾವವೂ ಸ್ಪಾರ್ಟನ್ ಸಂವಿಧಾನದ ವೈಚಿತ್ರ್ಯಗಳೆನ್ನಬಹುದು.ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಿರೋಸಿಯ&oldid=1081610" ಇಂದ ಪಡೆಯಲ್ಪಟ್ಟಿದೆ