ಜಾರ್ಜ್ ವಾರ್ವಿಕ್ ಡೀಪಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾರ್ಜ ವಾರ್‍ವಿಕ್ ಡೀಪಿಂಗ್(1877-1950). ಇಂಗ್ಲಿಷ್ ಕಾದಂಬರಿಕಾರ.

ಬದುಕು[ಬದಲಾಯಿಸಿ]

ಹುಟ್ಟಿದ್ದು ಸೌತ್‍ಎಂಡ್ ಎಸೆಕ್ಸ್‍ನಲ್ಲಿ. ತಂದೆ ಗ್ರಾಮಾಂತರ ಪ್ರದೇಶದ ವೈದ್ಯ. ಮರ್ಚೆಂಟ್ ಟೇಲರ್ ಶಾಲೆಯಲ್ಲಿ ಅನಂತರ ಕೇಂಬ್ರಿಜ್‍ನಲ್ಲಿ ವ್ಯಾಸಂಗಮಾಡಿದ. ವಿಜ್ಞಾನ ಮತ್ತು ವೈದ್ಯಶಾಸ್ತ್ರಗಳಲ್ಲಿ ಪದವೀಧರನಾಗಿ ಲಂಡನ್ನಿನ ಆಸ್ಪತ್ರೆಯಲ್ಲಿ ಕೆಲಸಮಾಡಿ ಬಳಿಕ ಹಳ್ಳಿಗಾಡಿಗೆ ಹೋಗಿ ವೈದ್ಯನಾಗಿ ನೆಲೆಸಿದ.

ಡೀಪಿಂಗ್ ದಾಂಪತ್ಯದ ವಿಷಯದಲ್ಲಿ ಅದೃಷ್ಟಶಾಲಿ. ಈತನ ಇಚ್ಛೆಯನ್ನರಿತ ಸತಿ ಮಾಡ್ ಫಿಲ್ಲಿಸ್ ಮೆರ್ರಿಲ್. ಇಬ್ಬರಿಗೂ ಪರಿಶುದ್ಧವಾದ ಗಾಳಿಯಿರುವಂಥ ಹಳ್ಳಿಗಾಡಿನ ನಿಸರ್ಗದ ಮಡಿಲಲ್ಲಿರುವುದೆಂದರೆ ಇಷ್ಟ. ಡೀಪಿಂಗ್‍ನಿಗೆ ತೋಟಗಾರಿಕೆಯಲ್ಲಿ ತುಂಬ ಪ್ರೀತಿ. ಸದಾ ಹೂಗಿಡಬಳ್ಳಿಗಳ ಬಳಿ ಇರುವುದೇ ಸಂತೋಷ. ಹಾಗೆಯೇ ಪ್ರವಾಸದ ಬಗ್ಗೆಯೂ ಆಸಕ್ತಿ.

ಸಂಸಾರದ ಭಾರ ಚಿಂತೆಗಳಿದ್ದರೂ ಸಾಹಸಿಯೂ ಸದಾ ಸುಪ್ರಸನ್ನನೂ ಆಗಿದ್ದ ಡೀಪಿಂಗ್ ಜೀವನವನ್ನು ಒಂದು ಹೋರಾಟವಾಗಿಯೇ ಸ್ವೀಕರಿಸಿದ್ದ. ಮೊದಲ ಮಹಾಯುದ್ಧದಲ್ಲಿ ವೈದ್ಯನಾಗಿ ರಾಯಲ್ ಆರ್ಮಿ ಮೆಡಿಕಲ್ ಕೋರ್‍ನ್ನು ಸೇರಿ ಈಜಿಪ್ಟ್, ಫ್ರಾನ್ಸ್, ಬೆಲ್ಜಿಯಮ್‍ಗಳಲ್ಲಿ ಸೇವೆ ಸಲ್ಲಿಸಿದ. ಯುದ್ಧದ ಪ್ರತ್ಯಾಕ್ಷಾನುಭವದಿಂದ ಜೀವನದೃಷ್ಟಿ ಹೆಚ್ಚು ಆಳವಾಯಿತು. ಅದೊಂದು ಮಹತ್ತರವಾದ ಅನುಭವ. ನಯ, ಸುಸಂಸ್ಕøತಿಗಿಂತ ಬಾಳಿಗೆ ಧೀರತೆ ಚಾರಿತ್ರ್ಯಗಳೇ ಮುಖ್ಯ ಎಂಬುದೇ ಅದು ಕಲಿಸಿದ ಪಾಠ.

ಬರಹ[ಬದಲಾಯಿಸಿ]

20ನೆಯ ವಯಸ್ಸಿನಲ್ಲಿ ಮೊಟ್ಟಮೊದಲಿಗೆ ಬರೆವಣಿಗೆಯ ಹುಚ್ಚು ಹಿಡಿಯಿತು. ಬರೆಯಲಾರಂಭಮಾಡಿದ್ದು ಕೆಟ್ಟ ಕವಿತೆಗಳಿಂದ.

ಅನಂತರ ಐತಿಹಾಸಿಕ ರಮ್ಯ ಕಾದಂಬರಿಗಳನ್ನು ಬರೆಯುವ ಯತ್ನ ಫಲ ಕೊಟ್ಟಿತು. ಮಧ್ಯಕಾಲೀನ ವೀರಯೋಧರ ಸಾಹಸ ಮತ್ತು ಪ್ರಣಯಗಳ ಕತೆಗಳೇ ಕಾದಂಬರಿಯ ವಸ್ತುವಾದುವು. ಪ್ರಕಟಿತ ಕಾದಂಬರಿಗಳಿಗೆ ಅನಿರೀಕ್ಷಿತವಾದ ಮತ್ತು ಅಪರಿಮಿತವಾದ ಪ್ರೋತ್ಸಾಹ ಸಿಕ್ಕಿತು. ಜೊತೆಗೆ ಬರೆಯುವ ಆನಂದವೂ ದೊರಕಿತು. ಕ್ರಮೇಣ ಬರೆವಣಿಗೆಯೇ ಹೆಚ್ಚಾಗಿ ವೈದ್ಯವೃತ್ತಿಯನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟ.

ಯುದ್ಧದ ಅನುಭವಗಳನ್ನೇ ತನ್ನ ಜನಪ್ರಿಯ ಕಾದಂಬರಿ ಸಾರೆಲ್ ಅಂಡ್ ಸನ್ (1925) ಎಂಬುದರಲ್ಲಿ ಬಳಸಿಕೊಂಡ. ಇದರಲ್ಲಿ ಲೇಖಕ ತನ್ನ ಯುದ್ಧಾನುಭವಗಳನ್ನು ಚಿತ್ರಿಸಿದ್ದಾನೆ.

ಡೀಪಿಂಗ್‍ನಿಗೆ ಜೀವನ ಗೋಳಿನ ಪಾಡಲ್ಲ, ಹರ್ಷೋತ್ಸಾಹಗಳ ಹಾಡು. ಸಿನಿಕತನವೂ ಒಂದು ಬಗೆಯ ಹೇಡಿತನ ಎನ್ನುತ್ತಾನೆ ಈತ. ತನ್ನ ಕಾದಂಬರಿಯ ಪಾತ್ರಗಳನ್ನು ವಾಸ್ತವ ಜೀವನದಿಂದಲೇ ಆರಿಸಿಕೊಳ್ಳುತ್ತಾನೆ. ಬಾಳಿನ ಸೌರಭವನ್ನು ಪೂರ್ಣವಾಗಿ ಆನಂದಿಸಬೇಕೆನ್ನುವವರು ಒಂದು ಬಗೆಯ ಸರಳತೆಯನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾಗುತ್ತದೆ-ಎಂದು ಈತನ ಅಭಿಪ್ರಾಯ. ಯೂತರ್ ಅಂಡ್ ಇಗ್ರೇನ್ (1903), ಬಟ್ರ್ಯಾಂಡ್ ಆಫ್ ಬ್ರಿಟನಿ (1908), ದಿ ರೆಡ್‍ಸೇಂಟ್ (1909), ಜೋನ್ ಆಫ್ ದಿ ಟವರ್ (1911), ಬ್ರಿಜ್ ಆಫ್ ಡಿಸೈರ್ (1916), ದಿ ಅವೇಕನಿಂಗ್ (1919), ಟೆನ್ ಕಮ್ಯಾಂಡ್‍ಮೆಂಟ್ಸ್ (1931), ಸೆವೆನ್ ಮೆನ್ ಕೇಮ್ ಬ್ಯಾಕ್ (1934), ದಿ ವುಮನ್ ಅಟ್ ದಿ ಡೋರ್ (1937), ಕಾರ್ನ್ ಇನ್ ಈಜಿಪ್ಟ್ (1941)- ಇವು ಈತ ಬರೆದ ನಲವತ್ತು ಕಾದಂಬರಿಗಳಲ್ಲಿ ಮುಖ್ಯವಾದ ಕೆಲವು.

ಡೀಪಿಂಗ್‍ನಲ್ಲಿ ಭಾವುಕತೆ ತುಂಬಿದ್ದರೂ ಅಪೂರ್ವವಾದ, ಅರ್ಥಪೂರ್ಣವಾದ ಭಾಗ ಬೇಕಾದಷ್ಟಿದೆ.