ವಿಷಯಕ್ಕೆ ಹೋಗು

ಜಾರ್ಜ್ ಜೆಫ್ರಿ ಡಾಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾರ್ಜ್ ಜೆಫ್ರಿ ಡಾಸನ್ ( 1874-1944. ಇಂಗ್ಲಿಷ್ ಪತ್ರಿಕೋದ್ಯಮಿ. ದಿ ಟೈಮ್ಸ್ ಪತ್ರಿಕೆಯ ಸಂಪಾದಕ (1912-1919 ಮತ್ತು 1923-1941).

ಬದುಕು

[ಬದಲಾಯಿಸಿ]

ಇವನ ಮೊದಲ ಹೆಸರು ಜೆಫ್ರಿ ರಾಬಿನ್ಸನ್. ಯಾರ್ಕ್‍ಷೈರ್‍ನಲ್ಲಿದ್ದ ಪಿತ್ರಾರ್ಜಿತ ಆಸ್ತಿಗೆ ಉತ್ತರಾಧಿಕಾರಿಯಾದಾಗ 1917ರಲ್ಲಿ ಡಾಸನ್ ಎಂದು ಹೆಸರನ್ನು ಬದಲಾಯಿಸಿಕೊಂಡ. ಈಟನ್‍ನಲ್ಲಿ ಮತ್ತು ಆಕ್ಸ್‍ಫರ್ಡಿನ ಆಲ್ ಸೋಲ್ಸ್ ಕಾಲೇಜಿನಲ್ಲಿ ವಿದ್ಯೆ ಗಳಿಸಿದ ಮೇಲೆ ಬ್ರಿಟಿಷ್ ಸರ್ಕಾರದಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ. ದಕ್ಷಿಣ ಆಫ್ರಿಕದಲ್ಲಿ ಬ್ರಿಟಿಷ್ ಹೈ ಕಮಿಷನರ್ ಆಗಿದ್ದ ಲಾರ್ಡ್ ಮಿಲ್ನರ್‍ಗೆ ಆಪ್ತ ಕಾರ್ಯದರ್ಶಿಯಾಗಿದ್ದಾಗ ಆಕಸ್ಮಿಕವಾಗಿ ಇವನು ಪತ್ರಿಕೋದ್ಯಮಿಯಾದ. ಈತ ತೀರಿಕೊಂಡಿದ್ದು 1944ರ ನವೆಂಬರ್ 7ರಂದು.

ಪತ್ರಿಕೋದ್ಯಮಿಯಾಗಿ

[ಬದಲಾಯಿಸಿ]

ಮಿಲ್ನರನ ಪ್ರಭಾವದಿಂದ ಡಾಸನನಿಗೆ ಜೋಹಾನ್ಸ್‍ಬರ್ಗ್ ಸ್ಟಾರ್ ಪತ್ರಿಕೆಯ ಸಂಪಾದಕನ ಹುದ್ದೆ ದೊರಕಿತು. ತಾನು ಇಂಗ್ಲೆಂಡಿಗೆ ಹಿಂದಿರುಗಿದ ಮೇಲೂ ತನ್ನ ನೀತಿಗೆ ಬೆಂಬಲ ದೊರಕುವಂತಾಗಲೆಂಬುದು ಮಿಲ್ನರನ ಉದ್ದೇಶವಾಗಿತ್ತು. ಲಂಡನ್ನಿನ ದಿ ಟೈಮ್ಸ್ ಪತ್ರಿಕೆಯ ಜೋಹಾನ್ಸ್‍ಬರ್ಗ್ ಆವೃತ್ತಿಯ ಸಂಪಾದಕನಾಗಿ ಇವನು ಆ ಪತ್ರಿಕೆಯ ಹೊಸ ನಿರ್ದೇಶಕ ಲಾರ್ಡ್ ನಾರ್ತ್‍ಕ್ಲಿಫ್‍ನ ಗಮನ ಸೆಳೆದ. 1912ರಲ್ಲಿ ಜಿ. ಇ. ಬಕ್ಲ್‍ನ ಸ್ಥಾನದಲ್ಲಿ ಇವನಿಗೆ ದಿ ಟೈಮ್ಸ್ ಪತ್ರಿಕೆಯ ಸಂಪಾದಕನ ಹುದ್ದೆ ದೊರಕಿತು. ಆ ಪತ್ರಿಕೆಯ ಆಧುನೀಕರಣಕ್ಕೆ ಈತ ಅಪಾರವಾಗಿ ಶ್ರಮಿಸಿದ. ಪತ್ರಿಕೆಯ ಪುಟವಿನ್ಯಾಸದಲ್ಲಿ ಹಲವು ಮಾರ್ಪಾಟುಗಳಾದುವು. ತಲೆ ಬರಹಗಳಲ್ಲಿ ತುಂಬ ಸುಧಾರಣೆಯಾಯಿತು. ಓದುಗರ ಕಣ್ಣಿಗೆ ಆಕರ್ಷಕವಾಗಿರುವಂತೆ ಪತ್ರಿಕೆಯ ಭೌತರೂಪ ಬದಲಾಯಿಸಿತು. ಓದುಗರ ಸಮುದಾಯದಲ್ಲಿ ದಿ ಟೈಮ್ಸ್ ಪ್ರತಿಷ್ಠೆ ಬೆಳೆಯಿತು.

ನಾರ್ತ್‍ಕ್ಲಿಫ್ ಮತ್ತು ಜೆಫ್ರಿ ಡಾಸನರ ಸಂಬಂಧ ಸ್ವಲ್ಪ ಕಾಲ ಮಧುರವಾಗಿತ್ತು. ನಿಧಾನವಾಗಿ ನಾರ್ತ್‍ಕ್ಲಿಫ್ ತನ್ನ ತೀರ್ಮಾನಗಳನ್ನು ಅವನ ಮೇಲೆ ಹೇರಿದಾಗ ಡಾಸನ್‍ಗೆ ಕಿರಿಕಿರಿ ಆಯಿತು. ಡಾಸನ್ ತನ್ನ ತೀರ್ಮಾನಗಳಿಗೆ ಬಲವಾಗಿಯೇ ಅಂಟಿಕೊಂಡಿರುತ್ತಿದ್ದ. ಒಂದನೆಯ ಮಹಾಯುದ್ಧದ ಅನಂತರ ಯಾವ ರೀತಿಯ ಶಾಂತಿ ನೆಲಸಬೇಕು ಎಂಬುದರ ಬಗ್ಗೆಯೂ ನಾರ್ತ್‍ಕ್ಲಿಫ್‍ನೊಡನೆ ಡಾಸನನಿಗೆ ಅಭಿಪ್ರಾಯ ಭೇದ ಉಂಟಾಯಿತು. 1919ರಲ್ಲಿ ಈತ ಪತ್ರಿಕೆಯ ಸಂಪಾದಕತ್ವಕ್ಕೆ ರಾಜೀನಾಮೆ ನೀಡಿ, ರೌಂಡ್ ಟೇಬಲ್ ಎಂಬ ಪತ್ರಿಕೆಯ ಸಂಪಾದಕನಾಗಿದ್ದ. ಲಾರ್ಡ್ ನಾರ್ತ್‍ಕ್ಲಿಫ್ 1922ರಲ್ಲಿ ನಿಧನ ಹೊಂದಿದ ಮೇಲೆ ದಿ ಟೈಮ್ಸ್ ಪತ್ರಿಕೆಯ ಸಂಪಾದಕತ್ವವನ್ನು ಮತ್ತೆ ವಹಿಸಿಕೊಳ್ಳಲು ಅದರ ಹೊಸ ಮಾಲೀಕ ಜಾನ್ ಜೇಕಬ್ ಆಸ್ಟರನಿಂದ (ಅನಂತರ ಲಾರ್ಡ್ ಆಸ್ಟರ್) ಡಾಸನನಿಗೆ ಕರೆ ಬಂತು. 1923ರಿಂದ, 1941ರಲ್ಲಿ ನಿವೃತ್ತಿ ಹೊಂದುವ ವರೆಗೆ ಅವನು ಮತ್ತೆ ದಿ ಟೈಮ್ಸ್ ಪತ್ರಿಕೆಯ ಸಂಪಾದಕನಾಗಿದ್ದ.

ದಿ ಟೈಮ್ಸ್ ಪತ್ರಿಕೆಯ ಸಂಪಾದಕನಾಗಿ ಕಾಲು ಶತಮಾನಕ್ಕಿಂತ ಹೆಚ್ಚು ಕಾಲ ಈತ ದೇಶದ ವಿದ್ಯಮಾನಗಳ ಮೇಲೆ ಪ್ರಭಾವ ಬೀರಿದನಾದರೂ ಈ ಪ್ರಭಾವ ಮೂಲತಃ ಪತ್ರಿಕೋದ್ಯಮೀಯವಾದ್ದೆಂದು ಪರಿಗಣಿತವಾಗಿಲ್ಲ. ಪತ್ರಿಕೆ ಯಾವುದೇ ಸರ್ಕಾರ ಅಥವಾ ವ್ಯಕ್ತಿಗೆ ಬದ್ಧವಾಗಿರಬಾರದೆಂಬ, ಇವನ ಹಿಂದಿದ್ದ ಸಂಪಾದಕರು ತಳೆದಿದ್ದ, ನಿಲುವನ್ನು ಇವನು ತಳೆಯಲಿಲ್ಲ. ನಿಷ್ಪಕ್ಷಪಾತ ಧೋರಣೆಯ ಮೇಲೆ ನಿಂತ ಪತ್ರಿಕಾನೀತಿಗೆ ತಾನು ಸಾಧನವಾಗುವ ಬದಲು, ಪತ್ರಿಕೆಯನ್ನೇ ತನ್ನ ವೈಯಕ್ತಿಕ ನೀತಿಯ ಸಾಧನವನ್ನಾಗಿ ಮಾಡಿದನೆಂದು ಹೇಳಲಾಗಿದೆ. ನಾರ್ತ್‍ಕ್ಲಿಫನ ಈ ಬಗೆಯ ಧೋರಣೆಯನ್ನೊಪ್ಪದೆ ಈತ ಮೊದಲು ದಿ ಟೈಮ್ಸ್ ಪತ್ರಿಕೆಯ ಸಂಪಾದಕತ್ವಕ್ಕೆ ರಾಜೀನಾಮೆ ನೀಡಿದ್ದನಾದರೂ ಅನಂತರ ತಾನೂ ನಾರ್ತ್‍ಕ್ಲಿಫನಂತೆಯೇ ವರ್ತಿಸಿದ. ಡಾಸನ್ ಆಗಿನ ಬ್ರಿಟಿಷ್ ಪ್ರಧಾನಿಗಳ ನಿಕಟಾನುವರ್ತಿಯಾಗಿದ್ದ. ಸರ್ಕಾರದ ನೀತಿಗಿಂತ ಭಿನ್ನವಾದ ರೀತಿಯಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಂಥ ವಿದೇಶೀ ಸುದ್ದಿಗಳನ್ನು ಪೂರ್ವಪರೀಕ್ಷಣಕ್ಕೆ ಒಳಪಡಿಸಿ ಸೂಕ್ತ ತಿದ್ದುಪಡಿ ಮಾಡಿ ಪ್ರಕಟಿಸುವುದಕ್ಕೂ ಹಿಂದೆಗೆಯಲಿಲ್ಲ. ಆದರೂ ದಿ ಟೈಮ್ಸ್ ಪತ್ರಿಕೆಯ ಒಳ್ಳೆಯ ಸೇವೆ ಸಲ್ಲಿಸಿದ ಸಂಪಾದಕನೆಂದು ಈತ ಪ್ರಸಿದ್ಧನಾಗಿದ್ದಾನೆ.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: