ಜಾರ್ಜ್ ಕ್ರ್ಯಾಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರ್ಯಾಬ್, ಜಾರ್ಜ್ (1754-1832) ಆಂಗ್ಲಕವಿ,

ಬದುಕು[ಬದಲಾಯಿಸಿ]

ಉಪ್ಪಿನ ಸುಂಕವಸೂಲಿಗಾರನೊಬ್ಬನ ಮಗ. ಸಫಕ್‍ನ ಆಲ್ಡೆಬರ್ಗ್‍ನಲ್ಲಿ ಹುಟ್ಟಿದ. ವೈದ್ಯನೊಬ್ಬನ ಬಳಿ ಉದ್ಯೋಗಾರ್ಥಿಯಾಗಿ ನಿಂತರೂ ಆ ಕೆಲಸದಲ್ಲಿ ಮನಸ್ಸಿಲ್ಲದೆ ಸಾಹಿತ್ಯದಲ್ಲಿ ತನ್ನ ಅದೃಷ್ಟವನ್ನು ಕಾಣಬೇಕೆಂದು ಲಂಡನ್ನಿಗೆ ತೆರಳಿದ. ಆದರೆ ಅದರಲ್ಲೂ ಯಶಸ್ಸು ಕಾಣದೆ ತೀರ ನಿರಾಶನಾಗಿ ಕೊನೆಗೊಂದು ದಿನ ಎಡ್‍ಮಂಡ್ ಬರ್ಕನಿಗೆ ತನ್ನ ಕೆಲವು ಲೇಖನಗಳನ್ನು ಲಗತ್ತಿಸಿ ಒಂದು ಪತ್ರ ಬರೆದ. ಈ ವ್ಯವಹಾರದಿಂದಾಗಿ ಬರ್ಕ್ ಈತನನ್ನು ತನ್ನ ಮನೆಗೆ ಕರೆದುಕೊಂಡು ಹೋಗೆ ಫಾಕ್ಸ್, ರೆನಾಲ್ಡ್ಸ್ ಮುಂತಾದವರ ಪರಿಚಯ ಮಾಡಿಕೊಟ್ಟ. ಕೆಲಕಾಲ ಡ್ಯೂಕ್ ಆಫ್ ರಟ್‍ಲೆಂಡನ ರಾಜಗುರುವಾಗಿದ್ದು ಅನಂತರ ಟ್ರೋಬ್ರಿಜ್‍ನ ರೆಕ್ಟಾರ್ ಆಗಿ ನೇಮಕಗೊಂಡ.

ಸಾಹಿತ್ಯ[ಬದಲಾಯಿಸಿ]

1781ರಲ್ಲಿ ದಿ ಲೈಬ್ರರಿ ಎಂಬ ಗ್ರಂಥವನ್ನು ಪ್ರಕಟಿಸಿ ಕ್ರ್ಯಾಬ್ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದ. ಅದೇ ಸುಮಾರಿಗೆ ದಿ ವಿಲೇಜ್ ಎಂಬ ಪದ್ಯವನ್ನು ಹೊರತಂದ (1783). ಇದನ್ನು ಬರ್ಕ್ ಮತ್ತು ಜಾನ್ಸನರು ಪರಿಷ್ಕರಿಸಿದರು. ಅನಂತರದ ಕವನ ಸಂಕಲನದಲ್ಲಿ ಸೇರಿರುವ ದಿ ಪ್ಯಾರಿಷ್ ರಿಜಿಸ್ಟರ್ (1807) ಎಂಬ ನೀಳ್ಗವನದಲ್ಲಿ ಕ್ರ್ಯಾಬ್ ವರ್ಣನಾತ್ಮಕ ಚಿತ್ರಗಳನ್ನು ಹೆಣೆಯುವ ಸಾಮಥ್ರ್ಯವನ್ನು ಪ್ರಕಟಿಸಿದ್ದಾನೆ. ಇದು ಫಾಕ್ಸ್ ಮತ್ತು ವಾಲ್ಟರ್ ಸ್ಕಾಟರ ಪ್ರಶಂಸೆಯನ್ನು ಗಳಿಸಿತು. ದಿ ಬರೊ (1810) ಎಂಬುದು ಗ್ರಾಮವೊಂದರ ಬದುಕನ್ನು ಅನೇಕ ಕಥೆಗಳ ಮೂಲಕ ಚಿತ್ರಿಸುವ ಕೃತಿ. ದಿ ಟೇಲ್ಸ್ ಆಫ್ ದಿ ಹಾಲ್ (1812) ಎಂಬ ಗ್ರಂಥ ಜಾನ್ ಮರ್ರೆಯಿಂದ 3,000 ಪೌಂಡುಗಳನ್ನು ಕೊಡುಗೆಯಾಗಿ ಪಡೆದುದಲ್ಲದೆ ಕ್ರ್ಯಾಬ್‍ನ ಅಸಾಧಾರಣ ವರ್ಣನಾಶಕ್ತಿ ಮತ್ತು ಪಾತ್ರಚಿತ್ರಣಸಾಮಥ್ರ್ಯವನ್ನು ಸಾರಿತು. ಕ್ರ್ಯಾಬ್‍ನ ಮರಣಾನಂತರ ಅವನ ಮಗ ತಂದೆಯ ಎಲ್ಲ ಕೃತಿಗಳನ್ನೂ ಒಂದು ಸಂಪುಟದಲ್ಲಿ ಹೊರತಂದಾಗ ಅದರಲ್ಲಿ ಕೆಲವು ಹೊಸಕಥೆಗಳು ಸೇರಿದ್ದವು. ಕ್ರ್ಯಾಬ್‍ನದು ವಾಸ್ತವದೃಷ್ಟಿ. ಬದುಕನ್ನು ತಾನು ಕಂಡಂತೆ ಅದರ ಸಮಸ್ತ ಕೊರತೆಗಳೊಡನೆ ಈತ ಚಿತ್ರಿಸಿದ್ದಾನೆ. ಆದುದರಿಂದಲೇ ಈತನನ್ನು ಬಡವರ ಕವಿ ಎಂದು ಬಣ್ಣಿಸಲಾಗಿದೆ. ಪ್ರಕೃತಿಯ ಕಟುಚಿತ್ರಗಳನ್ನೇ ರಚಿಸಿದ್ದರೂ ಈತ ಶ್ರೇಷ್ಠವರ್ಣಶಿಲ್ಪಿ ಎಂದು ಬೈರನ್ನನು| ಕ್ರ್ಯಾಬ್‍ನನ್ನು ಪ್ರಶಂಸಿಸಿದ್ದಾನೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: