ವಿಷಯಕ್ಕೆ ಹೋಗು

ಜಾನ್ ಹ್ಯೂಲಿಂಗ್ಸ್ ಜಾಕ್‍ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
John Hughlings Jackson
ಚಿತ್ರ:John Hughlings-Jackson bust.jpg
Bust of John Hughlings Jackson, resident in the Institute of Neurology, London
ಜನನ(೧೮೩೫-೦೪-೦೪)೪ ಏಪ್ರಿಲ್ ೧೮೩೫
Providence Green, Green Hammerton, Yorkshire, England
ಮರಣ7 October 1911(1911-10-07) (aged 76)
London, England
ರಾಷ್ಟ್ರೀಯತೆEnglish
ಕಾರ್ಯಕ್ಷೇತ್ರNeurology

ಜಾಕ್‍ಸನ್, ಜಾನ್ ಹ್ಯೂಲಿಂಗ್ಸ್ {1835-1911). ಇಂಗ್ಲೆಂಡಿನ ಪ್ರಸಿದ್ಧ ನರವಿಜ್ಞಾನಿ.

ಬದುಕು

[ಬದಲಾಯಿಸಿ]

ಯಾರ್ಕ್‍ಷೈರಿನ ನೇರ್ಸ್‍ಬರೋ ಹತ್ತಿರ ಗ್ರೀನ್ ಹ್ಯಾಮರ್‍ಟನ್ನಿನಲ್ಲಿ 1835ರ ಏಪ್ರಿಲ್ 4ರಂದು ಜನನ. ಗ್ಲೌಸೆಸ್ಟರ್‍ಷೈರಿನ ಟ್ಯಾಡ್‍ಕ್ಯಾಸ್ಟರ್ ಮತ್ತು ನೈರ್ಸ್‍ವರ್ತಿನಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ. ಸೇಂಟ್ ಆಂಡ್ರೂ ವಿಶ್ವವಿದ್ಯಾಲಯದ ಎಂ.ಡಿ. ಡಿಗ್ರಿಯನ್ನು 1860ರಲ್ಲಿ ಪಡೆದ ಮೇಲೆ ವೈದ್ಯವೃತ್ತಿಯಲ್ಲಿ ಸೇವಾನಿರತನಾದ. ಮೂವತ್ತೈದು ವರ್ಷಗಳಿಗೆ ಮೇಲ್ಪಟ್ಟು ಈತನ ಸೇವಾವಧಿಯಿತ್ತು. ನರಮಂಡಲದ ರೋಗಗಳ ಸಂಬಂಧವಾಗಿ ಇವನು ಮೂಲಭೂತ ವ್ಯಾಸಂಗಗಳನ್ನು ಮಾಡಿ ಪ್ರಸಿದ್ದನಾದ. 1911 ಅಕ್ಟೋಬರ್ 7ರಂದು ಲಂಡನ್ನಿನಲ್ಲಿ ಜಾಕ್‍ಸನ್ ನಿಧನ ಹೊಂದಿದ.

ಕೊಡುಗೆ

[ಬದಲಾಯಿಸಿ]

ಆವರೆಗೆ ವೈದ್ಯರಿಗೆ ನರವಿಜ್ಞಾನದ ಮತ್ತು ನರಮಂಡಲದ ರೋಗಗಳ ವಿಚಾರವಾಗಿ ಸ್ಪಷ್ಟ ವೈಜ್ಞಾನಿಕ ತಿಳಿವು ಇರಲಿಲ್ಲ. ನರವಿಜ್ಞಾನದ ಅಧ್ಯಯನಕ್ಕೆ ಯೋಜನಾಬದ್ಧವಾದ ಕಾರ್ಯಕ್ರಮವನ್ನು ಜಾಕ್‍ಸನ್ ಏರ್ಪಡಿಸಿ ಆ ಕ್ಷೇತ್ರದಲ್ಲಿ ಅದ್ವಿತೀಯ ದುಡಿಮೆಗಾರನೆಂದು ಪರಿಗಣಿಸಲ್ಟಟ್ಟ. ಈತನ ಪ್ರಥಮ ವ್ಯಾಸಂಗ ಮೂಗರ ಮಸ್ತಿಷ್ಕದಲ್ಲಿ ಕಂಡುಬರುವ ನ್ಯೂನತೆಯ ವಿಷಯವನ್ನು ಕುರಿತದ್ದು. ಇದು 1864ರಲ್ಲಿ ಪ್ರಚುರಪಡಿಸಲ್ಪಟ್ಟಿತು. ಅನಂತರ ಅವನು ನಡೆಸಿದ ವ್ಯಾಸಂಗ ಮೂರ್ಛಾವಾಯುವಿನ ವಿಷಯವಾಗಿ. ಈ ಸಂಬಂಧದಲ್ಲಿ ಮಿದುಳಿನ ಕ್ರಿಯೆಯ ಸ್ಪಷ್ಟೀಕರಣವನ್ನೂ ಸ್ವಲ್ಪಮಟ್ಟಿಗೆ ಮಾಡಿದಂತಾಯಿತು. ಕೆಲವು ಸಂದರ್ಭಗಳಲ್ಲಿ ಮೂರ್ಛಾವಾಯು ಶರೀರದ ಯಾವುದೋ ನಿರ್ದಿಷ್ಟ ಭಾಗಕ್ಕೆ ಸೀಮಿತವಾಗಿರುವುದಕ್ಕೂ ಅದೇ ವೇಳೆ ದೃಷ್ಟಿದೋಷ ಊಂಟಾಗುವುದಕ್ಕೂ ಕಾರಣ ಮಿದುಳಿನ ಒಂದು ನಿರ್ದಿಷ್ಟ ಭಾಗ ರೋಗಿಷ್ಟವಾಗಿರುವುದೇ ಎಂದು ಪ್ರತಿಪಾದಿಸಿ ಮೆಡಿಕಲ್ ಟೈಮ್ಸ್ ಗೆಜೆಟ್ಟಿನಲ್ಲಿ ಪ್ರಚುರಪಡಿಸಿದ (1864). ಮೂರ್ಛಾರೋಗಲಕ್ಷಣಗಳ ನಿಕಟಪರಿಚಯದಿಂದ ಈತ ಮಿದುಳಿನ ವಿವಿಧ ಭಾಗಗಳು ನಿರ್ದಿಷ್ಟ ದೇಹಭಾಗಗಳ ಚಲನೆಗೆ ಸಂಬಂಧಪಟ್ಟಿವೆ ಎಂಬ ನಿರ್ಧಾರಕ್ಕೆ ಬಂದ. ಹೀಗಾಗಿ ಮೂರ್ಛಾರೋಗದಲ್ಲಿ ದೇಹದ ಒಂದು ನಿರ್ದಿಷ್ಟ ಭಾಗ ವಾಯುಚೇಷ್ಟೆಗೆ ಒಳಗಾಗುವ ವಿಧಕ್ಕೆ ಜಾಕ್‍ಸನ್‍ನ ಮೂರ್ಛಾರೋಗವೆಂದೇ ಹೆಸರು ಬಂತು. ಅನ್‍ಸಿನೇಟ್ ಎಂಬ ಇನ್ನೊಂದು ವಿಧದ ಮೂರ್ಛಾರೋಗ ಇದೆಯೆಂದೂ ಅದರಲ್ಲಿ ಮಿದುಳಿನ ಅನ್‍ಸಿನೇಟ್ ಉಬ್ಬಿನಲ್ಲಿ (ಗೈರಸ್) ರೋಗಸ್ಥಿತಿ ಉಂಟಾಗಿರುವುದೆಂದೂ ಜಾಕ್‍ಸನ್ ತೋರಿಸಿದ. ಮಿದುಳಿನಲ್ಲಿ ಜೀವಕೋಶಗಳು ಇದ್ದಕ್ಕಿದ್ದಂತೆ ಬಹುವಾಗಿ ಮತ್ತು ಶೀಘ್ರವಾಗಿ ಪ್ರಚೋದನೆಗಳನ್ನು ಉಂಟುಮಾಡುವುದರಿಂದ ವಾಯುಚೇಷ್ಟೆ ಕಾಣಬರುತ್ತದೆ ಎಂಬುದಾಗಿ ಜಾಕ್‍ಸನ್ 1873ರಲ್ಲಿ ನೀಡಿದ ವಿವರಣೆ ಇಂದಿಗೂ ಅತ್ಯುತ್ತಮ ವಿವರಣೆಯೇ ಆಗಿದೆ. ಅಲ್ಲದೆ ಆಧುನಿಕ ಪ್ರಯೋಗವಾದ ಎಲೆಕ್ಟ್ರೋಎನ್ಸೆಫಲೋಗ್ರಫಿ ಪರೀಕ್ಷೆ ಇದನ್ನು ಸ್ಥಿರೀಕರಿಸಿದೆ ಕೂಡ.

1884ರಲ್ಲಿ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನಲ್ಲಿ ಕ್ರೂನಿಯನ್ ಭಾಷಣವನ್ನು ಕೊಟ್ಟಾಗ ಜಾಕ್‍ಸನ್ ನರಮಂಡಲದ ವಿಕಾಸ ಮತ್ತು ರಚನೆಗಳ ವಿಷಯದಲ್ಲಿ ಒಂದು ಹೊಸ ತತ್ತ್ವವನ್ನು ಪ್ರತಿಪಾದಿಸಿದ. ಇದರ ಪ್ರಕಾರ ನರಮಂಡಲ ಮೂರು ಹಂತಗಳಲ್ಲಿ ರಚಿತವಾಗಿರುವುದೆಂದೂ ಒಂದು ಹಂತದ ಭಾಗ ತನ್ನ ಕ್ರ್ರಿಯೆಗೆ ಅದರ ಮೇಲಿನ ಹಂತದ ನಿರ್ದೇಶನಕ್ಕೆ ಒಳಪಟ್ಟಿದೆಯೆಂದೂ ಮೇಲಿನ ಹಂತ ರೋಗಕ್ಕೆ ಒಳಗಾದರೆ ಕೆಳ ಹಂತ ನಿರಂಕುಶವಾಗಿ ವರ್ತಿಸುವುದರಿಂದಲೇ ರೋಗಲಕ್ಷಣಗಳು ಉದ್ಭವಿಸುವುವೆಂದೂ ಜಾಕ್‍ಸನ್ ಹೇಳಿದ. ಇದರಿಂದ ನರಮಂಡಲದ ವಿಚಾರವಾಗಿ ಅನೇಕ ವ್ಯಾಸಂಗಗಳು ಪ್ರಾರಂಭವಾದವಲ್ಲದೆ ಮಾನಸಿಕ ರೋಗಗಳ ಮತ್ತು ನರಮಂಡಲದ ರೋಗಗಳ ವೈಚಿತ್ರ್ಯಗಳು ಸಹ ಬಲುಮಟ್ಟಿಗೆ ಅರ್ಥವಾಗುವಂತಾಯಿತು. ಮುಂದೆ 1898ರಲ್ಲಿ ಜಾಕ್‍ಸನ್ ಬ್ರಿಟಿಷ್ ಮೆಡಿಕಲ್ ಜರ್ನಲ್ಲಿನಲ್ಲಿ ಇದೇ ವಿಷಯದ ಮೇಲೆ ಹೆಚ್ಚಿನ ಸಂಗತಿಗಳನ್ನು ಪ್ರಕಟಿಸಿದ. ಮಿದುಳುಬಳ್ಳಿಯಲ್ಲಿ ಅನೈಚ್ಛಿಕ ಕ್ರಿಯೆಗಳಿಗೆ ಕಾರಣಭೂತವಾದ ಭಾಗಗಳ ಮೇಲೆ ನಡು ಮಿದುಳು(ಮಿಡ್ ಬ್ರೆಯ್ನ್) ಪ್ರಭಾವ ಬೀರಬಲ್ಲದೆಂದೂ ನಡು ಮಿದುಳಿನ ಮೇಲೆ ಮಸ್ತ್ತಿಷ್ಕದಲ್ಲಿ ಐಚ್ಛಿಕ ಕ್ರಿಯೆಗಳು ನಡೆಯುವಂತೆ ಮಾಡುವ ಭಾಗವನ್ನು ಪ್ರಭಾವಿಸಬಹುದೆಂದೂ ಇದರ ಮೇಲೆ ಬಲು ಜಟಿಲ ರಚನೆಯುಳ್ಳ ಮಸ್ತಿಷ್ಕದ ಮುಂಭಾಗ (ಪ್ರಿಫ್ರಾಂಟಲ್ ಲೋಬ್) ಪ್ರಭಾವ ಹೊಂದಿರುವುದೆಂದೂ ಆತ ವಿವರಿಸಿದ್ದಾನೆ. ಚಿತ್ತವಿಕಲ್ಪಕ್ಕೆ ರೋಗಪರಿಸ್ಥಿತಿಗಳಿಂದ ಮಿದುಳಿನ ಸೂಕ್ಷ್ಮರಚನೆಯಲ್ಲಿ ವ್ಯತ್ಯಾಸವಾಗುವುದು ಒಂದು ಪ್ರಮುಖ ಕಾರಣವಾಗಿರಬೇಕೆಂದು ಹೇಳಿದ ಮೊದಲಿಗರಲ್ಲಿ ಜಾಕ್ಸನ್ನನೂ ಒಬ್ಬ. ನರಮಂಡಲ ರೋಗಗಳ ತನಿಖೆಯಲ್ಲಿ ಆಫ್‍ತಾಲ್‍ಮಾಸ್ಕೋಪಿನ ಉಪಯುಕ್ತತೆಯ ಪ್ರಾಮುಖ್ಯವನ್ನು 1863ರಲ್ಲಿ ಜಾಕ್‍ಸನ್ ಒತ್ತಿ ಹೇಳಿದ್ದಾನೆ. ಇವನು ಶ್ರೇಷ್ಠರೀತಿಯ ಬೋಧಕನಾಗಿಲ್ಲದಿದ್ದರೂ ಈತನ ಬರೆವಣಿಗೆಗಳು ನರಮಂಡಲ ರೋಗಗಳ ಅಧ್ಯಯನಗಳಲ್ಲಿ ಇಂದಿಗೂ (1975) ಪ್ರಭಾವ ಬೀರುವಂತಿವೆ. ಇಂಗ್ಲೆಂಡಿನ ನರರೋಗ ಸಂಘ 1889ರಲ್ಲಿ ಈತನ ಗೌರವಾರ್ಥವಾಗಿ ಹ್ಯೂಲಿಂಗ್ಸ್-ಜಾಕ್‍ಸನ್ ಹೆಸರಿನ ವಾರ್ಷಿಕ ಭಾಷಣ ಮಾಲೆಯನ್ನು ಸ್ಥಾಪಿಸಿತು.