ಜಾನ್ ಡಿಕಿನ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ ಡಿಕಿನ್ಸನ್ ( 1732-1808). ಅಮೆರಿಕದ ಒಬ್ಬ ರಾಜನೀತಿಜ್ಞ. ರಾಜಕೀಯ ಬರೆಹಗಾರ.

ಬದುಕು, ರಾಜಕಾರಣ[ಬದಲಾಯಿಸಿ]

1732ರ ನವೆಂಬರ್ 8ರಂದು ಟಾಲ್ಬಟ್ ಕೌಂಟಿಯಲ್ಲಿ ಹುಟ್ಟಿದ. 1740ರಲ್ಲಿ ತಂದೆ ತನ್ನ ಕುಟುಂಬದೊಂದಿಗೆ ಡೆಲವೇರಿನ ಕೆಂಟ್ ಕೌಂಟಿಯಲ್ಲಿ ನೆಲೆಸಿದ. ಖಾಸಗಿ ಉಪಾಧ್ಯಾಯರಿಂದ ಪ್ರಾರಂಭದ ಶಿಕ್ಷಣ ಪಡೆದು, ಫಿಲಡೆಲ್ಫಿಯಲ್ಲಿ ನ್ಯಾಯಶಾಸ್ತ್ರವನ್ನೋದಿ 1753ರಲ್ಲಿ ಲಂಡನಿನ ಮಿಡ್ಲ್‍ಟೆಂಪಲ್‍ಗೆ ಹೋದ. 1757ರಲ್ಲಿ ಅಮೆರಿಕಕ್ಕೆ ಹಿಂದಿರುಗಿ, ಫಿಲಡೆಲ್ಫಿಯದಲ್ಲಿ ವಕೀಲಿಯನ್ನು ಪ್ರಾರಂಭಿಸಿದ. 1760ರಲ್ಲಿ ಸಾರ್ವಜನಿಕವನ್ನು ಪ್ರವೇಶಿಸಿದ. ಈತ ಪೆನ್ಸಿಲ್ವೇನಿಯದ ಪ್ರತಿನಿಧಿಯಾಗಿ ಸ್ಟಾಂಪು ಅಧಿನಿಯಮ ಸಮ್ಮೇಳನದಲ್ಲಿ ಭಾಗವಹಿಸಿದುದೇ ಅಲ್ಲದೆ, ಅದಕ್ಕೆ ಸಂಬಂಧಿಸಿದಂತೆ ಘೋಷಣೆಯೊಂದನ್ನು ರಚಿಸಿದ.

ಈತ ಬರೆದ ಪೆನ್ಸಿಲ್ವೇನಿಯದ ರೈತನೊಬ್ಬನಿಂದ ಪತ್ರಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾದುವು. ವಸಾಹತಿನಿಂದ ಸುಂಕವೆತ್ತಿ ಅದನ್ನು ಅಲ್ಲಿಯ ಅಧಿಕಾರಿಗಳ ಸಂಬಳ ಪಾವತಿ ಮಾಡಿಕೊಳ್ಳಲು ಬಳಸುತ್ತಿದ್ದ ಬ್ರಿಟಿಷ್ ನೀತಿಯನ್ನು ಈ ಲೇಖನಗಳಲ್ಲಿ ಪ್ರತಿಭಟಿಸಿದ. ಆದರೂ ಇವನು ತೀವ್ರಗಾಮಿಯಾಗಿರಲಿಲ್ಲ. ವ್ಯಾಪಾರವನ್ನು ನಿಯಂತ್ರಿಸಲು ತೆರಿಗೆ ವಿಧಿಸಲು ಬ್ರಿಟಿಷ್ ಪಾರ್ಲಿಮೆಂಟಿಗೆ ಹಕ್ಕಿದೆಯೆಂಬುದನ್ನು ಇವನು ಒಪ್ಪಿಕೊಂಡಿದ್ದ. ಆದರೆ ವರಮಾನಕ್ಕಾಗಿ ಸುಂಕ ವಿಧಿಸುವುದು ಸರಿಯಲ್ಲವೆಂಬುದು ಅವನ ವಾದವಾಗಿತ್ತು.

ಆ ಸಮಯದಲ್ಲಿ ಅಮೆರಿಕದ ಸ್ವಾತಂತ್ರ್ಯಾಕಾಂಕ್ಷೆ ಪ್ರಬಲವಾಗುತ್ತಿತ್ತು. ಖಂಡದ ವಿವಿಧ ಪ್ರದೇಶಗಳ ಪ್ರಥಮ ಕಾಂಗ್ರೆಸ್ಸಿನಲ್ಲಿ ಪೆನ್ಸಿಲ್ವೇನಿಯದ ಪ್ರತಿನಿಧಿಯಾಗಿ ಭಾಗವಹಿಸಿ, ದೊರೆಗೆ ಮನವಿಯನ್ನು ತಯಾರಿಸಿದವನು ಈತನೆ. ಎರಡನೆಯ ಕಾಂಗ್ರೆಸಿನಲ್ಲೂ ಇವನು ಪೆನ್ಸಿಲ್ವೇನಿಯದ ಪ್ರತಿನಿಧಿಯಾಗಿದ್ದ. ಅದು ಹೊರಡಿಸಿದ ವಸಾಹತಿನವರು ಶಸ್ತ್ರವನ್ನೆತ್ತಿಕೊಳ್ಳುವುದು ಏಕೆ ಅಗತ್ಯವೆಂಬುವನ್ನು ವಿವರಿಸುವ ಘೋಷಣೆಯನ್ನೂ ಇವನೇ ತಯಾರಿಸಿದ. ಆದರೆ 1776ರ ಬೇಸಿಗೆಯ ಆದಿಭಾಗದಲ್ಲಿ ಅಮೆರಿಕದ ಸ್ವಾತಂತ್ರ್ಯಘೋಷಣೆಯೊಂದನ್ನು ಇವನು ವಿರೋಧಿಸಿದ. ಇದರ ಬಗ್ಗೆ ಆತುರ ಸಲ್ಲದು: ಎಚ್ಚರಿಕೆಯಿಂದ ಮುಂದುವರಿಯಬೇಕು- ಎಂಬುದು ಇವನ ಭಾವನೆಯಾಗಿತ್ತು. ಆದರೆ ಸಾರ್ವಜನಿಕಾಭಿಪ್ರಾಯ ತನ್ನ ಭಾವನೆಗೆ ವಿರುದ್ಧವಾಗಿದ್ದುದು ಸ್ಪಷ್ಟವಾದಾಗ ಇವನು ಕಾಂಗ್ರೆಸಿಗೆ ಹಾಜರಾಗಲಿಲ್ಲ. ಅವನ ಸ್ಥಾನದಲ್ಲಿ ಬೇರೊಬ್ಬನನ್ನು ಆಯ್ಕೆ ಮಾಡಲಾಯಿತು. ಸ್ವಾತಂತ್ರ್ಯಘೋಷಣೆಗೆ ಇವನು ಸಹಿ ಹಾಕಲಿಲ್ಲ. ಸ್ವಲ್ಪ ಕಾಲ ಇವನು ರಾಜಕಾರಣದಿಂದ ನಿರ್ಗಮಿಸಿದ. ಇವನು ಇಂಗ್ಲೆಂಡಿಗೆ ವಿಧೇಯನಾಗಿದ್ದಾನೆಂಬ ಭಾವನೆಯೂ ಇತ್ತು. ಆದರೆ ಇದು ಸರಿಯಲ್ಲವೆಂಬುದು ಅನಂತರ ವ್ಯಕ್ತವಾಯಿತು. ರಾಷ್ಟ್ರಪ್ರೇಮಿ ಪಡೆಯಲ್ಲಿ ಇವನು ಭಾಗವಹಿಸಿದ. ಸ್ವಾತಂತ್ರ್ಯಘೋಷಣೆಯ ಬಗ್ಗೆ ಇವನು ತಳೆದ ನಿಲುವಿನಿಂದಾಗಿ ಪೆನ್ಸಿಲ್ವೇನಿಯ ಮತ್ತು ಡೆಲವೇರ್‍ಗಳಿಂದ ಹೊರಗೆ ಇವನ ಪ್ರಭಾವ ಬಹಳಮಟ್ಟಿಗೆ ತಗ್ಗಿತ್ತು. ಆದರೂ 1782ರಲ್ಲಿ ಇವನು ಪೆನ್ಸಿಲ್ವೇನಿಯ ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆ ಹೊಂದಿದ (ಇದು ಗವರ್ನರ್ ಸ್ಥಾನ). ಇವನು ಅಮೆರಿಕದ ಸಂವಿಧಾನಕ್ಕೆ ಸಹಿ ಹಾಕಿ, ಅದನ್ನು ಪೆನ್ಸಿಲ್ವೇನಿಯ ಮತ್ತು ಡೆಲವೇರ್‍ಗಳು ಒಪ್ಪಿಕೊಳ್ಳುವಂತೆ ಶ್ರಮಿಸಿದ. ಸಂವಿಧಾನವನ್ನು ಸಮರ್ಥಿಸಿ ಇವನು ಹಲವು ಪತ್ರಗಳನ್ನು ಬರೆದ. ಪೆನ್ಸಿಲ್ವೇನಿಯದ ಕಾರ್ಲೈಲ್‍ನಲ್ಲಿ 1783ರಲ್ಲಿ ಡಿಕಿನ್ಸನ್ ಕಾಲೇಜು ಸ್ಥಾಪಿತವಾದ್ದು ಇವನ ಗೌರವಾರ್ಥವಾಗಿ. ಇವನು ಅದರ ನ್ಯಾಸ ಮಂಡಲಿಯ ಪ್ರಥಮ ಅಧ್ಯಕ್ಷನಾಗಿದ್ದ.

ಡಿಕಿನ್ಸನ್ 1808ರ ಫೆಬ್ರವರಿ 14ರಂದು ತೀರಿಕೊಂಡ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: