ಜಾನ್ ಡನ್ಸ್‌ ಸ್ಕೋಟಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ ಡನ್ಸ್‌ ಸ್ಕೋಟಸ್ (1265-1308). ಫ್ರಾನ್ಸಿಸ್ಕನ್ ಪಂಥಕ್ಕೆ ಸೇರಿದ, ಸ್ಕಾಟ್ಲೆಂಡಿನ ತತ್ತ್ವಜ್ಞಾನಿ ಹಾಗೂ ದೇವತಾಶಾಸ್ತ್ರಜ್ಞ. ಸ್ಕೋಟಿಸಂ ಎಂಬ ಪಂಥದ ಪ್ರವರ್ತಕ.

ಬದುಕು[ಬದಲಾಯಿಸಿ]

ಹುಟ್ಟಿದ್ದು ಸ್ಕಾಟ್ಲೆಂಡಿನ ಡನ್ಸ್ ಎಂಬ ಹಳ್ಳಿಯಲ್ಲಿ. ಸಟಲ್ ಡಾಕ್ಟರ್ ಎಂದು ಪ್ರಸಿದ್ಧನಾಗಿದ್ದ ಈತ ಅಂದಿನ ಪ್ರತಿಭಾವಂತ ಚಿಂತನಕಾರರಲ್ಲಿ ಪ್ರಮುಖನಾಗಿದ್ದು ಅತಿಸೂಕ್ಷ್ಮ ತರ್ಕಕ್ಕೆ ಹೆಸರಾಗಿದ್ದ. ಬಾಲ್ಯದ ವಿದ್ಯಾಭ್ಯಾಸವನ್ನು ಡಮ್‍ಫ್ರೈಸ್‍ನಲ್ಲಿದ್ದ ತನ್ನ ಚಿಕ್ಕಪ್ಪನಿಂದ ಪಡೆದ. ಹದಿನೈದನೆಯ ವರ್ಷದಲ್ಲಿ ಫ್ರಾನ್ಸಿಸ್ಕನ್ ಪಂಥವನ್ನು ಸೇರಿ ನಾರ್ತಾಂಪ್ಟನ್‍ಲ್ಲಿ ಕ್ರೈಸ್ತದೀಕ್ಷೆ ಪಡೆದ (1291). ಅನಂತರ ದೇವತಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಪ್ಯಾರಿಸ್ಸಿಗೆ ಬಂದು, 1293ರಿಂದ 1296ರ ವರೆಗೆ ಅಧ್ಯಯನ ಮಾಡಿದ ಪದವಿ ಪಡೆಯಲು ಒಪ್ಪಿಸಬೇಕಿದ್ದ ಪ್ರಬಂಧವನ್ನು ಮುಗಿಸದೆ ಆಕ್ಸ್‍ಫರ್ಡಿಗೆ ಬಂದು 1237ರಿಂದ 1301ರ ವರೆಗೆ ಅನೇಕ ಉಪನ್ಯಾಸಗಳನ್ನು ಕೊಟ್ಟ. 1302ರಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ತನ್ನ ಪ್ರಬಂಧವನ್ನು ಒಪ್ಪಿಸಿದ. ಆದರೆ ಅದೇ ವರ್ಷದಲ್ಲಿ 8ನೆಯ ಬಾನಫಾಸನ ವಿರೋಧವಾಗಿ ಫಿಲಿಪ್ ದಿ ಫೇರ್ ಸಾಮಾನ್ಯಸಭೆಗೆ ಒಪ್ಪಿಸಿದ ಹೇಳಿಕೆಯನ್ನು ನಿರಾಕರಿಸಿದ್ದರಿಂದ ಸ್ವಲ್ಪ ಕಾಲಗಳವರೆಗೆ ಪ್ಯಾರಿಸ್‍ನಿಂದ ಉಚ್ಚಾಟನೆಗೊಂಡ. ಕೆಲವು ದಿವಸಗಳ ತರುವಾಯ ತನ್ನ ಗುರುವಿನ ಶಿಫಾರಸು ಪತ್ರದೊಂದಿಗೆ ಮತ್ತೆ ಪ್ಯಾರಿಸ್‍ಗೆ ಬಂದು 1305ರಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡನಲ್ಲದೆ ಅಲ್ಲಿಯೇ ಎರಡು ವರ್ಷಗಳ ಕಾಲ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ. ಅನಂತರ ಕೊಲೋನಿಗೆ ಬಂದು ಉಪನ್ಯಾಸಕನಾಗಿಯೇ ಮುಂದುವರಿದು ತಾನು ಬದುಕಿದ್ದ ಸ್ವಲ್ಪ ಅವಧಿಯಲ್ಲೇ ಒಂದು ವಿಚಾರಪೂರ್ಣ ತತ್ತ್ವವೊಂದನ್ನು ನಿರ್ಮಿಸಿ ತನ್ನ 42ನೆಯ ವಯಸ್ಸಿನಲ್ಲಿ ಮರಣಹೊಂದಿದ.

ಪ್ರತಿಪಾದಿಸಿದ ತತ್ವ[ಬದಲಾಯಿಸಿ]

ಸ್ಕೋಟಸನ ಸಿದ್ಧಾಂತದಲ್ಲಿ ತತ್ತ್ವವನ್ನು ಮತ್ತು ದೇವತಾಶಾಸ್ತ್ರಗಳ ಸಂಬಂಧ ನಿಕಟವೂ ಹೊಸದೂ ಆಗಿದ್ದರೂ ಕ್ರೈಸ್ತಮತದಿಂದ ವಿಭಿನ್ನವಾಗಿಲ್ಲ. ಅವೆರೋಯಿಸ್ಟ್ ಮತ್ತು ತಾಮಿಸ್ಟರ ತತ್ತ್ವಗಳ ಯಥಾರ್ಥವನ್ನು ಅಲ್ಲಗಳೆದು ಆಗಸ್ಟೈನ್, ಬೊನವೆಂಚರ್, ಅವಿಸೆನ್ನ ಮತ್ತು ಆಕ್ಸ್‍ಫರ್ಡಿನ ಫ್ರಾನ್ಸಿಸ್ಕನ್ ಪ್ರಾಚೀನ ಸಂಪ್ರದಾಯಗಳ ಆಧಾರದ ಮೇಲೆ ತನ್ನ ಹೊಸ ತತ್ತ್ವಶಾಸ್ತ್ರ ಮತ್ತು ದೇವತಾಶಾಸ್ತ್ರಗಳನ್ನು ರೂಪಿಸಿದ. ಇವನು ಪ್ರತಿಪಾದಿಸಿದ ತತ್ತ್ವಗಳು ಇವು.

ಸ್ಕೋಟಸನ ಪ್ರಕಾರ ವಿಚಾರಯೋಗ್ಯವಾದ ಯಾವ ಪ್ರಥಮ ವಸ್ತುವೇ ಆಗಲಿ ಆಗಸ್ಟೀನಿಯನ್ ವಾದದಂತೆ ದೈವಾಂಶವನ್ನೂ ಅರಿಸ್ಟೋಟಲಿಯನ್ನರ ವಾದದಂತೆ ಲೌಕಿಕ ಗುಣವನ್ನೂ ಹೊಂದಿರುವುದಿಲ್ಲ; ಆದರೆ ಅದು ತನ್ನಷ್ಟಕ್ಕೆ ತಾನೇ ಪರಿಶುದ್ಧ ಸ್ವರೂಪದ್ದಾಗಿರುತ್ತದೆ. ಇಂಥ ಸ್ವರೂಪ ಸರ್ವವ್ಯಾಪಿಯಾಗಿದ್ದು ಅದು ಎಲ್ಲ ಮುಖಗಳಲ್ಲಿ. ಎಲ್ಲ ಹಂತಗಳಲ್ಲಿ ಸತ್ಯವಾಗಿರುತ್ತದೆ. ಅನಂತ ಹಾಗೂ ಅನಂತವಲ್ಲದ ಸ್ವರೂಪಗಳು ಸಹಜವಾಗಿ ಸರ್ವವ್ಯಾಪಿಯಾದ ಪ್ರಥಮ ಸ್ವರೂಪದ ಅಂಗಗಳೇ ಆಗಿವೆ. ಅವುಗಳಿಗಿರುವ ವ್ಯತ್ಯಾಸಗಳನ್ನು ನಿರ್ದಿಷ್ಟವಾಗಿ ಗುರುತಿಸಿದ ಈತ ವಿಶ್ವ ದೇವಕವಾದ ಮತ್ತು ಉದ್ಗಮಗಳಲ್ಲಿನ ಔಚಿತ್ಯವನ್ನು ಪ್ರಶ್ನಿಸಿದ್ದಾನೆ.

ಮೂಲದ್ರವ್ಯದ ಬಗೆಗಿನ ಇವನ ಕಲ್ಪನೆ ಆಗಸ್ಟೀನಿಯನ್ನರು ಅರ್ಥೈಸಿರುವುದಕ್ಕಿಂತ ವಿಭಿನ್ನವಾಗಿದೆ. ಎಲ್ಲ ಲೌಕಿಕ ವಸ್ತುಗಳೂ ದ್ರವ್ಯ ಮತ್ತು ರೂಪುಗಳನ್ನು ಹೊಂದಿವೆ ಎಂದು ಸಮಕಾಲೀನವಾದವನ್ನು ಈತ ಒಪ್ಪಿದರೂ ಅವೆರಡೂ ಸಾಪೇಕ್ಷ ಹಾಗೂ ನೈಜ ಎಂದಿದ್ದಾನೆ. ಅರಿಸ್ಟಾಟಲಿಯನ್ನರಂತೆ ಮೂಲದ್ರವ್ಯ ಶುದ್ಧ ಸಾಮಥ್ರ್ಯವುಳ್ಳದ್ದಾಗಿರದೆ ಹೆಚ್ಚಿನ ಪರಿಪೂರ್ಣತೆಯನ್ನು ಪಡೆಯಬಲ್ಲ ಗುಣ ಹೊಂದಿರುತ್ತದೆ ಎಂಬುದು ಇವನ ಅಭಿಪ್ರಾಯ. ಆದ್ದರಿಂದ ದ್ರವ್ಯ ಮತ್ತು ರೂಪಗಳು ಬೇರೆ ಇದ್ದರೂ ಅವು ಅವಿಭಾಜ್ಯ. ಇಂಥ ಅವಿಭಾಜ್ಯಗುಣ ವಾಸ್ತವವೇ ವಿನಾ ಎಂದಿಗೂ ಅನಿರೀಕ್ಷಿತವಾಗುವುದಿಲ್ಲ. ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವಿಗೂ ಸಾಮಾನ್ಯ ಗುಣವೊಂದು ಇರುತ್ತದೆ. ಈ ಗುಣ ಸಾರ್ವತ್ರಿಕತ್ವದೆಡೆಗೆ ತಟಸ್ಥ ಭಾವವನ್ನು ಹೊಂದಿದೆ. ಇಂಥ ಸಾಮಾನ್ಯ ಗುಣವನ್ನು ಸ್ವಕೀಯವನ್ನಾಗಿಸಬೇಕಾದರೆ ನಿಶ್ವಿತ ತತ್ತ್ವ ಒಂದನ್ನು ಬಳಸಬೇಕಾಗುತ್ತದೆ. ಸ್ಕೋಟಸನ ಈ ತತ್ತ್ವವೇ ತನ್ನತನ (ದಿಸ್‍ನೆಸ್).

ಭೌತಿಕ ಶರೀರವಾಗಲು ದ್ರವ್ಯ ಮೊದಲು ಜಡರೂಪದ ಅಕಾರವನ್ನು ಪಡೆಯುತ್ತದೆ. ಇದಿಲ್ಲದೆ ದ್ರವ್ಯವೇ ದೇಹವಾಗಲಾರದು. ಆದರೆ ಜಡರೂಪದೊಂದಿಗೆ ದ್ರವ್ಯವೂ ಕಳಚಿದಾಗ ಆತ್ಮವೆಂಬ ಇನ್ನೂ ಶ್ರೇಷ್ಠಮಟ್ಟದ ರೂಪವನ್ನು ಪಡೆಯುತ್ತದೆ. ಆದ್ದರಿಂದ ಜಡರೂಪದ ಆಕಾರವೇ ಅಂತಿಮ ಹಾಗೂ ವಾಸ್ತವ ಸತ್ಯ ಮತ್ತು ಸ್ವಕೀಯ ನಿರ್ಣಯವೂ ಆಗಿದೆ. ಆತ್ಮ ದೇಹದಿಂದ ಹೊರಬಂದಾಗ ಅವೆರಡಕ್ಕಿರುವ ನಿರ್ದಿಷ್ಟ ವ್ಯತ್ಯಾಸಗಳನ್ನು ಗುರುತಿಸಬಹುದು ಎಂಬುದನ್ನು ಸ್ಕೋಟಸನ ತತ್ತ್ವದಲ್ಲಿ ಕಾಣಬಹುದು. ವಸ್ತುಗಳ ಕೆಲವು ವಿಶಿಷ್ಟ ಅಂಶಗಳೆಲ್ಲ ಬೌದ್ಧಿಕ ನಿಲವಿಗೆ ಒಳಪಡುವುದಿಲ್ಲ. ಹೀಗೆ ಬೌದ್ಧಿಕ ನಿಲವಿಗೆ ಸಿಕ್ಕಲಾರದ ಮತ್ತು ಸಿಗುವ ಅಂಶಗಳ ನಡುವೆ ಸ್ಪಷ್ಟ ಭಿನ್ನತೆ ಎಂಬ ಅಂಶವೊಂದಿದೆ. ಇದನ್ನು ಆತ್ಮ ಮತ್ತು ಅದರ ಶಕ್ತಿಗಳ ಮಧ್ಯೆ ಇರುವ ವಿಶಿಷ್ಟ ಅಂಶಗಳನ್ನು ಉದಹರಿಸುವುದರಿಂದ ಸಮರ್ಥಿಬಹುದು.

ದೇವರ ಅಸ್ತಿತ್ವವನ್ನು ಪ್ರತಿಪಾದಿಸಲು ತಾಮಸ್ ಅಕ್ವಿನಸ್‍ನಂತೆ ವಸ್ತುಗಳ ಇರುವಿಕೆಯಿಂದ ಪ್ರಾರಂಭಿಸಿದೆ. ಜೀವಿಗಳ ಆಧ್ಯಾತ್ಮಿಕ ಹಾಗೂ ಗಣನೀಯ ಅಂಶಗಳನ್ನು ನಿರೂಪಿಸುವುದರ ಮೂಲಕ ತನ್ನ ತತ್ತ್ವವನ್ನು ಆರಂಭಿಸಿದ್ದಾನೆ. ಹುಟ್ಟಿದ ಎಲ್ಲ ಜೀವಿಗಳಲ್ಲಿ ಆಂತರಿಕ ಸತ್ತ್ವವಿದೆ ಎಂಬುದನ್ನು ಗುರುತಿಸಿದ ಸ್ಕೋಟಸ್ ಇದಕ್ಕೆಲ್ಲ ನಿಮಿತ್ತಕಾರಣನೊಬ್ಬ ಇರಲೇಬೇಕು; ಕಾರ್ಯಕಾರಣ ಸಂಬಂಧಕ್ಕೆ ಒಳಪಟ್ಟಿರುವ ಎಲ್ಲ ವಸ್ತುಗಳೂ ವಿಶಿಷ್ಟಶಕ್ತಿಯಿಂದ ಬಂದಿವೆ. ಇಂಥ ವಿಶಿಷ್ಟಶಕ್ತಿಯೇ ದೇವರು. ದೇವರಿಗೆ ಸ್ವಂತ ಅಸ್ತಿತ್ವ ಇದ್ದರೂ ಕೆಲವೊಮ್ಮೆ ಬೇರೊಂದು ಕಾರಣಕ್ಕಾಗಿ ಅಸ್ತಿತ್ವಕ್ಕೆ ಬರುತ್ತಾನೆ. ಆದ್ದರಿಂದ ಎಲ್ಲ ವಸ್ತುಗಳ ಉಗಮಕ್ಕೆ ಕಾರಣಕ್ಕಾಗಿ ಅಸ್ತಿತ್ತ್ವಕ್ಕೆ ಬರುತಾನೆ. ಆದ್ದರಿಂದ ಎಲ್ಲ ವಸ್ತುಗಳ ಉಗಮಕ್ಕೆ ಕಾರಣ ಪುರಷನಾದ ದೇವರು ನಿಮಿತ್ತಕಾರಣನೂ ಪ್ರಮುಖ ಅಸ್ತಿತ್ವ ಉಳ್ಳವನೂ ಆಗಿದ್ದಾನೆ-ಎಂದಿದ್ದಾನೆ. ಸ್ಕೋಟಸನ ಪ್ರಕಾರ ದೇವತತ್ತ್ವ ಅನಂತವಾಗಿರುವುದರಿಂದ ಅನಂತವಲ್ಲದ ಸ್ವರೂಪಿಗಳ ಸೃಷ್ಟಿಗೆ ಕಾರಣವಾಗಿದೆ. ಅದು ಎಲ್ಲವುಗಳ ಅಂತಿಮ ಕಾರಣವೂ ಆಗಿರುವುದರಿಂದ ಅನಂತವಾಗಿರಲೇಬೇಕು. ಅನಂತ ಪ್ರತಿಭೆಯಿಂದ ಕೂಡಿದ್ದು ಸರ್ವಜ್ಞಾನಿಯಾಗಿದೆ. ಎಲ್ಲ ಜೀವಿಗಳ, ಒಲವು, ಆಸೆಗಳು ಸ್ವಾಭಾವಿಕವಾಗಿ ಅದರೆಡೆಗೆ ಕೇಂದ್ರಿತವಾಗಿರುತ್ತವೆ. ನೀತಿಯುತ ಬಾಳ್ವೆ ಹಾಗೂ ಸಮಾಜದ ಉಪಯುಕ್ತ ಕಟ್ಟುಕಟ್ಟಳೆಗಳು ಮನುಷ್ಟನನ್ನು ಯೋಗ್ಯನೂ ಆಲೋಚನಾಶೀಲನೂ ಆಗಿರುವಂತೆ ಮಾಡುತ್ತವೆ. ಅವನು ಕೈಗೊಳ್ಳುವ ದೈವ ಸಂಬಂಧ ಕ್ರಿಯೆಗಳು ದೈವಿಕ ಅಂಶಗಳನ್ನೇ ಒಳಗೊಂಡಿದ್ದು ತರ್ಕಯೋಗ್ಯವಾಗಿರುತ್ತವೆ.

ಮನುಷ್ಯನಿಗೆ ಸಂಪೂರ್ಣ ಸ್ವಾತಂತ್ರ್ಯವಿದ್ದಾಗ ಮಾತ್ರ ಅವನ ಸ್ವಭಾವದ ಪೂರ್ಣ ಅಭಿವ್ಯಕ್ತಿ ಸಾಧ್ಯ. ಮಾನವ ಸ್ವತಂತ್ರ್ಯ ದೇವರ ಸ್ವಾತಂತ್ರ್ಯದಷ್ಟೇ ಶ್ರೇಷ್ಠವಾದದ್ದು, ಇದರಿಂದ ಜ್ಞಾನ ಮತ್ತು ಇಚ್ಛೆಗಳು ಅಭಿವ್ಯಕ್ತಗೊಳ್ಳುತ್ತವೆ. ಜ್ಞಾನವು ಕ್ರಿಯೆಗಿಂತ ಹೆಚ್ಚಿನದಾಗಿದ್ದು ಹುಟ್ಟಿನಲ್ಲೂ ಮುಂದಿದೆ. ಆದರೆ ಇಚ್ಛೆ ಜ್ಞಾನದ ಮೇಲೆ ಪ್ರಭುತ್ವ ಹೊಂದಿರುವುದರಿಂದ ಅದು ಜ್ಞಾನಕ್ಕಿಂತ ಪ್ರಮುಖ. ಇಚ್ಛೆ ಮತ್ತು ಜ್ಞಾನಗಳಿಗಿರುವ ನಿರ್ದಿಷ್ಟ ಗಡಿಯನ್ನು ಗುರುತಿಸದಿದ್ದರೂ ಅವುಗಳು ಎಷ್ಟರ ಮಟ್ಟಿಗೆ ಮನುಷ್ಯನ ತರ್ಕಗುಣ, ಪ್ರೀತಿ ಮತ್ತು ಸ್ವಕ್ರಿಯೆಗಳಲ್ಲಿ ವ್ಯಕ್ತವಾಗಿವೆ ಎಂಬುದನ್ನು ತೋರಿಸಿ ಇವಕ್ಕೆಲ್ಲ ಸ್ವಾತಂತ್ರ್ಯ ಆವಶ್ಯಕವೆಂದು ಸ್ಕೋಟಸ್ ಅಭಿಪ್ರಾಯಪಟ್ಟಿದ್ದಾನೆ.

ದೇವತಾಶಾಸ್ತ್ರದ ಬಗ್ಗೆ ಸ್ಕೋಟಸ್ ತಳೆದಿರುವ ನಿಲವಿನಿಂದ ದೇವರ ಬಗ್ಗೆ ಇರುವ ಇವನ ಅದಮ್ಯ ಪರಿಜ್ಞಾನದ ಅರಿವಾಗುತ್ತದೆ. ಅನಂತವೂ ಕರುಣಾಮಯಿಯೂ ಒಲುಮೆಯ ಪ್ರತೀಕವೂ ಆಗಿರುವ ದೇವರಿಗೆ ತನ್ನದೇ ಆದ ಜ್ಞಾನವಿದ್ದು ಅದು ಮನುಷ್ಯ ಸಂಬಂಧ ಜ್ಞಾನದಿಂದ ಬೇರೆಯಾಗಿರುತ್ತದೆ. ದೈವ ಸಂಬಂಧಜ್ಞಾನವನ್ನು ಪಡೆಯಲು ದೈವಸಂಬಂಧ ವಿಚಾರ ಮಾಡುವುದು ಅಗತ್ಯ. ದೇವರ ಅವತಾರ ಕೇವಲವಾಗಿರದೆ ಅದು ಸ್ವಂತ ಇಚ್ಛೆ ಮತ್ತು ಜೀವಿಗಳ ಮೇಲಿನ ಪ್ರೇಮದಿಂದಾಗಿರುತ್ತದೆ. ಕ್ರಿಸ್ತ ಬೇರೆಯವರ ಪಾಪವನ್ನು ಪರಿಹರಿಸಲು ದೇವದೂತನಾಗಿ ಬಂದ ಎಂಬ ಮಾತು ಸರಿಯಲ್ಲ. ಮಾನವರ ಮೇಲಿದ್ದ ಪ್ರೇಮದಿಂದ ಅವನು ಅವತರಿಸಿದ. ಕ್ಷಮಾಮೂರ್ತಿಯಾಗಿ ಅವತರಿಸುವುದು ದೇವರ ದೃಷ್ಟಿಯಲ್ಲಿ ಎರಡನೆಯ ಕಾರಣವೇ ವಿನಾ ಮೊದಲನೆಯದಲ್ಲ.

ಸ್ಕೋಟಸನ ದೇವತಾಶಾಸ್ತ್ರದಲ್ಲಿ ಪ್ರತಿಪಾದಿತವಾಗಿರುವ ಮೇರಿಯು ಪರಿಪೂರ್ಣಳೂ ಕಳಂಕರ ಹಿತಳೂ ಆಗಿದ್ದಾಳೆ ಎಂದಿದ್ದಾನೆ. ಪ್ರಕೃತಿಯ ಭವ್ಯತೆ ಮತ್ತು ರಮ್ಯತೆಗಳಲ್ಲಿ ದೈವತ್ವ ಕಾಣುವ ಪ್ರಯತ್ನ ದೇವತಾಶಾಸ್ತ್ರದಲ್ಲಿದೆ. ಪ್ರಕೃತಿಯ ಪರಿಪೂರ್ಣತೆ ದೇವರ ಅನುಗ್ರಹದಿಂದ; ದೇವತಾಶಾಸ್ತ್ರವು ಕೇವಲ ಊಹೆಗಳಿಂದ ಕೂಡಿದರೆ ಅದು ನಿತ್ಯ ಬದುಕಿಗೆ ಹತ್ತಿರವಾಗಬೇಕೆಂದೂ ಲೌಕಿಕ ವಸ್ತುಗಳೆಡೆಗೆ ತೋರಿಸುವ ಪ್ರೇಮಕ್ಕಿಂತ ಹೆಚ್ಚು ಪ್ರೇಮವನ್ನು ದೇವರ ಬಗ್ಗೆ ಮೂಡಿಸುವಂತಿರಬೇಕೆಂದೂ ಹೇಳಿದ್ದಾನೆ. ಸ್ಕೋಟಸನ ತತ್ತ್ವ ಮತ್ತು ದೇವತಾಶಾಸ್ತ್ರಗಳಲ್ಲಿ ಬೇರೆಯವರನ್ನು ವಿಮರ್ಶಿಸುವ ಉದ್ದೇಶವನ್ನೇ ಅಲ್ಲದೆ ಶ್ರೇಷ್ಠಮಟ್ಟದ ಕ್ರೈಸ್ತಪರಂಪರೆಯನ್ನು ತತ್ತ್ವಗಳ ಮೂಲಕ ಸ್ಥಾಪಿಸುವ ಪ್ರಯತ್ನವನ್ನೂ ಕಾಣಬಹುದು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: