ವಿಷಯಕ್ಕೆ ಹೋಗು

ಜಾನ್ ಗುಂಥರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ ಗುಂಥರ್ ( 1901-70) ಹೆಸರಾಂತ ಗ್ರಂಥಕರ್ತ, ಅಮೆರಿಕದ ಪತ್ರಿಕೋದ್ಯಮಿ.

ಚಿತ್ರ:John Gunther.jpg
John Gunther

ಆರಂಭಿಕ ಬದುಕು

[ಬದಲಾಯಿಸಿ]

ಷಿಕಾಗೋ ನಗರದಲ್ಲಿ 1901ರ ಆಗಸ್ಟ್ 30ರಂದು ಹುಟ್ಟಿದ. ಅದೇ ಊರಿನ ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾಭ್ಯಾಸವಾಯಿತು. ಆಗಿನಿಂದಲೇ ಬರೆಯುವ ಹವ್ಯಾಸಕ್ಕೆ ಬಿದ್ದು ಡೆಯ್ಲಿಮರೂನ್ ಎಂಬ ಶಾಲಾಪತ್ರಿಕೆಯ ಸಂಪಾದಕನೂ ಆಗಿದ್ದ. ರಷ್ಯದ ಕ್ರಾಂತಿಯನ್ನು ಕುರಿತು ಈತ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬುಕ್ಮನ್ ಮತ್ತು ಸ್ಮಾರ್ಟ್ ಸೆಟ್ ಎಂಬ ಜನಪ್ರಿಯ ಮಾಸಿಕಗಳ ಪ್ರತಿಸಂಚಿಕೆಯಲ್ಲೂ ಈತನ ಲೇಖನಗಳು ಇರುತ್ತಿದ್ದುವು. ಷಿಕಾಗೋ ವಿಶ್ವವಿದ್ಯಾಲಯದ ಪದವೀಧರನಾದ ಮೇಲೆ 1924ರಲ್ಲಿ ಷಿಕಾಗೋ ಡೆಯ್ಲಿನ್ಯೂಸ್ ಪತ್ರಿಕೆಯ ಲಂಡನ್ ಶಾಖೆಯಲ್ಲಿ ವರದಿಗಾರನಾಗಿ ನೇಮಕಗೊಂಡು ಇಂಗ್ಲೆಂಡಿಗೆ ಪಯಣ ಬೆಳೆಸಿದ. ಪ್ರತಿಭೆ ಹಾಗೂ ಲೇಖನಸಾಮರ್ಥ್ಯಗಳು ಪ್ರಕಾಶವಾಗುವಂಥ ಅನುಕೂಲವಾದ ಸಂದರ್ಭಗಳೇ ಒದಗಿ ಬಂದುದರಿಂದ ಗುಂಥರನ ಅದೃಷ್ಟ ಕುದುರಿತು. ಇಂಗ್ಲೆಂಡ್ ಮತ್ತು ಯುರೋಪ್‍ಗಳಲ್ಲಿನ ಪ್ರಮುಖ ರಾಜಧಾನಿಗಳಲ್ಲಿ 1924 ರಿಂದ 1936ರ ವರೆಗಿನ ಹನ್ನೆರಡು ವರ್ಷಕಾಲ ಡೆಯ್ಲಿನ್ಯೂಸ್ ಪತ್ರಿಕೆಯ ವರದಿಗಾರನಾಗಿ ಕೆಲಸಮಾಡಿದ. ಈತ ಬರ್ಲಿನ್, ವಿಯನ್ನ, ಮಾಸ್ಕೊ, ರೋಮ್, ಪ್ಯಾರಿಸ್ ಮುಂತಾದ ಪ್ರಮುಖ ಕೇಂದ್ರಗಳಲ್ಲಿರುವಾಗಲೇ ಜಾಗತಿಕ ಭವಿಷ್ಯವನ್ನೇ ಬದಲಾಯಿಸುವಂಥ ರಾಜಕೀಯ ಸನ್ನಾಹಗಳು ಯುರೋಪಿನಲ್ಲಿ ನಡೆದಿದ್ದವು. ಅನುಕೂಲವಾದ ಸನ್ನಿವೇಶಗಳಲ್ಲಿ ಜನನಾಯಕರಾಗಿ ಮೇಲೆ ಬಂದು ಪ್ರಚಂಡ ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್, ಮುಸ್ಸೋಲಿನಿ, ಸ್ಟ್ಯಾಲಿನ್ - ಈ ತ್ರಿಮೂರ್ತಿಗಳ ಬಗ್ಗೆ ತಿಳಿಯಲು ಇಡೀ ಜಗತ್ತೇ ಅತ್ಯಂತ ಕುತೂಹಲಿಯಾಗಿತ್ತು. ಎರಡನೆಯ ಮಹಾಯುದ್ಧದ ಆಸ್ಫೋಟನೆಗೆ ಸಿದ್ಧವಾಗುತ್ತಿದ್ದ ಯುರೋಪಿನ ಮಹತ್ತರ ರಾಜಕೀಯ ಪರಿಸ್ಥಿತಿಯನ್ನೆಲ್ಲ ಪ್ರತ್ಯಕ್ಷದರ್ಶಿಯಾಗಿ ವರದಿಮಾಡುವ ವಿಶೇಷ ಅವಕಾಶ ಗುಂಥರನಿಗೆ ದೊರಕಿತು.

ಇದೇ ಅವಧಿಯಲ್ಲಿ ಗುಂಥರನ ಮದುವೆ ಆಯಿತು. ಗುಂಥರ್ ತುಂಬ ಸರಸಿ, ಸ್ನೇಹಶೀಲ. ಒಳ್ಳೆಯ ಆರೋಗ್ಯಭಾಗ್ಯವನ್ನು ಪಡೆದಿದ್ದ. ಭೋಜನ, ಪೇಯಗಳಲ್ಲಿ ರಸಜ್ಞನೆನಿಸಿದ್ದ.

ವೃದ್ಧಾಪ್ಯದಲ್ಲಿ ನ್ಯೂಯಾರ್ಕ ನಗರದಲ್ಲಿದ್ದುಕೊಂಡು ಗುಂಥರ್ ಬ್ರಿಟಿಷ್, ಅಮೆರಿಕನ್ ಮತ್ತು ಯುರೋಪಿಯನ್ ಅಗ್ರಪತ್ರಿಕೆಗಳಿಗೆ ಕಾಲೋಚಿತ ಲೇಖನಗಳನ್ನು ಬರೆದ. ಈತ 1970ರ ಮೇ 29ರಂದು ನ್ಯೂಯಾರ್ಕ್ನಲ್ಲಿಯೆ ನಿಧನನಾದ.

ಪತ್ರಿಕೋದ್ಯಮದಲ್ಲಿ ಈತನಷ್ಟು ಲೋಕವಿಖ್ಯಾತಿಯನ್ನು ಪಡೆದ ಭಾಗ್ಯಶಾಲಿಗಳು ಅಪೂರ್ವ.

ಬರಹಗಾರನಾಗಿ

[ಬದಲಾಯಿಸಿ]

ವರದಿಗಾರನಾಗಿ ಪೋರ್ಚುಗಲ್ ಒಂದು ಬಿಟ್ಟು ಉಳಿದೆಲ್ಲ ಭಾಗಗಳಲ್ಲೂ ಈತ ಪ್ರವಾಸ ಮಾಡಬೇಕಾಗಿ ಬಂತು. ಆಗ ಸಂಗ್ರಹಿಸಿದ ಸುದ್ದಿ ಸಮಾಚಾರಗಳನ್ನೇ ರುಚಿಗಟ್ಟಾದ ಶೈಲಿಯಲ್ಲಿ ಮಿತ್ರ ಸಂಭಾಷಣೆಯಷ್ಟು ಸರಸವಾಗಿ ಇನ್ಸೈಡ್ ಯುರೋಪ್ ಎಂಬ ತನ್ನ ಬೃಹತ್ ಗ್ರಂಥದಲ್ಲಿ ಗುಂಥರ್ ನೆಯ್ದಿದ್ದಾನೆ (1936). ರಾಜಕೀಯ ಸಂಗತಿಗಳನ್ನು ವಿಶ್ಲೇಷಿಸಿ ಅನೇಕ ರಹಸ್ಯಗಳನ್ನೂ ಮುಂದಿನ ಆಗು ಹೋಗುಗಳನ್ನೂ ಸಮಂಜಸವಾಗಿ ಊಹಿಸುವಂಥ ಈ ರಂಜಕವಾದ ಪುಸ್ತಕ ಪ್ರಕಟವಾದ ಕೂಡಲೇ ಪ್ರಚಂಡ ಲೋಕಪ್ರಿಯತೆಯನ್ನು ಪಡೆಯಿತು. ಇದರ ಸುಮಾರು ಐದುಲಕ್ಷ ಪ್ರತಿಗಳು ಮಾರಾಟವಾದವು. ಜಗತ್ತಿನ ಹದಿನಾಲ್ಕು ಮುಖ್ಯ ಭಾಷೆಗಳಿಗಿದು ಅನುವಾದಗೊಂಡಿತು.

ಪತ್ರಿಕಾವೃತ್ತಿಯಲ್ಲಿ ಬಂದ ಯಶಸ್ಸಿನ ಪರಿಣಾಮವಾಗಿ ಅನೇಕ ಕಡೆಗಳಿಂದ ಗುಂಥರನಿಗೆ ಕೆಲಸದ ಕರೆ ಬರತೊಡಗಿದವು. ಬಾನುಲಿ ಬಾತ್ಮೀದಾರನಾಗಿ, ಸಮರದ ಸುದ್ದಿಗಾರನಾಗಿ ಗುಂಥರ್ ಕೆಲಕಾಲ ಪ್ರಪಂಚ ಪರ್ಯಟನೆ ಮಾಡಿಬಂದ. ಇನ್ಸೈಡ್ ಯುರೋಪ್ ಮಾದರಿಯಲ್ಲೇ ಏಷ್ಯ ರಾಜಕೀಯ ಪರಿಸ್ಥಿತಿಯನ್ನೂ ವರ್ಣರಂಜಕವಾಗಿ ಚಿತ್ರಿಸಿ ಇನ್ಸೈಡ್ ಏಷ್ಯ ಎಂಬ ಪುಸ್ತಕವನ್ನು ಬರೆದ (1939). ಇದೇ ಸರಣಿಯಲ್ಲಿ ಇನ್ಸೈಡ್ ಲ್ಯಾಟಿನ್ ಅಮೆರಿಕ (1941) ಇನ್ಸೈಡ್ ಯು. ಎಸ್. ಎ. (1947), ಇನ್ಸೈಡ್ ರಷ್ಯ ಟು ಡೇ (1958), ಇನ್ಸೈಡ್ ಯುರೋಪ್ ಟು ಡೇ (1961) ಎಂಬ ಪುಸ್ತಕಗಳು ಇವನ ಲೇಖನಿಯಿಂದ ಹೊರಬಂದುವು. ಈ ಸರಣಿಯ ಪುಸ್ತಕಗಳು ಪಡೆದಷ್ಟು ಜನಪ್ರಿಯತೆಯನ್ನು ಈತನೇ ಬರೆದ ಕಾದಂಬರಿ, ಜೀವನಚರಿತ್ರೆ ಮುಂತಾದ ಹಲವಾರು ಇತರ ಪುಸ್ತಕಗಳು ಪಡೆಯಲಿಲ್ಲ. ಎ ಫ್ರ್ಯಾಗ್ಮೆಂಟ್ ಆಫ್ ಆಟೊಬಯಾಗ್ರಫಿ (1962) ಎಂಬುದು ಈತನ ಆತ್ಮಕಥೆ. ಈ ಪುಸ್ತಕ ಮತ್ತು ಡೆತ್ ಬಿ ನಾಟ್ ಪ್ರೌಡ್ ಎಂಬ ಪುಸ್ತಕ ತುಂಬ ಆತ್ಮೀಯವೂ ಹೃದಯಂಗಮವೂ ಆಗಿ ಗುಂಥರನ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. 1964ರಲ್ಲಿ ದಿ ಲಾಸ್ಟ ಸಿಟಿ ಎಂಬ ಪುಸ್ತಕವನ್ನೂ 1965ರಲ್ಲಿ ಪ್ರೊಸೆಷನ್ ಎಂಬ ಪುಸ್ತಕವನ್ನೂ ಈತ ಬರೆದ. ಅನುಭವದ ಪರಿಪಕ್ವತೆಯನ್ನು ಈ ಕೃತಿಗಳಲ್ಲಿ ಕಾಣಬಹುದು.