ವಿಷಯಕ್ಕೆ ಹೋಗು

ಜಾನ್ಸ್‌ಟೌನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ಸ್‍ಟೌನ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೆನ್ಸಿಲ್ವೇನಿಯದ ಒಂದು ನಗರ. ಪಿಟ್ಸ್‍ಬರ್ಗ್‍ನಿಂದ ಪೂರ್ವಕ್ಕೆ 70 ಮೈ. ದೂರದಲ್ಲಿರುವ ಕಾನೆಮಾ ನದಿಯ ನೆತ್ತಿಯ ಪ್ರದೇಶದಲ್ಲಿದೆ.

ಜಾನ್ಸ್‍ಟೌನ್ ನಗರದ ವಾಣಿಜ್ಯ ಕೈಗಾರಿಕಾ ವಲಯ ಇರುವುದು ಕಿರಿದಾದ ನದೀ ಕಣಿವೆ ಪ್ರದೇಶದಲ್ಲಿ. ಆದರೆ ವಾಸದಮನೆಗಳು ನಗರದ ಕೇಂದ್ರಭಾಗಕ್ಕೆ ಹಲವು ನೂರು ಅಡಿಗಳ ಎತ್ತರದ ನೆಲದಲ್ಲಿ ಹಬ್ಬಿವೆ. ಜಾನ್ಸನ್‍ಟೌನ್ ನಗರ ಸ್ಥಾಪಿತವಾಗಿರುವುದು ಉಕ್ಕಿನ ಕೈಗಾರಿಕೆ ಮತ್ತು ಕಲ್ಲಿದ್ದಲು ಗಣಿಗಾರಿಕೆಯ ಪ್ರದೇಶದಲ್ಲಿ. ಈ ಪ್ರದೇಶ ಕ್ಯಾಂಬ್ರಿಯ ಮತ್ತು ಸಾಮರ್ ಸೆಟ್ ಕೌಂಟಿಗಳಲ್ಲಿದೆ. ನಗರದ ಜನಸಂಖ್ಯೆ 42,476 (1972) ; ಈ ಪಟ್ಟಣದ ಕಲ್ಲಿದ್ದಲ ಗಣಿಗಾರಿಕೆಯ ಯಾಂತ್ರೀಕರಣದಿಂದಾಗಿ ಮತ್ತು ಕಲ್ಲಿದ್ದಲಿಗೆ ಬೇಡಿಕೆ ತಗ್ಗಿದ್ದರಿಂದ ಇದರ ಜನಸಂಖ್ಯೆ 1920-1940ರಲ್ಲಿ ತಗ್ಗಿತು. ಜಾನ್ಸಟೌನ್ 1800ರಲ್ಲಿ ಸ್ಥಾಪಿತವಾಯಿತು. ಇಲ್ಲಿ ಪ್ರಥಮ ಉಕ್ಕಿನ ಕಾರ್ಖಾನೆ ಆರಂಭವಾದ್ದು 1861ರಲ್ಲಿ. 1873ರ ವೇಳೆಗೆ ಇದು ಅಮೆರಿಕದ ಪ್ರಮುಖ ಉಕ್ಕು ತಯಾರಿಕಾ ಕೇಂದ್ರವೆನಿಸಿಕೊಂಡಿತು. 1889ರ ಮೇ 31ರಂದು ನದಿಯ ಮೇಲ್ದಂಡೆಯ ಕಟ್ಟೆಯೊಂದು ಒಡೆದದ್ದರಿಂದ ನಗರದ ಕಣಿವೆಯಲ್ಲಿ ಹರಿದ ಜಲರಾಶಿಯಲ್ಲಿ 2,300ಕ್ಕಿಂತ ಹೆಚ್ಚು ಮಂದಿ ಕೊಚ್ಚಿ ಹೋದರು. 777 ಶವಗಳ ಗುರುತು ಸಿಗಲಿಲ್ಲ. ಅವನ್ನು ಗ್ರಾಂಡ್‍ವ್ಯೂ ಸ್ಮಶಾನದಲ್ಲಿ ಒಂದೇ ತಗ್ಗಿನಲ್ಲಿ ಹೂಳಲಾಯಿತು. ಪ್ರವಾಹದಿಂದ ಒಂದು ಕೋಟಿ ಡಾಲರುಗಳಷ್ಟು ನಷ್ಟ ಸಂಭವಿಸಿತು. 1936ರಲ್ಲಿ ಮತ್ತೊಮ್ಮೆ ಪ್ರವಾಹದ ಹಾವಳಿಯಾಯಿತು. ಹಲವು ಲಕ್ಷ ಡಾಲರ್ ವೆಚ್ಚದಿಂದ ಈಗ ಇಲ್ಲಿ ಪ್ರವಾಹ ಹತೋಟಿ ಕಾಮಗಾರಿ ಮಾಡಿ ನದಿಯ ಅಪಾಯವನ್ನು ನಿವಾರಿಸಲಾಗಿದೆ.

ಜಾನ್ಸ್‍ಟೌನ್ ನಗರ ಉಕ್ಕಿನ ತಯಾರಿಕೆಯಲ್ಲಿ ಈಗ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿಲ್ಲ. ಆದರೆ ಈ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಕಲ್ಲಿದ್ದಲು ಕಿಟ್ಟ ತಯಾರಿಕೆ, ಕಬ್ಬಿಣ ತಯಾರಿಕೆ ಮುಂತಾದ ಕೈಗಾರಿಕೆಗಳೂ ಇವೆ. ಉಕ್ಕಿನ ತಟ್ಟೆ, ಚಕ್ರ, ಅಕ್ಷ, ಕಾರು, ತಂತಿ ಮುಂತಾದವನ್ನು ತಯಾರಿಸುತ್ತಾರೆ. ಕಾಲೇಜು, ಕ್ರೀಡಾಂಗಣ, ಯುದ್ಧಸ್ಮಾರಕ ಕಟ್ಟಡ ಮುಂತಾ ದವು ಇವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: