ಜಹಾಂಗೀರ್
ಜಹಾಂಗೀರ್ | |
---|---|
ನಾಲ್ಕನೆಯ ಮೊಘಲ್ ದೊರೆ | |
ಆಳ್ವಿಕೆ | 15 October 1605 – 8 November 1627 |
ಪಟ್ಟಾಭಿಷೇಕ | 24 October 1605 |
ಪೂರ್ವಾಧಿಕಾರಿ | ಅಕ್ಬರ್ |
ಉತ್ತರಾಧಿಕಾರಿ | ಷಾ ಜಹಾನ್ |
Consort | ನೂರ್ ಜಹಾನ್ |
Wives | Sahib-i-Jamal Saliha Banu Begum Taj Bibi Bilqis Makani Shah Begam Rajkumari Karamsi Kanwal rani Nu-un-Nisa Begam 12 other wives |
ಸಂತಾನ | |
Khusraw Parviz Khurram Shahryar Others | |
ಪೂರ್ಣ ಹೆಸರು | |
Nur-ud-din Mohammad Jahangir | |
ಮನೆತನ | House of Timur |
ತಂದೆ | ಅಕ್ಬರ್ |
ತಾಯಿ | ಮರಿಯಮ್ -ಉಜ್-ಝಮಾನಿ(ಹೀರ್ ಕುಂವರಿ) |
ಜನನ | 30 August 1569 ಫತೇಪುರ್ ಸಿಕ್ರಿ |
ಮರಣ | 8 November 1627 ಕಾಶ್ಮೀರ್ | (aged 58)
Burial | Tomb of Jahangir, ಲಾಹೋರ್ |
ಧರ್ಮ | ಇಸ್ಲಾಂ |
ಜಹಾಂಗೀರ್'ಭಾರತದ ನಾಲ್ಕನೆಯ ಮೊಘಲ್ ಚಕ್ರವರ್ತಿ. ಷಹಜಹಾನ್ನ ತಂದೆ.ಇವನ ಮೂಲ ಹೆಸರು ಮಿರ್ಜಾ ನೂರ್ ಉದ್ದೀನ್ ಬೇಗ್ ಮೊಹಮ್ಮದ್‍ಖಾನ್ ಸಲೀಂ ಎಂದು.[೧] ಮೊಘಲ್ ವಂಶದ ಒಬ್ಬ ಚಕ್ರವರ್ತಿ. ಅಕ್ಬರನ ಮಗ.
ಜನನ
[ಬದಲಾಯಿಸಿ]1569ರಲ್ಲಿ ರಜಪೂತ ತಾಯಿಗೆ ಜನಿಸಿದ. ಚಕ್ರವರ್ತಿಯಾಗುವ ಮುನ್ನ ಸಲೀಮ್ ಎಂಬುದು ಇವನ ಹೆಸರು. ಪಟ್ಟಾಭಿಷೇಕದ ಸಮಯದಲ್ಲಿ ನೂರುದ್ದೀನ್ ಮಹಮ್ಮದ್ ಜಹಾಂಗೀರ್ ಪಾದಷಾ ಘಾಜಿûೀ ಎಂಬ ಬಿರುದನ್ನು ಧರಿಸಿದ.
ರಾಜ್ಯಭಾರ
[ಬದಲಾಯಿಸಿ]ತಂದೆ ಬದುಕಿದ್ದಾಗಲೇ, 1601-1604ರಲ್ಲಿ, ಜಹಾಂಗೀರ್ ಅವನ ವಿರುದ್ಧ ದಂಗೆ ಎದ್ದಿದ್ದರೂ ತಂದೆ ಇವನನ್ನು ಕ್ಷಮಿಸಿದ್ದ. 1605ರ ಅಕ್ಟೋಬರಿನಲ್ಲಿ ಅಕ್ಬರ್ ನಿಧನ ಹೊಂದಿದ ಒಂದು ವಾರದ ಅನಂತರ ಸಿಂಹಾಸನಾರೂಢನಾದ. ಇಸ್ಲಾಂ ಮತವನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡಿ ಇವನು ರಾಜ್ಯಭಾರವನ್ನಾರಂಭಿಸಿದನಾದರೂ ತಂದೆಯ ಉದಾರ ದೃಷ್ಟಿಯನ್ನು ಸ್ವಲ್ಪಮಟ್ಟಿಗೆ ಇವನೂ ಪಡೆದಿದ್ದ. ಆಳ್ವಿಕೆಯ ಆರಂಭದಲ್ಲೆ ಇವನು ಮಗ ಖುಸ್ರುವಿನ ದಂಗೆಯನ್ನು ಎದುರಿಸಬೇಕಾಯಿತು. ಅಕ್ಟರನ ಅನಂತರ ತಾನೇ ರಾಜ್ಯವಾಳಬೇಕೆಂಬುದು ಅವನ ಆಕಾಂಕ್ಷೆಯಾಗಿತ್ತು. ಆಗಲೇ ಅವನು ದಂಗೆ ಎದ್ದಿದ್ದ. ಈತ ಪುನಃ ತಂದೆಯ ವಿರುದ್ಧ ಅವನು ದಂಗೆ ಎದ್ದು ಪಂಜಾಬಿಗೆ ಓಡಿಹೋಗಿ ಲಾಹೋರನ್ನು ವಶಪಡಿಸಿಕೊಂಡ. ಆದರೆ ಜಹಾಂಗೀರ್ ಆತನನ್ನು ಸೋಲಿಸಿ ಸೆರೆಹಿಡಿದು, ಆತನ ಅನುಯಾಯಿಗಳಿಗೆ ಮರಣದಂಡನೆ ವಿಧಿಸಿದ. ಖುಸ್ರು 1622ರಲ್ಲಿ ಕಾರಾಗೃಹದಲ್ಲೇ ನಿಧನ ಹೊಂದಿದ. ಮಗನ ವಿರುದ್ಧ ನಡೆಸಿದ ಕಾರ್ಯಾಚರಣೆಗಳ ಅಂಗವಾಗಿ ಸಿಕ್ಖರ ಐದನೆಯ ಗುರು ಅರ್ಜುನನನ್ನು ಜಹಾಂಗೀರ್ ಗಲ್ಲಿಗೇರಿಸಿದಾಗ ಸಿಖ್ ಜನತೆ ಜಹಾಂಗೀರನ ವಿರುದ್ಧ ದಂಗೆಯೇಳುವ ಪರಿಸ್ಥಿತಿ ಉಂಟಾಯಿತು. ಅಕ್ಬರನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯಕ್ಕೆ ಸೇರ್ಪಡೆಯಾಗಿದ್ದ ಬಂಗಾಲದಲ್ಲಿ ಆಫ್ಘನರು ಪುನಃ ದಂಗೆ ಎದ್ದರು. ಉಸ್ಮಾನ್‍ಖಾನ್ ದಂಗೆಕೋರರ ನೇತೃತ್ವವನ್ನು ವಹಿಸಿ, ಪ್ರಾಂತ್ಯಾಧಿಕಾರಿಯಾಗಿದ್ದ ಇಸ್ಲಾಮ್ ಖಾನನನ್ನು ಎದುರಿಸಿದ. ಆದರೆ ಇಸ್ಲಾಮ್‍ಖಾನ ಉಸ್ಮಾನನನ್ನು ಸೋಲಿಸಿ ದಂಗೆಯನ್ನು ಅಡಗಿಸಿದ. ತಲೆಗೆ ತಾಗಿದ ಪೆಟ್ಟೊಂದರಿಂದ ಉಸ್ಮಾನ್ ಪ್ರಾಣ ಬಿಟ್ಟ. ಇವನ ಮರಣದ ಬಳಿಕ ಬಂಗಾಲದ ಆಫ್ಘನರೊಡನೆ ಸಂಬಂಧ ಹೆಚ್ಚು ಸೌಹಾರ್ದಪೂರಿತವಾಯಿತು.
ದಖನ್ನಿನ ಸುಲ್ತಾನರ ವಿಚಾರದಲ್ಲಿ ಜಹಾಂಗೀರ್ ತಂದೆಯ ನೀತಿಯನ್ನೇ ಅನುಸರಿಸಿ ಅಹಮದ್ ನಗರದೊಡನೆ ದೀರ್ಘ ಕಾಲ ಕಾದಿದ. ಯುವರಾಜ ಖುರ್ರಮನನ್ನು ದಕ್ಷಿಣದ ದಂಡೆಯಾತ್ರೆಗೆ ನೇಮಿಸಿದ. ಅವನು ಅಹಮದ್ ನಗರದ ಕೋಟೆಯನ್ನು ಹಿಡಿದರೂ ಅದರಿಂದ ದೊರಕಿದ ಯಶಸ್ಸು ಕೇವಲ ತಾತ್ಕಾಲಿಕವಾದ್ದಾಗಿತ್ತು. ಆದರೆ ಈ ವಿಜಯದಿಂದಾಗಿ ಖುರ್ರಮನಿಗೆ ಷಾಹಜಹಾನನೆಂಬ ಬಿರುದು ಲಭಿಸಿತು. ಮೇವಾಡದ ಮೇಲೆ ವಿಜಯ ಸ್ಥಾಪಿಸಿದ್ದು ಜಹಾಂಗೀರನ ಇನ್ನೊಂದು ಸಾಧನೆ. ಖುರ್ರಮ್ ಅದರ ಮೇಲೆ ದಂಡೆತ್ತಿಹೋಗಿ ಜಹಾಂಗೀರನ ಸಾರ್ವಭೌಮತ್ವವನ್ನು ರಾಣಾ ಅಮರಸಿಂಹ ಅಂಗೀಕರಿಸುವಂತೆ ಮಾಡಿದ. ಮೂಲ ತೈಮೂರ್ ಮನೆತನದ ಅರಸರಿಗೆ ಸೇರಿದ್ದ ಟ್ರಾನ್ಸ್ ಆಕ್ಸೀಯಾನ ರಾಜ್ಯವನ್ನು ಆಕ್ರಮಿಸುವುದು ಇವನ ಹೆಬ್ಬಯಕೆಯಾಗಿತ್ತು. ಆದರೆ ಅದಕ್ಕೆ ಬೇಕಾದ ಸಾಮರ್ಥ್ಯ ಮಾತ್ರ ಇವನಿಗೆ ಇರಲಿಲ್ಲ. ರಾಜ್ಯದ ಆಂತರಿಕ ದಂಗೆಗಳನ್ನು ಅಡಗಿಸುವುದರಲ್ಲೇ ಈತ ಬಹಳ ಕಾಲವನ್ನೂ ಶಕ್ತಿಸಂಪತ್ತುಗಳನ್ನೂ ವ್ಯಯಿಸಿದ. ಇದರ ಪ್ರಯೋಜನ ಪಡೆದ ಪರ್ಷಿಯದ ದೊರೆ ಷಾ ಅಬ್ಬಾಸನು ಕಾಂದಾಹಾರ್ ಪ್ರಾಂತ್ಯವನ್ನು ಮುತ್ತಿವಶಪಡಿಸಿಕೊಂಡ. ಅದನ್ನು ಮರಳಿ ಪಡೆಯಲು ಜಹಾಂಗೀರ್ ತನ್ನ ಮಗ ಷಾಹಜಹಾನನಿಗೆ ಆಜ್ಞೆ ಇತ್ತ. ಆದರೆ ಅರಮನೆಯಲ್ಲಿಯ ರಾಜಕೀಯ ಚಟುವಟಿಕೆಗಳಿಂದ ಹೊರಗಿರಲು ಇಚ್ಛಿಸದ ಷಾಹಜಹಾನ್ ತಂದೆಯ ಅಣತಿಯನ್ನು ಅಲ್ಲಗಳೆದ.
ನೂರ್ ಜಹಾನ್
[ಬದಲಾಯಿಸಿ]ಇವನ ಜೀವನದ ಅತ್ಯಂತ ಮಹತ್ತ್ವಪೂರ್ಣವಾದ ಘಟನೆಯೆಂದರೆ ಇವನು ನೂರ್ ಜಹಾನಳನ್ನು ಮದುವೆಯಾದದ್ದು (1611). ಪರ್ಷಿಯದಿಂದ ಬಂದಿದ್ದ ಮಿರ್ಜಾ ಘಯಾಸ್ ಬೇಗನ ಮಗಳಾದ ಮೆಹರುನ್ನೀಸಾ 17ನೆಯ ವಯಸ್ಸಿನಲ್ಲಿ ಅಲಿಕುಲಿ ಬೇಗನನ್ನು ಮದುವೆಯಾಗಿದ್ದಳು. ಷೇರ್ ಆಪ್ಘನ್ ಎಂಬ ಬಿರುದನ್ನು ಪಡೆದಿದ್ದ ಈತ ಬಂಗಾಲದ ಬದ್ರ್ವಾನನ್ನು ಜಹಾಂಗೀರನಿಂದ ಜಾಗೀರಾಗಿ ಪಡೆದಿದ್ದ. ಆದರೆ ಅವಿಧೇಯನಾಗಿ ವರ್ತಿಸಿದ ಈತನನ್ನು ಜಹಾಂಗೀರನ ಆದೇಶದಂತೆ ಬಂಗಾಲದ ಪ್ರಾಂತ್ಯಾಧಿಕಾರಿ ಎದುರಿಸಿದ. ಪ್ರಾಂತ್ಯಾಧಿಕಾರಿಯನ್ನೇ ಕೊಂದ ಷೇರ್ ಆಪ್ಘನನನ್ನು 1607ರಲ್ಲಿ ಸೈನಿಕರು ಸೆರೆಹಿಡಿದು ಕೊಂದರು. ಮೆಹರುನ್ನೀಸಳನ್ನು ರಾಜಧಾನಿಗೆ ಒಯ್ಯಲಾಯಿತು. ಅರಮನೆಯಲ್ಲಿ ಊಳಿಗಕ್ಕೆ ಸೇರಿದ್ದ ಇವಳ ಸೌಂದರ್ಯಕ್ಕೆ ಮರುಳಾಗಿ ಜಹಾಂಗೀರ್ ಇವಳನ್ನು ಮದುವೆಯಾಗಿ ನೂರ್ ಮಹಲ್ (ಅರಮನೆಯ ಬೆಳಕು) ಎಂದು ಕರೆದ. ನೂರ್ ಜಹಾನ್ (ವಿಶ್ವದ ಬೆಳಕು) ಎಂಬುದ ಅನಂತರ ಇವಳಿಗೆ ಬಂದ ಹೆಸರು. ವ್ಯವಹಾರಜ್ಞಾನ, ಬುದ್ಧಿಕುಶಲತೆ ಮತ್ತು ಮಹತ್ತ್ವಾಕಾಂಕ್ಷೆಗಳಿಂದ ಕೂಡಿದ್ದ ಈಕೆ ಸಾಮ್ರಾಟನನ್ನು ಮರುಳುಗೊಳಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಎಲ್ಲವನ್ನೂ ನಿಯಂತ್ರಿಸತೊಡಗಿದಳು. ರಾಜ್ಯಭಾರದಲ್ಲಿ ಜಹಾಂಗೀರನ ಆಸಕ್ತಿ ಕ್ರಮೇಣ ಕಡಿಮೆಯಾಯಿತು. ಮದ್ಯಪಾನ ಮಾಂಸಾಹಾರಗಳಲ್ಲಿ ಕಾಲಕಳೆಯುತ್ತಿದ್ದ ಜಹಾಂಗೀರನನ್ನು ಮೂಲೆಗೆ ತಳ್ಳಿ ನೂರ್‍ಜಹಾನಳೇ ಸರ್ವಾಧಿಕಾರಿಣಿಯಾದಳು. ಅವಳ ಹೆಸರನ್ನು ಟಂಕಿಸಿದ ನಾಣ್ಯಗಳೂ ಚಲಾವಣೆಗೆ ಬಂದುವು.
ಮಗನ ದಂಗೆ
[ಬದಲಾಯಿಸಿ]ಜಹಾಂಗೀರನ ಮೂರನೆಯ ಮಗ ಖುರ್ರಂ (ಷಾಹಜಹಾನ್) 1622ರಲ್ಲಿ ತಂದೆಯ ವಿರುದ್ಧ ದಂಗೆಯೆದ್ದ. ತನ್ನ ಸೇನಾಧಿಕಾರಿ ಮೊಹಬ್ಬತ್ ಖಾನನ ನೆರವಿನಿಂದ ಅವನನ್ನು ಅಡಗಿಸಲಾಯಿತು. ಆದರೆ ಮರುವರ್ಷ ಮೊಹಬ್ಬತ್‍ಖಾನನೇ ದಂಗೆಯೆದ್ದ. ಜಹಾಂಗೀರನೂ ಸ್ವಲ್ಪಕಾಲ ಸೆರೆಯಾಗಿದ್ದ. ಆದರೆ ನೂರಜಹಾನಳ ಯುಕ್ತಿಯಿಂದ ಜಹಾಂಗೀರ್ ಬಿಡುಗಡೆ ಹೊಂದಿದ. ಮೊಹಬ್ಬತ್‍ಖಾನ್ ಮಣಿಯಬೇಕಾಯಿತು. ಜಹಾಂಗೀರನ ಎರಡನೆಯ ಮಗ ಪರ್ವೀಜ್ 1626ರಲ್ಲಿ ತೀರಿಕೊಂಡ.
ಮರಣ
[ಬದಲಾಯಿಸಿ]1628ರಲ್ಲಿ ಜಹಾಂಗೀರ್ ಮರಣ ಹೊಂದಿದ.
ಆಡಳಿತ
[ಬದಲಾಯಿಸಿ]ಜಹಾಂಗೀರ್ ಕಲಾಪ್ರಿಯ. ಅವನ ಆಶ್ರಯ ಪಡೆದ ಇಬ್ಬರು ಮುಸ್ಲಿಂ ಕಲಾವಿದರು ಅಬುಲ್ ಹಸನ್ ಮತ್ತು ಮನ್ಸೂರ್. ನ್ಯಾಯ ಪರಿಪಾಲನೆಯಲ್ಲಿ ಜಹಾಂಗೀರನಿಗೆ ವಿಶೇಷವಾದ ಆಸಕ್ತಿಯಿತ್ತು. ಪ್ರಜೆಗಳ ಕುಂದುಕೊರತೆಗಳನ್ನು ಸ್ವತಃ ಅರಿತು ನ್ಯಾಯದಾನ ಮಾಡುವ ಸಲುವಾಗಿ ಅವನು ಯಮುನಾನದೀ ತೀರದಲ್ಲಿ ನಿಲ್ಲಿಸಲಾದ ಒಂದು ಕಂಬಕ್ಕೂ ಆಗ್ರದ ಕೋಟೆಯೊಳಗಿನ ಷಾಬುರ್ಜಿ ಕಟ್ಟಡಕ್ಕೂ ನಡುವೆ ಒಂದು ನ್ಯಾಯಗಂಟೆಯನ್ನು ಸ್ಥಾಪಿಸಿದ. ಹನ್ನೆರಡು ವಿಧಿಗಳನ್ನು ನಿರೂಪಿಸಿ, ಎಲ್ಲರೂ ಅವನ್ನು ಪಾಲಿಸಬೇಕೆಂದು ಆಜ್ಞೆ ಮಾಡಿದ. ಮದ್ಯ ಮುಂತಾದ ಮಾದಕ ದ್ರವ್ಯಗಳ ಮಾರಾಟ, ಜಕಾತ್ ಎಂಬ ತೆರಿಗೆಯ ವಸೂಲಿ, ಅಪರಾಧಿಗಳ ಕಿವಿ-ಮೂಗುಗಳನ್ನು ಕೊಯ್ದು ಅವರ ಮನೆಗಳನ್ನು ವಶಪಡಿಸಿಕೊಳ್ಳುವುದು, ನಿಯಮಿತ ದಿನಗಳಲ್ಲಿ ಪ್ರಾಣಿವಧೆ, ಬಲವಂತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು (ಘಸ್ಬಿ) -ಇವುಗಳನ್ನೆಲ್ಲ ನಿಷೇಧಿಸಿದ. ಹಾದಿಗಳ್ಳತನ ಮತ್ತು ಸುಲಿಗೆಗಳಾಗದಂತೆ ವ್ಯವಸ್ಥೆ ಮಾಡಿ, ಪ್ರಜೆಗಳಿಗಾಗಿ ಆಸ್ಪತ್ರೆಗಳನ್ನು ಕಟ್ಟಿಸಿ ವೈದ್ಯರನ್ನು ನೇಮಿಸಿದ. ಧಾರ್ಮಿಕ ದತ್ತಿಗಳನ್ನು, ಮನ್‍ಸಬ್ ಮತ್ತು ಜಾಗೀರ್‍ಗಳನ್ನು ಖಾಯಂಗೊಳಿಸಿದ. ಆದರೆ ಇವಾವುವೂ ನಿರೀಕ್ಷಿತ ಫಲಗಳನ್ನು ನೀಡಲಿಲ್ಲ.
ಕಲಾಪ್ರಿಯ
[ಬದಲಾಯಿಸಿ]ಪ್ರಕೃತಿಸೌಂದರ್ಯೋಪಾಸಕನೂ ಕಲಾಭಿಜ್ಞನೂ ಆಗಿದ್ದ ಜಹಾಂಗೀರನಲ್ಲಿ ಅನೇಕ ಗುಣಗಳು ಮನೆಮಾಡಿಕೊಂಡಿದ್ದುವು. ದಯೆ ಮತ್ತು ಕ್ರೌರ್ಯ, ಸಂಸ್ಕøತಿ ಮತ್ತು ಪಾಶವೀಮನೋಭಾವ, ಕರುಣೆ ಮತ್ತು ಕೋಪಗಳು ಇವನಲ್ಲಿ ಸಂದರ್ಭೋಚಿತವಾಗಿ ಪ್ರಕಟಗೊಳ್ಳುತ್ತಿದ್ದುವು. ಉದ್ಯಾನಗಳೆಂದರೆ ಈತನಿಗೆ ಅಭಿಮಾನ. ಕಾಶ್ಮೀರದ ಷಾಲಿಮಾರ್ ಉದ್ಯಾನ ಇವನ ಆಸಕ್ತಿಯ ಫಲ. ಚಿತ್ರಕಲೆಗೆ ವಿಶೇಷ ಪ್ರೋತ್ಸಾಹ ನೀಡಿದ ಈತ ಧಾರ್ಮಿಕ ವಿಷಯಗಳಲ್ಲಿ ನಿಷ್ಠೆ ತೋರಿಸುತ್ತಿದ್ದ. ಈತ ತನ್ನ ಆತ್ಮಕಥೆಯನ್ನು ಬರೆದಿಟ್ಟಿದ್ದಾನೆ. ಮೊಘಲ್ ಅರಸರಲ್ಲಿ ಇವನದು ಒಂದು ವಿಶಿಷ್ಟವಾದ ಸ್ಥಾನ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Jehangir and Shah Jehan
- The World Conqueror: Jahangir Archived 2010-05-28 ವೇಬ್ಯಾಕ್ ಮೆಷಿನ್ ನಲ್ಲಿ.
- Tūzuk-i-Jahangīrī Or Memoirs of Jahāngīr[ಶಾಶ್ವತವಾಗಿ ಮಡಿದ ಕೊಂಡಿ]
- Jains and the Mughals Archived 2012-12-07 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2017-05-10. Retrieved 2017-03-14.