ಜಲಧರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲಧರಗಳು - ತಮ್ಮ ಮೂಲಕ ಪ್ರವಹಿಸುವ ಭೂಜಲವನ್ನು ತಮ್ಮಲ್ಲಿ ಹುದುಗಿಟ್ಟುಕೊಂಡು ಮುಂದೆ ಚಿಲುಮೆಯ ಮೂಲಕ ಇಲ್ಲವೇ (ಬಾವಿಗಳನ್ನು ತೋಡಿದಾಗ) ಒರತೆಯ ಮೂಲಕ ನೀರನ್ನು ಒದಗಿಸುವ ಆಕ್ವಿಫೈಯರ್ಸ್. (ಜಲಧರ ಎಂದರೆ 'ನೀರನ್ನು ಹಿಡಿದಿಟ್ಟುಕೊಳ್ಳುವ' ಎಂದು ಅರ್ಥ; ಇದು ಸಂಸ್ಕೃತದ ಶಬ್ದ)

ಈ ಬಗೆಯ ಶಿಲಾನಿಕ್ಷೇಪ ಅಥವಾ ಸ್ತರಗಳ ಮಂದ ಮತ್ತು ವಿಸ್ತಾರವನ್ನು ಅನುಸರಿಸಿ ಅವುಗಳಲ್ಲಿ ದೊರೆಯುವ ಭೂಜಲದ ಮೊತ್ತವನ್ನು ನಿರ್ಧರಿಸಬಹುದು. ನೆಲದ ಮೇಲೆ ಬಿದ್ದ ಮಳೆಯ ನೀರಿನ ಬಹುಭಾಗ ಇಳಿಜಾರಿನ ಕಡೆ ಹರಿದು ಹತ್ತಿರದ ನದಿಯನ್ನೋ ಸಮುದ್ರವನ್ನೋ ಸೇರುತ್ತದೆ. ಉಳಿದ ನೀರು ನೆಲ ಭಾಗದಲ್ಲಿರುವ ವಿವಿಧ ಶಿಲೆಗಳ ಮೂಲಕ ಹಾದು ಆಳಕ್ಕೆ ಜಿನುಗುತ್ತದೆ. ಜಿನುಗುವಿಕೆಗೆ ಶಿಲೆಯ ರಚನೆಯೇ ಅಲ್ಲದೆ ಭೂ ಗುರುತ್ವವೂ ಸಹಾಯಕ.

ಶಿಲೆಗಳಲ್ಲಿ ಮೂರು ಮುಖ್ಯ ವರ್ಗಗಳಿವೆ-ಅಗ್ನಿಶಿಲೆಗಳು, ಜಲಜ ಶಿಲೆಗಳು ಹಾಗೂ ರೂಪಾಂತರ ಶಿಲೆಗಳು. ಪ್ರತಿ ಮುಖ್ಯವರ್ಗದಲ್ಲೂ ಹಲವಾರು ಬಗೆಗಳನ್ನು ಗುರುತಿಸಲಾಗಿದೆ. ಅವು ತಮ್ಮ ಒಳರಚನೆ ಮತ್ತು ಖನಿಜ ಸಂಯೋಜನೆಯಲ್ಲಿ ಏಕರೀತಿಯಾಗಿರುವುದಿಲ್ಲ. ಕೆಲವು ಅಡಕವಾದ ರಚನೆಯನ್ನೂ ಮತ್ತೆ ಕೆಲವು ಅಳ್ಳಕವಾದ ಒಳರಚನೆಯನ್ನೂ ತಳೆದಿರುತ್ತವೆ. ಮೊದಲ ರೀತಿಯ ರಚನೆಯಲ್ಲಿ ಶಿಲೆಯು ಖನಿಜ ಕಣಗಳು ದಟ್ಟೈಸಿ ಬಹು ಒತ್ತಾಗಿರುತ್ತದೆ. ಅವುಗಳ ನಡುವೆ ಹೊರವಸ್ತುವಿನ ಪ್ರಸರಣೆ ಬಹುಕಷ್ಟಕರ. ಅನೇಕ ಅಗ್ನಿಶಿಲೆಗಳು ಹಾಗೂ ಕೆಲವು ರೂಪಾಂತರ ಶಿಲೆಗಳ ಒಳರಚನೆ ಈ ತೆರನಾಗಿದ್ದು ಮಳೆಯ ನೀರು ಇವುಗಳ ಮೂಲಕ ಸುಲಭವಾಗಿ ಜಿನುಗಲಾರದು. ಇವೇ ಅವ್ಯಾಪ್ಯಶಿಲೆಗಳು.(ವ್ಯಾಪ್ಯ ಅಂದರೆ ಪರ್ಮೀಯಬಲ್ ಎಂದು ಗಮನಿಸಿ) ಇವುಗಳ ಸರಂಧ್ರತ್ವ ಸಹ ಬಹು ಅಲ್ಪ. ಆದರೆ ಇವು ಬೀಳು ಬಿದ್ದು ಶಿಥಿಲಗೊಂಡಾಗ ರಚನೆಯೂ ಸಡಿಲಗೊಂಡು ಹಲವಾರು ಸೀಳುಗಳೂ ಬಿರುಕುಗಳೂ ಉಂಟಾಗುವುದರ ಜೊತೆಗೆ ಅಡಕವಾದ ರಚನೆಯೂ ಅಳ್ಳಕವಾಗಿ ಮೇಲೆ ಬಿದ್ದ ನೀರು ಸುಲಭವಾಗಿ ಜಿನುಗಲು ಸಾಧ್ಯವಾದೀತು. ಆದರೆ ಜಲಜಶಿಲೆಗಳು ದ್ವಿತೀಯಕ ಶಿಲೆಗಳಾಗಿ ಶಿಲಾಛಿದ್ರಗಳ ಒಟ್ಟುಗೂಡುವಿಕೆಯಿಂದ ರೂಪುಗೊಳ್ಳುತ್ತವೆ. ಹೀಗಾಗಿ ರಚನೆಯಲ್ಲಿ ಅಳ್ಳಕವಾಗಿದ್ದು, ಇವುಗಳ ಸರಂಧ್ರವೂ ಹೆಚ್ಚು. ಅದರಲ್ಲೂ ಶಿಲಾಛಿದ್ರಗಳು ಗಾತ್ರದಲ್ಲಿ ದಪ್ಪವಾಗಿದ್ದರಂತೂ ಆ ಕಣಗಳ ನಡುವೆ ಸಾಕಷ್ಟು ಇರುತ್ತದೆ. ಈ ಕಾರಣ ಇಮರಿದ ನೀರು ಸುಲಭವಾಗಿ ಇವುಗಳ ಮೂಲಕ ಪ್ರವಹಿಸಬಲ್ಲದು. ಈ ರೀತಿ ಖನಿಜಕಣಗಳ ನಡುವೆ ನೀರು ನುಗ್ಗಿ ಹೆಚ್ಚು ಹೆಚ್ಚು ಆಳಕ್ಕೆ-ಭೂಗುರುತ್ವದ ಕಾರಣ-ಹೋಗುತ್ತಿರುತ್ತದೆ. ಇವನ್ನು ವ್ಯಾಪ್ಯ (ಪರ್ಮೀಯಬಲ್) ಶಿಲೆಗಳೆಂದು ಸಹ ಕರೆಯುತ್ತಾರೆ. ಪೆಂಟೆಕಲ್ಲು, ಮರಳುಗಲ್ಲು, ದಪ್ಪಮರಳುಗಲ್ಲು ಮುಂತಾದವು ಇವಕ್ಕೆ ಅತ್ಯುತ್ತಮ ಉದಾಹರಣೆಗಳು. ಆದರೆ ಇದೇ ವರ್ಗದ ಜೇಡುಶಿಲೆ ಮತ್ತು ಸುಣ್ಣಶಿಲೆಗಳಲ್ಲಿ ಈ ಬಗೆಯ ಅಳ್ಳಕವಾದ ರಚನೆ ಇರುವುದಿಲ್ಲ. ಇವು ಬಹು ಸೂಕ್ಷ್ಮಕಣಗಳ ದಟ್ಟೈಸುವಿಕೆಯಿಂದ ಶಿಲೆಗಳು ಹೀಗಾಗಿ ಇವು ನೀರು ಜಿನುಗಲು ಅಷ್ಟು ಉತ್ತಮವಲ್ಲ. ಮರಳುಗಲ್ಲಿನ ಸರಂಧ್ರತ್ವ 10%-30% ರಷ್ಟಾದರೆ, ಜೇಡು ಮತ್ತು ಸುಣ್ಣಶಿಲೆಗಳ ಸರಂಧ್ರತ್ವ ಕೇವಲ %-10% ರಷ್ಟು ಮಾತ್ರ ಎಂಬ ಅಂಶವನ್ನು ನೆನಪಿನಲ್ಲಿಡಬಹುದು.

ಸುಣ್ಣಶಿಲೆ ಒಳರಚನೆ ನೀರಿನ ಇಮರುವಿಕೆಗೆ ಅಷ್ಟು ಸಹಾಯಕವಲ್ಲದಿದ್ದರೂ ಅವುಗಳ ಬಿರುಕು ಹಾಗೂ ಸೀಳುಗಳಲ್ಲಿ ನೀರು ಪ್ರವಹಿಸುವಾಗ ಸುಣ್ಣಾಂಶ ನೀರಿನಲ್ಲಿ ಕ್ರಮೇಣ ಕರಗುತ್ತ ಬಿರುಕು ದೊಡ್ಡದಾಗುತ್ತಲೂ ಅಗಲವಾಗುತ್ತಲೂ ಹೋಗುತ್ತದೆ. ಒಮ್ಮೊಮ್ಮೆ ಹೀಗಾದಾಗ ಕುಳಿಗಳು ಕಾಲಕ್ರಮೇಣ ಸಣ್ಣ ಹೊಂಡಗಳಾಗುವುದೂ ಸಾಧ್ಯ. ಅಲ್ಲದೆ ಕಾಲುವೆಗಳೂ ಹೊಂಡಗಳೂ ಒಮ್ಮೊಮ್ಮೆ ಆಳದಲ್ಲಿ ಹುದುಗಿದ್ದು ಮೇಲ್ಭಾಗದಲ್ಲಿ ಸುಣ್ಣ ಶಿಲಾಪ್ರಸ್ತರದಿಂದ ಮುಚ್ಚಿಹೋಗಿರುವುದೂ ಉಂಟು. ಅಗೋಚರವಾದ ಹಲವಾರು ನದಿಗಳನ್ನೂ ಗುರುತಿಸಲಾಗಿದೆ. ಹೀಗೆ ಸುಣ್ಣಶಿಲೆಯೂ ಉತ್ತಮ ಜಲಧರವೆನಿಸಿದೆ..

ಅಗ್ನಿಶಿಲೆಗಳು ಜ್ವಾಲಾಮುಖಿಯ ಶಿಲೆಗಳಾದ ಬೆಸಾಲ್ಟ್ ಲಾವಾಸ್ತರಗಳು ಅದರಲ್ಲೂ ಪ್ರವಾಹದ ತುಯ್ತಕ್ಕೆ ಸಿಕ್ಕಿ ನುಚ್ಚು ನೂರಾಗಿರುವ ಸ್ತರಗಳು ಮತ್ತು ಅನಿಲರಂಧ್ರ ರಚನೆಯ ಅಗ್ನಿಶಿಲೆಗಳು ಉತ್ತಮಜಲಧರಗಳೆಂದು ಪರಿಗಣಿತವಾಗಿವೆ. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಅನೇಕ ನೀರ ಚಿಲುಮೆಗಳು ಬೆಸಾಲ್ಟ್ ಶಿಲಾಸ್ತರಗಳಲ್ಲಿವೆ. ಮಹಾರಾಷ್ಟ್ರದ ಪಶ್ಚಿಮ ಕರಾವಳಿಯ ಅನೇಕ ಚಿಲುಮೆಗಳು ದಖ್ಖನ್ ಬೆಸಾಲ್ಟ್‍ನ ಸ್ತರಗಳಲ್ಲಿರುವುದನ್ನೂ ಕಾಣಬಹುದು.

ಜಲಧರಗಳು ವಿಸ್ತಾರವಾಗಿ ಹರಡಿರುವ ಪ್ರದೇಶವನ್ನು ಉತ್ತಮ ಭೂಜಲ ನಿಕ್ಷೇಪಗಳೆನ್ನಬಹುದು. ಸಾಮಾನ್ಯವಾಗಿ ಇವು ಇಳುಕಲು ಪ್ರದೇಶದಲ್ಲಿರುವ ಕಾರಣ ನೀರಿನ ಸರಬರಾಜು ಸತತವಾಗಿದ್ದು ವಾರ್ಷಿಕ ಬಳಕೆಯನ್ನೂ ಮೀರಿ ನೀರು ಅಧಿಕ ಪ್ರಮಾಣದಲ್ಲಿ ಸದಾಕಾಲವೂ ದೊರೆಯುತ್ತವೆ. ಇವು ಪ್ರಕೃತಿ ನಮಗಾಗಿ ಜೋಪಾನವಾಗಿ ಕಾಯ್ದಿರಿಸಿರುವ ಅತ್ತುತ್ತಮ ನಿಕ್ಷೇಪಗಳು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಲಧರ&oldid=1152394" ಇಂದ ಪಡೆಯಲ್ಪಟ್ಟಿದೆ