ಜಲಕಂಠೇಶ್ವರ ದೇವಸ್ಥಾನ, ಕಲಾಸಿಪಾಳ್ಯ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲಕಂಠೇಶ್ವರ ದೇವಸ್ಥಾನ, ಕಲಾಸಿಪಾಳ್ಯ, ಬೆಂಗಳೂರು
Native name
ಕನ್ನಡ:ಜಲಕಂಠೇಶ್ವರ ದೇವಸ್ಥಾನ
ಜಲಕಂಠೇಶ್ವರ ದೇವಸ್ಥಾನ
ಜಲಕಂಠೇಶ್ವರ ದೇವಸ್ಥಾನ
ಸ್ಥಳಕಲಾಸಿಪಾಳ್ಯ, ಬೆಂಗಳೂರು

ಬೆಂಗಳೂರು ನಗರದ ಹೃದಯ ಭಾಗವಾದ ಕಲಾಸಿಪಾಳ್ಯ ಬಸ್-ನಿಲ್ದಾಣದ ಪಕ್ಕದ ಬೀದಿಯಲ್ಲಿರುವ ಈ ದೇವಾಲಯ ಬೆಂಗಳೂರು ಚರಿತ್ರೆಯಲ್ಲಿ ಮುಖ್ಯ ಪಾತ್ರ ವಹಿಸಿದ ದೇವಾಲಯಗಳಲ್ಲಿ ಒಂದು. ಇಲ್ಲಿಯ ವಿವಿಧ ಶಿಲ್ಪಗಳಿಂದಾಗಿ ಮುಖ್ಯವಾದ ದೇವಸ್ಥಾನ ವೆನಿಸಿದೆ. ನಾಥಪಂಥದ ಸಂಪ್ರದಾಯದ ಹಿನ್ನೆಲೆಯಲ್ಲಿರುವ ನವನಾಥ ಮುನಿಗಳ ಶಿಲ್ಪಗಳನ್ನು ಇಲ್ಲಿಯ ಕಂಬದ ಮೇಲೆ ಉಬ್ಬು ಶಿಲ್ಪದ ರೂಪದಲ್ಲಿ ರಚಿಸಲಾಗಿದೆ. ನವನಾಥರ ಒಂಬತ್ತು ಮುನಿಗಳ ಶಿಲ್ಪಗಳು ಒಂದೆ ಸ್ಥಳದಲ್ಲಿ ದೊರೆಕಿದ ಉದಾಹರಣೆಗೆ ಈ ಜಲಕಂಠೇಶ್ವರ ದೇವಾಲಯವು ಸಾಕ್ಷಿ. ಅದರಂತೆ ಬೆಂಗಳೂರು ಕೋಟೆಯ ಒಳಾಂಗಣದಲ್ಲಿ ಶೈವ ದೇವಾಲಯ ಇರುವುದು ಕೂಡ ಮತ್ತೊಂದು ವಿಶೇಷ ಕ್ರಿ.ಶ. 1791ರಲ್ಲಿ ರಾಬರ್ಟ್ ಹೋಮ್ ರಚಿಸಿದ ಬೆಂಗಳೂರು ಕೋಟೆಯ ನಕ್ಷೆಯಲ್ಲಿ ಈ ದೇವಾಲಯವನ್ನು ತೋರಿಸಿದ್ದಾನೆ.[೧]

ದೇವಾಲಯದ ರಚನೆ[ಬದಲಾಯಿಸಿ]

ಕಲಾಸಿಪಾಳ್ಯ ಬಸ್ ನಿಲ್ದಾಣದ ಎದುರು ಇರುವ ಬೀದಿಯ ಎಡಬದಿಯಲ್ಲಿದೆ. ಈ ದೇವಾಲಯ ಮೂಲತ: ಇಲ್ಲಿಯ ಕೋಟೆಯ ಈಶಾನ್ಯ ಮೂಲೆಯಲ್ಲಿದೆ. ನಗರ ರಚನೆಯ ವಾಸ್ತು ಪ್ರಕಾರ ಈಶಾನ್ಯ ಮೂಲೆಯಲ್ಲಿ ಜಲ ಅಥವಾ ನೀರಿನ ಸ್ಥಳವಿರಬೇಕು ಎಂಬುದು ಸಂಪ್ರದಾಯ, ಪ್ರಾಯಶಃ ಇಲ್ಲಿಯ ಜಲಕಂಠೇಶ್ವರ ಈ ಸಂಪ್ರದಾಯವನ್ನು ಅನುಸರಿಸಿದೆ. ಈ ದೇವಾಲಯದಲ್ಲಿ ಒಂಬತ್ತು ಅಂಕಣದ ವಿಶಾಲವಾದ ಮಂಟಪವನ್ನು ನಿರ್ಮಿಸಿ ಅದರ ಮಧ್ಯದಲ್ಲಿ ಮುರು ಗರ್ಭಗೃಹಗಳನ್ನು ನಿರ್ಮಿಸಲಾಗಿದೆ. ಮಧ್ಯದ ಗರ್ಭಗೃಹದಲ್ಲಿ ಪ್ರಧಾನ ದೇವರಾದ ಜಲಕಂಠೇಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಮುಖ್ಯ ಗರ್ಭಗೃಹದ ಇಕ್ಕೆಡೆಗಳಲ್ಲಿ ಎರಡು ಗರ್ಭಗೃಹಗಳನ್ನು ನಿರ್ಮಿಸಲಾಗಿದೆ. ಎಡಬದಿಯ ಗರ್ಭಗೃಹದಲ್ಲಿ ಪಾರ್ವತಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಮ್ಮನವರು ಎಂದು ಇದನ್ನು ಪೂಜಿಸುತ್ತಾರೆ. ಅದರಂತೆ ಬಲಬದಿಯ ಗರ್ಭಗೃಹದಲ್ಲಿ ಕೈಲಾಸನಾಥನ ಲೋಹದ ಶಿಲ್ಪವನ್ನು ಪ್ರತಿಸ್ಥಾಪಿಸಿ ಪೂಜಿಸುತ್ತಾರೆ. ಮುಖ್ಯ ಗರ್ಭಗೃಹ ವಿಸ್ತಾರದಲ್ಲಿ ಪಕ್ಕದ ಎರಡು ಗರ್ಭಗೃಹಗಳಿಗಿಂತ ದೊಡ್ಡದಾಗಿದೆ. ಮುಖ್ಯ ಗರ್ಭಗೃಹದ ಬಾಗಿಲವಾಡದಲ್ಲಿ ಶೈವ ಪಂಥ ಸಂಕೇತಗಳಾದ ಡಮರು, ತ್ರಿಶೂಲ ಹಾಗೂ ಗದೆಗಳನ್ನು ಹಿಡಿದು ತಿಭಂಗ ಮುದ್ರೆಯಲ್ಲಿ ನಿಂತಿರುವ ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಮುಖ್ಯ ಗರ್ಭಗೃಹಕ್ಕೆ ಪ್ರದಕ್ಷಿಣೆ ಮಾಡಲು ಅನುಕೂಲಕ್ಕಾಗಿ ಪಕ್ಕದ ಎರಡು ಉಪಗರ್ಭಗಳನ್ನು ಮುಖ್ಯ ಗರ್ಭಗೃಹದಿಂದ ಸ್ವಲ್ಪ ಅಂತರದಲ್ಲಿ ನಿರ್ಮಿಸಲಾಗಿದೆ. ಇಲ್ಲಿಯ ನವರಂಗವು ಆಯತಾಕಾರವಾಗಿದೆ. ಈ ನವರಂಗದ ಕಂಬಗಳಲ್ಲಿಯೂ ಉಬ್ಬುಶಿಲ್ಪಗಳನ್ನು ಮಾಡಲಾಗಿದೆ. ಯಾಳಿ; ನಂದಿ; ಯತಿ; ಹಾಗೂ ಲಜ್ಜಾಗೌರಿ ಉಬ್ಬುಶಿಲ್ಪಗಳಿವೆ. ನವರಂಗದ ಒಳಛಾವಣಿ ಅಥವಾ ಭುವನೇಶ್ವರಿಯಲ್ಲಿಯೂ ಅಲ್ಲಲ್ಲಿ ಉಬ್ಬುಶಿಲ್ಪಗಳನ್ನು ರಚಿಸಲಾಗಿದೆ. ನವರಂಗದ ಪ್ರವೇಶದ್ವಾರವು ಕೂಡ ವಿವಿಧ ಸೂಕ್ಷ್ಮಕೆತ್ತನೆಗಳ ಪಟ್ಟಿಕೆಗಳಿವೆ. ದ್ವಾರದ ಲಲಾಟದಲ್ಲಿ ಗಜಲಕ್ಷ್ಮಿ ಉಬ್ಬುಶಿಲ್ಪವಿದೆ. ಈ ನವರಂಗದ ಬಲಬದಿಯಲ್ಲಿ ಉಯ್ಯಾಲೆ ಕಮಾನು ರಚಿಸಲಾಗಿದೆ.

ನಾಥಮುನಿಗಳ ಶಿಲ್ಪಗಳು[ಬದಲಾಯಿಸಿ]

ನವರಂಗದ ಮುಂಭಾಗದಲ್ಲಿ ಜಗಲಿಯ ರೂಪದಲ್ಲಿ ಮುಖಮಂಟಪವನ್ನು ನಿರ್ಮಿಸಲಾಗಿದೆ. ಈ ಜಗಲಿಗಳ ಮೇಲೆ ಸಾಲಾಗಿ ಕಂಬಗಳನ್ನು ಜೋಡಿಸಲಾಗಿದೆ. ಈ ಕಂಬಗಳು ತರಂಗ ಮಾದರಿಯ ಪೀಠಗಳ ಮೇಲೆ ಜೋಡಿಸಲಾಗಿವೆ. ಕಂಬಗಳು ಚಿತ್ರಖಂಡ ಮಾದರಿಯ ಶೈಲಿಯಲ್ಲಿ ರಚಿಸಲಾಗಿದೆ. ಇವು ಕೆಳಭಾಗದಲ್ಲಿ ಆಯತಾಕಾರ, ಅದರ ಮೇಲೆ ಅಷ್ಟಕೋನಾಕಾರ, ಮತ್ತೆ ಅದರ ಮೇಲೆ ಚೌಕಾಕಾರದ ವಿನ್ಯಾಸ ರಚನೆ ಹೊಂದಿವೆ. ಮೆಲ್ಬಾಗದಲ್ಲಿಯೂ ಕಂಬಗಳನ್ನು ಚೌಕಾಕಾರದ ಭಾಗಗಳಾಗಿ ರಚಿಸಲಾಗಿದೆ. ಪ್ರತಿ ಕಂಬಗಳ ಮೇಲೆ ಉಬ್ಬುಶಿಲ್ಪಗಳನ್ನು ಕೊರೆಯಲಾಗಿವೆ. ಇಲ್ಲಿಯ ಶಿಲ್ಪಗಳ ವೈವಿಧ್ಯತೆ ಗಮನಾರ್ಹ, ಬಲಭಾಗದ ಜಗಲಿಯ ಒಂದು ಕಂಬದ ಅದರ ನಾಲ್ಕು ಭಾಗಗಳಲ್ಲಿ ವಿವಿಧ ಭಂಗಿಗಳಲ್ಲಿರುವ ಯತಿಗಳ ಶಿಲ್ಪಗಳನ್ನು ರಚಿಸಲಾಗಿದೆ. ಈ ಯತಿಗಳು ಕುದುರೆ, ಸಿಂಹ, ವರಹ, ಮೀನು ಇತ್ಯಾದಿ ವಾಹನಗಳ ಮೇಲೆ ಕುಳಿತಿರುವರು. ಇವುಗಳಲ್ಲಿ ಕೆಲವರು ಚಿಲುಮೆಗಳನ್ನು ಕೈಯಲ್ಲಿ ಹಿಡಿದು ಧೂಮಪಾನ ಮಾಡುತ್ತಿರುವ ಭಂಗಿಗಳಲ್ಲಿ ತೋರಿಸಲಾಗಿದೆ. ಸ್ಥಳೀಯರ ಪ್ರಕಾರ ಇವು ರಾಶಿ ಶಿಲ್ಪಗಳೆಂದು ಕರೆಯುತ್ತಾರೆ. ಆದರೆ ರಾಶಿಯ ಶಿಲ್ಪಗಳಿಗಿಂತಲೂ ಭಿನ್ನವಾಗಿವೆ. ಇವರು ವಿವಿಧ ವಾಹನಗಳ ಮೇಲೆ ಕುಳಿತು ಚಿಲುಮೆ ಹಿಡಿದು ಅವಧೂತರಂತೆ ಚಿಲುಮೆ ಸೇದುತ್ತಿರುವರು. ಒಟ್ಟು ಒಂಬತ್ತು ಯತಿಗಳು ವಿವಿಧ ವಾಹನಗಳ ಮೇಲೆ ಕುಳಿತಿದ್ದಾರೆ. ಇಲ್ಲಿಯ ವಾಹನಗಳ ಆಧಾರದ ಮೇಲೆ ಇವರು ನಾಥಪಂಥದ ನವನಾಥ ಮುನಿಗಳೆಂದು ಗುರುತಿಸಲಾಗಿದೆ.

ದೇವಸ್ಥಾನದ ಗೋಪುರ ದ್ವಾರಗಳು[ಬದಲಾಯಿಸಿ]

ಮೂಲತಃ ಈ ದೇವಸ್ಥಾನಕ್ಕೆ ಎರಡು ಗೋಪುರ ದ್ವಾರಗಳು ಇದ್ದಂತೆ ಕಾಣುತ್ತದೆ. ಪೂರ್ವದ ಗೋಪುರ ದ್ವಾರ ನಾಶವಾಗಿದೆ. ಅದರ ಬದಲಿಗೆ ಈಗ ಚಿಕ್ಕ ದ್ವಾರ ಉಳಿದುಕೊಂಡಿದೆ. ಉತ್ತರ ಗೋಪರ ದ್ವಾರ ವ ಉಳಿದುಕೊಂಡಿದೆ. ಇದನ್ನು ಈಗ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ. ಒಟ್ಟಿನಲ್ಲಿ ಜಲಕಂಠೇಶ್ವರ ದೇವಾಲಯ ಬೆಂಗಳೂರು ಕೋಟೆಯ ಒಳಾಂಗಣದಲ್ಲಿದ್ದ ಒಂದು ಹಳೆಯ ಸ್ಮಾರಕವಾಗಿದ್ದು, ನಗರದ ಪರಂಪರೆಯ ಪ್ರತೀಕವಾಗಿದೆ. ನವನಾಥ ಮುನಿಗಳ ಶಿಲ್ಪಗಳಿಂದ ಇದನ್ನು ಬಹಳ ಮಹತ್ವದ ದೇವಸ್ಥಾನವಾಗಿ ಪರಿಗಣಿಸಲಾಗಿದೆ.

ವಿದ್ವಾಂಸರ ವಿಶ್ಲೇಷಣೆ[ಬದಲಾಯಿಸಿ]

ವಿದ್ವಾಂಸರಾದ ಅನಿಲಾ ವರ್ಗಿಸ್ ಅವರು ಈ ದೇವಾಲಯದ ಶಿಲ್ಪಗಳನ್ನು ವಿಶಿಷ್ಟವೆಂದು ಗುರುತಿಸಿ ಇವು ನವನಾಥಮುನಿಗಳ ಶಿಲ್ಪಗಳೆಂದು ಹೇಳಿದ್ದಾರೆ. ಇದೇ ತೆರನಾದ ನವನಾಥರ ಶಿಲ್ಪಗಳು ಹಲಸೂರಿನ ಸೋಮೇಶ್ವರ ದೇವಸ್ಥಾನದ ಬಲಬದಿಯ ಹೊರಗೋಡೆಯ ಮೇಲೆಯೂ ರಚಿಸಲಾಗಿದೆ. ನವನಾಥರ ಒಂಬತ್ತು ನಾಥ ಮುನಿಗಳ ಶಿಲ್ಪಗಳು ಒಂದೆಡೆ ದೊರಕಿರುವುದು ಬಹಳ ವಿಶೇಷ, ವಿದ್ವಾಂಸರ ಅಭಿಪ್ರಾಯದ ಪ್ರಕಾರ ಇಡೀ ದಕ್ಷಿಣ ಭಾರತದಲ್ಲಿಯೇ ಬೇರೆಡೆ ನವನಾಥಮುನಿಗಳ ಶಿಲ್ಪಗಳು ಒಟ್ಟಿಗೆ ಒಂದೆಡೆ ದೊರಕಿದ ಉದಾಹರಣೆಗಳು ಇಲ್ಲ. ವಿಜಯನಗರ ದೇವಸ್ಥಾನಗಳಲ್ಲಿ ಅಪರೂಪಕ್ಕೆ ಆಯ್ದ ನಾಥ-ಮುನಿಗಳ ಶಿಲ್ಪಗಳು ಕಂಬ ಅಥವಾ ಗೋಡೆಗಳ ಮೇಲೆ ಅಲ್ಲಲ್ಲಿ ರಚಿಸಿರುವ ಉದಾಹರಣೆಗಳಿವೆ. ಆದರೆ ಒಟ್ಟಿಗೆ ಒಂಬತ್ತು ನಾಥ-ಮುನಿಗಳ ಶಿಲ್ಪಗಳು ಒಂದೆಡೆ ರಚಿಸಿರುವ ಅಪರೂಪದ ಉದಾಹರಣೆ ಬೆಂಗಳೂರಿನ ಜಲಕಂಠೇಶ್ವರ ಹಾಗೂ ಹಲಸೂರಿನ ಸೋಮೇಶ್ವರ ದೇವಾಲಯಗಳು ಮಾತ್ರ ಇದು ನಗರದ ಒಂದು ಹೆಮ್ಮೆಯ ವಿಷಯ. ಮುಖಮಂಟಪದ ಇನ್ನುಳಿದ ಕಂಬಗಳ ಮೇಲೂ ಕತ್ತಿವರಸೆಯಲ್ಲಿ ನಿರತ ಸೈನಿಕರ ಶಿಲ್ಪ; ಕುಳಿತಿರುವ ಗಣೇಶ; ಯಾಳಿ, ಮತ್ತು ಸಿಂಹಗಳ ಉಬ್ಬುಶಿಲ್ಪಗಳಿವೆ. ಜಲಕಂಠೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸುಮಾರು 20 ಅಡಿ ಎತ್ತರದ ಏಕಶಿಲಾ ನಂದಿಧ್ವಜಸ್ತಂಭವಿದೆ. ಈ ಸ್ತಂಭದ ಮೇಲೆ ಶಿವನ ಸಂಕೇತಗಳಾದ ತ್ರಿಶೂಲ, ಡಮರು, ಮಾನವ ಆಕೃತಿಯ ನಂದಿ ಹಾಗೂ ಆಂಜನೇಯ ಉಬ್ಬುಶಿಲ್ಪಗಳನ್ನು ರಚಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಅರುಣಿ, ಎಸ್.ಕೆ (2019). ಬೆಂಗಳೂರು ಪರಂಪರೆ. ಕೆಂಪೇಗೌಡನಗರ, ಬೆಂಗಳೂರು: ಇತಿಹಾಸ ದರ್ಪಣ ಪ್ರಕಾಶ. p. 114. ISBN 9788193081433.