ಜರ್ಮನ್ ನ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜರ್ಮನ್ ನ್ಯಾಯವು ಜರ್ಮಾನಿಕ್ ಜನಾಂಗಗಳ ನ್ಯಾಯವೂ ಹೌದು, ಜರ್ಮನಿಯ ನ್ಯಾಯವೂ ಹೌದು. ಹಾಗೆಯೇ ಆಧುನಿಕ ಜರ್ಮನ್ ನ್ಯಾಯದಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ಕಾನೂನುಗಳು ವಿವೇಚನೆಯ ವಿಷಯವಾಗುತ್ತವೆ. 1945ರಿಂದ ಈಚೆಗೆ ಈ ಎರಡೂ ರಾಜ್ಯಗಳಲ್ಲಿಯ ನ್ಯಾಯಿಕ ಮೌಲ್ಯಗಳು ವ್ಯತ್ಯಾಸಗೊಂಡಿವೆ.


ಈ ಲೇಖನದಲ್ಲಿ 1945ರ ವರೆಗಿನ ಜರ್ಮನ್ ನ್ಯಾಯವನ್ನೂ ಈ ಎರಡು ರಾಜ್ಯಗಳಲ್ಲಿ ಆಗಿರುವ ಬದಲಾವಣೆಯನ್ನೂ ಕುರಿತು ವಿವೇಚಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ಜರ್ಮನ್ ನ್ಯಾಯ ಜರ್ಮ್ಯಾನಿಕ್ ಜನಾಂಗಗಳಲ್ಲಿ ರೂಢಿಯಲ್ಲಿದ್ದ ನ್ಯಾಯವಾಗಿತ್ತು. ಅದು ಕೇವಲ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡ ನ್ಯಾಯ ಶಾಸ್ತ್ರವಾಗಿರಲಿಲ್ಲ. ಆಲ್ಲದೆ ಮೂಲತಃ ಪ್ರಾದೇಶಿಕ ಮೇರೆಗಳಿಂದ ಇದು ಸೀಮಿತವಾಗಿಯೂ ಇರಲಿಲ್ಲ. ಜರ್ಮನ್ ಮೂಲದ ಹಲವಾರು ಜನಾಂಗಗಳಿಗೆ ಸೇರಿದ್ದ ಜನರ ರೂಢಿ, ಸಂಪ್ರದಾಯ, ನೀತಿ, ನಿಯಮಗಳು ಪ್ರಾಚೀನ ಜರ್ಮನ್ ನ್ಯಾಯದ ತಳಹದಿಯಾಗಿವೆ. ಜರ್ಮನ್ ಮೂಲದ ವಿವಿಧ ಜನಾಂಗಗಳಲ್ಲಿದ್ದ ಅನೇಕತೆಯಲ್ಲಿಯ ಏಕತೆ ಅವರ ಸಾಮಾಜಿಕ ಹಾಗೂ ಪ್ರಾದೇಶಿಕ ಒಗ್ಗಟ್ಟಿಗೆ ಮಾತ್ರವೇ ಅಲ್ಲದೆ ಅವರ ನ್ಯಾಯ ಬೆಳೆಯುವುದಕ್ಕೂ ಕಾರಣವಾಯಿತು. ಇದು ಪ್ರಾಚೀನ ಜರ್ಮನ್ ನ್ಯಾಯದ ವೈಶಿಷ್ಟ್ಯ.

ಕ್ರಿ.ಪೂ. 2ನೆಯ ಶತಮಾನದವರೆಗೆ ಜರ್ಮನ್ ಮೂಲದ ಸ್ಯಾಲಿಕ್, ಫ್ರಾಂಕ್, ಆಲಮಾನ್, ವಿಸಿಗಾತ್, ಬವೇರಿಯನ್, ಲೊಂಬಾರ್ಡಿ-ಮುಂತಾದ ಅನೇಕ ಪಂಗಡಗಳು ಅಲೆಮಾರಿ ಗುಂಪುಗಳಂತೆ ಸಂಚಾರನಿರತವಾಗಿದ್ದುವು. ಆ ಜನರ ನ್ಯಾಯಿಕ ಸೂತ್ರಗಳು ಅನಾಗರಿಕವಾಗಿದ್ದುವೆಂದು ಕ್ರಿ.ಪೂ. 58ರ ಸುಮಾರಿಗೆ ರೈನ್ ನದಿಯವರೆಗಿನ ಜರ್ಮನ್ ಪ್ರದೇಶವನ್ನು ಆಕ್ರಮಿಸಿದ ಜೂಲಿಯಸ್ ಸಿûೀಸರ್ ಹೇಳಿದ್ದಾನೆ. ಕೊಲೆಗಡುಕ, ಕೊಲೆಯಾದವನ ಸ್ಥಾನಮಾನಕ್ಕನುಗುಣವಾಗಿ ಹಣದ ದಂಡ ಕೊಡಬೇಕಾಗುತ್ತಿತ್ತು. ಜೂಲಿಯಸ್ ಸಿûೀಸರನಿಂದ ಜರ್ಮನ್ ನ್ಯಾಯ ಸೂತ್ರಗಳ ಸ್ಪಷ್ಟ ವಿವರಗಳು ದೊರೆಯದಿದ್ದರೂ ಅವರು ಉತ್ತಮ ಕೃಷಿಕರಾಗಿರಲಿಲ್ಲವೆಂದೂ ಅವರ ರಾಜಕೀಯ ಸಾಮಾಜಿಕ ಜೀವನ ಮುಖಂಡರ ನಿಯಂತ್ರಣಕ್ಕೆ ಒಳಪಟ್ಟಿತ್ತೆಂದೂ ತಿಳಿದುಬರುತ್ತದೆ.

ಟ್ಯಾಸಟಸ್ ಕ್ರಿ.ಶ, ಸುಮಾರು 98ರಲ್ಲಿ ಬರೆದಿರಬಹುದಾದ ಜರ್ಮೇನಿಯ ಎಂಬ ಪುಸ್ತಕದಿಂದ ಜರ್ಮನ್ ನ್ಯಾಯವ್ಯವಸ್ಥೆಯ ಕೆಲವು ವಿವರಗಳು ದೊರೆಯುತ್ತವೆ. ಸಣ್ಣಪುಟ್ಟ ವಿವಾದಗಳನ್ನು ಬಂಧುಗಳೇ ನಿರ್ಣಯ ಮಾಡುತ್ತಿದ್ದರು. ಆ ಕಾಲಕ್ಕೆ ಆಗಲೇ ನ್ಯಾಯನಿರ್ಣಯ ಕೊಡುತ್ತಿದ್ದ ಮುಖಂಡರು ಆರಿಸಿ ಬಂದ ಜನಪ್ರತಿನಿಧಿಗಳಾಗಿರುತ್ತಿದ್ದರು. ಅಪರಾಧಗಳ ತಾರತಮ್ಯದ ಪರಿಕಲ್ಪನೆ ಮತ್ತು ಅವುಗಳಿಗೆ ವಿಧಿಸಬಹುದಾದ ದಂಡಗಳು ನ್ಯಾಯಸೂತ್ರದ ರೂಪತಾಳಿದ್ದುವು. ಮುಖಂಡರು ಅನೇಕ ಅಪರಾಧಗಳ ವಿಚಾರಣೆಯ ಮತ್ತು ದಂಡ ವಿಧಿಸುವ ಕೆಲಸ ಮಾಡುತ್ತಿದ್ದರು. ಅವರು ಈ ಕೆಲಸಕ್ಕಾಗಿ ಬೇರೆಬೇರೆ ಸ್ಥಳಗಳಿಗೆ ಭೇಟಿ ಕೊಡಬೇಕಾಗುತ್ತಿತ್ತು ; ಅವರಿಗೆ 100 ಜನರ ಬೆಂಗಾವಲು ಇರುತ್ತಿತ್ತು. ಅಪರಾಧದ ಮಹತ್ತ್ವಕ್ಕೆ ಅನುಗುಣವಾಗಿ, ಕುದುರೆ ಮತ್ತು ದನಗಳ ರೂಪದಲ್ಲಿ, ದಂಡ ಕೊಡಬೇಕಾಗುತ್ತಿತ್ತು. ಈ ಅಲೆಮಾರಿ ಜನಾಂಗಗಳು ಸಾಗುವಳಿ ಕೆಲಸವನ್ನು ಆರಂಭಿಸಿದ್ದರು. ಆದ್ದರಿಂದ ಭೂಮಿಯ ಅನುಭೋಗ ಮತ್ತು ಒಡೆತನದ ಪರಿಕಲ್ಪನೆಗಳು ನ್ಯಾಯಿಕ ಸ್ವರೂಪ ತಾಳಿದುವು. ಕ್ರಿ.ಶ. 2ನೆಯ ಶತಮಾನದಿಂದ ಭೂಮಿಯ ಒಡೆತನದ ಹಕ್ಕು ಆಚರಣೆಯಲ್ಲಿದ್ದುದು ಕಂಡುಬರುತ್ತದೆ.

ಸುಮಾರು 4ನೆಯ ಶತಮಾನದವರೆಗೆ ಜರ್ಮನ್ ನ್ಯಾಯವನ್ನು ಬರೆದಿಡಲಾಗಿರಲಿಲ್ಲ, ಜರ್ಮನ್ ಪ್ರದೇಶದಲ್ಲಿ ರಾಜರ ಆಳ್ವಿಕೆ ಬಾರದಿದ್ದುದು ಇದಕ್ಕೆ ಕಾರಣವಾಗಿರಬಹುದು. ಆ ಕಾಲಕ್ಕಾಗಲೇ ಜರ್ಮನರಿಗೆ ಬರೆಯುವ ಕಲೆಗೊತ್ತಿತ್ತು. ವಿವಿಧ ಜನಾಂಗಗಳಲ್ಲಿ ಆಚರಣೆಯಲ್ಲಿದ್ದ ನ್ಯಾಯ ಸೂತ್ರಗಳು ಬೇರೆ ಬೇರೆ ಆಗಿದ್ದುವು. ಅವುಗಳ ಸ್ವರೂಪವೂ ಬೇರೆಯಾಗಿತ್ತು. ಫ್ರಾಂಕಿಷ್ ಜನರ ನ್ಯಾಯಸೂತ್ರಗಳು ವಿಶೇಷ ಆಜ್ಞೆಗಳ ರೂಪದಲ್ಲಿರುತ್ತಿದ್ದುವು. ಆದರೆ ಸ್ಕಾಂಡಿ ನೇವಿಯನ್ ಜನರ ನ್ಯಾಯಸೂತ್ರಗಳು ವಿಶೇಷ ಸಭೆಗಳಲ್ಲಿ ಘೋಷಿತವಾಗುತ್ತಿದ್ದುವು. ಸಾರ್ವಜನಿಕ ಸಮ್ಮತಿ ಪಡೆದ ಈ ನ್ಯಾಯಸೂತ್ರಗಳು ನಿರ್ದಿಷ್ಟ ಪಡಿಸಿದ ಕಾಲದವರೆಗೆ ಜಾರಿಯಲ್ಲಿರುತ್ತಿದ್ದುವು. ಸಾರ್ವಜನಿಕ ಸಭೆಯಲ್ಲಿ ನ್ಯಾಯ ಸೂತ್ರಗಳ ಪೂರ್ಣಪಾಠವನ್ನು ಒಬ್ಬನೇ ಪಠಿಸುತ್ತಿದ್ದ. ಅಲ್ಲಿ ತಿದ್ದುಪಡಿಗಳನ್ನು ಮಂಡಿಸುವ ಪದ್ಧತಿ ಇರಲಿಲ್ಲ. ಮಂಡಿಸಲಾದ ನ್ಯಾಯಸೂತ್ರಗಳ ಪೂರ್ಣ ಪಾಠವನ್ನು ಸಭೆ ಒಪ್ಪುತ್ತಿತ್ತು, ಇಲ್ಲವೆ ನಿರಾಕರಿಸುತ್ತಿತ್ತು.

ಸು. 410ರಲ್ಲಿ ಜರ್ಮನರು ರೋಮನರನ್ನು ಸೋಲಿಸಿದ್ದು ಅವರ ನ್ಯಾಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಜರ್ಮನ್ ಜನಾಂಗಗಳು ಒಂದು ಕಡೆ ರಾಜಕೀಯವಾಗಿ ಪ್ರಬಲವಾದುವು ; ಇನ್ನೊಂದು ಕಡೆ ಸಾಮಾಜಿಕವಾಗಿ ಗ್ರೀಕ್ ಹಾಗೂ ರೋಮನರ ಸಂಸ್ಕøತಿಗಳ ಮತ್ತು ಕ್ರೈಸ್ತಮತದ ತತ್ತ್ವಗಳ ಪ್ರಭಾವಕ್ಕೆ ಹೊಂದಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು. ಹೀಗಾಗಿ ಜರ್ಮನ್ ನ್ಯಾಯವನ್ನು ಬರೆದಿಡುವ ಕಾರ್ಯ ಆರಂಭವಾಯಿತು. ಆ ಕಾಲದಲ್ಲಿ ಏಕರೂಪದ ಜರ್ಮನ್ ನ್ಯಾಯ ಅಸ್ತಿತ್ವದಲ್ಲಿರಲಿಲ್ಲ. ಕಾಲಕ್ರಮದಲ್ಲಿ ವಿವಿಧ ಜನಾಂಗಗಳವರು ತಂತಮ್ಮ ನ್ಯಾಯಸೂತ್ರಗಳನ್ನು ಕ್ರೋಡೀಕರಿಸಿ ಸಂಹಿತೆಗಳ ರೂಪದಲ್ಲಿ ಬರೆದಿಟ್ಟರು. ಅವುಗಳಲ್ಲಿ ಸ್ಯಾಲಿಕ್ ಮೂಲದ ಲೆಜಿಸ್ ಜರ್ಮನೋರಮ್, ಗಾತಿಕ್ ಜನಕ್ಕೆ ಸಂಬಂಧಿಸಿದ ಲೆಜಿಸ್ ವಿಸಿಗಾತೊರಮ್, ಬಗ್ರ್ಪಂಡಿ ಜನಕ್ಕೆ ಸಂಬಂಧಿಸಿದ ಲೆಕ್ಸ್ ಬರ್ಗೊಂಡಿಯನಮ್, ಲೊಂಬಾರ್ಡಿ ಜನರ ಲೆಜಿಸ್ ಲ್ಯಾಂಗೋ ಬಾರ್ಡೊರಮ್, ಫ್ರಾಂಕಿಪ್ ಮೂಲದ ಆಲಮಾನಿಕ್ ಸಂಹಿತೆಗಳು ಮುಖ್ಯವಾದವು. ಹಾಗೆಯೇ, ಲೆಕ್ಸ್ ಸ್ಯಾಕ್ಸೋನಮ್, ಲೆಕ್ಸ್ ಬವೇರಿಯನ್ ಸಂಹಿತೆಗಳೂ ಆಚರಣೆಯಲ್ಲಿ ಬಂದವು. ಸಮ್ರಾಟ್ 1ನೆಯ ಫ್ರೆಡರಿಕ್ ಜರ್ಮನಿಯನ್ನು ಒಂದು ಗೂಡಿಸಿದರೂ ಆತನ ಮರಣಾನಂತರ ಸಣ್ಣಪುಟ್ಟ ರಾಜ್ಯಗಳು ಮತ್ತೆ ಸ್ವತಂತ್ರವಾದುವು. 15ನೆಯ ಶತಮಾನದಿಂದ ರೋಮನ್ ನ್ಯಾಯದಿಂದ (ಕಾರ್ಪಸ್ (ಜುರಿಸ್) ಪ್ರಭಾವ ಹೊಂದಿ ಬೆಳೆಯಹತ್ತಿದರೂ ಮೂವತ್ತು ವರ್ಷಗಳ ಯುದ್ಧ (1618-1648) ಜರ್ಮನಿಯಲ್ಲಿ ಹಾಳು ಮಾಡಿತಲ್ಲದೆ ನ್ಯಾಯಶಾಸ್ತ್ರದ ಬಹುಮುಖ ಬೆಳವಣಿಗೆಗೆ ಅಡ್ಡಿಯಾಯಿತು.

1656 ಬವೇರಿಯನ್ ಸಂಹಿತೆಯ ಮೂಲಕ ಜರ್ಮನ್ ನ್ಯಾಯದ ಕ್ರೊಡೀಕರಣದ ಎರಡನೆಯ ಯುಗ ಆರಂಭವಾಯಿತು. 1794ರ ಪ್ರಷ್ಯದ ಸಂಹಿತೆ ರಾಜ್ಯದ ಯೋಜನಾದೃಷ್ಟಿ ಹಾಗೂ ಸಕಾರಣಿಕ ವಿವೇಚನೆಗಳ ಸಂಯೋಗದ ಉದಾಹರಣೆಯಾಗಿದೆ. ನ್ಯಾಯಾಧೀಶರ ವ್ಯಾಖ್ಯಾನಕ್ಕೆ ಎಡೆ ಇರಬಾರದೆಂಬುದು ಈ ಸಂಹಿತೆಯ ಉದ್ದೇಶವಾಗಿತ್ತು. 1811ರ ಆಸ್ಟ್ರಿಯದ ದಿವಾಣೀ ಸಂಹಿತೆ ತಿದ್ದುಪಡಿಗಳ ಸಹಿತ ಆಚರಣೆಯಲ್ಲಿತ್ತು. 1814ರಲ್ಲಿ ಜರ್ಮನಿಯ ಎಲ್ಲ ರಾಜ್ಯಗಳಿಗೂ ಏಕರೂಪದ ದಿವಾಣೀ ಸಂಹಿತೆ ಅನ್ವಯಿಸಬೇಕೆಂದು ನ್ಯಾಯಶಾಸ್ತ್ರ ಪ್ರಾಧ್ಯಾಪಕನಾಗಿದ್ದ ಎ.ಎಫ್. ಥೈಬಾಟ್ ಪ್ರತಿಪಾದಿಸಿದ. ಆದರೆ ಜರ್ಮನ್ ನ್ಯಾಯಶಾಸ್ತ್ರ ಪಂಡಿತ ಎಫ್. ಕೆ. ಓ. ಸ್ಯಾವಿಗ್ನಿ ಇದನ್ನು ವಿರೋಧಿಸಿದ. ಜನರ ಆಂತರಿಕ ಮನವರಿಕೆಯ ಫಲವಾಗಿ ನ್ಯಾಯ ಬೆಳೆಯಬೇಕೆಂಬುದೂ ಸಮಕಾಲೀನ ಜನತೆಗೆ ನ್ಯಾಯಶಾಸ್ತ್ರದ ವಿಶಿಷ್ಟಜ್ಞಾನ ಇರಲಿಲ್ಲವೆಂಬುದೂ ಆತನ ಅಭಿಪ್ರಾಯಗಳಾಗಿದ್ದುವು. ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಜರ್ಮನಿ ರಾಜಕೀಯವಾಗಿ ಆಗ ಒಂದು ರಾಷ್ಟ್ರವಾಗಿರಲಿಲ್ಲ. ಆದ್ದರಿಂದ ಏಕರೂಪದ ದಿವಾಣೀ ಸಂಹಿತೆಯ ಆವಶ್ಯಕತೆ ಉಂಟಾಗಲಿಲ್ಲ. ನ್ಯಾಯಶಾಸ್ತ್ರದ ದೃಷ್ಟಿಯಿಂದ 1849ರಲ್ಲಿ ರೂಪುಗೊಂಡ ಪ್ರಥಮ ಸಹಕಾರೀ ಸಂಸ್ಥೆಯ ಮತ್ತು 1848ರ ವಿನಿಮಯ ಪತ್ರಗಳ ನ್ಯಾಯಸೂತ್ರಗಳು ಮುಖ್ಯವಾದವು. ಈ ಕಾಲದಲ್ಲಿ ವಾಣಿಜೋದ್ಯಮ ಬೆಳೆದ ಕಾರಣ 1861ರ ವಾಣಿಜ್ಯ ಸಂಹಿತೆ ಆಚರಣೆಯಲ್ಲಿ ಬಂತು. ಪ್ರಾದೇಶಿಕ ದಿವಾಣೀ ಸಂಹಿತೆಗಳಲ್ಲಿ 1863ರ ಸ್ಯಾಕ್ಸೊನಿ ದಿವಾಣಿ ಸಂಹಿತೆಯೂ ಒಂದು.

1848-49ರ ಫ್ರಾಂಕ್ ಫರ್ಟ್ ಸಂವಿಧಾನದ ಮೂಲಕ ಜರ್ಮನಿಯ ಆಧುನಿಕ ಸಂವೈಧಾನಿಕ ನ್ಯಾಯದ ಇತಿಹಾಸ ಆರಂಭವಾಗುತ್ತದೆ ಎನ್ನಬಹುದು. ಇದನ್ನು ರಾಜ್ಯಗಳು ಒಪ್ಪಲಿಲ್ಲ. 1871ರಲ್ಲಿ ಬಿಸ್ಮಾರ್ಕನ ಪ್ರಭಾವದಿಂದಾಗಿ ಜರ್ಮನ್ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂತು. 1873ರಲ್ಲಿ ಆಚರಣೆಗೆ ಬಂದ ನಗರಪಾಲಿಕೆಗಳ ಅಧಿನಿಯಮ ಸ್ಥಳೀಯ ಪ್ರಜಾಧಿಕಾರದ ಕಾನೂನಿಗಳಿಗೆ ನಾಂದಿಯಾಯಿತು. ಸಾಮ್ರಾಜ್ಯದ ನ್ಯಾಯವಿಭಾಗಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನು 1874ರಲ್ಲಿ ಅನುಮೋದಿಸಲಾಯಿತು. ಅದೇ ವರ್ಷದಲ್ಲಿ ವೃತ್ತಪತ್ರಿಕೆಗಳ ಮೇಲಿನ ನಿರ್ಬಂಧಗಳನ್ನು ಕೂಡ ತೆಗೆಯಲಾಯಿತು.

1919ರ ವೈಮಾರ್ ಸಂವಿಧಾನ, ಹಿಟ್ಲರನ ಆಡಳಿತ, 1933ರ ಅಧಿನಿಯಮ ಎರಡನೆಯ ಮುಹಾಯುದ್ಧದ ಆನಂತರ ಅಸ್ತಿತ್ವಕ್ಕೆ ಬಂದ ಜರ್ಮನ್ ಪ್ರದೇಶದ ನಾಲ್ಕು ಭಾಗಗಳು, ಮುಂದೆ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳಾಗಿ ಎರಡು ರಾಜ್ಯಗಳು ರೂಪುಗೊಂಡದ್ದು, ಅವಕ್ಕೆ ಅನ್ವಯಿಸುವ ಆಡಳಿತ ಸೂತ್ರಗಳು-ಇವು ಜರ್ಮನಿಯ ಸಂವೈಧಾನಿಕ ನ್ಯಾಯದ ಇತಿಹಾಸದ ಮುಖ್ಯ ಘಟ್ಟಗಳು. 1919ರ ವೈಮಾರ್ ಸಂವಿಧನದ ಮೇರೆಗೆ ಅಧ್ಯಕ್ಷನನ್ನು ನೇರವಾಗಿ ಚುನಾಯಿಸಲಾಗುತ್ತಿತ್ತು. ಜನರ ಪ್ರಾತಿನಿಧ್ಯವುಳ್ಳ ಸಾಮಾನ್ಯ ಸಭೆ ಅಥವಾ ಸಂಪತ್ತು ಕಾನೂನುಗಳನ್ನು ರಚಿಸಬಹುದಾಗಿತ್ತಾದರೂ ಅಧ್ಯಕ್ಷನಿಗೆ ಹೆಚ್ಚಿನ ಅಧಿಕಾರಗಳು ಇದ್ದುವು. ಸಂಸತ್ತನ್ನು ವಿಘಟಿಸುವ ಅಧಿಕಾರ ಕೂಡ ಆತನಿಗಿತ್ತು. 1933ರ ಅಧಿನಿಯಮವನ್ನು ಜಾರಿಗೆ ತಂದು ಹಿಟ್ಲರ್ ಈ ಸಂವಿಧಾನವನ್ನು ನಿಷ್ಕ್ರಿಯಗೊಳಿಸಿದ.

1945ರ ಹಿಂದೆ ಜರ್ಮನ್ ನ್ಯಾಯ ಬೆಳೆದು ಬಂದ ರೀತಿ ಹೀಗಿದೆ ; 1871ರಲ್ಲಿ ಜರ್ಮನ್ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದುದನ್ನು ಹಿಂದೆಯೇ ಹೇಳಲಾಗಿದೆ. 1871 ರಿಂದ 1945ರವರೆಗೆ ಜರ್ಮನಿ ದೇಶಕ್ಕೆಲ್ಲ ಏಕರೂಪದ ನ್ಯಾಯಸೂತ್ರಗಳು ಅನ್ವಯವಾಗುತ್ತಿದ್ದುವು. 1900ರಲ್ಲಿ ಇಂಥ ಏಕರೂಪದ ದಿವಾಣೀ ಸಂಹಿತೆ ಆಚರಣೆಯಲ್ಲಿ ಬಂತು. ಈ ಸಂಹಿತೆಯನ್ನು ಸಿದ್ಧಗೊಳಿಸಿದವರು ಜರ್ಮನ್ ನ್ಯಾಯಶಾಸ್ತ್ರ ತಜ್ಞರು. ಇದರಲ್ಲಿ ರಾಜಕೀಯ ಹಾಗೂ ನೈತಿಕ ಮೌಲ್ಯಗಳನ್ನು ಪ್ರತಿಪಾದಿಸಿಲ್ಲ. ದಿವಾಣಿ ಸಂಹಿತೆಯಲ್ಲಿ ಐದು ಭಾಗಗಳಿವೆ : 1. ವ್ಯಕ್ತಿ ವಿಷಯಗಳು ಮತ್ತು ಕ್ರಿಯೆ ಇವುಗಳ ವಿವೇಚನೆ, 2. ಕರ್ತವ್ಯ ಹಾಗೂ ಬಾಧ್ಯತೆಗಳ ಸಂಬಂಧ ಕುರಿತ ನಿಯಮಗಳು, 3. ಸ್ವತ್ತಿಗೆ ಸಂಬಂಧಿಸಿದ ನಿಯಮಗಳು, 4. ಕೌಟುಂಬಿಕ ನಿಯಮಗಳು ಮತ್ತು 5. ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಯಮಗಳು. ಪ್ರತಿಯೊಬ್ಬನಿಗೂ ಜನ್ಮಾರಭ್ಯ ಹಕ್ಕುಗಳು ಮತ್ತು ಕರ್ತವ್ಯಗಳು ಲಭಿಸುತ್ತವೆ. ಪೂರ್ಣಾಧಿಕಾರ ಪಡೆಯಲು ಅವಶ್ಯವಾದ ಪ್ರಾಪ್ತವಯಸ್ಸು 21. ಅಪ್ರಾಪ್ತವಯಸ್ಕರು ತಮ್ಮ ಪ್ರತಿನಿಧಿಯ ಮೂಲಕ ದಾವೆ ಹಾಕಬಹುದು. ಏಳು ವರ್ಷಗಳಿಗೆ ಹೆಚ್ಚಿನ ವಯಸ್ಸಿನವರು ತಮ್ಮ ಹಿತಕ್ಕೆ ಲಾಭದಾಯಕವಾದ ವ್ಯವಹಾರ ಮಾಡಬಹುದು. ವ್ಯಕ್ತಿ ಸ್ವಾತಂತ್ರ್ಯದ ಮತ್ತು ವ್ಯಕ್ತಿತ್ವದ ರಕ್ಷಣೆಗೆ ಅವಕಾಶವುಂಟು.

ಕರಾರು ವಿಧಿಬದ್ಧವಾಗಬೇಕಾದರೆ ಅದರಲ್ಲಿ ಪರಸ್ಪರರು ಉದ್ದೇಶಗಳನ್ನು ಒಪ್ಪಿದ ಬಗ್ಗೆ ಘೋಷಣೆ ಇರಬೇಕು. ಜರ್ಮನ್ ನ್ಯಾಯದ ಕರಾರು ಇಂಗ್ಲಿಷ್ ಮತ್ತು ಇಟಾಲಿಯನ್ ನ್ಯಾಯಗಳನ್ವಯದ ಕರಾರುಗಳಿಂದ ಸ್ವಲ್ಪ ಭಿನ್ನವಾದ್ದು. ಇಂಗ್ಲಿಷ್ ನ್ಯಾಯದ ಪ್ರತಿಫಲದ, ಇಟಲಿಯ ನ್ಯಾಯದ ಸಮರ್ಥನೀಯ ಹಿತದ ನ್ಯಾಯಿಕ ಪರಿಕಲ್ಪನೆಗಳು ಇದರಲ್ಲಿ ಅಡಕವಾಗಿಲ್ಲ. ಇದರಲ್ಲಿ ಸದುದ್ದೇಶಕ್ಕೆ ಮಾನ್ಯತೆ ಇದೆ. ಅವಧಿ ನಿರ್ಣಯ ಪ್ರಕ್ರಿಯಾವಿಧಿಯಾಗಿಲ್ಲ. ದಾನ, ವಿಕ್ರಯ ಮುಂತಾದ ರೀತಿಯಲ್ಲಿ ಸ್ವತ್ತನ್ನು ಪರಭಾರೆ ಮಾಡದೆ ವಂಶಪಾರಂಪರ್ಯವಾಗಿ ಅನುಭೋಗ ಮಾಡುವ ಪದ್ಧತಿಯನ್ನು ಒಂದನೆಯ ಮಹಾಯುದ್ಧದ ಅನಂತರ ರದ್ದು ಮಾಡಲಾಯಿತು. ಬೇರೊಬ್ಬನ ಆದಾಯವನ್ನು ಮರೆ ಮಾಚಿ ದೋಚಿದ್ದಲ್ಲಿ ಅದನ್ನು ಸಂದಾಯ ಮಾಡುವ, ಇತರರ ಸ್ವತ್ತಿಗೆ ಹಾನಿ ಮಾಡಿದ್ದರೆ ಪರಿಹಾರ ಕೊಡಬೇಕಾಗುವ ಬಗ್ಗೆ ನಿಯಮಗಳೂ ಇದರಲ್ಲಿವೆ.

ಸ್ಥಿರ, ಚರ ಸ್ವತ್ತುಗಳು, ಅವುಗಳ ಸ್ವಾಧೀನತೆ ಹಾಗೂ ಒಡೆತನ, ಅವುಗಳ ಪರಭಾರೆ ಮಾಡುವುದನ್ನು ಕುರಿತ ನಿಯಮಗಳು ಇದರಲ್ಲಿವೆ. 1875ರಿಂದ ಈಚೆಗೆ, ವಿವಾಹವನ್ನು ರಿಜಿಸ್ಟ್ರಾರನ ಮೂಲಕ ಸಾಮಾಜಿಕವಾಗಿ ನೆರವೇರಿಸಿದ ಮೇಲೆ ಚರ್ಚಿನಲ್ಲೂ ಮಾಡಬಹುದು. ಕುಟುಂಬಕ್ಕೆ ಸಂಬಂಧಿಸಿದ ನ್ಯಾಯಸೂತ್ರಗಳು ಇತ್ತೀಚಿನ ಶಾಸನಗಳಿಂದಾಗಿ ಮಾರ್ಪಾಟು ಹೊಂದಿವೆ. ಮೃತನ ಉಯಿಲಿನಲ್ಲಿ ಉಕ್ತನಾದ ಉತ್ತರಾಧಿಕಾರಿ, ಉಯಿಲು ಇಲ್ಲದಿದ್ದಲ್ಲಿ ಆತನ ರಕ್ತಸಂಬಂಧಿ ಉತ್ತರಾಧಿಕಾರಿ. ಮೃತನ ಎಲ್ಲ ಹಕ್ಕುಬಾಧ್ಯತೆಗಳಿಗೂ ಹೊಣೆಗಾರಿಕೆಗಳಿಗೂ ಬಾಧ್ಯನಾಗುತ್ತಾನೆ. ಉಯಿಲು ಸಾಮಾಜಿಕ ಅಥವಾ ವೈಯಕ್ತಿಕವಾಗಿರಬಹುದು. ಉಯಿಲು ಮಾಡಿರದ ಮೃತನ ಆಸ್ತಿಗೆ ಬಾಧ್ಯರಾಗುವ ಉತ್ತರಾಧಿಕಾರಿಗಳನ್ನು ಪಂಗಡಗಳನ್ನಾಗಿ ವಿಂಗಡಿಸಲಾಗಿದೆ. 1. ಮೃತನ ಮಕ್ಕಳು ; 2. ಮೃತನ ತಂದೆ, ತಾಯಿ ಮತ್ತು ಅವರ ಮಕ್ಕಳು ; 3. ಮೃತನ ಅಜ್ಜ, ಅಜ್ಜಿ ಹಾಗೂ ಅವರ ಮಕ್ಕಳು ; ಹೀಗೇಯೇ ಪಂಗಡಗಳು ಮುಂದುವರಿಯುತ್ತವೆ. ಅಲ್ಲದೆ ಒಂದು ಪಂಗಡದಲ್ಲಿ ಯಾರಾದರೂ ಇದ್ದರೆ ಅನಂತರದ ಪಂಗಡದವರಿಗೆ ಯಾವ ಹಕ್ಕುಗಳೂ ಲಭಿಸುವುದಿಲ್ಲ. ಬದುಕಿದ್ದ ಪತಿ ಅಥವಾ ಪತ್ನಿಗೆ ಮೃತನ ಆಸ್ತಿಯಲ್ಲಿ ಭಾಗ ಇರುತ್ತದೆ.

ಎರಡನೆಯ ಮಹಾಯುದ್ಧದಲ್ಲಿ ಪರಾಜಯಗೊಂಡ ಜರ್ಮನಿ ಒಡೆದು ನಾಲ್ಕು ಭಾಗಗಳಾಗಿ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಸೋವಿಯತ್ ದೇಶಗಳ ಆದಿಪತ್ಯಕ್ಕೆ ಒಳಗಾಯಿತು. ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‍ಗಳ ಆಧಿಪತ್ಯದಲ್ಲಿದ್ದ ಮೂರು ಭಾಗಗಳು ಸೇರಿ ಜರ್ಮನ್ ಸಂಯುಕ್ತ ಗಣರಾಜ್ಯ (ಪಶ್ಚಿಮ ಜರ್ಮನಿ) ಆಯಿತು. ಸೋವಿಯತ್ ಅಧಿಪತ್ಯದಲ್ಲಿದ್ದ ಭಾಗ ಜರ್ಮನ್ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು (ಪೂರ್ವ ಜರ್ಮನಿ). ಈ ರಾಷ್ಟ್ರಗಳ ರಾಜಕೀಯ ಧೋರಣೆಗಳಿಂದ ಅಲ್ಲಿಯ ನ್ಯಾಯಿಕ ಕಲ್ಪನೆ ಮತ್ತು ಮೌಲ್ಯಗಳಲ್ಲಿ ಬದಲಾವಣೆಗಳಾಗಿವೆ.

ಪೂರ್ವ ಜರ್ಮನಿ ಕಮ್ಯುನಿಸ್ಟ್ ರಾಜ್ಯ[ಬದಲಾಯಿಸಿ]

ಇದು ಸಮಾಜವಾದೀ ಪ್ರಜಾಸತ್ತಾತ್ಮಕ ಗಣರಾಜ್ಯ, ಜಿಲ್ಲೆಗಳು ಆಡಳಿತ ಘಟಕಗಳು. ಸರಕಾರದ ಧೋರಣೆಗಳನ್ನು ಅನುಮೋದಿಸುವ ಮಟ್ಟಿಗೆ ಜನತಾಸಭೆಯ ಅಧಿಕಾರ ಸೀಮಿತವಾದ್ದು. ಮಂತ್ರಿಮಂಡಲದ ಅಧ್ಯಕ್ಷ ಸರ್ಕಾರದ ಮುಖ್ಯಸ್ಥ. ಇಲ್ಲಿ ಚುನಾವಣೆಗಳು ನಡೆಯುತ್ತವೆ. ಆದರೆ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳ ಒಂದೇ ಪಟ್ಟಿ ಇರುತ್ತದೆ. ಪಕ್ಷದ ಪ್ರಮುಖರು ಸರ್ಕಾರವನ್ನು ನಿಯಂತ್ರಣಗೊಳಿಸುತ್ತಾರೆ. ಖಾಸಗಿ ಸ್ವತ್ತು ರದ್ದಾಗಿರುವ ಕಾರಣ ದಿವಾಣೀ ಮತ್ತು ದಂಡನ್ಯಾಯ ಸೂತ್ರಗಳಲ್ಲಿ ಅನೇಕ ಬದಲಾವಣೆಗಳಾಗಿವೆ. 1952ರಲ್ಲಿ ಹೊಸ ದಂಡ ಪ್ರಕ್ರಿಯಾ ಕಾನೂನು ಜಾರಿಗೆ ಬಂತು. ಸಮಾಜದ (ರಾಷ್ಟ್ರದ) ಸ್ವತ್ತಿನ ಸಂಬಂಧದಲ್ಲಿ ಸಾಮಾಜಿಕ ಕಾನೂನುಗಳು ಬಂದಿವೆ. ಕಾರ್ಮಿಕ ಶಿಸ್ತುಪಾಲನೆ ಮತ್ತು ಯೋಗಕ್ಷೇಮದ ಬಗ್ಗೆ ಕಾನೂನುಗಳುಂಟು. ಇಲ್ಲಿ ಮೂರು ರೀತಿಯ ನ್ಯಾಯಾಲಗಳಿವೆ. ; 1 ಜಿಲ್ಲಾ ನ್ಯಾಯಾಲಗಳು, 2. ಪ್ರಾದೇಶಿಕ ನ್ಯಾಯಾಲಗಳು 3. ಶ್ರೇಷ್ಠ ನ್ಯಾಯಾಲಯ, ಸರ್ಕಾರದ ಮೇಲರ್ಜಿಗಳನ್ನು ಮತ್ತು ಸ್ವೀಕರಿಸಿ ಆ ಬಗ್ಗೆ ನಿರ್ಣಯಗಳನ್ನು ಕೊಡುವುದು ಮಾತ್ರ ಶ್ರೇಷ್ಠ ನ್ಯಾಯಾಲಯದ ಕಾರ್ಯಭಾರ.

ಪಶ್ಚಿಮ ಜರ್ಮನಿ[ಬದಲಾಯಿಸಿ]

ಪಶ್ಚಿಮ ಜರ್ಮನಿಯು 10 ರಾಜ್ಯಗಳ ಸಂಯುಕ್ತ ಗಣರಾಜ್ಯ. ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ರಾಜ್ಯ ಸರ್ಕಾರವುಂಟು. ಸಂಯುಕ್ತ ಗಣರಾಜ್ಯದ ಕೇಂದ್ರ ಸರ್ಕಾರದ ಎಲ್ಲ ಅಧಿಕಾರಿಗಳೂ ಗಣರಾಜ್ಯದ ಚಾನ್ಸೆಲರ ಹಿಡಿತದಲ್ಲಿವೆ. ಚಾನ್ಸೆಲರನ್ನು ಬುಂಡೆಸ್ಟ್ಯಾಗಿನಿಂದ- ಕೆಳಮನೆಯಿಂದ-ಚುನಾಯಿಸಲಾಗುತ್ತದೆ. ಕೆಳಮನೆಯ ಸಂಸತ್ ಸದಸ್ಯರು 4 ವರ್ಷಗಳಿಗೊಮ್ಮೆ ಚುನಾಯಿತರಾಗುತ್ತಾರೆ. ರಾಜ್ಯಸಭೆಯ ಸದಸ್ಯರು ರಾಜ್ಯಸರ್ಕಾರಗಳ ಸದಸ್ಯರು. ರಾಷ್ಟ್ರಾಧ್ಯಕ್ಷ ರಾಷ್ಟ್ರದ ಸಂವೈಧಾನಿಕ ಮುಖ್ಯಸ್ಥ. ಅವನನ್ನು 5 ವರ್ಷಗಳ ಅವಧಿಗೆ ಆರಿಸಿರುತ್ತಾರೆ. 1949ರ, ಬಾನ್‍ನ ಮೂಲಭೂತ ನ್ಯಾಯವನ್ನು ಸಿದ್ಧಗೊಳಿಸಿದವರು ಜರ್ಮನರು. ಗೆದ್ದ ರಾಜ್ಯಗಳ ನಿಯಂತ್ರಣದ ಕಾನೂನು 1955ರ ಮೇರೆಗೆ ಇಲ್ಲಿ ಆಚರಣೆಯಲ್ಲಿತ್ತು.

ಪಶ್ಚಿಮ ಜರ್ಮನಿಯ ಅಭಿವೃದ್ಧಿ ಎಲ್ಲ ರಂಗಗಳಲ್ಲೂ ಓತಪ್ರೋತವಾಗಿ ನಡೆದಿದೆ. ನ್ಯಾಯಶಾಸ್ತ್ರವೂ ಇದಕ್ಕೆ ಹೊರತಾಗಿಲ್ಲ. ಪರಂಪರಾನುಗತವಾಗಿ ಬಂದ ಹಿಂದಿನ ಕಾನೂನುಗಳನ್ನು ಆಧಾರವಾಗಿ ಇಟ್ಟುಕೊಂಡು ಅವಶ್ಯ ಮಾರ್ಪಾಡುಗಳನ್ನು ಮಾಡಲಾಗಿದೆ. ಉದ್ಯಮಗಳ ಬೆಳೆವಣಿಗೆ ಕಾರ್ಮಿಕ ನ್ಯಾಯದ ಬೆಳವಣಿಗೆಗೆ ಕಾರಣವಾಗಿದೆ. 1951ರಲ್ಲಿ ಕೂಲಿಕಾರರ ಸಹಭಾಗಿತ್ವದ ಅಧಿನಿಯಮ ಆಚರಣೆಗೆ ಬಂತು. 1952ರಲ್ಲಿ ಕೆಲಸದ ಕಾಲವನ್ನು ನಿಗದಿಗೊಳಿಸಲು ಅವಕಾಶ ಮಾಡಿಕೊಡಲಾಯಿತು. ಬಿಸ್ಮರ್ಕನ ಕಾಲದಿಂದಲೂ ಕಾರ್ಮಿಕರಿಗೆ ಸೌಲಭ್ಯಗಳು ಹೆಚ್ಚುತ್ತ ಬಂದಿವೆ. 1953ರಲ್ಲಿ ಕಾರ್ಖಾನೆಗಳಲ್ಲಿ ಆಕಸ್ಮಿಕಕ್ಕೆ ಒಳಗಾಗಿ ಅಂಗವಿಕಲರಾಗುವವರಿಗೆ ಬೇರೆ ರೀತಿಯ ಕೆಲಸವನ್ನು ಕೊಡಲು 1953ರಲ್ಲಿ ಕಾನೂನು ಮಾಡಲಾಗಿದೆ. ವಿಮೆ, ಪ್ರವಾಸದ ಖರ್ಚು, ಆದಾಯ ತೆರಿಗೆ ವಿನಾಯಿತಿ, ಆರೋಗ್ಯ ವಿಮೆ ಮುಂತಾದ ಅನೇಕ ಸೌಲಭ್ಯಗಳನ್ನು ಕಾನೂನು ಬದ್ಧವಾಗಿ ಒದಗಿಸಲಾಗಿದೆ. ಅನೇಕ ರೀತಿಯ ತೆರಿಗೆಗಳನ್ನು ಹಾಕಲಾಗುತ್ತಿದ್ದರೂ ಜನಸಾಮಾನ್ಯರಲ್ಲಿ ತೆರೆಗೆ ಕೊಡುವುದನ್ನು ತಪ್ಪಿಸುವ ಪ್ರವೃತ್ತಿ ಕಡಿಮೆ ಎಂದು ಹೇಳಬಹುದು.

ಪಶ್ಚಿಮ ಜರ್ಮನಿಯಲ್ಲಿ ಕುಟುಂಬಕ್ಕೆ ಸಂಬಂಧಿಸಿದ ನ್ಯಾಯಸೂತ್ರಗಳಲ್ಲಿಯೂ ಬದಲಾವಣೆಗಳಾಗಿವೆ. 1949ರ ಮೂಲಭೂತ ನ್ಯಾಯದಲ್ಲಿ ಪತಿಪತ್ನಿಯರು ಸಮಾನರು ಎಂದು ಹೇಳಲಾಗಿದ್ದರೂ ಅದು ಆಚರಣೆಯಲ್ಲಿ ಬಂದದ್ದು 1957ರಲ್ಲಿ. ಸರಿಯಾದ ಕಾರಣ ಕೊಟ್ಟು ವಿವಾಹವಿಚ್ಛೇದನ ಪಡೆಯಬಹುದು. ಈ ವಿಷಯದಲ್ಲೂ ಸ್ತ್ರೀಪುರಷರಿಬ್ಬರಿಗೂ ಸಮಾನ ಹಕ್ಕುಗಳನ್ನು ಕೊಡಲಾಗಿದೆ. ವಿವಾಹ ವಿಚ್ಚೇದನಾನಂತರ ಮಕ್ಕಳು ಯಾರಲ್ಲಿ ಇರಬೇಕೆಂಬ ಬಗ್ಗೆ ಮಕ್ಕಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ನ್ಯಾಯಾಲಯ ಆಜ್ಞೆ ಮಾಡಲು ಅವಕಾಶವಿದೆ. ಮಿತ ಸಂತಾನ ರಾಷ್ಟ್ರದ ಧೋರಣೆ ಆಗಿರಲಿಲ್ಲ. ಮಕ್ಕಳು ಇದ್ದವರಿಗೆ ಸರ್ಕಾರ ತೆರಿಗೆ ರಿಯಾಯಿತಿ ಕೊಡುತ್ತಿತ್ತು. ನಾಲ್ಕಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರ ಸಹಾಯ ಧನ ನೀಡುತ್ತಿತ್ತು. ಈ ಸೌಲಭ್ಯಗಳು ಕಡಿಮೆಯಾಗಹತ್ತಿದೆ. ದಂಡವಿಧಿಯ ಗ್ರಂಥಗಳು 6ನೆಯ ಶತಮಾನದಿಂದಲೂ ದೊರೆಯುತ್ತವೆ. ಪಶ್ಚಿಮ ಜರ್ಮನಿಯಲ್ಲಿ ಹೊಸ ದಂಡಸಂಹಿತೆ 1959ರಿಂದ ಈಚೆಗೆ ಆಚರಣೆಯಲ್ಲಿ ಬಂದಿದೆ. ನ್ಯಾಯಾಧೀಶನೇ ಪ್ರಶ್ನೆಗಳನ್ನು ಕೇಳಿ ವಿವರಗಳನ್ನು ಪಡೆಯುವುದು ಜರ್ಮನ್ ದಂಡಪ್ರಕ್ರಿಯೆಯ ವೈಶಿಷ್ಟ್ಯ. ನ್ಯಾಯಾಧೀಶರು ಸರ್ಕಾರಿ ನೌಕರರು, ತರಬೇತು ಹೊಂದಿದವರು. ಸ್ಥಳೀಯ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ, ಸಂಯುಕ್ತ ಉಚ್ಚ ನ್ಯಾಯಾಲಯ ಎಂದು ಮೂರು ಬಗೆಯ ನ್ಯಾಯಾಲಯಗಳುಂಟು. ಸಂಯುಕ್ತ ಪರಮೋಚ್ಚ ನ್ಯಾಯಾಲವನ್ನು ಮೂಲಭೂತ ನ್ಯಾಯದಲ್ಲಿ ಹೇಳಿದ್ದರೂ ಅದು ಅಸ್ತಿತ್ವದಲ್ಲಿ ಇಲ್ಲ. ಸಂಯುಕ್ತ ಸಂವೈಧಾನಿಕ ಪರಮೊಚ್ಚ ನ್ಯಾಯಾಲಯ ಸಂವೈಧಾನಿಕ ವಿಷಯಗಳಲ್ಲಿ ನಿರ್ಣಯ ಕೊಡುತ್ತವೆ.

ವಿಶ್ವದ ನ್ಯಾಯ ಶಾಸ್ತ್ರಕ್ಕೆ ಕೊಡುಗೆ[ಬದಲಾಯಿಸಿ]

ವಿಶ್ವದ ನ್ಯಾಯ ಶಾಸ್ತ್ರಕ್ಕೆ ಜರ್ಮನ್ ನ್ಯಾಯಶಾಸ್ತ್ರದ ಕೊಡುಗೆ ಸಾಕಷ್ಟಿದೆ. 19ನೆಯ ಶತಮಾನದ ಇತಿಹಾಸಕಾರರು ಆಧುನಿಕ ಪ್ರಜಾತಂತ್ರಕ್ಕೆ ಜರ್ಮನಿಯ ಅಲೆಮಾರಿ ಗುಂಪುಗಳು ಮೂಲವೆಂದು ಅಭಿಪ್ರಯಪಟ್ಟಿದ್ದಾರೆ. ಸಹಕಾರಿ ನ್ಯಾಯಸೂತ್ರಗಳೂ ಕಾರ್ಮಿಕ ಯೋಗಕ್ಷೇಮದ ಕಾನೂನುಗಳೂ ಅನೇಕ ದೇಶಗಳ ಕಾನೂನುಗಳ ಮೇಲೆ ಪ್ರಭಾವ ಬೀರಿವೆ. 1900ರಲ್ಲಿ ಆಚರಣೆಗೆ ಬಂದ ಜರ್ಮನ್ ದಿವಾಣೀ ಸಂಹಿತೆ ಮತ್ತು ತತ್ಸಂಬಂಧಿ ಕಾನೂನುಗಳು ಕೂಡ ವಿಶ್ವದ ಅನೇಕ ರಾಷ್ಟ್ರಗಳ ಕಾನೂನುಗಳ ಮೇಲೆ ಪ್ರಭಾವ ಬೀರಿವೆ. ಜರ್ಮನಿಯ ದಿವಾಣೀ ಸಂಹಿತೆಯ ಪ್ರಥಮ ಕರಡನ್ನು ಆಧಾರವಾಗಿಟ್ಟುಕೊಂಡು ಜಪಾನಿನ 1898ರ ದಿವಾಣೀ ಸಂಹಿತೆಯನ್ನು ರಚಿಸಲಾಗಿತ್ತು. 1925ರ ಸೈಯಾಮಿನ ದಿವಾಣೀ ಸಂಹಿತೆ ಮತ್ತು 1920-31ರ ಚೀನೀ ಸಂಹಿತೆಗಳಿಗೂ ಜಮ್ನ್ ದಿವಾಣೀ ಸಂಹಿತೆ ಸ್ಫೂರ್ತಿ ನೀಡಿದೆ. ಸ್ವಿಟ್‍ಜûರ್ಲೆಂಡ್, ಆಸ್ಟ್ರೀಯ, ಪೋಲಂಡ್, ರಷ್ಯ, ಚೆಕೋಸ್ಲೊವಾಕಿಯ ಹಾಗೂ ಸ್ಯಾಂಡಿನೇವಿಯನ್ ದೇಶಗಳ ಕಾನೂನುಗಳ ಮೇಲೂ ಇದರ ಪ್ರಭಾವ ಬಿದ್ದಿದೆ. ಮುಸ್ತಫ ಕೆಮಾಲ್-ಅತಾತುರ್ಕ ತನ್ನ ದೇಶದ ಕಾನೂನನ್ನು ಇದೇ ಮಾದರಿಯಲ್ಲಿ ಸುಧಾರಿಸಲು ಯೋಚಿಸಿದ್ದ. ಎರಡನೆಯ ಮಹಾಯುದ್ಧದ ಕಾವಿನಲ್ಲೂ ಗ್ರೀಕ್ ನ್ಯಾಯಶಾಸ್ತ್ರಜ್ಞರು 1946ರ ದಿವಾಣೀ ಸಂಹಿತೆಯನ್ನು ಸಿದ್ಧಗೊಳಿಸುವಾಗ ಜರ್ಮನ್ ದಿವಾಣೀ ಸಂಹಿತೆಯ ಲಾಭ ಪಡೆದರು. ಹೀಗೆ ಜರ್ಮನ್ ನ್ಯಾಯ ವಿಶ್ವದ ನ್ಯಾಯಸೂತ್ರಗಳ ಮೇಲೆ ಅನೇಕ ರೀತಿಯಲ್ಲಿ ಪ್ರಭಾವ ಬೀರಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: