ವಿಷಯಕ್ಕೆ ಹೋಗು

ಜಯವೆಂಕಟಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯವೆಂಕಟಾಚಾರ್ಯ (ಕ್ರಿ.ಶ. 1727). ಕನ್ನಡದಲ್ಲಿ ವಿರಳವಾಗಿರುವ ದಂಡಕ ಹಾಗೂ ಭಟ್ಟಂಗಿಗಳ ಕರ್ತೃ. ಒಂದು ಗಳಿಗೆಯಲ್ಲಿ ನೂರು ಶ್ಲೋಕಗಳನ್ನು ರಚಿಸಬಲ್ಲ ಹೆಗ್ಗಳಿಕೆ ತನ್ನದೆಂದು ಹೇಳಿಕೊಂಡಿದ್ದಾನಾದರೂ ಈಗ ಉಪಲಬ್ಧವಾಗಿರುವುದು ಈತನ ಒಂದು ದಂಡಕ ಮತ್ತು ಇಪ್ಪತ್ತೆಂಟು ಭಟ್ಟಂಗಿಗಳು ಮಾತ್ರ.

ಬದುಕು

[ಬದಲಾಯಿಸಿ]

ಕವಿಯ ಸ್ಥಳ ರಾಯಚೂರು ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಕನಕಗಿರಿ. ಕನಕಗಿರಿ ಸಂಸ್ಥಾನವನ್ನು ಅಂದಿಗೆ ಆಳುತ್ತಿದ್ದ ರಂಗಪ್ಪನಾಯಕ ಕವಿಗೆ ಆಶ್ರಯವಿತ್ತಂತೆ ತಿಳಿದುಬರುತ್ತದೆ.

ಜಯವೆಂಕಟಾಚಾರ್ಯನ ಗುರು ಹಾಗೂ ತಂದೆ ಶ್ರೀನಿಧಿ ಆಚಾರ್ಯ. ಬಾಲ್ಯದಲ್ಲಿ ಚಂಚಲಚಿತ್ತನಾದ ಜಯವೆಂಕಟ ಸಂಜೀವ ಮುಖ್ಯಪ್ರಾಣನ ವರದಿಂದ ಪಾಂಡಿತ್ಯ ಸಂಪಾದಿಸಿದನೆಂದು ಜನಜನಿತ ಕಥೆ. ಈತನ ವಂಶದವರಿಗೆ ಹಿಂದಕ್ಕೆ ಕೃಷ್ಣರಾಯ ಧರಣೀಪತಿ ಬಿಟ್ಟ ದತ್ತಿಯನ್ನು ಕವಿ ನೆನೆದಿದ್ದಾನೆ. ಅರಳಿಹಳ್ಳಿ, ನರಸಾಪುರ ಎಂಬ ಹಳ್ಳಿಗಳು ಜಾಗೀರುಗಳಾಗಿ ಮೊನ್ನೆ ಮೊನ್ನೆಯ ವರೆಗೆ ಈ ವಂಶದವರ ಅನುಭವದಲ್ಲಿದ್ದವು.

ಜಯವೇಂಕಟಾಚಾರ್ಯ ವೀರವೈಷ್ಣವ ಆಗಿರಬಹುದು.

ಈತ ವಿಪುಲವಾಗಿ ದೇಶಾಟನೆಮಾಡಿದ್ದನೆಂದು ಈತನ ಒಂದು ಭಟ್ಟಂಗಿಯಿಂದ ತಿಳಿಯುತ್ತದೆ. ತಾನು ಬಾಲ್ಯದಲ್ಲಿ ರಸಿಕ ಜೀವನಕ್ಕೆ ಮಾರುಹೋಗಿದ್ದುದು, ಕನಕಗಿರಿಯ ಮೇಲೆ ಆದ ದಾಳಿ, ತನಗೆ ಕೊನೆಗಾಲಕ್ಕೆ ಬಂದ ಕಷ್ಟಗಳು-ಇವನ್ನು ಕವಿ ತನ್ನ ಕೃತಿಯಲ್ಲಿ ಸೂಚಕವಾಗಿ ತಿಳಿಸಿದ್ದಾನೆ.

ಈತ ಸಂಸ್ಕ್ರತ ಗ್ರಂಥಗಳನ್ನೂ ರಚಿಸಿರುವನೆಂದು ಪ್ರತೀತಿ. ಆದರೆ ಈತನವೆಂದು ಹೇಳಲಾಗುವ ಒಂದೆರಡು ಶ್ಲೋಕಗಳ ಹೊರತು ಯಾವ ಗ್ರಂಥವೂ ಇದುವರೆಗೆ ದೊರೆತಿಲ್ಲ.

ಕವಿತ್ವ ಮತ್ತು ಕುತೂಹಲಕರ ಸಂಗತಿಗಳು

[ಬದಲಾಯಿಸಿ]
  • ಜಯವೇಂಕಟಾಚಾರ್ಯನು ಅದ್ವೈತ ಸಂನ್ಯಾಸಿಯೊಬ್ಬನೊಂದಿಗೆ ವಾದವಿವಾದದಲ್ಲಿ ಕೈಗೆ ಕೈ ಹತ್ತಿ ಮುಸ್ಲಿಮ್ ನ್ಯಾಯಾಧೀಶನೆದುರಿಗೆ ಹೋಗುವ ಪ್ರಸಂಗ ಬಂತಂತೆ. ಸಮಯಸ್ಛೂರ್ತಿಯಿಂದ ದ್ವೈತ ಮತ್ತು ಇಸ್ಲಾಂನ ಸಮನ್ವಯವನ್ನು ಈತ ಸಾರಿದ ರೀತಿ ಕುತೂಹಲಕರವಾಗಿದೆ.

ಅಲ್ಲಾ-ದೇವೋ, ದೇವಪ್ರಜಾ-ನಮಾಜಾ |

ಖಾಜೀ-ವಿದ್ವಾನ್, ಪಂಡಿತಃ-ತತ್ರ ಮುಲ್ಲಃ ||

ಪುರಾಣಃ-ಕುರಾನಃ ಕಿತಾಬಂ-ಚ ಶಾಸ್ತ್ರಂ |

ಭಾಷಾಭೇದೋ ನೈವ ಶಾಸ್ತ್ರೇಷು ಭೇದಃ ||

  • ಈತನ ಭಟ್ಟಂಗಿಗಳಲ್ಲಿ ಕಾವ್ಯಸೌಂದರ್ಯವನ್ನೂ ಕಾಣಬಹುದು. ಈ ಕವಿಯ ದೃಷ್ಟಿಯಲ್ಲಿ ಲಕ್ಷ್ಮೀದೇವಿ `ಮದನನು ಮತ್ತೆ ಜೈಭೇರಿಯ ಹೊಯ್ಸುತಾ | ಕದನದಿ ಮೂರು ಲೋಕವ ಗೆದ್ದಮೇಲೆ ಫಲವಿಲ್ಲದ ಭೇರಿಯ ಡಬ್ಬುಹಾಕಿ ತನ್ನ ಹಸನದಿ ತೋರ್ಪ ಕುಜಕುಂಭಗಳೋಳ್ ಸಮಸ್ತ ಸೌಂದರೀ ಅಮಿತಗುಣಾಭಿರಾಮ ಕನಕಾಚಲರಂಗನ ಪಟ್ಟದೊಲ್ಲಭೆ'ಯಾಗಿ ಕಾಣುತ್ತಾಳೆ. ಈತನಿಗೆ ಭಾಷೆಯ ಮೇಲಿದ್ದ ಹಿಡಿತಕ್ಕೆ `ಅಂಬೇ ದಯಾಕದಂಬೇ ನೆರೆನಂಬಿದೆ ನಿನ್ನ ಪದಾಂಬುಜ ದ್ವಯಾ'| ಮುಂತಾದ ಪಂಕ್ತಿಗಳು ಸಾಕ್ಷಿಯಾಗಿವೆ.
  • ಈ ಪಡೆದ ದರ್ಶನ ಇಲ್ಲಿದೆ.

ಮೇರೂ ಪೀಠವಾಗಿ ಇನಚಂದ್ರರು ತಾವು ಸೂರ್ಯಪಾನಗಳಾಗಿ |

ತಾರಕೆಯು ದಿವ್ಯಪುಷ್ಪಗಳಾಗಿ ಧ್ರುವಮಂಡಳವು ದೀಪ್ತಕಿರೀಟವಾಗಿ ||

ಧಾರುಣಿಯು ರಾಣಿಯಾಗಿ ಶ್ರೀದೇವಿಯು ಭೂಷಣವಾಗಿ |

ಪಾರ್ವತಿಯು ದಿವಾಣಕಾಯ್ದ ವಿಭವ ರಕ್ಷಿಸೋ ವೆಂಕಟಶೈಲವಲ್ಲಭಾ ||

  • ಈತನ ದಂಡಕದ ಶೈಲಿ ಇನ್ನೂ ಮನೋಹರವಾಗಿದೆ.

ಶುಭಗುಣಮಯ ವಿಗ್ರಹೋಲ್ಲಾಸ | ಲಕ್ಷ್ಮೀಮನೋನಾಥ | ನಾಭೀ ಸರೋಜಾತ | ಜಾತಾಂಡ ಮಧ್ಯೋಲ್ಲ | ಸದ್ದೇಶ ಕರ್ನಾಟ | ವೆಂಬಲ್ಲಿ ಬಲ್ಲಂಥ | ಪಂಪಾಸರೋವಾಮ | ಷಟ್ಕೋಶದೂರ್ದಲ್ಲಿ | ಸರ್ವರ್ ನೆರೇಗೊಂಡು | ಮೆರೆವಂಥ ಹೇಮಾದ್ರಿ | ಎಂಬೋ ಪೆಸರ್ನಿಂದ | ವಿಖ್ಯಾತಮಾದಂಥ | ಭೂ ಪಟ್ಟಣಂ ಸರ್ವ ಸಾಮ್ರಾಜ್ಯದಿಂದಾಳಿ ಬಾಳ್ವಂಥ ಶ್ರೀ ಮನ್ನ | ಹಾನಾಯಕಾ ಚಾರ್ಯ | ನಾಯಕ ಶಿರೋರತ್ನ | ಗುಜ್ಜಲಮಹಾವಂಶ | ವಾರಾನಿಧೀಚಂದ್ರ | ಧೀಸಾಂದ್ರರಂಗಾಖ್ಯ | ಭೂಮೀಂದ್ರನಂ ಪೊಂದಿ | ವಿಖ್ಯಾತಪಾಂಡಿತ್ಯ | ಧೀರೋನ್ನತ ಶ್ರೀನಿಧಿ, ಶ್ರೀನಿಧೀ | ಎಂಬೋಗುರ್ವಂಘ್ರಿ............... ಹೀಗೆ ನಿರರ್ಗಳವಾಗಿ ಸಾಗುತ್ತದೆ, ಈ ಕವಿಯ ಶೈಲಿ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: