ಜಪಾನೀ ನ್ಯಾಯ
ಇತಿಹಾಸ
[ಬದಲಾಯಿಸಿ]ಜಪಾನಿನ ಪ್ರಾಚೀನ ದೇಶೀಯ ನ್ಯಾಯವು ಇತರ ದೇಶಗಳ ಆದಿಮ ನ್ಯಾಯಗಳಂತೆ ಮಾಂತ್ರಿಕ-ಧಾರ್ಮಿಕ ಅಂಶಗಳಿಂದ ಕೂಡಿದ್ದು. ಪ್ರಾಚೀನ ಜಪಾನಿನಲ್ಲಿ ನ್ಯಾಯವನ್ನು ನೋರಿ ಎಂದು ಕರೆಯುತ್ತಿದ್ದರು. ನೋರಿ ಎಂದರೆ ಘೋಷಿತವಾಣಿ ಎಂದು ಅರ್ಥ, ನ್ಯಾಯವನ್ನು ದೈವಪ್ರೇರಣೆಯಿಂದ ಬಂದ ವಾಣಿ ಎಂದು ಜನ ನಂಬಿದ್ದರು. ನೋರಿಯನ್ನು ಅಧಿಕಾರಿ ಒಂದು ಗುಡ್ಡದಿಂದ (ತ್ಸುಕಾ) ಘೋಷಿಸುತ್ತಿದ್ದ. ತ್ಸುಕಾಸಾ ಎಂದರೆ ಅಧಿಕಾರಿ. ನೋರಿ ಅಲಿಖಿತ. ನ್ಯಾಯವೆಂದು ಪರಿಗಣಿಸಬಹುದಾದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯೆಂದರೆ ಷೋಟೊಕೂ ದೊರೆಯದು (ಕ್ರಿ.ಶ. 604). ಇದನ್ನು ಮಹಾ ಪ್ರಣಾಳಿಕೆ ಎಂದು ಕರೆಯಲಾಗಿದೆ. ಇದರಲ್ಲಿ ಏಳು ಕಟ್ಟಳೆಗಳಿವೆ. ದೈವೇಚ್ಛೆಯನ್ನು ಜನಕ್ಕೆ ತಿಳಿಯಪಡಿಸುವುದು ಮಾಂತ್ರಿಕ ಆಡಳಿತಗಾರರ ಒಂದು ಮುಖ್ಯ ಕಾರ್ಯಭಾರವಾಗಿತ್ತು. ಆದ್ದರಿಂದ ಅವರನ್ನು ಹಿಜಿರಿ ಅಥವಾ ದೈವಜ್ಞರೆಂದು ಕರೆಯುತ್ತಿದ್ದರು. ಆಡಳಿತ ಕ್ರಿಯೆಯನ್ನು ಷಿರು. ಷಿರಾಸು, ಷಿರೋಷಿಮೇಸು (ತಿಳಿಯುವುದು) ಎಂದು ಕರೆಯಲಾಗುತ್ತಿತ್ತು.
ಅಪರಾಧಗಳನ್ನು ತ್ಸುಮಿ ಎಂದು ಕರೆಯುತ್ತಿದ್ದರು. ಅವು ಪಾಪಕೃತ್ಯಗಳಾದ್ದರಿಂದ ಅವನ್ನು ದೇವರುಗಳಿಂದ ಮುಚ್ಚಿಡತಕ್ಕದ್ದೆಂದು ಜನ ಭಾವಿಸಿದ್ದರು. ಪಾಪದಿಂದ ಕೋಪಗೊಂಡ ದೇವರುಗಳ ಕ್ರೋಧಶಮನಾರ್ಥವಾಗಿ ಪ್ರಾಯಶ್ಚಿತ್ತ ಅಥವಾ ಶುದ್ಧೀಕರಣ ಕ್ರಿಯೆ ನಡಸಲಾಗುತ್ತಿತ್ತು. ಅದಕ್ಕೆ ಹರಾಯಿ ಎಂದು ಹೆಸರು. ತ್ಸುಮಿ ಆಗಿದೆಯೇ ಇಲ್ಲವೇ ಎಂಬುದನ್ನು ಕುದಿಯುವ ನೀರಿನ ಪರೀಕ್ಷೆಯಿಂದ ತೀರ್ಮಾನಿಸಲಾಗುತ್ತಿತ್ತು.
ಬಹುತೇಕ ಜಪಾನೀ ದೇವತೆಗಳು ಪೂರ್ವಜರ ಪ್ರೇತಾತ್ಮಗಳೇ ಆಗಿದ್ದುದರಿಂದ ಆಯಾ ಪ್ರೇತಾತ್ಮಗಳ ವಂಶಜರು ಅವವುಗಳಿಗೆ ನಡೆದುಕೊಳ್ಳುತ್ತಿದ್ದರು. ಹೀಗೆ ಬೇರೆಬೇರೆ ಕಟ್ಟಳೆಗಳಿಗೆ ಒಳಗಾದ ಬೇರೆಬೇರೆ ವಂಶ ಅಥವಾ ಗೋತ್ರಗಳಿದ್ದುವು. ಇಂಥ ಗೋತ್ರವನ್ನು ಉಜಿ ಎನ್ನುತ್ತಿದ್ದರು. ಉಜಿಯ ಸದಸ್ಯರು ಉಜಿಬಿಟೊ ಅಥವಾ ಉಕರ. ಇದರ ಮುಖಂಡ ಉಜಿಕೊ-ನೊ-ಕಾಮಿ, ಉಜಿ ಮಕ್ಕಳ ಪಿತ. ಇದರ ದೇವತೆ ಉಜಿಗಾಮಿ. ಉಜಿ ಸಾಮಾಜಿಕ ಘಟಕ ಮಾತ್ರವಾಗಿರಲಿಲ್ಲ, ಆರ್ಥಿಕ ರಾಜಕೀಯ ಘಟಕವೂ ಆಗಿತ್ತು. ಅತ್ಯಂತ ಪ್ರಭಾವಶಾಲಿಯಾದ ಉಜಿಯ ಮುಖ್ಯಸ್ಥನೇ ಪ್ರಾಚೀನ ಜಪಾನಿನ ಸರ್ಕಾರವನ್ನು ನಡೆಸುತ್ತಿದ್ದ. ಇತರ ಉಜಿಗಳು ಅವನಿಗೆ ಅಧೀನವಾಗಿದ್ದುವು. ಇವನು ದೈವೇಚ್ಛೆಗೆ ಅನುಗುಣವಾಗಿ ರಾಜ್ಯವಾಳುವನೆಂದು ನಂಬಿಕೆಯಿತ್ತು. ಉಜಿಗಳ ಸ್ಥಾನಕ್ಕನುಗುಣವಾಗಿ ಅವಕ್ಕೆ ಸಂಬಂಧಿಸಿದ ವ್ಯಕ್ತಿಗಳೆಲ್ಲರ ಸಾಮಾಜಿಕ ಸ್ಥಾನಮಾನಗಳು ನಿರ್ಧರಿಸಲ್ಪಡುತ್ತಿದ್ದುವು. ಅವರೆಲ್ಲ ತಂತಮ್ಮ ಸ್ಥಾನಮಾನಗಳಿಗಿಂತ ಮೇಲಿನವನ್ನು ಆಶಿಸದೆ, ನೋರಿಗಳನ್ನು ಪಾಲಿಸಿಕೊಂಡು ಹೋಗುವುದೇ ಪರಮ ಆದರ್ಶವಾಗಿತ್ತು. ಈ ಪ್ರಕಾರ ನಾಡಿನಲ್ಲಿ ಸಾಮಾಜಿಕ ಶಾಂತಿ, ಸುವ್ಯವಸ್ಥೆ ನಡೆದುಕೊಂಡು ಬರುತ್ತಿದ್ದುವು. ಜಪಾನಿನ ಇತಿಹಾಸಕಾಲ ಆರಂಭವಾದಾಗ ಜಪಾನನ್ನು ಆಳುತ್ತಿದ್ದ ಉಜಿ ಮಿಕಾಡೊ. ಅದರ ನಾಯಕನನ್ನು ಸುಮೇರ ಮಿಕೋಟೊ ಎಂದು ಕರೆಯಲಾಗುತ್ತಿತ್ತು. ಒಟ್ಟಿನಲ್ಲಿ ಪ್ರಾಚೀನ ಜಪಾನಿನ ನ್ಯಾಯಪದ್ಧತಿಯನ್ನರಿಯಲು ಯಾವ ದಾಖಲೆಗಳೂ ಇಲ್ಲ. ಲಭ್ಯವಿರುವ ಅನಂತರದ ದಾಖಲೆಗಳಲ್ಲಿ ಚೀನೀ ಸಂಸ್ಕøತಿಯ ಪ್ರಭಾವ ಕಲಬೆರಕೆಯಾದ್ದು ಕಂಡುಬರುತ್ತವೆ.
ಆರನೆಯ ಶತಮಾನದ ಅಂತ್ಯದಿಂದ ಚೀನದಲ್ಲಿ ಅನುಕ್ರಮವಾಗಿ ಸೂಯಿ ಮತ್ತು ಟಾಂಗ್ ರಾಜವಂಶಗಳು ಪ್ರಬಲವಾಗಿ, ಜಪಾನಿನ ಮೇಲೆ ಪದೇ ಪದೇ ಆಕ್ರಮಣ ನಡಸಿದುವು. ಜಪಾನಿನ ಉಳಿವಿಗೇ ಧಕ್ಕೆ ಬರುವ ಸ್ಥಿತಿ ಒದಗಿತು. ಅದು ತನ್ನ ಹಳೆಯ, ಗೋತ್ರಗಳ ಸಡಿಲವಾದ ಒಕ್ಕೂಟ ವ್ಯವಸ್ಥೆಯನ್ನು ಬಿಟ್ಟು ಕೊಟ್ಟು ಚೀನೀ ಮಾದರಿಯ ಕೇಂದ್ರೀಕೃತ ನ್ಯಾಯವ್ಯವಸ್ಥೆಯನ್ನು ಜಾರಿಗೆ ತರುವುದು ಅನಿವಾರ್ಯವಾಯಿತು. ಕ್ರಿ.ಶ. 645ರಲ್ಲಿ ಈ ಬಗೆಯ ಸುಧಾರಣೆಗಳಾದುವು. ಹೊಸ ಪ್ರಭುತ್ವ ಕಾರ್ಯಸಾಧ್ಯವಾಗುವಂತೆ 661ರಲ್ಲಿ ಚೀನೀ ನ್ಯಾಯ ಪದ್ಧತಿಯನ್ನೇ ಅಲ್ಲಿ ಜಾರಿಗೆ ತರಲಾಯಿತು. 678ರಲ್ಲಿ ಟೆನ್ಮು ಆಳ್ವಿಕೆಯ ಕಾಲದಲ್ಲಿ ಈ ಸಂಹಿತೆಯನ್ನು ಪರಿಷ್ಕರಿಸಿದ ಫಲವಾಗಿ ರಿಟ್ಸು ಮತ್ತು ರೀಯೋ ಎಂಬ ಎರಡು ಸಂಹಿತೆಗಳಾದುವು. ಮತ್ತೆ 701ರಲ್ಲೂ 718ರಲ್ಲೂ ಈ ಸಂಹಿತೆಗಳು ಸುಧಾರಣೆಗಳಿಗೆ ಒಳಗಾದುವು. ರಿಟ್ಸು ಎಂದರೆ ನಿರೋಧ. ಇದು ದಂಡಸಂಹಿತೆ. ರೀಯೋ ಎಂದರೆ ಆದೇಶ. ಇದು ಆಡಳಿತ, ವಿಚಾರಣೆ, ದೀವಾನಿ ಮತ್ತು ವಾಣಿಜ್ಯ ಕಾನೂನುಗಳ ಕಡತ, ಕಾನ್‍ಫ್ಯೂಷನ್ ತತ್ತ್ವಗಳನ್ನು ಅನುಷ್ಠಾನಕ್ಕೆ ತರುವುದು ಅವುಗಳ ಉದ್ದೇಶವಾದ್ದರಿಂದ ವ್ಯಕ್ತಿಗತ ಕಾನೂನುಗಳು ಅದರಲ್ಲಿ ಸೇರಿರಲಿಲ್ಲ. ಈ ಸಂಹಿತೆಗಳು ಪದೇ ಪದೇ ಪರಿಷ್ಕøತವಾಗುತ್ತಿದ್ದುವು. ಇವಕ್ಕೆ ಅಧಿಕೃವಾದ ವ್ಯಾಖ್ಯಾನಗಳೂ ಬಂದುವು. ಇವು ಚೀನೀ ವ್ಯವಸ್ಥೆಯ ಹಿನ್ನೆಲೆಯಲ್ಲಿ ರಚಿತವಾಗಿದ್ದರೂ ಜಪಾನೀಯವಾದ ಮೂಲಭೂತ ಅಂಶಗಳು ಇವುಗಳಲ್ಲಿ ಉಳಿದುಕೊಂಡೇ ಬಂದುವು. 939ರಲ್ಲಿ ಸಂಭವಿಸಿದ ಮಸಾಕಾಡೊ ದಂಗೆಯಿಂದ ಕೇಂದ್ರಸರ್ಕಾರದ ಪ್ರಭಾವ ಕಡಿಮೆಯಾಯಿತು. ಸಾಮುರೈಗಳು ಪ್ರಬಲರಾದ ಮೇಲೆ ದೇಶೀಯ ನ್ಯಾಯ ಪದ್ಧತಿ ಮತ್ತು ಪ್ರಭಾವಶಾಲಿಯಾಯಿತು. ಆದರೆ ಇದಕ್ಕೂ ಜಪಾನಿನ ಆದಿಮ ನ್ಯಾಯಪದ್ಧತಿಗೂ ವ್ಯತ್ಯಾಸವಿತ್ತು. ಚೀನೀಯರಿಂದ ಸ್ವೀಕೃತವಾಗಿ ಜಪಾನಿನ ಮನೋಭಾವಕ್ಕೆ ವ್ಯೆತಿರಿಕ್ತವಾಗಿಲ್ಲದ ಹಲವು ಅಂಶಗಳು ಸ್ಥಿರವಾಗಿ ಉಳಿದುವು. ಕಾಮಾಕುರಾ ಷೋಗನದಿಂದ 1232ರಲ್ಲಿ ರೂಪಿತವಾದ ನ್ಯಾಯಪದ್ಧತಿಯಲ್ಲಿ ಇವೆರಡನ್ನೂ ಬಲು ಚೆನ್ನಾಗಿ ಹೊಂದಿಸಲಾಯಿತು. ಇದು ವಸ್ತುನಿಷ್ಠವೂ ನಮ್ಯವೂ ಸಂಗ್ರಹವೂ ಆಗಿತ್ತು.
ಹದಿನೇಳನೆಯ ಶತಮಾನದಲ್ಲಿ ಈ ಪದ್ಧತಿ ತುಂಬ ಅಭಿವೃದ್ಧಿ ಹೊಂದಿತು. 1600ರ ಅನಂತರ, ಟೋಕುಗಾವಾ ಆಡಳಿತದಲ್ಲಿ, ಸುಮರು 270 ವರ್ಷಗಳ ಕಾಲ ಜಪಾನಿನಲ್ಲಿ ಶಾಂತಿ ನೆಲಸಿತ್ತು. ದೇಶೀಯ ಸಂಸ್ಕøತಿ, ವಾಣಿಜ್ಯ, ಕೈಗಾರಿಕೆ ಬೆಳೆದುವು. ಊಳಿಗಮಾನ್ಯವಾಗಿದ್ದ ದೇಶೀಯ ನ್ಯಾಯ ಪದ್ಧತಿ ಸುಸಂಸ್ಕøತವಾಗಿ ಬೆಳೆಯಿತು. ವಾಣಿಜ್ಯ ನ್ಯಾಯ, ಹುಂಡಿಯ ನ್ಯಾಯ ಕೂಡ, ಯಾವ ವಿದೇಶೀಯ ಪ್ರಭಾವವೂ ಇಲ್ಲದೆ ರೂಪುಗೊಂಡಿತು. ಅಸಂಖ್ಯಾತ ನ್ಯಾಯಿಕ ಪೂರ್ವನಿರ್ಣಯಗಳ ಆಧಾರದ ಮೇಲೆ 1742ರಲ್ಲಿ ಸಂಕಲಿತವಾದ ಓಸಾಡಮೆಗಾಕಿ-ಹ್ಯಾಕ್ಕಾಜೋ ಎಂಬ ಸಂಹಿತೆ ಜಪಾನೀ ನ್ಯಾಯಪದ್ಧತಿಯ ವೈಶಿಷ್ಟ್ಯವನ್ನು ಸಾರುತ್ತದೆ.
1853ರಲ್ಲಿ ಅಮೆರಿಕನ್ ನೌಕಾಪಡೆಯ ಕಮೊಡೋರ್ ಪೆರಿ ಜಪಾನನ್ನು ಸಂದರ್ಶಿಸಿದ. ಜಪಾನಿನೊಳಕ್ಕೆ ಬಲವಂತವಾಗಿ ಪ್ರವೇಶಿಸಲೆಳಸಿದ ವಿದೇಶೀ ಶಕ್ತಿಗಳ ಪ್ರಥಮ ಪ್ರಯತ್ನವಿದು. ಊಳಿಗಮಾನ್ಯ ವ್ಯವಸ್ಥೆಯ ಮೇಲೆ ರಚಿತವಾಗಿದ್ದ ಟೋಕುಗಾವಾ ಆಡಳಿತ 1868ರಲ್ಲಿ ಮುರಿದುಬಿತ್ತು. ಅದರ ಸ್ಥಾನದಲ್ಲಿ ಪ್ರಾಚೀನ ಚಕ್ರವರ್ತಿಯ ಹೊಸ ಸಾಮ್ರಾಜ್ಯವೊಂದು, ಬಂಡವಾಳಶಾಹಿ ಸಾಮಾಜಿಕ ವ್ಯವಸ್ಥೆಯ ಅಡಿಪಾಯದ ಮೇಲೆ, ಸ್ಥಾಪಿತವಾಯಿತು.
ಇಂದಿನ ಜಪಾನೀ ನ್ಯಾಯವ್ಯವಸ್ಥೆ
[ಬದಲಾಯಿಸಿ]ಇಂದಿನ ಜಪಾನೀ ನ್ಯಾಯವ್ಯವಸ್ಥೆಯು ಜರ್ಮನ್ ನ್ಯಾಯವ್ಯವಸ್ಥೆಯ ಆಧಾರದ ಮೇಲೆ ರೂಪಿತವಾಗಿದೆ. ಹೊಸ ಸಾಮ್ರಾಜ್ಯ ಸ್ಥಾಪಿತವಾದ ಮೇಲೆ ಐರೋಪ್ಯ ಅಂಶಗಳನ್ನು ಆತುರದಿಂದ ತಂದು ಅದರಲ್ಲಿ ತುರುಕಲಾಯಿತು. ಜಪಾನೀ ಪದ್ಧತಿಯ ಅಂಶಗಳನ್ನೂ ಉಳಿಸಿಕೊಳ್ಳಬೇಕೆಂದು ಮೊದಮೊದಲು ಉದ್ದೇಶಿಸಲಾಗಿತ್ತು. ಆದರೆ ವಿದೇಶೀ ಶಕ್ತಿಗಳ ಒತ್ತಡದಿಂದಾಗಿ ಆಗಿಂದಾಗ್ಗೆ ಮಾಡಿಕೊಂಡಿದ್ದ ಅನ್ಯಾಯದ ಕೌಲುಗಳ ಪರಿಣಾಮಗಳನ್ನು ತಿದ್ದುವ ಸಲುವಾಗಿ 1908ರಲ್ಲಿ ತರಲಾದ ಹೊಸ ಸಂಹಿತೆಗಳು ಐರೋಪ್ಯ ಮಾದರಿಯಲ್ಲಿ ರಚಿತವಾದುವು. ಆದ್ದರಿಂದ ಆಧುನಿಕ ಜಪಾನೀ ನ್ಯಾಯಪದ್ಧತಿಯಲ್ಲಿ ದೇಶೀಯ ಅಂಶಗಳು ಬಹಳ ಕಡಿಮೆ. ಜಪಾನೀತನವನ್ನು ಇಷ್ಟಷ್ಟು ಉಳಿಸಿಕೊಂಡಿರುವ ಕ್ಷೇತ್ರಗಳೆಂದರೆ ಸಂವೈಧಾನಿಕ ನ್ಯಾಯ, ಕುಟುಂಬ ನ್ಯಾಯ, ಉತ್ತರಾಧಿಕಾರ ನ್ಯಾಯ ಮತ್ತು ವಾಣಿಜ್ಯ ನ್ಯಾಯ.
ಇಂಕೀಯೋ, ಇರಿಯೈಕೆನ್, ಮ್ಯುಜಿನ್‍ಗೀಯೋ ಹಾಗೂ ಸೆಕೀಪು-ಈ ವ್ಯವಸ್ಥೆಗಳು ಇಂದಿಗೂ ಉಳಿದುಕೊಂಡು ಬಂದಿವೆ. ಕುಟುಂಬದ ಯಜಮಾನನ ನಿವೃತ್ತಿಯನ್ನು ಕುರಿತ ಇಂಕೀಯೋ ನ್ಯಾಯದಲ್ಲಿ ಜಪಾನೀ ವೈಶಿಷ್ಟ್ಯವನ್ನು ಕಾಣಬಹುದು. ತನ್ನ ಉತ್ತರಾಧಿಕಾರಿ ತನ್ನ ಸ್ಥಾನಕ್ಕೆ ಬರುವಂತೆ ಮಾಡಲು ಕುಟುಂಬದ ಯಜಮಾನ ತನ್ನ ಅಧಿಕಾರಕ್ಕೆ ರಾಜಿನಾಮೆ ಕೊಡುವುದನ್ನು ಕುರಿತ ನಿಯಮಗಳು ಇದರಲ್ಲಿವೆ. ನಿವೃತ್ತಿಗೆ ನೀಡಬಹುದಾದ, ಕಾನೂನಿನಿಂದ ಪುರಸ್ಕøತವಾದ, ಕಾರಣಗಳು ನಾಲ್ಕು ; 1 ವೃದ್ಧಾಪ್ಯ (60 ವರ್ಷಕ್ಕೂ ಮೇಲ್ಪಟ್ಟ ವಯಸ್ಸು), 2 ಕಾಯಿಲೆ ಅಥವಾ ಇತರ ಅನಿವಾರ್ಯ ಪರಿಸ್ಥಿತಿ, 3 ಮದುವೆಯ ಮೂಲಕ ಇನ್ನೊಂದು ಕುಟುಂಬಕ್ಕೆ ಪ್ರವೇಶ, 4 ಕುಟುಂಬದ ಮುಖ್ಯಸ್ಥೆ ಹೆಂಗಸಾಗಿದ್ದು, ಆಕೆ ಆ ಸ್ಥಾನದಿಂದ ನಿವೃತ್ತಿ ಹೊಂದಲು ವ್ಯಕ್ತಪಡಿಸಿದ ಬಯಕೆ. ನಿವೃತ್ತಿಗೆ ಬಲು ಸಾಮಾನ್ಯ ಕಾರಣ ವೃದ್ಧಾಪ್ಯ. ಇದು ಚೀನೀಪದ್ಧತಿಯ ಅನುಕರಣ, 718ರಲ್ಲಿ ಜಪಾನಿಗೆ ಬಂದದ್ದು. ಇಂಕೀಯೋ ಸಂಪೂರ್ಣವಾಗಿ ಜಪಾನೀ ಪದ್ಧತಿಯಲ್ಲವಾದರೂ ಜಪಾನೀ ಕುಟುಂಬ ಹಾಗೂ ಗೋತ್ರದ ವೈಶಿಷ್ಟ್ಯಗಳು ಇದರಲ್ಲಿ ಸೇರಿಕೊಂಡು ಇದಕ್ಕೆ ಜಪಾನೀ ಲಕ್ಷಣವನ್ನು ತಂದಿವೆ.
ಇರಿಯೈ ಹಕ್ಕು ಇರಿಯೈಕೆನ್ ನ್ಯಾಯದಲ್ಲಿ ನಿರೂಪಿತವಾಗಿದೆ. ಇರಿಯೈ ಎಂದರೆ ಸಾರ್ವತ್ರಿಕ ಪ್ರವೇಶ. ಕೆಲವು ಸ್ವತ್ತುಗಳನ್ನು ಸಾಮೂಹಿಕವಾಗಿ ಅನುಭವಿಸುವ ಹಕ್ಕನ್ನು ಕುರಿತದ್ದು ಇದು. ಸಾಮೂಹಿಕ ಒಡೆತನದ ಕಾಲದಿಂದ ಉಳಿದುಕೊಂಡು ಬಂದ ಈ ಹಕ್ಕು ಇಂದಿಗೂ ಸ್ಥಳೀಯ ಪದ್ಧತಿಗಳಿಗೆ ಅನುಗುಣವಾಗಿ ವಿವಿಧ ಪ್ರಕಾರಗಳಲ್ಲಿ ಜಾರಿಯಲ್ಲಿದೆ.
ಮ್ಯುಜಿನ್ ಎಂಬುದು ವಿಶಿಷ್ಟವಾದ ಸಹಕಾರಿ ವಿಮಾವ್ಯವಸ್ಥೆ. ಟೋಕುಗಾವಾ ಕಾಲದಿಂದ ಈ ಪದ್ಧತಿ ಬೆಳೆದುಕೊಂಡು ಬಂದಿದೆ. ಇದು ಮೂಲತಃ ಒಂದು ಬಗೆಯ ಉದ್ದರಿ ವ್ಯವಸ್ಥೆಯಾಗಿತ್ತು. ಟೋಕುಗಾವಾ ಕಾಲದಲ್ಲಿ ಇದಕ್ಕೆ ವಿಮಾ ಸ್ವರೂಪ ಬಂತು. ಸಾಮೂಹಿಕ ನಿಧಿಗೆ ನಿಯತಕಾಲಿಕವಾಗಿ ಚಂದಾ ಕೊಡುವ ಸದಸ್ಯರಲ್ಲಿ ಯಾರಾದರೂ ತೀರಿಕೊಂಡರೆ ನಿಧಿಯಿಂದ ಪರಿಹಾರಾರ್ಥವಾಗಿ ಒಂದು ನಿಗದಿಯಾದ ಮೊಬಲಗು ಕೊಡಲಾಗುತ್ತದೆ.
ಸೆಕೀಪು ಇನ್ನೊಂದು ವಿಶಿಷ್ಟ ಪದ್ಧತಿ. ಸೆಕೀಪು ಎಂದರೆ ಹೊಣೆಗೆ ವಹಿಸುವುದು. ಆಪಾದನೆಗೆ ಒಳಗಾದವನ ಆರಂಭಿಕ ವಿಚಾರಣೆ ನಡೆಸುವ ನ್ಯಾಯಧೀಶ, ಆರೋಪಿಯನ್ನು ಅವನ ಬಂಧುಗಳ ಅಥವಾ ಸ್ನೇಹಿತರ ವಶಕ್ಕೆ ವಹಿಸಿ, ಕರೆ ಬಂದಾಗ ಅವನನ್ನು ಕೋರ್ಟಿನ ಮುಂದೆ ಹಾಜರುಪಡಿಸುವಂತೆ ಆದೇಶ ನೀಡುತ್ತಾನೆ. ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೂ ಇದಕ್ಕೂ ವ್ಯತ್ಯಾಸವುಂಟು. ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆಪಾದಿತನ ಅಥವಾ ಅವನ ನ್ಯಾಯಿಕ ಪ್ರತಿನಿಧಿಯ ಅರ್ಜಿ ಅವಶ್ಯ. ಇಲ್ಲಿ ನ್ಯಾಯಾಧೀಶನೇ ಆದೇಶ ನೀಡುತ್ತಾನೆ. ಈ ಪದ್ಧತಿ ಟೋಕುಗಾವಾ ಕಾಲದಲ್ಲಿ ಉಗಮಗೊಂಡಿತು. ಆಪಾದಿತ ತಪ್ಪಿಸಿಕೊಳ್ಳದಂತೆ ಮಾಡಲು ಅವನಿಗೆ ಶಿಕ್ಷೆಯ ಬೆದರಿಕೆ ಒಡ್ಡುವ ಬದಲು. ಅವನ ಕುಟುಂಬದ ಸದಸ್ಯರ ಕರ್ತವ್ಯಪ್ರಜ್ಞೆ ಹಾಗೂ ಮಾನವಪ್ರಜ್ಞೆಗಳಿಗೆ ಪ್ರಾಧಾನ್ಯ ನೀಡುವ ಈ ಪದ್ಧತಿಯಲ್ಲಿ ಜಪಾನೀ ಕುಟುಂಬ ವ್ಯವಸ್ಥೆಯ ವಿಶಿಷ್ಟ ಲಕ್ಷಣ ಎದ್ದುಕಾಣುತ್ತದೆ.