ವಿಷಯಕ್ಕೆ ಹೋಗು

ಜಟಾಮಾಂಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಟಾಮಾಂಸಿ ವ್ಯಾಲೆರಿಯನೇಸೀ ಕುಟುಂಬಕ್ಕೆ ಸೇರಿದ ಒಂದು ಗಿಡ ಮೂಲಿಕೆ. ಸುಗಂಧ ಮಸ್ತೆ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಸ್ಪೈಕ್‍ನಾರ್ಡ್, ಇಂಡಿಯನ್ ನಾರ್ಡ್ ಎಂಬ ಹೆಸರುಗಳಿವೆ. ನಾರ್ಡೊಸ್ಟ್ಯಾಕಿಸ್ ಜಟಾಮ್ಯಾನ್ಸಿ ಇದರ ಶಾಸ್ತ್ರೀಯ ಹೆಸರು. ಇದರ ತವರು ಭಾರತ. ಪಂಜಾಬಿನಿಂದ ಭೂತಾನದವರೆಗೂ ಹಿಮಾಲಯದ ಉನ್ನತ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. 10-60 ಸೆಮಿ. ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಮೂಲಿಕೆ ಇದು.

ಲಕ್ಷಣಗಳು

[ಬದಲಾಯಿಸಿ]

ಇದಕ್ಕೆ ಉದ್ದವಾದ, ಬಲಿಷ್ಠವಾದ ಹಾಗೂ ದಾರುಮಯವಾದ ಬೇರಿನಂಥ ಪ್ರಕಂದ ಇದೆ. ಬೇರಿನ ಮೇಲ್ತುದಿಯಿಂದ ಹೊರಡುವ ಎಲೆಗಳೂ ಕಾಂಡದ ಮೇಲೆ ಹುಟ್ಟುವ ಎಲೆಗಳೂ ಇವೆ. ಹೂಗಳು ಗುಲಾಬಿ, ತಿಳಿಗೆಂಪು ನೀಲಿ ಬಣ್ಣದವು ; ಮಧ್ಯಾರಂಭಿ ಮಂಜರಿಗಳಲ್ಲಿ ಸಮಾವೇಶಗೊಂಡಿವೆ.

ಉಪಯೋಗಗಳು

[ಬದಲಾಯಿಸಿ]

ಜಟಾಮಾಂಸಿಯ ಪ್ರಕಂದಗಳಲ್ಲಿ ಒಂದು ಬಗೆಯ ತಿಳಿಹಳದಿ ಬಣ್ಣ ಹಾಗೂ ಸುವಾಸನೆಯುಳ್ಳ ಎಣ್ಣೆ ಉಂಟು. ಇದರ ಪರಿಮಳ ಪಚ್ಚೆತೆನೆಯ ವಾಸನೆಯನ್ನು ಹೋಲುತ್ತದೆ. ಇದರಲ್ಲಿ ಜಟಾಮ್ಯಾನ್ಸಿಕ್ ಆಮ್ಲವೂ ಜಟಾಮ್ಯಾನ್ಸೋನ್ ಎಂಬ ಕೀಟೋನ್ ಸಂಯುಕ್ತವೂ ಇವೆ. ಜಟಾಮಾಂಸಿ ಎಣ್ಣೆಯನ್ನು ಕ್ವಿನಿಡೀನಿನಂತೆ ಹೃದಯ ಬಡಿತದ ಲಯದೋಷ ನಿವಾರಣೆಗೆ ಬಳಸುತ್ತಾರೆ. ಇದಕ್ಕೆ ರಕ್ತದ ಒತ್ತಡವನ್ನು ಇಳಿಸುವ ಹಾಗೂ ಕೇಂದ್ರ ನರಮಂಡಲವನ್ನು ಮಂದಗೊಳಿಸುವ ಗುಣಗಳೂ ಉಂಟು. ಹೆಚ್ಚಿನ ಪರಿಮಾಣದಲ್ಲಿ ಸೇವಿಸಿದರೆ ತೀವ್ರ ತೆರನ ವೇದನಾಜಡತೆಯನ್ನು ಉಂಟುಮಾಡುವುದಲ್ಲದೆ ಕೆಲವೇ ಗಂಟೆಗಳಲ್ಲಿ ಸಾವನ್ನು ತರಬಲ್ಲದು. ಬೇರಿಗೆ ಉಪಶಾಮಕ ಪ್ರಭಾವ ಉಂಟು. ಪ್ರಕಂದವನ್ನು ಶಕ್ತಿವರ್ಧಕ, ಮೂತ್ರಸ್ರಾವ ಉತ್ತೇಜಕ, ಉದ್ದೀಪಕ, ಸೆಳವು ರೋಧಕ, ಋತುಸ್ರಾವ ಪ್ರಚೋದಕ, ವಿರೇಚಕ-ಹೀಗೆ ಹಲವಾರು ಬಗೆಯಲ್ಲಿ ಉಪಯೋಗಿಸಲಾಗುತ್ತದೆ. ಅಲ್ಲದೆ ಪ್ರಕಂದದ ಕಷಾಯ ಗರ್ಭೋನ್ಮಾದ, ಕಂಪವಾತ, ಅಪಸ್ಮಾರ ಮುಂತಾದ ಬೆಳೆವಣಿಗೆಯನ್ನು ಪ್ರಚೋದಿಸುತ್ತದೆ.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: