ಚೋಳ ಶೆಟ್ಟಿ ಬಸದಿ, ಮೂಡಬಿದಿರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಪದ್ಮಪ್ರಭ ಸ್ವಾಮಿ ಚೋಳ ಶೆಟ್ಟಿ ಬಸದಿಯು ಕರಾವಳಿಯ ಬಸದಿಗಳಲ್ಲೊಂದು.

ಸ್ಥಳ[ಬದಲಾಯಿಸಿ]

ಚೋಳ ಶೆಟ್ಟಿ ಬಸದಿಯು ಪಡುಮನಾಡು ಗ್ರಾಮ ಮೂಡಬಿದ್ರೆ ತಾಲೂಕು ಮಂಗಳೂರಿಗೆ ಸೇರಿದೆ. ಈ ಬಸದಿಯು ಮಹದೇವ ಶೆಟ್ಟಿ ಬಸದಿಗೆ ತಾಗಿಕೊಂಡು ಇದೆ. ಈ ಬಸದಿಯ ಮೂಲನಾಯಕ ಪದ್ಮಪ್ರಭ ಸ್ವಾಮಿ. ಈ ಬಸದಿ ಜೈನಮಠ ಮೂಡಬಿದ್ರೆಗೆ ಸೇರಿದ್ದಾಗಿದೆ.[೧]

ಇತಿಹಾಸ[ಬದಲಾಯಿಸಿ]

ಈ ಬಸದಿಯನ್ನು ಚೋಳರ ಕಾಲದಲ್ಲಿ ಕಟ್ಟಿಸಿದ್ದರಂತೆ. ಇದು ಸಾಮಾನ್ಯವಾಗಿ ಎಷ್ಟು ವರ್ಷಗಳ ಹಿಂದೆ ಎನ್ನುವುದು ತಿಳಿದಿಲ್ಲ.

ಆವರಣ[ಬದಲಾಯಿಸಿ]

ಈ ಬಸದಿಗೆ ಮೇಗಿನ ನೆಲೆಯಿಲ್ಲ. ಪದ್ಮಪ್ರಭ (ಆದಿತ್ಯ ಗೃಹಕ್ಕೆ ಸಂಬಂಧಪಟ್ಟ ದೇವರು) ತೀರ್ಥಂಕರರ ಪೂಜೆ ನಡೆಯುತ್ತದೆ. ಈ ಬಸದಿಯಲ್ಲಿ ಇರುವ ಬೇರೆ ಮೂರ್ತಿಗಳು ಸುಮತಿ ಸುಪಾರ್ಶ್ವ ಇವು. ರತ್ನತ್ರಯ ಮೂರ್ತಿಗಳಾಗಿವೆ. ಇಲ್ಲಿ ಪದ್ಮಾವತಿ ಅಮ್ಮನವರ ಹಾಗೂ ಬ್ರಹ್ಮದೇವರ ಮೂರ್ತಿ ಕೂಡ ಇದೆ. ಈ ಬಸದಿಯ ಎದುರುಗಡೆ ಮಾನಸ್ತಂಭವಿದ್ದು ಇದು ಸಾಧಾರಣ ಚೌಕಟ್ಟು ಆಯದಲ್ಲಿ ಶಿಖರದ ಸ್ವರೂಪವಿದ್ದು ಎತ್ತರವಾಗಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ(ನಾಲ್ಕು ದಿಕ್ಕಿಗೆ) ಮುಖವಾಗಿ ತೀರ್ಥಂಕರರ ಮೂರ್ತಿ ಇದೆ. ಬಸದಿಯನ್ನು ಪ್ರವೇಶಿಸುವಾಗ ಬಸದಿಯ ಎಡ-ಬಲ ಬದಿಗಳಲ್ಲಿ ದೇವರ ಮೂರ್ತಿಗಳಿವೆ. ಹಾಗೆ ಬಸದಿಯಲ್ಲಿ ಕಾರ್ಯಾಲಯವಿದೆ. ಈ ಬಸದಿಯ ಕಂಬಗಳಲ್ಲಿ ಶಿಲ್ಪಕಲಾಕೃತಿಗಳು ಕಂಡು ಬರುತ್ತವೆ. ಬಸದಿಯ ಎದುರಿಗೆ ಪ್ರಾರ್ಥನಾ ಮಂಟಪವನ್ನು ಪ್ರವೇಶಿಸುವಾಗ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರಗಳನ್ನು ಕಾಣಬಹುದಾಗಿದೆ. ಕೇವಲ ದ್ವಾರಪಾಲಕರ ಚಿತ್ರಗಳಿವೆ ಹೊರತುಪಡಿಸಿ ಬೇರಾವುದೇ ಚಿತ್ರಗಳು ಸಹ ಕಂಡು ಬರುವುದಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ಅಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥಂಕರ ಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯು ಈ ತೀರ್ಥಂಕರ ಮಂಟಪದಲ್ಲಿ ಇದೆ. ತೀರ್ಥಂಕರ ಮಂಟಪದ ಮುಂದೆ ನಮಸ್ಕಾರ ಮಂಟಪವಿದೆ. ಈ ಮಂಟಪದಲ್ಲಿ ಗಂಧಕುಟಿ ಇಲ್ಲ.[೨]

ಕಲಾಕೃತಿ,ಧಾರ್ಮಿಕ ಆಚರಣೆಗಳು[ಬದಲಾಯಿಸಿ]

ಗಂಧಕುಟಿಯ ಬಳಿಯಲ್ಲಿ ಗಣಧರಪಾದ, ಶ್ರುತ, ಬ್ರಹ್ಮ ದೇವರು ಇತ್ಯಾದಿ ಮೂರ್ತಿಗಳು ಇದೆ. ಇಲ್ಲಿ ಯಾವಾಗಲೂ ಪೂಜೆ ನಡೆಯುತ್ತದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿ ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದ್ದು ಪೂಜೆ ನಡೆಯುತ್ತದೆ. ಈ ದೇವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿರುವ ಜಿನಬಿಂಬಗಳ ಪೀಠಗಳ ಮೇಲೆ ಹಳೆಗನ್ನಡ ಅಕ್ಷರದಲ್ಲಿ ಬರೆದಿದೆ. ಮೂಲನಾಯಕ ಸ್ವಾಮಿಯ ಮೂರ್ತಿ ಕರಿಕಲ್ಲಿನ ಕಪ್ಪಿನ ಶಿಲೆ ೫ ಅಡಿ ಎತ್ತರ ಇದೆ. ಪದ್ಮಾಸನ ಭಂಗಿಯಲ್ಲಿ ಕುಳಿತಿದೆ. ದೇವತೆಗಳು ಸುತ್ತಲೂ ಚಾಮರ ಬೀಸುವ ಚಿತ್ರಿಕೆ ಇದೆ. ದಿನಾಲು ಅಭಿಷೇಕ ಮಾಡಲಾಗುತ್ತದೆ. ವಿಶೇಷ ಇದ್ದಲ್ಲಿ ಅಭಿಷೇಕ ಮಾಡಲಾಗುತ್ತದೆ. ದೀಪಾವಳಿಯ ಪಾಡ್ಯದ ದಿನದಲ್ಲಿ ಅರ್ಘ್ಯವನ್ನು ಎತ್ತುವ ಕ್ರಮವಿದೆ. ಪಂಚಕಲ್ಯಾಣ ಸಮಯದಲ್ಲಿ ವಜ್ರಲೇಪನ ಮಾಡಲಾಗಿದೆ. ಬಸದಿಯಲ್ಲಿ ಒಂದು ದಿನದಲ್ಲಿ ಬೆಳಿಗ್ಗೆ, ಮಧ್ಯಹ್ನ, ಸಾಯಂಕಾಲ ಹೀಗೆ ಮೂರು ಬಾರಿ ಪೂಜೆ ನಡೆಯುವುದಿಲ್ಲ. ಬೆಳಿಗ್ಗೆ ಒಂದೇ ಬಾರಿ ಪೂಜೆ ನಡೆಯುತ್ತದೆ. ಯುಗಾದಿ ಹಬ್ಬದಲ್ಲಿ ಪಂಚಾಮೃತಾಭಿಷೇಕ ಇದೆ. ಬಸದಿಯಲ್ಲಿ ಆಚರಿಸುವ ವಿಶೇಷ ಪೂಜೆಗಳು ಪಂಚಾಮೃತ, ಕ್ಷೀರಾಭಿಷೇಕ, ನವದಾನ್ಯತರ್ಪಣ, ಜೀವದಾಯಷ್ಟಮಿ ಇದೆ. ಬಸದಿಯ ಅಂಗಳದಲ್ಲಿ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಅಂಗಳದಲ್ಲಿ ಮೂರ್ತಿಗಳ ಶಿಲಾಶಾಸನವಿದೆ. ಅಷ್ಟದಿಕ್ಪಾಲಕರ ಕಲ್ಲು ಇಲ್ಲ. ಹೊರಾಂಗಣದಲ್ಲಿ ಇರುವುದರಿಂದ ಇದಕ್ಕೆ ಪೂಜೆ ಸಲ್ಲಿಕೆ ಇಲ್ಲ. ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದ್ದು ಅದನ್ನು ಮುರಕಲ್ಲಿನಿಂದ ಕಟ್ಟಲಾಗಿದೆ. ಗರ್ಭಗುಡಿಯಲ್ಲಿ ಭಗವಾನ್ ಪದ್ಮಪ್ರಭ ಸ್ವಾಮಿ ವಿರಾಜಮಾನರಾದರೆ, ಹೊರಗಿನ ತೀರ್ಥಂಕರ ಮಂಟಪದಲ್ಲಿ ಶ್ರೀ ಸುಮತಿನಾಥ ಹಾಗೂ ಶ್ರೀ ಸುಪಾರ್ಶ್ವನಾಥರ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಇಲ್ಲಿ ಶಂಕದ ಮೇಲೆ ಆಸೀನರಾಗಿರುವ ಶ್ರೀ ನೇಮಿನಾಥ ಸ್ವಾಮಿಯ ಬಿಂಬವು ಅಪೂರ್ವವಾದುದು. ಈ ಬಸದಿಯು ಶಿಥಿಲಗೊಳ್ಳುತ್ತಿದ್ದಾಗ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಇದನ್ನು ಜೀರ್ಣೋದ್ಧಾರಗೊಳಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://www.jainheritagecentres.com/jainism-in-india/karnataka/moodabidri/
  2. ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ.: ಮಂಜುಶ್ರೀ ಪ್ರಿಂಟರ್ಸ್.