ವಿಷಯಕ್ಕೆ ಹೋಗು

ಚೆಸ್ನಟ್ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆಸ್ನಟ್ ಮರ
Sweet chestnut Castanea sativa
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Castanea

Mill.

ಫ್ಯಾಗೇಸೀ ಕುಟುಂಬಕ್ಕೆ ಸೇರಿದ ಅತ್ಯಂತ ಬೆಲೆಬಾಳುವ ವೃಕ್ಷ. ವೈಜ್ಞಾನಿಕ ಹೆಸರು ಕ್ಯಾಸ್ಟಾನಿಯ. ಕ್ಯಾಸ್ಟಾನಿಯ ಜಾತಿಯಲ್ಲಿ ಅನೇಕ ಪ್ರಭೇದಗಳಿವೆಯಾದರೂ ಈ ಮುಂದಿನ ಕೇವಲ ನಾಲ್ಕು ಪ್ರಭೇದಗಳಿಗೆ ಮಾತ್ರ ಚೆಸ್‍ನಟ್ ಮರಗಳೆಂದು ಹೆಸರು: ಕ್ಯಾ ಸೇಟಿವ (ಯೂರೋಪಿನ ಚೆಸ್‍ನಟ್), ಕ್ಯಾ.ಡೆಂಟೇಟ (ಅಮೆರಿಕನ್ ಚೆಸ್‍ನಟ್), ಕ್ಯಾ. ಕ್ರಿನೇಟ (ಜಪಾನಿನ ಚೆಸ್‍ನಟ್) ಕ್ಯಾ. ಮಾಲಿಸಿಮ (ಚೈನೀಸ್ ಚೆಸ್‍ನಟ್). ಉಳಿದ ಪ್ರಭೇದಗಳನ್ನು ಚಿನ್ ಕ್ವಾಪಿನ್ಸ್ ಎನ್ನುತ್ತಾರೆ. ಹಿಪ್ಪೊಕ್ಯಾಸ್ಟನೇಸೀ ಕುಟುಂಬಕ್ಕೆ ಸೇರಿದ ಹಾರ್ಸ್ ಚೆಸ್‍ನಟ್ ಎನ್ನುವ ವೃಕ್ಷಕ್ಕೂ ನಿಜವಾದ ಚೆಸ್ಟ್‍ನಟ್ಟಿಗೂ ಯಾವ ಸಂಬಂಧವೂ ಇಲ್ಲ.[]

ಗುಣಲಕ್ಷಣಗಳು

[ಬದಲಾಯಿಸಿ]

ಚೆಸ್‍ನಟ್‍ಗಳು 15-30 ಮೀ. ಎತ್ತರಕ್ಕೆ ಬೆಳೆಯುತ್ತವೆ. ಎಲೆಗಳು ಸರಳ; ಪರ್ಯಾಯ ರೀತಿಯಲ್ಲಿ ಜೋಡಣೆಯಾಗಿವೆ. ಬೇಸಿಗೆಯಲ್ಲಿ ಉದುರುವುದುಂಟು. ಎಲೆಗಳ ಅಂಚಿನಲ್ಲಿ ಬಿರುಗೂದಲಿನಂಥ ಕೂದಲುಗಳಿವೆ. ಹೂಗಳು ಸಣ್ಣವು ಮತ್ತು ಏಕಲಿಂಗಿಗಳು; ಕ್ಯಾಟ್ಕಿನ್ ಪುಷ್ಪಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಕೆಲವು ಪುಷ್ಪಮಂಜರಿಗಳಲ್ಲಿ ಕೇವಲ ಗಂಡು ಹೂಗಳು ಮಾತ್ರ ಇವೆ. ಇನ್ನುಳಿದವುಗಳಲ್ಲಿ ಎರಡೂ ಬಗೆಯ ಹೂಗಳಿರುವುದಂಟು. ಇಂಥ ಗೊಂಚಲುಗಳಲ್ಲಿ ಹೆಣ್ಣು ಹೂಗಳು ಮಂಜರಿಯ ಕೆಳಭಾಗದಲ್ಲಿರುತ್ತವೆ. ಹಣ್ಣಿನ ಸುತ್ತ ಚರ್ಮಿಲ ರೀತಿಯ ಸಿಪ್ಪೆ ಇದೆ. ಬೀಜಗಳು 2 ಅಥವಾ 3.[]

ಚೆಸ್‍ನೆಟ್ ಮರಗಳಿಗೆ ನೀರಿನ ಆವಶ್ಯಕತೆ ಅಧಿಕ. ಆದರೆ ನೆಲದಲ್ಲಿ ಒಮ್ಮೆ ಸರಿಯಾಗಿ ಬೇರೂರಿದವೆಂದರೆ ಬಹಳ ಕಾಲ ನೀರಿನ ಅಭಾವವನ್ನು ತಡೆದುಕೊಳ್ಳಬಲ್ಲವು. ಆಮ್ಲೀಯ ಅಥವಾ ತಟಸ್ಥ ಮಣ್ಣಿನಲ್ಲಿ ಮರಗಳು ಚೆನ್ನಾಗಿ ಬೆಳೆಯುತ್ತವೆ. ಮರವನ್ನು ಕಡಿದ ಮೇಲೆ ಕಾಂಡದ ಬುಡದಿಂದ ಅನೇಕ ಚಿಗುರುಗಳು ಹೊರಡುವುದು ಚೆಸ್ಟ್‍ನಟ್ ಮರಗಳ ಮುಖ್ಯ ಲಕ್ಷಣಗಲ್ಲೊಂದು. ಇದು ಅಲಿಂಗ ರೀತಿಯ ಸಂತಾನಾಭಿವೃದ್ಧಿಗೆ ಸಹಾಯಕ. ಮರದ ತಿರುಳು ಮತ್ತು ತೊಗಟೆಯಿಂದ ಟ್ಯಾನಿನ್ ಸಿಗುತ್ತದೆ. ಇದನ್ನು ಚರ್ಮ ಹದ ಮಾಡುವುದಕ್ಕೆ ಉಪಯೋಗಿಸುತ್ತಾರೆ. ಚೆಸ್‍ನಟ್ ಹಣ್ಣುಗಳು ತಿನ್ನಲು ರುಚಿ. ಕಾಂಡ ಹಾಗೂ ಕೊಂಬೆಗಳನ್ನು ಕಂಬ, ದೊಣ್ಣೆ, ದೋಣಿಯ ಹುಟ್ಟು ಮುಂತಾದವನ್ನು ಮಾಡಲು ಉಪಯೋಗಿಸುತ್ತಾರೆ. ದೊಡ್ಡ ದಿಮ್ಮಿಗಳನ್ನು ಕುಯ್ದು ಹಲಗೆಗಳನ್ನಾಗಿ ಮಾಡಿ, ಮರದ ಸಾಮಾನುಗಳನ್ನು ಮೇಜು ಕುರ್ಚಿಗಳನ್ನು ಇನ್ನಿತರ ಅಲಂಕರಣ ಸಾಮಾಗ್ರಿಗಳ ತಯಾರಿಕೆಗೆ ಉಪಯೋಗಿಸುವುದುಂಟು. ಮರಕ್ಕೆ ಚೆನ್ನಾಗಿ ಹೊಳಪು ಕೊಡಬಹುದಾದ್ದರಿಂದ ವಿಶೇಷ ಬೇಡಿಕೆಯಿದೆ. ಎಲೆಗಳ ಕಷಾಯವನ್ನು ಕೆಮ್ಮು ಮತ್ತಿತರ ಉಸಿರಾಟದ ತೊಂದರೆಗಳ ನಿವಾರಣೆಗೆ ಬಳಸುತ್ತಾರೆ.

ಚೆಸ್‍ನಟ್ಟಿನ ವಿವಿಧ ಪ್ರಭೇದಗಳ ಮುಖ್ಯ ಲಕ್ಷಣಗಳು

[ಬದಲಾಯಿಸಿ]

ಯೂರೋಪಿನ ಚೆಸ್ಟ್‍ನಟ್

[ಬದಲಾಯಿಸಿ]

ಅತ್ಯಂತ ಬೆಲೆಬಾಳುವ ಮರ. 1,000 ಮೀ ಗಳಿಗಿಂತ ಕೆಳಮಟ್ಟದ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತದೆ. ಮರಗಳು ಬೃಹದಾಕಾರದವು. ಎಲ್ಲಕ್ಕಿಂತ ದೊಡ್ಡ ವೃಕ್ಷವಾದ ಸಿಲಿಸಿಯ ಎಂಬುದು ಎಟ್ನ ಪರ್ವತದ ಬುಡದಲ್ಲಿತ್ತು. 1850ರಲ್ಲಿ ಇದರ ಸುತ್ತಳತೆ 62 ಮೀ. ಮತ್ತು ವಯಸ್ಸು ಎರಡು ಸಾವಿರಕ್ಕೂ ಮೀರಿತ್ತು. ಇದು ಎಟ್ನದಲ್ಲಿ ಉಂಟಾದ ಲಾವ ಪ್ರವಾಹದಿಂದ ನಾಶವಾಯಿತು. ಈ ಪ್ರಭೇದ ಅನೇಕ ಸಹಸ್ರ ಸಂಖ್ಯೆಯಲ್ಲಿ ಹಣ್ಣುಗಳನ್ನು ಬಿಡುತ್ತದೆ. ದೊಡ್ಡ ಹಣ್ಣುಗಳಿಗೆ ಮ್ಯಾರಾನ್‍ಗಳೆಂದು ಹೆಸರು. ಇವನ್ನು ಹಸಿಯಾಗಿ ಇಲ್ಲವೆ ಹುರಿದು ತಿನ್ನಬಹುದು. ಹಣ್ಣು ಬಲಿತಮೆಲೆ ಒಣಗಿಸಿ, ಹಿಟ್ಟು ಮಾಡಿಸಿ, ಏಕದಳ ಧಾನ್ಯಗಳಿಗೆ ಬದಲಾಗಿ ಬ್ರೆಡ್, ಸೂಪ್ ಮತ್ತಿತರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವುದಿದೆ.

ಜಪಾನ್ ಚೆಸ್ಟ್‍ನೆಟ್

[ಬದಲಾಯಿಸಿ]

800 ಮೀ. ಗಳಿಗಿಂತ ಕೆಳಮಟ್ಟದಲ್ಲಿ ಬೆಳೆಯುತ್ತದೆ. ಮರಗಳು ಹೆಚ್ಚು ಎತ್ತರ ಬೆಳೆಯುವುದಿಲ್ಲ. ಅಪರೂಪವಾಗಿ ಎತ್ತರ 20ಎಂ. ದಪ್ಪ 1. ಮೀ. ಇರಬಹುದು. ಇದರ ಹಣ್ಣುಗಳನ್ನು ತಿನ್ನಬಹುದು. ಗುಣದಲ್ಲಿ ಯೂರೋಪಿಯನ್ ಚೆಸ್‍ನಟ್‍ಗಿಂತ ಇದು ಕಡಿಮೆ ದರ್ಜೆಯದು.

ಚೈನೀಸ್ ಚೆಸ್‍ನಟ್

[ಬದಲಾಯಿಸಿ]

ಜಪಾನ್ ಚೆಸ್‍ನಟ್ ನಷ್ಟೇ ಎತ್ತರ ಬೆಳೆಯುತ್ತದೆ. ಹಣ್ಣುಗಳು ಸಣ್ಣವಾದರೂ ಬಲುರುಚಿ. ಇದರಲ್ಲಿ ಬಾರ್ಪ್‍ಲೆಟ್‍ಕಾರ್, ಹಾಚ್ಸನ್, ಮಿಲ್ ಪೋರ್ಡ್, ರಿಲೆಯನ್ಸ್, ಯಾಂಕೀ, ಜಿಮ್ಮರ್ ಮ್ಯಾನ್ ಮುಂತಾದ ಉಪಪ್ರಭೇದಗಳಿವೆ.

ಅಮೆರಿಕನ್ ಚೆಸ್‍ನಟ್

[ಬದಲಾಯಿಸಿ]

ಇದು ಸಹ ಅತ್ಯಂತ ಬೆಲೆಬಾಳುವ ಮರ. ಮರಗಳ ಎತ್ತರ 30 ಮೀ. ಗಳಿಗಿಂತ ಹೆಚ್ಚು. ಸುತ್ತಳತೆ 1.5 ಮೀ.

ಭಾರತದಲ್ಲಿ ಚೆಸ್ಟ್‍ನಟ್‍ಗಳು ಸ್ವಾಭಾವಿಕವಾಗಿ ಬೆಳೆಯುವುದಿಲ್ಲ. ಇವನ್ನು ಹಿಮಾಲಯ ಪರ್ವತ ಮತ್ತು ಖಾಸಿ ಬೆಟ್ಟಗಳಲ್ಲಿ ಬೆಳೆಸುವುದುಂಟು. ಈಗ ಹೆಚ್ಚು ಬೆಳೆಸುತ್ತಿರುವುದು ಯೂರೋಪಿಯನ್ ಚೆಸ್ಟ್‍ನಟ್. ಇದರ ಹಣ್ಣಿನ ತಿರುಳು ಮತ್ತು ಹಿಟ್ಟನ್ನು ಆಹಾರವಾಗಿ ಉಪಯೋಗಿಸುತ್ತಾರೆ.[]

ರಾಸಾಯನಿಕ ಸಂಯೋಜನೆ

[ಬದಲಾಯಿಸಿ]

ಚೆಸ್‍ನಟ್ ಹಣ್ಣಿನ ತಿರುಳಿನ ರಾಸಾಯನಿಕ ಸಂಯೋಜನೆ ಹೀಗಿದೆ :ತೇವಾಂಶ 29.34%, ಪಿಷ್ಟ ಪದಾರ್ಥಗಳು 32.64%, ಸಕ್ಕರೆ 21.60%, ಪ್ರೋಟೀನ್ 10.90%, ಕೊಬ್ಬು 1.84%, ಬೂದಿ (ಖನಿಜಗಳು) 2.25% ಮತ್ತು ನಾರು 1.43%.

ಚೆಸ್‍ನಟ್ಟಿನ ರೋಗಗಳು

[ಬದಲಾಯಿಸಿ]

ಚೆಸ್‍ನಟ್ಟಿನ ರೋಗಗಳಲ್ಲಿ ಮುಖ್ಯ, ಚೆಸ್ಟ ನಟ್ ಬ್ಲೈಟ್, 20ನೆಯ ಶತಮಾನದ ಆದಿಭಾಗದಲ್ಲಿ ಅಮೆರಿಕನ್ ಚೆಸ್ಟ್‍ನಟ್ ಮರ ಎಂಡೋಥಿಯ ಪ್ಯಾರಸಿಟಿಕ ಎಂಬ ಶಿಲೀಂಧ್ರ ರೋಗಕ್ಕೆ ತುತ್ತಾಯಿತು. ಸುಮಾರು ಮೂವತ್ತೈದು ವರ್ಷಗಳ ಕಾಲ ಅವ್ಯಾಹತವಾಗಿ ನಡೆದ ಈ ರೋಗದ ದಾಳಿಗೆ ಅನೇಕ ಮರಗಳು ಬಲಿಯಾದವು. ಇತ್ತೀಚೆಗೆ ಕೆಲವು ಬ್ಲೈಟ್ ನಿರೋಧಕ ತಳಿಗಳನ್ನು ಉತ್ಪಾದಿಸಲಾಗಿದ್ದರೂ ಅವನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸಲು ಸಾಧ್ಯವಾಗಿಲ್ಲ. ಅಮೆರಿಕನ್ ಮತ್ತು ಜಪಾನ್ ಪ್ರಭೇದಗಳ ನಡುವಣ ಸಂಕರತಳಿಗಳು ರೋಗನಿರೋಧಕ ಗುಣಗಳನ್ನು ಪಡೆದಿವೆಯೆಂದು ಹೇಳಲಾದರೂ ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆದಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. http://www.efloras.org/florataxon.aspx?flora_id=2&taxon_id=105816
  2. http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Castanea&SPECIES_XREF=&TAXON_NAME_XREF=&RANK=
  3. http://www.efloras.org/florataxon.aspx?flora_id=1&taxon_id=105816