ಚೀನೀ ನ್ಯಾಯ
ಪ್ರಾಚೀನಕಾಲದಿಂದಲೂ ಚೀನೀಯರಿಗೆ ನೈಸರ್ಗಿಕ ನಿಯಮಗಳಲ್ಲೇ ಹೆಚ್ಚು ವಿಶ್ವಾಸ. ಅದೇ ಅವರ ಬಹುತೇಕ ಕಾನೂನುಗಳಿಗೆ ತಳಹದಿ. ಉಳಿದೆಲ್ಲ ದೇಶಗಳಂತೆ ಅಲ್ಲೂ ಸಾರ್ವಜನಿಕ ನ್ಯಾಯ ಖಾಸಗಿ ಅಥವಾ ವ್ಯಕ್ತಿಗತ ನ್ಯಾಯಕ್ಕಿಂತ ಪೂರ್ವದಲ್ಲೇ ಜಾರಿಯಲ್ಲಿ ಬಂತೆಂದು ನಂಬಬಹುದಾದರೂ ಅತಿ ಪುರಾತನವಾದ ದಾಖಲೆಗಳಲ್ಲಿ ವಿವಾಹ ಮತ್ತು ವಾರಸುದಾರಿಕೆಯ ಬಗ್ಗೆ ನಿಯಮಗಳನ್ನು ಮಾಡಿಟ್ಟ ಉಲ್ಲೇಖವಿದೆ. ಆದರೆ ಅವಕ್ಕೆ ಪರಿಪೂರ್ಣವಾಗಿ ಕಾನೂನಿನ ಸ್ವರೂಪವೇ ಇತ್ತೆಂಬ ಬಗ್ಗೆ ಸಂದೇಹವುಂಟು. ಚೀನೀಯರ ಪುರಾತತ್ವ ಐದು ಬಗೆಯ ಮಾನವೀಯ ಸಂಬಂಧಗಳನ್ನು ಕುರಿತು ಹೇಳುತ್ತದೆ. ರಾಜ ಮತ್ತು ಪ್ರಜೆ, ತಂದೆ ಮತ್ತು ಮಗ, ಗಂಡ ಮತ್ತು ಹೆಂಡತಿ, ಅಣ್ಣ ಮತ್ತು ತಮ್ಮ ಹಾಗೂ ಗೆಳೆಯ ಮತ್ತು ಗೆಳೆತಿ. ಇವರ ನಡುವೆಯೇ ಅಲ್ಲದೆ, ಪಂಚಗ್ರಹ, ಪಂಚಧ್ವನಿ, ಪಂಚಲೋಹ, ಪಂಚಧಾನ್ಯ, ಪಂಚವರ್ಣಗಳೇ ಮುಂತಾದವುಗಳ ಪರಸ್ಪರ ಸಂಬಂಧವನ್ನು ಕುರಿತೂ ಹೇಳುತ್ತದೆ.
ಜಾದೂ, ಜಾತಕ ಮೊದಲಾದವುಗಳಿಗೆ ಅವರು ಮಹತ್ತ್ವ ನೀಡುತ್ತಿದ್ದರು. ನಿಸರ್ಗ ನಿಯಮಗಳಲ್ಲಿ ಹಾಗೂ ನೈತಿಕ ಮೌಲ್ಯಗಳಲ್ಲಿ ಆಂತರಿಕವಾಗಿ ಪರಸ್ಪರಸಂಬಂಧವನ್ನು ಅವರು ಕಲ್ಪಿಸುತ್ತಿದ್ದರು. ಉದಾಹರಣೆಗೆ ಚಳಿಗಾಲದಲ್ಲಿ ಬೆಚ್ಜನೆಯ ದಪ್ಪ ಬಟ್ಟೆಗಳನ್ನು ತೊಡುವುದು ಬೇಸಗೆಯಲ್ಲಿ ವಿರಳವಾಗಿ ಅಥವಾ ತೆಳ್ಳನೆಯ ಬಟ್ಟೆಗಳನ್ನು ಧರಿಸುವುದು ಸ್ವಾಭಾವಿಕ ಧರ್ಮ, ನಿಸರ್ಗಕ್ಕೆ ವಿರುದ್ಧವಾಗಿ ವರ್ತಿಸಿದರೆ ಋತುಚಕ್ರ ಸರಿಯಾಗಿ ತಿರುಗಲಾರದೆಂಬುದು ಅವರ ನಂಬಿಕೆಯಾಗಿತ್ತು. ತಮ್ಮ ಅನೈತಿಕ ಅಪಕೃತಿಗಳಿಂದ ವಿಶ್ವದ ನಿಯಮ ಮತ್ತು ಕಾಲಚಕ್ರಗಳನ್ನು ತಲೆಕೆಳಗು ಮಾಡಿದ ಚಕ್ರವರ್ತಿಗಳ ಕಥೆಗಳಿಂದ ಚೀನೀ ಇತಿಹಾಸ ತುಂಬಿದೆ. ಕಾನ್ಫ್ಯೂಷಸ್ ಧರ್ಮಕ್ಕೆ ಸೇರಿದ ಜುಂಗ್ ಯುಂಗ್ ಎಂಬ ಪುಸ್ತಕ ಇಂಥ ಪೂರ್ವಪೀಠಿಕೆಗಳಿಂದಲೇ ಪ್ರಾರಂಭವಾಗುತ್ತದೆ. ನಿಸರ್ಗ ನಿಯಮಗಳು ಮಾನವ ಹೃದಯದಲ್ಲಿ ದೈವದತ್ತವಾಗಿಯೇ ಅಳವಡಿಸಲ್ಪಟ್ಟಿವೆಯೆಂಬುದು ಕಾನ್ಫ್ಯೂಷಸನ ನಂಬಿಕೆಯಾಗಿತ್ತು. ಇಂಥ ನಿಯಮಗಳಿಗೆ ಅನುಗುಣವಾಗಿ ನಡೆಯುವುದರಿಂದಲೇ ಜೀವನ ಪರಿಪೂರ್ಣವಾಗುತ್ತದೆ. ಚೀನೀ ತರ್ಕಶಾಸ್ತ್ರ ಕೂಡ ಈ ದೃಷ್ಟಿಯ ಪ್ರತಿಪಾದನೆ.
ಚೀನದ ಪ್ರಥಮ ಲಿಖಿತ ಕಾನೂನುಗಳನ್ನು ಕಂಚಿನ ಮುಕ್ಕಾಲ್ಮಣೆಗಳ ಮೇಲೆ ಬರೆಯಲಾಗುತ್ತಿತ್ತು (ಕ್ರಿ. ಪೂ. 6ನೆಯ ಶತಮಾನ). ಜನರ ಹಕ್ಕುಬಾಧ್ಯತೆಗಳನ್ನು ಲಿಖಿತಗೊಳಿಸಿ, ದೊರೆಗಳ ಹಾಗೂ ಊಳಿಗಮಾನ್ಯಪ್ರಭುಗಳ ಅಧಿಕಾರವನ್ನು ಮಿತಿಗೊಳಿಸುವುದು ಶಾಸಕರ ಉದ್ದೇಶವಾಗಿತ್ತು. ಈ ನ್ಯಾಯಪಟ್ಟಿಕೆಗಳಿಂದ ಸಮಾಜವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಅಪಾಯವಿದೆಯೆಂದು ಕಾನ್ಫ್ಯೂಷಸ್ ಹೇಳಿದ. ಕಾನೂನುಗಳ ಆವಶ್ಯಕತೆಯ ಬಗ್ಗೆ ಆಗಿನಿಂದ ತೀವ್ರವಾದ ವಿವಾದಗಳು ನಡೆಯುತ್ತಲೇ ಬಂದುವು. ಸಾರ್ವತ್ರಿಕವಾದ, ಸರ್ವಸಮಾನವಾದ, ನಿರುಪಾಧಿಕವಾದ, ದುಷ್ಟಶಿಕ್ಷಣಶಿಷ್ಟಪರಿಪಾಲನಮಾಡುವ ನ್ಯಾಯವ್ಯವಸ್ಥೆಯೊಂದು ಅಗತ್ಯವೆಂದು ನ್ಯಾಯಪಂಡಿತರು ವಾದಿಸುತ್ತಿದ್ದರು. ಕ್ರಿ. ಪೂ. 221ರಲ್ಲಿ ಚಿನ್ ರಾಜವಂಶದ ಆಳ್ವಿಕೆ ಆರಂಭವಾದಾಗ ಈ ವಾದಕ್ಕೆ ಪುರಸ್ಕಾರ ದೊರಕಿತು. ಆ ರಾಜವಂಶ ಸಾರ್ವಭೌಮತ್ವವನ್ನು ಪಡೆಯಿತು. ಅಪರಾಧಗಳನ್ನು ತಡೆಯಲು ಕಟ್ಟುನಿಟ್ಟಾದ ಕಾನೂನುಗಳು ಅಗತ್ಯವೆಂಬ ಅಂಶ ಮನವರಿಕೆಯಾಯಿತು. ಚೀನೀ ನ್ಯಾಯಸೂತ್ರಗಳು ರಚನೆಯಾದುವು. ಕಾನ್ಫ್ಯೂಷಸ್ ಧರ್ಮದ ತತ್ತ್ವಾರಾಧಕರಿಂದ ಇದಕ್ಕೆ ಪ್ರಬಲ ವಿರೋಧವೂ ಇತ್ತು. ಶಾಸಕರು ಎಷ್ಟೇ ಪ್ರಯತ್ನಮಾಡಿದರೂ ಕಾನ್ಫ್ಯೂಷಸನ ತತ್ತ್ವಗಳು ಎಲ್ಲ ಕಾನೂನುಗಳನ್ನೂ ಮೀರಿ ನಿಲ್ಲತೊಡಗಿದುವು. ವಾಣಿಜ್ಯ ವ್ಯವಹಾರಗಳಿಗೆ ಕಾನೂನುಗಳ ಬದಲು ಹಿಂದಿನ ವ್ಯವಹಾರಗಳ ರೂಢಿಯೇ ಮುಂದುವರಿಯಿತು, ಸಾರ್ವಜನಿಕ ಶಾಂತಿಗೆ ತೀರ ತೊಂದರೆ ಬರುವ ಸಂದರ್ಭದಲ್ಲಿ ಮಾತ್ರ ಕಾಯಿದೆಗಳನ್ನು ಅನ್ವಯಿಸಲಾಗುತ್ತಿತ್ತು. ಹಳೆಯ ಬರೆಹಗಳನ್ನೂ ಹೇಳಿಕೆಗಳನ್ನೂ ನೈತಿಕ ಮತ್ತು ನೈಸರ್ಗಿಕ ನ್ಯಾಯಪದ್ಧತಿಯನ್ನೂ ಗತಿಸಿದ ಚಾಣಾಕ್ಷ ಚಕ್ರವರ್ತಿಗಳ ಅನುಭವವನ್ನೂ ಅನುಸರಿಸಿ ನ್ಯಾಯ ಸಂಹಿತೆಯನ್ನು ನಿರ್ಮಿಸಲಾಯಿತು. ಅನಂತರ ಪ್ರತಿಯೊಂದು ರಾಜವಂಶವೂ ತನಗೆ ಸೂಕ್ತ ಕಂಡಂತೆ ನ್ಯಾಯಸಂಹಿತೆಯನ್ನು ರಚಿಸಿಕೊಳ್ಳಲಾರಂಭಿಸಿತು. ಈ ಸಂಹಿತೆಗಳಲ್ಲಿ ಅತ್ಯಂತ ಪ್ರಸಿದ್ಧವಾದ್ದು ಟಾಂಗ್ ಸಂಹಿತೆ (653). ಅನಂತರದ ಎಲ್ಲ ಸಂಹಿತೆಗಳಿಗೂ ಇದು ಮಾದರಿಯಾಗಿ ಪರಿಣಮಿಸಿತು. ಮ್ಯೂನ್ಜೂ ವಂಶದವರೆಗೂ (1644-1912) ಇದರ ಪ್ರಭಾವ ಮುಂದುವರಿಯಿತು. ಕೊರಿಯ, ಜಪಾನ್, ಅನ್ನಾಂ ರಾಜ್ಯಗಳೂ ಇದನ್ನು ಅನುಸರಿಸಿ ಕಾನೂನು ರಚಿಸಿಕೊಂಡುವು.
ಚೀನೀಯರು ದಂಡನ್ಯಾಯದಲ್ಲಿ ನಿಷ್ಣಾತರಾಗಿದ್ದರು. ಇಂದಿನ ನಾಗರಿಕ ಕಾನೂನುಗಳು ಕೂಡ ಅಳವಡಿಸಿಕೊಳ್ಳಬಹುದಾದಂಥ ದಂಡನ್ಯಾಯವನ್ನು ಅವರ ಸುದೀರ್ಘ ಇತಿಹಾಸದಲ್ಲಿ ಕಾಣಬಹುದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯ ಬೇಕೆಂಬ, ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಜನಪ್ರಿಯ ನ್ಯಾಯಕ್ಕೆ ಅವರು ಮಾರುಹೋಗಲಿಲ್ಲ. ಬದಲಾಗಿ ಜವಾಬ್ದಾರಿಯನ್ನು ನಿರ್ದುಷ್ಟವಾಗಿ ಹೊರಿಸತಕ್ಕ, ಹಾಗೂ ಅಪರಾಧವನ್ನೆಸಗಲು ನಿರುತ್ತೇಜಕವಾದ ಕಾನೂನುಗಳಿಗೆ ಪ್ರಾಶಸ್ತ್ಯ ನೀಡಿದರು. ನಿಸರ್ಗದಲ್ಲಿ ಏನೇ ಬದಲಾವಣೆಯಾದರೂ ಯಾರೋ ಎಲ್ಲೋ ತಪ್ಪು ಮಾಡಿದ್ದಾರೆಂಬ ಭಾವನೆಯಿಂದಾಗಿ ಮಕ್ಕಳು. ಮೂರ್ಖರು, ಕೊನೆಗೆ ಪ್ರಾಣಿ-ಯಾರಾದರೂ ಸರಿ-ಶಿಕ್ಷೆ ಅನುಭವಿಸುವುದು ಅಗತ್ಯವೆಂದೆಣಿಸಲಾಗಿತ್ತು. ಸಾಮಾಜಿಕ ಅಪಾಯ, ಅದರ ವಿರುದ್ಧ ಮುನ್ನೆಚ್ಚರಿಕೆ ಹಾಗೂ ಭದ್ರತೆ ಮುಂತಾದ, ಇಂದಿನ ಯುಗದ ವಿಚಾರಗಳ, ತಿಳಿವಳಿಕೆ ಪ್ರಾಚೀನ ರೂಪದಲ್ಲಾದರೂ ಅವರಿಗೆ ಇತ್ತು.
ಚೀನೀ ನ್ಯಾಯಪದ್ಧತಿಯಲ್ಲಿ ಸಿವಿಲ್ ವಾಣಿಜ್ಯ ಕಾನೂನುಗಳಾಗಲಿ, ಅಂತರರಾಷ್ಟ್ರೀಯ ಕಾನೂನಾಗಲಿ ಇರಲಿಲ್ಲ. ಎಲ್ಲ ದೇಶಗಳೂ ಚೀನಕ್ಕೆ ಅಧೀನವೆಂಬುದೂ ಅದಕ್ಕೆ ಅವು ಕಪ್ಪ ಒಪ್ಪಿಸಬೇಕೆಂಬುದೂ ಅದರ ಧೋರಣೆ. ಇಂಥ ನ್ಯಾಯಪದ್ಧತಿ 19ನೆಯ ಶತಮಾನದ ವೇಳೆಗೆ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಯಿತು. ಅನೇಕ ಸುಧಾರಣೆಗಳು ಬಂದುವು. ಸಿವಿಲ್ ಅಪರಾಧಗಳಿಗೆ ಚಡಿ ಏಟು ಕೊಡುವುದೇ ಮುಂತಾದ ದಂಡನೆಯ ಕ್ರಮಗಳು ರದ್ದಾದುವು. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಜರ್ಮನ್ ಹಾಗೂ ಜಪಾನೀ ಮಾದರಿಯಲ್ಲಿ ಹೊಸ ಕಾನೂನುಗಳನ್ನು ರಚಿಸಲು ಯತ್ನ ನಡೆಯಿತು. ಅದರೆ ವಾಸ್ತವವಾಗಿ ಇವು ಮ್ಯಾನ್ಚೂ ಮನೆತನದ ಕಾಲದ ನ್ಯಾಯ ಸಂಹಿತೆಯ ಅಧುನಿಕ ರೂಪಗಳೆನ್ನಬಹುದು.
ಅಂದಿನ ಚೀನೀ ನ್ಯಾಯ ಮೂರು ಮುಖ್ಯ ತತ್ತ್ವಗಳನ್ನು ಒಳಗೊಂಡಿತ್ತು. ಅವು ರಾಷ್ಟ್ರೀಯತೆ, ಪ್ರಜಾಪ್ರಭುತ್ವ ಮತ್ತು ಸಾಮಾನ್ಯ ಜನರ ಆರ್ಥಿಕ ಪ್ರಗತಿ. ಹೊಸದಾಗಿ ರಚಿತವಾದ ಕಾನೂನುಗಳಿಗೆ ಹಳೆಯ ಸಾಂಪ್ರದಾಯಿಕ ನ್ಯಾಯ ಪೂರಕವಾಗಿತ್ತು. ಹಲವು ಸಾಂಪ್ರದಾಯಿಕ ವಿಧಿಗಳೇ ಮುಂದುವರಿದುವು. ಯಾವುದೇ ವಿಚಾರದಲ್ಲಿ ಕಾನೂನಿನ ಅಭಾವವಿದ್ದಾಗ ಸಾಂಪ್ರದಾಯಿಕ ವಿಧಿಗಳನ್ನೇ ನ್ಯಾಯಾಲಯಗಳು ಅನುಸರಿಸತಕ್ಕದ್ದು ಎಂದು ಸಿವಿಲ್ ಸಂಹಿತೆಯ 1ನೆಯ ಕಲಮಿನಲ್ಲಿ ಹೇಳಲಾಗಿತ್ತು. ಸರ್ವೋಚ್ಚ ನ್ಯಾಯಾಲಯ 1912ರಿಂದ ಈ ಬಗ್ಗೆ ಅನೇಕ ನಿಯಮಗಳನ್ನು ರಚಿಸಿತು. ಈ ಕಾನೂನುಗಳು 1931ರ ವರೆಗೆ ಜಾರಿಯಲ್ಲಿದ್ದುವು. ಪಾಶ್ಚಾತ್ಯ ಮಾದರಿಯಲ್ಲಿ ಸಿವಿಲ್ ನ್ಯಾಯಸಂಹಿತೆಯನ್ನೂ ತಾತ್ಕಾಲಿಕ ಸಂವಿದಾನವನ್ನೂ ರಚಿಸಲು ಗ್ವೋಮಿನ್ ಟಾಂಗ್ ಸರ್ಕಾರ ಒಂದು ವಿಧಾಯಕ ನ್ಯಾಯಾಲಯವನ್ನು ನೇಮಿಸಿತು. ಅದರೆ ಅಂತರ್ಯುದ್ಧ ಹಾಗೂ ಜಪಾನೀ ಆಕ್ರಮಣಗಳಿಂದಾಗಿ ಈ ಹೊಸ ಕಾನೂನುಗಳನ್ನು ಪರಿಣಾಮವಾಗಿ ಜಾರಿಗೆ ತರಲಾಗಲಿಲ್ಲ.
1949ರಲ್ಲಿ ಚೀನೀ ಜನತಾ ಗಣರಾಜ್ಯ ಸ್ಥಾಪಿತವಾದಮೇಲೆ ಆ ಸರ್ಕಾರ ಪಾಶ್ಚಾತ್ಯ ನ್ಯಾಯಪದ್ಧತಿಯನ್ನು ರದ್ದುಮಾಡಿ ಸಮಗ್ರವಾದ ಸುಧಾರಣೆಗಳನ್ನು ಜಾರಿಗೆ ತಂದಿತು. ಜಮೀನು, ವಿವಾಹ ಮುಂತಾದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮೂಲಭೂತ ಕಾನೂನುಗಳು ಬಂದುವು. ಹೊಸ ಸಂವಿಧಾನ ಜಾರಿಗೆ ಬಂತು. ಪರಮೋಚ್ಚ ಜನತಾ ನ್ಯಾಯಾಲಯವೂ ನಿಯೋಗಗಳೂ ಸ್ಥಳೀಯ ಹಾಗೂ ವಿಶೇಷ ಜನತಾ ನ್ಯಾಯಾಲಯಗಳೂ ವಿವಿಧ ಹಂತಗಳಲ್ಲಿ ನ್ಯಾಯವಿತರಣೆ ಮಾಡುತ್ತವೆ. ರಾಷ್ಟ್ರೀಯ ಜನತಾ ಕಾಂಗ್ರೆಸ್ ಅಗಿಂದಾಗ್ಗೆ ಸೂಕ್ತ ಕಂಡ ಕಾನೂನುಗಳನ್ನೂ ವಿಧಿಗಳನ್ನೂ ಹೊರಡಿಸುತ್ತದೆ