ಚಿ.ಶ್ರೀನಿವಾಸರಾಜು
ಚಿ. ಶ್ರೀನಿವಾಸರಾಜು | |
---|---|
Born | ನವೆಂಬರ್ ೨೮, ೧೯೪೨ ಚಿಕ್ಕಬಳ್ಳಾಪುರ |
Died | ಡಿಸೆಂಬರ್ ೨೮, ೨೦೦೭ |
Occupation(s) | ಪ್ರವಾಚಕರು, ಬರಹಗಾರರು |
Known for | ಪ್ರಸಿದ್ಧ ಕ್ರೈಸ್ತ್ ಕಾಲೇಜು ಕನ್ನಡ ಸಂಘ ಸ್ಥಾಪಿಸಿ ಯುವಕರಿಂದ ಪುಸ್ತಕ ಪ್ರಕಟಣೆಗೆ ನಾಂದಿ ಹಾಡಿದವರು |
ಚಿ.ಶ್ರೀನಿವಾಸರಾಜು (ನವೆಂಬರ್ ೨೮, ೧೯೪೨ - ಡಿಸೆಂಬರ್ ೨೮, ೨೦೦೭) ಕನ್ನಡಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿ, ಕನ್ನಡಕ್ಕಾಗಿ ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರುಗಳಲ್ಲಿ ಜೀವಂತವಾಗಿ ಉಳಿಯುವಂತೆ ಹಗಲಿರುಳು ದುಡಿದ ಮೇಷ್ಟ್ರು ಎಂದು ಪ್ರಖ್ಯಾತರಾದವರು. ಅವರು ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರೂ, ಪ್ರವೃತ್ತಿಯಿಂದ ಸಾಹಿತ್ಯದ ಪರಿಚಾರಕರಾಗಿ ಬದುಕಿದವರು.
ಜೀವನ
[ಬದಲಾಯಿಸಿ]ಚಿ.ಶ್ರೀನಿವಾಸರಾಜು ಅವರು ನವೆಂಬರ್ ೨೮, ೧೯೪೨ರ ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ; ತಂದೆ ವಿ.ಚಿಕ್ಕರಾಜು. ಅವರ ಶಾಲಾಭ್ಯಾಸ ಚಿಕ್ಕಬಳ್ಳಾಪುರದಲ್ಲೇ ನಡೆಯಿತು. ಹೈಸ್ಕೂಲು ಓದುತ್ತಿರುವ ದಿನಗಳಲ್ಲೇ ಕನ್ನಡದ ಗೀಳು ಹತ್ತಿಸಿಕೊಂಡ ಅವರು 'ಶಾಲು ಜೋಡಿಗಳು' ಎಂಬ ನಾಟಕ ರಚಿಸಿದ್ದರು.
ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ ಶ್ರೀನಿವಾಸರಾಜು ಅವರು ನಂತರದಲ್ಲಿ ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿ ಉದ್ಯೋಗ ಮಾಡಿದರು. ಈ ಸಂದರ್ಭದಲ್ಲಿ ಅವರು ‘ಛಸನಾಲ ಬಂಧು’ ಎಂಬ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಕನ್ನಡ ಓದುವ ಹಂಬಲದಿಂದ ಪಡೆದ ಬಿ.ಎ., ಎಂ.ಎ. ಪದವಿ ಪಡೆದುದಲ್ಲದೆ. ಇಂಡಾಲಜಿಯಲ್ಲಿ ಡಿಪ್ಲೊಮ ಪದವಿಯನ್ನೂ ಪಡೆದರು. ಅವರು ಎಂ.ಎ. ತರಗತಿಯಲ್ಲಿದ್ದಾಗ ಜಿ.ಎಸ್. ಶಿವರುದ್ರಪ್ಪ, ಜಿ.ಪಿ.ರಾಜರತ್ನಂ. ಎಂ. ಚಿದಾನಂದ ಮೂರ್ತಿ ಅವರುಗಳು ಇವರ ಗುರುಗಳಾಗಿದ್ದರು.
ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗಿಯಾಗುತ್ತಿದ್ದ ಚಿ.ಶ್ರೀನಿವಾಸರಾಜು ಅವರಿಗೆ ತಮ್ಮ ಗುರು ಜಿ.ಪಿ.ರಾಜರತ್ನಂ ಅವರಂತೆ ತಾವೂ ಕನ್ನಡದ ಪರಿಚಾರಕರಾಗಿ ದುಡಿಯಲು ಪ್ರೇರಣೆ ದೊರಕಿತು. ಕಾಲೇಜು ಹೊರಗೆ ಪಿ.ಪಿ ('ಪ್ರೋಗ್ರೇಸಿವ್ ಪೀಪಲ್ಸ್') ಎಂಬ ಬಳಗ ಕಟ್ಟಿ ಆ ಮೂಲಕ ‘ಅಂಕಣ’, ‘ಶೂದ್ರ’ ಪತ್ರಿಕೆಗಳ ಹುಟ್ಟಿಗೆ ಕಾರಣರಾದರು.
ಕ್ರೈಸ್ತ್ ಕಾಲೇಜು ಕನ್ನಡ ಸಂಘ
[ಬದಲಾಯಿಸಿ]ಎಂ. ಎ. ಪದವಿಯ ಫಲಿತಾಂಶದ ನಿರೀಕ್ಷೆಯಲ್ಲಿರುವಾಗಲೇ ಚಿ. ಶ್ರೀನಿವಾಸರಾಜು ಅವರಿಗೆ ಕ್ರೈಸ್ಟ್ ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆ ದೊರಕಿತು. ಕನ್ನಡದ ವಾತಾವರಣವೇ ಇಲ್ಲದ ಕಾಲೇಜಿನಲ್ಲಿ ಕನ್ನಡದ ಕಂಪನ್ನು ಹರಡಲು ಅವರು ಹತ್ತಾರು ಯೋಜನೆಗಳನ್ನು ಹಾಕಿಕೊಂಡರು. ‘ವಿಮೋಚನ’ ಪಾಕ್ಷಿಕ. ‘ಅಂಕಣ’ ಪತ್ರಿಕೆಗಳನ್ನು ಪ್ರಾರಮ್ಭಿಸಿದ್ದಲ್ಲದೆ ' ಕ್ರೈಸ್ತ್ ಕಾಲೇಜಿನ ಕನ್ನಡ ಸಂಘ'ದ ಹುಟ್ಟಿಗೆ ಕಾರಣರಾದರು.
ಚಿ.ಶ್ರೀನಿವಾಸರಾಜು ಅವರು ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಮೂಲಕ, ದ.ರಾ. ಬೇಂದ್ರೆ ಕಾವ್ಯ ಸ್ಪರ್ಧೆ, ಅ.ನ.ಕೃ. ಲೇಖನ ಸ್ಪರ್ಧೆ ಮುಂತಾದ ಕಾರ್ಯ ಚಟುವಟಿಕೆಗಳ ಮೂಲಕ ಹಾಗೂ ಇತರ ಹಲವಾರು ಸಂಘ ಸಂಸ್ಥೆಗಳ ಮೂಲಕ ಕನ್ನಡ ಸಾಹಿತ್ಯದ ಸೇವೆ ಮಾಡಿದರಲ್ಲದೆ, ಪುಸ್ತಕ ಪ್ರಕಟಣೆಯ ಸಂಸ್ಕೃತಿ ಅರಳಲು ಶ್ರಮಿಸಿದರು. ನೂರಾರು ಯುವ ಬರಹಗಾರರನ್ನು ಬೆಳಕಿಗೆ ತಂದರು. ಕನ್ನಡವನ್ನು ಬೆಳೆಸುವ, ಉಳಿಸುವ ಕೈಂಕರ್ಯವನ್ನು ತಮ್ಮ ಉಸಿರೆಂಬಂತೆ ಶ್ರದ್ಧೆಯಿಂದ ಮಾಡಿದ ಅವರು ಪರಿಚಾರಿಕೆಗೆ ಹೊಸ ಅರ್ಥ ತಂದು ಕೊಟ್ಟರು.
೧೯೭೩ ರಲ್ಲಿ ಸಿ.ಕೆ. ಲಕ್ಷ್ಮಣಗೌಡ ಎಂಬ ವಿದ್ಯಾರ್ಥಿ ನಿಧನರಾದ ಸಂದರ್ಭದಲ್ಲಿ ಅವರ ಸಹೋದರಿ ನೀಡಿದ ೫೦೦ ರೂ ಕೊಡುಗೆಯಿಂದ ಶ್ರೀನಿವಾಸರಾಜು ಅವರು ಪುಸ್ತಕ ಪ್ರಕಟಣಾ ಕಾರ್ಯವನ್ನು ಪ್ರಾರಂಭ ಮಾಡಿದರು. ಹೀಗೆ ಪ್ರಕಟಗೊಂಡ ಮೊದಲ ಕವನ ಸಂಕಲನ ಕ. ವೆಂ. ರಾಜಗೋಪಾಲರ ‘ನದಿಯ ಮೇಲಿನ ಗಾಳಿ’. ಚಿ. ಶ್ರೀನಿವಾಸರಾಜು ಅವರು ೨೦೦೦ ದ ವರ್ಷದಲ್ಲಿ ನಿವೃತ್ತರಾದಾಗ ಬೆಳಕು ಕಂಡದ್ದು 'ಬೇಂದ್ರೆ ಸಾಹಿತ್ಯ'. ಹೀಗೆ ಸುಮಾರು ೨೭ ವರ್ಷಗಳಲ್ಲಿ ಕ್ರೈಸ್ತ್ ಕಾಲೇಜು ಕನ್ನಡ ಸಂಘದ ಮೂಲಕ ಹೊರತಂದ ೧೬೫ ಕೃತಿಗಳಲ್ಲಿ ಬಿ.ಸಿ.ರಾಮಚಂದ್ರ ಶರ್ಮ ಅವರ ‘ಸಪ್ತಪದಿ’ ಮತ್ತು ಸು.ರಂ. ಎಕ್ಕುಂಡಿ ಅವರ ‘ಬಕುಳದ ಹೂಗಳು’ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತು, ಇದಲ್ಲದೆ ಸುಮಾರು ೫೦ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಒಳ್ಳೆಯ ಪುಸ್ತಕ ಪ್ರಕಾಶನಕ್ಕಾಗಿ ಪುಸ್ತಕ ಪ್ರಾಧಿಕಾರದ ಪ್ರಥಮ ವರ್ಷದ ಬಹುಮಾನ ದೊರೆಕಿತು. ಒಂದು ಉತ್ತಮ ಪ್ರಯತ್ನ ಹೇಗೆ ಫಲಕೊಡಬಲ್ಲದು ಎಂಬುದಕ್ಕೆ ಚಿ.ಶ್ರೀನಿವಾಸರಾಜು ಅವರ ಕಾರ್ಯ ಶ್ರೇಷ್ಠ ನಿದರ್ಶನವಾಗಿ ಕಣ್ಮುಂದೆ ನಿಲ್ಲುವಂತದ್ದಾಗಿದೆ. ಅಂದು ಶ್ರೀನಿವಾಸರಾಜು ಅವರು ಗುರುತಿಸಿ ಪ್ರೋತ್ರಾಹಿಸಿದ ಯುವ ಬರಹಗಾರರು ಇಂದು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಕವಿ ಎಚ್. ಎಸ್. ಶಿವಪ್ರಕಾಶ್ ಕೂಡ ಕನ್ನಡ ಸಂಘದ ಮೂಲಕವೇ ಹೊರಬಂದವರು.
ಸಾಹಿತ್ಯ ಸೇವೆ
[ಬದಲಾಯಿಸಿ]ತಮ್ಮ ಅಪಾರ ಚಟುವಟಿಕೆಗಳ ನಡುವೆಯೂ ಸ್ವಂತ ಆಲೋಚನೆ-ಚಿಂತನೆಗಳಿಗೂ ಅಕ್ಷರ ರೂಪ ನೀಡುವುದಕ್ಕೆ ಚಿ. ಶ್ರೀನಿವಾಸರಾಜು ಅವರ ಬಳಿ ಸಮಯವಿತ್ತು. ಹೀಗೆ ಅವರು ಬಿಡುವಾದಾಗ, ಮನಸ್ಸಾದಾಗ, ಆಗಾಗ ಬರೆದಿರುವ ಪ್ರಬುದ್ಧ, ವಿಚಾರಪೂರ್ಣ ಬರಹಗಳು, ಕವಿತೆ, ನಾಟಕ, ಪ್ರಬಂಧ, ವ್ಯಕ್ತಿ ಚಿತ್ರ ಇತ್ಯಾದಿಗಳ ಸಂಕಲನವನ್ನು ಅಭಿನವ ಪ್ರಕಾಶನ ‘ಆಗಾಗ' ಸಂಪುಟದ ರೂಪದಲ್ಲಿ ಹೊರತಂದಿದೆ. ಶ್ರೀನಿವಾಸ ರಾಜು ತಾವು ನಿಧನರಾಗುವುದಕ್ಕೆ ಕೆಲವು ವರ್ಷಗಳ ಮೊದಲೇ ಬರೆದಿಟ್ಟಿದ್ದ ಉಯಿಲಿನ ಆಯ್ದ ಭಾಗವನ್ನೂ ಶ್ರೀಮತಿ ಸರಸ್ವತಿ ರಾಜು ಅವರು ಪ್ರಕಟಿಸಿರುವುದು ವಿಶೇಷ. ಮಾಸ್ತಿ, ಜೆ ಬಿ ಜೋಷಿ, ಜಿ ಪಿ ರಾಜರತ್ನಂ, ನಿರಂಜನ, ಪರ್ವತವಾಣಿ, ಸು ರಂ ಎಕ್ಕುಂಡಿ, ಮಧುರಚೆನ್ನ, ಜಿ ಎಸ್ ಎಸ್, ಮುಗಳಿ ಮೊದಲಾದ ಸಾಹಿತ್ಯ ದಿಗ್ಗಜರ ಜೊತೆ ಶ್ರೀನಿವಾಸ ರಾಜು ಆಪ್ತ ಒಡನಾಟ ಹೊಂದಿದ್ದವರು. ವ್ಯಕ್ತಿ ಸಂಗತಿ ಬರಹಗಳಲ್ಲಿ ಈ ಎಲ್ಲರೊಂದಿಗಿನ ಸಾಹಿತ್ಯ – ಸ್ನೇಹ - ಒಡನಾಟಗಳನ್ನು ಕಣ್ಣಿಗೆ ಕಟ್ಟುವಂತೆ ಶ್ರೀನಿವಾಸರಾಜು ಬರೆದಿದ್ದಾರೆ.
ಜಿ ಪಿ ರಾಜರತ್ನಂ ನಿಧನರಾದಾಗ ಶ್ರೀನಿವಾಸ ರಾಜು: “ಕಾದ ಮರಳಲ್ಲಿ ಕಾಗುಣಿತ ತಿದ್ದುವುದಾಗಿತ್ತು ನಿನ್ನ ಕೆಲಸ, ಇರುಳು ಕನ್ನಡಿಯಲ್ಲಿ ಪ್ರತಿಮೆ ಹುಡುಕುವುದೊಂದೇ ನನ್ನ ಕೆಲಸ ಎಂದು ಕವನ ನಮನ ಸಲ್ಲಿಸಿದ್ದಾರೆ. ಸಾಮಾಜಿಕ ಸಂವೇದನೆಗಳತ್ತ ಸದಾ ಅವರ ಮನಸ್ಸು ತುಡಿಯುತ್ತಿತ್ತು. ಅವರು ಐದು ಮೂಕ ನಾಟಕಗಳು ಓದುಗನ ಮತ್ತು ಪ್ರೇಕ್ಷಕನ ಮನದಲ್ಲಿ ಬದುಕಿನ ಚಿತ್ರಗಳನ್ನು ಮೂಡಿಸುವ ಬಗೆ ಅದ್ಭುತ. ಭೂಪಾಲ್ ದುರಂತದ ಸಂದರ್ಭದಲ್ಲಿ ಅವರು, “ದಿಕ್ಕೆಟ್ಟು ತತ್ತರಿಸಿ, ದಿಕ್ತಟ ಒತ್ತರಿಸಿ ವಿಷವಾಗಿ ಹೋಯಿತು ಜೀವಜಲ ಭೂಪಾಲ ಹೊರಳಾಡಿ, ಭೂಪಾಲ ಕುರುಡಾಗಿ ಭೂಪಾಲವಾಯಿತು ಪ್ರೇತಕುಲ” ಎಂದು ಕವಿತೆ ಬರೆದರು.
ಸಾಹಿತ್ಯ ವಿಮರ್ಶೆ ವಿಭಾಗದಲ್ಲಿರುವ ಚಾಮರಸನ ಪ್ರಭುಲಿಂಗ ಲೀಲೆ ಮತ್ತು ಹರಿಹರನ ಪ್ರಭುದೇವ ರಗಳೆಯ ತೌಲನಿಕ ಅಧ್ಯಯನವನ್ನು ಸಾಹಿತ್ಯದ ವಿದ್ಯಾರ್ಥಿಗಳು ಓದಲೇ ಬೇಕು. ರಾಜರತ್ನಂ ತಮ್ಮ ಕೊನೆಯ ದಿನಗಳಲ್ಲಿ ಅನುಭವಿಸಿದ ಒಂಟಿತನ, ಅಷ್ಟಾದರೂ ತಮಗೆ ಪೂರ್ಣ ವಿಶ್ವಾಸ ಮೂಡುವವರೆಗೆ ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಅವರ ನಿಷ್ಠುರತೆ, ಎಷ್ಟೋ ದಿನ ಅವರ ಮನೆಯವರೆಗೂ ಹೋದರೂ, ಒಂದು ದಿನವೂ ಒಳಗೆ ಬಾ ಎಂದು ಕರೆಯಲಿಲ್ಲವಲ್ಲ ಎಂದು ತಾವು ಚಡಪಡಿಕೆ ಅನುಭವಿಸಿದ್ದನ್ನೂ ಹಾಗೂ, ಕೊನೆಗೂ ಒಂದು ದಿನ ಕರೆದಾಗ ದಿಗ್ವಿಜಯ ಮಾಡಿದಷ್ಟು ಸಂತೋಷ ಅನುಭವಿಸಿದ್ದನ್ನು ಶ್ರೀನಿವಾಸ ರಾಜು ಮನೋಜ್ಞವಾಗಿ ಬರೆದುಕೊಂಡಿದ್ದಾರೆ.
ಚಿ. ಶ್ರೀನಿವಾಸರಾಜು ಅವರ ಸ್ವಾನುಭವದ ಬರಹಗಳಲ್ಲಿ ಕನ್ನಡ ಶಾಲೆಯಲ್ಲಿನ `ಭಾಷಣ ಮೋಕ್ಷ’ ಹಾಗೂ `ಅರವತ್ತು ದಾಟಿದ ಮೇಲೆ' ಓದಲೇ ಬೇಕು. ಅರವತ್ತು ದಾಟಿದ ನಂತರದ ತಲ್ಲಣ, ತಳಮಳಗಳನ್ನು, ಮಕ್ಕಳು-ಮಡದಿಯ ಆಧುನಿಕ ಯೋಚನೆಗಳಿಗೆ ಸ್ಪಂದಿಸಲಾಗದ ಚಡಪಡಿಕೆ, ಮೈಗೆ-ಮನಸ್ಸಿಗೆ ಒಗ್ಗದ ಆಧುನಿಕ ಶೌಚಾಲಯಕ್ಕೆ ಹೊಂದಿಕೊಳ್ಳಲಾಗದ ಪರದಾಟ.. ಇತ್ಯಾದಿ ಪ್ರಸಂಗಗಳ ಸ್ವಾರಸ್ಯವನ್ನು ಓದಿಯೇ ಅರಿಯಬೇಕು.
ಆತ್ಮಕಥೆ ಎಂಬ ಕವಿತೆಯನ್ನು ರಾಜು ಹೀಗೆ ಪ್ರಾರಂಭಿಸುತ್ತಾರೆ: “ಏನು ಬರೆಯಲಿ ಏಕೆ ಬರೆಯಲಿ ನನ್ನ ಆತ್ಮಕಥೆ ನೀನು ಬಿಟ್ಟ ಗಾಳಿಯನ್ನೇ ನಾನು ಎಳೆಯುತ್ತಿರುವಾಗ, ನೀನು ಬಿತ್ತಿದ ಕಾಳನ್ನೇ ನಾನು ತಿನ್ನುತ್ತಿರುವಾಗ, ನೀನು ನೆಯ್ದ ಬಟ್ಟೆಯನ್ನೇ ನಾನು ಧರಿಸುತ್ತಿರುವಾಗ, ನೀನು ಮೆಟ್ಟಿದ ಮಣ್ಣನ್ನೇ ನಾನು ತುಳಿಯುತ್ತಿರುವಾಗ. ಒಟ್ಟಿನಲ್ಲಿ 'ಆಗಾಗ' ಆಗಾಗ ಓದಿಗೆ ಮಾತ್ರವಲ್ಲದೆ, ಯಾವಾಗಲೂ ಓದಲು ಯೋಗ್ಯವಾದ ಸಂಗ್ರಾಹ್ಯ ಸಂಪುಟ.
ಮೇಷ್ಟರ ಕೆಲವೊಂದು ಕೃತಿಗಳನ್ನು ಬಿಡಿ ಬಿಡಿಯಾಗಿ ಹೆಸರಿಸುವುದಾದರೆ, ‘ಛಸನಾಲ ಬಂಧು’ ಎಂಬ ಕವನ ಸಂಕಲನ, 'ಐದು ಮೂಕ ನಾಟಕಗಳು', ‘ಹಳಿಯ ಮೇಲಿನ ಸದ್ದು’ ನಾಟಕ, ‘ನಾಳೆ ಯಾರಿಗೂ ಇಲ್ಲ ಮತ್ತು ಇತರ ನಾಟಕಗಳು’; ‘ಬಾವಿ ಕಟ್ಟೆಯ ಬಳಿ’ ಎಂಬ ಅನುವಾದ, ‘ನಮ್ಮ ಕೈಲಾಸಂ’ ಎಂಬ ಸಂಪಾದನೆಗಳು ನೆನಪಿಗೆ ಬರುತ್ತವೆ.
ಕೃತಿಗಳು
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]- ಛಸನಾಲ ಬಂಧು
ನಾಟಕ
[ಬದಲಾಯಿಸಿ]- ಐದು ಮೂಕ ನಾಟಕಗಳು
- ಹಳಿಯ ಮೇಲಿನ ಸದ್ದು
- ನಾಳೆ ಯಾರಿಗೂ ಇಲ್ಲ ಮತ್ತು ಇತರ ನಾಟಕಗಳು
ಅನುವಾದ
[ಬದಲಾಯಿಸಿ]- ಬಾವಿ ಕಟ್ಟೆಯ ಬಳಿ
ಇತರ
[ಬದಲಾಯಿಸಿ]- ಜಿ.ಪಿ.ರಾಜರತ್ನಂ ಮತ್ತು ಕರ್ನಾಟಕ ಸಂಘ
ಸಂಪಾದನೆ
[ಬದಲಾಯಿಸಿ]- ನಮ್ಮ ಕೈಲಾಸಂ
ಪುರಸ್ಕಾರ
[ಬದಲಾಯಿಸಿ]ಚಿ. ಶ್ರೀನಿವಾಸರಾಜು ಮೇಷ್ಟರಿಗೆ ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶ್ರೇಷ್ಠ ಪ್ರಕಟಣಾ ಪ್ರಶಸ್ತಿ, 1984ರ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.
ವಿದಾಯ
[ಬದಲಾಯಿಸಿ]ಕನ್ನಡದ ಪ್ರೀತಿಯ ಯುವ ಕಣ್ಮಣಿಗಳ ಅಧ್ಯಾಪಕರಾಗಿದ್ದ ಶ್ರೀನಿವಾಸ ರಾಜು ಮೇಷ್ಟ್ರು ಕುವೆಂಪು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಪ್ಪಳ್ಳಿಯ ಮಾರ್ಗದಲ್ಲಿ ತೀರ್ಥಹಳ್ಳಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಡಿಸೆಂಬರ್ ೨೮, ೨೦೦೭ರ ವರ್ಷದಲ್ಲಿ ನಿಧನರಾದರು. ಕನ್ನಡದ ಪ್ರೀತಿ ತುಂಬಿರುವ ಎಡೆಗಳಲ್ಲೆಲ್ಲಾ ಅವರ ಚೇತನ ಚಿರಶಾಶ್ವತ. ಆ ಮಹಾನ್ ಚೇತನಕ್ಕೆ ನಮ್ಮ ಭಕ್ತಿಯ ನಮನ.
ಆಕರಗಳು
[ಬದಲಾಯಿಸಿ]- ಕಣಜ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.
- ಹದಿನಾರಾಣೆ ಕನ್ನಡಿಗ ಚಿ. ಶ್ರೀನಿವಾಸರಾಜು ಕಣ್ಮರೆ
- ಚಿ.ಶ್ರೀನಿವಾಸರಾಜು ಹಲವರಿಗೆ ಪ್ರೇರಣೆ: ಪ್ರಜಾವಾಣಿ Archived 2023-04-07 ವೇಬ್ಯಾಕ್ ಮೆಷಿನ್ ನಲ್ಲಿ.
- ಕಿ.ರಂ. ಕಣ್ಣಲ್ಲಿ ಚಿ.ಶ್ರೀನಿವಾಸರಾಜು
- Keeping faith with the mother Tongue: The Hindu Archived 2008-11-04 ವೇಬ್ಯಾಕ್ ಮೆಷಿನ್ ನಲ್ಲಿ.