ಚಿಗಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಗಟ ಸೈಫೋನಾಪ್ಟರ ಶ್ರೇಣಿಗೆ ಸೇರಿದ ಕೀಟಗಳ ಗುಂಪಿಗೆ ಬಳಸುವ ಸಾಮಾನ್ಯ ಹೆಸರು (ಫ್ಲೀ). ಇವು ಮಾನವನ ಹಲವು ಸಾಂಕ್ರಾಮಿಕ ರೋಗಗಳ ಪ್ರಸಾರಕ್ಕೆ ಮಧ್ಯವಾಹಕಗಳಾಗಿರುವುದರಿಂದಲೂ ಪ್ರಾಣಿಗಳ ಮತ್ತು ಮಾನವನ ದೇಹಕ್ಕೆ ಉಪಟಳವೆನಿಸುವ ಪಿಡುಗುಗಳಾಗಿರುವುದರಿಂದಲೂ ಇವಕ್ಕೆ ಆರ್ಥಿಕ ಪ್ರಾಮುಖ್ಯ ಉಂಟು. ಪ್ರೌಢಜೀವಿಗಳು ಪಕ್ಷಿಗಳ ಮತ್ತು ಸ್ತನಿಗಳ ರಕ್ತವನ್ನು ಹೀರಿ ಜೀವಿಸುತ್ತವೆ. ಇವುಗಳ ಡಿಂಭಗಳು ಹಕ್ಕಿಗಳ ಗೂಡುಗಳಲ್ಲೊ ಸ್ತನಿಗಳ ವಾಸಸ್ಥಳಗಳಲ್ಲೊ ಇರುವುವಾದರೂ ಅವುಗಳ ಮೇಲೆ ಅವಲಂಬಿಗಳಲ್ಲ. ಚಿಗಟ ಬಹು ಸಣ್ಣ ಕೀಟ; ಅತಿದೊಡ್ಡದೆಂದರೆ 1/4" ಉದ್ದವಿದೆ ಅಷ್ಟೆ. ಇದರ ದೇಹ ಬಲು ಹಾಳತವಾಗಿದೆ. ಕೆನ್ನೆಯ ಎರಡು ಕಡೆಯಲ್ಲೂ ಒಂದು ಇಲ್ಲವೆ ಹೆಚ್ಚು ಮುಳ್ಳುಹೆಣಿಗಗಳಿವೆ. ಚಿಗಟದ ಕಾಲುಗಳು ಚೆನ್ನಾಗಿ, ದೃಢವಾಗಿ, ರೂಪುಗೊಂಡಿವೆ. ಇವು ಬಲಯುತವಾಗಿರುವುದರಿಂದ ಚಿಗಟ ಒಂದು ಸಲಕ್ಕೆ 13" ನಷ್ಟು ದೂರ ಜಿಗಿಯಬಲ್ಲದು. ರೆಕ್ಕೆಗಳಿಲ್ಲ. ಬಾಯಿಯ ಉಪಾಂಗಗಳು ಆಶ್ರಯಜೀವಿಯ ಚರ್ಮವನ್ನು ಚುಚ್ಚಿ ರಕ್ತಹೀರಲು ಅನುಕೂಲಿಸುವಂತೆ ಮಾರ್ಪಟ್ಟಿವೆ. ಮೇಲಿನ ಎರಡು ಜೋಡುದವಡೆಗಳು ಲೇಬ್ರಮ್ ಎಂಬ ನಿಡಿದಾದ ತುಟಿಯೊಡನೆ ಸೇರಿಕೊಂಡು ಚುಚ್ಚುವ ಕೊಕ್ಕಿನಂತೆ ರೂಪುಗೊಂಡಿವೆ. ಜೋಡುದವಡೆಗಳು ಉದ್ದವಾಗಿದ್ದು ಹಲ್ಲುಗಳನ್ನೊಳಗೊಂಡು ಗರಗಸದ ಅಲಗುಗಳಂತಿವೆ; ತಲೆಯಲ್ಲಿ ಇನ್ನೂ ಹಲವು ಉಪಾಂಗಗಳಿವೆ. ಸರಳ ಕಣ್ಣುಗಳು, ದಪ್ಪವಾದ ಹಾಗೂ ಮೋಟಾದ ಸ್ಪರ್ಶಾಂಗಗಳು ಇವೆ. ಕೆಲವು ಜಾತಿಯ ಚಿಗಟಗಳಲ್ಲಿ ಕಣ್ಣು ಕ್ಷೀಣಿಸಿರಬಹುದು ಅಥವಾ ಇಲ್ಲದೆಯೂ ಇರಬಹುದು.

ಗರ್ಭಧರಿಸಿದ ಒಂದೊಂದು ಹೆಣ್ಣುಚಿಗಟ ಆಶ್ರಯದಾತ ಜೀವಿಯ ಗರಿಗಳ ಅಥವಾ ರೋಮಗಳ ನಡುವೆ ಕೆನೆಬಣ್ಣದ ನೂರಾರು ಮೊಟ್ಟೆಗಳನ್ನು ಇಡುತ್ತದೆ. ಅವು ಆಶ್ರಯದಾತ ಜೀವಿಯ ಗೂಡುಗಳಲ್ಲಿ ಅಥವಾ ವಾಸಿಸುವ ಸ್ಥಳಗಳಲ್ಲಿ ಉದುರಿ ಬೀಳುತ್ತವೆ. ಮೊಟ್ಟೆಯೊಡೆದಾಗ ಹೊರಬರುವ ಅಪಕ್ವಾವಸ್ಥೆಯ ಮರಿಗಳು ಆಶ್ರಯದಾತ ಜೀವಿಯ ದೇಹಕ್ಕೆ ಸುಲಭವಾಗಿ ಸೇರಿಕೊಳ್ಳಲು ಇದರಿಂದ ಅನುಕೂಲ. ಮೊಟ್ಟೆಗಳು ಒಡೆದು ಹಳದಿ ಬಣ್ಣದ ಕಂಬಳಿ ಹುಳುವಿನಂಥ ಮರಿಗಳು ಹೊರಬಂದು ಅಲ್ಲಿರುವ ಸಾವಯುವ ಕಸದಲ್ಲಿ ಸೇರುತ್ತವೆ. ಕೆಲವು ದಿನಗಳ ಅನಂತರ ಮರಿಗಳು ತಮ್ಮ ಸುತ್ತ ರೇಷ್ಮೆಗೂಡನ್ನು ರಚಿಸಿಕೊಂಡು ಕೋಶಾವಸ್ಥೆಯನ್ನು ಸೇರಿ ಮುಂದೆ ರೂಪಪರಿವರ್ತನೆ ಹೊಂದಿ ಪ್ರೌಢಚಿಗಟಗಳಾಗುತ್ತವೆ. ಈ ಜೀವನಚಕ್ರ ಪೂರ್ಣಗೊಳ್ಳಲು ಬೇಕಾಗುವ ಅವಧಿ ಬೇರೆಬೇರೆ ಜಾತಿಯ ಚಿಗಟಗಳಲ್ಲಿ ಬೇರೆಬೇರೆಯಾಗಿರುತ್ತದೆ. ಹದಿನೇಳು ದಿನಗಳಿಂದ ಹಿಡಿದು ಒಂದು ವರ್ಷದವರೆಗೆ ಇದು ವ್ಯತ್ಯಾಸವಾಗಬಹುದು.

ಚಿಗಟಗಳ ಪ್ರಭೇದಗಳ ಸಂಖ್ಯೆ ಅಪಾರ. ಉತ್ತರ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಪ್ರದೇಶಗಳಲ್ಲೇ 209 ಪ್ರಭೇದಗಳೂ 63 ಉಪಪ್ರಭೇದಗಳೂ ಬೆಳಕಿಗೆ ಬಂದಿವೆ. ಪ್ರಪಂಚದ ಇನ್ನುಳಿದ ಭಾಗಗಳಲ್ಲಿರಬಹುದಾದ ಪ್ರಭೇದಗಳ ಸಂಖ್ಯೆಯನ್ನು ನಿಶ್ಚಯಿಸುವುದು ಕಷ್ಟ. ಸುಮಾರು 500 ಪ್ರಭೇದಗಳಿರಬಹುದೆಂದು ಕೆಲವರ ಅಂದಾಜು. ಇವುಗಳಲ್ಲಿ ಕೆಲವು ಮಾತ್ರ ಮಾನವನ ಪಿಡುಗಾಗಿ ಅನವ ದೇಹವನ್ನು ಆಶ್ರಯಿಸುತ್ತವೆ. ಮಿಕ್ಕವು ಪಕ್ಷಿಗಳನ್ನೂ ವನ್ಯಸ್ತನಿಗಳನ್ನೂ ಆಶ್ರಯಿಸುತ್ತವೆ. ಅದರಲ್ಲೂ ಕೆಲವು ಜಾತಿಯ ಪಕ್ಷಿ ಅಥವಾ ಪ್ರಾಣಿಗಳಲ್ಲಿರುವುದು ಅವಕ್ಕೆ ತುಂಬ ಇಷ್ಟ. ಆದರೆ ಕೆಲವು ಪ್ರಭೇದಗಳು ತಮ್ಮ ಮೆಚ್ಚಿನ ಆಶ್ರಯದಾತ ಜೀವಿ ದೊರೆಯದಾಗ ಮಾನವನನ್ನು ಆಶ್ರಯಿಸುವುವು. ಅಂಥ ಚಿಗಟಗಳು ಮಾನವರಲ್ಲಿ ಕೆಲವು ಉಗ್ರ ಸಾಂಕ್ರಾಮಿಕ ರೋಗಗಳನ್ನು ಹರಡುವುದುಂಟು.

ಇಲಿಗಳಲ್ಲಿ ಕಾಣಿಸಿಕೊಳ್ಳುವ ಗೆಡ್ಡೆ ಪ್ಲೇಗು ಮತ್ತು ಮ್ಯೂರೈನ್ ಟೈಫಸ್ ಮುಂತಾದ ಅಂಟು ರೋಗಗಳನ್ನು ಚಿಗಟಗಳು ಮಾನವರಿಗೂ ಹರಡುತ್ತವೆ. ಕ್ಸೀನೋಫಿಲ ಕಿಯೋಪಿನ್ ಎಂಬ ಪ್ರಭೇದದ ಚಿಗಟಗಳು ಪೌರಸ್ತ್ಯದೇಶಗಳ ಇಲಿಗಳಲ್ಲೂ ನೋಸೋಫಿಲಸ್ ಫ್ಯಾಸಿಯೇಟಸ್ ಎಂಬ ಪ್ರಭೇದದ ಚಿಗಟಗಳು ಯೂರೋಪಿನ ಇಲಿಗಳಲ್ಲೂ ಪರಾವಲಂಬಿಗಳಾಗಿ ಜೀವಿಸುತ್ತವೆ. ಮೊದಲ ಪ್ರಭೇದ ಪ್ರಪಂಚದ ಎಲ್ಲೆಡೆಗಳಲ್ಲೂ ಜೀವಿಸುವುದಾದರೂ ಉಷ್ಣಪ್ರದೇಶಗಳಲ್ಲಿ ಹೆಚ್ಚು. ಇದು ಮಾನವನನ್ನು ನಿರಾಯಾಸವಾಗಿ ನಿರರ್ಗಳವಾಗಿ ಕಡಿಯುತ್ತಿರುವುದರಿಂದ ರೋಗವನ್ನು ವ್ಯಾಪಕವಾಗಿ ಹರಡುತ್ತದೆ. ಇಲಿಗಳಂತೆ ಅಳಿಲು, ಮೊಲ ಮುಂತಾದ ದಂಶಕಗಳಿಗೂ ಪ್ಲೇಗು ಅಂಟುತ್ತದೆ. ಅವುಗಳಲ್ಲಿರುವ ರೋಗವನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುವುದರ ಮೂಲಕ ರೋಗಾಣುಗಳು ತಮ್ಮ ಸಂತತಿಯನ್ನು ಮುಂದುವರಿಸಲು ಚಿಗಟಗಳು ಸಹಾಯಮಾಡುತ್ತವೆ. ಆದ್ದರಿಂದ ಇವುಗಳ ಉಪಟಳವನ್ನು ತಡೆಯಲು ಮೇಲಿನ ಆಶ್ರಯದಾತ ಪ್ರಾಣಿಗಳನ್ನು ನಿಯಂತ್ರಿಸಬೇಕಾಗುತ್ತದೆ. ಅವಕ್ಕೆ ವಿಷಹಾಕುವುದು, ಅವು ವಾಸಿಸುವ ಬಿಲಗಳಿಗೆ ವಿಷಾನಿಲವನ್ನು ತುಂಬುವುದು, ಅವು ಬಿಲಮಾಡಿಕೊಂಡು ಜೀವಿಸಲು ವಾಸದ ಮನೆಗಳ ಬಳಿ ಅವಕಾಶವಿರದಂತೆ ಕಾಂಕ್ರೀಟ್ ನೆಲ ಏರ್ಪಡಿಸುವುದು ಮುಂತಾದ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಚಿಗಟಗಳು ಉಗ್ರರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುವುದರ ಜೊತೆಗೆ ಮಾನವನ ದಿನ ನಿತ್ಯದ ಪಿಡುಗಾಗಿಯೂ ತೊಂದರೆ ಕೊಡುತ್ತವೆ. ಟೀನೊಸಿಫ್ಯಾಲಿಡೀಸ್ ಕ್ಯಾನಿಸ್ ಎಂಬ ಹೆಸರಿನ ನಾಯಿ ಚಿಗಟ, ಟೀನೊಸಿಫ್ಯಾಲಿಡೀಸ್ ಫೀಲಿಸ್ ಎಂಬ ಬೆಕ್ಕಿನ ಚಿಗಟ, ಪ್ಯೂಲೆಕ್ಸ್ ಇರಿಟನ್ಸ್ ಎಂಬ ಮಾನವನ ಚಿಗಟ-ಈ ಮೂರು ಪ್ರಭೇದಗಳು ಮಾನವನಿಗೆ ಕೆಲವೆಡೆ ತೀವ್ರರೀತಿಯ ಪಿಡುಗಾಗಿ ಪರಿಣಮಿಸುತ್ತವೆ. ಚಿಗಟ ಅಂಟಿದ ಪ್ರಾಣಿಗಳನ್ನು ಸಾಯಿಸುವುದರಿಂದಲೂ ಮೊಟ್ಟೆಯೊಡೆದು ಬರುವ ಮರಿ ಮತ್ತು ಕೋಶಾವಸ್ಥೆಗಳನ್ನು ನಾಶಮಾಡುವುದರಿಂದಲೂ ಚಿಗಟಗಳ ಹಾವಳಿಯನ್ನು ಕಡಿಮೆ ಮಾಡಬಹುದು. ಮನುಷ್ಯನ ವಾಸದ ಮನೆಯ ಬಳಿ ಜೀವಿಸುವ ಅಥವಾ ಓಡಾಡುವ ಪ್ರಾಣಿಗಳ ದೇಹದಲ್ಲಿ ಅವು ಕಂಡುಬಂದರೆ ಅಂಥ ಪ್ರಾಣಿಗಳ ಮೈಮೇಲೆ ವಾರಕ್ಕೊಮ್ಮೆ ಕೀಟನಾಶಕ ಪುಡಿಯನ್ನು ಹಾಕಿ ಉಜ್ಜುವುದರಿಂದ ಚಿಗಟಗಳು ನಾಶವಾಗುತ್ತವೆ. ಮನೆಯ ಬಳಿ ಕಸಕಡ್ಡಿಗಳ ದೂಳು ತುಂಬಿರುವ ಕೊಟ್ಟಿಗೆ ಮತ್ತು ಸಂದಿಗೊಂದಿಗಳಲ್ಲಿ ಚಿಗಟಗಳಿದ್ದರೆ ಕ್ರಿಯೊಸೋಟ್ ಎಣ್ಣೆ ಚಿಮುಕಿಸಬಹುದು. ಅದನ್ನು ಉಪಯೋಗಿಸುವುದು ಹಿತವೆನಿಸದಿದ್ದರೆ ನ್ಯಾಫ್ತಲೀನ್ ಪುಡಿಯನ್ನು ನೆಲದ ಮೇಲೆ ಹರಡಬಹುದು.

ಎಕಿಡ್ನಾಫೆಗಾ ಗ್ಯಾಲಿನೇಸೀ ಪ್ರಭೇದದ ಚಿಗಟ ನಮ್ಮ ಕಾಲ್ನಡೆಗಳಿಗೆ ತೀರ ಮಾರಕವೆನಿಸುವುದು. ಇದು ಆಶ್ರಯದಾತ ಪ್ರಾಣಿಯ ಚರ್ಮಕ್ಕೆ ಬಲವಾಗಿ ಕಚ್ಚಿಕೊಂಡಿರುತ್ತದೆ. ಈ ಕಾರಣದಿಂದ ಇದನ್ನು "ಸ್ಟಿಕ್ ಟೈಟ್" ಚಿಗಟ ಎಂದೂ ಕರೆಯುವುದುಂಟು. ಇದು ಕೋಳಿಗಳ ದೇಹಕ್ಕೆ ಅಂಟಿ ಅವುಗಳ ಸಾಮೂಹಿಕ ಹನನಕ್ಕೆ ಕಾರಣವೆನಿಸುತ್ತದೆ. ನಾಯಿ, ಬೆಕ್ಕು ಮತ್ತು ಮಾನವನಲ್ಲೂ ಇದು ಕಾಣುವುದುಂಟು. ಡೆರಿಸ್ ಪುಡಿಯನ್ನೋ ಕಾರ್ಬೊಲೇಟೆಡ್ ವ್ಯಾಸಲೀನನ್ನೋ ಹಚ್ಚಿಕೊಳ್ಳುವುದರಿಂದ ಇವನ್ನು ನಿವಾರಿಸಬಹುದು. ಚಿಗಟಗಳ ಕಡಿತ ಮಾನವನಿಗೆ ಅಂಥ ತೀವ್ರವಾದ ನೋವನ್ನುಂಟುಮಾಡುವುದಿಲ್ಲ. ಆದರೆ ಉರಿಯಾಗಿತಿನಸುಂಟಾಗುತ್ತದೆ. ಮೆಂಥಲೇಟೆಡ್ ಅಥವಾ ಕಾರ್ಬೊಲೇಟೆಡ್ ವ್ಯಾಸಲೀನನ್ನು ಹಚ್ಚುವುದರಿಂದ ಉರಿಯನ್ನು ನಿವಾರಿಸಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚಿಗಟ&oldid=906863" ಇಂದ ಪಡೆಯಲ್ಪಟ್ಟಿದೆ