ಚಿಕಿತ್ಸಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕಿತ್ಸಾಲಯ

ಚಿಕಿತ್ಸಾಲಯ ಎಂದರೆ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಸ್ಥಳ (ಕ್ಲಿನಿಕ್). ರೋಗಿಗಳು ದಿನವೂ ಮನೆಯಿಂದ ಬಂದು ಚಿಕಿತ್ಸೆ ಮತ್ತು ಔಷಧಿ ಪಡೆದು ಹಿಂತಿರುಗಬಲ್ಲ ಚಿಕಿತ್ಸಾಕೇಂದ್ರಗಳಿಗೆ ಸಾಮಾನ್ಯವಾಗಿ ಇರುವ ಹೆಸರಿದು. ಹಾಗಲ್ಲದೇ, ರೋಗಿಗಳು ಅಲ್ಲೇ ಆಸರೆ ಪಡೆದು ಸಾಕಷ್ಟು ದಿವಸ ಔಷಧೋಪಚಾರ ಹಾಗೂ ವೈದ್ಯಕೀಯ ಸೇವೆ ಪಡೆಯಬಲ್ಲ ಕೇಂದ್ರಕ್ಕೆ ಆಸ್ಪತ್ರೆ ಎಂಬ ಹೆಸರುಂಟು. ಕ್ಲಿನಿಕ್ ಎಂಬುದು ರೋಗಿಯ ಹಾಸಿಗೆ ಅಥವಾ ರೋಗಿಯ ನೆರೆ ಎಂಬ ಅರ್ಥಗಳನ್ನು ಕೊಡುವ ಮೂಲಗಳಿಂದ ಉತ್ಪತ್ತಿಯಾದ ಶಬ್ಧ. ಆದ್ದರಿಂದ ಕ್ಲಿನಿಕ್ ಎಂದರೆ ಹಾಸಿಗೆ ಹತ್ತಿ ಮಲಗಿದ ರೋಗಿಯನ್ನು ಚಿಕಿತ್ಸಿಸುವ ಸ್ಥಳವೇ ಸರಿ. ಅಂದರೆ ಇದು ಸರ್ಕಾರದ ಅಥವಾ ಸಾರ್ವಜನಿಕ ಸಂಸ್ಥೆಯೂ ಅಲ್ಲ. ಇಲ್ಲಿ ಬಡಜನಗಳಿಗೆ ಧರ್ಮಾರ್ಥವಾಗಿ ಚಿಕಿತ್ಸೆ ಮಾಡುವ ಸಂಪ್ರದಾಯವೂ ಇಲ್ಲ. ವಿಧಿಸಿದ ಶುಲ್ಕವನ್ನು ಕೊಡಬಲ್ಲ ರೋಗಿಗಳನ್ನು ಸೇರಿಸಿಕೊಂಡು ಸೂಕ್ತಚಿಕಿತ್ಸೆಯನ್ನು ನೀಡುವ ಖಾಸಗಿ ಸಂಸ್ಥೆ ಮಾತ್ರ. ಚಿಕಿತ್ಸಾಲಯದಲ್ಲಿ ಅನೇಕ ವೈದ್ಯರು ತಕ್ಕ ಸಿಬ್ಬಂದಿ ಇದ್ದು ಇಲ್ಲಿ ರೋಗಿಗಳ ವಿಚಾರವಾದ ವಿಶೇಷ ವ್ಯಾಸಂಗಕ್ಕೂ ವಿಶೇಷ ಚಿಕಿತ್ಸಾಕ್ರಮಗಳಿಗೂ ಗಮನವೀಯಲಾಗುತ್ತದೆ. ಕೆಲವು ಚಿಕಿತ್ಸಾಲಯಗಳಲ್ಲಿ ಮಾತ್ರ ಓಡಾಡಿಕೊಂಡಿರುವ ರೋಗಿಗಳನ್ನೇ ಚಿಕಿತ್ಸಿಸಲಾಗುತ್ತದೆ. ಇಂಥ ಚಿಕಿತ್ಸಾಲಯಗಳನ್ನು ಆಂಬ್ಯುಲೆಂಟ್ ಕ್ಲಿನಿಕ್ ಎಂದು ಕರೆಯುತ್ತಾರೆ. ಆಧುನಿಕ ಕಾಲದಲ್ಲಿ ಕ್ಲಿನಿಕ್ ಎಂಬ ಶಬ್ಧದ ಅರ್ಥವ್ಯಾಪ್ತಿ ಇನ್ನೂ ಅಧಿಕವಾಗಿದೆ ವಿಶೇಷರೋಗಗಳಿಗೆ ಗಮನವೀಯುವ ಚಿಕಿತ್ಸಾಸ್ಥಳಗಳಿಗೂ ಕ್ಲಿನಿಕುಗಳೆಂದು (ಉದಾಹರಣೆಗೆ ಡೈಯಾಬಿಟಿಕ್ ಕ್ಲಿನಿಕ್, ಕಾರ್ಡಿಯ ಕ್ಲಿನಿಕ್) ಹೆಸರುಂಟು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: