ವಿಷಯಕ್ಕೆ ಹೋಗು

ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು

[ಬದಲಾಯಿಸಿ]

ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು ( 1900-1990) ಭಾರತದ ಪ್ರಸಿದ್ಧ ಭೂವಿಜ್ಞಾನಿಗಳಲ್ಲೊಬ್ಬರು. ಜನನ ಮಾರ್ಚ್ 10,1900 ದಿಂಡಿಗಲ್ ನಲ್ಲಿ. ತಂದೆ ಶಾಂತಪ್ಪ ವೆಲ್ಲಯ್ಯ ಅವರು ದಿಂಡಿಗಲ್ಲಿನ ವೆಸ್ಲಿ ಮಿಷನ್ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಪಿಚ್ಚಮುತ್ತು ಅವರ ಪ್ರಾರಂಭದ ಅಧ್ಯಯನ ಇದೇ ಶಾಲೆಯಲ್ಲಾಯಿತು. ಅದು ಗುಣಮಟ್ಟಕ್ಕೆ ಹೆಸರಾಗಿತ್ತು. ತಂದೆ ಶಾಂತಪ್ಪ ವೆಲ್ಲಯ್ಯ ಇಂಗ್ಲಿಷ್ ಸಾಹಿತ್ಯದಲ್ಲಿ ಅಸಾಧಾರಣ ಪರಿಣತಿ ಹೊಂದಿದ್ದವರು ಹಾಗೆಯೇ ಶಿಸ್ತಿಗೆ ಹೆಸರಾಗಿದ್ದವರು. ಮನೆಯಲ್ಲಿ ಉತ್ತಮ ಪುಸ್ತಕ ಭಂಡಾರವಿತ್ತು. ಇಂಗ್ಲಿಷ್ ಸಾಹಿತ್ಯದ ಅಭಿಜಾತ ಗ್ರಂಥಗಳು ಆ ಸಂಗ್ರಹದಲ್ಲಿದ್ದವು. ಬಾಲಕ ಸಾಲಮನ್ ಪಿಚ್ಚಮುತ್ತು ತಮ್ಮ ಓದಿನಲ್ಲಿ ಆಸಕ್ತಿ ತಳೆಯಲು ಇದು ವಿಶೇಷವಾಗಿ ನೆರವಾಯಿತು. ತರಗತಿಯಲ್ಲಿ ಎಲ್ಲ ವಿಷಯಗಳಲ್ಲೂ ಈ ಹುಡುಗನೇ ಮುಂದು.

ಭೂವಿಜ್ಞಾನದ ಸೆಳೆತ

[ಬದಲಾಯಿಸಿ]

1919ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಿಚ್ಚಮುತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿದರು. ಪ್ರೊ. ಸಂಪತ್ ಐಯ್ಯಂಗಾರ್ ಅವರ ಕ್ಷೇತ್ರ ಅನುಭವ, ಅವರು ನೀಡಿತ್ತಿದ್ದ ತರಪೇತಿ ಭೂವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಹುಟ್ಟಿಸಿತು. 1921ರಲ್ಲಿ ಪದವಿ ಮುಗಿಯುತ್ತಲೇ ತಿರುವಾಂಕೂರಿನಲ್ಲಿ ಸಹಾಯಕ ಭೂವಿಜ್ಞಾನಿ ಹುದ್ದೆಯನ್ನು ಅಂಗೀಕರಿಸಿದರು.1921ರಿಂದ 1927ರವರೆಗೆ ಅಲ್ಲಿ ಕೈಗೊಂಡ ಭೂವಿಜ್ಞಾನದ ಕ್ಷೇತ್ರಾಧ್ಯಯನ ಇವರ ಅನುಭವಕ್ಕೆ ಕಸುವು ನೀಡಿತು. ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಭೂವಿಜ್ಞಾನದ ಸಹಾಯಕ ಪ್ರೊಫೆಸರ್ ಆಗಿ ನೇಮಕವಾದರು. ಆ ಹೊತ್ತಿಗೆ ಪಿ. ಸಂಪತ್ ಐಯ್ಯಂಗಾರ್ ಅವರು ಸೆಂಟ್ರಲ್ ಕಾಲೇಜಿನ ಭೂವಿಜ್ಞಾನ ಇಲಾಖೆಯ ನಿರ್ವಹಣೆಯ ಜೊತೆಗೆ ಮೈಸೂರು ಭೂವಿಜ್ಞಾನ ಇಲಾಖೆಯ (ಇಂದಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ) ನಿರ್ದೇಶಕರಾಗಿ ಹುದ್ದೆ ವಹಿಸಿಕೊಂಡಿದ್ದರು. ಕಾಲೇಜು ಮತ್ತು ಗಣಿ ಇಲಾಖೆಯ ನಡುವೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಇದು ಹೊಪಶಕೆಯನ್ನೇ ಆರಂಭಿಸಿತು. ಗಣಿ ಇಲಾಖೆಯ ಬಿ. ರಾಮರಾವ್ ಮತ್ತು ಎ.ಎಂ. ಸೇನ್ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸ ನೀಡುತ್ತಿದ್ದರು. ಹಾಗೆಯೇ ಪಿಚ್ಚಮುತ್ತು ಅವರು ಗಣಿ ಇಲಾಖೆಯಲ್ಲಿ ಮೈಸೂರು ಭೂವಿಜ್ಞಾನ ಅಧ್ಯಯನ ಮಾಡುವ ಕ್ಷೇತ್ರ ಕಾರ್ಯದಲ್ಲಿ ತೊಡಗಿಕೊಂಡರು. ಅಂದಿನ ಮೈಸೂರು ಭೂವಿಜ್ಞಾನದ ತಿಳಿವಿಗೆ ಇದು ಅವರಲ್ಲಿ ಭದ್ರ ಬುನಾದಿ ಹಾಕಿತು.

ವಿದೇಶದಲ್ಲಿ

[ಬದಲಾಯಿಸಿ]

ಪಿಚ್ಚಮುತ್ತು ತಮ್ಮ ಜ್ಞಾನವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಯಾರೋಪಿನ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಹೋಗಬಯಸಿದರು. ಹೈಡಲ್ ಬರ್ಗ್ ಮತ್ತು ಜಿನೀವ ಅವರ ಆದ್ಯತೆಯಾದರೂ ಅಧ್ಯಯನದ ರಜೆ ಸಿಕ್ಕದ ಕಾರಣ ಅದು ಕೈಗೂಡಲಿಲ್ಲ. ಆದರೆ ಗ್ಲಾಸ್ಗೋ ವಿಶ್ವವಿದ್ಯಾಲಯಕ್ಕೆ ಹೋಗುವಲ್ಲಿ ಸಫಲರಾದರು. ಅಲ್ಲಿ ಪ್ರೊಫೆಸರ್ಈ.ಬಿ.ಬೈಲಿ ಮತ್ತು ಜಿ.ಡಬ್ಲ್ಯೂ. ಟಿರೆಲ್ ಅವರ ಮಾರ್ಗದರ್ಶನ ದೊರೆಯಿತು. ಸ್ಕಾಟ್ ಲೆಂಡಿನ ಭೂವಿಜ್ಞಾನ, ಅಂದಿನ ಮೈಸೂರು ರಾಜ್ಯದ ಭೂವಿಜ್ಞಾನಕ್ಕಿಂತ ತೀರ ಭಿನ್ನವಲ್ಲ ಎನ್ನುವುದನ್ನು ಬಹುಬೇಗ ಕಂಡುಕೊಂಡರು.ಗ್ಲಾಸ್ಗೋದಲ್ಲಿ ಅವರು ಆರಿಸಿಕೊಂಡ ಸಂಶೋಧನೆಯೂ ಭಾರತದ ಭೂವಿಜ್ಞಾನಕ್ಕೆ ಸಂಬಂಧಿಸಿದ್ದೇ ಆಗಿತ್ತು. ಹಿಂದೆ ಮೈಸೂರು ಭೂವಿಜ್ಞಾನ ಇಲಾಖೆಯ ಪರಿಣತರು ಬಾಬಾ ಬುಡನ್ ಗಿರಿ ಶ್ರೇಣಿಯ ಶಿಲೆಗಳನ್ನು ಅಗ್ನಿಜನ್ಯ ಶಿಲೆಗಳೆಂದು ಪರಿಗಣಿಸಿದ್ದರು. ಇವು ಸಂಚಯನ ಶಿಲೆಗಳೆಂದು ಕೇವಲ ಸಿದ್ಧಾಂತ ಮಂಡಿಸಿ ತೃಪ್ತರಾಗದ ಪಿಚ್ಚಮುತ್ತು ಅದಕ್ಕೆ ಸಾಕ್ಷ್ಯಾಧಾರ ಒದಗಿಸಿದರು. ಆ ವೇಳೆಗೆ ಬಿ. ರಾಮರಾವ್ ಅವರು ಗಣಿ ಇಲಾಖೆಯ ನಿರ್ದೇಶಕರಾಗಿ ಇದೇ ಅಭಿಪ್ರಾಯವನ್ನು ತಮ್ಮ ಸ್ವತಂತ್ರ ಅಧ್ಯಯನದ ಮೂಲಕ ಪ್ರತಿಪಾದಿಸಿದರು. ಪಿಚ್ಚಮುತ್ತು ಅವರ ಸಂಶೋಧನೆಯನ್ನು ಪುರಸ್ಕರಿಸಿ ಗ್ಲಾಸ್ಗೋ ವಿಶ್ವವಿದ್ಯಾಲಯ ಅವರಿಗೆ ಡಿ.ಎಸ್ಸಿ ಪದವಿಯನ್ನು ಪ್ರದಾನ ಮಾಡಿತು. ಅದೇ ಸುಮಾರಿಗೆ ಎಡಿನ್ ಬರ್ಗ್ ನ ರಾಯಲ್ ಸೊಸೈಟಿಗೆ ಫೆಲೋ ಆಗಿ ಆಯ್ಕೆಯಾದರು.

ಮರಳಿ ಭಾರತಕ್ಕೆ

[ಬದಲಾಯಿಸಿ]

1936ರಲ್ಲಿ ಭಾರತಕ್ಕೆ ಹಿಂತಿರುಗಿ ಹೊಸ ಹುಮ್ಮಸ್ಸಿನಿಂದ ಭೂವಿಜ್ಞಾನದಲ್ಲಿ ಕಾರ್ಯನಿರತರಾದರು. ಪ್ರಿಕೇಂಬ್ರಿಯನ್ ಮಹಾಕಲ್ಪದ ಶಿಲಾಧ್ಯಯನ ಅವರ ಬದುಕಿನುದ್ದಕ್ಕೂ ನಿರಂತರವಾಗಿ ಸಾಗಿತು. ಭೂವಿಜ್ಞಾನ ನಾಲ್ಕು ಗೋಡೆಯ ಮಧ್ಯೆ ಅಧ್ಯಯನ ಮಾಡುವಂತಹ ವಿಜ್ಞಾನವಲ್ಲ; ಕ್ಷೇತ್ರಾಧ್ಯಯನವೇ ಅದರ ಜೀವಾಳ ಎಂದು ಪಿಚ್ಚಮುತ್ತು ಮತ್ತೆ ಮತ್ತೆ ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೆ ಕ್ಷೇತ್ರಾಧ್ಯಯನದಲ್ಲಿ ಆಸಕ್ತಿ ಹುಟ್ಟಿಸಿದರು. ಈ ಅವಧಿಯನ್ನು ಸೆಂಟ್ರಲ್ ಕಾಲೇಜಿನ ಸುವರ್ಣಯುಗ ಎಂದೇ ಕರೆಯಬಹುದು. 1947ರಲ್ಲಿ ಪಿಚ್ಚಮುತ್ತು ಅವರನ್ನು ಇಂಡಿಯನ್ ಸೈನ್ಸ್ ಕಾಂಗ್ರೆಸ್ನ ಭೂವಿಜ್ಞಾನ ವಿಭಾಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಗೋಷ್ಠಿಯಲ್ಲಿ ಮೈಸೂರು ರಾಜ್ಯದ ಭೂವಿಜ್ಞಾನ ಕುರಿತಂತೆ ಅತ್ಯಂತ ವಿವರವಾದ ಸಂಶೋಧನಾ ಲೇಖನವನ್ನು ಮಂಡಿಸಿದರು.


ಮೈಸೂರು ಭೂವಿಜ್ಞಾನ ಇಲಾಖೆಯಲ್ಲಿ

[ಬದಲಾಯಿಸಿ]

ಬಿ.ರಾಮರಾವ್ ಅವರು ಮೈಸೂರು ಭೂವಿಜ್ಞಾನ ಇಲಾಖೆಯ ನಿದೇರ್ಶಕ ಹುದ್ದೆಯಿಂದ 1948ರಲ್ಲಿ ನಿವೃತ್ತರಾದರು. ಆ ಹುದ್ದೆಗೆ ಪಿಚ್ಚಮುತ್ತು ಅವರನ್ನು ನೇಮಕಮಾಡಲಾಯಿತು. ಇಲಾಖೆಗೆ ಅತ್ಯುತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸೇರಿಸಿಕೊಂಡರು. ಸ್ವತಃ ಅವರ ಸಂಶೋಧನಾ ಕಾರ್ಯವು ಈ ಅವಧಿಯಲ್ಲಿ ವಿಸ್ತರಿಸಿತು. ಮರಳುಗಲ್ಲಿನಲ್ಲಿ ಶ್ರೇಣೀಕೃತ ಸ್ತರಗಳನ್ನು, ಕಬ್ಬಿಣದ ಪಟ್ಟೆ ಶಿಲೆಯಲ್ಲಿ ಅಂತರ್ ಶಿಲಾ ಮಡಿಕೆಗಳನ್ನೂ, ಆರ್ಷೇಯಕಲ್ಪದ ಲಾವಾ ಹರಿವಿನಲ್ಲಿ ದಿಂಬು ರಚನೆಗಳನ್ನೂ ಚಾರ್ನೋಕೈಟ್ ಎಂಬ ಶಿಲೆಯೊಂದಿಗೆ ಕಂಡುಬಂದ ಪಾಟಲ ವರ್ಣದ ಗ್ರನೈಟ್ ಶಿಲೆಗಳನ್ನೂ, ಡೈಕ್ ಶಿಲೆಗಳಲ್ಲಿದ್ದ ಪ್ಲೇಜಿಯೋಕ್ಲೇಸ್ ಫೆಲ್ಡ್ ಸ್ಪಾರ್ ಎಂಬ ಖನಿಜದಲ್ಲಿ ಮುಸುಕು ರಚನೆಯನ್ನೂ ಅವರು ಅತ್ಯಂತ ವಿವರಗಳೊಂದಿಗೆ ದಾಖಲೆ ಮಾಡಿದರು. 19949ರಲ್ಲಿ ಮೈಸೂರು ಭೂವಿಜ್ಞಾನಿಗಳ ಸಂಘ ಅಸ್ತಿತ್ವಕ್ಕೆ ಬಂತು. ಅದರ ಅಧ್ಯಕ್ಷರಾಗಿ ಪಿಚ್ಚಮುತ್ತು ಅವರು ಆಯ್ಕೆಯಾದರು. ಅಲ್ಲಿನ ವಾರ್ಷಿಕ ಸಭೆಗಳಲ್ಲೂ ಮೈಸೂರು ಭೂವಿಜ್ಞಾನ ಕುರಿತಂತೆ ತಮ್ಮ ಅವಲೋಕನಗಳನ್ನು ಬಿಚ್ಚು ಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದರು. ಗ್ರನೈಟ್ ಸಮಸ್ಯೆ ಕುರಿತು ಕೆಮ್ಮಣ್ಣುಗುಂಡಿಯಲ್ಲೂಚಾರ್ನೋಕೈಟ್ ಸಮಸ್ಯೆ ಕುರಿತು ಶಿಂಷಾದಲ್ಲೂ ಅವರು ನೀಡಿದ ಉಪನ್ಯಾಸಗಳನ್ನು ಮುಂದೆ ಮುದ್ರಿಸಿ ಭೂವಿಜ್ಞಾನಿಗಳಿಗೆ ಹಂಚಲಾಯಿತು. ಶಿಷ್ಯನ ಈ ಸಾಧನೆ ಕಂಡು ಸರ್ ಎಡ್ಮಂಡ್ ಬೈಲಿ ಮುಕ್ತಕಂಠದಿಂದ ಪ್ರಶಂಸಿಸಿದರು. ಪಿಚ್ಚಮುತ್ತು ಅವರು ಮಾಡಿದ ಅಧ್ಯಯನ ಇಡೀ ಜಗತ್ತಿನಲ್ಲಿ ಈ ಸಮಸ್ಯೆಯನ್ನು ಬೆನ್ನು ಹತ್ತಿದವರಿಗೆ ಅತ್ಯುಪಯುಕ್ತವಾಗುತ್ತದೆಂದು ಅಭಿಪ್ರಾಯಪಟ್ಟರು. ತೀರ ಇತ್ತೀಚಿನ ಮಾಹಿತಿ ಸೇರಿಸಿ ಹೊರತಂದಿರುವ ನಿರ್ದಿಷ್ಟ ವಿಚಾರ ಕುರಿತ ನಿಮ್ಮ ಕೃತಿಗಳಿಗೆ ವಿಶೇಷ ಮಹತ್ವವಿದೆ ಎಂದು ಸರ್.ಆರ್ಥರ್ ಹೋಮ್ಸ್ ಪ್ರಶಂಸಿಸಿದರು.

ಅಂತಾರಾಷ್ಟ್ರೀಯ ಮನ್ನಣೆ

[ಬದಲಾಯಿಸಿ]

ಪಿಚ್ಚಮುತ್ತು ಅವರನ್ನು ಭೂವಿಜ್ಞಾನಿಗಳು ಸ್ಮರಿಸುವುದು ಅವರು ಚಾರ್ನೋಕೈಟ್ ಎಂಬ ಶೆಲೆಯ ಉಗಮದ ಬಗ್ಗೆ ಪ್ರತಿಪಾದಿಸಿದ ಸಿದ್ಧಾಂತಕ್ಕಾಗಿ.ನೈಸ್ ಶಿಲೆ ಚಾರ್ನೋಕೈಟ್ ಆಗಿ ಪರಿವರ್ತನೆಯಾಗಿರುವುದನ್ನು ಪಿಚ್ಚಮುತ್ತು ಅವರು ಕನಕಪುರದ ಬಳಿಯ ಕಬ್ಬಾಲದುರ್ಗದ ಕಲ್ಲುಗಣಿಯಲ್ಲಿ ಸಾಕ್ಷಿಗಳೊಡನೆ ಪ್ರತಿಪಾದಿಸಿದರು.`ಚಾರ್ನೋಕೈಟ್ ಹುಟ್ಟುವ ಸ್ಥಿತಿಯಲ್ಲಿ' ಎಂಬ ಶೀರ್ಷಿಕೆಯಡಿ ನೇಚರ್ ಪತ್ರಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದರು. ಇದು ಜಗತ್ತಿನ ಗಮನ ಸೆಳೆಯಿತು. ಜೊತೆಗೆ ಕಬ್ಬಾಲದುರ್ಗ ಜಾಗತಿಕ ಮನ್ನಣೆ ಪಡೆಯಿತು. 1953ರಲ್ಲಿ ವಿನಿಮಯ ಯೋಜನೆಯಡಿಯಲ್ಲಿ ಅಮೆರಿಕಕ್ಕೆ ಭೇಟಿ ಕೊಡುವ ಅವಕಾಶ ಇವರಿಗೆ ಲಭ್ಯವಾಯಿತು. ಮುಂದೆ ಅವರು ತಮ್ಮ ಅನುಭವವನ್ನು `ಮೈ ಅಮೆರಿಕನ್ ಡೈರಿ' ಎಂದು ಬರೆದರು. ಮೈಸೂರು ಭೂವಿಜ್ಞಾನಿಗಳ ಸಂಸ್ಥೆ ಅದನ್ನು ಪ್ರಕಟಿಸಿತು. 1955ರಲ್ಲಿ ಪಿಚ್ಚಮುತ್ತು ನಿವೃತ್ತರಾದರು. ಆರ್ಥರ್ ಹೋಮ್ಸ್ ಅವರ ಸಲಹೆಯ ಮೇರೆಗೆ ಸಿಂಗಪುರದ ಮಲೆಯ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನದ ಪ್ರೊಫೆಸರ್ ಹುದ್ದೆ ಸ್ವೀಕರಿಸಿದರು. 1963ರಲ್ಲಿ ಆಂಧ್ರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ಸಿ. ಮಹದೇವನ್ ಅವರ ನಿಧನಾನಂತರ ಖಾಲಿ ಇದ್ದ ಹುದ್ದೆಯನ್ನು ಸ್ವೀಕರಿಸಿವಾಲ್ಟೇರ್ ಗೆ (ವಿಶಾಖಪಟ್ಟಣ) ತೆರಳಿದರು. ಭಾರತದ ಪ್ರಿಕೇಂಬ್ರಿಯನ್ ಭೂವಿಜ್ಞಾನಕ್ಕೆ ನೀಡಿದ ಕೊಡುಗೆಯಿಂದಾಗಿ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. ಪ್ರೊಫೆಸರ್ ರಂಕಾಮ ಅವರ ಸಲಹೆಯ ಮೇರೆಗೆ ಅವರೇ ರೂಪಿಸಿದ್ದ ಜಗತ್ತಿನ ಪ್ರಿಕೇಂಬ್ರಿಯನ್ ಶಿಲೆಗಳನ್ನು ಕುರಿತ ಯೋಜನೆಗೆ ಪಿಚ್ಚಮುತ್ತು ಅವರು ಭಾರತ ಮತ್ತು ಶ್ರೀಲಂಕದ ಭೂವಿಜ್ಞಾನ ಕುರಿತಂತೆ ಅಧ್ಯಾಯಗಳನ್ನು ಬರೆದರು. ಈಗಲೂ ಅದೊಂದು ಅತ್ಯುತ್ತಮ ಪ್ರಮಾಣಗ್ರಂಥವೆಂದೇ ಪರಿಗಣಿತವಾಗಿದೆ.

1972ರಲ್ಲಿಭಾರತೀಯ ಭೂವೈಜ್ಞಾನಿಕ ಸಂಘದ ಅಧ್ಯಕ್ಷರಾಗಿ ಚುನಾಯಿತರಾದರು. 1984ರವರೆಗೆ ಆ ಹುದ್ದೆಯಲ್ಲಿ ಮುಂದುವರಿದು ಸಂಘದ ಚಾಲಕ ಶಕ್ತಿಯಾಗಿದ್ದರು. ಭಾರತದ ಪ್ರಿಕೇಂಬ್ರಿಯನ್ ಭೂವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸಿ 1988ರಲ್ಲಿ `ಡಿ.ಎನ್. ವಾಡಿಯ ಪಾರಿತೋಷಿಕ'ಕ್ಕೆ ಭಾಜನರಾದರು. ಪಿಚ್ಚಮುತ್ತು ಅವರು ಭಾರಿ ಕ್ರಿಕೆಟ್ ಪ್ರೇಮಿ. ನುರಿತ ಚೆಸ್ ಆಟಗಾರರಾಗಿದ್ದರು. ವೈ.ಎಂ.ಸಿ.ಎ. ಸದಸ್ಯರಾಗಿ ಕ್ರೀಡೆಗಳಲ್ಲಿ ಅತ್ಯುತ್ಸಾಹವಾಗಿ ಭಾಗವಹಿಸುತ್ತಿದ್ದರು.