ವಿಷಯಕ್ಕೆ ಹೋಗು

ಚಾರ್ಲ್ಸ್ ಡಿಬ್ಡಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರ್ಲ್ಸ್ ಡಿಬ್ಡಿನ್ (1745-1814 ). ಇಂಗ್ಲಿಷ್ ನಾಟಕಕಾರ, ನಟ ಮತ್ತು ರಂಗಭೂಮಿಯ ಗಾನಗೀತ ಕರ್ತೃ.

ಬದುಕು

[ಬದಲಾಯಿಸಿ]

ಅಕ್ಕಸಾಲಿಯೊಬ್ಬನ ಮಗನಾದ ಈತ ಹುಟ್ಟಿದ್ದು ಇಂಗ್ಲೆಂಡಿನ ಸೌತ್‍ಹ್ಯಾಂಪ್ಟನ್‍ನಲ್ಲಿ. ಡಿಬ್ಡಿನ್ ಬಾಲ್ಯದಿಂದಲೂ ಸಂಗೀತಗಾರ. ಹದಿನೇಳನೆಯ ವಯಸ್ಸಿನಲ್ಲಿ ಈತ ತಯಾರಿಸಿದ ದಿ ಷಪಡ್ರ್ಸ್ ಆರ್ಟಿಫಿಸ್ ಎಂಬ ಚಿಕ್ಕ ಗೇಯರೂಪಕ 1762ರಂದು ಪ್ರಸಿದ್ಧ ಕವೆಂಟ್ರಿ ಗಾರ್ಡನ್ ನಾಟಕಾಲಯದಲ್ಲಿ ಪ್ರದರ್ಶಿತವಾಯಿತು. ಸುಶ್ರಾವ್ಯ ಕಂಠಕ್ಕಾಗಿ ಹೆಸರುಗೊಂಡ ಡಿಬ್ಡಿನ್ ನಟವರ್ಗಕ್ಕೆ ಸೇರಿ, ಮನೋರಂಜನೆಯ ಗೀತೆಗಳನ್ನು ಬರೆಯುತ್ತ ಯಾರೊಂದಿಗೂ ಹೊಂದಿಕೊಳ್ಳದೆ ಅಸ್ಥಿರ ಬದುಕನ್ನು ಹೇಗೋ ನೂಕಿದ. ಈತ ರಭಸ ಸ್ವಭಾವದವ. ಜಗಳಗಂಟ ಪೋಷಕರಾದ ಗ್ಯಾರಿಕ್ ಷಂಡನ್ ಮೊದಲಾದವರಿಗೆ ಈತನನ್ನು ಸಹಿಸುವುದು ಕಷ್ಟಕರವಾಯಿತು. ಮದುವೆಯಾದ ಹೆಂಡತಿಯನ್ನು ಅಸಡ್ಡೆ ಮಾಡಿದ; ಪರಸ್ತ್ರೀ ಲಂಪಟನಾದ. 1788 ರಿಂದ 1805ರ ವರೆಗೆ ಈತ ತನ್ನದೇ ಆದ ಗೀತ ಪ್ರಮುಖವಾದ ರಂಗವಿನೋದಗಳನ್ನು ಏರ್ಪಡಿಸಿ ಕೀರ್ತಿ ಗಳಿಸಿದ. ಅವು ಜನಪ್ರಿಯವಾಗುವಂತೆ ಮಾಡಲು ಸಂಗೀತ, ಸಂವಾದಗಳೊಂದಿಗೆ ಕುದುರೆ ಸಾಹಸ ಮುಂತಾದ ವಿವಿಧ ದೃಶ್ಯಗಳನ್ನೂ ಸಜ್ಜು ಮಾಡಿದ. 1803ರಲ್ಲಿ ಈತನಿಗೆ ಇನ್ನೂರು ಪೌಂಡು ಮೊತ್ತದ ವಿರಾಮವೇತನ ಲಭಿಸಿದತಾಗಿ 1805ರಲ್ಲಿ ನಾಟಕ ವೃತ್ತಿಯನ್ನು ತ್ಯಜಿಸಿದ; ಆದರೆ 1807ರಲ್ಲಿ ವೇತನ ಸೌಲಭ್ಯ ತಪ್ಪಿಹೋಯಿತಾಗಿ ಪುನಃ ಜನಕ್ಕೆ ಹರ್ಷ ಒದಗಿಸುವ ಉದ್ಯಮಕ್ಕೆ ಕೈಹಾಕಿದ. ಆದರೆ ನಷ್ಟದ ಮೇಲೆ ನಷ್ಟ ಉಂಟಾಗಿ ಬಾಳು ನೆಮ್ಮದಿ ರಹಿತವಾಯಿತು. ಸಾಲಸೋಲದಿಂದ ಬಹುವಾಗಿ ನರಳಿದ. ಸಾಲಗಾರರ ಕೈಯಿಂದ ತಪ್ಪಿಸಿಕೊಳ್ಳಲು ಒಮ್ಮೆ ಫ್ರಾನ್ಸಿನ ಕೆಲೆ ನಗರಕ್ಕೆ ಪಲಾಯನಗೈದು. ಹಿಂತಿರುಗುವಾಗ ಭಾರಿ ಮಳೆಗೆ ಸಿಕ್ಕು ತನಗಾದ ಅನುಭವವನ್ನು ಬ್ಲೊ ಹೈ, ಬ್ಲೊ ಲೋ ಎಂಬ ಸುಂದರ ಗೀತವಾಗಿ ಕಟ್ಟಿದ.

ಪ್ರಹಸನಗಳು, ಗಾನಗೀತಗಳು

[ಬದಲಾಯಿಸಿ]

ರಂಗಪ್ರದರ್ಶನಕ್ಕಾಗಿ ಈತ ರಚಿಸಿದ ಸುಮಾರು ಎಪ್ಪತ್ತು ಪ್ರಹಸನಗಳು ಹುರುಳಿಲ್ಲದ ಬರವಣಿಗೆಯಾದರೂ ಸಂಗೀತಮಯವಾದವು. ನಾಟಕದ ಅಂಗವಾಗಿರಲೆಂದೂ ಅಥವಾ ಬಿಡಿ ಸಂದರ್ಭದಲ್ಲಿ ಹಾಡಲು ಬರಲೆಂದೂ ಈತ ಕಟ್ಟಿದ ಗಾನಗೀತಗಳು ಸುಮಾರು ನೂರರಷ್ಟಿವೆ. ಅವುಗಳಲ್ಲಿ ಹಲವು ಇಂದೂ ಗಾಯನ ಯೋಗ್ಯವಾಗಿವೆ. ಮುಖ್ಯವಾಗಿ ನಾವಿಕರಿಗೆ ಬಲು ರುಚಿಯಾಗಿವೆ. ಡಿಬ್ಡಿನ್ನಿನ ಹಾಡುಗಳೆಲ್ಲ ಸಮುದ್ರಕ್ಕೆ ಸಂಬಂಧಿಸಿದವು. ಈತನನೂ ನಾವಿಕನಲ್ಲ; ದೂರಯಾನ ಕಂಡವನೂ ಅಲ್ಲ; ಆದರೂ ಈತನ ಕಡಲ ಹಾಡುಗಳು ನೌಕಾ ಉದ್ಯೋಗದವರಿಗೆ ಚಳಿ ಮಳೆ ಗಾಳಿ ಬಿಸಿಲು ಸಮರ ಶಾಂತಿ ಮುಂತಾದ ಸ್ಥಿತಿಗತಿಯಲ್ಲಿ ಸಮಾಧಾನ ಧೈರ್ಯ ಸಂತೋಷ ತಂದುಕೊಡಲು ಸಿದ್ಧ ಸಾಧನವಾಗಿವೆ. ಟಾಮ್ ಬೋಲಿಂಗ್; ಪೂರ್ ಜ್ಯಾಕ್ ಎಂಬ ಎರಡೂ ಗೀತಗಳು ಅತ್ಯಂತ ರಮ್ಯವಾದವು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: