ವಿಷಯಕ್ಕೆ ಹೋಗು

ಚಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೋವರ್, ಇಂಗ್ಲೆಂಡ್‍ನ ವೈಟ್ ಕ್ಲಿಫ್ಸ್‌ನಿಂದ ಪಡೆಯಲಾದ ಚಾಕ್

ಚಾಕ್ ಎನ್ನುವುದು ಮೃದುವಾದ ಮತ್ತು ಬಿಳಿ ಅಥವಾ ಬೂದು ಬಣ್ಣದ ಒಂದು ರೀತಿಯ ಸರಂಧ್ರ ಸುಣ್ಣಶಿಲೆ.[][] ಇದು ಸಾಮಾನ್ಯವಾಗಿ ಫೊರಮಿನಿಫೆರ, ಕೋಕೊಲಿತ್ ಮುಂತಾದ ಅತಿಸೂಕ್ಷ್ಮ ಜೀವಿಗಳ ಅವಶೇಷಗಳಿಂದಲೂ, ಚೂರು ಚೂರಾದ ಇತರ ಪ್ರಾಣಿಗಳ ಚಿಪ್ಪುಗಳಿಂದಲೂ ತುಂಬಿರುವುದು. ಶುದ್ಧ ಚಾಕ್ ನಿಕ್ಷೇಪದಲ್ಲಿ 99% ಭಾಗ ಕ್ಯಾಲ್ಸೈಟ್ ಖನಿಜ ಉಂಟು. ಹೀಗೆ ಈ ಖನಿಜ ನೇರವಾಗಿ ನಿಕ್ಷೇಪಗೊಂಡಿರುವುದರಿಂದ ಇದರ ಮೂಲಕ ಹರಿಯುವ ಅಂತರ್ಜಲ ಇದನ್ನು ಮಾರ್ಪಾಡು ಮಾಡಲು ಸಾಧ್ಯವಾಗಿಲ್ಲ. ಸಾಧಾರಣವಾಗಿ ಚಾಕ್ ನಿಕ್ಷೇಪದಲ್ಲಿ ಸಿಲಿಕಾಂಶ ಇದ್ದೇ ಇರುತ್ತದೆ. ಇದು ಕೂಡ ರೇಡಿಯೊಲೇರಿಯ, ಸ್ಪಾಂಜ್ ಮುಳ್ಳು ಮುಂತಾದವುಗಳಿಂದ ಆದುದು. ಸಿಲಿಕಾಂಶ ಫ್ಲಿಂಟ್ ಅಥವಾ ಓಪಾಲ್ ಉಂಡೆಗಳಾಗಿ ನಿಕ್ಷೇಪಗೊಂಡಿದೆ. ಜೇಡು ಬೆರಕೆಯಾದ ಕಡೆಗಳಲ್ಲಿ ಚಾಕ್ ನಿಕ್ಷೇಪವು ಜೇಡಿನ ಅಂಶಕ್ಕೆ ಅನುಗುಣವಾಗಿ ಚಾಕ್ ಮಾರಲ್ ನಿಕ್ಷೇಪಕ್ಕೆ ತಿರುಗಿರುತ್ತದೆ. ಗ್ಲಾಕೊನೈಟ್ ಮರಳು ಮತ್ತು ರಂಜಕ ನಿಕ್ಷೇಪಗಳ ಬೆರಕೆಯಿಂದ ಚಾಕ್ ನಿಕ್ಷೇಪದ ಸಂಯೋಜನೆ, ಬಣ್ಣ ಮತ್ತು ರಚನೆಗಳು ಬದಲಾಗುತ್ತವೆ. ಅದು ಮೃದುವಾಗಿದ್ದು ಬಿಡಿಬಿಡಿಯಾಗಿ ಅಥವಾ ರಂಧ್ರಗಳಿಂದ ಕೂಡಿರಬಹುದು. ಇಲ್ಲವೇ ಗಟ್ಟಿಯಾಗಿದ್ದು ಸ್ಫಟಿಕೀಕರಣ ಹೊಂದಿರಬಹುದು. ಚಾಕ್‌ಶಿಲೆ ಕ್ರಿಟೇಷಸ್ ಸ್ತೋಮದ ವಿಶಿಷ್ಟ ಶಿಲೆ. ಆದ್ದರಿಂದಲೇ ಈ ಸ್ತೋಮಕ್ಕೆ ಕ್ರಿಟೇಷಸ್ ಎಂಬ ಹೆಸರು ಬಂದಿರುವುದು. ಇಂಗ್ಲೆಂಡಿನಲ್ಲಿ ಚಾಕ್ ನಿಕ್ಷೇಪ ಡಾರ್ಸೆಟಿನಿಂದ ಯಾರ್ಕ್‌ಷೈರ್‌ವರೆಗೆ ಸಂಚಯಗೊಂಡಿದೆ. ಇಂಗ್ಲಿಷ್ ಕಡಲ್ಗಾಲುವೆಯ ಎರಡು ಕಡೆಗಳಲ್ಲಿಯೂ ಹೊರಹೊಮ್ಮಿ ಅಚ್ಚ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದೆ.

ವಿಂಗಡಣೆ

[ಬದಲಾಯಿಸಿ]

ಚಾಕ್ ನಿಕ್ಷೇಪವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಭಾಗಗಳು ಅನುಕ್ರಮವಾಗಿ ಸಿನೊಮೇನಿಯನ್, ಟುರೋನಿಯನ್ ಮತ್ತು ಸಿನೋನಿಯನುಗಳಿಗೆ ಸರಿದೂಗುತ್ತವೆ. ಇದರ ಎಲ್ಲ ಭಾಗಗಳು ಎಲ್ಲ ಕಡೆಗಳಲ್ಲೂ ಸಂಚಯನಗೊಂಡಿಲ್ಲ. ಉದಾಹರಣೆಗೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡುಗಳಲ್ಲಿರುವ ಚಾಕ್ ಇಂಗ್ಲೆಂಡ್ ಚಾಕ್ ನಿಕ್ಷೇಪದ ಮೇಲ್ಭಾಗಕ್ಕೆ ಮಾತ್ರ ಸರಿದೂಗುತ್ತದೆ. ಭಾರತ ಮತ್ತು ಮೆಡಿಟರೇನಿಯನ್ ಸಾಗರ ಪ್ರಾಂತ್ಯಗಳಲ್ಲಿ ಚಾಕ್ ನಿಕ್ಷೇಪಗಳೇ ಇಲ್ಲ.

ಉಪಯೋಗಗಳು

[ಬದಲಾಯಿಸಿ]

ಚಾಕ್ ನಿಕ್ಷೇಪವನ್ನು ಬರೆಯುವ ಬಿಳಿ ಮತ್ತು ಬಣ್ಣದ ಸೀಮೆಸುಣ್ಣಗಳನ್ನು ತಯಾರಿಸಲೂ, ಸುಣ್ಣ, ಸಿಮೆಂಟ್, ಗೊಬ್ಬರ ಮುಂತಾದವನ್ನು ತಯಾರಿಸಲೂ ಉಪಯೋಗಿಸಬಹುದು. ಚಾಕನ್ನು ಚೆನ್ನಾಗಿ ಅರೆದು, ಬಂದ ಹಸನಾದ ಪುಡಿಯನ್ನು ಪ್ಯಾರಿಸ್ ವೈಟ್ ತಯಾರಿಸಲು ಉಪಯೋಗಿಸುತ್ತಾರೆ. ಅಲ್ಲದೆ ರಬ್ಬರ್ ಕೈಗಾರಿಕೆ, ಎಣ್ಣೆ, ಬಟ್ಟೆ ಮುಂತಾದವುಗಳ ತಯಾರಿಕೆಯಲ್ಲಿಯೂ ಇದರ ಉಪಯೋಗ ಉಂಟು. ಗಟ್ಟಿ ಜಾತಿಯ ಚಾಕನ್ನು ಕಟ್ಟಡ ಕಟ್ಟಲೂ ಉಪಯೋಗಿಸುತ್ತಾರೆ.

ಗಾಜು ಮೆರಗಿನ ಲೆಪ್ಪವು ಅಗಸೆ ಎಣ್ಣೆಯಲ್ಲಿ ಮುಖ್ಯವಾಗಿ ತುಂಬುಕವಾಗಿ ಚಾಕ್‍ನ್ನು ಹೊಂದಿರುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Jackson, Julia A., ed. (1997). "Chalk". Glossary of geology (Fourth ed.). Alexandria, Virginia: American Geological Institute. ISBN 0922152349.
  2. Boggs, Sam (2006). Principles of sedimentology and stratigraphy (4th ed.). Upper Saddle River, N.J.: Pearson Prentice Hall. ISBN 0131547283.
  3. Rohleder, Johannes (2001). "The beginnings: Calcium carbonate in glazing putty and rubber". Calcium Carbonate. pp. 138–159. doi:10.1007/978-3-0348-8245-3_6. ISBN 978-3-0348-9490-6.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚಾಕ್&oldid=1314063" ಇಂದ ಪಡೆಯಲ್ಪಟ್ಟಿದೆ