ಚರ್ಚೆಪುಟ:ಧೂಮಕೇತು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧೂಮಕೇತುಗಳ ವಿವರ[ಬದಲಾಯಿಸಿ]

  • ಈ ಬ್ರಹ್ಮಾಂಡ ಸೃಷ್ಟಿ ಆದಾಗಿನಿಂದಲೂ ತಾರೆಗಳ, ಗ್ರಹಗಳ, ನೀಹಾರಿಕೆಗಳ, ಗ್ಯಾಲಕ್ಸಿಗಳ ಮೆರವಣಿಗೆ ನಿರಂತರ ನಡೆದಿದೆ. ಬ್ರಹ್ಮಾಂಡದಲ್ಲಿ ಆಕಾಶಗಂಗೆಯೆಂಬ ನಮ್ಮ ಗ್ಯಾಲಕ್ಸಿ ಸಾಧಾರಣ ಪಯಣಿಗ. ಅವನ ಆಂತರ್ಯದಲ್ಲಿ ಕೆಲವು ದಶಲಕ್ಷ ನಕ್ಷತ್ರಗಳು. ಅವರಲ್ಲಿ ಸೂರ್ಯ ಒಬ್ಬ ತರುಣ ಸದಸ್ಯ ನಕ್ಷತ್ರ. ಕೋಟ್ಯಂತರ ತಾರೆಯರು ಕ್ಷೀರಪಥವೆಂಬ ಗ್ಯಾಲಕ್ಸಿಯ ಕೇಂದ್ರ ಸ್ಥಾನಕ್ಕೆ ಸುತ್ತು ಹಾಕುತ್ತಿದ್ದಾರೆ. ಅಸಂಖ್ಯ ಗ್ಯಾಲಕ್ಸಿಗಳು ಕಾಸ್ಮಾಸ್ ವಲಯದಲ್ಲಿ ಗಿರಕಿ ಹೊಡೆಯುತ್ತಲೇ ಗತಿಶೀಲವಾಗಿವೆ .
  • ಸೂರ್ಯನ ಸಂಸಾರಕ್ಕೆ ದಶಕಗಳಿಂದ ಹಿಡಿದು ಸಹಸ್ರ ವರ್ಷಗಳಿಗೊಮ್ಮೆ ಅಪರೂಪದ ಅತಿಥಿಗಳ ಆಗಮನ. ಕೆಲವರು ನಿರೀಕ್ಷಿತ, ಕೆಲವರು ಒಮ್ಮೆ ಬಂದು ಇನ್ನೆಂದೂ ಬಾರದ ದೂರದ ಬಂಧುಗಳು.
  • ಯಾರವರು?
  • ಸೌರಮಂಡಲಕ್ಕೆ ಗೋಳಾಕಾರವಾಗಿ 5000ದಿಂದ ೧ ಲಕ್ಷ ಖಗೋಳಮಾನದಷ್ಟು ಸುತ್ತುವರೆದಿದೆ ಊರ್ಥ್‌(ಬ್ರಿಟನ್‌ ಖಗೋಲಶಾಸ್ತ್ರಜ್ಞನ ಹೆಸರು) ಮೇಘಮಾಲೆ. ಆ ನೆಲೆಯಿಂದ ಬರುವವರೇ ಧೂಮಕೇತು ಎಂಬ ವಿಶಿಷ್ಟ ಬಾಹ್ಯಾ ಕಾಶ ನೆಂಟರು. ಕೋಮಾ, ನ್ಯೂಕ್ಲಿಯಸ್ ಅಥವಾ ಕೋರ್. ದಶಲಕ್ಷ ಮೈಲುಗ ಳಷ್ಟು ಉದ್ದನೆ ಬಾಲಂಗೋಚಿ. ಇದು ಧೂಮಕೇತುವಿನ ಹೊರನೋಟ!
  • ದೈತ್ಯಗ್ರಹ ಗುರುವನ್ನು ದಾಟಿ. ಕೆಂಪು ಬಣ್ಣದ ನಮ್ಮ ನೆರೆಯ ಗ್ರಹ ಮಂಗಳನತ್ತ ಬರುವಾಗ. ಸೂರ್ಯನ ಬಿಸಿತಾಗಿ ನೀಲಿ ಅಥವಾ ಬಿಳಿಬಣ್ಣದ ಬಾಲಸೃಷ್ಟಿಯಾಗಿ ಶ್ವೇತ ಕೇತುವಾಗುತ್ತದೆ. ಬಿಳಿ ಬಣ್ಣದ, ಮಸುಕಾದ ದುಂಡಗಿನ ಕೊಳಕು ಮಂಜಿನುಂಡೆ. ಅದರಿಂದ ಅನಿಲ, ಧೂಳು ಹೊರ ಸೂಸುತ್ತಲೇ ಸೂರ್ಯನತ್ತ ದಾವಿಸುತ್ತದೆ. ಹಿಂತಿರುಗುವಾಗಲೂ ಇದೇ ಕ್ರಿಯೆ. ಇಂಗಾಲದ ಡೈಆಕ್ಸೈಡ್, ಅಮೋನಿಯಾ, ಮಿಥೇನ್, ಇಂಗಾಲದ ಮಾನಾ ಕ್ಸೈಡ್ ಅನಿಲಗಳನ್ನು ಒಳಗೆ ಹುದುಗಿಸಿಟ್ಟುಕೊಂಡಿರುತ್ತದೆ.
  • ಈ ನೆಂಟರಲ್ಲಿ ೨೦೦ ವರ್ಷಗಳಿಗಿಂತ ಕಡಿಮೆ ಅವಧಿಗೊಮ್ಮೆ ಬರುವವರನ್ನು ಆವರ್ತನೀಯ ಧೂಮಕೇತುಗಳು, ೨೦೦ಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಬರುವವರನ್ನು ದೀರ್ಘಾವಧಿ ಧೂಮಕೇತುಗಳು ಎನ್ನಲಾಗುತ್ತದೆ.
  • ಭೂಮಿಯಲ್ಲಿನ ನೀರು, ಗಾಳಿ, ಅನಿಲ, ಜೀವ ಸೃಷ್ಟಿಗೆ ಮತ್ತು ಜೈವಿಕ ಮಾಲಿಕ್ಯೂಲ್‌ಗಳಿಗೆ ಧೂಮಕೇತುವಿನ ಕೊಡುಗೆ ಎಂಬು ದೊಂದು ಸಾಬೀತಾಗದ ಸಿದ್ಧಾಂತ. ಹಾಗೆಯೇ ನಮ್ಮೊಂದಿಗಿನ ಅನ್ಯಗ್ರಹಗಳಲ್ಲಿ ಇರಬಹುದಾದ ನೀರಿನ ಸೆಲೆಗೂ ಇದೇ ಕಾರಣ ಎಂಬ ಊಹೆ ಖಗೋಳ ವಿಜ್ಞಾನಿಗಳದು.
  • ಸೂರ್ಯನಿಂದ ಹೊರಡುವ ವಿಕಿರಣ ಪ್ರಭಾವದಿಂದ ಶಿರೋ ಭಾಗವಾದ ಕೋಮಾದಿಂದ ಧೂಳಿನ ಕಣಗಳಿಂದ ಬಾಲ ಬೆಳೆ ಯುತ್ತದೆ. ನಂತರ ಅನಿಲಗಳಿಂದ ಆಯಾನುಗಳಾಗಿ ಬದಲಾವಣೆ ಯಾಗುತ್ತದೆ. ಸದಾ ಸೂರ್ಯನ ವಿರುದ್ಧ ದಿಕ್ಕಿಗೆ ಚಾಚುವ ಈ ಬಾಲಂಗೋಚಿ 10 ಲಕ್ಷ ಮೈಲಿಯಿಂದ ೧೦ ಕೋಟಿ ಮೈಲುಗ ಳಷ್ಟು ಲಂಬಿಸಬಹುದು. ಅನೇಕ ಧೂಮಕೇತುಗಳು ಬರಿಗಣ್ಣಿಗೆ ಗೋಚರವಾದರೆ, ಸಣ್ಣವನ್ನು ದೂರದರ್ಶಕಗಳಿಂದಷ್ಟೇ ನೋಡಲು ಸಾಧ್ಯ.
  • ಧೂಮಕೇತು ಯಾತ್ರೆಗೆ ಪ್ರೇರಣೆ?
  • ಊರ್ಥ್‌ ಮೇಘಮಾಲೆಯಿಂದ ಅಥವಾ ಕೈಪರ್‌ ಪಟ್ಟಿ ಯಿಂದ ಈ ದೂಮಕೇತುಗಳು ಸೌರಮಂಡಲದ ಸಮೀಪದ ನಕ್ಷತ್ರ ಗಳ ತಳ್ಳುವಿಕೆಯಿಂದ ಇಲ್ಲದೇ ಸೌರ ಮಂಡಲದ ಗ್ರಹಗಳ ಸೆಳೆ ಯುವಿಕೆಯೇ ಸೂರ್ಯನೆಡೆಗೆ ಅವು ಧಾವಿಸಲು ಕಾರಣ. ಧೂಮಕೇತು ಸೂರ್ಯನೆಡೆಗೆ ಯಾತ್ರೆ ಮಾಡುವಾಗ ಕ್ಷೇಮವಾಗಿ ಹಿಂತಿರುಗುತ್ತದೆ ಎಂದೇನೂ ಖಾತ್ರಿ ಇಲ್ಲ. ಕಾರಣ ಅದು ಬಂದು ಹೋಗುವ ಹಾದಿಯಲ್ಲಿ ಗ್ರಹಗಳ ಗುರುತ್ವಾಕರ್ಷಣೆಗೆ ಸಿಲುಕಿ ಛಿದ್ರವಾಗಬಹುದು, ಸೂರ್ಯನ ಬಳಿಯೇ ಕರಗಿಬಿಡಬಹುದು!
  • ಇಂತಹ ಅಂತ್ಯ ೧೯೯೪ರ ಜುಲೈ ೬ರಿಂದ ೨೨ರವರೆಗೆ ಸಂಭವಿ ಸಿತ್ತು. ಯೂಜೆನ್, ಕರೋಲಿನ್ ಶೂಮೇಕರ್ ಹಾಗೂ ಡೇವಿಡ್ ಲೆವಿ ಕಂಡುಹಿಡಿದ ಶೂಮೇಕರ್ ಲೆವಿ ೯ ಆವರ್ತನೀಯ ಧೂಮ ಕೇತು. ೨೦ ವರ್ಷಗಳ ಹಿಂದೆ ದೈತ್ಯಗ್ರಹ ಬೃಹಸ್ಪೃತಿಯ ಬಲವಾದ ಗುರುತ್ವಕ್ಕೆ ಒಳಪಟ್ಟಾಗ ೨೧ ಭಾಗಗಳಾಗಿ ವಿಂಗಡಣೆಯಾಗಿ, ಸೆಕೆಂಡಿಗೆ ೬೦ ಕಿ.ಮೀ ವೇಗದಲ್ಲಿ ೬೦೦೦ ಗಿಗಾ ಟನ್ ಅಣು ಬಾಂಬ್ ಸ್ಫೋಟಕ್ಕೆ ಸಮನಾದ ಬಲದಿಂದ ಅಪ್ಪಳಿಸಿತ್ತು. ೩೦೦೦ ಮೈಲು ಎತ್ತರಕ್ಕೆದ್ದ ಧೂಮ ಜ್ವಾಲೆ ೧೨,೦೦೦ ಕಿ.ಮೀ ಅಗಲ (ಭೂಮಿ ಗಾತ್ರಕ್ಕಿಂತ ದೊಡ್ಡ) ಕುಳಿಗಳನ್ನು ಉಂಟು ಮಾಡಿತ್ತು.
  • ಧೂಮಕೇತು
  • ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಬಹುದಾದುದೆಂದರೆ ಹ್ಯಾಲಿ ಧೂಮಕೇತು. ಕ್ರಿಸ್ತಪೂರ್ವ ೨೩೯, ಕ್ರಿ.ಪೂ ೧೬೪, ಕ್ರಿ.ಪೂ ೮೭ ನಂತರ ಕ್ರಿಸ್ತಶಕ ೧೫೩೧, ಕ್ರಿ.ಶ ೧೬೦೭, ಕ್ರಿಶ ೧೬೮೨, ಕ್ರಿಶ ೧೭೫೮ ಹೀಗೆ ೭೫-೭೬ ವರ್ಷಗಳ ಅಂತರದಲ್ಲಿ ಇದನ್ನು ಕಂಡ ಚೀನೀಯರು ಮತ್ತು ಬ್ಯಾಬಿಲೋನಿಯನ್ನರು ದಾಖಲಿಸಿದ್ದಾರೆ.
  • ಈ ನಿರ್ದಿಷ್ಟ ಅವಧಿಯ ಧೂಮಕೇತು ಆಗಮನ ಲೆಕ್ಕ ಹಾಕಿದ ಇಂಗ್ಲೆಂಡಿನ ಖಗೋಳ ವಿಜ್ಞಾನಿ ಎಡ್ಮಂಡ್ ಹ್ಯಾಲಿ ಮುಂದಿನ ಅದರ ಭೇಟಿ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದ. ೧೭೪೨ರಲ್ಲಿ ನಿಧನನಾದ ಎಡ್ಮಂಡ್ ಹ್ಯಾಲಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಆ ಧೂಮಕೇತುವನ್ನು ನೋಡಲೇ ಇಲ್ಲ. ೧೭೫೮ರಲ್ಲಿ ಪುನಃ ಕಾಣಿಸಿದ ಧೂಮಕೇತು ಹ್ಯಾಲಿ ಎಂದು ನಾಮಕರಣ ಗೊಂಡು ಜಗದ್ವಿಖ್ಯಾತವಾಯಿತು.
  • ಎಡ್ಮಂಡ್ ಹ್ಯಾಲಿ ಧೂಮಕೇತುವಿನ ನಿರ್ದಿಷ್ಟ ಅವಧಿಯ ಲೆಕ್ಕಾಚಾರವನ್ನು ಸಾಬೀತುಪಡಿಸುವುದಕ್ಕೆ ೧೦೫ ವರ್ಷಗಳ ಮುಂಚೆ ಷೇಕ್ಸ್‌ಪಿಯರ್ ‘ಜ್ಯೂಲಿಯಸ್ ಸೀಸರ್’ ನಾಟಕದಲ್ಲಿ ಅದರ ಉಲ್ಲೇಖ ಮಾಡಿದ್ದಾನೆ. ೧೩೦೧ರಲ್ಲಿ ಇಟಲಿ ಚಿತ್ರಕಾರ ಗಿಯೆಟ್ಟೋನ ‘ಸ್ಟಾರ್ ಆಫ್ ಬೆತ್ಲೇಹೇಮ್’ ಕೃತಿಗೆ ಪ್ರೇರಣೆ ಈ ಧೂಮಕೇತು ಎಂದು ಬ್ರಿಟಾನಿಕಾ ವಿಶ್ವಕೋಶ ದಾಖಲಿಸಿದೆ.
  • ಷೇಕ್ಸ್‌ಪಿಯರ್‌ ಕೃತಿಯಲ್ಲಿ ಧೂಮಕೇತುವಿನ ಪ್ರಸ್ತಾಪವಾದ ನಂತರ ಖಗೋಳ ವಿದ್ಯಮಾನದ ಅಧ್ಯಯನ ಬಹು ವೇಗದಿಂದ ಬೆಳೆಯಿತು. ೧೯೧೦ ಮತ್ತು ೧೯೮೬ರಲ್ಲಿ ಧೂಮಕೇತು ಹ್ಯಾಲಿ ಹಲವು ಅಧ್ಯಯನಗಳಿಗೆ ತೆರೆದುಕೊಂಡಿತು.
  • ೧೯೮೬ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯಿಂದ ಧೂಮಕೇತುವಿನ ಸಮೀಪ ದರ್ಶನವಾಯಿತು. ೩೯0 ಲಕ್ಷ ಮೈಲಿಗಳಷ್ಟು ಹತ್ತಿರ ಬಂದಿದ್ದ ಹ್ಯಾಲಿ ಧೂಮಕೇತುವಿನ ಬಳಿಗೆ ವೇಗಾ೧ ಮತ್ತು ವೇಗಾ೨ ಹೆಸ ರಿನ ವಿಶೇಷ ನೌಕೆಗಳನ್ನು ಅಂದಿನ ಸೋವಿಯೆಟ್ ಯೂನಿಯನ್, ಮತ್ತು ಫ್ರಾನ್ಸ್ ಜಂಟಿಯಾಗಿ ಕಳುಹಿಸಿದ್ದವು. ಧೂಮಕೇತುವಿನ ಹೃದಯ ಭಾಗವೆಂದೇ ಹೆಸರಾದ ನ್ಯೂಕ್ಲಿಯಸ್‌ನ ಸ್ಪಷ್ಟ ಚಿತ್ರ ಆಗ ಮೊದಲ ಬಾರಿಗೆ ದೊರಕಿತ್ತು.
  • ಯೂರೋಪಿಯನ್ ಏಜೆನ್ಸಿ ಗಿಯೆಟ್ಟೋ ಸಹ ನ್ಯೂಕ್ಲಿಯಸ್‌ ಸನಿಹಕ್ಕೆ ತೆರಳಿತ್ತು. ಅಲ್ಲಿಂದ ಭೂಮಿಯೆಡೆಗೆ ತಿರುಗಿ ಅದ್ಭುತ ವಾದ ಭೂಮಿಯ ಚಿತ್ರವನ್ನು ಕಳುಹಿಸಿತು. ಜಪಾನ್ ಬಾಹ್ಯಾ ಕಾಶ ಯೋಜನೆಯಲ್ಲಿ ‘ಸಾಕಿ ಗಾಕಿ’ ಮತ್ತು ಸ್ಯುಸೈ ಎಂಬ ನೌಕೆಗಳಿಂದ ಕುತೂಹಲಕಾರಿ ಮಾಹಿತಿಯನ್ನು ಕಲೆ ಹಾಕಿತು.
  • ಹ್ಯಾಲಿ ಬರುತ್ತಿರುವಾಗಲೇ ಬಹಳ ಉತ್ಸುಕವಾಗಿದ್ದ ಅಮೆ ರಿಕದ ನಾಸಾ ಸಂಸ್ಥೆ, ಖಗೋಳ ವಿಜ್ಞಾನಿಗಳನ್ನು ಹೊತ್ತ ಎಸ್‌ಟಿಎಸ್‌೫೧ಎಲ್‌ ಛಾಲೆಂಜರ್ ಬಾಹ್ಯಾಕಾಶ ನೌಕೆ ಹ್ಯಾಲಿ ಧೂಮಕೇತುವಿನ ಕಕ್ಷೆಯತ್ತ ಧಾವಿಸುವ ಯೋಜನೆ ಹಾಕಿ ಕೊಂಡಿತ್ತು. ೧೯೮೬ರ ಜ. ೨೮ರಂದು ಉಡ್ಡಯನವಾದ ಎರಡು ನಿಮಿಷದಲ್ಲಿಯೇ ಸ್ಫೋಟಗೊಂಡು ದಾರುಣ ಅಂತ್ಯ ಕಂಡಿತು.
  • ಪುನಃ ೨೦೬೧ರಲ್ಲಿ ಹ್ಯಾಲಿ ಧೂಮಕೇತುವಿನ ನಿರೀಕ್ಷೆಯಿದೆ. ಆಗ ೧೯೮೬ರಲ್ಲಿ ಕಂಡಿದ್ದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ, ಸೂರ್ಯ ಮತ್ತು ಭೂಮಿಗೆ ಒಂದೇ ಬದಿಯಲ್ಲಿ ಕಾಣ ಸಿಗುತ್ತದೆ.
  • ಬರಿಗಣ್ಣಿಗೆ ಧೂಮಕೇತುಗಳು ಹಗಲಿನಲ್ಲಿ ಕಾಣುವುದು ಅತಿ ವಿರಳ. ಕಳೆದ ೩೩೨ ವರ್ಷಗಳಲ್ಲಿ ೯ ಬಾರಿ ಮಾತ್ರ ಇಂತಹ ವಿದ್ಯಮಾನ ನಡೆದಿದೆ.
  • ೧೬೮೦ರಲ್ಲಿ ಕಂಡ ಗೊಟ್‌ಫ್ರೈಡ್ ಕ್ರಿಷ್ ಧೂಮಕೇತು, ಟೆಲಿಸ್ಕೋಪಿನಲ್ಲಿ ಕಂಡ ಮೊದಲ ಧೂಮಕೇತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಕಾಂತಿ ಮಾನದಲ್ಲಿ ೧೫ ಡಿಗ್ರಿ ಉದ್ದವಾಗಿ ಬಾಲಹೊಂದಿದ್ದ, ಇದು ಡಿಸೆಂಬರ್ ೧೮ರಂದು ಸೂರ್ಯನಿಗೆ ೭,೪೪,೦೦೦ ಮೈಲು ಅಂದರೆ ೧೨ ಲಕ್ಷ ಕಿ.ಮೀ ಸಮೀಪದಲ್ಲಿ ಹಾದು ಹೋಗುವಾಗ, ಸೂರ್ಯನ ಜೊತೆಗೆ ಭಾರೀ ಕಾಂತಿಯೊಂದಿಗೆ ೧೬೮೧ರ ಫೆಬ್ರವರಿಯವರೆಗೂ ಕಂಡಿತು. ಜನವರಿ ನಂತರ ಧೂಮಕೇತು, ಬೆಳ್ಳಿಗ್ರಹ ಶುಕ್ರನಿಗಿಂತ ಹೆಚ್ಚು ಪ್ರಭೆಯಿಂದ ಕಂಗೊಳಿಸಿತ್ತು. ಆಗ ಅದಕ್ಕೆ ಎರಡು ಬಾಲಂಗೋಚಿಗಳು ಸೃಷ್ಟಿಯಾಗಿದ್ದವು.
  • ಕ್ರಾಂತಿ ಮಾನದಿಂದ ಕಂಡ ಈ ಧೂಮಕೇತು ೩.೩0 ಕೋಟಿ ಕಿ.ಮೀ ಉದ್ದ ನೆಯ ೬ ಬಾಲ ದೊಂದಿಗೆ ಜಪಾನಿನ ಕೈ ಬೀಸಣಿಗೆಯಂತೆ ಹಗಲಿ ನಲ್ಲಿ ಕಂಡಿತ್ತು. ಹಗಲಿನಲ್ಲಿ ಕಂಡ ಧೂಮಕೇತುಗಳಲ್ಲಿಯೇ ಅತೀ ಪ್ರಭೆಯಿಂದ ಕೂಡಿದ ಧೂಮಕೇತು ಎಂದು ಹೆಸರಾಗಿರುವುದು ೧೮೪೩ರಲ್ಲಿ ಬಂದಿದ್ದ ಕ್ರುಜ್ ಗುಂಪಿನ ಧೂಮಕೇತು. ಸೂರ್ಯನಿಂದ ೧ ಡಿಗ್ರಿ ಅಂತರದಲ್ಲಿಯೇ ಸಾಗಿದ ಧೂಮಕೇತು ೧೮೪೩ರ ಫೆ. 27ರಂದು ಸೂರ್ಯನ ಸಮೀಪ(೨,೦೩,೦೦೦ ಕಿ.ಮೀ) ಹಾದು ಹೋದಾಗ ಹಗಲಿಡೀ ಕಂಡಿದ್ದು ವಿಶೇಷ. ೩೨ ಕೋಟಿ ಮೈಲು ಉದ್ದದ ಬಾಲ ಹೊಂದಿದ್ದ ಈ ಧೂಮಕೇತುವಿನ ಶಿರೋಭಾಗ ಸೂರ್ಯನ ಬಳಿ ಇದ್ದರೆ ಬಾಲದ ತುದಿ ಮಂಗಳನ ಕಕ್ಷೆಯವರೆಗೂ ಚಾಚಿತ್ತು!
  • ೧೮೮೨ರಲ್ಲಿ ಇಟಲಿಯ ನಾವಿಕನಿಗೆ ದಕ್ಷಿಣ ಗೋಳಾರ್ಧದಲ್ಲಿ ಕಂಡ ಗ್ರೇಟ್ ಸೆಪ್ಟೆಂಬರ್ ಧೂಮಕೇತು ಮತ್ತೂ ವಿಶೇಷವಾದ್ದು. -೧೫ರಿಂದ -೨೦ರಷ್ಟು ಕಾಂತಿಮಾನದ ಈ ಧೂಮಕೇತು ಸೂರ್ಯ ನಿಗೆ ಅತಿ ಸನಿಹದಲ್ಲಿ(೪,೨೫,೦೦೦ ಕಿ.ಮೀ ದೂರ) ಹಾದು ಹೋಗುವಾಗ ಸತತ ನಾಲ್ಕು ದಿನಗಳ ಕಾಲ ಸೂರ್ಯನೊಟ್ಟಿಗೆ ಅತ್ಯಂತ ಪ್ರಭೆಯಿಂದ ಕಂಗೊಳಿಸಿತ್ತು.
  • ೧೯೧೦ಕ್ಕೆ ಮುನ್ನ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ ವಾಲ್ ಪ್ರೀಮಿ ಯರ್ ವಜ್ರದ ಗಣಿಯ ಕಾರ್ಮಿಕರಿಬ್ಬರು ಒಂದು ಮುಂಜಾವು ಒಂದನೇ ಕಾಂತಿಮಾನದ ಆಕಾಶಕಾಯ ಕಂಡರು. ಟ್ರಾನ್ಸ್‌ವಾಲ್ ವೀಕ್ಷಣಾಲಯದ ವಿಜ್ಞಾನಿಗಳು ಧೂಮಕೇತುವನ್ನು ಗಮನಿಸಿ ದರು. ಬರುಬರುತ್ತಾ ಹಗಲಿನಲ್ಲಿ ಶುಕ್ರಗ್ರಹಕ್ಕಿಂತ ಹೆಚ್ಚು ಕಾಂತಿ ಯಿಂದ ಕಾಣತೊಡಗಿತು. ಕ್ರಮೇಣ ಉತ್ತರಾಭಿಮುಖವಾಗಿ ಧಾವಿಸಿದ ಅದು ಗ್ರೇಟ್ ಜನವರಿ ಧೂಮಕೇತು ಎಂದೇ ಹೆಸರಾಗಿದೆ.
  • ೧೯೨೭ರಲ್ಲಿ ಕಂಡ ಜೆಲ್‌ರೆಪ್ಟ್ ಮಾರಿಸ್ಟೆನ್ನಿ ಧೂಮಕೇತು ೫ ಡಿಗ್ರಿ ಕೋನದಲ್ಲಿ ಹಗಲಿಡೀ ಕಂಡಿತ್ತು. ಆ ಕಾಂತಿಮಾನದಲ್ಲಿ ಅತಿ ಉದ್ದನೆಯ ಬಾಲಂಗೋಚಿ ೪೦ ಡಿಗ್ರಿಯವರೆಗೆ ಚಾಚಿತ್ತು.
  • ಇಕೆಯಾಸಾಕಿ, ೧೯೬೫ರಲ್ಲಿ ಕಂಡ ೨೦ನೇ ಶತ ಮಾನದ ಅತಿ ಪ್ರಭೆಯ ಧೂಮಕೇತು. ಆ ವರ್ಷದ ಅಕ್ಟೋಬರ್ ೨೧ರಂದು ಕೇವಲ ೧೨ ಲಕ್ಷ ಕಿ.ಮೀ ಅಂತರದಲ್ಲಿ ಸೂರ್ಯ ಸನಿಹದಲ್ಲಿ ಹಾದು ಹೋಗುವಾಗ, ೧೦ ಪೂರ್ಣ ಚಂದ್ರನಿಗೆ ಸಮನಾಗಿ ೧೫ ಕಾಂತಿ ಮಾನದಲ್ಲಿ ಹೊಳೆಯುತ್ತಿತ್ತು. ಆ ಕ್ಷಣದಲ್ಲಿ ಧೂಮ ಕೇತುವಿನ ನ್ಯೂಕ್ಲಿಯಸ್ ಎರಡರಿಂದ ಮೂರು ಭಾಗವಾಗಿ ೧೨ ಕೋಟಿ ಕಿ.ಮೀ ಉದ್ದ ಬಾಲ ಚಾಚಿತ್ತು!
  • ೧೯೭೬ರಲ್ಲಿ ಡೆನ್ಮಾರ್ಕ್‌ನ ರಿಚರ್ಡ್‌ವೆಸ್ಟ್ ಚಿಲಿ ಯಲ್ಲಿರುವ ಯೂರೋಪಿಯನ್ ಸದರನ್ ಅಬ್ಸರ್‌ ವೇಟರಿಯಲ್ಲಿ ಫೆ. ೨೫ರ ಮುಂಜಾನೆ ಅದ್ಭುತ ದೃಶ್ಯ ಕಂಡ. ಸೂರ್ಯನ ಅತ್ಯಂತ ಸನಿಹದಲ್ಲಿ ಅಂದರೆ ೨೯೫ ಲಕ್ಷ ಕಿ.ಮೀ ಅಂತರದಲ್ಲಿ ಸೂರ್ಯನೊಂದಿಗೆ ಉದಯಿಸಿ ಆ ಧೂಮಕೇತು ಅಸ್ತಮಿಸಿತು.
  • ಕಳೆದ ಇನ್ನೂರು ವರ್ಷಗಳಲ್ಲಿಯೇ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋದ ಧೂಮಕೇತು ಎಂದರೆ ೧೯೯೬ರಲ್ಲಿ ಬಂದಿದ್ದ ಹಯಾಕುಟಾಕೆ ಧೂಮಕೇತು. ೧೭,೦೦೦ ವರ್ಷಗಳಷ್ಟು ದೀರ್ಘ ಅವಧಿಯ ಕಕ್ಷಾಪಥ ಹೊಂದಿದ್ದರೂ ದೈತ್ಯಗ್ರಹಗಳ ಗುರುತ್ವದ ತಳ್ಳುವಿಕೆಯಿಂದ ಅದು ೭೦,೦೦೦ ವರ್ಷಗಳವರೆಗೂ ಮತ್ತಷ್ಟು ದೀರ್ಘಕಾಲವಾಯಿತು.
  • ವೈಜ್ಞಾನಿಕ ಪ್ರಯೋಗಗಳಿಗೆ ಒಳಗಾದ ಹಯಾಕು ಟಾಕೆ ಧೂಮಕೇತು ಮೊದಲ ಬಾರಿಗೆ ‘ಧೂಮಕೇತುಗಳು ಕ್ಷ-ಕಿರಣ ಗಳನ್ನು ಹೊರ ಹೊಮ್ಮಿಸುತ್ತವೆ’ ಎಂಬ ಅಂಶವನ್ನು ತೋರಿಸಿ ಕೊಟ್ಟಿತು. ಆಯಾನುಗಳನ್ನೊಳ ಗೊಂಡ ಸೌರಮಾರುತ ದೊಂದಿಗೆ ತಟಸ್ಥ ಅಣುಗಳ ಸಂಯೋಜನೆಯಿಂದ ಕ್ಷ-ಕಿರಣ ವಿಸರ್ಜನೆಯಾಗುತ್ತದೆ.
  • ಹಗಲಿನ ಅತಿಥಿ ಐಸಾನ್
  • ಹಗಲಿನಲ್ಲಿ ಕಂಡ ಅಪರೂಪದ ಈ ಅತಿಥಿಗಳ ಸಾಲಿಗೆ ಈಗ ಸೇರುತ್ತಿದ್ದಾನೆ ಐಸಾನ್. ಸಾಮಾನ್ಯ ವಾಗಿ ಮೊದಲು ನೋಡಿದ ಇಲ್ಲವೇ ಕಂಡು ಹಿಡಿದ ಖಗೋಳ ವಿಜ್ಞಾನಿಯ ಹೆಸರನ್ನೇ ಆಯಾ ಧೂಮಕೇತುಗಳಿಗೆ ಇಡುವುದು ರೂಢಿ.
  • ನ. ೨೬ರಿಂದ ೨೮ರವ ರೆಗೆ ಬರಿಗಣ್ಣಿಗೆ ಸೂರ್ಯೋದಯಕ್ಕೆ ಸ್ವಲ್ಪ ಮುಂಚೆ ಕಾಣುವ ಈ ಧೂಮಕೇತುವಿಗೆ ನಾಮಕರಣವಾಗಿರು ವುದು ವಿಜ್ಞಾನಿ ಹೆಸರಲ್ಲ. ೨೦೧೨ರ ಸೆಪ್ಟೆಂಬರ್‌ನಲ್ಲಿ ರಷ್ಯಾದ ಕಿಸ್ಲೋವೋಡಸ್ಕ್‌ನಲ್ಲಿರುವ ಇಂಟರ್‌ನ್ಯಾಷನಲ್ ಸೈಂಟಿಫಿಕ್ ಆಪ್ಟಿಕಲ್ ನೆಟ್‌ವರ್ಕ್ ಸಂಸ್ಥೆಯ ಈ ಹೆಸರಿನ ಸಂಕ್ಷೇಪನಾಮವೇ ISON.
  • ವಿಟಾಲಿ ನೆವಾಸ್ಕಿ ಮತ್ತು ಆರ್ತ್ಯೋಮ್ ನೋವಿ ಚೋನೋಕ್ ಕ್ಲಿಸ್ಲೋವೋಡಸ್ಕ್‌ನ ಖಗೋಳ ವೀಕ್ಷ ಣಾಲಯದಲ್ಲಿ 2012ರ ಸೆಪ್ಟೆಂಬರ್‌ನ ಒಂದು ರಾತ್ರಿ ಆಕಾಶ ಜಾಲಾಡುತ್ತಿದ್ದಾಗ ಪಕ್ವ ವಾದ ಆ ಖಗೋಳ ವೀಕ್ಷಣೆಯ ಕಣ್ಣುಗಳಿಗೆ ಮಂಜುಮಂಜಾಗಿ ಅಪರೂಪದ ಅತಿಥಿಯ ದರ್ಶನವಾಯಿತು.
  • ಈಗ್ಗೆ ೧೦ ಲಕ್ಷವರ್ಷಗಳ ಹಿಂದೆ, ಈವರೆಗೆ ನಾವು ಕಂಡಿರುವ ಏಕೈಕ ಜೀವಂತ ಗ್ರಹ, ಜೀವಿಗಳಿರುವ ಈ ವಸುಂಧರೆಯಲ್ಲಿ ಮಾನವನ ಸೃಷ್ಟಿಯೇ ಆಗಿರದಿದ್ದ ಸಮಯವದು. ಸೌರಮಂಡಲ ದಾಚೆಗಿನ ‘ಊರ್ಥ್‌ ಮೇಘಮಾಲೆ’ಯಿಂದ ಹೊರಟ ಈ ಧೂಮಕೇತು ಸುದೀರ್ಘ ದಾರಿ ಸವೆಸಿ ನಿಮಿಷಕ್ಕೆ ೧,೧೨,೦೦೦ ಪೌಂಡ್‌ ಧೂಳು, ೧೩೦ ಪೌಂಡ್‌ ನೀರನ್ನು ದಾರಿಯುದ್ದಕ್ಕೂ ಸುರಿಸುತ್ತಾ 2013ರ ಜನವರಿಯಿಂದ ಮಾರ್ಚ್‌ವರೆಗೆ ಸೂರ್ಯನಿಂದ ೪೬ ಕೋಟಿ ಮೈಲು ದೂರ ಧಾವಿಸಿದ್ದ.
  • ನಾಸಾದ ಹಬಲ್ ಅಂತರಿಕ್ಷ ದೂರ ದರ್ಶಕ ಏ. ೧೦ರಂದು ದೃಷ್ಟಿ ಹಾಯಿಸಿದಾಗ ಅಚ್ಚರಿಯ ಸಂಗತಿ ಹೊರಬಿತ್ತು. ೩ರಿಂದ ೪ಕಿ.ಮೀ.ನಷ್ಟು ದೊಡ್ಡ ದಾದ ನ್ಯೂಕ್ಲಿಯಸ್ ಹೊಂದಿದ್ದ ಈ ಧೂಮಕೇತು, ಕ್ರಿಯಾಶೀಲ ವಾಗಿ, ಕಾಂತಿಯಿಂದ ಗೋಚರವಾಯಿತು.
  • ಧೂಳಿನಿಂದಾವೃತ್ತವಾದ ಕೋಮಾ ಅಥವಾ ಧೂಮಕೇತುವಿನ ಶಿರೋಭಾಗ ೩,೧೦೦ ಕಿ.ಮೀ ದಪ್ಪ, ಬಾಲಂಗೋಚಿ ವರೆಗಿನ ಉದ್ದ ೫೭,೦೦೦ ಕಿ.ಮೀ.
  • ಮೇ ೨ರಿಂದ ೭ರವರೆಗೆ ಹಬಲ್ ಅಧ್ಯ ಯನ ನಡೆಸಿದಾಗ ಶಿರೋಭಾಗದ ಮೇಲ್ಮೈ ಯಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ಇಂಗಾಲ ಮಾನಾಕ್ಸೈಡ್ ಅತಿ ವೇಗವಾಗಿ ಹಿಮ್ಮುಖವಾಗಿ ದೂರ ದೂರದವರೆಗೆ ಚಿಮ್ಮುವುದು ಕಂಡು ಬಂದಿತು.
  • ಜುಲೈ ಕೊನೆವಾರ, ಅಗಸ್ಟ್ ಮೊದಲ ದಿನಗಳಲ್ಲಿ ದೈತ್ಯಗ್ರಹ ಬೃಹಸ್ಪತಿ ಕೆಂಪುಗ್ರಹ ಅಂಗಾರಕನ ನಡುವೆ ಬಂದಾಗ ಬಾಲ ಬಿಚ್ಚಲಾರಂಭಿಸಿದ. ಸೂರ್ಯನಿಂದ ಹೊರ ಡುವ ವಿಕಿರಣದ ಕಾರಣದಿಂದ ಧೂಮಕೇತು ವಿನಲ್ಲಿರುವ ನೀರು ಆವಿಯಾಗಿ ಕ್ರಮೇಣ ಮಂಜಿನ ಮುಸುಕಿನಿಂದ ಹೊರಬಂದು ಹೊಳೆಯಲಾರಂಭಿಸಿದ. ಸೂರ್ಯನಿಂದ ೨೩೦0ರಿಂದ ೨೮೦0 ಲಕ್ಷ ಮೈಲು ಅಂತರದ ಈ ದೂರಕ್ಕೆ ಫ್ರಾಸ್ಟ್‌ ಲೈನ್ ಹೆಸ ರಿದೆ. ಇದು ಧೂಮಕೇತುಗಳ ಪಾಲಿಗೆ ಅಪಾಯಕಾರಿ ವಲಯ. ಬಹುತೇಕ ಧೂಮಕೇತುಗಳು ಅಲ್ಲಿ ಸಿಡಿಯುವ ಸಾಧ್ಯತೆಯೇ ಹೆಚ್ಚು.
  • ಆಗಸ್ಟ್ ಎರಡನೇ ವಾರದಿಂದಲೇ ಖಗೋಳ ವಿಜ್ಞಾನಿಗಳಿಗೆ ಭೂನೆಲೆಯಿಂದಲೇ ದೂರದರ್ಶಕದ ಮೂಲಕ ಈ ಅತಿಥಿಯ ದರ್ಶನಭಾಗ್ಯ. ಸೆಪ್ಟೆಂಬರ್‌ನಲ್ಲಿ ದಕ್ಷಿಣ ಗೋಳಾರ್ಧದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ದುರ್ಬೀನಿನಿಂದ ವೀಕ್ಷಿಸಿದವರಿಗೆ ದಿವ್ಯದರ್ಶನ.
  • ಸೆ. ೧೭ರಂದು ೬೭೧ ಅಡಿ ಎತ್ತರವಿರುವ ಬಲೂನನ್ನು ನ್ಯೂ ಮಿಯಾಮಿ ನಗರದ ಫೋರ್ಟ್‌ ಸಮ್ಮರ್‌ನಿಂದ ಹಾರಿ ಬಿಡಲಾ ಯಿತು. ೩೦ ಅಂಗುಲ ವ್ಯಾಸದ ದೂರದರ್ಶಕ ಹೊತ್ತ ಆ ಬಲೂನ್ ಹತ್ತಾರು ವೈಜ್ಞಾನಿಕ ಉಪಕರಣಗಳೊಂದಿಗೆ ಭೂಮಿ ಯಿಂದ ೨೩ ಮೈಲು ಎತ್ತರದಲ್ಲಿ ಕಾದುನಿಂತು ಅಪರೂಪದ ಅತಿಥಿಯ ವಿರಾಟರೂಪವನ್ನು ವೀಕ್ಷಿಸಿತು.
  • ಭೂಮಿಯ ವಾತಾವರಣ ಕಾರಣದಿಂದ ನೋಡಲು ಸಾಧ್ಯ ವಾಗದ ಹಾಗೂ ಅಳೆಯಲೂ ಆಗದ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ನೀರಿನಂಶ ಆವಿಯಾಗುವ ಕ್ರಿಯೆ..... ಆವಕೆಂಪು ಮತ್ತು ಅತಿ ನೇರಳೆ ಕಿರಣದಲೆಗಳ ಬಾಚುವಿಕೆಯ ದೃಶ್ಯ ಪ್ರಾಪ್ತವಾಯಿತು.
  • ಅಕ್ಟೋಬರ್ ೧ರಂದು ಮಂಗಳನ ಸಮೀಪ ಬಂದ ಈ ಅತಿಥಿಯನ್ನು ಅಂತರಿಕ್ಷ ಸಾಧನ ಕ್ಯೂರಿಯಾಸಿಟಿ ಸನಿಹದಿಂದ ಕಣ್ತುಂಬಿಕೊಂಡಿತು.
  • ನಾಸಾದ ಸೋಲಾರ್‌ ಟೆರಿಸ್ಟೆರಿಯಲ್‌ ರಿಲೇಷನ್ಸ್‌ ಅಬ್ಸರ್ವೇ ಷನ್‌(STERO) ಉಪಕರಣ ಅ.೧೦ರಂದು ಸೂರ್ಯನತ್ತ ಕೇವಲ ೯೪೫ ಲಕ್ಷ ಮೈಲು ದೂರದಲ್ಲಿ ಈ ಅತಿಥಿಯ ನ್ಲೂಕ್ಲಿಯೆಸ್ ಭಾಗದ ಗಾತ್ರವನ್ನು ಅಳೆಯುವ ಪ್ರಯತ್ನಕ್ಕೆ ಕೈ ಹಾಕಿತು.
  • ಚಂದ್ರ ಅಂತರಿಕ್ಷ ಕ್ಷಕಿರಣ ದೂರದರ್ಶಕ ಈ ಹೊತ್ತಿಗೆ ಸೂರ್ಯನ ಸಮಭಾಜಕ ವೃತ್ತದ ಸಮೀಪದಲ್ಲಿರುವ ಈ ಅತಿಥಿಗೆ ಸೌರಜ್ವಾಲೆಯಿಂದ ಸೌರಮಾರುತದಿಂದ ಉಂಟಾಗಬಹುದಾದ ಕ್ಷಕಿರಣ ಪರಿಣಾಮದ ಅಧ್ಯಯನದಲ್ಲಿ ತೊಡಗಿದೆ.
  • ನವೆಂಬರ್‌ ಕೊನೆಯ ವಾರ ಐಸಾನ್‌ಗೆ ಬುಧನ ಸಾಮೀಪ್ಯ ದಲ್ಲಿ ಅಗ್ನಿಪರೀಕ್ಷೆ. ಸೌರಜ್ವಾಲೆಯ ವಿಕಿರಣ ಪ್ರಭಾವದಿಂದ ಕ್ಷಣಕ್ಷಣಕ್ಕೂ ಅಗಾಧ ಪ್ರಮಾಣದಲ್ಲಿ ತನ್ನೆಲ್ಲಾ ಅಂಶಗಳನ್ನು ಕಳೆದುಕೊಂಡು ಸಿಡಿದು ಹೋಗುವಂತಹ ಸಮಯ.
  • ಒಂದೊಮ್ಮೆ ಆ ಕ್ಷಣ ದಾಟಿ ಈ ನಮ್ಮ ಅತಿಥಿ ಪಾರಾಗಿ ಬಂದರೆ ನಂತರ ಸೌರ ಕಿರೀಟದಂಚಿಗೆ ಅಂದರೆ ‘ಕೊರೊನಾ’ದಾಚೆಗೆ ಪುರ ರವಿಯ ಸ್ಥಾನದಲ್ಲಿ ಅಗ್ನಿದಿವ್ಯ ಗೆದ್ದ ಪವಿತ್ರಾತ್ಮದಂತೆ ಕಂಗೊಳಿಸುತ್ತದೆ.
  • ಆ ಮಂಗಳಕರ ಮೂಹೂರ್ತಕ್ಕೆ ಕಾದು ಕುಳಿತಿರುವ STERO ಸಾಧನ ಯೂರೋಪಿಯನ್ ಸ್ಪೇಸ್ ಏಜೆನ್ಸಿ, ನಾಸಾದ ಸೋಲಾರ್ ಹೆಲಿಯೋಸ್ಪಿರಿಕ್ ಅಬ್ಸರ್‌ವೇಟರಿ- ಸರಿಸಮನಾಗಿ ಸೂರ್ಯನಿಂದ ಆಗಬಹುದಾದ ಒತ್ತಡ, ವಿಕಿರಣ, ಪ್ರಭಾವ ಮತ್ತು ಆವರ್ತನೆಗಳ ಅಧ್ಯಯನದ ವಿದ್ಯಾರ್ಥಿಗಳಾಗಿ ಇರುತ್ತವೆ. ಸೂರ್ಯ ಸಂಕ್ರಮಣದ ವೀಕ್ಷಣೆಯ ಸೌಭಾಗ್ಯ STERO ಅಂತರಿಕ್ಷ ನೌಕೆಗೆ ಮಾತ್ರ ಲಭ್ಯ.
  • ಪ್ರಜಾವಾಣಿ ಟಿ.ಎಸ್.ಮಾಧವ:30-11-2013)