ವಿಷಯಕ್ಕೆ ಹೋಗು

ಚರ್ಚೆಪುಟ:ದೆಹಲಿ ಅಸೆಂಬ್ಲಿ ಚುನಾವಣೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂಗ್ರೆಸ್ಸಿನ ಮತ್ತು ಬಿಜೆಪಿಯ ಸೋಲಿನ ವಿವೇಚನೆ

[ಬದಲಾಯಿಸಿ]
ಕಾಂಗ್ರೆಸ್ ಸರ್ಕಾರದ ಮತ್ತು ಆ ಪಕ್ಷದ ಬಗ್ಗೆ ಬೆಳೆದ ಅತೀವ ರೋಷ, ಏನೋ ಹೊಸತನ್ನು ತರಬಹುದು ಎಂದು ನರೇಂದ್ರ ಮೋದಿ ಬಗ್ಗೆ ಬೆಳೆದ ಅಪಾರ ಭರವಸೆ, ಹೆಚ್ಚಿನ ಸಂಖ್ಯೆಯ ಯುವ ಮತದಾರರಿಗಿದ್ದ ಬದಲಾವಣೆಯ ಆಕಾಂಕ್ಷೆ ಹೀಗೆ ಹತ್ತುಹಲವು ಕಾರಣಗಳಿಂದಾಗಿ ಕಳೆದ ಏಪ್ರಿಲ್–ಮೇನಲ್ಲಿ ನಡೆದ ಮಹಾಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರ ಹಿಡಿಯಿತು. ಆದರೆ ಈ ಯಶಸ್ಸಿನಲ್ಲಿ ಪಾಲು ಪಡೆಯುವ ಸುವರ್ಣಾವ­ಕಾಶವನ್ನು ಮೂಲ ಸಂಘಟನೆಯವರು ಬಿಟ್ಟು­ಕೊಡ­ಲಿಲ್ಲ. ಹಿಂದಿನ ದಶಕಗಳಲ್ಲಿ ಎಷ್ಟೋ ಚುನಾ­ವಣೆಗಳಲ್ಲಿ ಬಿಜೆಪಿ ಸೋತಿರಬಹುದು, ಈ ಹೊತ್ತು ಗೆದ್ದಿರುವುದಂತೂ ನಮ್ಮಿಂದಲೇ ಎಂದು ಹೇಳಿಕೊಳ್ಳುವುದು ಬಹಳ ಸುಲಭ. ಆದರೀಗ ದೆಹಲಿಯ ಸೋಲಿಗೂ ನಮಗೂ ಸಂಬಂಧವಿಲ್ಲ, ಅದಕ್ಕೆ ನಾವು ಕಾರಣ ಅಲ್ಲ ಎಂದು ಹೇಳುವುದು ಇನ್ನೂ ಸುಲಭ. ರಾಜಕೀಯ ರಂಗದಲ್ಲಿ ಚುನಾವಣೆಗಳನ್ನು ಗೆಲ್ಲಲು ಸಿದ್ಧಾಂತ ಮತ್ತು ಸಂಘಟನೆ ಇವೆರಡು ಮಾತ್ರ ಸಾಕಾಗುವುದಿಲ್ಲ ಅನ್ನುವುದು ಅವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.
ಆದರೂ ‘ನಮ್ಮ ಸರ್ಕಾರದಲ್ಲಿ ನಮ್ಮ ರಾಜಕಾರಣಿಗಳು ನಮ್ಮ ವಿಚಾರಗಳನ್ನು ಪ್ರತಿಪಾದಿಸಬೇಕು’ ಎನ್ನುವುದರಲ್ಲಿ ತೋರುತ್ತಿ­ರುವ ಆತುರ ಅತ್ಯಂತ ಗಮನಾರ್ಹವಾಗಿ ಕಾಣುತ್ತಿದೆ. ಹಾಗಾಗಿಯೇ ನಮ್ಮ ದೇಶದ ರಾಜಕಾರಣದಲ್ಲಿ ಏಕಕಾಲಕ್ಕೆ ಎರಡು ಬಗೆಯ ರಾಜಕೀಯ ಸಂಕಥನಗಳು (ಪೊಲಿಟಿಕಲ್ ಡಿಸ್ಕೋರ್ಸ್) ಚಾಲ್ತಿಯಲ್ಲಿದ್ದು ನಡೆಯುತ್ತಿವೆ. ಮೊದಲನೆಯದು– ಒಳ್ಳೆಯ ಆಡಳಿತ ಕುರಿತು ಚಿಂತನೆ, ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿ, ವಿದೇಶಗಳಿಗೆ ಭೇಟಿ ನೀಡಿ ಅಥವಾ ಅಲ್ಲಿನ ಪ್ರಮುಖರನ್ನು ಆಹ್ವಾನಿಸಿ ಭಾರತಕ್ಕೆ ವಿಶೇಷ ಗೌರವ ಪಡೆಯುವಿಕೆ, ಆಯ್ದ ದೇಶೀ ಬೃಹತ್ ಉದ್ಯಮಗಳಿಗೆ (ಅಥವಾ ಉದ್ಯಮಿಗಳಿಗೆ) ನೆರವು, ಭಾರತದಲ್ಲೇ ತಯಾರಿಸಿ ನಮ್ಮವರ ಕೈಗಳಿಗೆ ಕೆಲಸ ಕೊಡಿ ಎಂದು ವಿದೇಶಿ ಕೈಗಾರಿಕೆಗಳಿಗೆ ಆಹ್ವಾನ, ದೇಶದ ಸ್ವಚ್ಛತೆ ಮುಂತಾದ ವಿಷಯಗಳನ್ನು ರಾಷ್ಟ್ರೀಯ ಆದ್ಯತೆಗೆ ತರುವುದು – ಇವೇ ಮುಂತಾದ್ದರ ಮೂಲಕ ‘ಅಭಿವೃದ್ಧಿಯೇ ನನ್ನ ಮೂಲಮಂತ್ರ’ ಎನ್ನುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ಅಥವಾ ಅದಕ್ಕಿಂತ ಮುಖ್ಯವಾಗಿ ಅವರ ಆಶಯಘೋಷಣೆ. ಬಡವರಿಗೆ ಅನ್ನ, ಅಕ್ಷರ, ಆರೋಗ್ಯ, ಆತ್ಮವಿಶ್ವಾಸ ಇತ್ಯಾದಿಗಳನ್ನು ಕೊಡುವುದನ್ನು ಮಾತ್ರ ‘ಅಭಿವೃದ್ಧಿ’ ಎಂದು ಕರೆಯುವುದು ಹಳೆಯ ಕಾಲದ ಮಾತಾಯಿತು. ‘ಜೈ ಜವಾನ್‌, ಜೈ ಕಿಸಾನ್‌’, ‘ಗರೀಬಿ ಹಠಾವೊ’ ಮುಂತಾದುವು ಎಲ್ಲ ರಾಜಕೀಯ ನಿಘಂಟು­ಗಳಿಂದಲೂ ಹೇಗೂ ಮಾಯವಾಗಿರು­ವುದ­ರಿಂದ, ಹೊಸ ಕಾಲಕ್ಕೆ ತಕ್ಕಂತೆ ಅಭಿವೃದ್ಧಿಗೆ ಹೊಸ ಭಾಷೆ, ಹೊಸ ಭಾಷ್ಯವಾಗಿ ‘ಅಚ್ಛೇ ದಿನ್‌’ ಎಂಬ ಮುದ್ದಾದ ಪದಗಳು ತೇಲಿಬಂದವು. ಆಮೇಲೆ ಎಲ್ಲ ಹೊಸತನದ ಸಂಕೇತವಾಗಿ ಆಕರ್ಷಕ ವೇಷಭೂಷಣ, ಟ್ವಿಟರ್‌ ಎಫ್‌ಎಂ ಇ–ಮೇಲ್ ಮುಂತಾದ ಸಂವಹನ ಉಪಕರಣ ಎಲ್ಲವೂ ಯುವಜನರನ್ನು ಮೋದಿ ಮೋಡಿಗೆ ಒಳಪಡಿಸಿ ಅವರೇ ಅಭಿವೃದ್ಧಿ ಸಂಕಥನದ ರಾಜರ್ಷಿಯಾದರು. (ಚೀನಾದ ವೇಗದ ರೈಲು ; ಸಮುದ್ರದಾಳಕ್ಕೆ ಆದುನಿಕ ಯಂತ್ರದಿಂದ ಲಗ್ಗೆ ಹಾಕಿ ಎಲ್ಲಾ ಆಳದ ಮೀನು ಜಲಚರಗಳನ್ನು ಹಿಡಿದು ಮಾರುವ ಕಂಪನಿಗೆ ಗುತ್ತಿಗೆಕೊಟ್ಟು ಹಣ ಮಾಡುವುದು. ಇತ್ಯಾದಿ)
ಎರಡನೆಯದು, ‘ನಾವಿರೋದೇ ಹೀಗೆ ನಾವು ಮಾಡುವುದೇ ಹೀಗೆ’ ಎನ್ನುವಂತೆ ಅವಕಾಶ ಸಿಕ್ಕಿದೊಡನೆ ತಾವು ಅನಾದಿಕಾಲದಿಂದಲೂ ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಈಗ ಅಧಿಕೃತವಾಗಿ ಜಾರಿಗೆ ತರಬೇಕೆನ್ನುವ ಆರ್‌ಎಸ್‌ಎಸ್‌ ವಲಯದ ನಡೆ ಅತ್ಯಂತ ನಿರೀಕ್ಷಿತ. ಅವರು ಹಾಗಿಲ್ಲದಿದ್ದರೆ ಆಶ್ಚರ್ಯವಾಗು­ತ್ತಿತ್ತು ಅನ್ನುವಂತೆ ಅಧಿಕಾರವನ್ನು ಬಳಸಿಕೊಂಡು ರಾಜಕೀಯ ಒತ್ತಡ ಹೇರುವ ತರಾತುರಿ. ಕ್ರಿಸ್‌ಮಸ್‌ ದಿನದ ಮಹತ್ವಕ್ಕೆ ಕೊಕ್‌ ಕೊಡಲೆಂದೇ ನೀಡಿದ ಹೊಸ ದಿನಾಚರಣೆಯ ಕೇಕ್‌, ಯಾವ ಕಾಲದ ರಾಜಕಾರಣಕ್ಕೂ ಅತಿ ಸೂಕ್ಷ್ಮತೆಗಳನ್ನು ಬೋಧಿಸುವ ‘ಭಗವದ್ಗೀತೆ’­ಯಿಂದ ಏನನ್ನೂ ಕಲಿಯದ ಸಚಿವೆಯೊಬ್ಬರು ಅದನ್ನು ರಾಷ್ಟ್ರೀಯ ಗ್ರಂಥ ಮಾಡಲು ನಡೆಸಿದ ಯತ್ನ, ಗೋಡ್ಸೆಗೆ ಗೌರವ ಕೊಡುವ ಮೂಲಕ ಮತ್ತೊಮ್ಮೆ ನಡೆದ ಗಾಂಧಿ ಹತ್ಯೆ ಹೀಗೆ ಅದು ವೈವಿಧ್ಯಮಯವಾಗಿ ಪ್ರಕಟವಾಯಿತು. ಸಾಧ್ವಿ ನಿರಂಜನ ಜ್ಯೋತಿ ಎಂಬ ಹೆಸರಿನ ಸಚಿವೆ ನಿಮಗೆ ರಾಮ ಅಥವಾ ಹರಾಮ ಇಬ್ಬರಲ್ಲಿ ಯಾರು ಬೇಕು ಎಂದು ಚುನಾವಣಾ ಭಾಷಣದಲ್ಲಿ ಅಸಭ್ಯತೆಯ ಕತ್ತಲನ್ನು ಹರಡಿದರೆ, ಮತ್ತೊಬ್ಬ ಸಾಧ್ವಿ ಪ್ರಾಚಿ ಎಂಬ ಸಂಸದೆ ತೋಚಿದಂತೆ ಮಾತನಾಡಿದ್ದು ಅನೇಕ ವಿಷಯಗಳಿಗೆ ದಿಕ್ಸೂಚಿ ಆಯಿತು.
ಇನ್ನು ಸಾಕ್ಷಿ ಮಹಾರಾಜ್ ಎಂಬ ಸಂಸದ ಮಾಡುತ್ತಿರುವ ಅವಾಂತರಗಳಂತೂ ಈ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯೇ ಹೌದು. ‘ನೀವು ನಾಲ್ಕು ಮಕ್ಕಳನ್ನು ಹೆರಲೇಬೇಕು’ ಎಂದು ಈ ಬ್ರಹ್ಮಚಾರಿ ವಿಧಿಸಿದ ಕಟ್ಟಪ್ಪಣೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೊಸ ತಲೆಮಾರಿನ ಜೀನ್ಸ್‌ಧಾರಿ ಮತದಾರರು ಬೇಹೋಶ್ ಆದರು. ಹಾಗಾಗಿ ಕಾವಿಧಾರಿ ಸನ್ಯಾಸಿಯ ಪರಮ ಲೌಕಿಕ ಬೋಧನೆ ಹೆತ್ತದ್ದು ದೇಶಾದ್ಯಂತ ತಿರಸ್ಕಾರವನ್ನು ಮಾತ್ರ. ಆಮೇಲೆ ಯಾವ ಧರ್ಮಕ್ಕೆ ಅನ್ನುವುದೇನೋ ಸರಿ, ಆದರೆ ಯಾವ ಜಾತಿಗೆ ವಾಪಸಾತಿ ಅನ್ನುವುದನ್ನು ಖಚಿತವಾಗಿ ಹೇಳದ ‘ಘರ್‌ ವಾಪಸಿ’ ಕಾರ್ಯಕ್ರಮ ಕುರಿತು ಹೆಚ್ಚು ಹೇಳುವುದು ಬೇಡವೇಬೇಡ. ಅದರ ಪ್ರಭಾವದಿಂದ ಈಗಿನ ಅಧಿಕಾರಸ್ಥರು ಸಂಸತ್ತಿನಿಂದ ಮನೆಗೆ ವಾಪಸಾಗದಿದ್ದರೆ ಪುಣ್ಯ.
ನಮ್ಮ ಜನರಿಗೆ ಅನ್ನ ಅಥವಾ ರೋಟಿ ಇಲ್ಲದಿದ್ದರೂ ಪರವಾಗಿಲ್ಲ, ಅವರು ಹೊಟ್ಟೆ ತುಂಬಾ ‘ಕೇಸರಿಬಾತ್’ ತಿನ್ನಲಿ ಎನ್ನುವ ಸದುದ್ದೇಶದ ಸಂಕಥನ ಅಷ್ಟಕ್ಕೆ ನಿಲ್ಲುವುದಿಲ್ಲ. ಇದರಿಂದ ಬೇರೆ ಏನೇನು ಲಾಭ ಆಗುತ್ತದೋ ಗೊತ್ತಿಲ್ಲ, ನಮಗಂತೂ ಮೊದಲೇ ಗೊತ್ತಿದ್ದ ಮೋಹನ್ ಭಾಗವತ್ ಅವರಲ್ಲದೆ ಇನ್ನೂ ಅನೇಕ ಸೈದ್ಧಾಂತಿಕ ಪ್ರಮುಖರ ಪರಿಚಯವಾ­ಯಿತು. ‘ನಮ್ಮ ದೇಶದ ಪ್ರತೀ ಹಳ್ಳಿಯಲ್ಲಿ ಆರ್‌ಎಸ್‌ಎಸ್‌ ಶಾಖೆ ತೆರೆಯುತ್ತೇವೆ. ಎಲ್ಲ ಹಳ್ಳಿಗಳಲ್ಲಿ ಭಗವಾ ಝಂಡಾ ಹಾರಾಡಬೇಕು’ ಎಂದು ಭಾಗವತ್ ಅವರು ಇತ್ತೀಚೆಗೆ ಘೋಷಿಸಿದ್ದಾರೆ. ನಮ್ಮ ಹಳ್ಳಿಗಳಿಗೆ ಬೇಕಾಗಿರುವುದು ನೀರು, ಶಾಲೆ, ರಸ್ತೆ, ಶೌಚಾಲಯ ಇತ್ಯಾದಿ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಅವರ ತಪ್ಪು.
ಹೀಗೆ ಆದ್ಯತೆಗಳು, ಉದ್ದೇಶಗಳು ಸಂಪೂರ್ಣ ಭಿನ್ನವಾಗಿರುವ ಅಥವಾ ವಿರುದ್ಧ ದಿಕ್ಕಿನಲ್ಲಿರುವ ಎರಡು ರಾಜಕೀಯ ಸಂಕಥನಗಳು ದೇಶಾದ್ಯಂತ ಹರಿಯುತ್ತಿವೆ. ಮೊದಲನೆಯದರ ನೈಜತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಬಹುಮಂದಿಗೆ ಅನುಮಾನವಿದ್ದು, ಈ ಅಭಿವೃದ್ಧಿಯ ಅಜೆಂಡಾ ಬೇರೆ ಇದೆ ಎಂದು ಟೀಕಿಸಬಹುದು. ಆದರೆ ಎರಡನೆಯದರ ಪಾರದರ್ಶಕತೆಯ ಬಗ್ಗೆ ಅನುಮಾನಗಳೇ ಇಲ್ಲ. ದೆಹಲಿ ಚುನಾವಣೆ­ಯಲ್ಲಿ ಮೊದಲನೆಯದರ ಪ್ರಭಾವವನ್ನು ಎರಡನೆಯದು ತಿಂದು ಹಾಕಿತೇ? ಕೋಡಗನ ಕೋಳಿ ನುಂಗಿತ್ತಾ, ಮಗ್ಗವ ಹಗ್ಗ ನುಂಗಿತ್ತಾ...?

ದೆಹಲಿ-‘ಸ್ಮಾರ್ಟ್ ಸಿಟಿ’

[ಬದಲಾಯಿಸಿ]
‘ಸ್ಮಾರ್ಟ್ ಸಿಟಿ’ ನಿರ್ಮಾಣ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಆದರೆ ದೆಹಲಿ ಈಗಾಗಲೇ ಸ್ಮಾರ್ಟ್ ಸಿಟಿ ಆಗಿಹೋಗಿದೆ ಸ್ವಾಮಿ ಎಂದು ಶಬಾನಾ ಆಜ್ಮಿ ಫಲಿತಾಂಶ ಕುರಿತು ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿ, ಅಮಿತ್ ಷಾ ಮೊದಲಾದವರಿಗೆ ಅದು ಅರ್ಥವಾಗದ್ದೇನಲ್ಲ. ಆಡಿಸುವಾತ ಇರುವಾಗ ಸೂತ್ರದ ಬೊಂಬೆಗಳಿಗೆ ಹೆಚ್ಚು ಚಲನೆ ಇರುವುದಿಲ್ಲ ಎನ್ನುವುದೂ ಅವರಿಗೆ ಗೊತ್ತಿದೆ. ಹಾಗೆಯೇ ಬರೀ ರಕ್ಷಣಾತ್ಮಕ ಆಟ ಆಡುತ್ತಿದ್ದರೆ ಹೆಚ್ಚು ಸ್ಕೋರ್ ಮಾಡಲು ಆಗುವುದಿಲ್ಲ ಅನ್ನುವುದು ಇನ್ನೂ ಚೆನ್ನಾಗಿ ಗೊತ್ತಿದೆ. ಅವರಿಗೆ ಗೊತ್ತಿಲ್ಲದಿದ್ದರೆ ನಮ್ಮ ಜನರಿಗಂತೂ ಗೊತ್ತೇ ಇರುತ್ತದೆ.
ಅಂಕಣಗಳು›(prajavaniTue, 02/17/2015)-ಜೀವನ್ಮುಖಿ | ಆರ್‌. ಪೂರ್ಣಿಮಾ;->ಬಿಜೆಪಿಯ ದೆಹಲಿ ಸೋಲಿಗುಂಟು ಅಪ್ಪಅಮ್ಮ; [[೧]]

ಸದಸ್ಯ:Bschandrasgr<->೧೮-೨-೨೦೧೫