ಚರಮಗೀತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರಮಗೀತೆ ಎಂದರೆ ಶೋಕ, ದುಃಖ, ಅಳಲುಗಳನ್ನು ಅಭಿವ್ಯಕ್ತಿಗೊಳಿಸುವ ಒಂದು ಹಾಡು, ಗೀತೆ(ಎಲಿಜಿ). ಇದಕ್ಕೆ ಸಾವಿಗೆ ಸಂಬಂಧಪಟ್ಟ ಕವನವೆಂಬ ಅರ್ಥ ಬಂದಿರುವುದೂ ಉಂಟು. ಕಾಳಿದಾಸ-ಭೋಜರಾಜ, ಕಂತಿ-ಹಂಪ ಇತ್ಯಾದಿ ಕಟ್ಟುಕಥೆ ಕೇಳಿದವರಿಗೆ ಇದು ಅರ್ಥಾತ್ ಮರಣಗೀತೆಯೆಂದೇ ಭಾಸವಾಗುತ್ತದೆ. ಆ ಭಾವನೆ ತಪ್ಪಲ್ಲ ; ಆದರೆ ಇದು ಅಸಮಗ್ರ ; ಚರಮಗೀತೆಯ ವ್ಯಾಪ್ತಿಯನ್ನದು ಕುಂಠಿತಗೊಳಿಸುತ್ತದೆ. ಪ್ರಾಚೀನ ಗ್ರೀಕರಲ್ಲಿ ಚರಮ ಛಂದಸ್ಸು (ಎಲಿಜೈಯಕ್ ಮೀಟರ್) ಎಂಬುದು ಬಳಕೆಗೆ ಬಂತು ; ಆರು ಗಣಗಳ ಒಂದು ಪಂಕತಿಯೂ ಐದು ಗಣಗಳ ಇನ್ನೊಂದೂ ಸೇರಿ ಆದ ದ್ವಿಪದಿಯೇ ಅದು. ಒಂದು ಪದ್ಯಕ್ಕೆ ಇಷ್ಟೇ ದ್ವಿಪದಿ ಇರಬೇಕೆಂಬ ನಿರ್ಬಂಧ ಇರಲಿಲ್ಲ. ಆದರೂ ಆಳಿದವರನ್ನು ಹೊಗಳುವ ಸಮಾಧಿಲೇಖ ಸಾಮಾನ್ಯವಾಗಿ ಏಕೈಕ ದ್ವಿಪದಿಯಲ್ಲಿ ಅಡಕವಾಗುತ್ತಿತ್ತು.

ಈ ಬಳಿ ನಡೆವ ದಾರಿಗ, ಸ್ಪಾರ್ಟ ಜನರಿಗೆ ಹೇಳು ನೀ ಹೋಗಿ ;
ನಾವಿಲ್ಲಿ ಮಲಗಿಹೆವು ಅವ ಕಾಯಿದೆಗಳಿಗೆ ವಿಧೇಯರಾಗಿ'
ಎನ್ನನೆಂದೆಂದಿಗೂ ಕನ್ನೆಯೆಂದೇ ಕರೆಯುವರು ಅಂತು:
ದೇವತೆಗಳಿಂದ ಮದುವೆಯ ಬದಲು ಆ ಹೆಸರು ಬಂತು

ಕೊಳಲನ್ನು ಶ್ರುತಿಯಾಗಿರಿಸಿಕೊಂಡು ಹಾಡಲು ಬರುತ್ತಿದ್ದ ಚರಮ ದ್ವಿಪದಿಗೆ ಮರಣ ಮಾತ್ರ ವಿಷಯವಾಗಿರಬೇಕೆಂಬ ನಿಯಮ ಕಡ್ಡಾಯವಾಗಿರಲಿಲ್ಲ. ಸಂಗ್ರಾಮ ಪ್ರೇಮಶೋಕ ರಾಜಕೀಯ ಮುಂತಾದ ವಿಚಾರಗಳನ್ನೂ ಅದು ಪ್ರತಿಪಾದಿಸಬಹುದಾಗಿತ್ತು.

ಒಳ್ಳೆಯ ಗುರಾಣಿ ಹಿಡಿದು ಈಗೊಬ್ಬ ಥೇಸಿಯ
ದವಗೆ ಅಹಂಕಾರ ;
ಅದು ನನ್ನದು, ಸೋತ ನಾನು ರಣರಂಗದಲಿ
ಬಿಟ್ಟು ಬಂದೆ ಅದನ್ನ,
ಒಳಿತಾಯ್ತು, ನಾನೆನ್ನ ತಲೆಯ ಉಳಿಸಿಕೊಂಡೆ ;
ಹೋಗಲಿ ಆ ಅಲಂಕಾರ,
ಹೊಸದೊಂದ ಹೇಗೊ ಸಂಪಾದಿಸುವೆ, ಹಳೆಯ 
ದರಷ್ಟೇ ಅದು ಚೆನ್ನ
ಕೇಳಿದೆ ಮಂದಿಗಾಗಿ ಕೊಕ್ಕರೆ ಎಬ್ಬಿಸಿದ 
ಒಸಗೆ ಕೂಗ ;
ಹೊತ್ತಾಯ್ತು ಏಳಿ, ನೇಗಿಲ ಹೂಡಿ ಎಂದದರ 
ಕಲಕಲ
ಓ ಗೆಳೆಯ, ನನ್ನ ಕೊರಗುವೆಡೆಗೆ ಅದು ತಂದಿತು
ತಳಮಳ ;
ನನ್ನ ಫಲವತ್ತು ಜಮೀನೆಲ್ಲ ಅನ್ಯರ ಕೈವಶ 
ಈಗ ;
ಕುದರೆ ಎತ್ತು ಸಿಂಹಕ್ಕೆ ಕುಂಚ ಹಿಡಿದು ಚಿತ್ರಿಸಬಲ್ಲ
ಶಕ್ತಿಯಿದ್ದಲ್ಲಿ
ದೇವರನ್ನು ನಿರ್ಮಿಸುತ್ತಿದ್ದುವು ತಮ್ಮ ತಮ್ಮಂತೆ ;
ಸಿಂಹ ಎತ್ತು ಕುದುರೆ ದೇವರು!'

ಥಿಯೋಕ್ರಿಟಿಸ್[ಬದಲಾಯಿಸಿ]

ಕ್ರಿ.ಪೂ. 3ನೆಯ ಶತಮಾನದ ಆದಿಯಲ್ಲಿ ಥಿಯೋಕ್ರಿಟಿಸ್ ಎಂಬ ಶಕ್ತ ಕವಿ ಗ್ರಾಮೀಣ ಪದ್ಧತಿ (ಪ್ಯಾಶ್ಚೊರಲ್ ಪೊಯಟ್ರಿ) ಎಂಬುದಕ್ಕೆ ಕಾರಣಕರ್ತನಾದ. ಅವನು ಹೊರತಂದ ಅದರ ಮೂರು ವಿಧಗಳಲ್ಲಿ ರೋದನ (ಡರ್ಜ್) ಎಂಬ ಚರಮಗೀತೆ ಅತ್ಯಂತ ಪ್ರಭಾವ ಬೀರಿ, ಆಮೇಲಣ ಅಂಥ ಕವಿತ್ವವೆಲ್ಲಕ್ಕೂ ಒಂದು ಬಗೆಯಲ್ಲಿ ಮೇಲ್ಪಂಕ್ತಿಯಾಯಿತು. ಅದರಲ್ಲಿ ಕುರಿಗಾಹಿಗಳೇ ಕಥೆ ಹೇಳುವ ಪ್ರೇಮವನ್ನು ವಿವರಿಸುವ ದುಃಖ ತೋಡಿಕೊಳ್ಳುವ ಗಾನಗೈಯುವ ಪಾತ್ರವರ್ಗ ; ಅತಿ ಪುರಾತನ ಮೂಲ ಕಥಾವಳಿಯ ಆದೊನಾಯಿಸ್, ಡಾಫ್ನಿಸ್ ಮೊದಲಾದ ಪ್ರೇಮ ಸಂತ್ರಸ್ಥರ ವಿರಹವಿಷಾದದ ಕಥನವೇ ಸಾಮಗ್ರಿ. ನಿರೂಪಣೆಯ ವಿಧಾನದಲ್ಲಿ ಪ್ರಶ್ನಿಸುವ ಕುರುಬ, ಉತ್ತರ ಹೇಳುವ ಕುರುಬ, ಮರುಕ ತೋರಲು ಆಗಮಿಸುವ ನಿಸರ್ಗದೇವಿಯರು ಗಿಡ ಮರ ಗಾಳಿ ನೀರುಗಳ ಸಹಶೋಕ, ನಷ್ಟವನ್ನುಂಟು ಮಾಡಿದ ದುಷ್ಟತನದ ಮೇಲೆ ಶಾಪ ಎರಚುವಿಕೆ, ಕೊನೆಗೆ ಸಂತಾಪಕ್ಕೆ ಕಾರಣವಿಲ್ಲ ಎಂಬ ತರ್ಕ- ಇವೆಲ್ಲ ಬರುತ್ತವೆ. ಏತಕ್ಕೆಂದರೆ ಮೃತ ನಿಜವಾಗಿ ಸತ್ತಿಲ್ಲ. ಬೇರೆ ಸಂತಸಲೋಕದಲ್ಲಿ ಬಾಳುತ್ತಿದ್ದಾನೆ ಎಂಬ ಸಮಾಧಾನದ ಮಾತು ಕೊನೆಯಲ್ಲಿ ಬರುತ್ತದೆ. ಜೊತೆಗೆ ತಿರುತಿರುಗಿ ಬರುವ ಪಲ್ಲವಿ ಉಪಮಾನ ರೂಪಕ ಕಟಕಿ ಇತ್ಯಾದಿ ಅಲಂಕಾರಗಳು, ಪ್ರೌಢ ಭಾಷೆ-ಇವು ಶೈಲಿಯ ಮುಖ್ಯಲಕ್ಷಣ. ಮುಂದೆ ಶತಮಾನಗಟ್ಟಲೆ ಅವು ಶೋಕಗೀತದಲ್ಲಿ ಬಿಡಲಾಗದ ಕಾವ್ಯಸಂಪ್ರದಾಯವಾಗಿ ನಿಂತುಬಿಟ್ಟುವು ; ಈಗಲೂ ಪ್ರಾಯಶಃ ಆಗೊಮ್ಮೆ ಈಗೊಮ್ಮೆ ಕಾಣಬರುತ್ತವೆ. ಬಹಳ ದಿವಸ ಚರಮಗೀತೆಯೆಂದರೆ ಗ್ರಾಮೀಣ ಸಂಪ್ರದಾಯದ ಆಧಾರಮೇಲೆ ಕಟ್ಟಿದ ಶೋಕಪದ್ಯವೆಂದೇ ನಂಬಿಕೆಯಿತ್ತು. ಥಿಯೋಕಿಟಿಸ್ ತನ್ನ ಕೃತಿಗೆ ಇಟ್ಟ ಹೆಸರು ಎಲಿಜಿ ಎಂದಲ್ಲ. ಇಡಿಲ್ ಎಂದು. ಅದರ ಅರ್ಥ ಸುಖಶಾಂತಿಯಿಂದ ಕೂಡಿದ ಹಳ್ಳಿಗಾಡಿನ ಜೀವನವನ್ನು ಚಿತ್ರಿಸುವ ನೆಮ್ಮದಿ ಹಾಡು.

ವರ್ಜಿಲ್[ಬದಲಾಯಿಸಿ]

ರೋಮನ್ನರ ಭವ್ಯ ಕವಿ ವರ್ಜಿಲನ ಕೈಗೆ ಇಡಿಲ್ (ಅಥವಾ ಎಲಿಜಿ) ಬಂದಾಗ ಒಂದು ದೊಡ್ಡ ಮಾರ್ಪಾಟು ಆಯಿತು. ಆತ ಪಟ್ಟಣದ ಕವಿ, ಪೌರ ವ್ಯವಸ್ಥೆಯ ಮಧ್ಯೆ ಬದುಕು ನಡೆಸಬೇಕಾದವ, ನಗರ ಸಂಸ್ಕøತಿಯಲ್ಲಿ ಸುಶಿಕ್ಷಿತನಾದವ. ಅವನ ಚಿತ್ರಕ್ಕೆ ಹಳ್ಳಿಗಾಡಿನ ಸರಳವೂ ಗಲಭೆಯಿಲ್ಲದ್ದೂ ಮನುಷ್ಯ ಸಹಜ ಲಾಭನಷ್ಟಗಳಿಂದ ಕೂಡಿದ್ದೂ ಆದ ಜೀವನ ಮಾರ್ಗ ರಮ್ಯವಾಗಿಯೂ ಆದರ್ಶದಂತೆಯೂ ಕಂಡುಬಂತು. ಅವನ ಪದ್ಯಗಳಲ್ಲಿ ವಾಸ್ತವತೆ ತೀರ ಕಡಿಮೆ, ಕಾಲ್ಪನಿಕತೆ ತಾನೇ ತಾನು. ಅಲ್ಲದೆ, ಕೇಡಿಗರ ಅವಹೇಳನೆ, ಒಳ್ಳೆಯವರ ಪ್ರಶಂಸೆ, ಕಾಲ ಇಳಿಗತಿಗೆ ಬಂತು ಎಂಬ ದುಗುಡ-ಇತ್ಯಾದಿ ವಿವರಗಳೂ ಕವಿತ್ವದೊಳಕ್ಕೆ ಪ್ರವೇಶಿಸಿದುವು. ವರ್ಜಿಲನ ಸಾರಸ್ವತ ಅಧಿಕಾರ ಎಲ್ಲೆಲ್ಲೂ ಪ್ರಬಲವಾಗಿ ಏರ್ಪಟ್ಟಿತಾಗಿ, ಅವನ ಜಾಡನ್ನು ಅನುಸರಿಸಿ ಪದ್ಯರಚನೆ ಮಾಡುವುದು ಯಾವುದೇ ದೇಶದ ಉತ್ತಮ ಕವಿಗೂ ಕೃತಕವೆಂದೆನಿಸಲಿಲ್ಲ.

ಇತರರು[ಬದಲಾಯಿಸಿ]

ಹೊಸ ಹುಟ್ಟಿನ ಅವಧಿಯಲ್ಲಿ ಒಬ್ಬಿಬ್ಬರು ಥಿಯೋಕ್ರಿಟಿಸನ ಪಂಥದವರಾಗಿ ಚರಮಗೀತೆಯಲ್ಲಿ ಕುರುಬ ಪಾತ್ರಗಳು, ಗಾಯನದ ಪೈಪೋಟಿ, ಮೃತನಿಗಾಗಿ ಗೋಳಾಟ, ಭೌತಪ್ರಕೃತಿದೇವಿಯರು, ಅಂತ್ಯ ಸಾಂತ್ವನ-ಎಲ್ಲವನ್ನೂ ತಂದಿಟ್ಟರು. ಇಂಗ್ಲೆಂಡಿನ ಎಡ್ಮಂಡ್ ಸ್ಪೆನ್ಸರ್ ಇಂಥದಕ್ಕೆ ಹಿರಿಯ ಉದಾಹರಣೆ. 17ನೆಯ ಶತಮಾನದವನಾದ ಜಾನ್ ಮಿಲ್ಟನ್ ತನ್ನ ಸಹಪಾಠಿ ಎಡ್ವರ್ಡ್ ಕಿಂಗ್ ಎಂಬುವನ ಅಕಾಲಮರಣದಿಂದ ಪ್ರೇರಿತನಾಗಿ ರಚಿಸಿದ ಶೋಕಗೀತೆಯ ಹೆಸರು ಲಿಸಿಡಾಸ್ : ಅದು ಪ್ರಾಚೀನ ಗ್ರೀಕರಲ್ಲಿ ಬಳಕೆಯಲ್ಲಿದ್ದ ಹೆಸರು. ಕ್ಲುಪ್ತಾಂಶಗಳ ಜೊತೆಗೆ ಮತಧರ್ಮಕ್ಕೆ ಸಂಬಂಧಿಸಿದ ಕಟು ವಿಡಂಬನವನ್ನು ಮಿಲ್ಟನ್ ರೋಮನ್ ಕವಿಗಳಂತೆ ತಂದು ಸೇರಿಸಿದ್ದಾನೆ. ಇವಾವುದೂ ಯಥಾರ್ಥವಲ್ಲ ಎಂಬ ಟೀಕೆಗೆ ಲಿಸಿಡಾಸ್ ಪಕ್ಕಾಗಿದ್ದರೂ ಅದರಂಥ ಮಹೋನ್ನತ ಕಾವ್ಯ ಮತ್ತೊಂದಿಲ್ಲ ; ಚರಮಗೀತೆಯ ಕಿರೀಟ ಅದು, ದಿಟವಾಗಿ. ಅಷ್ಟೇಕೆ, 19ನೆಯ ಶತಮಾನದ ಷೆಲ್ಲಿ ಬೇರೆ ಚರಮಗೀತೆಯ ಹೆಸರು ಆದೊನಾಯಿಸ್, ಕಿಟ್ಸ್ ಯೌವನದಲ್ಲೇ ಮೃತ್ಯು ಮುಖನಾದ. ಅವನ ಸಾವಿಗೆ ಅವನನ್ನು ಕುರಿತು ಪ್ರಕಟಗೊಂಡ ಕ್ರೂರ ಖಂಡನಾತ್ಮಕ ಪ್ರಬಂಧಗಳೇ ನಿಮಿತ್ತವೆಂದು ಷೆಲ್ಲಿ ತಿಳಿದುಕೊಂಡು, ತನ್ನ ಆಗ್ರಹವನ್ನೂ ಕನಿಕರವನ್ನೂ ಅಭಿವ್ಯಕ್ತಿಗೊಳಿಸಿದ್ದಾನೆ, ತನ್ನ ಕವನದಲ್ಲಿ.

೧೮ನೇ ಮತ್ತು ೧೯ನೇ ಶತಮಾನಗಳು[ಬದಲಾಯಿಸಿ]

18ನೆಯ ಶತಮಾನದಲ್ಲಿ ಗ್ರೇ, ಯಂಗ್ ಇತ್ಯಾದಿ ಕೆಲವು ಕವಿಗಳಿಗೆ ಶ್ಮಶಾನ ಪಂಥ (ದ ಗ್ರೇವ್‍ಯಾರ್ಡ್‍ಸ್ಕೂಲ್) ಎಂಬ ನಾಮಧೇಯ ಅಂಟಿಕೊಂಡಿತು. ರುದ್ರಭೂಮಿ, ಗೋರಿಗಳು, ಸಮರಾತ್ರಿ, ಕತ್ತಲು, ಎದೆಯನ್ನು ಅವುಕುವ ದುಮ್ಮಾನ, ಜೀವನದ ಕ್ಷಣಿಕತೆ ಮುಂತಾದ ಆಲೋಚನೆಗಳೇ ಅವರ ಕೃತಿಗಳು ಸರಕು. ಇಷ್ಟ ಮಿತ್ರರ ಅಳಿವೇ ಚರಮಗೀತೆಯನ್ನು ಪ್ರಚೋದಿಸಬೇಕು ಎಂಬ ಸಂಕುಚಿತ ಸೂತ್ರ ಅನಾವಶ್ಯಕ ಎಂಬುದಕ್ಕೆ ಇಂತ ಇಹಜೀವನ್ನು ಕುರಿತ ವಿಶಾಲ ಸರ್ವವ್ಯಾಪ್ತ ಅಸೌಖ್ಯದ ಪ್ರಕಟನೆ ಸಾಕ್ಷ್ಯ. ಆ ಕಾಲದ ಜರ್ಮನಿಯಲ್ಲಿ ಎಲಿಜಿ ಎಂಬ ಪದಕ್ಕೆ ಸಾವಿಗಾಗಿ ಶೋಕ ಎಂಬ ಅರ್ಥ ಇರಲೇ ಇಲ್ಲ. ಇರುವ ಪರಿಸ್ಥಿತಿಯನ್ನು ತೆಗಳುವ ಕಾವ್ಯ-ವಿಡಂಬನೆ, ಆದರ್ಶ ಪರಿಸ್ಥಿತಿಯನ್ನು ಬಣ್ಣಿಸುವ ಕಾವ್ಯ-ಇಡಿಲ್, ಘನವಾದ ಧ್ಯೇಯ ಲೋಕವನ್ನು ಆಳಬೇಕು, ಆದರೆ ಆಳುತ್ತಿಲ್ಲವಲ್ಲ ಎಂಬ ವ್ಯಸನವನ್ನು ಚಿತ್ರಿಸುವ ಕಾವ್ಯ ಚರಮಗೀತೆ (ಎಲಿಜಿ). ಈ ಭಾವನೆ ಕವಿಗಳಿಗೂ ವಿಮರ್ಶಕರಿಗೂ ಗುರುತಾಗಿತ್ತು. ಫ್ರಾನ್ಸಿನಲ್ಲಿ ಬ್ಯಾಲೊ ಎಂಬ ಶ್ರೇಷ್ಠ ವಿಮರ್ಶಕ ಚರಮಗೀತೆಯಲ್ಲಿ ಪ್ರೇಮವೂ ಮರಣವೂ ವರ್ಣಿತವಾಗಲೇಬೇಕೆಂದು ಘೋಷಿಸಿದರೂ ಇತರ ಮೃದು ಸಂಗತಿಗಳೂ ಅಸ್ಪುಟ ದುಗುಡವೂ ಅದರೊಳಕ್ಕೆ ನುಗ್ಗಿ ಬಂದುವು.

19ನೆಯ ಶತಮಾನದಲ್ಲಿ ವಾಸ್ತವಿಕತೆ ಮತ್ತು ಸ್ವಾಭಾವಿಕತೆ ತತ್ತ್ವಗಳ ಆಧಿಪತ್ಯ ಸಾಹಿತ್ಯ ಪ್ರಪಂಚದಲ್ಲಿ ಉಂಟಾಯಿತು. ಸತ್ತವನ ಸ್ನೇಹಿತ ಅವನಿಗಾಗಿ ಮಾನವನಂತೆಯೇ ಮಾನವಿಕತೆಯ ಸಂಕಟವನ್ನು ಪ್ರಕಟಿಸುವುದು ಹೆಚ್ಚು ಪ್ರಮಾಣಿಕವಲ್ಲವೆ, ಕುರಿಗಾಹಿ, ಕೊಳಲು ಬಾಜನ, ಅಮಾನುಷ ವ್ಯಕ್ತಿಗಳು ಮುಂತಾದ ಸೋಗಿಗೆ ಏನು ಅಗತ್ಯ-ಎಂಬ ಅಭಿಪ್ರಾಯವನ್ನು ಪರಿಪಾಲಿಸುತ್ತ ಅನೇಕ ಕವಿಗಳು ಉತ್ಕಷ್ಟ ಚರಮಗೀತೆಯನ್ನು ರಚಿಸಿದರು ; ಇಂದೂ ರಚಿಸುತ್ತಿದ್ದಾರೆ. ವಿಟ್ಮನ್ ಕವಿ ಏಬ್ರಹಾಂ ಲಿಂಕನ್ನನ ಮೇಲೂ ಟೆನಿಸನ್ ಕವಿ ವೆಲಿಂಗ್ಟನ್ನ ಮೇಲೂ ಕಟ್ಟಿದ ಪ್ರಗಾಥಗಳೂ ಅಮರಕಾವ್ಯವಾಗಿವೆ. ಟೆನಿಸನ್ನನ ಇನ್ ಮೆಮೊರಿಯಂ ಪ್ರಖ್ಯಾತ ಶೋಕಗೀತಾಶತಕವೆಂದು ಪರಿಗಣಿತವಾಗಿತ್ತು. ಈಚಿನತನಕ ; ಈಗ ಅದರ ಭಾವಾತಿರೇಕ ಅನೇಕ ನಿಧನಕ್ಕಾಗಿ ಎಸ್. ಜಿ. ನರಸಿಂಹಾಚಾರ್ಯರು ಕಟ್ಟಿದ ಷಟ್ಪದಿಗಳನ್ನೂ ನಾಲ್ವಡಿ ಕೃಷ್ಣರಾಜ ಒಡೆಯರ ನಿಧನಕ್ಕಾಗಿ ಬಿ.ಎಂ. ಶ್ರೀಕಂಠಯ್ಯನವರು ಕಟ್ಟಿದ ಪ್ರಗಾಥವನ್ನೂ ನೆನಸಿಕೊಳ್ಳಬಹುದು.

ಲಕ್ಷಣಗಳು[ಬದಲಾಯಿಸಿ]

ಚರಮಗೀತೆ ಎದುರಿಸಿ ಸಮಂಜಸವಾಗಿ ಬಿಡಿಸಬೇಕಾದ ಸಮಸ್ಯೆಗಳಲ್ಲಿ ಭಾವಾತಿರೇಕ (ಸೆಂಟಿಮೆಂಟ್ಯಾಲಿಸಂ) ಒಂದು ; ಕಷ್ಟ ಸಾಧ್ಯವಾದದ್ದು. ಕಣ್ಮರೆಯಾದ ಮಹಾಶಯನ ವಿಚಾರವಾಗಿ ಅಂತ್ಯಸಂಸ್ಕಾರ ಭಾಷಣ (ಫ್ಯೂನರÀಲ್ ಆರೇಷನ್), ಮರಣ ವಾರ್ತೆ (ನೆಕ್ರೋಲಜಿ), ವಿಷಾದಗೀತೆ ಮೊದಲಾದ ಗದ್ಯ ಪದ್ಯ ವ್ಯವಹಾರ ಜಗತ್ತಿನಲ್ಲೆಲ್ಲ ವಾಡಿಕೆಯಾಗಿದೆ. ಯಾವುದೇ ಬಗೆಯ ಲೇಖನವಾಗಲಿ ಚಿಕ್ಕದಾಗಲಿ ದೊಡ್ಡದಾಗಲಿ ದೋಷಗಳನ್ನು ಮರೆಮಾಚದೆ ಗುಣಗಳನ್ನು ಅತಿಶಯಿಸದೆ ಸತ್ಯವೊಂದಕ್ಕೇ ಶರಣಾಗಿ ನಿಷ್ಟುರ ಕೃತಿಯನ್ನು ಬರೆದು ಕೃತಕೃತ್ಯನಾಗುವುದು ಸಾಧ್ಯವೆ? ಅಂಥ ಕೃತಿಯನ್ನು ಅಪೇಕ್ಷಿಸಿ ಮೆಚ್ಚುವ ಸಮಾಜ ಎಲ್ಲಿದೆ? ಸಮಾಧಿಗೀಡಾದವರ ವಿಷಯವಾಗಿ ಆಡಬೇಕಾದರೆ ಒಂದೆರಡು ಒಳ್ಳೆಯ ನುಡಿಯನ್ನೇ ಆಡಿ ಮುಗಿಸು ; ವಿರೋಧ ವೈಷಮ್ಯ ಏನಿದ್ದರೂ ವ್ಯಕ್ತಿಯ ಅಂತ್ಯದವರೆಗೆ, ಇತ್ಯಾದಿ ನಾಣ್ಣುಡಿಗಳು ಬೇರೂರಿ ನಿಂತಿವೆ. ದುಃಖವನ್ನು ಒಳಗೇ ನುಂಗಿಕೊಳ್ಳತಕ್ಕದ್ದು. ಪ್ರದರ್ಶನ ಮಾಡತಕ್ಕದ್ದಲ್ಲ. ಎಂಬುದು ಈಗಿನ ಯುಗಧರ್ಮವಾಗಿದೆ. ಪುರುಷಗೌರವ ಹೀಗಿರುವಾಗ ಒಪ್ಪತಕ್ಕ ಚರಮಗೀತೆ ಹೇಗೆ ಒಡಮೂಡಬೇಕು? ಪರಸ್ಪರ ವಿರೋಧಗಳ ನಡುವೆಯೇ ಬಾಳನ್ನು ಸಾಗಿಸುವ ಹೊಣೆಯನ್ನು ಹೊತ್ತಿರುವ ನರವರ್ಗಕ್ಕೆ ಸಮಸ್ಯೆ ಕಠಿಣವಾದರೂ ನಿವಾರಣೆಗೆ ಸಿಕ್ಕುವಂಥಾದ್ದೆ. ಉತ್ಪ್ರೇಕ್ಷೆ ವೈಪರೀತ್ಯಗಳನ್ನು ದಕ್ಷತೆಯಿಂದ ದೂರಮಾಡಿ, ಒಟ್ಟಿನಲ್ಲಿ ಸತ್ಯಚಿತ್ರಣ ಅನ್ನಿಸುವ ಸೌಹಾರ್ದಯುಕ್ತ ದುಃಖಗೀತವನ್ನು ನಿರ್ಮಿಸುವ ಸಾಮಥ್ರ್ಯ ಕವಿಗಡಣಕ್ಕೆ ಇಲ್ಲ ಎಂದರೆ ಸುಳ್ಳಾದೀತು. ಅತಿಶಯೋಕ್ತಿಯ ಕಡೆಗೆ ತಿರುಗದೆ, ನಿರ್ದಯೆಯನ್ನು ಅತ್ತ, ನೂಕಿ, ಪ್ರೀತಿ ಗೌರವ ಕೂಡಿದ ವ್ಯಕ್ತಿಚಿತ್ರಣವನ್ನು ನಿರ್ಮಿಸುವುದು ಚತುರಮತಿಯಾದ ಕವಿಗೆ ಅಸಾಧ್ಯವಲ್ಲ.

ಕೆಲವು ಕವಿಗಳು ತಮ್ಮ ಚರಮಗೀತವನ್ನು ತಾವೇ ಬರೆದಿಟ್ಟು ಹೋಗಿದ್ದಾರೆ. ಫ್ರಾಸ್ಟ್, ಪಿರಾಂಡೆಲೊ, ಸ್ವೀವನ್ಸನ್ ಮೊದಲಾದವರ ವಾಕ್ಯಗಳು ಅವರ ಋಜುತ್ವಕ್ಕೂ ವ್ಯಕ್ತಿ ವರ್ಚಸ್ಸಿಗೂ ಕನ್ನಡಿಯಂತಿವೆ ; ಇತರರಾರೂ ಬರೆಯಲಾರದಂಥ ಸಂಕ್ಷಿಪ್ತ ಜೀವನಚರಿತ್ರೆಗಳಾಗಿವೆ.

ಹೆಚ್ಚಿನ ಓದಿಗೆ[ಬದಲಾಯಿಸಿ]

  • Casey, Brian (2007). "Genres and Styles," in Funeral Music Genres: With a Stylistic/Topical Lexicon and Transcriptions for a Variety of Instrumental Ensembles. University Press, Inc.
  • Cavitch, Max (2007). American Elegy: The Poetry of Mourning from the Puritans to Whitman. University of Minnesota Press. ISBN 0-8166-4893-X.
  • Ramazani, Jahan (1994). Poetry of Mourning: The Modern Elegy from Hardy to Heaney. University of Chicago Press. ISBN 0-226-70340-1.
  • Sacks, Peter M. (1987). The English Elegy: Studies in the Genre from Spenser to Yeats. Johns Hopkins University Press. ISBN 0-8018-3471-6.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Elegy Explained at Literary Devices
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚರಮಗೀತೆ&oldid=978354" ಇಂದ ಪಡೆಯಲ್ಪಟ್ಟಿದೆ