ಚಪ್ಪಟೆ ಹುಳುಗಳು
ಚಪ್ಪಟೆ ಹುಳು ವಂಶದ ಜೀವಿಗಳು ನೀಳವಾದ, ಚಪ್ಪಟೆಯಾದ ಹಾಗೂ ಖಂಡವಿಲ್ಲದ ದೇಹರಚನೆಯನ್ನು ಹೊಂದಿರುವೆ. ಇವುಗಳನ್ನು ಚಪ್ಪಟೆ ಹುಳುಗಳೆಂದು ಕರೆಯಲಾಗುತ್ತದೆ. ಚಪ್ಪಟೆ ಹುಳುಗಳಲ್ಲಿ ಕೆಲವು ಸ್ವತಂತ್ರ ಜೀವಿಗಳು. ಇವು ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ವಾಸಿಸುತ್ತವೆ.ಉದಾ: ಪ್ಲನೇರಿಯಾ
ಇನ್ನುಳಿದ ಚಪ್ಪಟೆ ಹುಳುಗಳು ಪರಾವಲಂಬಿಗಳು. ಅವು ಕಶೇರುಕ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ.ಉದಾ: ಲಾಡಿಹುಳು ಮತ್ತು ಕಾರಲುಹುಳು
ಈ ಜೀವಿಗಳ ದೇಹಭಿತ್ತಿಯಲ್ಲಿ ೩ ಪದರಗಳಿದ್ದು ಇವು ಮುಪ್ಪದರದ ಪ್ರಾಣಿಗಳಾಗಿವೆ.ದೇಹಭಿತ್ತಿಯು' ಕ್ಯೂಟಿಕಲ್' ಎಂಬ ಪದರದಿಂದ ಆವೃತ್ತವಾಗಿದೆ. ದೇಹದ ಭಿತ್ತಿ ಸ್ನಾಯುಪದರವು ವಿಶಿಷ್ಟವಾಗಿ ಬೆಳೆದಿದೆ. ದೇಹಭಿತ್ತಿಯು ಮತ್ತು ಒಳಗಿನ ಅಂಗಗಳ ನಡುವೆ ಪ್ಯಾರೆಂಕೈಮಾ ಎಂಬ ವಿಶಿಷ್ಟ ಸಂಯೋಜಕ ಅಂಗಾಂಶವಿದೆ. ದೇಹಂತರವಕಾಶ ಇರುವುದಿಲ್ಲ. ಆದ್ದರಿಂದ ಇವುಗಳನ್ನು 'ಏಸಿಲೋಮೆಟ್' ಎಂದು ಗುರುತಿಸಲಾಗುತ್ತದೆ. ಪರಾವಲಂಬಿ ಚಪ್ಪಟೆ ಹುಳುಗಳಲ್ಲಿ ' ಕೊಕ್ಕೆಗಳು ' ಮತ್ತು ' ಹೀರು ಬಟ್ಟಲು 'ಗಳೆಂಬ ವಿಶಿಷ್ಟ ರಚನೆಗಳಿದ್ದು , ಅವು ಪೋಷಕ ಪ್ರಾಣಿಯ ದೇಹದ ಒಳಗೆ ನೆಲೆಗೊಳ್ಳಲು ಸಹಾಯಕವಾಗಿವೆ. ಹೀರು ಬಟ್ಟಲುಗಳು ಅಹಾರವನ್ನು ಹೀರಿಕೊಳ್ಳಲೂ ಸಹಾಯಕವಅಗಿವೆ. ಈ ಜೀವಿಗಳಲ್ಲಿ ಜೀರ್ಣಾಂಗವ್ಯೂಹವು ಪೂರ್ಣಗೊಂಡಿರುವುದಿಲ್ಲ. ಪೋಷಕ ಜೀವಿಯ ಮೇಲೆ ಆಹಾರಕ್ಕಾಗಿ ಅವಲಂಬಿತವಾಗಿರುವುದರಿಂದಲೂ ಮತ್ತು ಜೀರ್ಣವಾಗಿ ದೇಹಗತವಾಗಲು ಸಿದ್ಧವಿರುವ ಆಹಾರ ಇವುಗಳಿಗೆ ದೊರಕುವುದರಿಂದ ಜೀರ್ಣಾಂಗವ್ಯೂಹದಲ್ಲಿ ಪಚನ ಗ್ರಂಥಿಗಳು ಕಂಡುಬರುವುದಿಲ್ಲ.