ವಿಷಯಕ್ಕೆ ಹೋಗು

ಚಂದ್ರಗಿರಿಯ ಚಂದ್ರನಾಥ ಸ್ವಾಮಿ ಬಸದಿ, ಹಾಡುವಳ್ಳಿ

ನಿರ್ದೇಶಾಂಕಗಳು: 14°01′53.0″N 74°38′07.2″E / 14.031389°N 74.635333°E / 14.031389; 74.635333
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದ್ರಗಿರಿಯ ಚಂದ್ರನಾಥ ಸ್ವಾಮಿ ಬಸದಿ, ಹಾಡುವಳ್ಳಿ
ಚಂದ್ರನಾಥ ಸ್ವಾಮಿ ಬಸದಿ, ಹಾಡುವಳ್ಳಿ
ಧರ್ಮ ಮತ್ತು ಸಂಪ್ರದಾಯ
ಧರ್ಮJainism
ಅಧಿ ನಾಯಕ/ದೇವರುಆದಿನಾಥ
ಸ್ಥಳ
ಸ್ಥಳಹಾಡುವಳ್ಳಿ, ಉತ್ತರ ಕನ್ನಡ, ಕರ್ನಾಟಕ
Geographic coordinates14°01′53.0″N 74°38′07.2″E / 14.031389°N 74.635333°E / 14.031389; 74.635333
ವಾಸ್ತುಶಿಲ್ಪ
ಸ್ಥಾಪನೆ೧೪ನೇ ಶತಮಾನ

ಚಂದ್ರಗಿರಿಯ ಶ್ರೀ ಚಂದ್ರನಾಥ ಸ್ವಾಮಿ ಬಸದಿಯು ಕರ್ನಾಟಕದ ಬಸದಿಗಳಲ್ಲಿ ಒಂದು.

ಹಾಡುವಳ್ಳಿಯ ಬಸದಿ ಸಮುಚ್ಛಯದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಚಂದ್ರಗಿರಿ ಬೆಟ್ಟದ ಮೇಲಿದೆ. ಈಗ ಸುತ್ತಲೂ ಕಾಡಿನ ಗಿಡಮರಗಳಿಂದ ಆವೃತವಾಗಿದೆ. ಆದರೆ ಅಲ್ಲಿಯವರೆಗೆ ಮಣ್ಣಿನ ಮಾರ್ಗವನ್ನು ನಿರ್ಮಿಸಿದ್ದಾರೆ.

ಇತಿಹಾಸ

[ಬದಲಾಯಿಸಿ]

ಬಸದಿ ಕಟ್ಟಡದ ಬಲಬದಿಗೆ ಒಂದು ಬೃಹತ್ ಶಿಲಾಶಾಸನವಿದೆ. ಇದನ್ನು ಓದಿದರೆ ಇದರ ಹಿನ್ನೆಲೆ ಇತಿಹಾಸಗಳು ತಿಳಿದು ಬರಬಹುದು. ದೇವಾಲಯದಲ್ಲಿ ವಿಜಯನಗರ ಶೈಲಿಯ ಆಕೃತಿಗಳಿರುವುದರಿಂದ ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ದೇವಾಲಯ ಎಂಬ ನಂಬಿಕೆಯಿದೆ. []

ದೂರದಿಂದಲೇ ತನ್ನ ಪೂರ್ಣ ಕಪ್ಪು ಶಿಲೆಯ ಅಲಂಕೃತ ಕಂಬಗಳಿಂದ ನಮ್ಮನ್ನು ಈ ಬಸದಿ ಆಕರ್ಷಿಸುತ್ತದೆ. ಇದು ದೀರ್ಘ ಆಯತಾಕಾರದಲ್ಲಿ ನಿರ್ಮಾಣಗೊಂಡಿದೆ. ಹಿಂದಿನ ಕಾಲದಲ್ಲಿ ಬಹಳ ಆಕರ್ಷಣೆಯನ್ನು ಹೊಂದಿತ್ತು. ಈಗ ಬಳಿಯಲ್ಲಿ ಒಂದು ಆಧುನಿಕ ಚಿಕ್ಕ ಅತಿಥಿಗೃಹವನ್ನು ಹೊಂದಿದೆ. ಶಿಲ್ಪಕಲಾಕೃತಿಗಳನ್ನು ಹೊಂದಿರುವ ವಿಜಯನಗರ ಶೈಲಿಯ ಎದುರಿನ ಎರಡು ಅಲಂಕೃತ ಪ್ರಬಲ ಕಂಬಗಳು ನಮ್ಮನ್ನು ಸ್ವಾಗತಿಸುತ್ತವೆ. ತಗ್ಗಾಗಿರುವ ಎದುರಿನ ಪ್ರಥಮ ಸೋಪಾನಗಳನ್ನು ಏರಿದೊಡನೆ ನಮಗೆ ಕಂಡುಬರುವುದು ಈ ಮುಖಮಂಟಪ. ಇಲ್ಲಿರುವ ಮೆಟ್ಟಿಲುಗಳಿಗೆ ತಾಗಿಕೊಂಡಿರುವ ಪ್ರಾರ್ಥನಾ ಮಂಟಪ ಹಾಗೂ ಅದರ ಬಾಗಿಲು ವಾಡದಲ್ಲಿ ಚಾಮರಧಾರಿಗಳಾಗಿ ನಿಂತಿರುವ ಸ್ತ್ರೀ ದ್ವಾರಪಾಲಕರು. ಇಲ್ಲಿಂದ ಸುತ್ತಲ ಪ್ರಕೃತಿಯನ್ನು ನೋಡುವುದು ಒಂದು ವಿಶೇಷ ಅನುಭವವನ್ನು ತಂದುಕೊಡುತ್ತದೆ.[]

ಸಧ್ಯದ ಸ್ಥಿತಿ

[ಬದಲಾಯಿಸಿ]

ಪ್ರಾರ್ಥನಾ ಮಂಟಪದಲ್ಲಿ ವಿಜಯನಗರ ಶೈಲಿಯ ನಾಲ್ಕು ಕಂಬಗಳು ಒಂದು ಮಂಟಪವನ್ನು ರೂಪಿಸಿವೆ. ಆದರೆ ಕಂಬಗಳು ತಮ್ಮ ಸಮತೋಲನವನ್ನು ಕಳೆದುಕೊಂಡಿದೆ. ನೆಲವು ಏರು ತಗ್ಗಿನಿಂದ ಕೂಡಿದೆ. ಮುಚ್ಚಿಗೆಯಲ್ಲಿ ಅಧೋಮುಖ ಕಮಲಗಳಿವೆ. ಆದರೆ ಮೇಲ್ಗಡೆಯಿಂದ ಒಳಕ್ಕೆ ಹರಿದುಬರುವ ಮಳೆನೀರು ಈ ಮಂಟಪದ ಅಂದವನ್ನು ಕೆಡಿಸಿದೆ. ಇಲ್ಲಿಂದ ಮುಂದುವರಿದಾಗ ಅಸ್ಪಷ್ಟ ದ್ವಾರಪಾಲಕರಿರುವ ನವರಂಗ ಮಂಟಪಕ್ಕೆ ನಾವು ಹೋಗುತ್ತೇವೆ. ಇಲ್ಲಿಯೂ ನಾಲ್ಕು ಶಿಲಾಸ್ತಂಭಗಳ ಮಂಟಪವಿದೆ. ಇದನ್ನು ದಾಟಿ ಮುಂದುವರಿದಾಗ ಸಿಗುವುದೇ ಗರ್ಭಗೃಹ. ಗರ್ಭಗೃಹ ಸಹಿತವಾಗಿ ನವರಂಗ ಮಂಟಪ ಸೇರಿ ಒಟ್ಟಾಗಿರುವ ಪ್ರದಕ್ಷಿಣಾಪಥವಿದೆ ಇದರ ಪ್ರಾರಂಭದಲ್ಲಿ ಎರಡು ಮಂಗಗಳು ಮಲಗಿಕೊಂಡು ನಮ್ಮಕಡೆ ನೋಡುತ್ತಿರುವಂತಹ ಎರಡು ಶಿಲಾಕೃತಿಗಳಿವೆ. ಇದರ ಸರಿಯಾಗಿ ವಿರುದ್ಧ ದಿಕ್ಕಿಗೆ ಎಡಬದಿಯಲ್ಲಿ ಅಶ್ವಾರೂಢನಾಗಿ ಒಂದು ಕೈಯಲ್ಲಿ ಗಧೆಯೊಂದನ್ನು ಮೇಲಕ್ಕೆ ಹಿಡಿದು ಧಾವಿಸುತ್ತಿರುವ ಭಂಗಿಯ ಬ್ರಹ್ಮದೇವರ ಶಿಲಾ ಬಿಂಬವಿದೆ. ಅಲ್ಲಿ ಕೆಲವು ಶಿಲಾ ಖಂಡಗಳಿವೆ ಇದನ್ನು ಪ್ರಾಯಶಃ ಕ್ಷೇತ್ರಪಾಲನನ್ನಾಗಿ ಗಣಿಸಿರಬಹುದು. ಬಸದಿಯ ಸುತ್ತಲೂ ಮೂರು ಕಲ್ಲಿನಿಂದ ಪ್ರಕಾರಗೋಡೆಯನ್ನು ನಿರ್ಮಿಸಿ ಇದನ್ನು ರಕ್ಷಿಸಲಾಗಿದೆ. ಬಸದಿಯ ಮೇಲಿನ ಶಿಲಾಫಲಕಗಳು ಸಮತಟ್ಟದ ಮಾಡು ಏರಿಳಿತದ ಸ್ಥಿಯಲ್ಲಿ ಇದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ ಪರಿಣಾಮವಾಗಿ ಅಲ್ಲಿ ಕಾಡಿನ ಹುಲ್ಲು ಬೆಳೆದಿದೆ. ಈ ಬಸದಿಯ ನಿರ್ಮಾಣವು ಬಹಳ ಕಲಾತ್ಮಕವಾಗಿ ಇದ್ದರೂ ಈಗಿನ ಸ್ಥಿತಿ ಏನೂ ಚೆನ್ನಾಗಿಲ್ಲ. ಇದು ಪತನದ ದಾರಿಯನ್ನು ಹಿಡಿದಿದೆ. ಗರ್ಭಗೃಹದ ಹೊರಗಿನ ಭಾಗ ಪ್ರದಕ್ಷಿಣಾಪಥವನ್ನು ರೂಪಿಸಿದೆ. ಇಲ್ಲಿರುವ ಶಿಲಾಸ್ತಂಭಗಳು ಇದನ್ನು ಜೋಡಿಸಿ ಮೇಲಿನ ಮಾಡಿನ ಇಳಿಜಾರನ್ನು ಆಧರಿಸಿಕೊಂಡಿದೆ. ಒಟ್ಟಿನಲ್ಲಿ ಈ ಮಂದಿರ ಇದರ ರಚನೆ ಹಾಗೂ ಪ್ರಾಚೀನ ಶಿಲಾಶೃಂಗಾರದಿಂದ ಸಂದರ್ಶನೀಯಾವಾಗಿದೆ.

ವಿಶೇಷತೆ

[ಬದಲಾಯಿಸಿ]

ಗರ್ಭಗೃಹದ ಮೇಲ್ಗಡೆ ಗರ್ಭಗೃಹದಂತಹ ಒಂದು ಅಪರೂಪದ ಚಿಕ್ಕ ಕೋಣೆ ಇದೆ. ದೂರದಿಂದ ನೋಡುವಾಗ ಇದು ಮೇಗಿನ ಮನೆಯಂತೆ ಕಂಡುಬಂದರೂ ಇದರೊಳಗೆ ಯಾವುದೇ ಜಿನಬಿಂಬಗಳಿಲ್ಲ. ಪ್ರಾಚೀನ ಕಾಲದ ಸುಂದರ ಶಿಲಾಕ್ರತಿಗಳು ಕಣ್ಮನ ಸೆಳೆಯುತ್ತದೆ.

ಧಾರ್ಮಿಕ ಕಾರ್ಯಗಳು

[ಬದಲಾಯಿಸಿ]

ಬಸದಿಯ ಒಳಗಡೆ ಯಾವುದೇ ಮೂರ್ತಿಗಳಿಲ್ಲ. ಮೂಲನಾಯಕನ ಬಿಂಬದ ಪೀಠ ಮಾತ್ರವಿದ್ದು ಪದ್ಮಾವತಿ ದೇವಿಯ ಬಿಂಬವಿಲ್ಲ. ಆದುದರಿಂದ ಇಲ್ಲಿ ಯಾವುದೇ ಪೂಜೆ-ಪುನಸ್ಕಾರಾದಿಗಳು ನೆಡೆಯುವುದಿಲ್ಲ. ಬಸದಿ ಕೇವಲ ಒಂದು ಕಲಾತ್ಮಕ ಕರಂಡಕದಂತೆ ಕಂಡುಬರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.
  2. https://www.deccanherald.com/content/475635/jain-heritage-haduvalli.html