ವಿಷಯಕ್ಕೆ ಹೋಗು

ಗ್ವಾನಿಡೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆಂಡು ಹಾಗೂ ಕೋಲಿನ ಮಾದರಿ
ರೆಸೊನೆನ್ಸ್ ಹೈಬ್ರಿಡ್
ಕೆನೋನಿಕಲ್ ಮಾದರಿ

ಗ್ವಾನೀನ್ನಿಂದ ಉತ್ಪಾದಿಸಿದ ಒಂದು ಜೈವಿಕ ವಸ್ತು. ಇದರ ರಾಸಾಯನಿಕ ರಚನೆ HNC(NH2)2. [೧]

ಪಡೆಯುವ ವಿಧಾನಗಳು[ಬದಲಾಯಿಸಿ]

ಆರ್ಜಿನೀನ್ ಎಂಬ ಅಮೈನೋ ಆಮ್ಲವನ್ನು ಪೊಟಾಸಿಯಮ್ ಪಮಾರ್ಯ್ಂಗನೇಟ್‍ನಿಂದ ಉತ್ಕರ್ಷಿಸಿದಾಗ ಅದರಿಂದಲೂ ಗ್ವಾನಿಡೀನ್ ದೊರಕುತ್ತದೆ. ಸಾಮಾನ್ಯವಾಗಿ ಅಮೋನಿಯಮ್ ಥಯೊಸಯನೇಟ್‍ಅನ್ನು 180-190°C ಉಷ್ಣತೆಗೆ ಒಳಪಡಿಸಿ ಗ್ವಾನಿಡೀನನ್ನು ಪ್ರಯೋಗಾಲಯದಲ್ಲಿ ಪಡೆಯಬಹುದು. ಇದೊಂದು ವರ್ಣರಹಿತ ಹರಳು. ವಾತಾವರಣದಿಂದ ದ್ರವಾಂಶವನ್ನು ಹೀರಿ ದ್ರವಿಸುತ್ತದೆ. ಪ್ರತ್ಯಾಮ್ಲೀಯ ಸ್ವಭಾವದ್ದಾದ್ದರಿಂದ ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡನ್ನು ಕೂಡ ಹೀರಿಕೊಳ್ಳಬಲ್ಲದು. ಬೋರಿಕ್ ಮತ್ತು ಸಿಲಿಸಿಕ್ ಆಮ್ಲಗಳೊಡನೆ ಸೇರಿ ಸ್ಥಿರಲವಣಗಳನ್ನು ಕೊಡುತ್ತದೆ. ನೈಸರ್ಗಿಕವಾಗಿ ಹಲವಾರು ಸಸ್ಯಗಳಲ್ಲೂ ಪ್ರಾಣಿಗಳಲ್ಲೂ ಗ್ವಾನಿಡೀನ್ ಅಲ್ಪ ಗಾತ್ರದಲ್ಲಿರುವುದು ಕಂಡುಬಂದಿದೆ. ಗ್ವಾನಿಡೀನಿನಿಂದ ಉತ್ಪನ್ನವಾಗಬಲ್ಲ ವಸ್ತುಗಳಲ್ಲಿ ನೈಟ್ರೊಗ್ವಾನಿಡೀನ್ ಪ್ರಮುಖವಾದದ್ದು. ಅಮೈನೋ ಗ್ವಾನಿಡೀನ್ ಅನೇಕ ರೀತಿಯ ಬಣ್ಣಗಳ ಉತ್ಪಾದನೆಯಲ್ಲಿ ಉಪಯೋಗವಾಗುತ್ತದೆ.

ಔಷಧೀಯ ಕ್ಷೇತ್ರದಲ್ಲಿ ಉಪಯೋಗ[ಬದಲಾಯಿಸಿ]

ಡೆಕಮಿಥಿಲಿನ್ ಗ್ವಾನಿಡೀನ್ ಟ್ರಿಪಾನೋಸೋಮದಿಂದ ಬರುವ ನಿದ್ರಾರೋಗಕ್ಕೆ ಮದ್ದು. ಕ್ಲೋರೊಗ್ವಾನಿಡೀನ್ ಹೈಡ್ರೊಕ್ಲೋರೈಡನ್ನು ಮಲೇರಿಯ ರೋಗಚಿಕಿತ್ಸೆಗೆ ಬಳಸಲಾಗುತ್ತದೆ. ಸಲ್ಫಗ್ವಾನಿಡೀನ್ ನೀರಿನಲ್ಲಿ ವಿಲೀನವಾಗದ ಒಂದು ಮದ್ದು. ಇದನ್ನು ಸೇವಿಸಿದಾಗ ಕರುಳಿನಿಂದ ರಕ್ತಗತವಾಗದೆ ಬಹುಕಾಲಿಕವಾಗಿ ಅಲ್ಲೇ ಇರುತ್ತದೆ. ಆದ್ದರಿಂದ ರೋಗಾಣುಕೃತ ಆಮಶಂಕೆಗೆ (ಬ್ಯಾಸಿಲರಿ ಡಿಸೆಂಟರಿ) ಇದು ತಕ್ಕ ಮದ್ದು. ಗ್ವಾನಿಡೀನಿನ ಸಂಬಂಧವಾದ ಎರಡು ಅಮೈನೋ ಆಮ್ಲ್ಲಗಳು ದೇಹಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೊದಲನೆಯದು ಮೇಲೆ ಹೇಳಿದ ಆರ್ಜಿನೀನ್ (1-ಅಮೈನೋ-4ಗ್ವಾನಿಡೋ ವೆಲೇರಿಕ್ ಆಮ್ಲ). ಇದು ಪ್ರೋಟೀನುಗಳಲ್ಲಿ ಸಾಮಾನ್ಯವಾಗಿ ಇರುವ ಒಂದು ಘಟಕವಸ್ತು. ಸಸ್ತನಿಗಳ ದೇಹದಲ್ಲಿ ಪ್ರೋಟೀನುಗಳ ಚಯಾಪಚಯ ಕ್ರಿಯೆಯಿಂದ ನಿರಂತರವೂ ಉತ್ಪತ್ತಿಯಾಗುತ್ತಿರುವ ಅಮೋನಿಯ ದೇಹದಲ್ಲಿ ಇರುವ ಆರ್ನಿಥಿನ್ ಎಂಬ ಅಮೈನೋ ಆಮ್ಲದೊಡನೆ ಸೇರಿ ಕೊನೆಗೆ ಆರ್ಜಿನೀನ್ ಲಭಿಸುತ್ತದೆ. ಆಹಾರದ ಅಥವಾ ಹೊಸದಾಗಿ ಹೀಗೆ ಉತ್ಪಾದಿತವಾದ ಆರ್ಜನೀನ್ ವಿಶ್ಲೇಷಗೊಂಡು ಯೂರಿಯ ಮತ್ತು ಆರ್ನಿಥಿನ್ ಆಗುತ್ತವೆ. ಯೂರಿಯಾ ರಕ್ತಗತವಾಗಿ ಮುಂದೆ ಮೂತ್ರಪಿಂಡದಿಂದ ಮೂತ್ರರೂಪದಲ್ಲಿ ವಿಸರ್ಜಿತವಾಗುತ್ತದೆ. ಆರ್ನಿಥಿನ್ ಪುನಃ ಅಮೋನಿಯದೊಡನೆ ಸಂಯುಕ್ತವಾಗಿ ಆರ್ಜಿನೀನ್ ಆಗುತ್ತದೆ. ಹೀಗೆ ಚಕ್ರಾಕಾರವಾಗಿ ಪುನಃ ಪುನಃ ಅಮೋನಿಯದಿಂದ ಯೂರಿಯ ಉತ್ಪತ್ತಿಯಾಗಲು ಆರ್ಜಿನೀನ್ ಒಂದು ಘಟಕವಾಗಿರುವುದು ಅವಶ್ಯವಾಗಿದೆ. ಸಸ್ತನಿಗಳಲ್ಲಿ ಪ್ರೋಟೀನುಗಳ ಸಾರಜನಕ ವಿಸರ್ಜಿತವಾಗುವುದು ಹೀಗೆಯೇ- ಅಂದರೆ ಆರ್ಜಿನೀನ್ ಮೂಲಕ ಯೂರಿಯ ಆಗಿ. ಈ ರೀತಿಯ ತಯಾರಿಕೆಗೆ ಕ್ರೆಬ್ಸನ ಯೂರಿಯ ಚಕ್ರವೆಂದು ಹೆಸರು.

ಉಲ್ಲೇಖ[ಬದಲಾಯಿಸಿ]

  1. PubChem Compound. USA: National Center for Biotechnology Information. 16 September 2004. Identification. Retrieved 29 February 2012.