ಗ್ರಾಮ ಪಂಚಾಯತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಾಮ ಪಂಚಾಯತಿಯು ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆ. ಪೌರಸ್ತ್ಯ ದೇಶಗಳದು ಗ್ರಾಮೀಣ ಸಂಸ್ಕøತಿ, ಪಾಶ್ಚಾತ್ಯ ದೇಶಗಳದು ನಾಗರಿಕ ಸಂಸ್ಕøತಿ ಎಂಬ ಮಾತಿನಲ್ಲಿ ವಿಶೇಷ ಅರ್ಥವಿದೆ. ಭಾರತ, ಚೀನ ಮುಂತಾದ ಪೌರಸ್ತ್ಯ ದೇಶಗಳಲ್ಲಿ ನೂರಕ್ಕೆ ಸು. ಎಂಬತ್ತು ಜನ ಗ್ರಾಮಗಳಲ್ಲಿ ವಾಸಿಸುತ್ತಾರೆ. ಮನುಷ್ಯ ವನ್ಯಜೀವನದಿಂದ ಬೇರೆಯಾಗಿ ಸಂಘಜೀವಿಯಾಗಿ ಬಾಳಲು ಪ್ರಾರಂಭಿಸಿದ ಕಾಲದಲ್ಲಿ ಉದಿಸಿದ ಸಾಮಾಜಿಕ ಸಂಘಟನೆಯ ಪ್ರಥಮ ಘಟಕಗಳಾದ ಗ್ರಾಮಗಳು ಸಂಪರ್ಕಾನುಕೂಲವಿಲ್ಲದ ಕಾಲದಲ್ಲಿ ಸ್ವಾವಲಂಬನ ಅಗತ್ಯವೂ ಅನಿವಾರ್ಯವೂ ಆಗಿಈ ಗ್ರಾಮಘಟಕಗಳು ಸ್ವತಂತ್ರವಾಗಿ ಬೆಳೆದು ಬಂದುವು. ಗ್ರಾಮದ ಅಗತ್ಯಗಳನ್ನು ಪೂರೈಸುವ ಬಡಿಗ (ರಥಕಾರ), ಕಂಬಾರ, ಕುಂಬಾರ, ಹಜಾಮ, ಅಗಸ, ಅಂಬಿಗ, ಪುರೋಹಿತ, ಶಿಕ್ಷಕ, ಕಾವಲುಗಾರ, ವೈದ್ಯ, ಪಟವಾರಿ, ಗಾಣಿಗ ಮೊದಲಾದವರು ಗ್ರಾಮದ ಪ್ರಧಾನ ಕುಲವಾದ ಕೃಷಿಕ ವರ್ಗದ ಆಶ್ರಿತರೂ ಸಹಾಯಕರೂ ಆಗಿ ಗ್ರಾಮಜೀವನದ ಅಂಗವಾಗಿ ಬೆಳೆದು ಬಂದರು.

ವೈದಿಕ ಕಾಲದಲ್ಲೂ ರಥಕಾರ ಮುಂತಾದವರ ಪ್ರಾಮುಖ್ಯದ ಉಲ್ಲೇಖ ಸಿಗುತ್ತದೆ. ರಾಜಸತ್ತೆಗೆ ಅಧೀನವಾಗಿ ಅನೇಕ ಸಲ ಈ ಗ್ರಾಮಗಳಿದ್ದರೂ ಆಂತರಿಕ ಆಡಳಿತದಲ್ಲಿ ಇವು ಸ್ವಾಯತ್ತ ಘಟಕಗಳೇ ಆಗಿದ್ದುದಕ್ಕೆ ಆಧಾರ ಸಿಗುತ್ತದೆ. ಉತ್ತರದಲ್ಲಿ ಆರ್ಯರ ಗ್ರಾಮರಾಜ್ಯಗಳು, ಜಾನಪದಗಳು ಇದ್ದಂತೆ ದಕ್ಷಿಣ ಭಾರತದಲ್ಲಿ ಚೋಳ, ಪಾಂಡ್ಯ, ಕರ್ನಾಟಕ ಪ್ರದೇಶಗಳಲ್ಲಿ ದ್ರಾವಿಡಮೂಲದ ಗ್ರಾಮರಾಜ್ಯದ ವ್ಯವಸ್ಥೆ ಇದ್ದುದು ಕೆಲವು ದಾಖಲೆಗಳಿಂದ ತಿಳಿದುಬರುತ್ತದೆ.

ಪ್ರಾಚೀನ ಕಾಲದಿಂದಲೂ ಗ್ರಾಮಸಭೆ ಶಾಸನ ವ್ಯವಸ್ಥೆಯಲ್ಲಿ ಬಹಳ ಮಹತ್ತ್ವವುಂಟು. ಪ್ರಬುದ್ಧರಾದ ಸದ್ಗøಹಸ್ಥರೆಲ್ಲ ಗ್ರಾಮಸಭೆಯ ಸದಸ್ಯರಾಗಿರುತ್ತಿದ್ದರು. ಈ ಸಭೆಯ ಪ್ರಮುಖನಿಗೆ ಗ್ರಾಮಣಿ ಎಂಬ ಹೆಸರಿರುತ್ತಿತ್ತು. ಗ್ರಾಮಸಭೆಯಿಂದ ಆರಿಸಲ್ಪಟ್ಟ ಚಿಕ್ಕದೊಂದು ಕಾರ್ಯಕಾರಿ ಸಮಿತಿ ಗ್ರಾಮದ ಕಾರ್ಯಭಾರವನ್ನೆಲ್ಲ ನಡೆಸುತ್ತಿತ್ತು. ಈ ಸಮಿತಿಯಲ್ಲಿ ಸಾಮಾನ್ಯವಾಗಿ ಐದು ಜನ ಸದಸ್ಯರಿರುತ್ತಿದ್ದ ಕಾರಣ ಇದಕ್ಕೆ ಪಂಚಾಯತಿ ಎಂಬ ಹೆಸರು ಬಂದಿದೆ. ಪ್ರತಿಯೊಂದು ಗ್ರಾಮಕ್ಕೆ ಪ್ರತ್ಯೇಕವಾದ ಗ್ರಾಮಸಭೆ ಮತ್ತು ಗ್ರಾಮ ಪಂಚಾಯತಿ ಇರುತ್ತಿದ್ದವು. ಇದೊಂದು ಸ್ವಯಂಪೂರ್ಣವಾದ ಶಾಸನ ವ್ಯವಸ್ಥೆಯಾಗಿತ್ತು.

ಸಮಾನೋಮಂತ್ರಃ ಸಮಿತಿಃ ಸಮಾನೋ (ಋಗ್ವೇದ), ಧ್ರುವಾಯತೇ ಸಮಿತಿಃ ಕಲ್ಪಿತಮಿಹ (ಅಥರ್ವಣವೇದ) ಈ ಮಂತ್ರಗಳಲ್ಲಿ ಬರುವ ಸಮಿತಿ ಶಬ್ದವನ್ನು ಗಮನಿಸಬಹುದು. ಸಮಿತಿ = ಸಮ್ ಇತಿ. ಒಂದೆಡೆ ಸೇರುವುದು - ಎಂದು ಇದರ ಅರ್ಥ. ಸಮಿತಿಗಳಲ್ಲಿ ಅನೇಕ ಸಲ ರಾಜನೂ ಭಾಗವಹಿಸುತ್ತಿದ್ದನೆಂದು ಗೊತ್ತಾಗುತ್ತದೆ. (ರಾಜಾನಃ ಸಮಿತಾವಿವ). ಸಮಿತಿಗಳಲ್ಲಿ ಮಾತನಾಡುವ ರೀತಿ, ಸಭ್ಯತೆ ಇವುಗಳ ಬಗ್ಗೆಯೂ ಅಥರ್ವಣವೇದದಲ್ಲಿ ಉಲ್ಲೇಖವಿದೆ ; ಮನೋರಂಜಕವಾಗಿ ಮಾತನಾಡಬೇಕು (ಏ ಸಂಗ್ರಾಮಾಃ ಸಮಿತಯಃ ತೇಷು ಚಾರುವದೇಮತೆ) ಎಂಬ ನಿಯಮವಿತ್ತು. ಸಭಾಗೌರವಕ್ಕೆ ಮಹತ್ತ್ವವಿತ್ತು.

ಋಗ್ವೇದದ ಕೊನೆಯ ಕಾಲದಲ್ಲಿ ಸಮಿತಿ ರೂಪುಗೊಂಡಿರಬೇಕೆಂದು ಹೇಳಲಾಗಿದೆ. ಸಾಮ್ರಾಜ್ಯ ಪದ್ಧತಿ ಬೆಳೆದಂತೆ ಸಮಿತಿಗಳು ಮಾಯವಾಗುತ್ತ ಬಂದು ಬೇರೆ ಸಂಸ್ಥೆಗಳು ಬೆಳೆದುಕೊಂಡವು. ವೇದೋತ್ತರ ಕಾಲದಲ್ಲಿ ಸಭಾ ಎಂಬ ಸಂಸ್ಥೆಗೆ ಪ್ರಾಮುಖ್ಯ ಬಂತು. ಸಭೆ ಸಮಿತಿಗಳು ನಮ್ಮನ್ನು ರಕ್ಷಿಸಲಿ (ಸಭಾಚ ಮಾಂ ಸಮಿತಿಶ್ಚ ಅವತಾಂ) ಎಂಬುದು ಒಂದು ಪ್ರಾರ್ಥನೆ. ಸಭಾಸದರೆಲ್ಲ ನನ್ನೊಂದಿಗೆ ಒಳ್ಳೆಯ ಮಾತನಾಡಲಿ (ಯೇತೆಕೈಚ ಸಭಾಸದಸ್ತೇ ಮೇ ಸಂತು ಸವಚಸಃ) ಎಂದು ಇನ್ನೊಂದು ಪ್ರಾರ್ಥನೆ ಇದೆ. ಸಹಧರ್ಮಿಗಳಿಂದ, ಸಜ್ಜನರಿಂದ ಕೂಡಿದ್ದೇ ಸಭಾ ಎಂಬುದು ಪಾರಸ್ಕರ ಗೃಹ್ಯಸೂತ್ರದ ವ್ಯಾಖ್ಯೆ, ಸಮಿತಿ, ಸಭೆ, ಸೇನಾ - ಇವೆಲ್ಲ ವಿದಥ ಎಂಬ ಮೂಲ ಜನಸಂಖ್ಯೆಯ ಶಾಖೆಗಳು, ಕಾರ್ಯವ್ಯತ್ಯಾಸದಿಂದ ಬೇರೆಯಾಗಿ ಬೆಳೆದಿರಬಹುದು ಎಂದು ಜಯಸ್ವಾಲ್ ಹೇಳುತ್ತಾರೆ.

ವೇದಕಾಲದ ಸ್ವತಂತ್ರ, ಸ್ವಾಯತ್ತ ಗ್ರಾಮಸಂಸ್ಥೆಗಳು ಕರಗಿಹೋಗಿ ಸಾಮ್ರಾಜ್ಯಗಳು ಉದಿಸಿ ಮತ್ತೆ ಅವೂ ಜನಪ್ರಿಯತೆಯನ್ನು ಕಳೆದುಕೊಂಡು ಚಿಕ್ಕ ಚಿಕ್ಕ ಗಣರಾಜ್ಯಗಳು ಮತ್ತೆ ಪ್ರಜಾಸತ್ತಾತ್ಮಕ ಪದ್ಧತಿಯ ಮೇಲೆ ರೂಪುಗೊಂಡು ಗ್ರಾಮ ಗಣರಾಜ್ಯಗಳಾಗಿ ಬೆಳೆದುದನ್ನು ಭಾರತದ ಇತಿಹಾಸದಲ್ಲಿ ಬುದ್ಧನ ಕಾಲದ ಹೊತ್ತಿಗೆ ಕಾಣಬಹುದು (ಕೇಚಿದ್ದೇಶಾಃ ಗಣಾಧೀನಾಃ ಕೇಚಿದ್ದೇಶಾಃ ರಾಜಾಧೀನಾ ಇತಿ). ಈ ಗಣ ಅಥವಾ ಸಂಘದಲ್ಲಿ ಚುನಾವಣೆ ನಡೆಯುತ್ತಿತ್ತು. ಮತದಾನವಾಗುತ್ತಿತ್ತು. ಮತಕ್ಕೆ ಶಲಾಕಾ ಎಂದು ಹೆಸರಿತ್ತು. ಚುನಾವಣಾಧಿಕಾರಿಗೆ ಗಣಪೂರಕ ಎಂದು ಕರೆಯಲಾಗುತ್ತಿತ್ತು.

ಈ ಮೊದಲು ವಿವರಿಸಿದ ಸಮಿತಿ, ಗಣಗಳು ಪ್ರಧಾನವಾಗಿ ರಾಜಕೀಯ, ಆರ್ಥಿಕ, ವ್ಯವಸ್ಥೆಯ ಹೊಣೆಗಾರಿಕೆಯನ್ನು ಹೊರುವ ಸಂಸ್ಥೆಗಳಾದರೂ ಮತ, ಧರ್ಮ, ಮತ್ತು ಜಾತಿ ಕುರಿತ ವಿವಾದಗಳನ್ನು ಬಗೆಹರಿಸುವಲ್ಲಿಯೂ ಈ ಸಂಸ್ಥೆಗಳನ್ನಾಶ್ರಯಿಸಲಾಗುತ್ತಿತ್ತು. ಕಾಲಕ್ರಮದಲ್ಲಿ ಈ ಸಂಸ್ಥೆಗಳು ರಾಜಕೀಯ ಮತ್ತು ಆರ್ಥಿಕ ಅಧಿಕಾರಗಳನ್ನು ಕಳೆದುಕೊಂಡರೂ ಜನರು ಮತೀಯ ಹಾಗೂ ಜಾತೀಯ ವಿಷಯಗಳಲ್ಲಿ ಇಂಥ ಸಂಸ್ಥೆಗಳ ಉಪಯುಕ್ತತೆಯನ್ನು ಕಂಡುಕೊಂಡು ಅವನ್ನು ಪೋಷಿಸುತ್ತ ಬಂದರು. ತತ್ಪರಿಣಾಮವಾಗಿಯೇ ಅನೇಕ ಜಾತಿಗಳಲ್ಲಿ ಜಾತಿಪಂಚಾಯತಿಗಳು ಆಯಾಯಾ ಗ್ರಾಮಗಳಿಗೊಂದರಂತೆಯೇ ಹಲವು ಗ್ರಾಮಗಳಿಗೊಂದರಂತೆಯೇ ಬೆಳೆದು ಬಂದುದನ್ನು ಗಮನಿಸಬಹುದು. ವಿವಿಧ ಜಾತಿಗಳ ಜನವರ್ಗಗಳಲ್ಲಿ ತಲೆದೋರುವ ಅಂತಃಕಲಹಗಳನ್ನೂ ಕೊಲೆ, ಸುಲಿಗೆ, ವ್ಯಭಿಚಾರಗಳಂಥ ಗಂಭೀರ ಅಪರಾಧಗಳಿಂದ ಉಂಟಾಗುವ ಜಗಳಗಳನ್ನೂ ಬಗೆಹರಿಸುವಲ್ಲಿ ರಾಜಸತ್ತೆಗಿಂತಲೂ ಈ ಜಾತಿ ಪಂಚಾಯತಿಗಳು ಹೆಚ್ಚು ಪರಿಣಾಮಕಾರಿಯೆಂದು ಅನೇಕ ಸಾರಿ ಎನಿಸಿದೆ. ಪಂಚರಿಗೆ ಪಂಚಪರಮೇಶ್ವರ ಎಂಬ ಗೌರವವಿತ್ತು.

ಅಶೋಕ, ಚಂದ್ರಗುಪ್ತರಿಂದಾರಂಭಿಸಿ, ಅಕ್ಬರ್, ಕೃಷ್ಣದೇವರಾಯ, ಶಿವಾಜಿಗಳವರೆಗೂ ಸಮ್ರಾಟರು ಪ್ರಜಾಸತ್ತಾತ್ಮಕ ಸೂತ್ರಾಧಾರಿತವಾಗಿ ಬೆಲೆದು ಬಂದ ಸಮಿತಿ, ಸಭಾ, ಗಣ, ಸಂಘ, ಗ್ರಾಮ ಪಂಚಾಯತಿ, ಜಾತಿ ಪಂಚಾಯತಿಗಳ ಆಂತರಿಕ ವ್ಯವಸ್ಥೆಯನ್ನು ಬೆದಕದೆ ಇವನ್ನು ತಮ್ಮ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತ ಬಂದಿರುವುದನ್ನು ಗಮನಿಸಿದಾಗ ಈ ಸಂಸ್ಥೆ ಭಾರತದ ಜನಜೀವನದಲ್ಲಿ ಎಷ್ಟು ಬೇರೂರಿದೆಯೆಂಬುದನ್ನು ಅರ್ಥಮಾಡಿಕೊಳ್ಳಬಹುದು.

ಹೀಗೆ ಇಂದಿನ ಗ್ರಾಮ ಪಂಚಾಯತಿಯ ಬೀಜ, ಮೊಳಕೆ, ಚಿಗುರು, ಫಲ, ಪುಷ್ಪಗಳನ್ನು ಸಮಿತಿ, ಸಭಾ, ಜನಪದ, ಸಂಘ, ಗಣಗಳಲ್ಲಿ ಕಾಣಬಹುದು. ಹಿಂದೂ ಸಂಯುಕ್ತ ಕುಟುಂಬ ಪದ್ಧತಿಯ ವಿಕಸಿತ ರೂಪವೇ ಗ್ರಾಮ ಪಂಚಾಯತಿಯೆನ್ನಬಹುದು. ಕುಟುಂಬದಲ್ಲಿ ಪ್ರಾಮಾಣಿಕ ಭಿನ್ನಾಭಿಪ್ರಾಯಗಳಿರಬಹುದು. ಸಶಕ್ತರೂ ದುರ್ಬಲರೂ ಇರಬಹುದು. ಆದರೆ ಪರಸ್ಪರ ವಿಚಾರ ವಿನಿಮಯದಿಂದ ಎಲ್ಲರ ಹಿತ ಸಾಧಿಸುವುದೇ ಕುಟುಂಬದ ಉದ್ದೇಶ. ಗ್ರಾಮ ಪಂಚಾಯತಿಯ ಧ್ಯೇಯಧೋರಣೆಗಳು ಕೂಡ ಅಂಥವೇ. ಗ್ರಾಮವಾಸಿಗಳ ಅಗತ್ಯಗಳು ಕೆಲವೇ ಇದ್ದಾಗ, ನಾಗರಿಕತೆಯ ಗಾಳಿ ಸೋಕಿ ಮೋಸ, ಮೈಗಳ್ಳತನ, ಆಸೆ, ಆಮಿಷಗಳು ಇನ್ನೂ ಹೆಚ್ಚಾಗದಿದ್ದಾಗ ಗ್ರಾಮಪಂಚಾಯತಿ ಗ್ರಾಮವಾಸಿಗಳ ಆಹಾರ, ವಿಹಾರ, ಆರೋಗ್ಯ, ಶಿಕ್ಷಣ, ರಕ್ಷಣೆ, ಶಾಂತಿಗಳ ವ್ಯವಸ್ಥೆಯನ್ನು ಯಶಸ್ವಿಯಾಗಿಯೇ ಮಾಡಿತು. ಈಶಾನ್ಯ ಭಾರತದಲ್ಲಿ ಮಧ್ಯಪ್ರದೇಶದ ವನ್ಯ ಸಮಾಜಗಳಲ್ಲಿ ಈಗಲೂ ಪರಿಪೂರ್ಣತೆಯಿಂದ ಕೆಲಸ ನಿರ್ವಹಿಸುವ ಪಂಚಾಯತಿಗಳಿವೆ. ಆ ಸಮಾಜದಲ್ಲಿ ಖಾಸಗಿ ಆಸ್ತಿ ಇಲ್ಲವೆಂಬಷ್ಟು ಕಡಿಮೆ. ಆದರೂ ಸಮಾಜದ ಯಾವ ವ್ಯಕ್ತಿಯೂ ಕುಟುಂಬವೂ ಅನ್ನ, ಶಿಕ್ಷಣ, ಆರೋಗ್ಯಗಳ ಕೊರತೆಯಿಂದ ಬಳಲದಂತೆ ಪಂಚಾಯತಿ ನೋಡಿಕೊಳ್ಳುತ್ತದೆ. ಪಂಚಾಯತಿಯಲ್ಲಿ ಏಕಾಭಿಪ್ರಾಯವಿಲ್ಲದಾಗ ಊರಿನ ಹಿರಿಯ ಮಹಿಳೆ ಮಧ್ಯಸ್ಥಿಕೆ ವಹಿಸುತ್ತಾಳೆ. ಆಕೆಯ ವಾಕ್ಯ ದೇವರಿಗೂ ಮಾನ್ಯ. ಹಿಮಾಲಯದ ತಪ್ಪಲಿನ ಅನೇಕ ಪ್ರದೇಶಗಳಲ್ಲಿ ಈ ತೆರನ ಸ್ವಯಂಪೂರ್ಣ ವ್ಯವಸ್ಥೆ ನಿರ್ವಹಿಸುವ ಪಂಚಾಯತಿಗಳು ಇಂದಿಗೂ ಇವೆ.

ಆದರೆ ರಸ್ತೆ, ಸಾರಿಗೆ - ಸಂಪರ್ಕ, ಶಿಕ್ಷಣ, ರಾಜಕಾರಣ, ವಿದೇಶೀ ಆಡಳಿತ ಹೆಚ್ಚಿದಂತೆ ಭಾರತದ ಗ್ರಾಮದ ಸರಳಜೀವನ ಕಲುಷಿತವಾಗತೊಡಗಿತು. ವಿಭಿನ್ನ ಸ್ವಭಾವ, ಹಿನ್ನೆಲೆ, ಶಿಕ್ಷಣ, ಆಶೋತ್ತರಗಳುಳ್ಳ ಜನರ ವಿನಿಮಯಗಳಿಂದ ಲಾಭವಾದುದರ ಜೊತೆಗೆ ಜನಜೀವನದಲ್ಲಿ ಒಡಕು, ತೊಡಕು, ನಾಗರಿಕತೆಯ ಮೋಹ, ಸಮಯಸಾಧಕತೆ ಬೆಳೆದವು. ಬ್ರಿಟಿಷ್ ಅಧಿಕಾರಿಗಳಲ್ಲಿ ಕೆಲವರ ಸದುದ್ದೇಶದಿಂದಲೇ ಗ್ರಾಮಪಂಚಾಯತಿ ಮತ್ತು ಇತರ ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳನ್ನು ಬೆಂಬಲಿಸಿದರಾದರೂ ಇನ್ನು ಕೆಲವರು ಅವುಗಳ ಮೂಲ ಸತ್ತ್ವವಾದ ಲೋಕಸತ್ತಾಸೂತ್ರವನ್ನು ನಿರ್ಜೀವಗೊಳಿಸಿ, ತಹಸಿಲ್ದಾರನೋ ಕಲೆಕ್ಟರನೋ ಅಧ್ಯಕ್ಷನಾಗಿ ನಿಯಂತ್ರಿಸುವಂತೆ ಮಾಡಿ ಬ್ರಿಟಿಷ್ ದರ್ಬಾರಿನ ಬಡ ಬಂಧುಗಳ ದರ್ಜೆಗೆ ಪಂಚಾಯತಿಗಳನ್ನು ಇಳಿಸಿದರು. ಆಗಿನ ಸ್ಥಾನಿಕ ಸರ್ಕಾರದ ಕಾನೂನುಗಳು ಇದಕ್ಕೆ ನಿದರ್ಶನ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ರೀತಿಯ ನಿಶ್ಯಕ್ತವಾದ, ಆದಾಯವೂ ಇಲ್ಲದ ನಾಮಕಾರ್ಥ ಪಂಚಾಯತಿ ಸಂಸ್ಥೆಗಳಿದ್ದವು. ಬ್ರಿಟಿಷ್ ಅಧಿಕಾರಿಗಳ ಬದಲಾಗಿ ಭಾರತೀಯ ಅಧಿಕಾರಿಗಳು ಆಗ ಇವುಗಳ ಅಧಿಕಾರ ವಹಿಸಿದರು. ಆಗಲೂ ಪಂಚಾಯತಿಯ ಸದಸ್ಯರು ಅಧಿಕಾರಾರೂಢರ ಹೆಗ್ಗಳಿಕೆಯಲ್ಲಿ ಹೆಮ್ಮೆ ಪಟ್ಟುಕೊಳ್ಳುವಲ್ಲಿಯೇ ತೃಪ್ತಿಪಡೆದರು. ಸರ್ಕಾರ ನೀಡಿದ ಹಣವೇ ಇವರ ವರಮಾನವಾಯಿತು. ಕೆಲವು ಕಡೆಗೆ ಪ್ರಚಲಿತವಿದ್ದ ನ್ಯಾಯ ಪಂಚಾಯತಿಗೆ ಶಾಂತಿ ಸುವ್ಯವಸ್ಥೆಯ ಅಧಿಕಾರವಿದ್ದ ಕಾರಣ ಅವುಗಳಲ್ಲಿ ಸ್ವಲ್ಪ ಬಲವಿತ್ತು. ವಿಕಾಸ ಪಂಚಾಯತಿಗಳು ಹಣವಿಲ್ಲದೆ ಬಾಡಿದವು. ಆ ಸಮಯದ ಪಂಚಾಯತಿಗಳಲ್ಲಿದ್ದ ಒಂದೇ ಒಂದು ವಿಶೇಷವೆಂದರೆ, ಚುನಾವಣೆಗಳಲ್ಲಿ ಜಾತಿ ಮತ್ತು ಹಣ ಗಣನೆಗೆ ಬರುತ್ತಿದ್ದುವೇ ವಿನಾ ರಾಜಕೀಯ ಪಾರ್ಟಿಗಳು ಅವುಗಳಲ್ಲಿ ಕೈ ಹಾಕಿರಲಿಲ್ಲ.

ಆಡಳಿತ ಸುಧಾರಣೆಯ ಮಾತು ಬಂದಾಗಲೆಲ್ಲ ಭಾರತದ ಮುಖಂಡರು ಗಾಂಧೀಜಿ ಹೇಳುತ್ತಿದ್ದ ಗ್ರಾಮರಾಜ್ಯ ರಾಮರಾಜ್ಯಗಳ ಬಗ್ಗೆ ಯೋಚಿಸುತ್ತಿದ್ದರು. ಭಾರತದಂಥ ಗ್ರಾಮಪ್ರಧಾನ ದೇಶಗಳಲ್ಲಿ ಅಧಿಕಾರ, ಯೋಜನೆ, ಅಭಿವೃದ್ಧಿಗಳು ಗ್ರಾಮದಿಂದ ರಾಜಧಾನಿಯತ್ತ ಹರಿಯುವುದು ಅಗತ್ಯವೆಂಬುದನ್ನು ಮನಗಂಡರು. ಈ ಬಗ್ಗೆ ಪರ್ಯಾಲೋಚಿಸಲು ಅನೇಕ ಸಮ್ಮೆಳನ ಸಮಿತಿಗಳು ರಚಿತವಾದವು. ಅವುಗಳಲ್ಲಿ ಪ್ರಸಿದ್ಧವಾದ ಬಲವಂತರಾಯ್ ಮೆಹತಾ ಕಮಿಟಿಯ ವರದಿ ಪ್ರಜಾಸತ್ತಾತ್ಮಕ ವಿಕೇಂದ್ರಿಕರಣ ಸಿದ್ಧಾಂತವನ್ನು ಪ್ರತಿಪಾದಿಸಿ ಪ್ರಖ್ಯಾತವಾಗಿದೆ. ಗ್ರಾಮ ಪಂಚಾಯತಿಯೇ ರಾಷ್ಟ್ರದ ಸಂವಿಧಾನಾತ್ಮಕವಾದ ಪ್ರಾಥಮಿಕ ಘಟಕವೆಂದೂ ಅದಕ್ಕೆ ತಕ್ಕ ಸ್ವಾಯತ್ತತೆಯನ್ನು ಕೊಟ್ಟು ಭದ್ರಪಡಿಸಬೇಕೆಂದೂ ಆ ಸಮಿತಿ ಸೂಚಿಸಿದೆ. ಪಂಚಾಯತಿಯ ಸಮರ್ಥ ಕಾರ್ಯ ನಿರ್ವಹಣೆಗಾಗಿ ಅನೇಕ ಉಪಸಮಿತಿಗಳನ್ನು ಆರ್ಥಿಕವಾಗಿ ನೆರವಾಗಲು ಸಹಕಾರಿ ಸಂಘಗಳನ್ನೂ ನಿರ್ಮಿಸಲು ಅವಕಾಶ ಮಾಡಲಾಯಿತು. ಸ್ಥಾನಿಕ ಕರಗಳನ್ನು ಹೇರಿ ಆದಾಯ ಹೆಚ್ಚಿಸಲು ಅಧಿಕಾರ ಕೊಡಬೇಕೆಂಬ ಸೂಚನೆಯನ್ನು ಒಪ್ಪಲಾಯಿತು. ಒಂದು ಪ್ರಜಾಸತ್ತಾತ್ಮಕ ಸಂಸ್ಥೆಯ ಕಾರ್ಯನಿರೀಕ್ಷೆಯನ್ನು ಇನ್ನೊಂದು ಅಂಥದೇ ಸಂಸ್ಥೆ ಮಾಡಬಲ್ಲದೆಂಬುದನ್ನು ಒಪ್ಪಿ ಗ್ರಾಮ ಪಂಚಾಯತಿಯ ಪ್ರತಿನಿಧಿಗಳನ್ನು ಒಳಗೊಂಡಂಥ ಬ್ಲಾಕ್ ಸಮಿತಿ ಅಥವಾ ತಾಲ್ಲೂಕು ಅಭಿವೃದ್ಧಿ ಮಂಡಳಿಗಳ ಸ್ಥಾಪನೆಯ ತತ್ತ್ವವನ್ನು ಒಪ್ಪಿಕೊಳ್ಳಲಾಗಿದೆ. ಸಾರ್ವಭೌಮ ಸತ್ತೆ ಜನತೆಯದು. ಆಡಳಿತ ಜನಸಂಪರ್ಕವನ್ನು ಪಡೆದಿರಬೇಕೆಂಬ ಸಿದ್ಧಾಂತವೇ ಈ ಬಗೆಯ ಮೂರು ಮೆಟ್ಟಿಲುಗಳ ಆಡಳಿತದ ತತ್ತ್ವದ ಹಿನ್ನೆಲೆ.

ಈ ಸೂತ್ರಗಳನ್ನು ಆಧರಿಸಿದ ಗ್ರಾಮ ಪಂಚಾಯತಿಯ ಕಾನೂನುಗಳನ್ನು ಭಾರತಾದ್ಯಂತ ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರಲಾಯಿತು. ಸಾಮಾನ್ಯವಾಗಿ 5,000 ಜನಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳಿಗೆ ಒಂದು ಗ್ರಾಮ ಪಂಚಾಯತಿಯ ನಿರ್ಮಾಣವಾಗುತ್ತದೆ. ಇದಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಊರುಗಳಿಗೆ ನಗರ ಪಂಚಾಯತಿಯನ್ನು ರಚಿಸುತ್ತಾರೆ. ಅವುಗಳ ಅಧಿಕಾರಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಗ್ರಾಮ ಪಂಚಾಯತಿಗಳಿಗೆ ವಯಸ್ಕ ಮತದಾನ ಪದ್ಧತಿಯ ಮೇಲೆ ಐದು ವರ್ಷಗಳಿಗೊಮ್ಮೆ ಚುನಾವಣೆಗಳಾಗುತ್ತವೆ. ಸ್ತ್ರೀಯರಿಗೂ ಅನುಸೂಚಿತ ವರ್ಗದವರಿಗೂ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಕರ್ನಾಟಕದಲ್ಲಿ ಪಂಚಾಯತಿ 7,452 ಗ್ರಾಮ ಪಂಚಾಯತಿಗಳಿವೆ (1967). ಇವಕ್ಕೆ ಒಬ್ಬೊಬ್ಬ ಕಾರ್ಯದರ್ಶಿಯನ್ನು ಸರ್ಕಾರ ನೇಮಿಸುತ್ತದೆ. ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷನನ್ನು ಆರಿಸುತ್ತಾರೆ. ಆತನಿಗೆ ಸರಪಂಚನೆಂದು ಹೆಸರು. ಉಪಾಧ್ಯಕ್ಷನೂ ಚುನಾಯಿತನೇ. ವರ್ಷಕ್ಕೊಮ್ಮೆ ಇವುಗಳ ಮುಂಗಡ ಪತ್ರವನ್ನು ಸಿದ್ಧಪಡಿಸಲಾಗುತ್ತದೆ. ಮುಂಗಡ ಪತ್ರವನ್ನು ಒಪ್ಪುವ ಅಧಿಕಾರ ತಾಲ್ಲುಕು ಅಭಿವೃದ್ಧಿ ಮಂಡಳಿಗೆ ಇದೆ. ಆ ಮಂಡಳಿಯ ನಿರ್ವಾಹಕ ಅಧಿಕಾರಿ ಮತ್ತು ಅಸಿಸ್ಟೆಂಟ್ ಕಮಿಷನರ್ ಪಂಚಾಯತಿಗಳ ಹಣಕಾಸು ಮತ್ತು ಕಾರ್ಯಗಳ ನಿರೀಕ್ಷಣೆ, ನಿಯಂತ್ರಣ ಮಾಡುತ್ತಾರೆ.

ಪಂಚಾಯತಿಗೆ ಕೆಲವು ಸ್ಥಾನಿಕ ತೆರಿಗೆಗಳನ್ನು - ಮನೆ, ಸ್ಥಳ, ಉದ್ಯೋಗ, ಮನೋರಂಜನೆ, ಜಾನುವಾರು, ಜಾತ್ರೆ, ವಾಹನ, ಸಂತೆ, ಅಂಗಡಿ ಮುಂತಾದವುಗಳ ಮೇಲೆ - ವಿಧಿಸಿ, ವಸೂಲಿ ಮಾಡುವ ಅಧಿಕಾರವಿದೆ. ಮನೆಗಳನ್ನು ಕಟ್ಟಲು ಅಪ್ಪಣೆ ಕೊಡುವ, ನಿರಾಕರಿಸುವ, ಸ್ವತ್ತು ವರ್ಗಾವಣೆಯನ್ನು ಕ್ರಮಗೊಳಿಸುವ ಅಧಿಕಾರವಿದೆ. ರಸ್ತೆ, ದೀಪ, ನೈರ್ಮಲ್ಯ, ನೀರಿನ ವ್ಯವಸ್ಥೆ ಮುಂತಾದವುಗಳ ಸ್ಥಾಪನೆ, ನಿರ್ವಹಣೆಗಳು ಕಟ್ಟಾಯವಾದ ಕರ್ತವ್ಯಗಳು. ಆದಾಯ ಹೆಚ್ಚಿಸುವಂಥ ಕೆರೆ ಬಾವಿಗಳ ನಿರ್ಮಾಣ, ಅರಣ್ಯ ಬೆಳವಣಿಗೆ ಮೊದಲಾದ ಕಾರ್ಯಕ್ರಮಗಳನ್ನೂ ಶಿಕ್ಷಣ, ವಸತಿ, ವಾಚನಾಲಯ, ಕ್ರೀಡಾಂಗಣ, ತೋಟಗಳು ಮುಂತಾದ ಸೌಕರ್ಯಗಳನ್ನು ಒದಗಿಸುವಂಥ ಯೋಜನೆಗಳನ್ನೂ ಪಂಚಾಯತಿಗಳು ಕೈಗೊಳ್ಳಬಹುದು. ಆ ಗ್ರಾಮದ ಭೂಕಂದಾಯದ ಸೇ. 35 ರಷ್ಟು ಹಣವನ್ನಲ್ಲದೆ ಇತರ ಅಭಿವೃದ್ಧಿ ಅನುದಾನುಗಳನ್ನೂ ಸಾಲಗಳನ್ನೂ ಸರ್ಕಾರ ಒದಗಿಸುತ್ತದೆ.

ಇಷ್ಟೆಲ್ಲ ಇದ್ದರೂ ಅನೇಕ ಪಂಚಾಯತಿಗಳು ಸರಿಯಾಗಿ ಕೆಲಸಮಾಡುತ್ತಿಲ್ಲ. ಅಧಿಕಾರದ ದುರುಪಯೋಗದಿಂದ ಜಾತಿ, ಹಣ, ಪಕ್ಷಗಳ ರಾಜಕೀಯ ತೊಡಕುಗಳಿಂದ ಕೆಲವು ಸಂಸ್ಥೆಗಳು ಬಳಲುತ್ತವೆ. ಉತ್ಸಾಹಿ ಕಾರ್ಯಕರ್ತರಿದ್ದರೂ ಹಣದ ಕೊರತೆ, ಕಾನೂನಿನ ಅಡಚಣೆ, ಅಸಮರ್ಪಕ ಅಧಿಕಾರ ವಿಕೇಂದ್ರೀಕರಣ ಇವುಗಳಿಂದಾಗಿ ಇನ್ನು ಕೆಲವು ಸಂಸ್ಥೆಗಳ ಕಾರ್ಯ ತೃಪ್ತಿಕರವಾಗಿಲ್ಲ. ತೆರಿಗೆ ವಿಧಿಸುವುದು ಮತ್ತು ವಸೂಲಿ ಜನಪ್ರಿಯವಲ್ಲದ ಕಾರ್ಯವೆಂದು ಬಗೆದು ಆ ದಿಶೆಯಲ್ಲಿ ಅನೇಕ ಪಂಚಾಯತಿಗಳು ನಿಷ್ಕ್ರಿಯವಾಗಿ ತಮ್ಮ ದುರ್ಗತಿಯನ್ನು ತಾವೇ ತಂದುಕೊಂಡಿವೆ. ಇರುವ ಪರಿಮಿತಿಯಲ್ಲೇ, ಒಳ್ಳೆಯ ಸಂಘಟನೆಯಿಂದ, ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಿದ ಗ್ರಾಮ ಪಂಚಾಯತಿಗಳೂ ಕೆಲವಾದರೂ ಉಂಟು. ಇವು ಪಂಚಾಯತಿ ರಾಜ್ಯ ಸಿದ್ಧಾಂತದಲ್ಲಿ ನಂಬಿಕೆಯನ್ನು ಹುಟ್ಟಿಸಿ ಬೆಳೆಸಬಲ್ಲವು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • website of Ministry of Panchayati Raj ಭಾರತ ಸರ್ಕಾರ
  • Subramaniam Vincent (28 February 2002). "Ugly duckling to swan". India Together.
  • "Indian local governments" (Harvard University) Archived 2016-01-26 ವೇಬ್ಯಾಕ್ ಮೆಷಿನ್ ನಲ್ಲಿ.
  • "Indian local governments" (National Backward Krishi Vidyapeeth Solapur in India)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: