ಗ್ರಂಥ ಸಂಪಾದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಂಥ ಸಂಪಾದನೆ ಎಂದರೆ ಉಪಲಬ್ಧವಿರುವ ಪ್ರತಿಗಳ ಆಧಾರದ ಮೇಲೆ ಗ್ರಂಥದ ಮೂಲಪಾಠವೇನಿದ್ದಿರಬಹುದೆಂಬುದನ್ನು ಗುರುತಿಸುವ ಹಾಗೂ ಸಮಗ್ರ ಗ್ರಂಥದ ಬಗ್ಗೆ ವಿಮರ್ಶೆಯನ್ನು ನೀಡುವ ಕೆಲಸ (ಟೆಕ್ಸ್‍ಚುಅಲ್ ಕ್ರಿಟಿಸಿಸóಂ). ಕೈಬರೆಹದಲ್ಲಿ ಉಳಿದಿರುವ ಕೃತಿಗಳ ಸಂಪಾದನೆಯಲ್ಲೇ ಹೆಚ್ಚಿನ ಕ್ಲೇಶಗಳು ಕಂಡುಬರುತ್ತವಾಗಿ ಅವನ್ನೇ ಗಮನದಲ್ಲಿಟ್ಟುಕೊಂಡು ವಿಷವನ್ನಿಲ್ಲಿ ವಿಮರ್ಶಿಸಲಾಗಿದೆ.

ಹಿಂದಿನ ಕಾಲದಲ್ಲಿ ಕವಿಗಳು, ಜ್ಞಾನಿಗಳು, ಸಂತರು ತಾವು ಲೋಕಕ್ಕೆ ಹೇಳಬಯಸಿದ ವಿಚಾರಗಳನ್ನು ಭೂರ್ಜಪತ್ರಗಳ ಮೇಲೂ ತಾಳೆಗರಿಗಳ ಮೇಲೂ ಬರೆದಿಡುತ್ತಿದ್ದರು. ಅಶೋಕ ಚಕ್ರವರ್ತಿ ತನ್ನ ಶಾಸನಗಳನ್ನು ಅನೇಕ ಬಂಡೆಗಳ ಮೇಲೂ ಕೆತ್ತಿಸಿದ್ದಾನೆ. ಅನೇಕ ರಾಜರು ಬೇರೆ ಬೇರೆ ಸನ್ನಿವೇಶಗಳಲ್ಲಿ ತಾವು ಕೊಟ್ಟ ಭೂದಾಗಳನ್ನು ಕಲ್ಲುಗಳ ಮೇಲೂ ತಾಮ್ರದ ರೇಕುಗಳ ಮೇಲೂ ಕೆತ್ತಿಸಿದ್ದಾರೆ. ಈ ತಾಮ್ರಶಾಸನ, ಶಿಲಾಶಾಸನಗಳಲ್ಲಿ ಅನೇಕ ಶ್ಲೋಕಗಳೂ ಪದ್ಯಗಳೂ ಇವೆ. ಕಾಗದ ಲಭಿಸುವ ಮುಂಚೆ ಜನ ಹತ್ತಿಯ ಬಟ್ಟೆಯ ಮೇಲೆ ಬರೆಯುತ್ತಿದ್ದುದೂ ಉಂಟು. ಪಟ, ಕಾರ್ಪಾಸಿಕ ಪಟ, ಮೊದಲಾದ ಹೆಸರುಗಳು ಶಾತವಾಹನರ ಕಾಲದ ಶಾಸನಗಳಲ್ಲಿ ಕಾಣಿಸುತ್ತವೆ. ಕಡತ ಎಂಬ ಒಂದು ಬಗೆಯ ಮೇಣದ ಬಟ್ಟೆಯನ್ನು ಕನ್ನಡಿನಲ್ಲಿ ಬರೆವಣಿಗೆಯ ಕೆಲಸಕ್ಕೆ ಬಳಸುತ್ತಿದ್ದರು. ಇಂಥ ಸಾಧನಗಳನ್ನು ಬಳಸಿ ಬರೆದಿಟ್ಟ ಗ್ರಂಥಗಳು, ಶಾಸನಗಳು, ಎಲ್ಲ ಕಾಲಕ್ಕೂ ಕೆಡದೆ ಶುದ್ಧವಾಗಿರುವುದು ಅಸಂಭವ. ಮಳೆ ಗಾಳಿಗಳ ದೆಸೆಯಿಂದಲೂ ಮಾನವರಿಂದ ಸಂಭವಿಸಬಹುದಾದ ಉಪದ್ರವಗಳಿಂದಲೂ ಶಾಸನಾದಿಗಳು ಮುರಿದು ಹಾಳಾಗಬಹುದು. ಅವುಗಳಲ್ಲಿನ ಅನೇಕ ಶಬ್ದಗಳು ಅಳಿಸಿ ಹೋಗಬಹುದು. ಅಂಥ ಅವಾಂತರ ಕಾರಣಗಳಿಂದ ಅಳಿದು ಉಳಿದ ಗ್ರಂಥಗಳನ್ನು ಅವುಗಳ ನಕಲುಗಳನ್ನು ನೋಡಿ ಅವುಗಳ ಆಧಾರದಿಂದ ಮೂಲಪಾಠ ಹೇಗಿದ್ದಿರಬಹುದೆಂಬುದನ್ನು ಊಹಿಸಬೇಕಾದ, ನಿರ್ಧರಿಸಬೇಕಾದ ಅಗತ್ಯ ಬೀಳುತ್ತದೆ. ಲಭ್ಯವಾದ ಎಲ್ಲ ನಕಲುಗಳನ್ನೂ ಸಂಗ್ರಹಿಸಿ ಅವನ್ನು ಅವಲೋಕಿಸಿ ಅವುಗಳ ಮೂಲಪಾಠವನ್ನು ನಿರ್ಣಯಿಸಬೇಕಗುತ್ತದೆ.

ಕವಿ ಬರೆದ ಕೃತಿಯನ್ನು ಓದಬಯಸುವವರು, ಓದಿಸಿ ಕೇಳಬಯಸುವವರು, ಅನೇಕರು ಇರುತ್ತಾರೆ. ಅವರೆಲ್ಲರಿಗೂ ಕವಿಯೇ ಬರೆದುಕೊಡುವುದು ಸಾಧ್ಯವಿಲ್ಲ. ಆಗ ಪ್ರತೀಕಾರರು ಕವಿಕೃತಿಗಳನ್ನು ಯಥಾವತ್ತಾಗು ನಕಲು ಮಾಡಿಕೊಡುತ್ತಾರೆ. ಗ್ರಂಥ ಬಹಳ ದೊಡ್ಡದಾದರೆ ಹೆಚ್ಚು ಮಂದಿ ಪ್ರತಿಕಾರರ ಅಗತ್ಯ ಕಂಡುಬರುತ್ತದೆ. ಉದಾರಿಗಳಾದ ಶ್ರೀಮಂತರು ತಾವು ಮೆಚ್ಚಿಕೊಂಡ ಮಹಾಕೃತಿಯೊಂದನ್ನು ಹಲವರು ಪ್ರತೀಕರರ ನೆರವಿನಿಂದ ಪ್ರತಿ ಮಾಡಿಸಿ ದಾನ ಮಾಡುತ್ತಿದ್ದುದೂ ಉಂಟು. ದಾನಚಿಂತಾಮಣಿ ಅತ್ತಿಮಬ್ಬೆ ನಡೆಸಿದ ಗ್ರಂಥ ದಾನವನ್ನು ಕನ್ನಡ ಕವಿ ರನ್ನ ಕೊಂಡಾಡಿದ್ದಾನೆ. ಹೀಗೆ ಒಂದು ಮೂಲಗ್ರಂಥವನ್ನು ಅನೇಕ ಬರಹಗಾರರು ಪ್ರತಿ ಮಾಡುವಾಗ ತಿಳಿದೋ ತಿಳಿಯದೆಯೋ ಹಲವು ತಪ್ಪುಗಳಾಗುವ ಸಂಭವವಿದೆ. ಕವಿಯೇ ಸ್ವಂತವಾಗಿ ಬರೆದೆ ಗ್ರಂಥಗಳಲ್ಲಿಯೂ ಕೆಲವು ತಪ್ಪುಗಳಾದರೆ ಆಶ್ಚರ್ಯವೇನೂ ಇಲ್ಲ. ಬರೆಯುವ ಭರದಲ್ಲಿ ಹಲವು ಅಕ್ಷರ ಸ್ಖಾಲಿತ್ಯಗಳು ಅನಿವಾರ್ಯವಾಗಿ ಉಂಟಾಗುತ್ತವೆ. ಒಂದೊಂದು ಸಲ ನಕಲು ಮಾಡಿದಾಗಲೂ ಹೊಸ ತಪ್ಪುಗಳೂ ಆಗುವ ಸಂಭವವಿದೆ. ಆದ್ದರಿಂದ ಕವಿಯ ಕಾಲಕ್ಕೆ ಬಹಳ ದೂರವಾದ ಪ್ರತಿಗಳಲ್ಲಿ ಹೆಚ್ಚು ತಪ್ಪುಗಳಿರುತ್ತವೆ. ಇಂಥ ಹಲವು ಪ್ರತಿಗಳನ್ನು ನೋಡಿದಾಗ ಕವಿ ಬರೆದ ಮೂಲ ಪಾಠವನ್ನು ಗುರುತಿಸುವುದು ಕಷ್ಟವಾವುತ್ತದೆ. ಈ ಮೂಲಪಾಠ ನಿರ್ಣಯ ಕಾರ್ಯಕ್ಕೆ ಬೇಕಾದ ಸಿದ್ಧತೆ, ಅದರಲ್ಲಿ ನಾವು ಇದಿರಿಸಬೇಕದ ಸಮಸ್ಯೆಗಳು ಅವುಗಳ ಪರಿಹಾರ ವಿಧಾನ ಮೊದಲಾದ ವಿಚಾರಗಳನ್ನು ತಿಳಿಸುವುದೇ ಗ್ರಂಥಸಂಪಾದನ ಶಾಸ್ತ್ರದ ಕೆಲಸ.

ಕವಿಯೇ ಸ್ವಂತವಾಗಿ ಬರೆದ ಪ್ರತಿ ಸಿಕ್ಕುವುದು ಬಹಳ ಅಪೂರ್ವ ; ಇಲ್ಲವೇ ಇಲ್ಲವೆಂದರೂ ಸಲ್ಲುತ್ತದೆ. ಅದರ ಹತ್ತಿರದ ನಕಲುಗಳು ಲಭಿಸಿದರೆ ಪುಣ್ಯ. ಕವಿ ತಾನು ಬರೆದ ಪ್ರತಿಯನ್ನು ಮತ್ತೆ ಓದಿ ನೋಡಿದರೆ ಹಲವು ತಪ್ಪುಗಳನ್ನು ತಿದ್ದುವುದರಲ್ಲಿ ಸಂಶಯವಿಲ್ಲ. ಕೆಲವು ವೇಳೆ ಮೊದಲು ತನಗೆ ತೋರದೆ ಇದ್ದ ಉತ್ತಮ ಪಾಠಗಳನ್ನು ಆಮೇಲೆ ಜೋಡಿಸುವುದೂ ಉಂಟು. ಪಂಪ ತನ್ನ ಒಂದು ಪದ್ಯವನ್ನು ಹಾಗೆ ತಿದ್ದಿದನೆಂದು ತಿಳಿದುಬಂದಿದೆ. ಅಂಥ ತಿದ್ದುಪಡಿಗಳನ್ನು ಓಲೆಗರಿಯ ಪಾಶ್ರ್ವದಲ್ಲಿ ಅಥವಾ ಎರಡು ಪಂಕ್ತಗಳ ನಡುವೆ ಗುರುತು ಮಾಡುವುದು ವಡಿಕೆ. ಪ್ರತಿಕಾರ ಅಂಥ ತಿದ್ದುಪಡಿಗಳನ್ನು ಗ್ರಂಥದ ಸೂಕ್ತ ಸ್ಥಾನಗಳಲ್ಲಿ ಅಳವಡಿಸಿಕೊಳ್ಳಬೇಕು.

ಇನ್ನು ಕೆಲವು ಸಂದರ್ಭಗಳಲ್ಲಿ ಪ್ರತಿಕಾರರು ತಮಗೆ ಅರ್ಥವಾಗದ ಶಬ್ದಗಳನ್ನು ಬಿಟ್ಟುಬಿಡುವುದುಂಟು. ಇನ್ನು ಕೆಲವರು ಅಪರಿಚಿತ ಶಬ್ದಗಳ ಸ್ಥಾನದಲ್ಲಿ ಪರಿಚಿತ ಶಬ್ದಗಳನ್ನು ಸೇರಿಸಿ ಪಾಠಾಂತರಗಳನ್ನು ಸೃಷ್ಟಿಸಿಬಿಡುತ್ತಾರೆ. ಇಂಥ ಸಂದರ್ಭಗಳಲ್ಲಿ ಹೊಸ ಮತ್ತು ಆ ಸನ್ನಿವೇಶಕ್ಕೆ ಹೊಂದದೆ, ಅರ್ಥವಾಗದ ಅಪಪಾಠಗಳೂ ಏರ್ಪಡುತ್ತವೆ. ಒಂದು ಭಾಷೆಯ ಕೆಲವು ಅಕ್ಷರಗಳ ಸಾದೃಶ್ಯದಿಂದ ಲಿಪಿಕಾರರು ಭ್ರಾಂತಿ ಪಟ್ಟು ಒಂದರ ಬದಲು ಇನ್ನೊಂದು ಅಕ್ಷರವನ್ನು ಬರೆದು ಮೂಲಪಾಠವನ್ನು ಕೆಡಿಸುತ್ತಾರೆ. ಇನ್ನು, ಓಲೆಗರಿಯನ್ನು ಓದುವಾಗ ಪಂಕ್ತಿಭ್ರಮಣೆಯಿಂದ ಆಗುವ ಕ್ಲೇಶಗಳು ಅನೇಕ. ಹಲವು ಪದಗಳು, ಅಥವಾ ವಾಕ್ಯಗಳೇ ಬಿಟ್ಟುಹೋಗಬಹುದು. ಒಂದು ಪದ್ಯದ ಉತ್ತರಾರ್ಧವನ್ನೂ ಇನ್ನೊಂದು ಪದ್ಯದ ಪೂರ್ವಾರ್ಧವನ್ನೂ ಸೇರಿಸಿ ಒಂದು ಪದ್ಯ ಮಾಡಿರುವ ಸಂದರ್ಭಗಳೂ ಉಂಟು. ಪದ್ಯಗಳ ಕ್ರಮ ವ್ಯತ್ಯಾಸವಾಗುವುದು ಸರ್ವಸಾಧಾರಣ ಸಂಗತಿ.

ಉದಾಹರಣೆಗೆ ನಾಗವರ್ಮನ ವರ್ಧಮಾನ ಪುರಾಣದ ಮೂರನೆಯ ಆಶ್ವಾಸದಲ್ಲಿನ ಈ ಭಾಗವನ್ನು ನೋಡಬಹುದು.

ವ || ಅಂತು ಪೊಕ್ಕಾತನಾತ್ಮೀಯಸ್ವಾಮಿಯಂ ಜ್ವಲನಜಟಿಮಹಾರಾಜನಂ ಸರ್ವಾಂಗ ಪ್ರಣುತನಾಗಿ ಕಂಡು ತನ್ನ ಕೆಯ್ಯೊಳಾ ಪ್ರಜಾಪತಿ ಮಹೀಪತಿಯಟ್ಟಿದು ಪಳಾರತ್ನಮಂ ತೋ¾É ಪೋದ ಬಂದ ವೃತ್ತಾಂತಮುಮಂವೆ

ಕನ್ನಡದ ಅನೇಕ ಪ್ರಾಚೀನ ಕಾವ್ಯಗಳನ್ನೂ ಶಾಸನಗಳನ್ನೂ ಶೋಧಿಸಿ ಪ್ರಕಟಿಸುವ ಕಾರ್ಯವನ್ನು ಕೈಗೊಂಡು ಈ ಕ್ಷೇತ್ರದಲ್ಲಿ ಆದ್ಯ ಪ್ರವರ್ತಕರಾದ ಕಿಟ್ಟೆಲ್, ಬಿ, ಎಲ್. ರೈಸ್, ಆರ್. ನರಸಿಂಹಾಚಾರ್ಯ, ಬಿ ಮಲ್ಲಪ್ಪ, ಟಿ. ಎಸ್, ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರೀ ಮೊದಲಾದ ಮಹನೀಯರೂ ವಡ್ಡಾರಾಧನೆ, ಸಿದ್ಧರಾಮಚರಿತೆ, ಪಂಪರಾಮಾಯಣಸಂಗ್ರಹ, ಶಬ್ದಮಣಿದರ್ಪಣ ಮೊದಲಾದ ಹಲವು ಕೃತಿಗಳನ್ನು ಪರಿಶೋಧಿಸಿ ಗ್ರಂಥ ಸಂಪಾದನೆ ಎಂಬ ಒಂದು ಗ್ರಂಥವನ್ನು ರಚಿಸಿದ ಡಿ. ಎಲ್. ನರಸಿಂಹಾಚಾರ್ಯರೂ ಕನ್ನಡಿಗರ ಕೃತಜ್ಞತೆಗೆ ಪಾತ್ರರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: