ಗೌಳಿಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೌಳಿಗನು ಹಲವುವೇಳೆ ಬಾಟಲಿಗಳು ಅಥವಾ ರಟ್ಟಿನ ಪೆಟ್ಟಿಗೆಗಳಲ್ಲಿ ನೇರವಾಗಿ ಗ್ರಾಹಕರ ಮನೆಗಳಿಗೆ ಹಾಲನ್ನು ತಲುಪಿಸುವ ವಿತರಕ. ಉತ್ತಮ ಶೈತ್ಯೀಕರಣದ ಕೊರತೆಯಿದ್ದಾಗ ಹಾಲು ಬೇಗನೇ ಹಾಳಾಗುತ್ತಿತ್ತು. ಹಾಗಾಗಿ ಕೆಲವು ದೇಶಗಳಲ್ಲಿ ಮನೆಗಳಿಗೆ ಹಾಲನ್ನು ಪ್ರತಿದಿನ ತಲುಪಿಸಲಾಗುತ್ತಿತ್ತು. ಹಾಲಿನ ಬಾಟಲಿಗಳು ಲಭ್ಯವಾಗುವುದಕ್ಕೆ ಮುಂಚೆ, ಗೌಳಿಗರು ತಮ್ಮ ಸುತ್ತಾಟಗಳಲ್ಲಿ ಧಾರಕಗಳನ್ನು ತೆಗೆದುಕೊಂಡು ಹೋಗಿ, ಧಾರಕದಲ್ಲಿ ಅಳತೆಯ ಸಾಧನವನ್ನು ಅದ್ದಿ ಗ್ರಾಹಕರ ಪಾತ್ರೆಗಳಲ್ಲಿ ಹಾಲನ್ನು ತುಂಬಿಸುತ್ತಿದ್ದರು. ಅಭಿವೃದ್ಧಿಹೊಂದಿದ ವಿಶ್ವದ ಮನೆಗಳಲ್ಲಿ ಶೀತಕಗಳ ಸರಿಸುಮಾರು ಸರ್ವತ್ರತೆ, ಜೊತೆಗೆ ಸುಧಾರಿತ ಕಟ್ಟುವಿಕೆಯು ಕಳೆದ ಅರ್ಧ ಶತಮಾನದಲ್ಲಿ ಆಗಾಗ್ಗಿನ ಹಾಲು ವಿತರಣೆಯ ಅಗತ್ಯವನ್ನು ಕಡಿಮೆ ಮಾಡಿದೆ ಮತ್ತು ಅನೇಕ ಪ್ರದೇಶಗಳಲ್ಲಿ ವ್ಯಾಪಾರವನ್ನು ಕೆಲವೊಮ್ಮೆ ವಾರಕ್ಕೆ ಕೇವಲ ಮೂರು ದಿನಗಳಿಗೆ ಕುಗ್ಗುವಂತೆ ಮಾಡಿದೆ ಮತ್ತು ಇತರೆಡೆಗಳಲ್ಲಿ ಸಂಪೂರ್ಣವಾಗಿ ಅದೃಶ್ಯವಾಗುವಂತೆ ಮಾಡಿದೆ. ಜೊತೆಗೆ, ಹಾಲಿನ ವಿತರಣೆಯು ಕ್ಷೀರೋತ್ಪನ್ನಗಳ ಬೆಲೆಯ ಮೇಲೆ ಸಣ್ಣ ವೆಚ್ಚಕ್ಕೆ ಗುರಿಯಾಗುತ್ತದೆ. ಈ ವೆಚ್ಚವನ್ನು ಸಮರ್ಥಿಸಿಕೊಳ್ಳುವುದು ಹೆಚ್ಚೆಚ್ಚು ಕಷ್ಟವಾಗುತ್ತದೆ ಮತ್ತು ವಿತರಿಸಲಾದ ಹಾಲನ್ನು ಕಳ್ಳತನಕ್ಕೆ ಈಡಾಗುವ ಸ್ಥಿತಿಯಲ್ಲಿ ಬಿಡುತ್ತದೆ. ಹಾಲಿನ ವಿತರಣೆಯು ಹಲವುವೇಳೆ ಬೆಳಿಗ್ಗೆ ಆಗುತ್ತದೆ.

ಕೆಲವು ಪ್ರದೇಶಗಳಲ್ಲಿ ಅಪಾರ್ಟ್‌ಮಂಟ್‍ಗಳು ಮತ್ತು ಮನೆಗಳು ಚಿಕ್ಕ ಹಾಲು ಒಪ್ಪಿಸುವ ಬಾಗಿಲುಗಳನ್ನು ಹೊಂದಿರುತ್ತವೆ. ಬಾಹ್ಯ ಗೊಡೆಯೊಳಗೆ ನಿರ್ಮಿಸಲ್ಪಟ್ಟ ಮನೆಯ ಒಳಗಿರುವ ಸಣ್ಣ ಕಟ್ಟಿಗೆಯ ಅಲಮಾರು ಎರಡೂ ಕಡೆಗಳಲ್ಲಿ ಚಿಲುಕ ಹಾಕಿದ ಆದರೆ ಬೀಗ ಹಾಕಿರದ ಬಾಗಿಲುಗಳನ್ನು ಹೊಂದಿರುತ್ತದೆ. ತಲುಪಿಸಲಾದಾಗ ಆ ಪೆಟ್ಟಿಗೆಯಲ್ಲಿ ಹಾಲು ಅಥವಾ ದಿನಸಿ ಸಾಮಾನುಗಳನ್ನು ಇಟ್ಟಿರಬಹುದು, ಮತ್ತು ಮನೆಯ ಯಜಮಾನನು ಅದರಿಂದ ಒಳಗಿರುವ ವಸ್ತುಗಳನ್ನು ಪಡೆಯಬಹುದು. ಟ್ರಕ್ ಚಾಲಕರು ಹೈನುದಾಣದಿಂದ ಹಾಲು ಸಂಸ್ಕರಣ ಘಟಕಕ್ಕೆ ಹಾಲನ್ನು ಸಾಗಿಸುತ್ತಾರೆ. ಹಸಿ ಹಾಲನ್ನು ಪ್ರತಿನಿತ್ಯ ಅಥವಾ ದಿನಬಿಟ್ಟು ದಿನ ತೆಗೆದುಕೊಂಡು ಹೋಗಲಾಗುತ್ತದೆ.

೨೦ನೇ ಶತಮಾನದಿಂದ, ಯೂರೋಪ್‍ನ ನಗರ ಪ್ರದೇಶಗಳಲ್ಲಿ ಹಾಲಿನ ವಿತರಣೆಯನ್ನು ಹಾಲುಗಾಡಿ ಎಂದು ಕರೆಯಲ್ಪಡುವ ಒಂದು ವಿದ್ಯುತ್ ವಾಹನದಿಂದ ಮಾಡಲಾಗಿದೆ. ಇವು ಕುದುರೆಗಳಿಂದ ಎಳೆಯಲ್ಪಟ್ಟ ವಾಹನಗಳ ಬದಲಿಗೆ ಬಂದವು. ಕುದುರೆಗಳಿಂದ ಎಳೆಯಲ್ಪಟ್ಟ ವಾಹನಗಳು ೧೯೫೦ರ ದಶಕದಲ್ಲಿಯೂ ಬ್ರಿಟನ್‍ನಲ್ಲಿ, ಮತ್ತು ೧೯೬೦ರ ದಶಕದವರೆಗೆ ಅಮೇರಿಕದ ಭಾಗಗಳಲ್ಲಿ ಕಂಡುಬರುತ್ತಿದ್ದವು. ಆಸ್ಟ್ರೇಲಿಯಾದಲ್ಲಿ, ಬಟವಾಡೆ ವಾಹನವು ಮುಚ್ಚಿದ ಹಾಲಿನ ಟ್ರೇಯನ್ನು ಹೊಂದಿರುವ ಸಾಮಾನ್ಯವಾಗಿ ಚಿಕ್ಕ ಪೆಟ್ರೋಲ್ ಅಥವಾ ಡೀಸಲ್ ಎಂಜಿನ್ನುಳ್ಳ ಟ್ರಕ್ ಆಗಿರುತ್ತಿತ್ತು. ಹೆಚ್ಚು ಬಿಸಿಯಿರುವ ಪ್ರದೇಶಗಳಲ್ಲಿ ಈ ಟ್ರೇಯಲ್ಲಿ ಸಾಮಾನ್ಯವಾಗಿ ಆವಾಹಕಗಳನ್ನು ಅಳವಡಿಸಲಾಗಿರುತ್ತದೆ.

ಭಾರತದಲ್ಲಿ, ಹಾಲು ವಿತರಿಸುವವರು ಸಾಮಾನ್ಯವಾಗಿ ಹಾಲಿನ ಧಾರಕಗಳನ್ನು ಬಳಸುತ್ತಾರೆ. ಈ ಅಭ್ಯಾಸವು ಪಾಶ್ಚಾತ್ಯ ದೇಶಗಳಲ್ಲಿ ನಿಂತಿದೆ. ಸಾಗಿಸುವಾಗ ಅವನ್ನು ಯಾವುದೇ ರೀತಿಯ ವಾಹನದಲ್ಲಿ ಒಯ್ಯಲಾಗುತ್ತದೆ. ಮುಂಬಯಿಯಂತಹ ದೊಡ್ಡ ನಗರಗಳಲ್ಲಿ, ಹಾಲಿನ ಧಾರಕಗಳನ್ನು ಹಲವುವೇಳೆ ಸ್ಥಳೀಯ ರೈಲುಗಳಲ್ಲಿ ಸರಕು ಬೋಗಿಗಳಲ್ಲಿ ಸಾಗಿಸಲಾಗುತ್ತದೆ.

"https://kn.wikipedia.org/w/index.php?title=ಗೌಳಿಗ&oldid=883404" ಇಂದ ಪಡೆಯಲ್ಪಟ್ಟಿದೆ