ಗೌರಿತೀರ್ಥ ಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೌರಿತೀರ್ಥ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವ ಅತ್ಯಂತ ಪ್ರಸಿದ್ಧ ಹಾಗೂ ವಿಶ್ವವಿಖ್ಯಾತ ಪ್ರದೇಶವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಂಪಕಾಪುರ ಎಂಬ ಹೆಸರಿನಲ್ಲಿ ಈ ಸ್ಥಳ ಕಂಡುಬರುತ್ತದೆ. ಶಿವಮೊಗ್ಗದಿಂದ 98 ಕಿಲೋಮೀಟರ್‍ ದೂರದಲ್ಲಿರುವ ಈ ಪ್ರದೇಶಕ್ಕೆ ತೆರಳಲು ವ್ಯವಸ್ಥಿತವಾದ ರಸ್ತೆ ಇದೆ. ದೇಶ ವಿದೇಶಗಳಿಂದ ಈ ಕೆರೆಯನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಾರೆ. ಸಂಪೂರ್ಣವಾಗಿ ಪಾಚಿಕಟ್ಟಿರುವ ಕೆರಿಯಲ್ಲಿ ಪಾಚಿಗಳ ನಡುವೆ ಸರಾಗವಾಗಿ ಗುಳೆಗಳು ಬರುವುದು ಈ ಕೆರೆಯ ವಿಶೇಷ. ಕೆರೆಯ ಎದುರು ಹೋಗಿ ನಿಂತು ಜೋರಾಗಿ ಚಪ್ಪಾಳೆ ತಟ್ಟಿದರೆ ನೀರಿನಿಂದ ಸರಾಗವಾಗಿ ಗುಳ್ಳೆಗಳು ಏಳಲು ಆರಂಭಗೊಳ್ಳುತ್ತದೆ. ಚಪ್ಪಾಳೆಯ ಸದ್ದು ಹೆಚ್ಚಾಗುತ್ತಾ ಹೋದಂತೆ ಗುಳ್ಳೆಗಳ ಪ್ರಮಾಣವು ಅಧಿಕಗೊಳ್ಳುತ್ತಾ ಬರುತ್ತದೆ. ಹಲವಾರು ಜನರು ಈ ಕೆರೆಗೆ ನಾಣ್ಯಗಳನ್ನು ಹಾಕಿ ಚಪ್ಪಾಳೆ ತಟ್ಟುತ್ತಾರೆ. ಹೀಗೆ ತಟ್ಟಿದಾಗ ಗುಳ್ಳೆಗಳು ಮೂಡುವ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಸಾಕಷ್ಟು ಹಣ ಈ ಕೆರೆಯ ಆಳದಲ್ಲಿ ದೊರಕುತ್ತದೆ.

ವಿಶ್ವ ಪ್ರಸಿದ್ಧವಾಗಿರುವ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಈ ಕೆರೆ ರೂಪುಗೊಂಡಿದೆ. ವರ್ಷವಿಡಿ ಈ ಕೆರೆಯಲ್ಲಿ ಪರಿಶುದ್ಧ ನೀರು ತುಂಬಿರುತ್ತದೆ. ಅತ್ಯಂತ ಸಿಹಿ ಹಾಗೂ ತಣ್ಣನೆಯ ನೀರನ್ನು ಈ ಕೆರೆ ಹೊಂದಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಡೆದು ಹೋಗುವಾಗ ದಾರಿ ಮಧ್ಯೆ ಬಾಯಾರಿಕೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕೆರೆಯ ನೀರನ್ನು ಬಳಸುತ್ತಾರೆ. ಅಕ್ಕ-ಪಕ್ಕದ ಮನೆಗಳು ಕೂಡ ಈ ಕೆರೆಯ ನೀರನ್ನು ತಮ್ಮ ದಿನನಿತ್ಯ್ ಉಪಯೋಗಗಳಿಗಾಗಿ ಬಳಸಿಕೊಳ್ಳುತ್ತಾರೆ.

ಈ ಕೆರೆಯಲ್ಲಿ ಚಪ್ಪಾಳೆ ತಟ್ಟಿದಾಗ ಗುಳ್ಳೆಗಳು ಬರುವ ಹಿನ್ನೆಲೆ ಕುರಿತಂತೆ ವೈಜ್ಞಾನಿಕ ಕಾರಣಗಳನ್ನು ಹಲವು ಸಂಶೋಧಕರು ಹುಡುಕುತ್ತಿದ್ದಾರೆ. ಆದರೆ ಈ ಕುರಿತಂತೆ ಸರಿಯಾದ ಯಾವುದೇ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ಈ ಕುರಿತಂತೆ ಹಲವಾರು ಅಧ್ಯಯನಗಳೂ ನಡೆಯುತ್ತಿವೆ.

ಹಿನ್ನೆಲೆ[ಬದಲಾಯಿಸಿ]

ಹಲವು ನಂಬಿಕೆಗಳ ಪ್ರಕಾರ ಈ ಸ್ಥಳವು ಚಂಪಕ ಮಹರ್ಷಿಗಳ ತಪೋಭೂಮಿಯಾಗಿತ್ತು. ಇಲ್ಲಿ ಬಂದು ಚಂಪಕ ಮಹರ್ಷಿಗಳು ತಪಸ್ಸನ್ನು ಕೈಗೊಳ್ಳುತ್ತಿದ್ದರು. ಅದಕ್ಕಿಂತಲೂ ಹಿಂದೆ ಒಮ್ಮೆ ಸಾಗರ ತಾಲೂಕಿನ ವರದ ಹಳ್ಳಿಯ ಮಠದ ಶ್ರೀ. ಶ್ರೀಧರ ಸ್ವಾಮೀಜಿ ಅವರು ಈ ಜಾಗಕ್ಕೆ ಆಗಮಿಸಿದ್ದರು. ಹೀಗೆ ಬಂದವರು ಈ ಜಾಗದಲ್ಲಿ ಜಲ ರೂಪದ ಗಂಗೆಯನ್ನು ಕೈಯಿಂದ ಕುಲುಕಿ ತೀರ್ಥವನ್ನಾಗಿಸಿದರು ಎಂಬ ಪ್ರತೀತಿ ಇದೆ. ಈ ಶ್ರೀಧರ ಸ್ವಾಮಿಗಳು ನಂತರ ಈ ಕೆರೆಯ ನೀರಿನ ಮೇಲೆ ಕುಡಿಬಾಳೆ ಎಲೆಹಾಕಿ ಅದರ ಮೇಲೆ ಆಸನ ಹಾಕಿ ಕುಳಿತು ತಪಸ್ಸನ್ನು ಆಚರಿಸುತ್ತಿದ್ದರು ಎಂಬ ನಂಬಿಕೆ ಇದೆ.

ಗೌರಿಶಂಕರ ದೇವಾಲಯ[ಬದಲಾಯಿಸಿ]

ಈ ತೀರ್ಥದ ದಡದಲ್ಲಿ ಗೌರಿಶಂಕರ ದೇವಾಲಯವಿದೆ. ಇದನ್ನು ಅತ್ಯಂತ ಶಕ್ತಿಶಾಲಿ ದೇವಾಲಯ ಎಂದು ಕರೆಯಲಾಗುತ್ತದೆ. ಯಾವುದೇ ರೀತಿಯಾದ ಆಡಂಬರಗಳಿಲ್ಲದೆ ಅತ್ಯಂತ ಸರಳವಾದ ವಿನ್ಯಾಸದಲ್ಲಿ ದೇವಾಲಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಗೌರಿತೀರ್ಥವನ್ನು ನೋಡಲು ಬರುವ ಪ್ರವಾಸಿಗರು ಹಾಗೂ ಭಕ್ತಾದಿಗಳು ಗೌರಿಶಂಕರ ದೇವಾಲಯದಲ್ಲಿ ದೇವರ ದರ್ಶನವನ್ನು ಪಡೆಯುತ್ತಾರೆ. ತಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಬೇಡಿಕೊಳ್ಳುತ್ತಾರೆ.

ಪೂಜಾ ವಿಧಾನ[ಬದಲಾಯಿಸಿ]

ಈ ದೇವಾಲಯದಲ್ಲಿ ಪ್ರತಿ ನಿತ್ಯ ಪೂಜಾ ಪದ್ಧತಿಗಳು ನಡೆಯುತ್ತದೆ. ತಿಂಗಳಿನಲ್ಲಿ ಒಂದು ದಿನ ರುದ್ರಾಭಿಷೇಕ ಒಳಗೊಂಡಂತೆ ವಿಶೇಷ ಪೂಜಾ ವಿಧಾನಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ. ಗುರುಪೂರ್ಣಿಮೆಯ ದಿನ ಶ್ರೀ ಶ್ರೀಧರ ಸ್ವಾಮಿಗಳಿಗೆ ಈ ಸ್ಥಳದಲ್ಲಿ ವಿಶೇಷವಾದ ಪೂಜೆಯನ್ನು ನೆರವೇರಿಸಲಾಗುತ್ತದೆ. ಮತ್ತು ಏಕಾದಶಿಯ ದಿನ ಈ ಸ್ಥಳದಲ್ಲಿ ಊರಿನ ಜನರೆಲ್ಲ ಸೇರಿ ಪೂಜಾ ವಿಧಾನಗಳನ್ನು ಪೂರೈಸಿ "ಹೋಳಿ ಊಟ" ಎಂಬ ಹೆಸರಿನ ಭೋಜನ ಕಾರ್ಯಕ್ರಮವನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ಊರ-ಪರವೂರಿನ ಹಲವಾರು ಜನರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಈ ಪ್ರದೇಶವನ್ನು ವೀಕ್ಷಿಸಿ ತೆರಳುತ್ತಾರೆ. ಪ್ರವಾಸಿಗರು ಆಗಮಿಸಿ ಚಪ್ಪಾಳೆ ತಟ್ಟಿದಾಗ ಉದ್ಭವವಾಗುವ ಗುಳ್ಳೆಗಳನ್ನು ಕಂಡು ಸಂತೋಷ ಪಡುತ್ತಾರೆ. ಹಾಗೆ ಹಲವು ನಾಣ್ಯಗಳನ್ನು ಕೆರೆಗೆ ಹಾಕಿ ಹೋಗುತ್ತಾರೆ. ನಂತರ ದೇವಾಲಯಕ್ಕೆ ಸಂಬಂಧಪಟ್ಟವರು ಪ್ರತಿ ವರ್ಷ ಸಂಪೂರ್ಣ ಕೆರೆಯನ್ನು ಶುದ್ಧೀಕರಿಸಿ ಪ್ರವಾಸಿಗರು ಹಾಕಿ ಹೋದ ನಾಣ್ಯಗಳನ್ನು ತೆಗೆದು ಆ ಹಣವನ್ನು ಕೆರೆಯ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಾರೆ.

ಮಾರ್ಗಸೂಚಿ[ಬದಲಾಯಿಸಿ]

ಶಿವಮೊಗ್ಗ ಜಿಲ್ಲೆಯಿಂದಗೌರಿತೀರ್ಥಕ್ಕೆ ಹೋಗುವುದಾದರೆ ಸುಮಾರು 65 ಕಿಲೋಮೀಟರ್‍ದೂರದಲ್ಲಿರುವ ಹೊಸನಗರತಲುಪಿ, ನಂತರಅಲ್ಲಿಂದಕೊಲ್ಲೂರಿಗೆ ಹೋಗುವ ರಸ್ತೆಯಲ್ಲಿ 40 ಕಿಲೋಮೀಟರ್ ಕ್ರಮಿಸಿ ಅಲ್ಲಿ ಸಿಗುವ ಸಂಪೆಕಟ್ಟೆ ಎಂಬ ಊರಿನಿಂದಎಡಗಡೆರಸ್ತೆಯಲ್ಲಿ ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ಕ್ರಮಿಸಿದರೆ ಗೌರಿತೀರ್ಥ ಎಂಬ ಅದ್ಭುತ ಸ್ಥಳವನ್ನು ಕಾಣಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://wikimapia.org/12258175/GOWRI-THEERTHA
  2. https://iamalittlechaipot.wordpress.com/2017/02/21/unforgettable-kodachadri-2/
  3. https://indiapl.com/karnataka/gouri-theertha-522093